ವಿಧಾನಸಭೆಯಿಂದ ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಚುನಾಯಿತರಾದ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸಿರ್ ಹುಸೇನ್ ಅವರ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದ ಘಟನೆ ನಡೆಯಿತು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ವಿಧಾನಸಭೆಯಲ್ಲಿ ನೂರಾರು ಅಧಿವೇಶನಗಳು ನಡೆದಿವೆ. 7 ಕೋಟಿ ಕನ್ನಡಿಗರ ಜಾಗ ವಿಧಾನಸೌಧ. ಸಂವಿಧಾನ ರಕ್ಷಣೆಯ ಸ್ಥಳ. ಸುರಕ್ಷಿತ ಜಾಗ. ವಿಧಾನಸೌಧವನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಅವರು ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆಸಿದ್ದಾರೆ.
ಆದರೆ ನಿನ್ನೆ ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಸಯ್ಯದ್ ನಾಸಿರ್ ಹುಸೇನ್ ಅವರ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ರಾಜ್ಯದಲ್ಲಿ ಆತಂಕ ಉಂಟಾಗಿದೆ. ಭಯದ ವಾತಾವರಣವಿದೆ, ಗಲ್ಲಿಗಲ್ಲಿಯಲ್ಲಿ ಈ ರೀತಿಯಲ್ಲಿ ಕೂಗುವುದಿಲ್ಲ ಎಂದು ನಂಬುವುದಾದರೂ ಹೇಗೆ” ಎಂದು ಪ್ರಶ್ನಿಸಿದರು.
ಆ ರೀತಿ ಘೋಷಣೆ ಕೂಗಿದವರನ್ನು ರೆಡ್ ಕಾರ್ಪೆಟ್ ಹಾಕಿ ವಿಧಾನಸೌಧಕ್ಕೆ ಕರೆತಂದವರು ಯಾರು? ಎಂದಾಗ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಪಾರ್ಲಿಮೆಂಟ್‍ನಲ್ಲಿ ನುಗ್ಗಿದ್ದರಲ್ಲ ಎಂದಾಗ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಅಶೋಕ್ ಅವರು ಮಾತು ಮುಂದುವರೆಸಿ “ಸಂಸತ್‍ನಲ್ಲಿ ನುಗ್ಗಿದವರನ್ನು ಹಿಡಿದು ಚೆನ್ನಾಗಿ ರುಬ್ಬಿದರು. ನೀವೇನಾದರೂ ಅವರಿಗೆ ಹೊಡೆದಿರಾ” ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಲು ಮುಂದಾಗಿ ಚರ್ಚೆಯಾಗಲಿ ಎಂದರು.
ಮತ್ತೆ ಮಾತು ಮುಂದುವರೆಸಿದ ಅಶೋಕ್ ಅವರು, “ಆ ರೀತಿ ಘೋಷಣೆ ಕೂಗಿದವರನ್ನು ವಿಧಾನಸೌಧಕ್ಕೆ ಯಾರು ಕರೆತಂದರು? 500 ಪೊಲೀಸರು, ಐಪಿಎಸ್, ಐಎಎಸ್ ಅಧಿಕಾರಿಗಳು ಇರುವ ಈ ಸ್ಥಳದಲ್ಲಿ ಆ ರೀತಿ ಘೋಷಣೆ ಕೂಗಲು ಎಷ್ಟು ಧೈರ್ಯವಿರಬೇಕು? ದೇಶದ ಗಡಿಯಲ್ಲಿ ಸೈನಿಕರು ಜೀವದ ಹಂಗು ತೊರೆದು ಗಡಿ ಹಾಗೂ ದೇಶ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ನಾವು ಯಾವ ಉತ್ತರ ಕೊಡಬೇಕು? ಅಲ್ಲಿ ಈ ರೀತಿ ಘೋಷಣೆ ಕೂಗಿದರೆ ಅವರನ್ನು ಗುಂಡಿಟ್ಟು ಕೊಲ್ಲುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
“ಘೋಷಣೆ ಕೂಗಿದವರು ವಿಧಾನಸೌಧದಿಂದ ಹೊರಹೋಗಲು ವಾಹನ ಮಾಡಿಕೊಟ್ಟವರು ಯಾರು? ಇಷ್ಟೆಲ್ಲಾ ನಡೆದಿದ್ದರೂ ಸರ್ಕಾರ ಏನೂ ಆಗಿಲ್ಲ ಎಂಬಂತಿದೆ. ಒಂದು ಸಣ್ಣ ಕೇಸೂ ಕೂಡ ದಾಖಲಿಸಿಲ್ಲ” ಎಂದು ಆರೋಪಿಸಿದರು. “ಕಾಂಗ್ರೆಸ್‍ನ ಮತ್ತೊಬ್ಬ ಅಭ್ಯರ್ಥಿ ಜಿ.ಸಿ. ಚಂದ್ರಶೇಖರ್ ಗೆದ್ದಾಗ ಈ ರೀತಿ ಘೋಷಣೆ ಕೂಗಿಲ್ಲ. ಬಿಜೆಪಿ ಅಭ್ಯರ್ಥಿ ಗೆದ್ದಾಗ ನಮ್ಮ ಪಕ್ಷದವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದೇವೆ. ಆದರೆ ಸಯ್ಯದ್ ನಾಸಿರ್ ಹುಸೇನ್ ಗೆದ್ದ ಸಂದರ್ಭದಲ್ಲಿ ಯಾಕೆ ಈ ರೀತಿ ಘೋಷಣೆ? ಎಲ್ಲಿದೆ ಸುರಕ್ಷತೆ, ಯಾವ ಸೇಫ್ಟಿ” ಇದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಹಲವು ಶಾಸಕರು ಆಕ್ಷೇಪಿಸಲು ಮುಂದಾದಾಗ, ಸ್ಪೀಕರ್ ಯು.ಟಿ. ಖಾದರ್ ಅವರು ಮಧ್ಯ ಪ್ರವೇಶಿಸಿ “ಗಂಭೀರವಾದ ವಿಚಾರ ಚರ್ಚೆ ಮಾಡುವಾಗ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಜಕೀಯವನ್ನು ಬಿಡಬೇಕು. ರಾಷ್ಟ್ರ, ರಾಜ್ಯದ ಹಿತದ ಬಗ್ಗೆ ಮಾತನಾಡುವಾಗ ಗಂಭೀರವಾಗಿ ಆಲಿಸಬೇಕು, ಗಂಭೀರವಾದ ವಿಚಾರ ಪ್ರಸ್ತಾಪವಾಗುತ್ತಿದೆ, ಸರ್ಕಾರ ಉತ್ತರ ಕೊಡಲಿದೆ” ಎಂದು ಸಲಹೆ ನೀಡಿದರು.
ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸಿದ ಅಶೋಕ್, “ಕಳೆದ ಬಾರಿ ಬಜೆಟ್ ಮಂಡಿಸುವಾಗ ಕಿವಿಯ ಮೇಲೆ ಹೂವು ಇಟ್ಟುಕೊಂಡು ಬಂದಿದ್ದರು. ಆದರೆ ನಿನ್ನೆ ಘೋಷಣೆ ಕೂಗಿದ ವಿಚಾರ ನೋಡಿಲ್ಲ, ಕೇಳಿಲ್ಲ ಎನ್ನುತ್ತಾರೆ. ಮಾಧ್ಯಮಗಳಲ್ಲಿ ಅದನ್ನು ತೋರಿಸಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರು ಪಾಕಿಸ್ತಾನದವರೇ ಇರಬೇಕು. ಬೇರೆಯವರು ಆ ರೀತಿ ಘೋಷಣೆ ಕೂಗುವುದಿಲ್ಲ. ಏಕೆಂದರೆ ಭಾರತ ಮಾತೆ ಅನ್ನ ತಿಂದವರು, ನೀರು ಕುಡಿದವರು ಆ ರೀತಿ ಕೂಗುವುದಿಲ್ಲ, ಇನ್ನೆಷ್ಟು ಜನ ಬಂದಿದ್ದಾರೋ ಗೊತ್ತಿಲ್ಲ, ಇದು ನಾಡಿನ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ”.
“ಒಂದು ವೇಳೆ ಮಾಧ್ಯಮದ ವರದಿ ಸುಳ್ಳಾಗಿದ್ದರೆ ಅವರನ್ನು ಜೈಲಿಗೆ ಹಾಕಿ, ನನ್ನ ಮೇಲೂ ಕೇಸು ಹಾಕಿ. ಈ ಘಟನೆ ಬಗ್ಗೆ ಸಣ್ಣ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಬೇಕಿತ್ತು. ಶಾಸಕರ ಮೇಲೆ ಸ್ವಯಂಪ್ರೇರಿತ ಕೇಸು ಹಾಕುತ್ತಾರೆ, ಶಾಸಕರು ಘಟನಾ ಸ್ಥಳದಲ್ಲಿ ಇಲ್ಲವೆಂದರೂ ಕೇಸು ಹಾಕುತ್ತಾರೆ. ಪಿಎಫ್‍ಐ ಮೇಲಿನ ಕೇಸುಗಳನ್ನು ವಜಾ ಮಾಡಿದ್ದಾರೆ. ಹೀಗಾಗಿ ಕೋಲಾರ, ಶಿವಮೊಗ್ಗದಲ್ಲಿ ಮಚ್ಚು, ಲಾಂಗುಗಳ ಫ್ಲೆಕ್ಸ್ ಹಾಕಲಾಗಿದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಬೇಕಿತ್ತು. ಇಡೀ ದೇಶಕ್ಕೆ ಅವಮಾನವಾಗಿದೆ. ಕನ್ನಡಿಗರು ತಲೆ ತಗ್ಗಿಸುವಂತಾಗಿದೆ. ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ” ಎಂದು ಆರೋಪಿಸಿದರು.
ಘೋಷಣೆ ಕೂಗಿದವರನ್ನು ಯಾರು ಕರೆದುಕೊಂಡು ಬಂದರು, ಬಿರಿಯಾನಿ ಕೊಟ್ಟು ಯಾರು ಕಳುಹಿಸಿಕೊಟ್ಟರು, ಇವರಿಗೆ ಹೇಗೆ ರಾಜ್ಯಸಭಾ ಟಿಕೆಟ್ ಕೊಟ್ಟರು, ಅವರೇ ತಾನೇ ಕರೆದುಕೊಂಡು ಬಂದದ್ದು ಎಂದಾಗ ಆಡಳಿತ ಪಕ್ಷದ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.