ವಾಷಿಂಗ್ಟನ್: ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೇರುವುದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ತಮ್ಮ ದೇಶವೂ ಭಾರತೀಯ ಉತ್ಪನ್ನಗಳ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯಲ್ಲಿರುವ ಮಾರ್ ಎ ಲಾಗೋ ಎಂಬಲ್ಲಿ ನಡೆದ ಸುದ್ದಿಗೋಷ್ಠಿ ಡೊನಾಲ್ಡ್ ಟ್ರಂಪ್ ಈ ವಿಷಯ ತಿಳಿಸಿದ್ದಾರೆ.
ಅವರು ಯಾವುದಕ್ಕೆ ಎಷ್ಟು ತೆರಿಗೆ ಹಾಕುತ್ತಾರೋ, ನಾವೂ ಅಷ್ಟೇ ತೆರಿಗೆ ಹಾಕಬೇಕಾಗುತ್ತದೆ. ಇದು ಅನುರೂಪ ನಡೆಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಅವರು ತೆರಿಗೆ ಹಾಕುತ್ತಾರೆ. ನಾವು ಅವರಿಗೆ ತೆರಿಗೆ ಹಾಕುವುದಿಲ್ಲ. ನಾವು ಈ ಕ್ರಮವನ್ನು ಬದಲಾಯಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ, ಬ್ರೆಜಿಲ್ ಸೇರಿದಂತೆ ಅನೇಕ ದೇಶಗಳು ಅಮೆರಿಕನ್ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹಾಕುತ್ತಿರುವುದು ಡೊನಾಲ್ಡ್ ಟ್ರಂಪ್ ಅಸಮಾಧಾನಕ್ಕೆ ಕಾರಣವಾಗಿದೆ. ಹೆಚ್ಚಿನ ತೆರಿಗೆ ವಿಧಿಸುತ್ತಿರುವುದಕ್ಕೆ ಹಾರ್ಲೀ ಡೇವಿಡ್ಸನ್ ಕಂಪನಿಯ ಬೈಕ್ ಗಳ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಈ ಹಿಂದೆ ಬಹಿರಂಗವಾಗಿಯೇ ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಲವು ವರ್ಷಗಳ ಹಿಂದೆ ಈ ಬೈಕ್ ಗಳ ಮೇಲೆ ಭಾರತ ಶೇ. 100ರಷ್ಟು ಸುಂಕ ವಿಧಿಸುತ್ತಿತ್ತು. ಬಳಿಕ ಅದನ್ನು ಶೇ. 50ರಷ್ಟು ಕಡಿತಗೊಳಿಸಲಾಯಿತು. ಆದರೂ ಅದೂ ಸಹ ದುಬಾರಿಯಾಗಿದೆ ಎನ್ನುವುದು ಟ್ರಂಪ್ ಅನಿಸಿಕೆಯಾಗಿದೆ.
ಭಾರತದಂತಹ ದೇಶವು ನಮಗೆ ಶೇ. 100ರಷ್ಟು ತೆರಿಗೆ ವಿಧಿಸುತ್ತದೆ. ಅದಕ್ಕೆ ಬದಲಾಗಿ ನಾವು ಅವರಿಗೆ ಏನೂ ಹಾಕಬಾರದೆ? ಅವರು ಬೈಸಿಕಲ್ ಕಳುಹಿಸಿದರೆ ನಾವೂ ಬೈಸಿಕಲ್ ಕಳುಹಿಸುತ್ತೇವೆ. ಭಾರತ ವಿಧಿಸುವಷ್ಟೇ ತೆರಿಗೆಯನ್ನು ನಾವೂ ವಿಧಿಸುತ್ತೇವೆ. ಬ್ರೆಜಿಲ್ ದೇಶವೂ ದುಬಾರಿ ತೆರಿಗೆ ವಿಧಿಸುತ್ತದೆ. ಹಾಗೆಯೇ ಅಮೆರಿಕವೂ ಇನ್ನು ಮುಂದೆ ಅಷ್ಟೇ ತೆರಿಗೆ ವಿಧಿಸಲಿದೆ ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ‘ಅನುರೂಪತೆʼ ಎನ್ನುವುದು ಟ್ರಂಪ್ ಆಡಳಿತದ ಒಂದು ಪ್ರಮುಖ ನೀತಿಯಾಗಿರುತ್ತದೆ. ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರೋ, ನಾವೂ ಕೂಡ ನಿಮ್ಮನ್ನು ಹಾಗೇ ನಡೆಸಿಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.