ದರ್ಶನ್ ಪ್ರಕರಣ ಕಲಿಸಿದ ಪಾಠ: ನಮ್ಮೊಳಗೊಂದು ಆಂತರಿಕ ವಿರೋಧ ಪಕ್ಷ ತುರ್ತಾಗಿ ಬೇಕಾಗಿದೆ

Most read

ಅಭಿಮಾನ ಎಂಬ ಹುಚ್ಚುಕುದುರೆ ಏರಿದ ಮೇಲೆ ಅದರಿಂದ ಇಳಿಯುವುದು ಕಷ್ಟ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಅವರ ಒಂದು ಕಾಲದ ಅಭಿಮಾನಿ ವಿಜಯ್ ದಾರಿಹೋಕ `ಅಭಿಮಾನ’ದ ಅಪಾಯಗಳ ಕುರಿತು ವಿವರವಾಗಿ ಬರೆದಿದ್ದಾರೆ.

ಆಗೆಲ್ಲ kbps ಇಂಟರ್ನೆಟ್ ಕಾಲ ಹಾಗೂ ಸೋಷಿಯಲ್ ಮಾಧ್ಯಮಗಳು ಇವತ್ತಿನ ಹಾಗೆ ಬೆಳೆದಿರಲಿಲ್ಲ. ಕ್ಲೌಡ್ ,ಯುನಿಕೋಡ್ ಇಲ್ಲದ ಕಾಲ. ಕನ್ನಡದಲ್ಲಿ ಕೆಲವೇ ಕೆಲವು ಸೈಟ್ ಗಳು  ವಿಗ್ಗಿಡಾಟ್ ಕಾಮ್ , ಕನ್ನಡ ಆಡಿಯೋ ಡಾಟ್ ಕಾಮ್ , ಬ್ಲಾಗ್ ಸ್ಪಾಟ್ ಗಳಲ್ಲಿ ಕಂಗ್ಲಿಷ್ ಇಲ್ಲವೇ  ಆಗಷ್ಟೇ ಕನ್ನಡ ಲಿಪಿಗಳನ್ನು ASCII  ರೂಪದಲ್ಲಿ ಬಳಸುವ ಪ್ರಯತ್ನ ನಡೆದಿತ್ತು. ಆರ್ಕುಟ್ ಇದ್ದರೂ ಹೆಚ್ಚು ಕಮ್ಮಿ ಎನ್ ಆರ್ ಐ ಗಳು ,ಐಟಿ ಉದ್ಯೋಗಿಗಳು ಹೆಚ್ಚಾಗಿ ಬಳಸುತ್ತಿದ್ದರು. ಆ ಸಮಯದಲ್ಲಿ ನಾನು ವಿಗ್ಗಿ ಡಾಟ್ ಕಾಮ್ ಫೋರಂ ನಲ್ಲಿ ಕನ್ನಡ ವಿಜಯ ಎಂಬ ಯೂಸರ್ ನೇಮ್ ನೊಂದಿಗೆ  ಸಕ್ರಿಯನಾಗಿದ್ದೆ.  ಗೋಕುಲ್ ಮತ್ತು ಇನ್ನೊಬ್ಬ  ಕಾಲೇಜು ಹುಡುಗರಿಬ್ಬರು ಸೇರಿ  ಆ ಸಮಯದಲ್ಲಿ ಮನೆಯಲ್ಲಿ  ಒಂದು ಸಿಪಿಯು ಸರ್ವರ್ ಇಟ್ಟು ಗಂಧದಗುಡಿ ಡಾಟ್ ಕಾಮ್ ಹೋಸ್ಟ್ ಮಾಡಿ ನಡೆಸುತ್ತಿದ್ದರು. ಕನ್ನಡ ಸಿನೆಮಾಗೆ ಸಂಬಂಧದ ಚರ್ಚೆಗಳಿಗೆ ಅದು ವೇದಿಕೆ ಆಗಿತ್ತು.  ಸ್ಯಾಂಡಲ್ವುಡ್ ನಲ್ಲಿ ಸುದೀಪ್ , ದರ್ಶನ್ ಪೈಪೋಟಿಯೊಂದಿಗೆ ಮುಂಚೂಣಿಗೆ ಬರುತ್ತಿರುವ ಕಾಲ ಅದಾಗಿತ್ತು. ಆನ್ಲೈನ್ ನಲ್ಲೂ ಸುದೀಪ್ ಗೆ ಅಭಿಮಾನಿ ಸಂಖ್ಯೆ ಜಾಸ್ತಿಯಾಗಿತ್ತು. ನನಗೋ ಕಾಲೇಜು ಮುಗಿದು ಕೆಲಸ ಹಿಡಿದಿದ್ದರೂ ಸ್ವಲ್ಪ ಹುಡುಗು ಬುದ್ದಿ.

ಸಾಮಾನ್ಯವಾಗಿ ನಡೆಯುತ್ತಿದ್ದ  ಗಂಧದ ಗುಡಿ.ಕಾಮ್  ನಲ್ಲಿ ನಾನು ಡ್ಯಾಷಿoಗ್ ದರ್ಶನ್ ಎನ್ನುವ ಐಡಿ ಮಾಡಿ ದರ್ಶನ್ ಅಭಿಮಾನಿಗಳ ಗುಂಪು ಶುರು ಮಾಡಿ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದೆ. ದರ್ಶನ್ ಅಭಿಮಾನಿಗಳೂ ಸಾಮಾನ್ಯವಾಗಿ ಮಾಸ್ ಆಗಿದ್ದರೂ ನಾನು ಕಟ್ಟರ್ ಕಾಮೆಂಟ್ ಬರಹ  ಹಾಕದೆ ವಿಶೇಷವಾಗಿ   ಪೋಸ್ಟ್ ಗಳನ್ನೂ ಹಾಕುತ್ತಿದ್ದುದರಿಂದ ದರ್ಶನ್ ಅಭಿಮಾನಿಗಳ ಗ್ರೂಪ್ ಕೂಡ  ಸೆಡ್ಡು ಹೊಡೆದು  ನಿಂತಿತು. ಅನೇಕರು ನನ್ನ ಗ್ರೂಪ್ ನಲ್ಲಿ ಸೇರಿ ಪೋಸ್ಟ್ಗಳು ಹೆಚ್ಚಾಗಿ ಸೈಟ್ ಕೂಡ ಕ್ರಿಯಾಶೀಲವಾಗಿದ್ದು ಕಂಡು ಸರ್ವರ್ ಇಟ್ಟಿದ್ದ ಗೋಕುಲ್ ಖುಷಿಯಾಗಿ ನನ್ನ ಭೇಟಿಗೆ ಬಂದಿದ್ದ.

ಆಗೆಲ್ಲ ಎಳಸು  ಬುದ್ದಿಯಾದರೂ ಸಿಕ್ಕಾಪಟ್ಟೆ ಸಿನೆಮಾ ಹುಚ್ಚೇನೂ ಇರಲಿಲ್ಲ. ನಮ್ಮ ಉತ್ತರ ಕನ್ನಡದ  ಕಡೆ ಥೇಟರ್ ಗೆ ಹೋಗಿ ಸಿನೆಮಾ ನೋಡುವ ಹವ್ಯಾಸ ಕಮ್ಮಿ. ಕುಟುಂಬ ಸಮೇತ ಮನೆಯವರು ಹೋಗಿದ್ದು ಇಂದಿಗೂ ನೆನಪಿಲ್ಲ. ಟಿವಿಯಲ್ಲಿ ಮಾತ್ರ ವಿಷ್ಣುವರ್ಧನ್ ದ್ವಾರಕೀಶ್  ಚಿತ್ರಗಳು ಎಂದರೆ ಜಗ ಮರೆತು ನೋಡುತ್ತಿದ್ದೆ . ಹೀಗೆಲ್ಲ ಇದ್ದು  ನಾನು ಹೇಗೆ  ಲಾಂಗು ಮಚ್ಚುಗಳ ದರ್ಶನ್ ನ ಅಭಿಮಾನಿಯಾಗಲು ಕಾರಣ ಏನು ಯೋಚಿಸಿದರೆ ಅದಕ್ಕೆ ಉತ್ತರ ಸೆಂಟಿಮೆಂಟಲ್  ಭಾರತೀಯ ಮನಸ್ಥಿತಿಯೇ. ಆಗ ಕೂಡ ಈ ಸಿನೆಮಾ ಪತ್ರಕರ್ತರು ಇಂತಹ ವ್ಯಕ್ತಿ ಚಿತ್ರಣಗಳನ್ನು  ಭಾವೋದ್ವೇಗದ ವೈಪರೀತ್ಯಗಳಲ್ಲಿಯೇ ಹೈಪ್ ಮಾಡಿ ಬರೆಯುತ್ತಿದ್ದರು. ನನ್ನ ದೃಷ್ಟಿಯಲ್ಲಿ  ಸುದೀಪ್ ಒಬ್ಬ ಉಳ್ಳವ, ಗಾಡ್ ಫಾದರ್ ಬೆಂಬಲದಿಂದ ಬಂದವ. ಆದರೆ ದರ್ಶನ್ ತುಂಬಾ  ಕಷ್ಟದಿಂದ ಮೇಲೆ ಬಂದವ ಎಂಬುದು. ಇಂತಹ  ಸ್ಟೋರಿಗಳು ನಮ್ಮ ಮನಸ್ಸಿನಲ್ಲಿ ಬಹುಬೇಗ ಆಳವಾಗಿ ನಾಟುತ್ತವೆ. ಚಹಾ ಮಾರುತ್ತಿದ್ದವ ಪ್ರಧಾನಿಯಾದ ಅನ್ನುವ ಹಾಗೆ.  ನೀತಿ ಕಥೆಗಳ ಪರಂಪರೆಯ ನಮಗೆ ಅಯ್ಯೋ ಪಾಪ ಕಷ್ಟದಿಂದ ಒಬ್ಬ ಮುಂದೆ ಬಂದವ ಅಂತ ಹೆಮ್ಮೆ ಪಡುತ್ತೇವೆ. ಅವೇ  ನೈತಿಕ ಬಲದೊಂದಿಗೆ ಹೆಮ್ಮರವಾಗಿ  ಬೆಳೆದು ಅಹಂ ಗೆ ಅಂಟಿಸಿಕೊಂಡು ಬಿಡುತ್ತೇವೆ. ಒಂದು  ವಿಷಯ, ಸಿದ್ಧಾಂತ, ಪಕ್ಷ, ಇಲ್ಲವೇ ವ್ಯಕ್ತಿಯ ಬಗ್ಗೆ ತೀವ್ರ ಅಭಿಮಾನ ಬೆಳೆಸಿಕೊಂಡು ಫ್ಯಾನ್ಸ್ ಗಳಾಗಿ ಬದಲಾಗುತ್ತೇವೆ. ಇದೆ ಅತಿರೇಕಕ್ಕೆ ಹೋದರೆ ಫ್ಯಾನಟಿಕ್ಸ್ ಆಗಿ ರೂಪಗೊಳ್ಳುತ್ತದೆ. ಇದು ನಮ್ಮ ವೀಕ್ನೆಸ್ ಕೂಡ ಹೌದು.

ಆ ಮಾಸ್ ಆಕ್ಟರ್ ಗೆ ನೀನ್ಯಾಕೆ ಕ್ಲಾಸ್ ಆಗಿ ಅವನ ಬಗ್ಗೆ ಅಭಿಮಾನಿ ಬಳಗ ಮಾಡಿ  ಬರೆದು ಪರವಾಗಿ ಬ್ಯಾಟಿಂಗ್ ಮಾಡೋದು, ಸುದೀಪ್ ಅಭಿಮಾನಿಯಾಗು , ಆತ ಕ್ಲಾಸ್ ಮೂವಿ ಮಾಡ್ತಾನೆ ಅಂದವರು  ಅನೇಕರು. ಆ ಸಮಯ ಹಾಗಿತ್ತು. ದರ್ಶನ್ ಪತ್ನಿ ಎಂಜಿನಿಯರಿಂಗ್ ಓದಿದ್ದರಿಂದ ಒನ್ಲೈನ್ ಬಳಸುತ್ತಿದ್ದ ವಿಜಯಲಕ್ಷ್ಮಿ ದರ್ಶನ್ ಅಭಿಮಾನಿ ಬಳಗ ಗ್ರೂಪ್ ನೋಡುತ್ತಿದ್ದರು ಎಂಬುದು ಕಾಮನ್ ಗೆಳತಿಯಿಂದ ತಿಳಿದುಬಂತು. ಆಗೆಲ್ಲ ಅವನ ಸಂಸಾರ ಚೆನ್ನಾಗಿಯೇ ಇತ್ತು.

ಸೊಳ್ಳೆ ಬಿಟ್ಟರೆ ಯಾರಿಗೂ ಹೊಡೆದಿರದ ನನಗೆ ಈ ಲಾಂಗ್ ಮಚ್ಚು ಚಿತ್ರ ನೋಡಲು ಇಂಬು ಕೊಟ್ಟಿದ್ದು  ಕಷ್ಟದಿಂದ ಬಂದವ ಬೆಳೆಯಲಿ ಎಂದು ಹುಟ್ಟಿಸಿಕೊಂಡ ಆದರ್ಶವೇ ಅಥವಾ ಅಭಿಮಾನವೇ ಅನ್ನೋದಿನ್ನೂ ಅರ್ಥವಾಗಿಲ್ಲ. ಆದರೆ ಅದೆಂದೂ ಹುಚ್ಚು ಅಭಿಮಾನ ಆಗಿರಲಿಲ್ಲ. ಆದರೂ ಬಿಡುಗಡೆಯಾಗುತ್ತಿದ್ದ ದರ್ಶನ್ ನ ಎಲ್ಲ ಚಿತ್ರಗಳೂ ನವರಂಗ ಥೇಟರ್ ಹಾಗೂ ವೀರೇಶ್ ಥೇಟರ್ ನಲ್ಲಿ ನೋಡುತ್ತಿದ್ದೆ. ಅಷ್ಟ್ಯಾಕೆ ಆತನ ಹಳೆ ಪಿಕ್ಟರ್ ಹಾಕುತ್ತಿದ್ದ ಮೂಡಲ ಪಾಳ್ಯ ಟೆಂಟ್ ನಲ್ಲಿ ಕೂಡ ಸಿನೆಮಾ ನೋಡಿದ್ದೆ.

ಹಾಗೆ ಮುಂದೆ ಬೆಳೆದ  ದರ್ಶನ್ ಬಗ್ಗೆ  ಋಣಾತ್ಮಕ ಸುದ್ದಿಗಳೂ ಕೇಳಬರತೊಡಗಿದವು. ಹೆಂಡ್ತಿಗೆ ಹೊಡೆಯೋದು , ಕುಡಿಯೋದು , ಬಯ್ಯೋದು . ಹಾಗೆಯೇ ಬುದ್ದಿ ಬಲಿತಂತೆ ಅಭಿಮಾನಿ ಮನಸ್ಥಿತಿ ಬದಲಾಗುತ್ತ ಬಂದಿತು. ದರ್ಶನ್ ಸಿನಿಮಾಗಳು ಮಾತ್ರವಲ್ಲ, ಕನ್ನಡ ಸಿನಿಮಾಗಳನ್ನೇ ನೋಡೋದು ಹೆಚ್ಚು ಕಮ್ಮಿ ಬಿಟ್ಟ ಹಾಗಾಯ್ತು. ಇದಾಗಿ ದಶಕಗಳ ಬಳಿಕ ಹೋದವರ್ಷ  ಒಮ್ಮೆ ಭಾರತ ಪ್ರವಾಸದಲ್ಲಿದ್ದಾಗ ಹುಬ್ಬಳ್ಳಿಯ ಓಯಸಿಸ್ ಮಾಲ್ಲ್ ನಲ್ಲಿ ಕಾಫಿ ಕುಡಿದು ಹೊರಡುವಾಗ ಭಾರಿ ಸಂಖ್ಯೆಯಲ್ಲಿ ಜನಸಾಗರ. ದರ್ಶನ್ ತನ್ನ ಚಿತ್ರ ಪ್ರಚಾರಕ್ಕೆ ಬಂದಿದ್ದ. ಎಕ್ಸಿಟ್ ನಲ್ಲಿದ್ದೋರಿಗೆ ನಿಮ್ ದರ್ಶನ್ ನ ನೋಡ್ಲಿಕ್ಕೆ ಕೇಳಲಿಕ್ಕೆ ಅಭಿಮಾನಿಗಳು  ಬಂದಿದ್ದೀರಿ ಎಲ್ಲ  ಸರಿ.. atleast ನಮಗೆ ಮಾಲ್ ಹೊರಗಡೆ ಹೋಗೋರಿಗಾದ್ರೂ  ಜಾಗ ಬಿಡ್ರೋ  ಎನ್ನುತ್ತಾ ಅವರನ್ನು  ಸರಿಸುತ್ತಾ ಎಕ್ಸಿಟ್ ಆಗಿದ್ದೆ.

ಒಂದು ಸಾಮುದಾಯಿಕವಾಗಿ  ಅನಪೇಕ್ಷ ಪರಿಣಾಮಗಳು ಸಮಾಜದಲ್ಲಿ ದೇಶದಲ್ಲಿ ಆಗಾಗ್ಗೆ ಕಾಣುತ್ತವೆಯಾದರೂ ಅದು ಮೂಲತಃ ವಯಕ್ತಿಕ ನೆಲೆಯಲ್ಲಿ ಮನೋಮಯ ಕೋಶದಲ್ಲಿ ಮೂಲೋತ್ಪತ್ತಿಯಾಗಿರುತ್ತದೆ. ಒಂದು ಸರಕಾರ, ಒಂದು ಸಂಸ್ಥೆ ಅಥವಾ ಸಾರ್ವಜನಿಕ ವರ್ತನೆಗಳು ಯಾವುದೋ  ಒಂದು ಮನಸ್ಸು ಮೂಲಭೂತವಾಗಿ ಹುಟ್ಟಿಸುವ ಆಲೋಚನೆಗಳ ಅಲೆಗಳು ಕಾರಣವಾಗಿರುತ್ತದೆ.

ಮೊನ್ನೆ ದರ್ಶನ್ ಎನ್ನುವ ನಟ ಮಾಡಿದ ಅವಾಂತರ ನೋಡಿ. ಅದು ಹಾಗೆ ಅಚಾನಕ್ ಆಗಿ ಆದಂತದ್ದಲ್ಲ. ಆತನ ಪೂರ್ತಿ ಜೀವನ ವನ್ನು ಅವಲೋಕಿಸಿದರೆ ಪ್ರತಿ ವರ್ತನೆ ಆಲೋಚನಾ ಲಹರಿಗಳಲ್ಲಿ ಮೂಲಭೂತವಾಗಿ ಇಂಥದ್ದೇ ಧೋರಣೆ ಸಾಮಾನ್ಯವಾಗಿ ಕಂಡು ಬರುತ್ತದೆ. ಇನ್ನೂ ಅನೇಕ ಪತ್ರಿಕಾ ಗೋಷ್ಠಿಯಲ್ಲಿ , ಸಮಾರಂಭಗಳಲ್ಲಿ ಆತನ ದೇಹ ಭಾಷೆ body language ಗಮನಿಸಿದರೆ ಸಾಕು. ಇಂತಹ ಮನಸ್ಥಿತಿ ಒಂದು ಘಟನೆಗೆಗಾಗಿ ಜ್ವಾಲಾಮುಖಿಯಾಗಿ ತಣ್ಣನೆ ಕಾದು ಕೂತಿರುತ್ತದೆ. ರೇಣುಕಾ ಸ್ವಾಮಿಯಂಥವನ ಕೊಳಕು ಪೋಸ್ಟ್ ಅಂಥದ್ದೊಂದು ಸ್ಫೋಟಕ್ಕೆ ಕಾರಣವಾಗುತ್ತದೆ.

ಹಾಗೆ ಮನಸ್ಥಿತಿಯನ್ನು ಸತತ ಪೋಷಿಸಿಕೊಂಡಿದ್ದಕ್ಕಾಗಿ ಈಗ  ಈತ ಬೆಲೆ ತೆರಲೇಬೇಕು. ಇನ್ನೂ ಗಟ್ಟಿಯಾಗಿ ಬೆಂಬಲ ನೀಡುತ್ತಿರುವ ದರ್ಶನ್ ಅಭಿಮಾನಿಗಳ ಮನಸ್ಥಿತಿ ಕೂಡ ಅಪಾಯಕಾರಿ. ಅದೂ ಒಂದು ರೀತಿಯಲ್ಲಿ ಅಂಧ ಭಕ್ತಿಯ ರೂಪವೇ ಹೌದು. ಯಾವುದೋ ಒಂದು ನೈತಿಕವಾಗಿ ಬಲನೀಡುವ ವಿಷಯಗಳನ್ನು ಮನೋಮಯ ಕೋಶದಲ್ಲಿ ಢಾಳಾಗಿ ತುಂಬಿಕೊಂಡು ವರ್ಷಾನುಗಟ್ಟಲೆ ನಾವು ಎಲ್ಲ ವಿಷಯಗಳಲ್ಲೂ ಅಂಧರಾಗುತ್ತೇವೆ. ನಾವು ಅಂದುಕೊಂಡದ್ದೇ ಸರಿ ಎಂದು ಸಾರಾಸಗಟಾಗಿ ಎಲ್ಲವನ್ನೂ ತಿರಸ್ಕರಿಸುತ್ತೇವೆ. ಜಗತ್ತು ಹಾಗೆಲ್ಲ ಬ್ಲಾಕ್ ಅಂಡ್ ವೈಟ್ ಇರುವುದಿಲ್ಲ ಎನ್ನುವುದನ್ನು ಸುತಾರಾಂ ಒಪ್ಪದೇ ನಮ್ಮೊಳಗೇ ನಾವೇ one sided ಆಗಿ ಬಿಡುತ್ತೇವೆ. ಅದರಲ್ಲೂ ಭಾರತೀಯರು ಭಾವುಕರು, ಶರಣಾಗುವುದು , ಬೌದ್ಧಿಕವಾಗಿ ವಿಶ್ಲೇಷಿಸದೆ ಅನಿರ್ಬಂಧ ಭಕ್ತಿ ತೋರಿಸುವುದು ಇವೆಲ್ಲ ಸ್ವಾಭಾವಿಕವಾಗಿ ಬಂದು ಬಿಡುತ್ತದೆ.

ಒಂದು ವಿಷಯದಲ್ಲಿ ಒಂದು ಧೋರಣೆ ನಂಬಿಕೆಗಳು ತಪ್ಪಲ್ಲ. ಆದರೆ ಎಲ್ಲದಕ್ಕೂ ಎಲ್ಲ ಕಾಲದಲ್ಲೂ ಫ್ರೀ ಪಾಸ್ ಕೊಡಬೇಕಿಲ್ಲ. ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಒಂದು ವ್ಯಕ್ತಿ , ಪಕ್ಷಕ್ಕೆ ಅನುಗುಣವಾಗಿದ್ದರೂ  ನಮ್ಮದೇ  ಬೌದ್ಧಿಕ ಸ್ವಂತಿಕೆ ಪೋಷಿಸಿಕೊಳ್ಳಬೇಕು. ಯಾವುದೇ ಕಾರಣಕ್ಕಾಗೋ ಬಹು ಕಾಲದಿಂದ ಬೆಳೆಸಿಕೊಂಡ ಇಲ್ಲವೇ ಸಾಂಘಿಕವಾಗಿ ಹೇರಲ್ಪಟ್ಟ ನಂಬುಗೆಗಳನ್ನು ತೀವ್ರವಾಗಿ ಪ್ರಶ್ನಿಸಿಕೊಂಡು ಕೋರ್ಸ್ ಕರೆಕ್ಷನ್ ಮಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮೊಳಗೇ ಒಂದು ಸದಾ ಜಾಗೃತ ವಿರೋಧ ಪಕ್ಷ ವನ್ನು ಮಂಚೂಣಿಯಲ್ಲಿಟ್ಟು other side of the stories ಅವಗಾಹನೆಯಲ್ಲಿಟ್ಟುಕೊಂಡೇ ಬದುಕಬೇಕು. ಅಥವಾ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಎಲ್ಲದರಿಂದಲೂ ತೀವ್ರ ಪ್ರಭಾವಿತರಾಗದೆ  ಬೌದ್ಧಿಕವಾಗಿ ಸರ್ವ ಸ್ವತಂತ್ರರಾಗುವುದು ಬಹುಮುಖ್ಯ.

ವಿಜಯ್ ದಾರಿಹೋಕ

More articles

Latest article