ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಗುರುವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಭೆ ನಡೆಯಿತು. ಈ ಸಭೆಯು ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸರ್ ಎಂ ವಿಶ್ವೇಶ್ವರಯ್ಯ, ಕೆ ಎಸ್ ನರಸಿಂಹಸ್ವಾಮಿ ಮೊದಲಾದ ಸಾಹಿತಿಗಳನ್ನು ನೆನಪು ಮಾಡಿಕೊಂಡರು. ಆದರೆ ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆಯ ಏಳಿಗೆಗೆ ಶ್ರಮಿಸಿದ ಟಿಪ್ಪು ಸುಲ್ತಾನ್ ಅವರ ಹೆಸರನ್ನು ಪ್ರಸ್ಥಾಪಿಸಲೇ ಇಲ್ಲ.
ಸಭೆಯಲ್ಲಿ ಹಾಜರಿದ್ದ ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಪಿ.ಡಿ. ತಿಮ್ಮಪ್ಪ ಜೋಶಿ ಅವರ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಟಿಪ್ಪು ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದರು.
ಅಧ್ಯಕ್ಷರ ಈ ಧೋರಣೆ ಸರಿಯಲ್ಲ. ಟಿಪ್ಪು ಸುಲ್ತಾನ್ ಕಾರಣಕ್ಕೆ ಶ್ರೀರಂಗಪಟ್ಟಣ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಅಂತಹ ವ್ಯಕ್ತಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಏಕೆ ಎಂದು ತಿಮ್ಮಪ್ಪ ಜೋರಾಗಿಯೇ ಪ್ರಶ್ನಿಸಿದರು.
ಇವರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಮಹೇಶ ಜೋಶಿ ನೀವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಜತೆ ಮಾತನಾಡುತ್ತಿದ್ದೀರಿ ಎಂಬ ಪರಿಜ್ಞಾನ ಇರಲಿ. ಗೌರವದಿಂದ ಕೇಳಿದರೆ ನಾನೂ ಗೌರವದಿಂದ ಉತ್ತರ ಕೊಡುತ್ತೇನೆ. ನನ್ನ ಮುತ್ತಾತ ಸಂತ ಶಿಶುನಾಳ ಷರೀಫರ ಶಿಷ್ಯ ಎನ್ನುವುದು ಗೊತ್ತಿರಲಿ ಎಂದು ಉಡಾಫೆ ಉತ್ತರ ನೀಡಿದ ಪ್ರಸಂಗ ನಡೆಯಿತು.