ಕರ್ನಾಟಕ ಸುವರ್ಣ ಸಂಭ್ರಮ ವಿಶೇಷ ಲೇಖನ
ಚಾರಿತ್ರಿಕವಾಗಿ ಪ್ರಸಿದ್ಧವಾಗಿದ್ದ ʼಮೈಸೂರುʼ ಹೆಸರಿನ ನಮ್ಮ ರಾಜ್ಯಕ್ಕೆ 1973ರಲ್ಲಿ ʼಕರ್ನಾಟಕʼ ಎಂಬ ಹೊಸ ಹೆಸರನ್ನು ನೀಡಲಾಯಿತು. ಆ ಹೊಸ ಹೆಸರಿಗೀಗ 50 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ʼಕರ್ನಾಟಕʼ ಹೆಸರಿನ ಬಗ್ಗೆ ಏನೆಲ್ಲಾ ಚರ್ಚೆಗಳು ನಡೆದಿವೆ ಎಂಬುದನ್ನು ಓದುಗರ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ – ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.
69 ವರ್ಷಗಳ ಹಿಂದೆ, ಅಂದರೆ 1956ಕ್ಕೆ ನಮ್ಮ ಈ ರಾಜ್ಯಕ್ಕೆ ʼಮೈಸೂರುʼ ಎಂಬ ಹೆಸರಿತ್ತು. ಈ ಹೆಸರು ಬಹಳ ಹಳೆಯದು. ʼಮಹಿಷಾಸುರʼ ಅಥವಾ “ಮಹಿಷಾಸುರನ ಊರು” ಎಂಬ ಶಬ್ದದಿಂದ ಮೈಸೂರು ಪದ ಬಂದಿದೆ ಎಂಬುದನ್ನು ಬಹುತೇಕ ಎಲ್ಲ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಮೈಸೂರನ್ನು ಗಂಗರು, ಚಾಲುಕ್ಯರು, ಚೋಳರು, ಹೊಯ್ಸಳರು, ವಿಜಯನಗರ ರಾಜರು ಮತ್ತು ಯದು ರಾಜವಂಶದವರು ಆಳಿದ್ದಾರೆ. ಶಾಸನಗಳು ಮೈಸೂರನ್ನು ʼಮಹಿಷ ಮಂಡಲʼ ಎಂದು ನಮೂದಿಸಿವೆ. ಹೀಗೆ ಚಾರಿತ್ರಿಕವಾಗಿ ಪ್ರಸಿದ್ಧವಾಗಿದ್ದ ʼಮೈಸೂರುʼ ಹೆಸರಿನ ನಮ್ಮ ರಾಜ್ಯಕ್ಕೆ 1973ರಲ್ಲಿ ʼಕರ್ನಾಟಕʼ ಎಂಬ ಹೊಸ ಹೆಸರನ್ನು ನೀಡಲಾಯಿತು. ಆ ಹೊಸ ಹೆಸರಿಗೀಗ 50 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ʼಕರ್ನಾಟಕʼ ಹೆಸರಿನ ಬಗ್ಗೆ ಏನೆಲ್ಲಾ ಚರ್ಚೆಗಳು ನಡೆದಿವೆ ಎಂಬುದನ್ನು ಓದುಗರ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ.
ಏಕೀಕರಣಕ್ಕೆ ಮುನ್ನ, ಅಂದರೆ 69 ವರ್ಷಗಳ ಹಿಂದೆ ಕನ್ನಡ ಭಾಷಿಕರು ಏನಿಲ್ಲವೆಂದರೂ 20 ಆಡಳಿತಗಳಲ್ಲಿ ಹಂಚಿಹೋಗಿದ್ದರು. ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯ, ಮುಂಬೈ ಸಂಸ್ಥಾನ, ಕೊಡಗು, ಹೈದರಾಬಾದ್ ಸಂಸ್ಥಾನ, ರಾಮದುರ್ಗ, ಸಾಂಗ್ಲಿ, ಮೀರಜ್, ಕುರುಂದವಾಡ, ಜಮಖಂಡಿ, ಮುಧೋಳ, ಸಂಡೂರು ಮತ್ತಿತರ ಸಂಸ್ಥಾನಗಳ ನಡುವೆ ಕನ್ನಡ ಅನಾಥವಾಗಿತ್ತು. ಅಲ್ಲಿನ ಕನ್ನಡಿಗರ ಸ್ಥಿತಿ ದಯನೀಯವಾಗಿತ್ತು. ಕನ್ನಡವು ಸಾರ್ವಜನಿಕ ಕ್ಷೇತ್ರದಿಂದ ಬಹುತೇಕ ಕಾಣೆಯಾಗಿತ್ತು. 1937ರ ಹೊತ್ತಿಗೆ ಭಾರತದ ಕೇಂದ್ರ ಶಾಸನ ಸಭೆಯಲ್ಲಿ ಬ್ರಿಟಿಷ್ ಕರ್ನಾಟಕದ ಒಟ್ಟು 68 ಲಕ್ಷ ಕನ್ನಡಿಗರ ಪ್ರತಿನಿಧಿಯಾಗಿ ಇದ್ದವನು ಒಬ್ಬನೇ ಒಬ್ಬ ಕನ್ನಡಿಗ. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಹುಟ್ಟಿಕೊಂಡು, ಚದುರಿ ಹೋಗಿದ್ದ ಕನ್ನಡಿಗರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು. 1956ರ ನವೆಂಬರ್ ಒಂದರಂದು ಮೈಸೂರು ರಾಜ್ಯ ಉದಯವಾಯಿತು. ಈ ಹೊಸ ರಾಜ್ಯಕ್ಕೆ 1973ರ ನವೆಂಬರ್ 1ರಂದು ʼಕರ್ನಾಟಕʼ ಎಂದು ಮರುನಾಮಕರಣವಾಯಿತು. ಕುವೆಂಪು ಅವರು ಕರ್ನಾಟಕವನ್ನು ʼಸರ್ವಜನಾಂಗದ ಶಾಂತಿಯ ತೋಟʼವೆಂದು ಬಹಳ ಸಮರ್ಪಕವಾಗಿ ಕರೆದರು. ಅನೇಕ ಭಾಷೆಗಳು, ಸಮುದಾಯಗಳು ಮತ್ತು ಮತ ಧರ್ಮಗಳನ್ನು ಒಳಗೊಳ್ಳುತ್ತಾ ಕರ್ನಾಟಕವು ಬೆಳೆದಿದೆ. ಮುಖ್ಯವಾಗಿ ಈ ರಾಜ್ಯದಲ್ಲಿ ಕಾಣುವುದು ಒಂದು ಬಗೆಯ ಸಮನ್ವಯ ಮತ್ತು ಸಾಮರಸ್ಯ ದೃಷ್ಟಿ.
ಕರ್ನಾಟಕ ಪದದ ಕುರಿತು:
ಕರ್ನಾಟಕ ಪದವು ಚಾರಿತ್ರಿಕವಾಗಿ ದೇಶ ಮತ್ತು ಭಾಷಾ ವಾಚಕವಾಗಿ ಬಳಕೆಯಲ್ಲಿತ್ತು. ಪ್ರಾಚೀನ ಶಾಸನಗಳಲ್ಲಿ ಹಾಗೂ ಗ್ರಂಥಗಳಲ್ಲಿ ಕರ್ಣಾಟ, ಕರ್ಣಾಟಕ, ಕನ್ನಡ ಮುಂತಾದ ರೂಪಗಳು ಬಳಕೆಯಾಗಿವೆ. ಕ್ರಿಸ್ತಶಕ 850ರ ಸುಮಾರಿನಲ್ಲಿ ರಚಿತವಾದ ಕವಿರಾಜಮಾರ್ಗದಲ್ಲಿ ʼಕಾವೇರಿಯಿಂದಮಾ ಗೋದಾವರಿಮಿರ್ಪ ನಾಡದಾ ಕನ್ನಡದೊಳ್ʼ ಎಂದು ಹೇಳಿದ್ದನ್ನು ಗಮನಿಸಿದರೆ ಈ ರಾಜ್ಯವು ಭಾಷಾ ವಾಚಿಕವಾಗಿ ಜನಪ್ರಿಯವಾಗಿತ್ತು ಎಂದು ಹೇಳಬಹುದು. ಇವುಗಳ ಆಧಾರದಿಂದ ಕನ್ನಡನಾಡು ಬಹು ಹಿಂದಿನ ಕಾಲದಿಂದಲೂ ಕರ್ಣಾಟ, ಕರುನಾಡು ಮುಂತಾದ ಬೇರೆ ಬೇರೆ ಹೆಸರುಗಳಲ್ಲಿ ಅಸ್ತಿತ್ವದಲ್ಲಿತ್ತೆಂದು ತಿಳಿಯಬಯಬಹುದು. ಇವತ್ತು ಅಧಿಕೃತವಾಗಿ ಬಳಕೆಯಲ್ಲಿರುವ ಕರ್ನಾಟಕ ಪದವು ಹೇಗೆ ಹುಟ್ಟಿಕೊಂಡಿತು ಎಂಬುದು ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. ಈ ಪದದ ಕುರಿತು ಕೆಲವು ವಿದ್ವಾಂಸರ ವಾದಗಳು ಇಂತಿವೆ-
1. ಗುಂಡರ್ಟ್ ಎಂಬ ಸಂಸ್ಕೃತ ವಿದ್ವಾಂಸನ ಪ್ರಕಾರ- ದಕ್ಷಿಣ ದಕ್ಖನಿನ ನೆಲ ಕಪ್ಪುಮಣ್ಣಿನ ಭೂಮಿಯಾಗಿದ್ದು, ಅದರಿಂದ ಕರುನಾಡು (ಕಪ್ಪು ನಾಡು) ಪದ ಹುಟ್ಟಿಕೊಂಡಿದೆ. ಇದುವೇ ಕರ್ಣಾಟದ ಮೂಲ ರೂಪ ಎಂಬುದು ಅವನ ವಾದ. ಕರ್+ನಾಟ್+ಅಗಂ ಎಂದರೆ ಕಪ್ಪುನಾಡಿನ ಒಳಭಾಗ (ಪ್ರದೇಶ)- ಎಂಬುದು ಕೂಡ ಅವರ ಇನ್ನೊಂದು ಸೂಚನೆ.
2. ಕನ್ನಡನಾಡು ಸಮುದ್ರ ಮಟ್ಟಕ್ಕಿಂತ ಎತ್ತರವಾಗಿ ಘಟ್ಟದ ಮೇಲಿದೆ. ಕರುನಾಡು ಎಂಬುದು ಕರುಮಾಡ ಎಂಬಂತೆ ಸೀಮೆ (ಕಣಿವೆ ಮೇಲಣ ಸೀಮೆ), ಆದ್ದರಿಂದ ಕರು-ನಾಡು (ಎತ್ತರವಾದ ನಾಡು) ಎಂಬುದು ದ್ರಾವಿಡ ಭಾಷೆಗಳಲ್ಲಿ ಮುಂದೆ ಕನ್ನಡ ಎಂಬುದಾಗಿಯೂ ಸಂಸ್ಕೃತದಲ್ಲಿ ಕರ್ಣಾಟ ಎಂಬುದಾಗಿಯೂ ಪ್ರಯೋಗವಾಗಿದೆ ಎಂದು ವಿದ್ವಾಂಸರೂ ಕವಿಗಳೂ ಆಗಿರುವ ಹುಯಿಲಗೋಳ ನಾರಾಯಣರಾಯರು ಅಭಿಪ್ರಾಯ ಪಟ್ಟಿದ್ದಾರೆ.
3. ಕರುನಡಂ (= ಕನ್ನಡ)- ಕರ್ಣಾಟ: ಕರುನಡಂ ಮತ್ತು ಕನ್ನಡಂ ಎಂಬ ಹೆಸರುಗಳು ತಮಿಳು ಲಕ್ಷಣ ಗ್ರಂಥಗಳ ವೃತ್ತಿಗಳಲ್ಲಿ ಉಕ್ತವಾಗಿವೆ. ತಮಿಳಿನಲ್ಲಿ ಕರು ಎಂದರೆ ಬೆಟ್ಟ. ಕೆಳ ನಾಡಿನವರಾದ ತಮಿಳರು ಮೇಲ್ನಾಡನ್ನು ಕರುನಾಡು-ಕರುನಡ ಎಂದು ಕರೆದಿರಬಹುದು.
4. ಕಮ್ಮಿತು + ನಡೆ (ಕಂ+ನಡೆ>ಕನ್ನಡ): ಹಿತವಾದ ಜನರಿರುವ ನಾಡು- ಇದು ಆರ್. ತಾತಾಚಾರ್ಯರ ಅಭಿಮತ.
5. ಕರಂ, ಕರು, ಕಡು ಎಂಬವು ದೊಡ್ಡ, ವಿಸ್ತಾರವಾದ, ಮಹಾ ಎಂಬರ್ಥದಲ್ಲಿ ಬಳಕೆಯಾಗುತ್ತಿರುವ ಪದಗಳು ( ಉದಾ: ಕಡು ಕಪ್ಪು ಬಣ್ಣದ ಸೀರೆ). ಆದ್ದರಿಂದ ಕರುನಾಡು ಎಂದರೆ ದೊಡ್ಡ ನಾಡು. ಕರು + ನಾಡು > ಕರ್ + ನಾಡು >ಕರ್ನಾಡು (=ದೊಡ್ಡ ದೇಶ) ಎಂಬ ಕನ್ನಡ ಸಮಾಸಪದವೇ ಸಂಸ್ಕೃತದಲ್ಲಿ ಕರ್ಣಾಟ ಎಂದು ಆಗಿರಬೇಕು. ಇದು ಎಂ.ಗೋವಿಂದ ಪೈ ಮತ್ತು ರಾ. ಹ. ದೇಶಪಾಂಡೆಯವರ ಆಭಿಪ್ರಾಯ.
6. (ಪರಿಮಳವಾಚಿಯಾದ) ಕಮ್ಮಿತು + ನಾಡು=ಕನ್ನಾಡು > ಕನ್ನಡು > ಕನ್ನಡ: ಕನ್ನಡ ಎಂಬ ಪದಕ್ಕೆ ಪರಿಮಳ ವಿಶಿಷ್ಟವಾದ ದೇಶದ ಭಾಷೆ ಎಂದು ಅರ್ಥ. ಕನ್ನಡ ದೇಶ ಗಂಧದ ಮರದ ಕಾಡುಗಳಿಗೂ ತಾವರೆ ಕೊಳಗಳಿಗೂ ಪ್ರಸಿದ್ಧಿ ಪಡೆದಿರುವುದರಿಂದ ಕಮ್ಮಿತು ಎಂಬ ವಿಶೇಷಣ ಅನುರೂಪವಾದುದು ಎಂದು ರಾ. ನರಸಿಂಹಾಚಾರ್ಯರು ಹೇಳಿದ್ದಾರೆ.
7. ಕನ್ (ಎಂದರೆ ಕಾಣು ಅಥವಾ ಒಡಮೂಡು) ಎಂಬ ಧಾತುವಿನಿಂದ ಕನ್ನಡ ಹುಟ್ಟಿದೆ. ಕನ್ + ಅಳ್ =ಕನ್ನಳ್, ಕನ್ನಡ. ಕನ್ – ಅಳ್ = ಒಡಮೂಡುವುದನ್ನು ಉಳ್ಳದ್ದು; ಭಾವಗಳನ್ನು ಒಡಮೂಡಿಸುವುದು – ಕನ್ನಡ. ಹೀಗೆಂದು ದ. ರಾ. ಬೇಂದ್ರೆ ಮತ್ತು ಬೆಟಗೇರಿ ಕೃಷ್ಣ ಶರ್ಮರ ಅಭಿಪ್ರಾಯ.
8.ಕರ್- ನಾಟ್- ಅಗಂ ಎಂದರೆ ಕರಿಯ ನಾಡನ್ನು ಒಳಗೊಂಡ ಪ್ರದೇಶ. ಆದರೆ ಶಬ್ದರೂಪ ಕರ್ಣಾಟಕವೇ ಹೊರತು ಕರ್ನಾಟಕ ಅಲ್ಲ. ಇದು ಬಿ.ಎಂ.ಶ್ರೀ. ಅವರ ಧೋರಣೆ.
ಸಂಸ್ಕೃತದಲ್ಲಿ :
ಕರ್ಣಾಟ ಶಬ್ದವು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಸಂಸ್ಕೃತ ಮಹಾಭಾರತದಲ್ಲಿ ( ಕ್ರಿಸ್ತಪೂರ್ವ ಸುಮಾರು ಆರನೇ ಶತಮಾನ) ಜನಪದಗಳನ್ನು ಕುರಿತು ಹೇಳುವಾಗ ಸಭಾಪರ್ವದಲ್ಲಿ ಕರ್ಣಾಟಾಃ ಎಂದೂ, ಭೀಷ್ಮ ಪರ್ವದಲ್ಲಿ ಕರ್ಣಾಟಿಕಾಃ ಎಂದೂ ಹೇಳಲಾಗಿದೆ. ಶೂದ್ರಕ ಕವಿಯ ( ಕ್ರಿಸ್ತಶಕ 400) ಮೃಚ್ಛಕಟಿಕ ನಾಟಕದ ಒಂದು ಸಂವಾದದಲ್ಲಿ, ವರಾಹಮಿಹಿರನ (6ನೆಯ ಶತಮಾನದ ಆದಿಭಾಗ) ಬೃಹತ್ಸಂಹಿತೆಯಲ್ಲಿ, ಮಾರ್ಕಾಂಡೇಯ ಪುರಾಣ (ಕ್ರಿ.ಶ. ಸು 8ನೆಯ ಶತಮಾನ) ಮತ್ತು ಸೋಮದೇವನ ಕಥಾಸರಿತ್ಸಾಗರಗಳಲ್ಲಿ ಕರ್ಣಾಟ ಶಬ್ದವನ್ನು ಕಾಣಬಹುದೆಂದು ವಿದ್ವಾಂಸರು ತಿಳಿಸಿದ್ದಾರೆ. ರಾಜಶೇಖರನ (ಕ್ರಿ.ಶ 10ನೆಯ ಶ.) ಕಾವ್ಯಮೀಮಾಂಸಾ ಗ್ರಂಥದಲ್ಲಿ ಕನ್ನಡಿಗರ ಪಠಣ ರೀತಿಯನ್ನು ಕುರಿತು ಹೇಳುವಾಗ ಕರ್ಣಾಟದ ಉಲ್ಲೇಖವಿದೆ. ಇವುಗಳ ಜೊತೆಗೆ, ಅಪಭ್ರಂಶ ಪ್ರಾಕೃತದಲ್ಲಿ ಕನ್ನಾಡ, ಪಾಲಿಯಲ್ಲಿ ಕಣ್ಣಾಟ, ಗುಜರಾತಿಯಲ್ಲಿ ಕನಡಿ, ಮರಾಠಿಯಲ್ಲಿ ಕಾನಡಿ ಎಂಬ ರೂಪಗಳುಂಟು.
ಒಟ್ಟಿನಿಂದ ಕರ್ನಾಟಕ ಪದವು ಮೊದಲು ʼಕರ್ಣಾಟʼ ಎಂದಷ್ಟೇ ಇತ್ತು. ಅದು ಒಂದು ಕನ್ನಡ ಪದ. ದೇಶ, ಭಾಷೆ, ಜನ ಮತ್ತು ಕುಲಗಳನ್ನು ಅದು ನಿರ್ದೇಶಿಸುತ್ತದೆ. ಕವಿರಾಜಮಾರ್ಗ ಮತ್ತು ಕಬ್ಬಿಗರ ಕಾವದಲ್ಲಿ ಕನ್ನಡವು ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿದೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗುತ್ತವೆ.
ಸಮಾರೋಪ:
ಒಟ್ಟಿನಿಂದ ಚಾರಿತ್ರಿಕವಾಗಿ ಕರ್ನಾಟಕ, ಕರ್ಣಾಟ, ಮತ್ತು ಕನ್ನಡ ಶಬ್ದಗಳು ಬಳಕೆಯಲ್ಲಿದ್ದುವು. ಆ ಪದಗಳು ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸಲು ಬಳಕೆಯಾಗಿವೆ. ಕವಿರಾಜಮಾರ್ಗ ( 850) ಮತ್ತು ಕಬ್ಬಿಗರ ಕಾವ ( 1225)ದಲ್ಲಿ ಕನ್ನಡವು ದೇಶವಾಚಕವಾಗಿದೆ. ಚೆನ್ನಬಸವೇಶ್ವರ ( 1156) ನಿಜಗುಣ ಶಿವಯೋಗಿಗಳ ( 1500) ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿವೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗಿವೆ.
ಕರ್ನಾಟಕವೂ ಸೇರಿದಂತೆ, ಭಾರತದ ಬಹುತೇಕ ಹೆಸರುಗಳು ಪ್ರಕೃತಿ ಜನ್ಯವಾದುವು. ನೀರು, ಬೆಟ್ಟ, ಭೂಮಿ, ಮಳೆ, ಏರಿಳಿತಗಳು ಇತ್ಯಾದಿಗಳನ್ನು ಅನುಸರಿಸಿ ಹೆಸರುಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಕರ್ನಾಟ – ಕನ್ನಡ ಪದವು ಗುಂಡರ್ಟ್ ಊಹಿಸಿದ ಪ್ರಕಾರ ಕಪ್ಪು ಮಣ್ಣಿನ ನಾಡು ಎಂಬರ್ಥದಲ್ಲಿ ಹುಟ್ಟಿಕೊಂಡಿರಬೇಕು. ಅಥವಾ ಕರು ನಾಡು- ಅಂದರೆ ಎತ್ತರದ ನಾಡು ಎಂಬರ್ಥದಲ್ಲಿಯೂ ಹುಟ್ಟಿಕೊಂಡಿರಬಹುದು.
ಪುರುಷೋತ್ತಮ ಬಿಳಿಮಲೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
ಇದನ್ನೂ ಓದಿ- ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಮತ್ತು ಪ್ರಯೋಗ