Saturday, July 27, 2024

ಉತ್ತರ ಕನ್ನಡದ ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಹೆಚ್ಚಳ: ಜನರಲ್ಲಿ ಆತಂಕ

Most read

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಂಗನ ಕಾಯಿಲೆ (Monkey Fever) ಆತಂಕ ಹೆಚ್ಚಾಗುತ್ತಿದೆ. ಅದರಲ್ಲೂ ಸಿದ್ದಾಪುರ ತಾಲೂಕಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಯಿಲೆಯಿಂದ ಬಳಲುತ್ತಿದ್ದ ಜಿಡ್ಡಿ ಎಂಬ ಗ್ರಾಮದ 65 ವರ್ಷದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಜನ ಭಯದಿಂದ ಬದುಕುವ ಪರಿಸ್ಥಿತಿ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 43 ಮಂಗನಕಾಯಿಲೆಯ ಪ್ರಕರಣ ದಾಖಲಾಗಿವೆ. ಎಲ್ಲಾ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಪತ್ತೆಯಾಗಿವೆ. ಇತ್ತ ಸರಿಯಾದ ಚಿಕಿತ್ಸೆಯೂ ಇಲ್ಲದೆ, ಲಸಿಕೆಯೇ ಇಲ್ಲದೇ ಜನ ಪರದಾಡುತ್ತಿದ್ದಾರೆ.

ಸಾಮಾನ್ಯವಾಗಿ ಮಲೆನಾಡಿನ ಕಾಡು ಪ್ರದೇಶಗಳ ಅಂಚಿನಲ್ಲಿ ನೆಲೆಸುವವರಲ್ಲಿ ಈ ಸೋಂಕು ಕಂಡು ಬರುತ್ತಿದೆ. ಕಾಡಿಗೆ ಸೌದೆ ತರಲು ತೆರಳುವವರಿಗೆ ವೈರಾಣಿನ ಮೂಲಕ ಈ ರೋಗ ಹರಡುತ್ತಿದೆ. ಮಂಗ, ಬಾವಲಿಗಳು ಕೆಎಫ್‌ಡಿ ಸೋಂಕಿನಿಂದ ಬಳಲುತ್ತಿದ್ದರೆ ಅಥವಾ ಸತ್ತಿದ್ದರೆ ಅಂತಹ ಪ್ರಾಣಿಗಳ ರಕ್ತ ಹೀರುವ ಉಣ್ಣೆಗಳು ಮನುಷ್ಯನಿಗೆ ಕಚ್ಚಿದ್ರೆ ನಾಲ್ಕೇ ದಿನಗಳಲ್ಲಿ ಅಂತಹವರು ಮಂಗನ ಕಾಯಿಲೆಗೆ ತುತ್ತಾಗುತ್ತಾರೆ.

ಸೋಂಕಿನ ಲಕ್ಷಣಗಳೇನು?

ಸಾಮಾನ್ಯವಾಗಿ ತೀವ್ರ ಜ್ವರ, ತಲೆನೋವು, ಕುತ್ತಿಗೆ ನೋವು, ವಿಪರೀತ ಸುಸ್ತು ಇವುಗಳೆಲ್ಲವೂ ಮಂಗನ ಜ್ವರದ ಲಕ್ಷಣಗಳಾಗಿವೆ.

ಮುಂಜಾಗ್ರತೆ ವಹಿಸಿ:-

ಇನ್ನು ಸೋಂಕು ಬಾರದಂತೆ ಮಲೆನಾಡು ಭಾಗದಲ್ಲಿರುವವರು ಕಾಡಿಗೆ ಹೋಗುವುದಿದ್ದರೆ, ಆರೋಗ್ಯ ಇಲಾಖೆ ನೀಡಿರುವ ದೀಪ ಹೆಸರಿನ ಆಯಿಲ್‌ ಮೈ, ಕೈ, ಕಾಲುಗಳಿಗೆ ಹಚ್ಚಬೇಕು. ಜೊತೆಗೆ ಆದಷ್ಟು ಮೈ ಮುಚ್ಚುವಂತಹ ಬಟ್ಟೆ ಧರಿಸಬೇಕು ಎಂದು ಡಾ. ಭರತ್‌ ಅವರು ತಿಳಿಸಿದ್ದಾರೆ.

More articles

Latest article