Thursday, July 25, 2024

ಬೇಡ ಪ್ರೀತಿಗಾವ ಹೆಸರು, ಪ್ರೀತಿಯೊಂದೇ ಸಾಕು !

Most read

ಸ್ವಾತಂತ್ರ್ಯಪೂರ್ವ ಭಾರತದ ( ಇಂದಿನ ಪಾಕಿಸ್ತಾನ) ಪಂಜಾಬಿನ ಲಾಯಲಪುರ್, ಚಕ್ ೩೬ ರಲ್ಲಿ  ವಾಸಿಸುತ್ತಿದ್ದ  ಎಂಟು ವರ್ಷದ ಆ ಹುಡುಗ ಹಳೆಕಾಲದ‌ ಮಣ್ಣಿನ ಗೋಡೆಗೆ ಅಂಟಿಸಿದ ಚಿತ್ರದಲ್ಲಿನ ಹೆಣ್ಣುಮಗಳನ್ನು ನಿತ್ಯವೂ ನೋಡುತ್ತಿದ್ದ.  ಬೆರಗೋ ಆಕರ್ಷಣೆಯೋ ಯಾವ ಚುಂಬಕಶಕ್ತಿ ಅವನನ್ನು ಸೆಳೆಯುತ್ತಿತ್ತೋ ! ಅಥವಾ ಅವನ ತಂದೆ ಗೋಡೆಯ ಬಿರುಕು ಮುಚ್ಚಲು ಅಂಟಿಸಿದ್ದರೋ ಇಲ್ಲ  ಆತನ ಹಣೆಬರಹ ಬರೆದ ದೇವತೆಯೇ ಅವಳನ್ನು ತಂದು ಇಲ್ಲಿ ಸ್ಥಾಪಿಸಿದ್ದಳೋ ಆ ಕಾಣದ ದೇವರೇ ಹೇಳಬೇಕು.  

ಹೀಗೆ ಎಂಟು ವರ್ಷದ ಪೋರನಿಗೆ ಕಾಗದದ ಚಿತ್ರದಲ್ಲಿನ ಮುದ್ದು‌ ಮುಖದ ಅಮೃತಾ ಪ್ರೀತಂ ಮನದಲ್ಲಿ ಕುಳಿತು ಬಿಟ್ಟಳು.   ಎಂಟರ ಪೋರ ಬೇರಾರೂ ಅಲ್ಲ…ಮುಂದೆ ನಲವತ್ತು ವರುಷಗಳ ಕಾಲ ಅವಳೊಂದಿಗೆ ಸಂಗಾತಿಯಾಗಿ ಬಾಳಿದ ಇಮ್ರೋಜ್.

ಅಮೃತಾ ಮತ್ತು ಇಮ್ರೋಜ್

ಇಮ್ರೋಜ್ ಹೆಸರು ಇಂದ್ರಜೀತ್ ಅಂತಿತ್ತು.  ಅಮೃತಾರಿಗಿಂತ ಏಳು ವರ್ಷ ಚಿಕ್ಕವರು.  ಅವರು ಎಂಟು ಒಂಭತ್ತು ವರ್ಷದವರಿದ್ದಾಗಲೇ ಹದಿನಾರು ಹದಿನೇಳರ ಅಮೃತಾರಿಗೆ ಮದುವೆಯಾಗಿ ಆಕೆ ಅಮೃತಾ ಪ್ರೀತಮ್ ಆಗಿದ್ದಳು.  ಆ ಚಿಕ್ಕ ವಯಸ್ಸಿನಲ್ಲಿಯೇ ಆಕೆ ಒಬ್ಬ ಪ್ರತಿಭಾವಂತ ಕವಿಯಾಗಿ ಪೇಪರಿನಲ್ಲಿ ಪ್ರಕಟಗೊಳ್ಳುವಷ್ಟು, ಅಲ್ಲಲ್ಲಿ ನಡೆವ ಮುಶಾಯಿರಾ, ಕವಿಗೋಷ್ಠಿಗಳಲ್ಲಿ ಭಾಗವಹಿಸುವಷ್ಟು ಪ್ರಸಿದ್ಧರಾಗಿದ್ದಳು.  

ಅಮೃತಾ ಪ್ರೀತಮ್ ಸಾಕಷ್ಟು ಕಾದಂಬರಿಗಳನ್ನು ಬರೆದಿದ್ದಾರೆ.  ಪಿಂಜರ್ ಸಿನೇಮಾವನ್ನು ನಾವೆಲ್ಲ ನೋಡಿದ್ದೀವಿ.   ಮುಂದೆ ಆಕೆ ತನ್ನ ಕಾದಂಬರಿಯೊಂದರ ಮುಖಪುಟದ ವಿನ್ಯಾಸಕ್ಕಾಗಿ ಚಿತ್ರಕಾರರನ್ನು ಹುಡುಕುತ್ತಿದ್ದಾಗ ಯಾರೋ ಪರಿಚಿತರು  ಮುಂಬಯಿಯಿಂದ ದಿಲ್ಲಿಗೆ ಬಂದಿದ್ದ ಕಲಾವಿದನೊಬ್ಬನನ್ನು ಪರಿಚಯಿಸ್ತಾರೆ. ಅವರೇ ಇಮ್ರೋಜ್.  ಅವರ ಬಾಲ್ಯದಿಂದಲೂ ಹಿಂಬಾಲಿಸಿಕೊಂಡು ಬಂದಿದ್ದ ಪ್ರೇಮದೇವತೆ ಅವರನ್ನು ಹುಡುಕಿಕೊಂಡು ಬಂದಿದ್ದಳು.  ಹೀಗೆ ಇಮ್ರೋಜ್ ಅಮೃತಾ ಒಬ್ಬರಿಗೊಬ್ಬರು ದಕ್ಕಿದ್ದು. ಈ ಪರಿಚಯ, ಸ್ನೇಹದ ಸಣ್ಣ ತೊರೆ ಹಳ್ಳವಾಗಿ , ನದಿಯಾಗಿ ಕೊನೆಗೆ ಪ್ರೇಮವೆಂಬ ಸಾಗರದಲ್ಲಿ ಒಂದಾಗಿ ಹೋಗಿದ್ದು ಈ ಶತಮಾನದ ಅದ್ಭುತ ಪ್ರೇಮಗಳಲ್ಲೊಂದು. ಈ ಅದ್ಭುತ ಪ್ರೇಮಕತೆಯ ನಾಯಕ  ತಮ್ಮ 97 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.  ಅವರ ಸಾವು ಜಗತ್ತಿನ  ಪ್ರೇಮಿಗಳನ್ನು ಕಣ್ಣೀರಗಡಲಲ್ಲಿ ಮುಳುಗಿಸಿತು.

ಪ್ರೇಮದ ಚರ್ಚೆಮಾತು  ಬಂದಾಗೆಲ್ಲ ಅಮೃತಾ ಇಮ್ರೋಜ್ ನೆನಪಾಗುತ್ತಾರೆ.  ಅದೂ ಇಂದಿನ ವ್ಯಾಲೆಂಟೈನ್ – ಪ್ರೇಮಿಗಳ ದಿನವೆಂದು ಜಗತ್ತಿನ ಎಲ್ಲಾ ಪ್ರೇಮಿಗಳು  ಈ ಒಂದು ದಿನಕ್ಕಾಗಿ, ತಂತಮ್ಮ ಪ್ರೇಮಿಯೊಂದಿಗೆ ಕಳೆವ ಕ್ಷಣಕ್ಕಾಗಿ ಎದುರು ನೋಡುತ್ತಿರುವ ಹೊತ್ತಿನಲ್ಲಿ ಲಕ್ಷಾಂತರ ಜನರಿಗೆ ಪ್ರೇರಕ ಶಕ್ತಿಯಾಗಿ,  ಪ್ರೇಮ ದೇವತೆಗಳಾಗಿ ನೆನಪಾಗುವುದು  ಪಂಜಾಬಿನ ಖ್ಯಾತ ಕವಿಯತ್ರಿ ಅಮೃತಾ ಪ್ರೀತಮ್ ಮತ್ತು ಕವಿ ಚಿತ್ರಕಾರ ಇಮ್ರೋಜ್ ಅವರು.  

ಅಮೃತಾ

1966 ರಲ್ಲಿ ಅಮೃತಾ ಪ್ರೀತಮ್ ‘ನಾಗಮಣಿʼ  ಸಾಹಿತ್ಯಿಕ ಪತ್ರಿಕೆಯನ್ನು ನಡೆಸುತ್ತಿದ್ದಾಗ ಇಮ್ರೋಜ್ ಅವರೊಂದಿಗಿದ್ದರು.  ಯುವ ಸಾಹಿತಿಗಳಿಗೆ ಸಾಹಿತ್ಯಿಕ ವೇದಿಕೆಯನ್ನು ಒದಗಿಸಿಕೊಟ್ಟ ಏಕೈಕ ಪತ್ರಿಕೆಯಾಗಿ ನಾಗಮಣಿ ಅತ್ಯಂತ ಜನಪ್ರಿಯತೆ ಪಡೆದಿತ್ತು.  ಕವಿ, ಕಾದಂಬರಿಕಾರ್ತಿ ಡಾ.ಅಜೀತ್ ಕೌರ್ , ದಿ.ಕೃಷ್ಣಾ ಸೋಬತಿ ಅಂತಹ ದಿಗ್ಗಜರೆಲ್ಲ ನಾಗಮಣಿಯಿಂದಲೇ ತಮ್ಮ ಬರವಣಿಗೆಯನ್ನು ಆರಂಭಿಸಿದ್ದು ಒಂದು ಇತಿಹಾಸ.  

ಅಮೃತಾ ಪ್ರೀತಮ್ ತಮ್ಮ ಬರವಣಿಗೆಯನ್ನು  ರಾತ್ರಿಯ ನೀರವತೆಯಲ್ಲಿಯೇ ಮಾಡುತ್ತಿದ್ದರು. ಅಮೃತಾ ಅವರಿಗೆ ಚಹವೆಂದರೆ ಪ್ರಾಣ.  ನಡುರಾತ್ರಿ ಇಮ್ರೋಜ್ ಸದ್ದಾಗದಂತೆ ಎದ್ದು ಚಹ ಮಾಡಿ ಅವರ ಟೇಬಲ್ ಮೇಲಿಟ್ಟು ಹೋಗುತ್ತಿದ್ದರಂತೆ.  ಶರದೃತುವಿನಲ್ಲಿ ರಾಶಿ ರಾಶಿ ಪಾರಿಜಾತ ಸುರಿಯುವಾಗ ತಟ್ಟೆತುಂಬ ಹೂ ಆರಿಸಿ ಇಡುತ್ತಿದ್ದರು ಇಮ್ರೋಜ್.  ಆಕಾಶವಾಣಿಯಲ್ಲಿ ಕೆಲಸಮಾಡುತ್ತಿದ್ದಾಗ ಸ್ಕೂಟರ್ ಮೇಲೆ ಇಮ್ರೋಜ್ ಹಿಂದೆ ಕೂತು ಅವರ ಬೆನ್ನ ಮೇಲೆ ಬೆರಳಿಂದ ” ಸಾಹಿರ್”  “ಸಾಹಿರ್ ” ಎಂದು ಬರೆಯುತ್ತಿದ್ದರೆ ಇಮ್ರೋಜ್  ಅವಳನ್ನೂ ಅವಳ ಹುಚ್ಚು ಸಾಹಿರ್ ಪ್ರೇಮವನ್ನು ನಗುನಗುತ್ತಲೇ ನೆನೆಪಿಸಿಕೊಳ್ತಿದ್ದರು.  

ಸಾಹಿರ್ ಭ್ರಮೆಯಾಗಿ ಇಮ್ರೋಜ್ ವಾಸ್ತವವಾಗಿ ಬದುಕನ್ನು ಸಹ್ಯವಾಗಿಸಿದ್ದರು.  ಪ್ರತಿಯೊಬ್ಬ ಹೆಣ್ಣು ತನ್ನ ಬದುಕಿನಲ್ಲಿ ಇಮ್ರೋಜ್ ರಂಥ ಸಂಗಾತಿಯನ್ನು  ಬಯಸಿದರೆ ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.

ನೀವು ಒಟ್ಟಿಗೇ ಇರುವುದನ್ನು ಯಾರೂ ವಿರೋಧಿಸಲಿಲ್ಲವೇ ? ಸಮಾಜದ ಅಂಜಿಕೆ ಅಳುಕೂ ನಿಮ್ಮನ್ನು ಪೀಡಿಸಲಿಲ್ಲವೇ ? ಎಂದೊಮ್ಮೆ ಕೇಳಿದ್ದೆ ಇಮ್ರೋಜರನ್ನು.  ಅದಕ್ಕವರು ನನ್ನ ಮನೆಯವರು ತೀವ್ರವಾಗಿ ವಿರೋಧಿಸಿದರು.  ಅಮೃತಾ ನನಗಿಂತ ಏಳು ವರ್ಷಕ್ಕೆ ದೊಡ್ಡವಳು.  ಇಬ್ಬರು ಮಕ್ಕಳ ತಾಯಿ. ಆದರೆ ನಾವಿಬ್ಬರೂ ನಿರ್ಧರಿಸಿಯಾಗಿತ್ತು. ನಾವಿಬ್ಬರೂ ಯಾವತ್ತೂ ಮದುವೆಯಾಗುವುದಿಲ್ಲ ಹಾಗೇ ಸ್ನೇಹಿತರಂತೆ ಇರುತ್ತೇವೆ ಎಂದು.  ನನ್ನ ಅಕ್ಕ ಒಬ್ಬಳೇ ನನ್ನನ್ನು ಸಮರ್ಥಿಸಿಕೊಂಡಳು. ಇಬ್ಬರೂ ಒಟ್ಟಿಗೆ ಇರುತ್ತಾರಾದರೆ ಇದ್ದುಕೊಳ್ಳಲಿ, ಅವರಿಗೆ ಪ್ರೀತಿಯಿದ್ದಲ್ಲಿ, ಯಾರಿಗೂ ಅನ್ಯಾಯವಾಗದಿದ್ದಲ್ಲಿ ಇದ್ದುಕೊಳ್ಳಲಿ ಎಂದು ಸಮಜಾಯಿಸಿದಳು.  ಇನ್ನು ಸಮಾಜದ ವಿಷಯ, ಅಮೃತಾಳಿಗೆ ನಾನು ಹೇಳಿದ್ದೆ, ನನ್ನ ಸಮಾಜ ನೀನು, ನಿನ್ನ ಸಮಾಜ ನಾನು. ಆಯಿತಲ್ಲ ಬೇರೆ ಯಾವ ಸಮಾಜ ಬಂದು ನಮಗೇನು ಅನ್ನ ಹಾಕುತ್ತದೆಯಾ ? ಬಟ್ಟೆ ಕೊಡುತ್ತದೆಯಾ ? ಪ್ರೀತಿ ಮುಖ್ಯ. ಪ್ರೀತಿ, ಅನುರಾಗವಿರುವಲ್ಲಿ ಯಾವ ಕಾನೂನೂ ಯಾಕೆ ಬೇಕು ? ನಮಗೆ ಯಾವ ಕಾನೂನೂ ಬೇಡ, ಪ್ರೇಮ ಸಾಕು.  

ಸಾಹಿರ್‌ ಮತ್ತು ಅಮೃತಾ

ಅಮೃತಾ ಒಟ್ಟಿಗಿರುವ ನಿರ್ಧಾರವನ್ನು ಒಮ್ಮೆಲೇ ತೆಗೆದುಕೊಳ್ಳಲಿಲ್ಲ.  ಸಾಕಷ್ಟು ಆತ್ಮವಿಮರ್ಶೆ ಮಾಡಿಕೊಂಡೇ ಈ ನಿರ್ಧಾರ ತೆಗೆದು ಕೊಂಡಳು.  ಒಮ್ಮೆ ಇಬ್ಬರೂ ಕುಳಿತುಕೊಂಡಾಗ — ನೀನಿನ್ನೂ ಚಿಕ್ಕವ, ಹೋಗಿ ಲೋಕಕಂಡು ಬಾ, ಆಮೇಲೆ ಯೋಚಿಸೋಣ ಅಂದಳು.  ಆಗ ನಾನು ಎದ್ದು ಅವಳ ಸುತ್ತ ಏಳು ಬಾರಿ ಸುತ್ತಿ ಬಂದು,  ಆಯಿತು, ಲೋಕಸುತ್ತಿ ಬಂದೆ, ಇನ್ನು ಜೊತೆಗಿರಬಹುದಾ? ಅಂತಾ ಕೇಳಿದೆ.  ಅಮೃತಾ ಮುಂದೆ ಮಾತಾಡಲಿಲ್ಲ.  ವಿಚ್ಚೇದನವನ್ನು ಪಡೆಯದೇ ದಶಕಗಳ ಕಾಲ ಜೊತೆಯಲ್ಲೇ ಇದ್ದೆವು. ನಂತರ ಪತಿಯಿಂದ ವಿಚ್ಚೇದನ ಪಡೆದಳು. ಪತಿಯಿಂದ ಏನನ್ನೂ ಬೇಡಲಿಲ್ಲ. 

ಹಾಗೇ ಸುಮಾರು ವರ್ಷಗಳ ನಂತರ ಮಕ್ಕಳು ತಾಯಿಗೆ ಸುದ್ದಿ ತಲುಪಿಸಿದರು, 

“ಮಮ್ಮಾ…ಪಪ್ಪನಿಗೆ ಹುಷಾರಿಲ್ಲವಂತೆ….”  ತಕ್ಷಣ ನಾನು ಅಮೃತಾ ಪಟೇಲ್‌ ನಗರಕ್ಕೆ ಹೋಗಿ ಪ್ರೀತಂ ಸಿಂಗರನ್ನು ಮನೆಗೆ ಕರೆತಂದು ಒಳ್ಳೆ ವೈದ್ಯರಲ್ಲಿ ತೋರಿಸಿ ಆರೈಕೆ ಮಾಡಿದೆವು. ಬದುಕಿರುವವರೆಗೂ ಅವರು ನಮ್ಮಲ್ಲೇ ಇದ್ದರು. ಇದೇ ಹೌಜ್ಖಾಸ ಮನೆಯಲ್ಲೇ ಕೊನೆಯುಸಿರೆಳೆದರು. ಕಿಸಿಕೇ ದಿಲ್ ಮೇ ಕೋಯೀ ರಂಜಿಶ್ ನಹೀ ಥಿ !  ಕೋಯೀ ಶಿಕಾಯತ್ ನಹೀ ರಹಾ!  ಯಾವ ಕೆಟ್ಟ ಭಾವನೆ ಕೆಸರು ಕೂಡ ಮನದಲ್ಲುಳಿಯಲಿಲ್ಲ.

ಇನ್ನೊಮ್ಮೆ ನವರಾಜ್ ತಾಯಿಯನ್ನು ಕೇಳಿದ…“ಮಮ್ಮಾ…ನಾನು ಸಾಹಿರ್ ಅಂಕಲ್ ಮಗನಾ ? ಎಂದು

ಅಮೃತಾ ಶಾಂತವಾಗಿ ಉತ್ತರಿಸಿದ್ದಳು –   ಇಲ್ಲಾ,…ಆಗಿದ್ದರೆ ಚೆನ್ನಾಗಿತ್ತು !

ಹೀಗೆ ಅಮೃತಾ ಯಾವತ್ತೂ ತನ್ನ ಮಾತಿನಲ್ಲಿ, ನಿಲುವಿನಲ್ಲಿ ಅತ್ಯಂತ ಪ್ರಾಮಾಣಿಕರಾಗಿದ್ದರು.  ಸಾಹಿರ್ ಜತೆಗಿನ ಪ್ರೇಮವನ್ನೂ ಬಚ್ಚಿಡಲಿಲ್ಲ.  ತನ್ನ ಮಗು ಗರ್ಭದಲ್ಲಿದಾಗಲೂ ಕೂಡ ಅದು ಸಾಹಿರ್‌ ನನ್ನೇ ಹೋಲಲಿ ಎಂದು ಬಯಸಿದ್ದನ್ನು ಯಾವ ಮುಲಾಜಿಲ್ಲದೇ ಹೇಳಿಕೊಂಡಿದ್ದಳು. ಯಾವತ್ತೂ ಆಕೆ ಸುಳ್ಳನ್ನು ಬದುಕಲಿಲ್ಲ. ಅದಮ್ಯವಾದ ಜೀವನಪ್ರೀತಿ ಹಾಗೂ ಸತ್ಯವನ್ನೇ ಬದುಕಿನುದ್ದಕ್ಕೂ ಬಾಳಿದಳು. 

ಸಾಹಿರ್ ಗಾಗಿ ಬಹಳಷ್ಟು ಪದ್ಯಗಳನ್ನು ಬರೆದರು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು. 

ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ

ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು !

** 

ಆಯುಷ್ಯದ ಸಿಗರೇಟು ಉರಿದುಹೋಯಿತು

ನನ್ನ ಪ್ರೇಮದ ಗಂಧ

ಒಂದಿಷ್ಟು ನಿನ್ನುಸಿರಲ್ಲಿ

ಒಂದಿಷ್ಟು ಗಾಳಿಯಲ್ಲಿ ಬೆರೆಯಿತು !

ಇಂದು ಅಮೃತಾ ಪ್ರೀತಮ್, ಇಮ್ರೋಜ್ ಇಬ್ಬರೂ ಇಲ್ಲ. ಆದರೆ ಲೋಕದ ಎಲ್ಲಾ ಪ್ರೇಮಿಗಳ ಎದೆಯಲ್ಲಿ ಅವರು ಬದುಕುತ್ತಾರೆ ಶಾಶ್ವತವಾಗಿ…ಈ ಭೂಮಿಯ ಮೇಲೆ ಪ್ರೀತಿ ಇರುವವರೆಗೂ.

ರೇಣುಕಾ ನಿಡಗುಂದಿ, ದೆಹಲಿ

More articles

Latest article