ಆಳುವ ಶೋಷಕ ವರ್ಗಗಳು ದುಡಿಯುವ ಜನರ ಪ್ರತಿರೋಧವನ್ನು ಅರ್ಥ ಮಾಡಿಕೊಳ್ಳಲೇ ಬೇಕಿದೆ. ನಕ್ಸಲ್ ಹೋರಾಟಗಾರರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕಿದೆ. ಹಾಗೆಯೇ ಶೋಷಕ ಪ್ರಭುತ್ವದ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿದ ನಕ್ಸಲರೂ ಸಹ ಮುಖ್ಯವಾಹಿನಿಗೆ ಬಂದು ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಜನ ಹೋರಾಟದ ರೂಪುರೇಷೆಗಳನ್ನು ಅನುಷ್ಠಾನಕ್ಕೆ ತಂದು ಜನಜಾಗೃತಿ ಮಾಡಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಒಂದೂವರೆ ದಶಕದ ನಂತರ ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲ್ ನಿಗ್ರಹದವರ ಬಂದೂಕು ನರಬಲಿ ಪಡೆದಿದೆ. ವಿಕ್ರಂ ಗೌಡ ಎನ್ನುವ ಆದಿವಾಸಿ ದಲಿತ ನಕ್ಸಲ್ ನಾಯಕ ಪೊಲೀಸರ ಗುಂಡಿಗೆ ಬಲಿಯಾದ ಸುದ್ದಿ ಹೆಚ್ಚು ಆಘಾತವನ್ನೇನೂ ತಂದಿಲ್ಲ.
ಸದಾ ಇಂದು ಹೆಗಲ ಮೇಲೆ ಕೋವಿಯನ್ನು ಹಾಗೂ ಇನ್ನೊಂದು ಹೆಗಲಮೇಲೆ ಸಾವನ್ನು ಹೊತ್ತುಕೊಂಡೇ ಸಮಸಮಾಜವೆಂಬೋ ಆದರ್ಶದ ಕನಸುಗಳನ್ನು ಕಾಣುವ ವಿಕ್ರಂ ಗೌಡರಂತಹ ಬಂಡಾಯಗಾರರನ್ನು ಬಲಿಹಾಕಲು ಶೋಷಕ ಪ್ರಭುತ್ವ ಸರ್ವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಒಬ್ಬೊಬ್ಬ ನಕ್ಸಲರ ತಲೆಗೂ ಲಕ್ಷಾಂತರ ರೂಪಾಯಿ ಬಹುಮಾನ ಘೋಷಿಸಲಾಗಿರುತ್ತದೆ. ಬಂಡೆದ್ದವರ ಹಿಡಿದು ಕೊಲ್ಲಲೆಂದೇ ನಕ್ಸಲ್ ನಿಗ್ರಹ ಪಡೆಯ ಕಣ್ಗಾವಲಿರುತ್ತದೆ. ಅಕಸ್ಮಾತ್ ಸಿಕ್ಕಾಕಿಕೊಂಡರೆ ಎನ್‌ಕೌಂಟರ್ ಹೆಸರಲ್ಲಿ ಕೊಲೆ ನಡೆದೇ ಹೋಗಿರುತ್ತದೆ.
ಪೋಲಿಸರ ಸಾಹಸವನ್ನು ಹೊಗಳಲು, ನಕ್ಸಲರನ್ನು ರಕ್ತಪಿಪಾಸು ರಕ್ಕಸರೆಂದು ಪ್ರಚಾರ ಮಾಡಲು ಸುದ್ದಿ ಮಾಧ್ಯಮಗಳು ಕಾಯುತ್ತಲೇ ಇರುತ್ತವೆ. ಯಾಕೆಂದರೆ ಬಂಡವಾಳಶಾಹಿ ಮಾಲೀಕತ್ವದ ಈ ಎಲ್ಲಾ ಸುದ್ದಿ ಮಾಧ್ಯಮಗಳೂ ಸಹ ಶೋಷಿತ ಸಮುದಾಯದ ಸಶಸ್ತ್ರ ಹೋರಾಟವನ್ನು ಸರ್ವನಾಶ ಮಾಡುತ್ತಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಭುತ್ವದ ಹಿಂಸೆಯನ್ನು ಬೆಂಬಲಿಸುತ್ತಲೇ ನಕ್ಸಲ್ ಹಿಂಸೆಯನ್ನು ಖಂಡಿಸುತ್ತವೆ. ಆದ್ದರಿಂದಲೇ ಈಗ ಹತ್ಯೆಯಾದ ವಿಕ್ರಂ ಗೌಡನನ್ನು ಮಹಾಕ್ರೂರಿ, ರಕ್ತಪಿಪಾಸು ಎಂದೆಲ್ಲಾ ಈ ಮಡಿಲ ಮಾಧ್ಯಮಗಳು ಬಣ್ಣಿಸುತ್ತಿವೆ.
ನವೆಂಬರ್ 18 ರ ಮಧ್ಯರಾತ್ರಿ ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ ಹೆಬ್ರಿಯ ಪೀತಬೈಲು ಎನ್ನುವ ಕುಗ್ರಾಮದಲ್ಲಿ ನಕ್ಸಲರು ಮತ್ತು ಆಂಟಿ ನಕ್ಸಲ್ ಫೋರ್ಸ್ (ANF) ನವರ ಮುಖಾಮುಖಿ ದಾಳಿಯಲ್ಲಿ ನಿಜವಾಗಿಯೂ ಆಗಿದ್ದಾದರೂ ಏನು? ಅಲ್ಲಿ ನಡೆದದ್ದು ಎನ್‌ಕೌಂಟರಾ ಅಥವಾ ಪೂರ್ವಯೋಜಿತ ಕೊಲೆಯಾ? ಎನ್ನುವ ಸಂದೇಹಗಳು ಮೂಡ ತೊಡಗಿವೆ. ಅದಕ್ಕೆ ಕಾರಣಗಳೂ ಇವೆ.
ಕಾರಣಗಳು ಹೀಗಿವೆ-
* ಇಲ್ಲಿಯವರೆಗೂ ನಡೆದ ನಕ್ಸಲ್ ಎನ್‌ಕೌಂಟರ್ ನಲ್ಲಿ ಬಹುತೇಕ ನಕಲಿ ಎನ್‌ಕೌಂಟರ್ ಗಳೇ ಹೆಚ್ಚಾಗಿ ನಡೆದಿವೆ.
* ವಾರದ ಹಿಂದೆ ಪೊಲೀಸರು ಇಬ್ಬರು ಶಂಕಿತ ನಕ್ಸಲರನ್ನು ಬಂಧಿಸಿದಾಗ ಅವರು ಕೊಟ್ಟ ಮಾಹಿತಿಯಂತೆ ಕೂಂಬಿಂಗ್ ಕಾರ್ಯಾಚರಣೆಯನ್ನು ANF ಪಡೆ ತೀವ್ರ ಗೊಳಿಸಿತಂತೆ. ಹಾಗಾದರೆ ಬಂಧಿಸಲಾದ ಆ ಶಂಕಿತರು ಎಲ್ಲಿದ್ದಾರೆ? ಯಾವ ಕೋರ್ಟಿನ ಮುಂದೆ ಹಾಜರು ಪಡಿಸಲಾಗಿದೆ?. ಯಾರಿಗೂ ಗೊತ್ತಿಲ್ಲ.
* ಈ ಕೂಂಬಿಂಗ್ ಕಾರ್ಯಾಚರಣೆ ಯಾವಾಗಲೂ ಹಗಲು ಹೊತ್ತು ಮಾತ್ರ ಪೊಲೀಸರು ನಡೆಸುತ್ತಾರೆಯೇ ಹೊರತು ರಾತ್ರಿ ಹೊತ್ತು ಕಾಡಲ್ಲಿ ಕೂಂಬಿಂಗ್ ಮಾಡಿ ನಕ್ಸಲರಿಗೆ ಸುಲಭವಾಗಿ ಬಲಿಯಾಗಲು ಬಯಸುವುದಿಲ್ಲವಾದ್ದರಿಂದ ರಾತ್ರಿ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಯ್ತು ಎನ್ನುವುದೇ ಅನುಮಾನ.
* ನಕ್ಸಲರ ಒಂದು ಗುಂಪು ಆಹಾರಕ್ಕಾಗಿ ಪೀತಬೈಲಿನ ಮನೆಗೆ ಬಂದೇ ಬರುತ್ತದೆ ಎಂಬ ನಿಖರವಾದ ಮಾಹಿತಿಯನ್ನು ಆಧರಿಸಿ ರಾತ್ರಿ ಎಲ್ಲಾ ಕಾಯ್ದು ಎನ್‌ಕೌಂಟರ್ ಮಾಡಿ ವಿಕ್ರಂ ಗೌಡರನ್ನು ಸಾಯಿಸಲಾಯ್ತಂತೆ. ಮೊದಲೇ ನಕ್ಸಲರು ಬರುತ್ತಾರೆಂಬ ಖಚಿತ ಮಾಹಿತಿ ಇದ್ದರೆ ಪೊಲೀಸರು ಸುತ್ತುವರೆದು ಸೆರೆಹಿಡಿಯಬಹುದಾಗಿತ್ತು. ನಾಲ್ಕು ಜನರನ್ನು ಹಿಡಿಯಲು ಸರ್ವಸನ್ನದ್ದವಾಗಿ ಬಂದ ನಲವತ್ತಕ್ಕೂ ಹೆಚ್ಚಿದ್ದ ಪೊಲೀಸರಿಗೆ ಸಾಧ್ಯವಾಗುತ್ತಿರಲಿಲ್ಲವೇ? ಹಾಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಶಿಕ್ಷೆಗೆ ಗುರಿಪಡಿಸ ಬಹುದಿತ್ತಲ್ಲವೆ?. ಕೊಲ್ಲುವ ಉದ್ದೇಶದಿಂದಲೇ ಹೋದ ಪ್ರಭುತ್ವದ ಕಾಲಾಳುಗಳಿಂದ ಕಾಪಾಡುವ ನಿರೀಕ್ಷೆ ಅಸಾಧ್ಯ. ಹೀಗಾಗಿ ವಿಕ್ರಂ ಗೌಡ ಕಣ್ಣಿಗೆ ಬಿದ್ದ ತಕ್ಷಣ ಗುಂಡು ಹಾಕಿದರೋ ಇಲ್ಲವೇ ಬೇರೆಕಡೆ ಸೆರೆಹಿಡಿದು ಕೊಂದು ಎನ್‌ಕೌಂಟರ್ ಎಂದು ಪೊಲೀಸರು ಕಥೆ ಕಟ್ಟಿದರೋ ಗೊತ್ತಿಲ್ಲ. ಈ ಹಿಂದೆ ನಕ್ಸಲ್ ಎನ್‌ಕೌಂಟರ್ ಕುರಿತ ಪೊಲೀಸರ ಟ್ರ್ಯಾಕ್ ರೆಕಾರ್ಡ್ ನೋಡಿದರೆ ವಿಕ್ರಂ ರವರದ್ದು ಎನ್‌ಕೌಂಟರ್ ಸಾವಲ್ಲ ಪೊಲೀಸ್ ಹತ್ಯೆ ಎನ್ನುವ ಅನುಮಾನ ಕಾಡದಿರದು.
* ಹೋಗಲಿ, ಪೊಲೀಸರು ಹೇಳುವಂತೆ ರಾತ್ರಿ ಆಹಾರ ಪದಾರ್ಥಗಳನ್ನು ಪಡೆಯಲು ಕಿರಾಣಿ ಅಂಗಡಿಗೆ ನಕ್ಸಲ್ ಗುಂಪು ಬಂದಿತ್ತು ಎನ್ನುವುದೇ ನಿಜವಾದರೆ ಮಧ್ಯರಾತ್ರಿ 12 ಕ್ಕೆ ಅದ್ಯಾವ ಕಿರಾಣಿ ಅಂಗಡಿ ತೆರೆದಿರುತ್ತದೆ?. ಆಯ್ತು ಅಂಗಡಿಯನ್ನು ತೆರೆಸಬಹುದೆಂದುಕೊಂಡರೂ ಮೂರೇ ಮೂರು ಮನೆ ಇರುವ ಊರಲ್ಲದ ಊರಲ್ಲಿ ಕಿರಾಣಿ ಅಂಗಡಿ ಎಲ್ಲಿ ಇರಲು ಸಾಧ್ಯ? ಹೋಗಲಿ ಎರಡೂ ಕಡೆಯವರ ಕೈಯಲ್ಲೂ ಆಯುಧಗಳಿವೆ. ಎರಡೂ ಕಡೆಯಿಂದ ಫೈರಿಂಗ್ ಆಗಿದ್ದೇ ನಿಜವಾಗಿದ್ದಲ್ಲಿ ಯಾವುದೇ ANF ಪೊಲೀಸರ ಕೂದಲು ಕೂಡಾ ಕೊಂಕಿಲ್ಲವಲ್ಲಾ. ಪ್ರೀಪ್ಲಾನ್ ಮಾಡಿಕೊಂಡೇ ಹೋಗಿದ್ದ ಪೊಲೀಸರು ನಕ್ಸಲ್ ಗುಂಪಿನಲ್ಲಿ ವಿಕ್ರಂ ಗೌಡನನ್ನು ಮಾತ್ರ ಟಾರ್ಗೆಟ್ ಮಾಡಿ ಕೊಂದುಹಾಕಿ ಉಳಿದವರು ಪರಾರಿಯಾಗಲು ಬಿಟ್ಟರು ಎನ್ನುವುದನ್ನು ನಂಬಲು ಹೇಗೆ ಸಾಧ್ಯ?
ಎಲ್ಲವೂ ಪೊಲೀಸರ ಕಟ್ಟು ಕಥೆ
ನಕಲಿ ಎನ್‌ಕೌಂಟರ್ ನಲ್ಲಿ ವಿಕ್ರಂ ಗೌಡರನ್ನು ಸಾಯಿಸಿ “ಮುಖಾಮುಖಿ ಕಾಳಗದಲ್ಲಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ಮಾಡಬೇಕಾಯ್ತು” ಎಂದು ನಂಬಿಸುವ ಕೆಲಸವನ್ನು ಪೊಲೀಸರು ಹಾಗೂ ಅವರ ಪೋಷಕರು ಮತ್ತು ಮಾಧ್ಯಮಗಳು ಮಾಡುತ್ತಿವೆ. ವಿಕ್ರಂ ಗೌಡರ ಸಾವಿನ ಸುತ್ತ ಅನುಮಾನಗಳ ಹುತ್ತ ಇರುವುದರಿಂದ ತನಿಖೆಯಾಗಿ ಸತ್ಯ ಹೊರಗೆ ಬರಬೇಕಿದೆ. ಆದರೆ ತನಿಖೆಗೆ ಯಾವ ಕೋರ್ಟೂ ಆದೇಶಿಸುವುದಿಲ್ಲ. ಸತ್ತವನು ಒಬ್ಬ ದೇಶದ್ರೋಹಿ ಎಂದು ಹೇಳಿ ಪ್ರಭುತ್ವ ಪ್ರಾಯೋಜಿತ ಪೂರ್ವಯೋಜಿತ ಹತ್ಯೆಯನ್ನು ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಮಾಡಲಾದ ರಕ್ಷಣಾತ್ಮಕ ಎನ್‌ಕೌಂಟರ್ ಎಂದು ನಂಬಿಸಲಾಗುತ್ತದೆ. ಪೊಲೀಸರು ಹೇಳಿದ್ದನ್ನೇ ಸುದ್ದಿ ಮಾಧ್ಯಮಗಳು ಇನ್ನಷ್ಟು ವಿಜೃಂಭಿಸುತ್ತವೆ.
ಅಮಾಯಕ ಯುವಕ ನಕ್ಸಲ್ ಆಗಿದ್ದು ಹೇಗೆ?
ಇಷ್ಟಕ್ಕೂ ವಿಕ್ರಂ ಗೌಡರಂತಹ ಆದಿವಾಸಿ ಅಮಾಯಕ ಯುವಕನನ್ನು ನಕ್ಸಲ್ ಮಾಡಿದ್ದಾದರೂ ಯಾರು? ಈ ನಮ್ಮದೇ ಶೋಷಕ ವ್ಯವಸ್ಥೆ. ತಳ ಸಮುದಾಯದ ಗೌಡ್ಲು ಸಮುದಾಯದ ವಿಕ್ರಂ ಹಳ್ಳಿಯ ಅಮಾಯಕ ಯುವಕ. ಹೆಚ್ಚು ಓದಲು ಆಗದೇ ಕೃಷಿ ಹಾಗೂ ಕಾಡಿನ ಉತ್ಪನ್ನಗಳ ಸಂಗ್ರಹ ಮಾಡುತ್ತಾ ಹೇಗೋ ಬದುಕುತ್ತಿದ್ದ. ಆಗ ಹೆಬ್ರಿ ಸುತ್ತಲಿನ ಕಾಡಿಗೆ ಬರಸಿಡಿಲಿನಂತೆ ಅಪ್ಪಳಿಸಿದ್ದೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಎನ್ನುವ ಯೋಜನೆ. ಕಾಡಿನಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿದ್ದ ದಲಿತ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಬಲವಂತದ ಪ್ರಯತ್ನ ಮಾಡಲಾಯ್ತು. ತನ್ನ ಮನೆ, ತನ್ನ ಊರನ್ನು ತೊರೆದು ಹೋಗಲು ನಿರಾಕರಿಸಿದ ವಿಕ್ರಂ ಗೌಡನ ಮೇಲೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ವಿಪರೀತ ಅಮಾನವೀಯ ದೌರ್ಜನ್ಯ ನಡೆಸಿದರು. ಈ ದಮನದ ವಿರುದ್ದ ಅನಿವಾರ್ಯವಾಗಿ ವಿಕ್ರಂ ಹೋರಾಟದ ಹಾದಿ ಹಿಡಿಯಬೇಕಾಯ್ತು. ಪ್ರಭುತ್ವದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಹೋರಾಟಗಾರರ ಸಂಪರ್ಕ ವಿಕ್ರಂ ಗೆ ದೊರೆಯಿತು. ವರ್ಗ ಸಂಘರ್ಷದ ಸೈದ್ಧಾಂತಿಕ ಅರಿವು ಮೂಡತೊಡಗಿತು. ತಾರತಮ್ಯ ಇಲ್ಲದ ಸಮಸಮಾಜದ ನಿರ್ಮಾಣವೇ ಗುರಿಯಾಯಿತು. ಆ ಗುರಿ ಸಾಧನೆಗಾಗಿ ನಕ್ಸಲ್ ಮಾರ್ಗವೇ ದಾರಿಯಾಯ್ತು.
ಹೀಗಾಗಿ ಪ್ರಭುತ್ವದ ದಮನ ಹಾಗೂ ತಾರತಮ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ ವಿಕ್ರಂ ಗೌಡ ನಕ್ಸಲ್ ಪಡೆ ಸೇರಿಕೊಂಡು ಮುಂದೆ ನಕ್ಸಲ್ ಗುಂಪಿನ ನಾಯಕನಾಗಿ ಬೆಳೆದಿದ್ದು ಇತಿಹಾಸ. ಆದಿವಾಸಿಗಳ ಹಕ್ಕುಗಳಿಗಾಗಿ, ಬಡವರ ಮೇಲೆ ಭೂಮಾಲೀಕ ಜಮೀನ್ದಾರರ ಶೋಷಣೆಯ ವಿರುದ್ಧವಾಗಿ, ಆಳುವ ವರ್ಗಗಳ ವಂಚನೆಯ ವಿರುದ್ಧ ಪ್ರತಿರೋಧದ ಧ್ವನಿಯಾಗಿ ವಿಕ್ರಂ ಹಾಗೂ ಅವರಂತಹ ನೊಂದ ಅನೇಕ ಯುವಕರು ನಕ್ಸಲ್ ರಾದರು. ಅಮಾಯಕ ಯುವಕ ನಕ್ಸಲ್ ಆಗಿ ಹಿಂಸೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರ ಹೊಣೆಯನ್ನು ಈ ಪ್ರಭುತ್ವವೇ ಹೊರಬೇಕಿದೆ.
ನಕ್ಸಲ್ ಎಂದರೆ ಆಳುವ ವರ್ಗಗಳು ಬೆಚ್ಚಿ ಬೀಳುವುದು ಯಾಕೆ?
ಇಷ್ಟಕ್ಕೂ ನಕ್ಸಲ್ ಎಂದರೆ ಆಳುವ ವರ್ಗಗಳು ಬೆಚ್ಚಿ ಬೀಳುತ್ತವೆ. ಸಮಸಮಾಜ ನಿರ್ಮಾಣದ ಉದ್ದೇಶ ಹೊಂದಿರುವ ನಕ್ಸಲ್ ಸಿದ್ಧಾಂತ ಎಂದರೆ ಬಂಡವಾಳಿಗರು ಉರುದುರಿದು ಬೀಳುತ್ತಾರೆ. ಭೂಮಾಲೀಕರ, ಬಂಡವಾಳಿಗರ ಹಿತರಕ್ಷಣೆಗೆ ಕಟಿಬದ್ಧವಾಗಿರುವ ಪ್ರಭುತ್ವಕ್ಕೆ ನಕ್ಸಲ್ ಮೂವ್ ಮೆಂಟ್ ಎನ್ನುವುದು ಸಿಂಹಸ್ವಪ್ನವಾಗಿದೆ. ‘ಶೋಷಕ ವ್ಯವಸ್ಥೆ ಹೀಗೆಯೇ ಮುಂದುವರೆಯಬೇಕು, ಬಡವರು ದುಡಿಯುತ್ತಲೇ ಇರಬೇಕು ಹಾಗೂ ಶ್ರೀಮಂತರು ದುಡಿಯುವ ವರ್ಗದವರ ಶ್ರಮವನ್ನು ಬಳಸಿಕೊಂಡು ಬೆಳೆಯುತ್ತಲೇ ಇರಬೇಕು’ ಎನ್ನುವುದೇ ಆಳುವ ವರ್ಗಗಳ ಉದ್ದೇಶವಾಗಿದೆ. ಯಾವಾಗ ಈ ಶೋಷಕ ವ್ಯವಸ್ಥೆಯ ವಿರುದ್ಧ ಮಾವೋವಾದಿ ನಕ್ಸಲರು ಹೋರಾಟಕ್ಕೆ ಸಂಘಟಿತರಾದರೋ ಆಗ ಆಳುವ ವರ್ಗಗಳ ಹಿತಾಸಕ್ತಿ ಕಾಪಾಡಿಕೊಳ್ಳಲು ಪೊಲೀಸ್ ಹಾಗೂ ಸೇನೆಯನ್ನು ಬಳಸಿ ಬಲವಂತವಾಗಿ ನಕ್ಸಲ್ ನಿಗ್ರಹ ಮಾಡುವ ಪ್ರಯತ್ನಗಳು ಅವ್ಯಾಹತವಾಗಿ ನಡೆದವು.
‘ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ’ ಎಂಬುದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ. ಸಮಸಮಾಜ ನಿರ್ಮಾಣದ ಯಜ್ಞಕ್ಕೆ ಅನೇಕ ಹೋರಾಟಗಾರರು ಪ್ರಾಣತ್ಯಾಗವನ್ನು ಮಾಡಿದ್ದಾರೆ, ಮಾಡುತ್ತಲೇ ಇರುತ್ತಾರೆ. ಪಶ್ಚಿಮ ಬಂಗಾಳದ ನಕ್ಸ್‌ಲ್ ಬರಿ ಎನ್ನುವ ಗ್ರಾಮದಲ್ಲಿ ಹುಟ್ಟಿದ ಬಂಡಾಯದ ಕಿಡಿಗಳನ್ನು ದಮನಿಸಿದಷ್ಟೂ ಇನ್ನೆಲ್ಲೋ ನಕ್ಸಲ್ ಚಳುವಳಿ ಮರುಹುಟ್ಟು ಪಡೆಯುತ್ತಲೇ ಇರುತ್ತವೆ. ಸಾಕೇತ್ ರಾಜನ್ ರಂತವರು, ವಿಕ್ರಂ ಗೌಡರಂತಹ ಅನೇಕರು ಕ್ರಾಂತಿಯ ಯಜ್ಞಕ್ಕೆ ತಮ್ಮ ತ್ರಾಣ ಪ್ರಾಣಗಳನ್ನು ಹವಿಸ್ಸಾಗಿ ಅರ್ಪಿಸುತ್ತಲೇ ಇರುತ್ತಾರೆ.
ನಕ್ಸಲರು ಹಿಂಸಾವಾದಿಗಳು, ಬಂದೂಕಿನ ಬಲದಿಂದ ದೇಶದ ಆಡಳಿತ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರಭುತ್ವ ಆರೋಪಿಸುತ್ತಾ ನಕ್ಸಲರನ್ನು ಖಳನಾಯಕರನ್ನಾಗಿ ಚಿತ್ರಿಸುತ್ತಲೇ ಇರುತ್ತದೆ. ಆದರೆ ನಿಜವಾಗಿಯೂ ಜನರ ಮೇಲೆ ಹಿಂಸೆಯನ್ನು ಹೇರಿದ್ದು ಬಂಡವಾಳಶಾಹಿ ಪ್ರಭುತ್ವವೇ ಆಗಿದೆ. “ಈ ದೇಶದ ಸಂಪನ್ಮೂಲಗಳು ಎಲ್ಲರಿಗೂ ಸೇರಿದ್ದು, ಮರುಹಂಚಿಕೆಯಾಗಲಿ, ಭೂವಂಚಿತರಿಗೆ ಭೂಮಿಯ ಒಡೆತನ ದೊರೆಯಲಿ. ಉತ್ಪಾದಕ ಶಕ್ತಿಗಳೂ ಉತ್ಪನ್ನದಿಂದ ಬಂದ ಆದಾಯದ ಫಲಾನುಭವಿಗಳಾಗಲಿ, ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರೆಯಲಿ. ಪ್ರಭುತ್ವದ ದಮನ ಕೊನೆಯಾಗಲಿ, ಎಲ್ಲರಿಗೂ ಸಮಪಾಲು ಸಮಬಾಳು ದೊರೆಯಲಿ, ಅಂತಿಮವಾಗಿ ಸಮಸಮಾಜ ನಿರ್ಮಾಣವಾಗಲಿ” ಎನ್ನುವುದೇ ನಕ್ಸಲ್ ಸಿದ್ಧಾಂತದ ಉದ್ದೇಶ ಆದರ್ಶ ಮತ್ತು ಗುರಿಯಾಗಿದೆ.
ಹಿಂಸೆಯನ್ನು ಪ್ರತಿರೋಧಿಸಲು ಪ್ರತಿಹಿಂಸೆ??
ಆದರೆ ಈ ಉದ್ದೇಶ ಸಾಧನೆಯ ಹಾದಿಯಲ್ಲಿ ಪ್ರಭುತ್ವದ ಹಿಂಸೆಯನ್ನು ಪ್ರತಿರೋಧಿಸಲು ಪ್ರತಿಹಿಂಸೆಯ ಮಾರ್ಗವನ್ನು ನಕ್ಸಲರು ಅನಿವಾರ್ಯವಾಗಿ ಹಿಡಿಯ ಬೇಕಾಗಿದೆ. ಹಿಂಸೆ ಪ್ರತಿಹಿಂಸೆಗಳ ಸಂಘರ್ಷದ ಹಾದಿಯಲ್ಲಿ ಉರುಳಿದ ಹೆಣಗಳಿಗೆ ಲೆಕ್ಕವಿಲ್ಲ. ಹಿಂಸೆಯೊಂದೇ ಯಾವುದಕ್ಕೂ ಪರಿಹಾರವಲ್ಲ ಎಂಬುದನ್ನು ಪ್ರಭುತ್ವ ಹಾಗೂ ಪ್ರತಿರೋಧತ್ವಗಳೆರಡೂ ಅರ್ಥ ಮಾಡಿಕೊಳ್ಳಬೇಕಿದೆ. ಆಳುವ ಶೋಷಕ ವರ್ಗಗಳು ದುಡಿಯುವ ಜನರ ಪ್ರತಿರೋಧವನ್ನು ಅರ್ಥ ಮಾಡಿಕೊಳ್ಳಲೇ ಬೇಕಿದೆ. ನಕ್ಸಲ್ ಹೋರಾಟಗಾರರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕಿದೆ. ಹಾಗೆಯೇ ಶೋಷಕ ಪ್ರಭುತ್ವದ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿದ ನಕ್ಸಲರೂ ಸಹ ಮುಖ್ಯವಾಹಿನಿಗೆ ಬಂದು ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಜನ ಹೋರಾಟದ ರೂಪುರೇಷೆಗಳನ್ನು ಅನುಷ್ಠಾನಕ್ಕೆ ತಂದು ಜನಜಾಗೃತಿ ಮಾಡಬೇಕಿದೆ. ಬಲಾಢ್ಯವಾದ ಈ ಶೋಷಕ ವ್ಯವಸ್ಥೆಯನ್ನು ಉರುಳಿಸಲು ಜನಾಂದೋಲನ ಒಂದೇ ಪರ್ಯಾಯವಾಗಿದೆ. ದುಡಿಯುವ ಜನರ ರಾಜಿರಹಿತ ಹೋರಾಟವೊಂದೇ ಸಮಸಮಾಜ ನಿರ್ಮಾಣಕ್ಕೆ ದಾರಿಯಾಗಿದೆ. ಆಗ ಮಾತ್ರ ವಿಕ್ರಂ ಗೌಡರಂತಹ ಅನೇಕರ ತ್ಯಾಗಕ್ಕೆ ಬೆಲೆ ಸಿಕ್ಕಂತಾಗುತ್ತದೆ. ಹಿಂಸೆ ಪ್ರತಿಹಿಂಸೆಯ ಸಂಘರ್ಷದಲ್ಲಿ ಅಮೂಲ್ಯ ಪ್ರಾಣಹಾನಿಯಾಗುವುದು ತಪ್ಪುತ್ತದೆ. ಆದರ್ಶಗಳು ಗುರಿಯಾಗಿರಲಿ, ಜನಸಮುದಾಯಗಳನ್ನು ಜಾಗೃತಿಗೊಳಿಸುವ ಕಾಯಕ ನಿರಂತರವಾಗಲಿ. ರಕ್ತ ರಹಿತ ಜನಾಂದೋಲನದ ಕ್ರಾಂತಿ ಚಿರಾಯುವಾಗಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಬಿಜೆಪಿಯ ಶುದ್ಧೀಕರಣ ಯಂತ್ರದಲಿ ಕೈಲಾಶ್ ಗೆಹ್ಲೋಟ್