ತಿರುಗುಬಾಣವಾದ ಮುಡಾ ಪ್ರಕರಣ: ಕುಮಾರಸ್ವಾಮಿ & ಗ್ಯಾಂಗ್ ಎಡವಿದ್ದೆಲ್ಲಿ?

Most read

ಭ್ರಷ್ಟಾಚಾರದ ವಾಸನೆಯೂ ಇಲ್ಲದ, ಸಿದ್ಧರಾಮಯ್ಯ ಅವರ ಪಾತ್ರವೂ ಇಲ್ಲದ ಪ್ರಕರಣ ಇಟ್ಟುಕೊಂಡು ಬಿಜೆಪಿ ಜೆಡಿಎಸ್ ಕೂಟ ಮಾಡಿದ ಕುತಂತ್ರ ಈಗ ಅವರಿಗೇ ತಿರುಗುಬಾಣವಾಗಿದೆ. ಸಿದ್ಧರಾಮಯ್ಯ ಈಗ ಮೊದಲಿಗಿಂತ ಗಟ್ಟಿಯಾಗಿದ್ದಾರೆ- ದಿನೇಶ್‌ ಕುಮಾರ್‌ ಎಸ್‌ ಸಿ

ಮುಡಾ ಪ್ರಕರಣ ಈಗ ಬಿಜೆಪಿ ಮತ್ತು ಜೆಡಿಎಸ್ ಕೂಟಕ್ಕೆ ತಿರುಗುಬಾಣವಾಗುವ ಹಾಗೆ ಕಾಣುತ್ತಿದೆ. ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವ ದೊಡ್ಡ ಷಡ್ಯಂತ್ರ ಈಗ ಸಿದ್ಧರಾಮಯ್ಯ ಅವರನ್ನು ಇನ್ನಷ್ಟು ಬಲಶಾಲಿ ನಾಯಕನನ್ನಾಗಿ ಮಾಡುವ ಹಾಗೆ ಕಾಣುತ್ತಿದೆ. ಇಡೀ ರಾಜ್ಯ ಕಾಂಗ್ರೆಸ್ ಸಿದ್ಧರಾಮಯ್ಯ ಬೆನ್ನಿಗೆ ನಿಂತುಬಿಟ್ಟಿದೆ. ಆ ಪಕ್ಷದ ಹೈಕಮಾಂಡ್ ಕೂಡ ಪ್ರಬಲವಾಗಿ ಸಿದ್ಧರಾಮಯ್ಯ ಬೆಂಬಲಕ್ಕೆ ನಿಂತಿದೆ.

ಜೆಡಿಎಸ್ ನಲ್ಲಿದ್ದಾಗಲೇ ಸಿದ್ಧರಾಮಯ್ಯ ಬೆಳವಣಿಗೆಯನ್ನು ಎಚ್.ಡಿ.ದೇವೇಗೌಡರು ಸಹಿಸಲಿಲ್ಲ. ಹೀಗಾಗಿ ಸಿದ್ಧರಾಮಯ್ಯ ಮತ್ತು ಅವರ ನಿಷ್ಠಾವಂತ ನಾಯಕರು ಜೆಡಿಎಸ್ ತೊರೆದು ಬಂದು ಕಾಂಗ್ರೆಸ್ ಸೇರ್ಪಡೆಯಾದರು. ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದು ಮುಖ್ಯಮಂತ್ರಿಯೂ ಆದರು. ಈಗ ಎರಡನೇ ಅವಧಿಗೂ ಅವರೇ ಮುಖ್ಯಮಂತ್ರಿಯಾದರು. ಇದೆಲ್ಲ ದೇವೇಗೌಡರ ಕುಟುಂಬದ‌ ಕಣ್ಣು ಕುಕ್ಕುವಂತೆ ಮಾಡಿತು. ಹೇಗಾದರೂ ಮಾಡಿ ಸಿದ್ಧರಾಮಯ್ಯ ಅವರನ್ನು ಹಣಿಯುವ ಪ್ರಯತ್ನದ ಭಾಗವಾಗಿಯೇ ಹುಟ್ಟಿಕೊಂಡಿದ್ದು ತಲೆಬುಡವೇ ಇಲ್ಲದ ಮುಡಾ ಪ್ರಕರಣ.

ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಆಪರೇಷನ್ ಕಮಲದಿಂದ ಉರುಳಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಒಂದು ವರ್ಷದಿಂದ ಸುಮ್ಮನಿತ್ತು. ಆದರೆ ಯಾವಾಗ ಬಿಜೆಪಿ+ಜೆಡಿಎಸ್ ಕೂಡಾವಳಿಯಾಯಿತೋ ಸಿದ್ಧರಾಮಯ್ಯ ಅವರ ವಿರುದ್ಧ ಷಡ್ಯಂತ್ರ ಆರಂಭವಾಯಿತು. ಮುಡಾ ಪ್ರಕರಣದಲ್ಲಿ‌ ಸಿದ್ಧರಾಮಯ್ಯ‌ ಅವರನ್ನು ಸಿಲುಕಿಸಿ ರಾಜೀನಾಮೆ ಕೊಡುವಂತೆ ಮಾಡುವುದು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕ್ಷೋಭೆ ಉಂಟು ಮಾಡಿ ಸರ್ಕಾರ ಉರುಳಿಸುವುದು ಈ ಷಡ್ಯಂತ್ರದ ಗುರಿಯಾಗಿತ್ತು. ಆದರೆ ಆಗಿದ್ದೇನು?

ಮೊದಲನೆಯದಾಗಿ ಸಿದ್ಧರಾಮಯ್ಯ ಹಣಿಯಲು ಬಳಸಿಕೊಂಡ ಮುಡಾ ಪ್ರಕರಣದ ಆರೋಪವೇ ದುರ್ಬಲವಾಗಿತ್ತು. ಡಿನೋಟಿಫೈ ಆದ ಜಮೀನನ್ನು ಮುಡಾ ಅಭಿವೃದ್ಧಿ ಪಡಿಸಿ, ಸೈಟು ಹಂಚಿಕೆ ಮಾಡಿ ಯಡವಟ್ಟು ಮಾಡಿಕೊಂಡಿತ್ತು. ಸಹಜವಾಗಿಯೇ ತಮ್ಮ ಜಮೀನಿನ ಬೆಲೆಯನ್ನು ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಮ್ಮ ಕೇಳಿದರು. ನಿಯಮಾವಳಿಗಳಂತೆ ಮೂಡಾ ನಾಲ್ಕನೇ ಒಂದು ಭಾಗದಷ್ಟು, ಅಂದರೆ 14 ಸೈಟುಗಳನ್ನು ಪರಿಹಾರ ರೂಪವಾಗಿ ನೀಡಿತು. ಪಾರ್ವತಮ್ಮನವರ ಜಮೀನು‌ ಅವರಿಗೆ ಸಹೋದರನ ಮೂಲಕ ದಾನವಾಗಿ ಲಭಿಸಿತ್ತು. ಹೀಗಾಗಿ ಅವರ ವಾರಸುದಾರಿಕೆ ವಿಷಯದಲ್ಲೂ ಯಾವುದೇ ವ್ಯಾಜ್ಯ ಇರಲಿಲ್ಲ. ಈ‌ ವ್ಯವಹಾರಗಳು ನಡೆಯುವಾಗ ಸಿದ್ಧರಾಮಯ್ಯ ಅಧಿಕಾರದಲ್ಲೂ ಇರಲಿಲ್ಲ. ತಮ್ಮ‌ ಪ್ರಭಾವವನ್ನು ಬಳಸಿರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ.

ಇಷ್ಟು ಸರಳವಾದ ವ್ಯವಹಾರದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿ-ಜೆಡಿಎಸ್ ಗಳು ಹುಯಿಲೆಬ್ಬಿಸಿದವು. ಇಡೀ ಪ್ರಕರಣದಲ್ಲಿ ಹಣದ ವ್ಯವಹಾರವೇ ಇರಲಿಲ್ಲ. ಲಂಚ ಕೊಡುವ, ಪಡೆಯುವ ಪ್ರಶ್ನೆಯೂ ಇರಲಿಲ್ಲ. ಪಾರ್ವತಮ್ಮ ಪಡೆದ ಸೈಟುಗಳು ಅವರದ್ದೇ ಜಮೀನಿನಲ್ಲಿ ಅಭಿವೃದ್ಧಿ ಪಡಿಸಿದವುಗಳು. ಅವುಗಳನ್ನು ಅವರು ಪರಿಹಾರ ರೂಪದಲ್ಲಿ‌ ಪಡೆದಿದ್ದಾರೆ. ಇದರಲ್ಲಿ ಭ್ರಷ್ಟಾಚಾರದ ವಾಸನೆಯಾದರೂ ಎಲ್ಲಿದೆ?

ಆದರೆ ನಮ್ಮದೇ ರಾಜ್ಯಪಾಲರು ಇದ್ದಾರೆ, ಏನು‌ ಬೇಕಾದರೂ ಮಾಡಬಹುದು ಎಂಬ ದಾರ್ಷ್ಟ್ಯಕ್ಕೆ ಬಿಜೆಪಿ+ಜೆಡಿಎಸ್ ಕೈಹಾಕಿದವು. ಮೊದಲು ಸಿದ್ಧರಾಮಯ್ಯ ಭ್ರಷ್ಟಾಚಾರಿ ಎಂದು ಬಿಂಬಿಸಲು ವಿಧಾನಮಂಡಲದ‌ ಅಧಿವೇಶನದಲ್ಲಿ ಗದ್ದಲ ಎಬ್ಬಿಸಲಾಯಿತು.‌ ನಂತರ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲಾಯಿತು. ಬಿಜೆಪಿ‌ ಪರ ಮಾಧ್ಯಮಗಳ ಭರ್ಜರಿ ಕವರೇಜ್ ನಡುವೆಯೂ ಈ ಪಾದಯಾತ್ರೆ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು. ನಮ್ಮ ಪಾದಯಾತ್ರೆ ಮೈಸೂರು ತಲುಪುವುದರ ಒಳಗೆ ಸಿದ್ಧರಾಮಯ್ಯ ರಾಜಿನಾಮೆ ಕೊಟ್ಟಿರುತ್ತಾರೆ, ನೋಡ್ತಾ ಇರಿ ಎಂದು ಬಿಜೆಪಿ ನಾಯಕರು ಬಡಾಯಿ ಕೊಚ್ಚಿಕೊಂಡರು.

ಈ‌ ನಡುವೆ ಮುಡಾ ಪ್ರಕರಣ ಕುರಿತಂತೆ ಸಿದ್ಧರಾಮಯ್ಯ‌ ಅವರ ವಿರುದ್ಧ ತನಿಖೆಗೆ ಅನುಮತಿ‌ ಕೋರಿ ಒಂದಲ್ಲ, ಎರಡಲ್ಲ ಮೂರು‌ ಖಾಸಗಿ ದೂರುಗಳು ರಾಜಭವನ ತಲುಪಿದವು. ಈ ದೂರುಗಳ ಹಿಂದೆ ಯಾರಿದ್ದಾರೆ ಎಂಬುದೂ‌ ನಿಗೂಢವೇನಲ್ಲ. ಮೊದಲ ದೂರು ಬಂದ‌ ದಿನವೇ‌ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಅವರಿಗೆ ಮಿಂಚಿನ‌ ವೇಗದಲ್ಲಿ ಕಾರಣ ಕೇಳಿ‌ ನೋಟಿಸ್ ನೀಡೇ ಬಿಟ್ಟರು. ಇದೆಲ್ಲವೂ ಮೊದಲೇ ತೀರ್ಮಾನವಾದ ರಾಜಕೀಯ ನಾಟಕ ಎಂದು ಯಾರಾದರೂ ಊಹಿಸಬಹುದಾಗಿತ್ತು.

ಬಿಜೆಪಿ+ಜೆಡಿಎಸ್ ಕೂಟ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ತೋರಬಹುದಾದ ಪ್ರತಿರೋಧದ ಬಗ್ಗೆ ಕೀಳಂದಾಜು ಮಾಡಿತ್ತು. ಅವರ ಊಹೆಗಳನ್ನು ಮೀರಿ ಇಡೀ ಪಕ್ಷ‌ ಎದ್ದು ನಿಂತುಬಿಟ್ಟಿತು. ಸಿದ್ಧರಾಮಯ್ಯ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ಸಭೆ ಸೇರಿ ರಾಜ್ಯಪಾಲರ ನೋಟಿಸ್ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿತು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ‌ ನೀಡುವುದು ಖಚಿತ ಎಂದು ಗೊತ್ತಾಗುತ್ತಿದ್ದಂತೆ ಎಡೆಬಿಡದೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಯಿತು. ಮುಂದಿನ‌ ನಡೆ‌ ಏನಾಗಿರಬೇಕು ಎಂಬುದನ್ನು ನಿಶ್ಚಯಿಸಿಕೊಳ್ಳಲಾಯಿತು. ಅದಕ್ಕೆ ಪೂರಕವಾದ ತಯಾರಿಗಳು‌ ಸದ್ದುಗದ್ದಲವಿಲ್ಲದೆ ನಡೆದವು. ಇಡೀ‌ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೊಂಡಿತು.

ರಾಜ್ಯಪಾಲರು ಸಿದ್ಧರಾಮಯ್ಯ‌ ವಿರುದ್ಧ ತನಿಖೆಗೆ ಅನುಮತಿ‌ ನೀಡಿ ಪತ್ರ ಬರೆಯುತ್ತಿದ್ದಂತೆ ಸರ್ಕಾರ ನಡುಗಿ ಬಿಡುತ್ತದೆ ಎಂದು ಬಿಜೆಪಿ+ಜೆಡಿಎಸ್ ಕೂಟ ಭಾವಿಸಿತ್ತು. ಆದರೆ ಇದಕ್ಕಾಗಿಯೇ ಕಾಯುತ್ತಿದ್ದ ಕಾಂಗ್ರೆಸ್ ದಂಡು ಒಟ್ಟಾಗಿ ರಾಜ್ಯಪಾಲರ ಮೇಲೆ, ಕೇಂದ್ರ ಸರ್ಕಾರದ ಮೇಲೆ, ಕುಮಾರಸ್ವಾಮಿ ಮೇಲೆ ಮುಗಿಬಿದ್ದಿತು. ಎಲ್ಲೆಡೆ ಪ್ರತಿಭಟನೆಗಳು ಆರಂಭವಾದವು. ಕುರುಬ ಸಮುದಾಯದ ಸಂಘಟನೆಗಳಂತೂ ರೊಚ್ಚಿಗೆದ್ದವು. ಮಲಗಿದ್ದ ಅಹಿಂದ ಸಂಘಟನೆಗಳು ಎದ್ದು ನಿಂತವು.

ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿ ಪದವಿಗೆ ಮಗ್ಗುಲ ಮುಳ್ಳು ಎಂದೇ ಬಿಂಬಿಸಲ್ಪಡುತ್ತಿದ್ದ ಡಿ.ಕೆ.ಶಿವಕುಮಾರ್ ನಾನು‌ ಬಂಡೆಯಂತೆ ಸಿದ್ಧರಾಮಯ್ಯ ಜೊತೆ ನಿಲ್ಲುತ್ತೇನೆ. ಮುನಿಸಿಕೊಂಡು ದೂರ ಉಳಿದಿದ್ದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸಹ ಪಕ್ಷದ ವೇದಿಕೆಗೆ ಬಂದು ಸಿದ್ಧರಾಮಯ್ಯ ಪರ ಬ್ಯಾಟ್ ಬೀಸಿದರು. ರಾಜ್ಯಪಾಲರ ಅನುಮತಿಯ ನಂತರ ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡನೂ ಸಿದ್ಧರಾಮಯ್ಯ ವಿರುದ್ಧ ಅಪಸ್ವರ ತೆಗೆಯಲಿಲ್ಲ. ಯಾವ ಸಿದ್ಧರಾಮಯ್ಯನವರನ್ನು ಭ್ರಷ್ಟಾಚಾರಿ ಎಂದು ಹಣೆಪಟ್ಟಿ ಹಚ್ಚಿ ದುರ್ಬಲಗೊಳಿಸಲು ಅವರ ವಿರೋಧಿಗಳು ಹುನ್ನಾರ ನಡೆಸಿದರೋ, ಅವರಿಗೇ ಗೊತ್ತಿಲ್ಲದಂತೆ ಸಿದ್ಧರಾಮಯ್ಯ ಅವರ ಶಕ್ತಿಯನ್ನು ಹೆಚ್ಚಿಸಿಬಿಟ್ಟರು! ಕಾಂಗ್ರೆಸ್ ಪಕ್ಷದ ಸಣ್ಣಪುಟ್ಟ ಒಳಜಗಳ, ಭಿನ್ನಮತಗಳನ್ನೂ ಇಲ್ಲದಂತೆ ಮಾಡಿಬಿಟ್ಟರು!

ಹೈಕೋರ್ಟ್ ನಲ್ಲಿ ಅಭಿಶೇಕ್‌ ಮನು ಸಿಂಘ್ವಿ

ರಾಜ್ಯಪಾಲರ ಪೂರ್ವಾನುಮತಿಯಲ್ಲಿ ಇರುವ ಗಂಭೀರ ಕಾನೂನು‌ ಲೋಪಗಳನ್ನು ಇಟ್ಟುಕೊಂಡು ಸಿದ್ಧರಾಮಯ್ಯ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅಭಿಷೇಕ್ ಸಿಂಗ್ವಿ, ಕಪಿಲ್ ಸಿಬಲ್ ರಂಥ ಘಟನಾನುಘಟಿ ವಕೀಲರ ದಂಡು ಸಿದ್ಧರಾಮಯ್ಯ ಪರ ಕಾನೂನು ಬಡಿದಾಟಕ್ಕೆ ನಿಂತಿದೆ. ಜನಪ್ರತಿನಿಧಿಗಳ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17 (A) ಪ್ರಕಾರ ಪೊಲೀಸ್ ಅಧಿಕಾರಿಗಳು, ತನಿಖಾ ಸಂಸ್ಥೆಗಳಷ್ಟೇ ಪ್ರಕರಣ ದಾಖಲಿಸಲು ಪೂರ್ವಾನುಮತಿ ಕೋರಿದಾಗ ಮಾತ್ರ ರಾಜ್ಯಪಾಲರು ಅದನ್ನು ಮಾನ್ಯ ಮಾಡಬಹುದು. ಇದೇ ಅಂಶ ಈಗ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇದೆ. ಇದಲ್ಲದೆ, ರಾಜ್ಯಪಾಲರ ಅನುಮತಿ ಪತ್ರದಲ್ಲಿ ಇರುವ ಗಂಭೀರ ಕಾನೂನು ದೋಷಗಳು ಸಹ ಅವರಿಗೆ ವರದಾನವಾಗುವ ಸಾಧ್ಯತೆ ಇದೆ.

ತಮ್ಮ ಮೇಲೆ ಪ್ರಕರಣ ದಾಖಲಿಸಲು ರಾಜ್ಯಪಾಲರು ನೀಡಿರುವ ಪೂರ್ವಾನುಮತಿಯನ್ನು ರದ್ದುಪಡಿಸಬೇಕು ಎಂದು ಸಿದ್ಧರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಆಗಸ್ಟ್ 29ರಂದು ನಡೆಯಲಿದೆ. ಅಲ್ಲಿಯವರೆಗೆ ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದೂರುಗಳ ಕುರಿತು ಯಾವುದೇ ವಿಚಾರಣೆ, ಆದೇಶ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಇದು ಸಿದ್ಧರಾಮಯ್ಯ ಅವರಿಗೆ ದೊರೆತ ಮೊದಲ ಜಯ.

ಭ್ರಷ್ಟಾಚಾರದ ವಾಸನೆಯೂ ಇಲ್ಲದ, ಸಿದ್ಧರಾಮಯ್ಯ ಅವರ ಪಾತ್ರವೂ ಇಲ್ಲದ ಪ್ರಕರಣ ಇಟ್ಟುಕೊಂಡು ಬಿಜೆಪಿ ಜೆಡಿಎಸ್ ಕೂಟ ಮಾಡಿದ ಕುತಂತ್ರ ಈಗ ಅವರಿಗೇ ತಿರುಗುಬಾಣವಾಗಿದೆ. ಸಿದ್ಧರಾಮಯ್ಯ ಈಗ ಮೊದಲಿಗಿಂತ ಗಟ್ಟಿಯಾಗಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ಹೇಳಿದಂತೆ ಬಿಜೆಪಿ+ಜೆಡಿಎಸ್ ಮುಖಂಡರ ಮೇಲಿನ ಹಳೆಯ ಭ್ರಷ್ಟಾಚಾರದ ಪ್ರಕರಣಗಳಿಗೆ ಮರುಜೀವ ಬಂದಲ್ಲಿ ಈ ಪಕ್ಷಗಳ ನಾಯಕರು ಪಶ್ಚಾತ್ತಾಪ ಪಡುವ ದಿನಗಳು ಬರಲಿವೆ.

ದಿನೇಶ್ ಕುಮಾರ್ ಎಸ್.ಸಿ.

ಇದನ್ನೂ ಓದಿ- ಮುಡಾ ಪ್ರಕರಣ | ಶೂದ್ರ ಶಕ್ತಿಯ ರಾಜಕೀಯ ಮುನ್ನಡೆ  ಹತ್ತಿಕ್ಕುವ  ಮಹಾಪಿತೂರಿ

More articles

Latest article