ಬೆಂಗಳೂರು : ಮಂಗಳೂರಿನಲ್ಲಿ ಇಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತುಳು ನುಡಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ನಿರ್ಧಾರ ಕೈಗೊಂಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.
ಐದು ಪ್ರಮುಖ ದ್ರಾವಿಡ ನುಡಿಗಳಲ್ಲಿ ಒಂದಾದ ತುಳು ಅಧಿಕೃತ ಸ್ಥಾನಮಾನ ಪಡೆದಿರುವುದು ಸಂತಸದ ವಿಚಾರ. ಕನ್ನಡದ ಸೋದರ ನುಡಿಯಾದ ತುಳು ನುಡಿಯ ಬೆಳವಣಿಗೆ, ಉಳಿವು ಮತ್ತು ಬಳಕೆಗೆ ಈ ನಿರ್ಧಾರ ಸಹಕಾರಿಯಾಗಲಿದೆ.
ಇಷ್ಟಕ್ಕೇ ಇದು ಸೀಮಿತವಾಗಬಾರದು. ತುಳು ನುಡಿಯನ್ನು ಭಾರತ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬೇಕು.
ತುಳು ನುಡಿಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ದನಿಯೆತ್ತುತ್ತಾ ಬಂದಿದೆ. ಈ ಸಂಬಂಧ ಹಿಂದೆ ಭಾರತ ಸರ್ಕಾರದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ನಾಡಿನ ವಿವಿಧ ವಿಚಾರಗಳ ಕುರಿತಾಗಿ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಲಾಗಿತ್ತು. ಆಗ ಸಂಸ್ಕೃತಿ ಸಚಿವರಾಗಿದ್ದ ಅಂಬಿಕಾ ಸೋನಿಯವರನ್ನೂ ಸಹ ನಾವು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿಯೂ ಈ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ತುಳು ನುಡಿಗೆ ಸಂವಿಧಾನಾತ್ಮಕ ಮಾನ್ಯತೆ ದೊರೆಯುವಂತೆ ಅದನ್ನು ಭಾರತ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ನಾನು ಮನವಿ ಮಾಡಿದ್ದಾರೆ.
ದೇಶದ ಪ್ರತಿಯೊಂದು ನುಡಿಗೂ ತನ್ನದೇ ಆದ ಪರಂಪರೆ, ಇತಿಹಾಸ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಎಲ್ಲ ನುಡಿಗಳನ್ನು ಉಳಿಸಿ ಬೆಳೆಸುವುದು ನಮ್ಮ ಹೊಣೆಗಾರಿಕೆಯಾಗಿದೆ. ವಿಶೇಷವಾಗಿ ದ್ರಾವಿಡ ನುಡಿಗಳನ್ನು ಮಾತನಾಡುವ ಜನರು ಒಂದಾಗಿ ತಮ್ಮ ನುಡಿ ಮತ್ತು ಸಂಸ್ಕೃತಿಯ ಉಳಿವಿಗಾಗಿ ಕೈಜೋಡಿಸಬೇಕಿದೆ ಎಂದಿದ್ದಾರೆ.

