Saturday, July 27, 2024

ಏನಿದು ಪ್ರೇಮಿಗಳ ದಿನಾಚರಣೆ?

Most read

ಅನೇಕ ವರ್ಷಗಳ ತನಕ ನನಗೆ ವ್ಯಾಲೆಂಟೈನ್ಸ್ ಡೇ ಬಗ್ಗೆಯಾಗಲೀ ಪ್ರೇಮಿಗಳ ದಿನಾಚರಣೆ ಬಗ್ಗೆಯಾಗಲೀ ಗೊತ್ತೇ ಇರಲಿಲ್ಲ. ಆಮೇಲಾಮೇಲೆ ಈ ಪದಗಳು ಹೆಚ್ಚೆಚ್ಚಾಗಿ ಕೇಳಿ ಬರುವುದೂ, ಕೆಲವರು ಇದನ್ನು ವಿರೋಧಿಸುವುದೂ ಕಂಡು ಬಂತು. ಏನಿದು ಪ್ರೇಮಿಗಳ ದಿನಾಚರಣೆ? ಯಾರಿದು ವ್ಯಾಲಂಟೈನ್ ಎಂದು ಹುಡುಕಿದಾಗ ಸಿಕ್ಕಿದ ಸಂಕ್ಷಿಪ್ತ ಮಾಹಿತಿ ಇದು-

ವ್ಯಾಲಂಟೈನ್ ಎನ್ನುವವನು ಮೂರನೇ ಶತಮಾನದಲ್ಲಿ ರೋಮ್ ನಲ್ಲಿದ್ದ ಒಬ್ಬ ಸಂತ. ಅಂದು ರೋಮನ್ನರನ್ನು ಆಳುತ್ತಿದ್ದ  ಕ್ಲಾಡಿಯಸ್ ಸರ್ವಾಧಿಕಾರ ಧೋರಣೆಯ ರಾಜ. ಅವನು “ಯುದ್ಧ ಮುಗಿಯುವವರೆಗೂ ಸೈನಿಕರು ಮದುವೆಯಾಗುವಂತಿಲ್ಲ” ಎಂಬ ಕಾನೂನು ತಂದನು. ಯುವಕರು ಒಂಟಿಯಾಗಿದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ ಎಂಬುದು ರಾಜನ ನಂಬಿಕೆ. ಇದರಿಂದ ಬಹಳಷ್ಟು ಮಂದಿ ಅಸಮಾಧಾನಕ್ಕೆ ಒಳಗಾಗುತ್ತಾರೆ. ಕ್ಲಾಡಿಯಸ್ ನ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ವ್ಯಾಲಂಟೈನ್ ಮಾತ್ರ. ಹಲವು ಪ್ರೇಮಿಗಳ ನೆರವಿಗೆ ನಿಂತ ಸಂತ ವ್ಯಾಲಂಟೈನ್ ಮದುವೆಯಾಗಲು ಬಯಸುವವರಿಗೆ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದನಂತೆ. ಈ ವಿಷಯ ತಿಳಿದ ರಾಜ ಕ್ಲಾಡಿಯಸ್ ರಾಜಧರ್ಮವನ್ನು ಮೀರಿದ ವ್ಯಾಲಂಟೈನ್ ಅಪರಾಧಿ ಎಂದು ಘೋಷಿಸಿ “ವ್ಯಾಲಂಟೈನ್ ಜನರನ್ನು ಆಡಳಿತ ವ್ಯವಸ್ಥೆಯ ವಿರುದ್ಧ ಎತ್ತಿ ಕಟ್ಟಿದ” ಎಂಬ ಆಪಾದನೆಯ ಮೇರೆಗೆ ಸೆರೆಮನೆಗೆ ಹಾಕಿಸಿ ಮರಣ ದಂಡನೆ ವಿಧಿಸುತ್ತಾನೆ.

ಸೆರೆಯಲ್ಲಿದ್ದ ವ್ಯಾಲಂಟೈನ್ ಮತ್ತು ಜೈಲರ್ ನ ಮಗಳ ನಡುವೆ ಪ್ರೀತಿ ಬೆಳೆಯುತ್ತದೆ. ಆಕೆಗೆ ಬರೆದ ಪತ್ರದಲ್ಲಿ “ಇಂತಿ ನಿನ್ನ ಪ್ರೀತಿಯ ವ್ಯಾಲಂಟೈನ್” ಎಂದು ಸಹಿ ಹಾಕಿರುತ್ತಾನಂತೆ.

ಫೆ. 14 ವ್ಯಾಲಂಟೈನ್ ಮರಣಿಸಿದ ದಿನ. ರೋಮ್ ಪಾದ್ರಿಗಳು ಈ ದಿನವನ್ನು ‘ಪ್ರೇಮಿಗಳ ದಿನ’ವನ್ನಾಗಿ ಆಚರಿಸಲು ನಿರ್ಧರಿಸುತ್ತಾರೆ. ಸೈನಿಕರು ಮತ್ತು ಪ್ರೇಮಿಗಳ ಪಾಲಿಗೆ ಗುರುವಾಗಿದ್ದ ವ್ಯಾಲಂಟೈನ್ ಮರಣಿಸಿದ ದಿನವನ್ನು ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ ಎಂದು ಆಚರಿಸಲಾಗುತ್ತಿದೆ.

ವ್ಯವಸ್ಥೆಯ ವಿರುದ್ಧ ನಡೆದುಕೊಂಡವರ ಗತಿ ಏನಾಯಿತೆಂಬುದನ್ನು ಇದು ತೋರಿಸುತ್ತದೆ.ಅವರಿಗೆ ವ್ಯಾಲಂಟೈನ್ ಒಬ್ಬ ರಾಜದ್ರೋಹಿಯಾಗಿ ಕಾಣುತ್ತಾನೆ. ಕೆಲವು ದೇಶಗಳಲ್ಲಿ ಈ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಮ್ಮ ದೇಶದಲ್ಲಿಯೂ ಆಚರಿಸುತ್ತಾರಾದರೂ ಇಲ್ಲಿಯೂ ಹಲವರ ವಿರೋಧ ಇದೆ.

ಫೆಬ್ರವರಿ 7 ರಿಂದ ಪ್ರೀತಿಯ ವಾರ ಪ್ರಾರಂಭವಾಗಿ 14 ಕ್ಕೆ ಮುಕ್ತಾಯವಾಗುತ್ತದೆ. ಫೆಬ್ರವರಿ 14 ರಿಂದ ಭಾರತದಲ್ಲಿ ‘ವಸಂತ ಪಂಚಮಿ’ ಕೂಡಾ ಪ್ರಾರಂಭವಾಗುತ್ತದೆ. ವಸಂತಾಗಮನವನ್ನು ಸೂಚಿಸುವ ಈ ದಿನದಂದು ಭಾರತದ ಕೆಲವು ರಾಜ್ಯಗಳಲ್ಲಿ ಸಂಭ್ರಮಾಚರಣೆಯೂ ಇರುತ್ತದೆ.

ಫೆಬ್ರವರಿ 14 ಪುಲ್ವಾಮಾ ದಾಳಿ ನಡೆದ  ದಿನ ಕೂಡಾ. ಎಲ್ಲರ ನಡುವೆ ಪ್ರೀತಿ ಇದ್ದಾಗ ಯಾವ ಗಡಿಗಳೂ‌ ಇರುವುದಿಲ್ಲ, ಯುದ್ಧವೂ ನಡೆಯುವುದಿಲ್ಲ. ಸೈನಿಕರೂ ಬೇಕಾಗಿಲ್ಲ. ವರ್ಷದ ಎಲ್ಲಾ ದಿನಗಳೂ ಪ್ರೀತಿಯ ದಿನಗಳೇ ಆಗಿರಲಿ ಯುದ್ಧವೆಂಬುದು ನಾಶವಾಗಲಿ.

ಜಾತಿಮತಗಳ

ದೇಶ ಭಾಷೆಗಳ

ಮೇಲು ಕೀಳಿನ

ಹಂಗಿಲ್ಲದೆ ಒಲಿದವರನ್ನು

ಒಂದುಗೂಡಿಸುವ  ಸಂತ ವ್ಯಾಲಂಟೈನನ

ಅಗತ್ಯ

ಇಂದು ಬೇಕಾಗಿದೆ, ಅರ್ಥ ವಿಸ್ತರಿಕೊಂಡ ಪ್ರೀತಿಯ ಅಗತ್ಯ ಕೂಡಾ ಇದೆ.

ದ್ವೇಷದ ಮುಳ್ಳಿನೊಳಗೂ ಪ್ರೀತಿಯ ಗುಲಾಬಿ ಅರಳಲಿ ಪ್ರೀತಿಯ ಪರಿಮಳ ಗಡಿಗಳನ್ನೂ ಮೀರಲಿ..ಶುಭಾಶಯಗಳು.

ಉಮಾದೇವಿ ಕೆ ಎಸ್‌, ತುಮಕೂರು

ಇದನ್ನೂ ಓದಿ-ಬೇಡ ಪ್ರೀತಿಗಾವ ಹೆಸರು, ಪ್ರೀತಿಯೊಂದೇ ಸಾಕು !

More articles

Latest article