ನಾಟಕ | “ವಚನ ಕಲ್ಯಾಣ” ಅಪ್ಡೇಟ್ಸ್; ಮತ್ತೆ ಮುಂದಕ್ಕೆ ಶೋ ಡೇಟ್ಸ್

ಈಗ ಹಣ ಇದೆ, ಸಂಯಮ ಹಾಗೂ ಶಿಸ್ತಿಗೆ ಹೆಸರಾದ ಚಿಕ್ಕಣ್ಣನವರ ಮೇಲೆ ಉಸ್ತುವಾರಿಯ ಜವಾಬ್ದಾರಿ ಬಿದ್ದಿದೆ,  ಸೆಟ್ ಪ್ರಾಪರ್ಟಿ ಕಾಸ್ಟೂಮ್ ಮೇಕಪ್ ಕುರಿತು ಪೂರ್ವ ತಯಾರಿಗಳ ಕುರಿತು ಬಸವಲಿಂಗಯ್ಯನವರು ಮ್ಯಾರಥಾನ್ ಸಭೆಗಳನ್ನು ಮಾಡುತ್ತಿದ್ದಾರೆ. ದಶಕದಿಂದ ಕುಂತು ನಿಂತು ಮಲಗಿ ಸುಸ್ತಾಗಿದ್ದ ಯೋಜನೆಗೆ ಮರುಜೀವ ಬರುತ್ತಿದೆ. ಇನ್ನಾದರೂ “ವಚನ ಕಲ್ಯಾಣ ” ದ ಕೆಲಸಗಳು ನಿರ್ವಿಘ್ನವಾಗಿ ಮುಂದುವರೆಯಲಿ ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

“ವಚನ ಕಲ್ಯಾಣ” ಎನ್ನುವುದು  9 ಗಂಟೆಗಳ ಅಹೋರಾತ್ರಿ ನಡೆಯುವ ಸರಕಾರಿ ಪ್ರಾಯೋಜಿತ ಮೆಗಾ ನಾಟಕ ಯೋಜನೆ. ಬಸವಾದಿ ಶರಣರ ವಚನಗಳನ್ನು ಆಧರಿಸಿ ಶಿವಶರಣರ ಇತಿಹಾಸವನ್ನು ಮರು ಸೃಷ್ಟಿಸುವ ಯತ್ನ. 12 ನೇ ಶತಮಾನದ ಶರಣರ ಕಥಾನಕಕ್ಕೆ ಸಮಕಾಲೀನ ಪ್ರಸ್ತುತತೆಯನ್ನು ಸಮೀಕರಿಸುವ ಪ್ರಯತ್ನ.

ಇಂತಹ ನಾಟಕವೊಂದನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿ ವಿಶಿಷ್ಟವಾಗಿ ಪ್ರದರ್ಶಿಸಬೇಕೆಂಬ ಪ್ರಯತ್ನಕ್ಕೆ ಹತ್ತು ವರ್ಷಗಳೇ ಸಂದಿವೆ. ಅದಕ್ಕೊಂದು ಸಮಿತಿ ಮಾಡಲಾಗಿದೆ, ಬೇಕಾದ ಹಣವನ್ನೂ ಠೇವಣಿ ಇಡಲಾಗಿದೆ. ನಾಟಕದ ಸ್ಕ್ರಿಪ್ಟ್ ಕೂಡಾ ಒಂದು ಹಂತದಲ್ಲಿ ಸಿದ್ಧವಾಗಿದೆ. ಐದು ಬಾರಿ ಈ ನಾಟಕದ ಕರಡನ್ನು ತಿದ್ದುಪಡಿ ಮಾಡಲಾಗಿದೆ. ಕೆಲವಾರು ಸಭೆಗಳಾಗಿವೆ. ನಾಟಕದ ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲವೆಂದು ರಾಷ್ಟ್ರೀಯ ನಾಟಕ ಶಾಲೆ ಹಿಂದೆ ಸರಿದಿದೆ. ಈಗ ಈ ಪ್ರಾಜೆಕ್ಟ್ ಕನಕದಾಸ ಅಧ್ಯಯನ ಕೇಂದ್ರದ ಪಾಲಾಗಿದ್ದು ಮಾರ್ಚ್ ಅಂತ್ಯಕ್ಕೆ ಸರಕಾರದಿಂದ 90 ಲಕ್ಷ ಹೆಚ್ಚುವರಿ ಹಣವೂ ಬಿಡುಗಡೆಯಾಗಿದೆ. NSD ಖಾತೆಯಲ್ಲಿರುವ ಒಂದೂವರೆ ಕೋಟಿ ಹಣ ಬರುವುದು ಬಾಕಿ ಇದೆ. ಹೀಗೆ ಅನೇಕಾನೇಕ ಸ್ಥಿತ್ಯಂತರಗಳ ನಂತರ, ಹಲವಾರು ವಿಘ್ನಗಳ ಸರಮಾಲೆ ಮುಗಿದಾದ ನಂತರ “ಬಸವ ಕಲ್ಯಾಣ”ಕ್ಕೆ ಈಗ ಚಾಲನೆ ಸಿಕ್ಕಿದೆ. ದಶಕದ ಶಾಪಕ್ಕೆ ಮುಕ್ತಿ ದೊರಕುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

ನಿರ್ದೇಶಕರಾದ ಮಾನ್ಯ ಸಿ.ಬಸವಲಿಂಗಯ್ಯನವರ ಮರ್ಜಿ ಮತ್ತು ಮುತುವರ್ಜಿಯ ಮೇರೆಗೆ ಕಲಾವಿದರಿಗಾಗಿ ಅರ್ಜಿ ಕರೆಯಲಾಗಿದೆ. 130 ಕ್ಕೂ ಹೆಚ್ಚು ಕಲಾವಿದರು ಆಸಕ್ತಿ ತೋರಿದ್ದೂ ಆಗಿದೆ. ಸಂದರ್ಶನ ಇನ್ನೇನು ಶುರುವಾಗಲಿದೆ. ಆಗಸ್ಟ್ ತಿಂಗಳಿನಿಂದ ಕಲಾಗ್ರಾಮದಲ್ಲಿ  ಒಂದು ತಿಂಗಳ ತರಬೇತಿ ಹಾಗೂ ಎರಡು ತಿಂಗಳ ತಾಲಿಂ ನಂತರ ನವೆಂಬರ್ ತಿಂಗಳಲ್ಲಿ ಪ್ರದರ್ಶನ ಆರಂಭವಾಗುವುದು ನಿಕ್ಕಿ ಆಗಿದೆ.

ಮೊದಲು ಬಸವ ಕಲ್ಯಾಣದಲ್ಲಿ ಜೂನ್ ತಿಂಗಳಲ್ಲಿ 10 ಪ್ರದರ್ಶನಗಳನ್ನು ಮಾಡುವುದಾಗಿ ಸಮಿತಿ ನಿರ್ಧರಿಸಿತ್ತು. ಈಗ ಅದನ್ನು ಬದಲಾಯಿಸಲಾಗಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ನಿರಂತರವಾಗಿ 20 ಪ್ರದರ್ಶನಗಳನ್ನು ಮಾಡುವುದೆಂದೂ ಹಾಗೂ ಅದಕ್ಕೆ ಟಿಕೇಟ್ ಇಟ್ಟು ಆದಷ್ಟು ರೆವಿನ್ಯೂ ಜನರೇಟ್ ಮಾಡುವುದೆಂದೂ, ಹಾಗೆ ಕಲೆಕ್ಟ್ ಆದ ಹಣದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲಾಡಳಿತದ ಸಹಕಾರ ಪಡೆದು ಏಳು ಜಿಲ್ಲೆಗಳಲ್ಲಿ ತಲಾ ಐದು ಪ್ರದರ್ಶನಗಳನ್ನು ಕೊಡುವುದೆಂದೂ ಯೋಚಿಸಲಾಗಿದೆ. ಮೊದಲು ಮೂರ್ನಾಲ್ಕು ತಿಂಗಳ ಅವಧಿಯದ್ದಾಗಿದ್ದ ಈ ಯೋಜನೆಯನ್ನು ಈಗ ಒಂದು ವರ್ಷದ ವರೆಗೂ ವಿಸ್ತರಿಸಲಾಗಿದ್ದು ರಾಜ್ಯಾದ್ಯಂತ ಕನಿಷ್ಟ 100 ಪ್ರದರ್ಶನಗಳನ್ನಾದರೂ ಮಾಡಬೇಕೆಂಬುದು ಈ ನಾಟಕದ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರ ಗುರಿಯಾಗಿದೆ.

ಆದರೆ ಅವರು ಅಂದುಕೊಂಡಷ್ಟು ದಾರಿ ಸುಗಮವಾಗಿಲ್ಲ. ಇನ್ನೂ ನಾಟಕದ ಕರಡು ಪ್ರತಿ ಅಂತಿಮಗೊಂಡಿಲ್ಲ. ನಿರ್ದೇಶಕರ ಆಶಯದಂತೆ ನಾಟಕದಲ್ಲಿ ಬದಲಾವಣೆ ಮಾಡಬೇಕಿದೆ. ಅದಕ್ಕೆ ನಾಟಕಕಾರರಾದ ಡಾ.ಕೆವೈ ನಾರಾಯಣಸ್ವಾಮಿಯವರ ಸಂಪೂರ್ಣ ಸಹಕಾರ ಬೇಕಾಗಿದೆ. ರಂಗಪಠ್ಯವನ್ನು ನಿರ್ದೇಶಕರು ತಯಾರಿಸಿಕೊಳ್ಳಬೇಕಿದೆ. ಅದಕ್ಕೆ ಸಮಿತಿಯ ಸದಸ್ಯರುಗಳು ಹಾಗೂ ಅಧ್ಯಕ್ಷರು ಸರ್ವಾನುಮತದ ಒಪ್ಪಿಗೆ ನೀಡಬೇಕಾಗಿದೆ.

ನಾಟಕಕ್ಕೆ ಆಯ್ಕೆ ಮಾಡಿಕೊಂಡ ವಸ್ತು ವಿಷಯವೇ ಧಾರ್ಮಿಕವಾಗಿ ಸೂಕ್ಷ್ಮವಾಗಿದೆ. ಒಂಚೂರು ವ್ಯತ್ಯಾಸವಾದರೂ ವಿವಾದಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಸಮಿತಿಯವರು, ನಾಟಕಕಾರರು ಹಾಗೂ ನಿರ್ದೇಶಕರು ಮೈಯೆಲ್ಲಾ ಕಣ್ಣಾಗಿ, ಅಗತ್ಯ ಪರಿಶೀಲನೆ ಮಾಡಿಯೇ ಈ ನಾಟಕವನ್ನು ಕಟ್ಟಬೇಕಿದೆ.

ಮೊದಲೇ ಸೆಟ್ ಪ್ರಾಪರ್ಟಿಗಳನ್ನು ತಯಾರಿಸಿಕೊಂಡ ನಂತರವೇ ನಾಟಕದ ತಾಲಿಂ ಆರಂಭಿಸಬೇಕೆಂಬ ನಿರ್ದೇಶಕರ ನಿರ್ಧಾರ ಸೂಕ್ತವಾಗಿದೆ. ತರಬೇತಿ ಮತ್ತು ತಾಲಿಂ ಜೊತೆಗೆ ನೇಪಥ್ಯದ ತಯಾರಿಯನ್ನೂ ಮಾಡುವುದು ನಿರ್ದೇಶಕರ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಎಲ್ಲಾ ರೀತಿಯ ಪೂರ್ವ ತಯಾರಿಗಳನ್ನು ಮೊದಲೇ ಮಾಡಿಕೊಂಡು, ಶಶಿಧರ್ ಅಡಪರವರಿಂದ ಸೆಟ್ ಸಿದ್ಧಪಡಿಸಿಕೊಂಡು, ಪ್ರಮೋದ್ ಶಿಗ್ಗಾಂವರವರಿಂದ ರಂಗಪರಿಕರಗಳನ್ನು ತಯಾರಿಸಿಕೊಂಡು, ರಂಗವೇದಿಕೆಯ ಸಿದ್ಧತೆ ಮಾಡಿದ ನಂತರವೇ ಕಲಾವಿದರಿಗೆ ತರಬೇತಿ ಹಾಗೂ ತಾಲಿಂ ಶುರುಮಾಡುವುದೆಂದು ನಿರ್ಧರಿಸಲಾಗಿದೆ. ಈಗ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ರಂಗಶಿಕ್ಷಣ ಪಡೆದ ಬಹುತೇಕ ಕಲಾವಿದರುಗಳು ಬೇಸಿಗೆ ರಂಗ ಶಿಬಿರ ಕಾರ್ಯಾಗಾರಗಳಲ್ಲಿ ಬ್ಯೂಸಿ ಆಗಿರುವುದರಿಂದ ಎರಡು ತಿಂಗಳು ಕಳೆದ ನಂತರವೇ ನಾಟಕದ ತಾಲಿಂ ಆರಂಭಿಸಲಾಗುವುದು ಎಂಬುದು ಸೂಕ್ತವಾದ ನಿರ್ಧಾರವಾಗಿದ್ದು, ಅಷ್ಟರಲ್ಲಿ ಸೆಟ್ ಪರಿಕರ ರಂಗವಿನ್ಯಾಸದ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬಹುದಾಗಿದೆ.

ಆದರೆ.. ಮೊದಲು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ “ವಚನ ಕಲ್ಯಾಣ” ನಾಟಕವನ್ನು ಪ್ರದರ್ಶಿಸಬೇಕು ಎಂದಾಗಿತ್ತು. ಅಂದರೆ ಬಸವಕಲ್ಯಾಣದಲ್ಲಿ ಹತ್ತು ಪ್ರಯೋಗಗಳನ್ನು ಮಾಡಬೇಕು ಎನ್ನುವ ಸಮಿತಿಯವರ ಸದಾಶಯ ಸೂಕ್ತವಾಗಿತ್ತು. ಈಗಾಗಲೇ ಬೆಂಗಳೂರು ಮೈಸೂರುಗಳನ್ನೇ ಕೇಂದ್ರವಾಗಿಸಿಕೊಂಡು ಕುವೆಂಪುರವರ “ಮಲೆಗಳಲಿ ಮದುಮಗಳು” ಎನ್ನುವ ಮೆಗಾ ನಾಟಕವನ್ನು ಸರಕಾರದ ಪ್ರಾಯೋಜಕತ್ವದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಶರಣರ ವಚನ ಸಂಸ್ಕೃತಿಯನ್ನು ಆಧರಿಸಿ ಬಸವಣ್ಣನವರ ಜನ್ಮಸ್ಥಳವಾದ ಬಸವಕಲ್ಯಾಣದಲ್ಲಿ “ವಚನ ಕಲ್ಯಾಣ” ವನ್ನು ಪ್ರದರ್ಶಿಸಿದ್ದರೆ ಸಾಂಸ್ಕೃತಿಕವಾಗಿ ಪ್ರಾದೇಶಿಕ ಸಮಾನತೆಯನ್ನು ಕಾಪಾಡಿಕೊಂಡಂತಾಗುತ್ತಿತ್ತು.

ಆದರೆ ಈಗ ಮತ್ತೆ ಇಡೀ ಪ್ರಾಜೆಕ್ಟ್ ಬೆಂಗಳೂರು ಕೇಂದ್ರಿತವಾಗಿದೆ. ನಿರ್ದೇಶಕರು, ನಾಟಕಕಾರರು, ಪ್ರಾಯೋಜಕರು, ಆಯೋಜಕರು, ನೇಪಥ್ಯ ತಜ್ಞರುಗಳು.. ಬಹುತೇಕ ಎಲ್ಲರೂ ಬೆಂಗಳೂರು ವಾಸಿಗಳೇ ಆಗಿದ್ದಾರೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಿಂದ ಕೆಲವು ಕಲಾವಿದರನ್ನು ಆಯ್ಕೆ ಮಾಡಬಹುದಾಗಿದೆ. ಅಂದರೆ ಈ ಸರಕಾರಿ ಕೃಪಾಪೋಷಿತ ಮೆಗಾ ಪ್ರಾಜೆಕ್ಟ್ ಮತ್ತೆ ಬೆಂಗಳೂರು ಕೇಂದ್ರಿತವೇ ಆಗಿರುವುದು ಪ್ರಶ್ನಾರ್ಹವಾಗಿದೆ. ಶಕ್ತಿ ಕೇಂದ್ರದ ಹೊರಗೆ ಪರಿಧಿಯಲ್ಲಿ ಕಟ್ಟಬೇಕಾದ ನಾಟಕವು ಮತ್ತೆ ಕೇಂದ್ರ ಪ್ರದೇಶದತ್ತಲೇ ಕೇಂದ್ರಿಕೃತವಾಗಿದ್ದು ಪ್ರಾದೇಶಿಕ ಅಸಮಾನತೆಗೆ ಕಾರಣವಾಗುವಂತಿದೆ. ಕೆಲವು ಕಲಾವಿದರನ್ನು ಹೊರತು ಪಡಿಸಿ ಈ ಮೆಗಾ ಪ್ರಾಜೆಕ್ಟಿನಲ್ಲಿ ಭಾಗವಹಿಸಿದ ಬಹುತೇಕರು ಮತ್ತೆ ಬೆಂಗಳೂರು ಕೇಂದ್ರಿತ ವಾಸಿಗಳೇ ಆಗಿದ್ದು ಯಾಕೋ ಸರಿಯಾದ ನಿರ್ಧಾರ ಎನ್ನಿಸುವುದಿಲ್ಲ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ಮಲೆಗಳಲಿ ಮದುಮಗಳು, ಭಾರತ ಬಾಗ್ಯ ವಿಧಾತ ದಂತಹ ಮೆಗಾ ಪ್ರಾಜೆಕ್ಟ್‌ ಗಳು ಬೆಂಗಳೂರು ಮೈಸೂರಿನ ಪಾಲಾಗಿವೆ. ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಇಲ್ಲವೇ ಕಲ್ಯಾಣ ಕರ್ನಾಟಕದತ್ತ ಸಂಸ್ಕೃತಿ ಇಲಾಖೆಯ ಚಿತ್ತ ಇರಬೇಕೆಂಬುದು ಆ ಭಾಗದವರ ಬೇಡಿಕೆಯೂ ಆಗಿದೆ. ಈ ವಚನ ಕಲ್ಯಾಣ ಪ್ರಾಜೆಕ್ಟಾದರೂ ಕಲ್ಯಾಣ ಕರ್ನಾಟಕ ಕೇಂದ್ರಿತವಾಗಬಹುದು ಎಂಬ ಆಸೆಯೂ ಈಗ ಸುಳ್ಳಾಗಿದೆ. 2.4 ಕೋಟಿ ರೂಪಾಯಿಗಳ “ವಚನ ಕಲ್ಯಾಣ” ನಾಟಕ ಯೋಜನೆ ಮತ್ತೆ ಬೆಂಗಳೂರು ಕೇಂದ್ರಿತವಾಗಿದ್ದು ಪ್ರಶ್ನಾರ್ಹವಾಗಿದೆ. ಕನಿಷ್ಟ ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಕೇಂದ್ರಿತವಾಗಿ ಪ್ರದರ್ಶನಗಳನ್ನು ರೂಪಿಸಿದ್ದರೆ, ಆ ಭಾಗದ ಕಲಾವಿದರು ಹಾಗೂ ತಂತ್ರಜ್ಞರುಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ಕೂಡಲ ಸಂಗಮದಲ್ಲೊ ಇಲ್ಲ ಬಸವಕಲ್ಯಾಣದಲ್ಲೋ ನಾಟಕದ ತರಬೇತಿ ಹಾಗೂ ತಾಲಿಂ ಮಾಡಿ ನಾಟಕದ ಪ್ರದರ್ಶನಗಳನ್ನು ಕೊಟ್ಟಿದ್ದರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಆ ಭಾಗಕ್ಕೂ ನ್ಯಾಯ ಒದಗಿಸಿದಂತಾಗುತ್ತಿತ್ತು. ಸಾಂಸ್ಕೃತಿಕ ಕ್ಷೇತ್ರದ ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಬಹುದಾಗಿತ್ತು. ಹೋಗಲಿ ವಚನ ಕಲ್ಯಾಣ ಯೋಜನೆಯ ಸಮಿತಿಯಲ್ಲಿರುವವರಾದರೂ ಈ ನಿಟ್ಟಿನಲ್ಲಿ ಯೋಚಿಸಬಹುದಾಗಿತ್ತು. ಉತ್ತರದವರಿಗೆ ದಕ್ಕಬೇಕಾಗಿದ್ದ ಸರಕಾರಿ ಸಾಂಸ್ಕೃತಿಕ ಯೋಜನೆಯೊಂದು ಮತ್ತೆ ರಾಜಧಾನಿ ಕೇಂದ್ರಿತವಾಗಿದ್ದು ಬೇಸರದ ಸಂಗತಿ. ಸರಕಾರ ಆಯ್ಕೆ ಮಾಡಿರುವ ಸಮಿತಿಯಲ್ಲಿ ಇರುವವರಲ್ಲಿ ಬ್ಯಾಳಿ ಮೇಡಂ ಹೊರತು ಪಡಿಸಿ ಬಹುತೇಕ ಎಲ್ಲರೂ ಬೆಂಗಳೂರು ವಾಸಿಗಳು. ನಿರ್ದೇಶಕರು ಮಾತ್ರ ಮೈಸೂರಿನವರು.

ಹೀಗಾಗಿ ಉತ್ತರದವರ ಪ್ರಾತಿನಿಧ್ಯತೆಯೂ ಸಮಿತಿಯಲ್ಲಿ ಕಡಿಮೆ ಇರುವುದರಿಂದ ಆ ಭಾಗಕ್ಕೆ ಮೀಸಲಾಗಿರಬೇಕಾಗಿದ್ದ ವಚನ ಕಲ್ಯಾಣ ಯೋಜನೆ ಮತ್ತೆ ಬೆಂಗಳೂರಿನ ಪಾಲಾಗಿರುವುದು ಹಾಗೂ ಸಮಿತಿಯಲ್ಲೂ ಲಿಂಗಾಯತೇತರರೇ ಹೆಚ್ಚಾಗಿರುವುದು ಯಾಕೋ ಅಸಮತೋಲನಕ್ಕೆ ಕಾರಣವಾಗಿದೆ. ನಾಟಕಕಾರರು, ನಿರ್ದೇಶಕರು ಹಾಗೂ ಪ್ರಮುಖ ನೇಪಥ್ಯ ತಜ್ಞರಲ್ಲಿ ಯಾರೂ ಬಸವ ಧರ್ಮೀಯರಿಲ್ಲ. ಹೀಗಾಗಿ ಶರಣ ಸಂಸ್ಕೃತಿಯ ಬಸವ ತತ್ವಕ್ಕೆ ಎಷ್ಟರ ಮಟ್ಟಿಗೆ ನ್ಯಾಯ ಸಲ್ಲಿಸಬಹುದು ಎಂಬ ಕುತೂಹಲವೂ ಇದೆ. ಬಸವಾದಿ ಶರಣರ ಸಂಸ್ಕೃತಿ ಹಾಗೂ ಜಂಗಮತ್ವದ ಆಶಯಗಳಿಗೆ ಚ್ಯುತಿ ಬರದಂತೆ ಇಡೀ ನಾಟಕವನ್ನು ಕಟ್ಟಿಕೊಡಬೇಕಾದ ಹೊಣೆಗಾರಿಕೆ ನಾಟಕಕಾರರಾದ ಡಾ.ಕೆ.ವೈ.ನಾರಾಯಣಸ್ವಾಮಿಗಳು ಹಾಗೂ ನಿರ್ದೇಶಕರಾದ ಮಾನ್ಯ ಸಿ.ಬಸವಲಿಂಗಯ್ಯನವರ ಮೇಲಿದೆ. ಅವರ ಮೇಲೆ ಸರಕಾರ ಹಾಗೂ ಕನ್ನಡಿಗರು ಅದರಲ್ಲೂ ಬಸವ ಧರ್ಮೀಯ ಲಿಂಗಾಯತ ಸಮುದಾಯ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ರಂಗ ಚರಿತ್ರೆಯಲ್ಲಿ ದಾಖಲಾಗುವಂತಹ ನಾಟಕವನ್ನು ಕಟ್ಟಿ ಕೊಡಲಿ ಎಂಬುದು ಸಮಸ್ತ ಬಸವಾನುಯಾಯಿಗಳ ಕೋರಿಕೆಯಾಗಿದೆ.

ಇಷ್ಟೆಲ್ಲಾ ಆದ ಮೇಲೂ ಇಂತಹ ಸಾಂಸ್ಕೃತಿಕ ಈವೆಂಟ್ ಗಳನ್ನು ಆಯೋಜಿಸಿ ಅನುಷ್ಠಾನಕ್ಕೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ.   ನಾಟಕವಾಗಿ ಪ್ರದರ್ಶನ ಆಗುತ್ತಿರುವುದರಿಂದ ನಾಟಕ ಅಕಾಡೆಮಿ ಅಂತಾ ಒಂದಿದೆ. ಆದರೆ “ವಚನ ಕಲ್ಯಾಣ” ಯೋಜನೆಯ ಹೊಣೆಗಾರಿಕೆಯನ್ನು ಸಂತಕವಿ ಕನಕದಾಸ ಕೇಂದ್ರಕ್ಕೆ ಯಾಕೆ ಒಪ್ಪಿಸಲಾಯ್ತು? ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಮೇಲೆ ಯಾರಿಗೂ ನಂಬಿಕೆ ಇಲ್ಲವಾಗಿದೆ. ನಾಟಕ ಅಕಾಡೆಮಿಯ ಅಧ್ಯಕ್ಷ ನಾಗರಾಜಮೂರ್ತಿಯವರ ಸರ್ವಾಧಿಕಾರಿ ಧೋರಣೆಯ ಮೇಲೆ ಸಮಿತಿಯವರಿಗೆ ಅಪನಂಬಿಕೆ ಇದೆ. ಈ ಪ್ರಾಜೆಕ್ಟನ್ನು ಪಡೆಯಲು ನಾಗರಾಜಮೂರ್ತಿಯವರು ಸಾಕಷ್ಟು ಪ್ರಯತ್ನ ಪಟ್ಟರಾದರೂ ಸಮಿತಿಯವರು ಅನುಮೋದಿಸಲಿಲ್ಲ. ಎನ್ ಎಸ್ ಡಿ ಯ ದೆಹಲಿ ಕೇಂದ್ರದವರಿಗಂತೂ ಈ ಮೆಗಾ ಈವೆಂಟ್ ಮುನ್ನಡೆಸಲು ಇಷ್ಟವಿಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಸಮಿತಿ ನಿರ್ಧರಿಸಿದ್ದು ಕನಕದಾಸ ಕೇಂದ್ರದ ಮೇಲ್ವಿಚಾರಣೆಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕು ಹಾಗೂ ಈ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣನವರು ಉಸ್ತುವಾರಿಯ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು. ಸರಕಾರದಿಂದ ಈ ಯೋಜನೆಗೆ ಬಂದ ಅನುದಾನದ ಹಣವನ್ನು ಇಡಲು ಇನ್ನೊಂದು ಸರಕಾರಿ ಅಧೀನ ಸಂಸ್ಥೆಯೇ ಬೇಕಿತ್ತು. ಅದಕ್ಕೆ ಕನಕದಾಸ ಕೇಂದ್ರ ಸೂಕ್ತವಾಗಿತ್ತು. ಹಾಗೂ ಈ ಕೇಂದ್ರದ ಕಚೇರಿ ಕಲಾಗ್ರಾಮದಲ್ಲಿತ್ತು. ಇಡೀ ವಚನ ಕಲ್ಯಾಣ ನಾಟಕದ ಕಾರ್ಯಚಟುವಟಿಕೆಯ ಕೇಂದ್ರ ಸ್ಥಳ ಕಲಾಗ್ರಾಮವಾಗಿದ್ದರಿಂದ ಈ ನಾಟಕ ಯೋಜನೆಗೆ ಕನಕದಾಸ ಕೇಂದ್ರವೇ ಸೂಕ್ತವೆಂದು ನಿರ್ಧರಿಸಲಾಯ್ತು.

ಈಗಾಗಲೇ ಯಶಸ್ವಿಯಾಗಿದ್ದ ‘ಮಲೆಗಳಲ್ಲಿ ಮದುಮಗಳು’ ಯೋಜನೆಯ ನಿರ್ದೇಶಕರಾಗಿದ್ದವರು ಆಗ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಕಾ.ತ.ಚಿಕ್ಕಣ್ಣನವರು. ಇಂತಹ ಮೆಗಾ ಈವೆಂಟ್ ಮಾಡಿದ ಅನುಭವ ಅವರಿಗೆ ಇರುವುದರಿಂದಾಗಿ ‘ವಚನ ಕಲ್ಯಾಣ’ದ ನಿರ್ವಹಣೆಯ ಜವಾಬ್ದಾರಿಯನ್ನು ಅವರಿಗೇ ವಹಿಸಲಾಯ್ತು. ಮತ್ತು ಮಾರ್ಚ್ 31 ರ ಒಳಗೆ ಹೆಚ್ಚುವರಿ ಹಣವನ್ನು ಸರಕಾರ ಬಿಡುಗಡೆ ಮಾಡಬೇಕಾಗಿದ್ದರಿಂದ ಆ ಹಣವನ್ನು ಇಡಲು ಕನಕದಾಸ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಯ್ತು. ಈಗ ಹಣ ಇದೆ, ಸಂಯಮ ಹಾಗೂ ಶಿಸ್ತಿಗೆ ಹೆಸರಾದ ಚಿಕ್ಕಣ್ಣನವರ ಮೇಲೆ ಉಸ್ತುವಾರಿಯ ಜವಾಬ್ದಾರಿ ಬಿದ್ದಿದೆ,  ಸೆಟ್ ಪ್ರಾಪರ್ಟಿ ಕಾಸ್ಟೂಮ್ ಮೇಕಪ್ ಕುರಿತು ಪೂರ್ವ ತಯಾರಿಗಳ ಕುರಿತು ಬಸವಲಿಂಗಯ್ಯನವರು ಮ್ಯಾರಥಾನ್ ಸಭೆಗಳನ್ನು ಮಾಡುತ್ತಿದ್ದಾರೆ. ದಶಕದಿಂದ ಕುಂತು ನಿಂತು ಮಲಗಿ ಸುಸ್ತಾಗಿದ್ದ ಯೋಜನೆಗೆ ಮರುಜೀವ ಬರುತ್ತಿದೆ. ಇನ್ನಾದರೂ “ವಚನ ಕಲ್ಯಾಣ ” ದ ಕೆಲಸಗಳು ನಿರ್ವಿಘ್ನವಾಗಿ ಮುಂದುವರೆಯಲಿ. ಶಿವಶರಣರ ವೈಚಾರಿಕ ಆಶಯಗಳಿಗೆ ಚ್ಯುತಿ ಬರದಂತೆ ನಾಟಕ ಮೂಡಿಬರಲಿ ಎಂಬುದೇ ಸಮಸ್ತ ಕನ್ನಡಿಗರ ಬಯಕೆಯಾಗಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article

Most read