ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ಚಿತ್ರಗಳೆಲ್ಲವೂ ಸತತ ಸೋಲುಗಳನ್ನು ಕಾಣುತ್ತಿವೆ. ಸಿನಿಮಾ ಉದ್ಯಮದಲ್ಲಿ 50 ವರ್ಷ ಪೂರ್ಣಗೊಳಿಸಿರುವ ಅವರ ವೃತ್ತಿ ಜೀವನದಲ್ಲಿ ಇಂತಹ ಸೋಲನ್ನು ಇದೇ ಮೊದಲ ಭಾರಿ ಕಂಡಿದ್ದಾರೆ. 2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಫ್ಲಾಪ್ ಆಗಿತ್ತು. ನಂತರ ತೆರೆಕಂಡ ಎರಡು ಸಿನಿಮಾಗಳೂ ಮಕಾಡೆ ಮಲಗಿದ್ದವು. ಚಿರಂಜೀವಿ ಇನ್ನೂ ಹಳೆಯ ಕಾಲದ ಕಥೆಯಿರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದೇ ಸೋಲಿಗೆ ಕಾರಣ ಎಂದು ಅವರ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಹೊಸ ಕತೆ, ಆಧುನಿಕ ಶೈಲಿಯ ಸಿನಿಮಾಗಳತ್ತ ಚಿತ್ತ ಹರಿಸಬೇಕು ಎನ್ನುವುದು ಅವರ ಅಭಿಮಾನಿಗಳ ಒತ್ತಾಸೆಯಾಗಿದೆ. ಇವರ ಅಭಿಮಾನಕ್ಕೆ ಮಣಿದಿರುವ ಚಿರಂಜೀವಿ ಕೊನೆಗೂ ಭಿನ್ನ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ.
ನಾನಿ ನಟನೆಯ ‘ದಸರಾ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿರುವ ನಿರ್ದೆಶಕ ಶ್ರೀಕಾಂತ್ ಒಡೆಲ ಚಿರಂಜೀವಿ ಅವರ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾಕ್ಕೆ ನಟ ನಾನಿ ಅವರೇ ಬಂಡವಾಳ ಹೂಡುತ್ತಿರುವುದು ಮತ್ತೊಂದು ವಿಶೇಷ. ಜೊತೆಗೆ ಪುಟ್ಟ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಪಕ್ಕಾ ಹಿಂಸಾಚಾರ ಇರುವ ಕತೆ ಎಂದು ಪೋಸ್ಟರ್ ನೋಡುತ್ತಿದ್ದಂತೆ ಹೇಳಬಹುದಾಗಿದೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ ಇಬ್ಬರೂ ಕೈಯನ್ನು ರಕ್ತದಲ್ಲಿ ಅದ್ದಿ ಪರಸ್ಪರ ಕೈ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಇದು ರಕ್ತದಲ್ಲಿ ಮಾಡಿದ ಪ್ರತಿಜ್ಞೆ’ ಎಂಬ ಅಡಿಬರಹ ಕೊಡಲಾಗಿದೆ. ಪೋಸ್ಟರ್ನಲ್ಲಿ ‘ಇವನಿಗೆ ಶಾಂತಿ ಸಿಗುವುದು ಹಿಂಸೆಯಲ್ಲೇ’ ಎಂಬ ಅಡಿಬರಹ ಇದೆ.