ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ʻರಾಮೇಶ್ವರಂ ಕೆಫೆʼ ಬಾಂಬ್ ಸ್ಫೋಟ ಪ್ರಕರಣದ ನಂತರ ಇದೇ ಹೋಟೆಲ್ ಯಾಕೆ ಟಾರ್ಗೆಟ್ ಆಯಿತು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಸ್ಫೋಟ ಪ್ರಕರಣದಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಇದೊಂದು ಭಯೋತ್ಪಾದಕ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ರಾಮೇಶ್ವರಂ ಕೆಫೆಯನ್ನೇ ಯಾಕೆ ಗುರಿ ಮಾಡಿಕೊಳ್ಳಲಾಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ರಾಮೇಶ್ವರಂ ಕೆಫೆ ಬೆಂಗಳೂರಿನಲ್ಲೇ ಒಟ್ಟು ಐದು ಔಟ್ ಲೆಟ್ ಗಳನ್ನು ಹೊಂದಿದ್ದು, ಇಂದಿರಾನಗರ, ಜೆಪಿನಗರ, ಬ್ರೂಕ್ ಫೀಲ್ಡ್ ಮತ್ತು ರಾಜಾಜಿನಗರದ ಔಟ್ ಲೆಟ್ ಗಳು ಈಗಾಗಲೇ ಜನರನ್ನು ಆಕರ್ಷಿಸುತ್ತಿವೆ. ರಾಮೇಶ್ವರಂ ಕೆಫೆಯಲ್ಲಿ ತಿಂಡಿ ತಿನಿಸುಗಳ ಬೆಲೆ ಕೊಂಚ ದುಬಾರಿಯಾದರೂ, ಇಲ್ಲಿ ರುಚಿ ಮತ್ತು ಶುಚಿಗೆ ಗಮನ ಕೊಡುವುದರಿಂದ ಜನರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಆಲ್ಟ್ರಾನ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಎಂಬ ಹೆಸರಿನ ಸಂಸ್ಥೆಯೊಂದು ರಾಮೇಶ್ವರಂ ಕೆಫೆ ನಡೆಸುತ್ತದೆ. ದಕ್ಷಿಣ ಭಾರತೀಯ ಶೈಲಿಯ ಊಟೋಪಚಾರಕ್ಕೆ ಹೆಸರಾದ ಇದರ ಸ್ಥಾಪಕರು ರಾಘವೇಂದ್ರ ರಾವ್ ಮತ್ತು ಅವರ ಪತ್ನಿ ದಿವ್ಯ ರಾವ್. 2021ರಲ್ಲಿ ರಾಮೇಶ್ವರಂ ಕೆಫೆಯನ್ನು ಆರಂಭಿಸಲಾಯಿತು. ನಂತರ ಒಂದಾದ ಮೇಲೊಂದರಂತೆ ಈ ಉದ್ಯಮಿ ದಂಪತಿಗಳು ಔಟ್ ಲೆಟ್ ಗಳನ್ನು ತೆರಯುತ್ತಿದ್ದಾರೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರ ಜನ್ಮಸ್ಥಳವಾದ ರಾಮೇಶ್ವರಂಗೆ ಗೌರವ ನೀಡುವ ಸಲುವಾಗಿ ರಾಮೇಶ್ವರಂ ಎಂಬ ಹೆಸರನ್ನು ಹೋಟೆಲ್ ಗೆ ಇಡಲಾಗಿದೆ ಎಂದು ಆಲ್ಟ್ರಾನ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ವೆಬ್ ಸೈಟ್ ಹೇಳುತ್ತದೆ.
ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ರಾಘವೇಂದ್ರ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದರೂ, ಹೋಟೆಲ್ ಉದ್ಯಮದಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ. ರಾಘವೇಂದ್ರ ಅವರೇ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ದಿವ್ಯ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಅಹಮದಾಬಾದ್‌ನ IIM ನಲ್ಲಿ ಹಣಕಾಸು ಮತ್ತು ಮ್ಯಾನೇಜ್ ಮೆಂಟ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಮೇಶ್ವರಂ ಕೆಫೆಯ ಹಣಕಾಸು ಉಸ್ತುವಾರಿಯನ್ನು ದಿವ್ಯ ಅವರೇ ನಡೆಸುತ್ತಾರೆ.