ಬಾನು ಮುಷ್ತಾಕ್ ಅವರನ್ನು ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕನ್ನಡದ್ದು ಸೆಕ್ಯುಲರ್ ಪರಂಪರೆ. ವ್ಯಾಪಿಸುತ್ತಿರುವ ಮತೀಯ ದ್ವೇಷದ ಬೆಂಕಿಯಲ್ಲಿ ವಿವೇಚನಾ ಕಣ್ಣು ಕಳೆದುಕೊಂಡು, ಕನ್ನಡಕ್ಕೆ, ಕರ್ನಾಟಕಕ್ಕೆ ಭಾರತಕ್ಕೆ ಕೀರ್ತಿತಂದ ಸಾಹಿತಿಯೊಬ್ಬರನ್ನೂ ಮತೀಯ ನೆಲೆಯಲ್ಲಿ ನೋಡಿ ದ್ವೇಷಿಸುವ, ಅವಮಾನಿಸುವ ಶಕ್ತಿಗಳನ್ನು ಸೋಲಿಸಬೇಕಾಗಿದೆ. ಆ ಮೂಲಕ ಕನ್ನಡದ ಸೆಕ್ಯುಲರ್ ಪರಂಪರೆಯನ್ನು ಗೆಲ್ಲಿಸಬೇಕಾಗಿದೆ – ಶ್ರೀನಿವಾಸ ಕಾರ್ಕಳ.
ಬಾನು ಮುಷ್ತಾಕ್ ಅಪ್ಪಟ ಕನ್ನಡತಿ, ಕನ್ನಡದ ಬಹು ದೊಡ್ಡ ಲೇಖಕಿ, ಕನ್ನಡ, ಕರ್ನಾಟಕ ಮಾತ್ರವಲ್ಲ ದೇಶಕ್ಕೇ ಕೀರ್ತಿ ತಂದ ಬೂಕರ್ ಪುರಸ್ಕಾರ ದಕ್ಕಿದ್ದು ಅವರ ಕನ್ನಡ ಕತೆಗಳಿಗಾಗಿ.
ಅಂತಾರಾಷ್ಟ್ರೀಯ ಖ್ಯಾತಿಯ ಬೂಕರ್ ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿ ಸಂದ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರನ್ನು ಮತ್ತು ಅನುವಾದಕಿ ದೀಪಾ ಬಸ್ತಿಯವರನ್ನು ಕರೆಸಿ ಸನ್ಮಾನಿಸಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರಕಾರ ನಾಡ ಹಬ್ಬ ದಸರಾ ಉದ್ಘಾಟನೆಗೆ ಬಾನು ಅವರನ್ನೇ ಅಹ್ವಾನಿಸಿತು. ಇದೊಂದು ಅತ್ಯಂತ ಸ್ವಾಗತಾರ್ಹ ನಿರ್ಧಾರ. ನಿಜವಾಗಿ ಹೇಳಬೇಕೆಂದರೆ ಬಾನು ಅವರನ್ನು ದಸರಾ ಉದ್ಘಾಟನೆಗೆ ಕರೆದುದಕ್ಕೆ ಹಿಂದೂಗಳೂ ಸೇರಿದಂತೆ ನಾಡಿನ ಜನರೆಲ್ಲರೂ ಹೆಮ್ಮೆಪಡಬೇಕು.
ದಸರಾ ಸಾರ್ವಜನಿಕ ಕಾರ್ಯಕ್ರಮ
ನೆನಪಿರಲಿ, ದಸರಾ ನಾಡಹಬ್ಬ ಎಂದೇ ಜನಜನಿತ. ಕನ್ನಡ ನಾಡಿನ ಜನ ಎಂದರೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ಖ, ಫಾರ್ಸಿ ಸೇರಿದಂತೆ ಇಲ್ಲಿನ ಎಲ್ಲರೂ. ಇವರೆಲ್ಲರೂ ನೀಡಿದ ತೆರಿಗೆ ಹಣದಿಂದಲೇ ಸರಕಾರದ ಖಜಾನೆ ತುಂಬುವುದು. ಈ ಹಣದಿಂದಲೇ ಮೈಸೂರು ದಸರಾ ಕೂಡಾ ನಡೆಯುವುದು. ಮೈಸೂರು ದಸರಾ ಖಾಸಗಿ ಕಾರ್ಯಕ್ರಮವಲ್ಲ.
ನಾಡಹಬ್ಬದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆಯುತ್ತಲೇ ಹಿಂದೂ ಧರ್ಮದ ರಕ್ಷಣೆಯ ಗುತ್ತಿಗೆ ವಹಿಸಿಕೊಂಡ ಮತ್ತು ಹಿಂದೂ ಧರ್ಮ ರಕ್ಷಿಸಬೇಕಾದರೆ ಮುಸ್ಲಿಂ ಧರ್ಮವನ್ನು ದ್ವೇಷಿಸುವುದು ಅನಿವಾರ್ಯ ಅಂದುಕೊಂಡಿರುವ ಸಂಘಿಗಳು ನಿರೀಕ್ಷೆಯಂತೆಯೇ ಎದ್ದು ಕುಳಿತರು. ಕೆಸರೆರಚುವ ಕಾರ್ಯಕ್ರಮ ಶುರುವಾಗಿಯೇ ಬಿಟ್ಟಿತು.
ಆಳದಲ್ಲಿ ಇದ್ದುದು ಮುಸ್ಲಿಂ ದ್ವೇಷ. ಆದರೆ ನೇರವಾಗಿ ಹೇಳಿದರೆ ಸರಿಯಾಗುವುದಿಲ್ಲವಲ್ಲ, ಹಾಗಾಗಿ, ಅದಕ್ಕೆ ಭಾಷೆಯ ಕವಚವನ್ನೂ ತೊಡಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಪರ್ಯಾಯ ಸಾಹಿತ್ಯ ಸಮ್ಮೇಳನದ ಆಕೆಯ ಭಾಷಣದ ಒಂದು ತುಣುಕನ್ನು ಹಿಡಿದುಕೊಂಡು ಆಕೆ ಕನ್ನಡ ವಿರೋಧಿ ಎಂದು ಬಿಂಬಿಸಲು ವಿಫಲ ಯತ್ನ ನಡೆಸಲಾಯಿತು. ಇದಕ್ಕೆ ಬಾನು ಅವರ ಭಾಷಣವನ್ನು ಪೂರ್ತಿ ಕೇಳಿಸಿಕೊಳ್ಳುವ ವ್ಯವಧಾನ ಹೊಂದಿರದ ಅಥವಾ ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿರದ ಕೆಲ ತಥಾಕಥಿತ ಪ್ರಗತಿಪರ ಕನ್ನಡ ಹೋರಾಟಗಾರರೂ ಸೇರಿಕೊಂಡರು. ಬಾನು ಮುಷ್ತಾಕ್ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಒಂದು ವರ್ಗ ಹೇಳಿದರೆ, ಅವರು ಕನ್ನಡ ವಿರೋಧಿಸಿ ಮಾತಾಡಿದ್ದಾರೆ ಎಂದು ಇನ್ನೊಂದು ವರ್ಗ ವಾದಿಸಿತು. ಅಂತೂ ಇಂತೂ ಕನ್ನಡಕ್ಕೆ ಕೀರ್ತಿ ತಂದು ಹೀರೋಯಿನ್ ಆಗಿದ್ದ ಬಾನು ಮುಷ್ತಾಕ್ ಕ್ಷಣಮಾತ್ರದಲ್ಲಿ ಕನ್ನಡ ವಿರೋಧಿ ವಿಲನ್ ಆಗಿಬಿಟ್ಟರು!
ವಾಸ್ತವದಲ್ಲಿ ಬಾನು ಅವರ ಆತಂಕದ ಮೂಲ ಏನು? ಭಾಷೆ ಯಾವತ್ತೂ ಮನುಜಕುಲದ ಆಸ್ತಿ. ಅದು ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ. ಅದರ ಬಳಕೆ ಮತ್ತು ಬೆಳವಣಿಗೆಯಲ್ಲಿ ಎಲ್ಲರ ಪಾತ್ರವಿದೆ. ಅದನ್ನು ಹಾಗೆಯೇ, ಅಂದರೆ ಸೆಕ್ಯುಲರ್ ಅಥವಾ ಧರ್ಮನಿಪೇಕ್ಷವಾಗಿಯೇ ಉಳಿಸಿಕೊಳ್ಳಬೇಕು. ಅದಕ್ಕೆ ಧಾರ್ಮಿಕ ಚಹರೆಗಳು ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮತೀಯವಾದ ವಿಜೃಂಭಿಸುವ ಮತ್ತು ನಮ್ಮವರನ್ನೇ ಅನ್ಯರನ್ನಾಗಿಸುವ ಕಾಲಘಟ್ಟದಲ್ಲಿ ಭಾಷೆಯೂ ದ್ವೇಷದ ಮತ್ತು ಭೇದಭಾವದ ಅಸ್ತ್ರವಾಗಿ ಬಿಡುತ್ತದೆ. ಅಲ್ಲಿ ಮತಧರ್ಮಾತೀತವಾಗಿ ಎಲ್ಲರ ಪಾಲ್ಗೊಳ್ಳುವಿಕೆಗೆ ಕಷ್ಟವಾಗುತ್ತದೆ. ಅಂತಿಮವಾಗಿ ಪ್ರತ್ಯೇಕತೆಯ ದೊಡ್ಡ ಸಮಸ್ಯೆ ಸೃಷ್ಟಿಯಾಗಿಬಿಡುತ್ತದೆ.
ಕರಾವಳಿಯ ಉದಾಹರಣೆ
ಹೇಗೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕೇಳಿ- ಕರಾವಳಿಯಲ್ಲಿ, ಸಾಹಿತ್ಯ ಎಂದರೆ ಏನೆಂದೇ ತಿಳಿದಿರದ, ಸಾಹಿತಿ ಮತ್ತು ಸಾಹಿತ್ಯದ ಬಗ್ಗೆ ಯಾವ ಗೌರವವೂ ಇಲ್ಲದ, ಇನ್ನೂ ಸರಳವಾಗಿ ಹೇಳಬೇಕೆಂದರೆ ಸಾಹಿತ್ಯ ಅಂದರೆ ಅದೂ ಒಂದು ಬಗೆಯ ವ್ಯಾಪಾರ ಎಂದು ಕೊಂಡ ಕೆಲ ಮಂದಿ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದ ಕಾಲಕ್ಕೆ ಎಲ್ಲೆಂದರಲ್ಲಿ ಸಾಹಿತ್ಯ ಸಮ್ಮೇಳನ ಶುರುವಾಯಿತು. ಅವರ ಪ್ರಕಾರ ಸಮ್ಮೇಳನದ ಮುಖ್ಯ ಭಾಗ ಭೋಜನ. ಭೋಜನಕ್ಕೆ ಖರ್ಚು ಬರುತ್ತದಲ್ಲವೇ ಮತ್ತು ಸೌಲಭ್ಯಗಳೂ ಬೇಕಲ್ಲವೇ, ಹಾಗಾಗಿ ಭೋಜನದ ವ್ಯವಸ್ಥೆ ಸುಲಭದಲ್ಲಿ ಆಗುವ ದೇವಸ್ಥಾನಗಳಿಗೆ ಸಮ್ಮೇಳನ ಸ್ಥಳಾಂತರಗೊಂಡಿತು. ಕನ್ನಡ ಸಾಹಿತ್ಯ ಸಮ್ಮೇಳನಗಳು ದೇವಸ್ಥಾನಗಳಲ್ಲೇ ನಡೆಯುವ ಪರಿಪಾಠ ಹೆಚ್ಚುತ್ತಲೇ ಹೋಯಿತು.
ಈಗ ಸಮಸ್ಯೆ ಆರಂಭವಾಯಿತು. ದೇವಸ್ಥಾನಗಳ ಒಳಗೆ ಸಮ್ಮೇಳನ ನಡೆದರೆ ಅಲ್ಲಿಗೆ ಹಿಂದೂಯೇತರರು, ಮುಖ್ಯವಾಗಿ ಮುಸ್ಲಿಮರು ಹೋಗುವುದು ಹೇಗೆ? ಸಂಕುಚಿತ ಮನಸಿನವರಿಲ್ಲದ ಹಿಂದಿನ ಕಾಲದಲ್ಲಿಯಾದರೋ ಬೇರೆ ವಿಚಾರ. ಆದರೆ, ಪ್ರತಿಯೊಬ್ಬ ಮನುಷ್ಯನನ್ನೂ ಮತಧರ್ಮದ ಕನ್ನಡಕದ ಮೂಲಕವೇ ನೋಡುವ, ಅಳೆಯುವ ಮತ್ತು ಹಿಂದೂ ಧಾರ್ಮಿಕ ಕೇಂದ್ರದಲ್ಲಿ ಬೇರೊಂದು ಧರ್ಮದ ಮಂದಿಯ ಪ್ರವೇಶದಿಂದ ದೇವರು ಅಪವಿತ್ರಗೊಳ್ಳುವ, ಧರ್ಮವೇ ಕುಸಿದುಬೀಳುವ ಮತ್ತು ಅಂತಹ ಪ್ರವೇಶ ಮಹಾ ಅಪರಾಧವೆನಿಸಿಕೊಂಡ ಕಾಲದಲ್ಲಿ? ಉದಾರವಾದಿ ಮುಸ್ಲಿಮರು ಅಲ್ಲಿಗೆ ಹೋಗಲು ಸಿದ್ಧರಿದ್ದರೂ ಬದಲಾದ ಕಾಲದಲ್ಲಿ ಕಟ್ಟರ್ ಹಿಂದುತ್ವವಾದದ ಪ್ರಭಾವಕ್ಕೆ ಒಳಗಾದ ಮಂದಿ ತಕರಾರು ಎತ್ತದಿರಲಾರರೇ?
ಇದೇ ಕಾರಣಕ್ಕೆ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರನ್ನು ದೂರ ಇರಿಸುವ ಅಥವಾ ಹಿಂಜರಿಕೆಯಿಂದ ಮುಸ್ಲಿಮರು ಪಾಲ್ಗೊಳ್ಳದಿರುವ ಸ್ಥಿತಿ ನಿರ್ಮಾಣವಾಯಿತು. ಎಲ್ಲಿ ತನಕ ಎಂದರೆ ದಿ. ಸಾರಾ ಅಬೂಬಕ್ಕರ್ ಅಂತಹ ಹಿರಿಯ ಸಾಹಿತಿಯನ್ನು ದೇವಸ್ಥಾನದೊಳಗಿನ ಸಮ್ಮೇಳನದ ಕಾರಣಕ್ಕಾಗಿಯೇ ಅಧ್ಯಕ್ಷಸ್ಥಾನದಿಂದ ಅನೇಕ ಬಾರಿ ವಂಚಿಸಲಾಯಿತು. ಕೊನೆಗೆ ದೇವಸ್ಥಾನದಿಂದ ಹೊರಗೆ ನಡೆದ ಸಮ್ಮೇಳನದಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಯಿತು ಎಂಬ ಮಾತುಗಳು ಕೇಳಿಬಂದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಕೆಲವಾದರೂ ಪ್ರಜ್ಞಾವಂತರು ಸಾಹಿತ್ಯ ಸಮ್ಮೇಳನದಲ್ಲಿ ಭೋಜನ ಪ್ರಧಾನವಾಗಬಾರದು, ಭೋಜನದ ಕಾರಣಕ್ಕೆ ಧಾರ್ಮಿಕ ಕೇಂದ್ರದಲ್ಲಿ ಅದನ್ನು ಮಾಡುವುದು ಸರಿಯಲ್ಲ, ಅಲ್ಲಿ ಮಾಡಿದರೆ ಎಲ್ಲ ಮತಧರ್ಮೀಯರ ಪಾಲ್ಗೊಳುವಿಕೆಗೆ ತೊಂದರೆಯಾಗುತ್ತದೆ, ಇದು ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ, ಅದನ್ನು ಅಲ್ಲಿಂದ ಹೊರ ತನ್ನಿ ಎಂದು ಆಗ್ರಹಿಸಲಾರಂಭಿಸಿದರು.
ಈ ವಾಸ್ತವದ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ರ ಕಳವಳವನ್ನು ಅರ್ಥಮಾಡಿಕೊಳ್ಳಿ. ಸಾಹಿತ್ಯ, ಸಂಗೀತ, ಭಾಷೆ ಇವೆಲ್ಲವೂ ಮಾನವ ಕುಲದ ಅಮೂಲ್ಯ ಆಸ್ತಿಗಳು. ಕನ್ನಡವೂ ಇದಕ್ಕೆ ಹೊರತಲ್ಲ, ಕನ್ನಡವು ಹಿಂದೂಗಳದ್ದು ಹೇಗೋ, ಹಾಗೆಯೇ ಮುಸ್ಲಿಮರದ್ದೂ ಕೂಡಾ. ಇಲ್ಲಿನ ಜೈನರು, ಕ್ರೈಸ್ತರು, ಬೌದ್ಧರು, ಸಿಖ್ಖರು, ಫಾರ್ಸಿಗಳದ್ದು ಕೂಡಾ. ಇವರೆಲ್ಲರ ಕೊಡುಗೆಯಿಂದ ಕನ್ನಡ ಬೆಳೆದಿದೆ. ಕನ್ನಡವು ಮುಂದೆಯೂ ಬೆಳೆಯಬೇಕಾದರೆ ಅದು ಎಲ್ಲರ ಕನ್ನಡವಾಗಿಯೇ ಉಳಿಯಬೇಕು. ಒಂದು ಧರ್ಮದ ಪ್ರತಿಮೆಯನ್ನು ಒಂದು ಧರ್ಮದ ಹೆಸರನ್ನು ಅಂಟಿಸಿ, ಅದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಅಲ್ಲಿ ಬೇರೆ ಧರ್ಮದವರಿಗೆ ಪ್ರವೇಶ ಇಲ್ಲದಂತೆ ಅಥವಾ ಪ್ರವೇಶ ಇದ್ದರೂ ತಾನು ಇಲ್ಲಿಗೆ ಸೇರಿದವನಲ್ಲವೇನೋ ಎಂಬ ಅಳುಕಿನೊಂದಿಗೆ ಅವರು ಪ್ರವೇಶಿಸುವಂತೆ ಆಗಬಾರದು. ಭಾಷೆ, ಸಾಹಿತ್ಯ ಯಾವುದೋ ಒಂದು ವರ್ಗಕ್ಕೆ ಸೀಮಿತವಾದಾಗ ಅದರ ಬೆಳವಣಿಗೆ ಕುಂಠಿತಗೊಂಡು ಕ್ರಮೇಣ ನಾಶವಾಗುತ್ತದೆ.
ಇದೊಂದು ಟೆಸ್ಟಿಂಗ್ ಟೈಮ್, ಪರೀಕ್ಷಾ ಕಾಲ. ಕನ್ನಡದ್ದು ಸೆಕ್ಯುಲರ್ ಪರಂಪರೆ. ವ್ಯಾಪಿಸುತ್ತಿರುವ ಮತೀಯ ದ್ವೇಷದ ಬೆಂಕಿಯಲ್ಲಿ ವಿವೇಚನಾ ಕಣ್ಣು ಕಳೆದುಕೊಂಡು, ಕನ್ನಡಕ್ಕೆ, ಕರ್ನಾಟಕಕ್ಕೆ ಭಾರತಕ್ಕೆ ಕೀರ್ತಿತಂದ ಸಾಹಿತಿಯೊಬ್ಬರನ್ನೂ ಮತೀಯ ನೆಲೆಯಲ್ಲಿ ನೋಡಿ ದ್ವೇಷಿಸುವ, ಅವಮಾನಿಸುವ ಶಕ್ತಿಗಳನ್ನು ಸೋಲಿಸಬೇಕಾಗಿದೆ. ಆ ಮೂಲಕ ಕನ್ನಡದ ಸೆಕ್ಯುಲರ್ ಪರಂಪರೆಯನ್ನು ಗೆಲ್ಲಿಸಬೇಕಾಗಿದೆ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- http://ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ – 2 https://kannadaplanet.com/its-a-big-story-autobiography-series-part-2/