ಕ್ರೀಡೆಯೆಂದರೆ ಯುದ್ಧ, ಎದುರಾಳಿಗಳೆಂದರೆ ಶತ್ರುಗಳು, ಗೆಲುವೆಂದರೆ ದಿಗ್ವಿಜಯ ಎಂಬ ಮನಸ್ಥಿತಿಗಳು ಕ್ರೀಡಾಸ್ಫೂರ್ತಿಯನ್ನು ಧ್ವಂಸಗೈದು ವಿಜೃಂಭಿಸುತ್ತಿರುವ ವಿಷಕಾರಿ ವಾತಾವರಣದಲ್ಲಿ ಶಮಿಗೆ ಹೆಗಲು ಕೊಟ್ಟ ಮತ್ತು ನಸೀಮ್ ಶಾನ ಲೇಸ್ ಕಟ್ಟಿದ ಕೊಹ್ಲಿಯಂತವರು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆತನ ಸೆಂಚುರಿಯ ಸುತ್ತ ಷಡ್ಯಂತ್ರ ನಡೆಯಿತೇ ಎಂಬ ಸಲ್ಲದ ಅನುಮಾನ ಮೂಡಲು ಇದೇ ಕಾರಣ – ಕಲಿವೀರಯ್ಯ ಸಣ್ಣಗೌಡರ್, ರಾಜಕೀಯ ವಿಶ್ಲೇಷಕರು
ಮೊನ್ನೆ ನಡೆದ ಇಂಡಿಯಾ-ಪಾಕಿಸ್ತಾನ್ ಮ್ಯಾಚ್‌ನ ವಿನ್ನಿಂಗ್ ಶಾಟ್‌ನಲ್ಲಿ ವಿರಾಟ್ ಕೊಹ್ಲಿ ಸ್ಕ್ರೀಜ್ ಬಿಟ್ಟು ಒಂದೆಜ್ಜೆ ಮುನ್ನುಗ್ಗಿ ಚೆಂಡನ್ನು ಬೌಂಡರಿಯ ಗಡಿ ದಾಟಿಸದೆ ಹೋಗಿದ್ದರೆ, ಭಾರತವೇನೊ ಪಂದ್ಯ ಗೆಲ್ಲುತ್ತಿತ್ತು; ಆದರೆ ಕೊಹ್ಲಿ ಶತಕ ವಂಚಿತನಾಗುತ್ತಿದ್ದ. All 50’s should convert into 100 ಎಂಬ ಯಾವ ನಿಯಮವೂ ಕ್ರಿಕೆಟ್‌ನಲ್ಲಿಲ್ಲ. ಹಾಗೆ ನೋಡಿದರೆ nervous ninetiesಗೆ ಬಂದು ಔಟ್ ಆದ ಆಟಗಾರರ ದೊಡ್ಡ ಪಟ್ಟಿಯೇ ಇದೆ. ಅದರಲ್ಲೂ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸೆಂಚುರಿ ಆಫ್ ಸೆಂಚುರೀಸ್ ಸರದಾರ ಸಚಿನ್ ತೆಂಡೂಲ್ಕರ್ ಒಂದು ಕಾಲಕ್ಕೆ ನರ್ವಸ್ ನೈಂಟೀಸ್‌ನ ದೊಡ್ಡ ನಿದರ್ಶನವಾಗಿದ್ದರು. ಅವರ ಆ ಶತಕವಂಚಿತ ತೊಂಬತ್ತುಗಳು ನೂರರ ಗಡಿ ದಾಟಿದ್ದರೆ, ಅವರ ದಾಖಲೆಗೆ ಮತ್ತಷ್ಟು ಶತಕಗಳು ಸೇರಿರುತ್ತಿದ್ದವೇನೊ. ಹೀಗೆ ಕೊಹ್ಲಿ ಕೂಡಾ ಮೊನ್ನೆ ಆಟ ಬೇಗ ಮುಗಿದುಹೋದ ಕಾರಣಕ್ಕೋ, ಅಥವಾ ಆತನೇ ದುರಾದೃಷ್ಟವಶಾತ್ ಔಟ್ ಆದದ್ದರ ಕಾರಣಕ್ಕೋ ಶತಕ ವಂಚಿತನಾಗಿದ್ದರೆ ವೈಯಕ್ತಿಕವಾಗಿ ಮರುಗಿ ಸುಮ್ಮನಾಗಬಹುದಿತ್ತು. ಆದರೆ, ಪಾಕಿಸ್ತಾನದ ವಿರುದ್ಧದ ಆ ಪಂದ್ಯದಲ್ಲಿ ಒಂದೊಮ್ಮೆ ಕೊಹ್ಲಿ ಶತಕ ವಂಚಿತನಾಗಿದ್ದರೆ, ಈ ಯಾವ ಕಾರಣಗಳಿಂದಲೂ ಅಲ್ಲ; ಆತನ ಶತಕ ತಪ್ಪಿಸಲೇಬೇಕು ಎನ್ನುವ ಷಡ್ಯಂತ್ರದ ಕಾರಣದಿಂದ ಎಂಬ ಗುಮಾನಿ ಅವತ್ತಿನ ಮ್ಯಾಚ್ ನೋಡಿದ ಬಹಳಷ್ಟು ಜನರನ್ನು ಕಾಡುತ್ತಿದೆ. ಅದಕ್ಕೆ ಕಾರಣವೂ ಇದೆ.
ಕ್ರೀಡೆಯಲ್ಲಿ ಒಬ್ಬ ಆಟಗಾರನ ರೆಕಾರ್ಡುಗಳಿಗಿಂತ ಕ್ರೀಡೆಯೇ ಪ್ರಧಾನವಾಗಬೇಕು; ತಂಡದ ಗೆಲುವು ಮುಖ್ಯವಾಗಬೇಕು ಅಂತ ಕೆಲವರು ವಿಷಯಾಂತರಿಸಲು ಯತ್ನಿಸಬಹುದು. ನಿಜ! ಆದರೆ, ಕ್ರೀಡೆಯು ಕ್ರೀಡಾಸ್ಫೂರ್ತಿಯನ್ನು ಉಳಿಸಿಕೊಂಡ ಶುದ್ಧ ಕ್ರೀಡೆಯಾಗಿದ್ದಾಗ ಈ ಮಾತನ್ನು ನಾವು ಒಪ್ಪಬಹುದು. ಆದರೆ, ಕ್ರಿಕೆಟ್ ಆಟದ ಎಬಿಸಿಡಿ ತಿಳಿಯದ ವ್ಯಕ್ತಿ ತನ್ನ ತಂದೆಯ ಅಧಿಕಾರ ವರ್ಚಸ್ಸಿನ ಕಾರಣಕ್ಕೆ ಐಸಿಸಿ ಮುಖ್ಯಸ್ಥನಾಗುವಷ್ಟು, ಹಿರಿಯ ಸಾಧಕ ಆಟಗಾರರನ್ನು ನಗಣ್ಯವಾಗಿ ನಡೆಸಿಕೊಳ್ಳುವಷ್ಟು ಕ್ರಿಕೆಟ್ ಅಂಗಣ ರಾಜಕೀಯಗೊಂಡಿರುವಾಗ ಕ್ರೀಡಾಸ್ಫೂರ್ತಿಯ ಇಂತಹ ಮಾತುಗಳನ್ನು ಧಿಕ್ಕರಿಸಿ ನಾವು ಅವತ್ತು ವಿರಾಟ್‌ನ ಶತಕ ತಪ್ಪಿಸಲು ನಡೆದಿರಬಹುದಾದ ಹುನ್ನಾರವನ್ನು ಚರ್ಚಿಸಬೇಕಿದೆ.
ನಿಧಾನಗತಿಯ ಪಿಚ್‌ನಲ್ಲಿ ಒಂದು ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡುವಾಗ ಒಬ್ಬ ಮ್ಯಾಚ್ ಫಿನಿಶರ್ ಯಾವ ರೀತಿಯ ಆಟವಾಡಬೇಕೊ ಅಂತಹದ್ದೇ ಆಟಕ್ಕೆ ಕೊಹ್ಲಿ ಅವತ್ತು ಅಂಟಿಕೊಂಡಿದ್ದ. ಆತನ ರೆಗ್ಯುಲರ್ ಸ್ಟ್ರೈಕ್ ರೇಟ್‌ಗೆ ಹೋಲಿಕೆ ಮಾಡಿದರೆ, ತುಸು ಮಂದವೇಗದಲ್ಲಿ ರನ್ ಕಲೆಹಾಕಿದಂತಿದ್ದರೂ ಭಾರತ ತಂಡ ಇದ್ದ ಪರಿಸ್ಥಿತಿಯಲ್ಲಿ ಕೊಹ್ಲಿ ಹಾಗೆಯೆ ಆಡಬೇಕಿತ್ತು. ಅಲ್ಲದೇ, ತನ್ನ ಫಾರ್ಮ್‌ಗೆ ಮರಳುವ ಸವಾಲೂ ಆತನ ಮುಂದಿತ್ತು. ಒಬ್ಬ ಅನುಭವಿ ಆಟಗಾರನಾಗಿ ಅದೆಲ್ಲವನ್ನು ಮೆಟ್ಟಿ ನಿಂತ ವಿರಾಟ್ ಎಂಬತ್ತು ರನ್‌ಗಳ ಗಡಿ ದಾಟುತ್ತಿದ್ದಂತೆಯೆ ಭಾರತ ಮ್ಯಾಚ್ ಗೆಲ್ಲುವ ಬಗ್ಗೆ ಮತ್ತು ಕೊಹ್ಲಿ ಶತಕ ಗಳಿಸುವ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ.
ಆದರೆ ಆಗ ಬಂದ ಹಾರ್ದಿಕ್ ಪಾಂಡ್ಯ ಅಗ್ರೆಸಿವ್ ಬ್ಯಾಟಿಂಗ್‌ಗೆ ಮುಂದಾಗಿ, ಆಟವನ್ನು ಬೇಗ ಮುಗಿಸುವ ಸುಳಿವು ಕೊಟ್ಟ. ಈಗಾಗಲೇ ಹೇಳಿದಂತೆ, ಇವತ್ತು ಭಾರತೀಯ ಕ್ರಿಕೆಟ್ ಬೋರ್ಡ್‌ನ ವಾತಾವರಣ ಹಿಂದಿನಂತೆ ಶುದ್ಧ ಕ್ರೀಡಾಸ್ಫೂರ್ತಿ ಉಳಿಸಿಕೊಂಡಿದ್ದಿದ್ದರೆ ಹಾರ್ದಿಕ್‌ನ ಆ ನಡೆಯಲ್ಲೂ ನಾವು ದೋಷ ಹುಡುಕಲು ಸಾಧ್ಯವಿರಲಿಲ್ಲ. ಆದರೆ ಜಯ್ ಶಾ ಎಂಬ ನಾನ್-ಕ್ರಿಕೆಟರ್ ಕ್ರಿಕೆಟ್ ಜಗತ್ತನ್ನು ನಿಯಂತ್ರಿಸುತ್ತಿರುವ ಕಾಲ ಇದು. ಹಾಗಾಗಿ ಹಾರ್ದಿಕ್ ಪಾಂಡ್ಯ, ಅನಗತ್ಯವಾಗಿ ಆಕ್ರಮಣಕಾರಿ ಆಟಕ್ಕಿಳಿದಿದ್ದು ನ್ಯಾಚುರಲ್ ಎನಿಸುವುದಿಲ್ಲ. ಕೊಹ್ಲಿಯನ್ನು ಶತಕವಂಚಿನನ್ನಾಗಿಸುವ ಜಯ್ ಶಾ ಮತ್ತು ಗೌತಮ್ ಗಂಭೀರ್ ಜೋಡಿಯ ಸಂಚಿನಂತಿತ್ತು!
ಅವರ್‍ಯಾಕೆ ಕೊಹ್ಲಿ ವಿರುದ್ಧ ಇಂತಹ ಕ್ಷುಲ್ಲಕ ಸಂಚು ನಡೆಸುತ್ತಾರೆ?
ಈ ಪ್ರಶ್ನೆಗೆ ಆ ಪಂದ್ಯದಲ್ಲೇ ಉತ್ತರವಿತ್ತು. ಪಾಕಿಸ್ತಾನ ತಂಡವಿನ್ನೂ ಬ್ಯಾಟ್ ಮಾಡುತ್ತಿದ್ದ ಸಮಯ. ಪಾಕಿಸ್ತಾನದ ಬ್ಯಾಟರ್ ನಸೀಮ್ ಶಾ, ರನ್ ಓಡುವ ಧಾವಂತದಲ್ಲಿ ಆತನ ಶೂಗಳ ಲೇಸ್‌ಗಳು ಬಿಚ್ಚಿಕೊಳ್ತವೆ. ಪ್ಯಾಡ್‌ನ ಕಾರಣಕ್ಕೆ, ಆತ ಅದನ್ನು ಕಟ್ಟಿಕೊಳ್ಳಲು ಪರದಾಡುತ್ತಿರುವಾಗ ಯಾವ ಮುಜುಗರವೂ ಇಲ್ಲದೆ ಅವನ ಬಳಿಸಾರುವ ಕೊಹ್ಲಿ, ಆತನ ಪಾದದ ಬಳಿ ಕೂತು ಲೇಸ್ ಬಿಗಿದು, ಅಲ್ಲಿಂದ ನಿರ್ಗಮಿಸುತ್ತಾನೆ. ಎಂತಹ rivelry ತಂಡಗಳಾದರೂ, ಆಟದ ಕಾವು ಎಷ್ಟೇ heat-up ಆಗಿದ್ದರೂ ಆಟಗಾರರ ನಡುವೆ ಇಂತಹ ಮಾನವೀಯ ಬೆಸುಗೆ ಇರಲೇಬೇಕು. ಇದನ್ನೇ ನಾವು ಕ್ರೀಡಾಸ್ಫೂರ್ತಿ ಎನ್ನುತ್ತೇವೆ. ಮೇಲ್ನೋಟಕ್ಕಿದು ಸರಳ ವಿದ್ಯಮಾನದಂತೆ ಕಾಣಬಹುದು. ಆದರೆ ಒಬ್ಬ ವ್ಯಕ್ತಿಯಾಗಿ ನಮ್ಮ ಎದೆಯೊಳಗೆ ಮನುಷ್ಯ ದ್ವೇಷ, ಪೂರ್ವಗ್ರಹಪೀಡಿತ ಸಣ್ಣತನಗಳು ಇಲ್ಲದೆ ಇದ್ದಾಗ ಮಾತ್ರ ಇದು ಸಾಧ್ಯ. ಮೈದಾನದಲ್ಲಿ ಎದುರಾಳಿ ಆಟಗಾರರ ಜೊತೆ ಕೊಹ್ಲಿ ವಾಗ್ವಾದಕ್ಕಿಳಿದ ಹಲವು aggressive ನಿದರ್ಶನಗಳನ್ನು ನಾವು ಕಂಡಿದ್ದೇವೆ. ಒಬ್ಬ ಆಟಗಾರನಾಗಿ ಅಂತಹ ಅಗ್ರೆಸಿವ್ ಒಮ್ಮೊಮ್ಮೆ ಬೇಕಾಗುತ್ತದೆ. ಆದರೆ ಒಬ್ಬ ಮನುಷ್ಯನಾಗಿ ನಮ್ಮ ಮನಸ್ಸು ಪೂರ್ವಗ್ರಹಪೀಡಿತ ದ್ವೇಷಾಸೂಯೆಗಳಿಂದ ಮುಕ್ತವಾಗಿದ್ದಾಗ ಅಂತಹ ಅಗ್ರೆಸಿವ್‌ನೆಸ್‌ನ ಮಿತಿ ಎಷ್ಟು ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳುತ್ತೇವೆ. ಕೊಹ್ಲಿ ಅಂತಹ ಆಟಗಾರ. ಆತನಿಗೆ ಕ್ರೀಡಾಪಟುವಾಗಿ ಎಷ್ಟು ಆಗ್ರೆಸಿವ್ ಆಗಿರಬೇಕು ಅನ್ನೋದೂ ಗೊತ್ತು; ಒಬ್ಬ ಮನುಷ್ಯನಾಗಿ ಮನುಷ್ಯದ್ವೇಷದಿಂದ ಹೇಗೆ ದೂರವಿರಬೇಕು ಅನ್ನೋದೂ ಗೊತ್ತು. ಈ ಗ್ರಹಿಕೆಯಲ್ಲಿ ಕ್ರೀಡೆಯನ್ನೂ ಮೀರಿದ Socio-political influence ನಮಗೆ ಗೋಚರಿಸುತ್ತೆ.
ಪಾಕ್ ಆಟಗಾರನ ಶೂ ಲೇಸ್ ಕಟ್ಟಿದ ಪ್ರಸಂಗ ಮಾತ್ರವಲ್ಲ, ಈ ಹಿಂದೆ ಹಲವಾರು ಬಾರಿ ತನ್ನ ತಂಡದ ಮೇಲೆ ವಿಚ್ಛಿದ್ರಕಾರಿ ಮನುಷ್ಯದ್ವೇಷಿ ದಾಳಿಗಳು ನಡೆದಾಗಲು ಕೊಹ್ಲಿ ಹೀಗೆ ರಿಯಾಕ್ಟ್ ಮಾಡಿದ ಉದಾಹರಣೆಗಳುಂಟು. 2021ರ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇದೇ ಪಾಕಿಸ್ತಾನದ ವಿರುದ್ಧ ಭಾರತ ಸೋತ ಸಂದರ್ಭ. ಮೊಹಮ್ಮದ್ ಶಮಿ, ತಮ್ಮ ಓವರ್‍ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಅದನ್ನೇ ನೆಪ ಮಾಡಿಕೊಂಡ ಒಂದಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ, ಶಮಿಯ ಧರ್ಮವನ್ನು ಎಳೆದು ತಂದು ಉದ್ದೇಶ ಪೂರ್ವಕವಾಗಿ ದಾಳಿ ಮಾಡಿದ್ದರು. ಈ ರೀತಿ ಧಾರ್ಮಿಕ ದಾಳಿ ನಡೆಸುವವರ ರಾಜಕೀಯ ಹಿನ್ನೆಲೆ ಮತ್ತು ಉದ್ದೇಶ ಏನು ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಒಂದು ಕೊಲೆಯಲ್ಲೂ, ಕೊಂದವನ ಮತ್ತು ಕೊಲೆಯಾದವನ ಧರ್ಮಗಳನ್ನು ಹುಡುಕಿ, ಅದರ ಆಧಾರದ ಮೇಲೆ ಬಣ್ಣಕಟ್ಟಿ ತಮ್ಮ ರಾಜಕೀಯ ಸ್ವಾರ್ಥಗಳನ್ನು ತೀರಿಸಿಕೊಳ್ಳುವ ನೀಚತನವನ್ನು ನಾವು ಕಾಣುತ್ತಿದ್ದೇವೆ. ಅವತ್ತು ಶಮಿ ಮೇಲೆ ದಾಳಿ ಮಾಡಿದವರ ಉದ್ದೇಶವೂ ಮುಸ್ಲಿಂ ದ್ವೇಷವನ್ನು ಪ್ರಚುರಪಡಿಸಿ, ಆ ಮೂಲಕ ತಮ್ಮ polarizing politics ಅನ್ನು ಗಟ್ಟಿ ಮಾಡಿಕೊಳ್ಳುವುದಾಗಿತ್ತು. ಈ ತರದವರು ಇಂದು ಅಧಿಕಾರದ ಚುಕ್ಕಾಣಿ ಹಿಡಿದು ಕೂತಿರುವುದರಿಂದ ಅವರ ಹುನ್ನಾರಗಳ ವಿರುದ್ಧ ಧ್ವನಿ ಬಿಚ್ಚಲು ಜನ ಹಿಂದೆಮುಂದೆ ನೋಡುವಂತಾಗಿದೆ. ಆದರೆ ಅವತ್ತು, ಕೊಹ್ಲಿ ಮುಲಾಜಿಲ್ಲದೆ ಆ ಹುನ್ನಾರಗಳಿಗೆ ಮುಖಾಮುಖಿಯಾಗಿದ್ದ. ತನ್ನ ಸಹ ಆಟಗಾರ ಶಮಿಗೆ ಬೆಂಬಲವಾಗಿ ನಿಂತ. “To me attacking someone over their religion is the most, I would say, pathetic thing that a human being can do” (ಒಬ್ಬ ವ್ಯಕ್ತಿಯ ಮೇಲೆ ಆತನ ಧರ್ಮವನ್ನು ಆಧರಿಸಿ ದಾಳಿ ಮಾಡುವುದಿದೆಯಲ್ಲ, ಅದಕ್ಕಿಂತ ಶೋಚನೀಯ ಸಂಗತಿ ಮತ್ತೊಂದಿಲ್ಲ; ಮನುಷ್ಯತ್ವವಿರುವ ಯಾವ ಒಬ್ಬ ಮನುಷ್ಯನಿಗೂ ಅದು ತಕ್ಕುದಲ್ಲ) ಎಂದು ಕೊಹ್ಲಿ ಕೊಟ್ಟ ಉತ್ತರ ಕೇವಲ ಶಮಿಯ ಟ್ರೋಲರ್‍ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ; ಅಂತಹ ಮನಸ್ಥಿತಿಗಳ ಹಿಂದಿರುವ political regime ಅನ್ನು ಕೂಡಾ ತಿವಿದಿದ್ದವು. ಅದರ ಪರಿಣಾಮವನ್ನೂ ಕೊಹ್ಲಿ ಎದುರಿಸಬೇಕಾಯ್ತು. ಬಲಪಂಥೀಯ ಟ್ರೋಲರ್‍ಗಳು, ಆಗಷ್ಟೇ ಹುಟ್ಟಿದ ಒಂಬತ್ತು ತಿಂಗಳ ಕೊಹ್ಲಿ ಮಗಳನ್ನು ರೇಪ್ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿ ಆತನನ್ನು ಇನ್ನಿಲ್ಲದಂತೆ ಕಾಡಿದರು. ಕೊಹ್ಲಿಯಂತಹ ಒಬ್ಬ ಸ್ಟಾರ್ ಆಟಗಾರ ಮತ್ತು ವಿಶ್ವದ ನಂಬರ್ 1 ಕ್ರಿಕೆಟ್ ಪಟುವಿಗೆ ಹೀಗೆ ಬೆದರಿಕೆ ಹಾಕಿದವರ ವಿರುದ್ಧ ನಮ್ಮ ಸರ್ಕಾರಗಳು ಕ್ರಮ ತೆಗೆದುಕೊಳ್ಳಲಿಲ್ಲ ಎನ್ನುವುದೇ, ಆ ಮನಸ್ಥಿತಿಗಳಿಗೆ ಯಾರು ಬೆಂಬಲವಾಗಿ ನಿಂತಿದ್ದಾರೆ ಅನ್ನೋದಕ್ಕೆ ಸಾಕ್ಷಿ.
ಜಯ್ ಶಾ ಮತ್ತು ಗೌತಮ್ ಗಂಭೀರ್ ತರಹದ ತೀಕ್ಷ್ಣ ಬಲಪಂಥೀಯ ರಾಜಕೀಯ ಹಿನ್ನೆಲೆಯವರಿಗೆ ಕೊಹ್ಲಿ ತರಹದ ಆಟಗಾರರ ಬಗ್ಗೆ ಯಾಕೆ ಅಸಹನೆ ಬೆಳೆಯುತ್ತದೆ ಎಂಬುದು ನಿಮಗೆ ಅರ್ಥವಾಗಿರಬಹುದು. ಜಯ್ ಶಾ, ಕೇಂದ್ರ ಗೃಹಮಂತ್ರಿ ಅಮಿತ್ ಅವರ ಮಗ. ಅಮಿತ್ ಶಾ, ಬಲಪಂಥೀಯ ಬಿಜೆಪಿ ವ್ಯಕ್ತಿ ಎನ್ನುವುದಕ್ಕಿಂತ ಅವರ ಗುಜರಾತ್ ಹಿನ್ನೆಲೆಗಳನ್ನು ಕೆದಕಿ ನೋಡಿದಾಗ, ಅವರೊಳಗಿನ ದ್ವೇಷಕಾರಿ ರಾಜಕೀಯ ಮನಸ್ಥಿತಿ ಎಂತದ್ದು ಅನ್ನೋದು ಅರ್ಥವಾಗುತ್ತದೆ. ಅವರ ಮಗನಾಗಿ ಜಯ್ ಶಾ, ತಂದೆಯ ಸೌಲತ್ತುಗಳ ನಡುವೆ ಟಿಸಿಲೊಡೆಯಲು ಯತ್ನಿಸಿದವರೇ ಹೊರತು, ತಂದೆಯ ಮಿತಿಗಳಿಂದ ಕಳಚಿಕೊಂಡು ಸ್ವತಂತ್ರವಾಗಿ ರೂಪುಗೊಳ್ಳಲು ಯತ್ನಿಸಿದವರಲ್ಲ. ಹಾಗಾಗಿ ತಂದೆಯ ಪೊಲಿಟಿಕಲ್ ಮತ್ತು ಪರ್ಸನಾಲಿಟಿ ಟ್ರೇಟ್‌ಗಳನ್ನು ಅವರಲ್ಲೂ ಕಾಣಬಹುದು. ಇನ್ನು ಗೌತಮ್ ಗಂಭೀರ್ ಬಿಜೆಪಿಯ ಎಂಪಿಯಾಗಿದ್ದವರು. ಅದಕ್ಕಿಂತ ಮುಖ್ಯವಾಗಿ, ಆಟಗಾರನಾಗಿ ಮೈದಾನದಲ್ಲಿ ಕೊಹ್ಲಿಯಷ್ಟೇ ಅಗ್ರೆಸಿವ್ ಆಗಿ ಎದುರಾಳಿ ಆಟಗಾರರ ಜೊತೆ ಚಕಮಕಿ ನಡೆಸಿದ್ದ ಹಿನ್ನೆಲೆಯವರು. ಆದರೆ, ವ್ಯಕ್ತಿಯಾಗಿ ಕೊಹ್ಲಿಯಂತೆ ಆ ಅಗ್ರೆಸಿವ್‌ನೆಸ್‌ನ ಮಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತುಹೋದವ. ಸ್ವತಃ ಕೊಹ್ಲಿ ಜೊತೆಗಿನ ಆತನ ಕಾದಾಟಕ್ಕೆ ಕ್ರಿಕೆಟ್ ಲೋಕದಲ್ಲಿ ರಂಜನೀಯ ಮೀಮ್ಸ್‌ಗಳಿವೆ. ಕೋಚ್ ಹುದ್ದೆಗೆ ಆಯ್ಕೆಯಾಗಬೇಕೆಂದರೆ, ಆಟಗಾರನಾಗಿ ಆತನ performanceಗಿಂತ ಹೆಚ್ಚಾಗಿ, ತಂಡದಲ್ಲಿ ಕೋ-ಆರ್ಡಿನೇಷನ್ ಮತ್ತು sportivityಯನ್ನು ಕಾಯ್ದುಕೊಳ್ಳುವ ಅನುಭವ, ಹಿರಿತನ, ತಾಳ್ಮೆ ಬೇಕಾಗುತ್ತದೆ. ಆದರೆ ಸಹ ಆಟಗಾರರ ಜೊತೆ ಸ್ವತಃ ಸೌಹಾರ್ದಕಾರಿ ಸಂಬಂಧಗಳನ್ನು ಕಾಯ್ದುಕೊಳ್ಳದ, ಅಷ್ಟೇನು ಛಾಪುಗಾರ ಆಟಗಾರನೂ ಅಲ್ಲದ, ತಂಡದೊಳಗೆ ಗೌರವಕ್ಕೆ ಪಾತ್ರವಾಗುವಂತಹ ಹಿರಿತನವೂ ಇಲ್ಲದ ಗೌತಮ್‌ನನ್ನು ಕೋಚ್ ಆಗಿ ಆಯ್ಕೆ ಮಾಡಿದ್ದೇ, ಆತನ ಪೊಲಿಟಿಕಲ್ ಓರಿಯೆಂಟೇಷನ್ ಕಾರಣಕ್ಕೆ.
ಭಾರತದ ಕ್ರಿಕೆಟ್ ಮೇಲೆ ಇಂತವರ ಬಿಗಿಹಿಡಿತ ಹೆಚ್ಚಾದ ನಂತರವೇ, ಕೊಹ್ಲಿಯನ್ನು ಕ್ಯಾಪ್ಟೆನ್ಸಿಯಿಂದ ತೆಗೆಯಲಾಯ್ತು; ಈ ಒತ್ತಡಗಳಿಂದ ಆತ ತನ್ನ ಫಾರ್ಮ್‌ನಲ್ಲಿ ಲಯ ಕಳೆದುಕೊಳ್ಳಬೇಕಾಯ್ತು. ಇಂತಹ ಬೆಳವಣಿಗೆಗಳಿಗೆ ಕೊಹ್ಲಿ ತನ್ನ ಮಿತಿಯಲ್ಲೇ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದ. ಹಾಗಾಗಿ ಕೊಹ್ಲಿಯ ಬಗ್ಗೆ ಅವರಿಗೆ ಅಸಹನೆ. ಜಯ್ ಶಾ ಚುಕ್ಕಾಣಿ ಹಿಡಿದ ಮೇಲೆ, ಗಂಭೀರ್ ಕೋಚ್ ಸ್ಥಾನ ವಹಿಸಿಕೊಂಡ ಮೇಲೆ ಟೀಮ್ ಇಂಡಿಯಾ ಪಂದ್ಯಗಳನ್ನು ಗೆಲ್ಲುತ್ತಿರಬಹುದು. ಆದರೆ ನೆನಪಿರಲಿ, ಯಶಸ್ವಿ ತಂಡವನ್ನೋ, ಉದ್ಯಮವನ್ನೋ, ಸಂಘಟನೆಯನ್ನೋ ಕಟ್ಟುವುದೆಂದರೆ ಹೇಗೆ ರಾತ್ರೋರಾತ್ರಿ ನಡೆಯುವ ವಿದ್ಯಮಾನವಲ್ಲವೋ, ಹಾಗೆ ಕಷ್ಟಪಟ್ಟು ಕಟ್ಟಿಬೆಳೆಸಿದ ಆ ಯಶಸ್ವಿ ಪರಂಪರೆ ಮುಗ್ಗರಿಸಿ ಬೀಳುವುದು ಕೂಡಾ ರಾತ್ರೋರಾತ್ರಿ ಘಟಿಸುವಂತದ್ದಲ್ಲ. ತನ್ನ ಹಳೆಯ ಲಯದೊಂದಿಗೇ ಅದು ನಿಧಾನಕ್ಕೆ ಶಿಥಿಲ ಗೊಳ್ಳಲಾರಂಭಿಸುತ್ತದೆ.
ಭಾರತ ಕ್ರಿಕೆಟ್ ಜಗತ್ತು ಈಗ ಅಂತಹ ಸಂದಿಗ್ಧತೆಗೆ ಸಿಲುಕಿದೆ. ಕೊಹ್ಲಿಯ ಸೆಂಚುರಿಯನ್ನು ತಪ್ಪಿಸಲು ನಡೆಸಿದ ತಂತ್ರ ಅದರ ಸಣ್ಣ ರೋಗಲಕ್ಷಣವಾಗಿರಲೂಬಹುದು. ಯಾಕೆಂದರೆ, ಪಾಕಿಸ್ತಾನ ಎನ್ನುವುದು ಈಗ ಕೇವಲ ಒಂದು ನೆರೆರಾಷ್ಟ್ರ ಅಥವಾ ಎದುರಾಳಿ ದೇಶವಾಗಿ ಮಾತ್ರ ಉಳಿದಿಲ್ಲ. ಇಲ್ಲಿನ ಪೊಲಿಟಿಕಲ್ ಪ್ರೊಪೊಗ್ಯಾಂಡ ಆಗಿ ಬದಲಾಗಿದೆ. ಪಾಕಿಸ್ತಾನದ ಹೆಸರಲ್ಲಿ ನೀವಿಲ್ಲಿ ಚುನಾವಣೆಗಳನ್ನು ಗೆದ್ದುಬಿಡಬಹುದಾದ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಐಸಿಸಿ ಟ್ರೋಫಿಯಲ್ಲಿ ಸೋಲಿಸುವುದನ್ನು ಕೂಡಾ ತಮ್ಮ ಕ್ರೆಡಿಟ್ ಆಗಿ ಬಾಚಿಕೊಳ್ಳುವ ಪ್ರಯತ್ನಗಳನ್ನು ನಾವು ಅಂದಾಜಿಸಬಹುದು. ಆ ರೀತಿ ಕ್ರೆಡಿಟ್ ಬಾಚಿಕೊಳ್ಳಬೇಕೆಂದರೆ, ಅವತ್ತು ಕೇವಲ ಪಾಕಿಸ್ತಾನ ಸೋಲಬೇಕಿತ್ತಷ್ಟೆ. ಆದರೆ ಕೊಹ್ಲಿ ಸೆಂಚುರಿಗೆ ಸಮೀಪ ಬಂದು, ಅಂತವರಿಗೆ ಆತಂಕ ಹುಟ್ಟಿಸಿರಬಹುದು. ಯಾಕೆಂದರೆ, ಕೊಹ್ಲಿ ಸೆಂಚುರಿ ಗಳಿಸಿದರೆ ಭಾರತದ ಗೆಲುವಿನ ಜೊತೆಗೆ ಕೊಹ್ಲಿಯೂ ಚರ್ಚೆಯನ್ನು ಆವರಿಸಿಕೊಂಡು ಬಿಡುತ್ತಾನೆ. ಆತನಿಗಿರುವ ಫ್ಯಾನ್ ಫಾಲೋಯಿಂಗ್ ಅಂತದ್ದು. ಈಗ ಆಗುತ್ತಿರೋದು ಅದೇ ಅಲ್ಲವೇ! ಆಗ ಗೆಲುವಿನ ಕ್ರೆಡಿಟ್ಟನ್ನು ತಾವು ಮುಡಿಗೇರಿಸಿಕೊಳ್ಳಲು ಅಡ್ಡಿ ಉಂಟಾಗುತ್ತದೆ ಎಂಬ ಲೆಕ್ಕಾಚಾರವೇ ಅವತ್ತು ಹಾರ್ದಿಕ್ ಪಾಂಡ್ಯ ಬೀಸಾಟಕ್ಕೆ ಇಳಿಯಲು ಕಾರಣವಾಗಿರಬಹುದೇ? ಒಂದುವೇಳೆ, ಇದು ನಿಜವೇ ಆಗಿದ್ದರೆ ಪಾಂಡ್ಯ ಇಲ್ಲಿ ನೆಪವಷ್ಟೆ; ಆತ ಯಾರದೋ ಆದೇಶಗಳನ್ನು ಹೊತ್ತುಬಂದಿದ್ದ ರಾಯಭಾರಿಯಾಗಿ ಕಾಣಿಸುತ್ತಾನೆ!
ಕ್ರೀಡೆಯೆಂದರೆ ಯುದ್ಧ, ಎದುರಾಳಿಗಳೆಂದರೆ ಶತ್ರುಗಳು, ಗೆಲುವೆಂದರೆ ದಿಗ್ವಿಜಯ ಎಂಬ ಮನಸ್ಥಿತಿಗಳು ಕ್ರೀಡಾಸ್ಫೂರ್ತಿಯನ್ನು ಧ್ವಂಸಗೈದು ವಿಜೃಂಭಿಸುತ್ತಿರುವ ವಿಷಕಾರಿ ವಾತಾವರಣದಲ್ಲಿ ಶಮಿಗೆ ಹೆಗಲು ಕೊಟ್ಟ ಮತ್ತು ನಸೀಮ್ ಶಾನ ಲೇಸ್ ಕಟ್ಟಿದ ಕೊಹ್ಲಿಯಂತವರು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆತನ ಸೆಂಚುರಿಯ ಸುತ್ತ ಷಡ್ಯಂತ್ರ ನಡೆಯಿತೇ ಎಂಬ ಸಲ್ಲದ ಅನುಮಾನ ಮೂಡಲು ಇದೇ ಕಾರಣ. ಅದೇನೆ ಇರಲಿ, ಕೊಹ್ಲಿ ಅವತ್ತು ಪಾಕಿಸ್ತಾನವನ್ನು ಮಣಿಸಿ ಕ್ರೀಡೆಯನ್ನಷ್ಟೆ ಗೆಲ್ಲಿಸಲಿಲ್ಲ; ಮನುಷ್ಯ ಸಂಬಂಧದ ಕ್ರೀಡಾಸ್ಫೂರ್ತಿಯನ್ನೂ ಗೆಲ್ಲಿಸಿದ.
ಕಲಿವೀರಯ್ಯ ಸಣ್ಣಗೌಡರ್
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಡಿಕೆ ಲವ್ಸ್ ಬಿಜೆಪಿ ಎಂಬ ಪ್ಲಾಂಟೆಡ್ ಸ್ಟೋರಿಯ ಲೆಕ್ಕಾಚಾರಗಳೇನು?