ಅನುಮತಿ ಪಡೆಯದೆ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

Most read

ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯದೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿರುವ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ 41 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು, ಕೆಲವು ವಿಶ್ವವಿದ್ಯಾಲಯದ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಭರ್ತಿ ಮಾಡಿದ ಪ್ರಕರಣಗಳು ಕಂಡುಬಂದಿದ್ದು ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿದ ಹಿನ್ನೆಲೆ ಅಂತಹ ಹುದ್ದೆಗಳಿಗೆ ವೇತನ ಅನುದಾನ ಬಿಡುಗಡೆ ಮಾಡದೆ ಇರುವುದಕ್ಕೆ ನಿರ್ಧರಿಸಿದೆ.

ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ.

ಆರ್ಥಿಕ ಇಲಾಖೆ ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನಾನುದಾನ ನೀಡಲು ವಿವಿಗಳು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್ಥಿಕ ಇಲಾಖೆ ಪರಿಶೀಲಿಸಿದಾಗ ಅನುಮತಿ ಪಡೆದುಕೊಳ್ಳದೆ ನೇಮಕಾತಿ ನಡೆಸಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾಮಾನ್ಯ ವಿವಿ, ವೈದ್ಯಕೀಯ ವಿವಿ, ಕೃಷಿ ವಿವಿಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ತಮ್ಮ ಹಂತದಲ್ಲಿ ಅನುಮೋದನೆ ಪಡೆದುಕೊಂಡ ಹುದ್ದೆಗಳ ವಿವರ, ಸರ್ಕಾರದ ಆದೇಶ ನೀಡಿರುವ ಕುರಿತಾದ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.

More articles

Latest article