Thursday, December 12, 2024

ಈ ಮೊಲೆಗಳೇ ಬೇಡ ಎಂಬ ಒಳಮನದ ತಳಮಳ

Most read

ನಾನಂತೂ ಆ ದಿನದಿಂದ ಅದೆಷ್ಟೋ ತಿಂಗಳುಗಳ ಕಾಲ ಎಲ್ಲಿ ಹೋದರೂ ವೇಲಿನಿಂದ ಸ್ವೆಟರ್,  ಶಾಲುಗಳಿಂದ ನನ್ನ ಎದೆಯನ್ನ ಮುಚ್ಚಿಕೊಳ್ಳುವುದನ್ನ ಅಭ್ಯಾಸವಾಗಿ ಮಾಡಿಕೊಂಡಿದ್ದೆ. ಅದೆಷ್ಟರ ಮಟ್ಟಿಗೆ ಅಂದರೆ ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ ಅಷ್ಟೇ ಅಲ್ಲ ಸ್ವೆಟರ್ ಹಾಕಿಯೇ ಮಲಗುವುದೂ ರೂಢಿಯಾಗಿತ್ತು. ನನ್ನ ದೇಹದ ಮೇಲೆ ನನಗೇ ವಿಪರೀತ ಸಿಟ್ಟು ಅಸಹನೆ ಸೃಷ್ಟಿಯಾಗಿತ್ತು- ಶೃಂಗಶ್ರೀ ಟಿ ಎಸ್‌, ಉಪನ್ಯಾಸಕಿ.

ಇತ್ತೀಚೆಗೆ ಬಾರಿ ಸುದ್ದಿಯಲ್ಲಿರುವಂತ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ತುಣುಕನ್ನ ಗಮನಿಸಿದೆ. ನಿವೇದಿತಾ ಗೌಡ ಅವರು ತಮ್ಮದೊಂದು ವಿಡಿಯೋ ಶೇರ್ ಮಾಡಿದ್ದಾರೆ. ನಾನಿಲ್ಲಿ ಅವರ ವಿಡಿಯೋದಲ್ಲಿನ (ರೀಲ್ಸ್) ಅವರ ನಟನೆಯ ಬಗ್ಗೆ ಗಮನಕೊಡದೆ ಆ ವಿಡಿಯೋಗೆ ಬಂದ ಕಾಮೆಂಟ್ ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ.

ಹೆಣ್ಣು ಮತ್ತು ಹೆಣ್ಣಿನ ದೇಹವನ್ನ ಭೋಗದ ವಸ್ತುವಾಗಿ ಬರೀ ಲೈಂಗಿಕ ಸುಖವನ್ನಷ್ಟೇ ಕೊಡಬಲ್ಲ ವಸ್ತುವೆಂದು ತಿಳಿದ ಕೆಲವು ತೀರಾ ಕೆಟ್ಟ ಹುಳುಗಳು ಮಾಡಿರುವಂತ ಕಾಮೆಂಟ್‌ಗಳು ಮನಸ್ಸಿಗೆ ಬಹಳ ಘಾಸಿ ಮಾಡಿವೆ. ಅದೆಷ್ಟು ವಿಕೃತ ಕಾಮಿಗಳಿದ್ದಾರೆ ಅನ್ನುವ ಸತ್ಯ ನೋವುಂಟು ಮಾಡಿದೆ. ನಿವೇದಿತಾ ಗೌಡ ಅವರ ದೇಹದ ಕುರಿತು ಅವರ ಮೊಲೆಗಳ ಗಾತ್ರದ ಕುರಿತು ಬಂದಂತಹ ಕೆಲವು ಕಾಮೆಂಟ್ ಗಳನ್ನ ನಾನಿಲ್ಲಿ ಹಾಕಿದ್ದೇನೆ.

ದಿನಕ್ಕ ಎರಡ ಲೀಟರ್ ಹಾಲು ಕೊಡುತ್ತಾ ಈ ಎಮ್ಮಿ, ಸರ್ ಅದು ಗೊಡ್ಡಎಮ್ಮಿ ಅದು ಇನ್ನ ಕರು ಹಾಕಿಲ್ಲ 😀😀😀,

ಮಾವಿನ ಹಣ್ಣಿನಂತೆ ಇದ್ವೋ ಸಣ್ಣಕಿ ಇದ್ದಾಗ ಇವಾಗ ಕಲ್ಲಂಗ್ರಿ ಕರ್ಬುಜ ತರ ಆಗ್ಯಾವ 🤤🤤, 

ನೋಡ್ತಾ ಇರ್ಬೇಕು ಅನ್ಸುತ್ತೆ, ಸಿಮೆ ಹಸ 10 ಲಿಟರ್ ಬರುತ್ತದೆ 😀,

ಹೂ ತರ ಇದ್ಲು, ಹಕೋಸ್ ತರ ಆಗ್ಬಿಟ್ಟಿದಾಳೆ ,

ನಾಟಿ ಚೆನ್ನಾಗಿ ಅಗಿದೆ, ಮೋಸ್ಟ್ಲಿ ನಿನಗೆ ಸ್ಥನ ಕ್ಯಾನ್ಸರ್ ಇದಿಯೇನೋ ದಯವಿಟ್ಟು ಒಮ್ಮೆ ಹಾಸ್ಪಿಟಲ್ ಹೋಗಿ ಪರೀಕ್ಷೆ ಮಾಡಿಸಿ ನೀವಿ, 

ಇದೇನಿದು ಮಲೆಗಳು ಸಾಕಾಗಲ್ಲ, ಈ ಶೆಟ್ರು ಎಂತಾ ಕಲೆಗಾರ ಅಂದ್ರೆ..ಕಲ್ಲನ್ನು ಶೀಲಾಬಲಿಕೆ ಮಾಡ್ತಾನೇ

ಉದಾ :-ಟೆನ್ನಿಸ್ ಬಾಲನ್ನು ಫುಟ್ಬಾಲ್ ಮಾಡಿಲ್ವಾ ಹಾಗೆ 😝,

ಯಪ್ಪಾ ಏನಿದು 🤔… ಯಾವ್ ಗೊಬ್ಬರ ಹಾಕ್ತಿದಿಯ ತಾಯಿ.. ಯೂರಿಯಾ or. D. A. P. Or  ಕುರಿ ಗೊಬ್ಬರ,

ಅವಳ ಆ ಎದೆ ಹಾಲೆ ಅವಳ ಆಸ್ತಿ, ಯಾವ ತಳಿ.ಹಸು.ಇದು…ಇಷ್ಟು…ದಪ್ಪ.ಇದೆ, ಮೊಲೆ ನೋಡರೋ ಮೊಲೆ 🤣

10 ಲಿಟರ್ ಗಿಂತಾ ಜಾಸ್ತಿನೇ ಕೊಡುತ್ತೆ 🤣, ಕೆಳಗಿಂದು  ತೊರಿಸಿ ಬಿಡು, ನಿಮ್ಮಲ್ಲಿ ಹಾಲು ಕುಡಿಬೇಕು ಅಂತ ಬಾರಿ ಆಸೆ, ಹಾಲು ರೇಟ್ ಜಾಸ್ತಿ ಅಗಿದು ಇದಕೆ ಅನಿಸುತ್ತೆ ಟೆಂಕು ತುಂಬಿದ್ದೆ, ಗಂಡನ್ ಬಿಟ್ಟಮೇಲೆ ಮೊಲೆ ಚನ್ನಾಗಿ ದಪ್ಪ ಆಗಿದೆ.

ಈ ರೀತಿಯ ಇನ್ನೂ ಬಹಳ ಕೆಟ್ಟದಾದ ಕಾಮೆಂಟ್ ಪೋಸ್ಟ್ ಮಾಡಿರುವ ಜನರ ಮನಸ್ಥಿತಿ ಕಂಡು ಅಸಹ್ಯ ಅನಿಸುತ್ತಿದೆ. ವಿಕೃತವಾಗಿ ಕಾಮೆಂಟ್ ಮಾಡುವುದೇ ಇಲ್ಲಿ ಕೆಲವರಿಗೆ ಚಟವಾಗಿದೆ. ಸ್ವಸ್ಥ ಸಮಾಜದ ಕನಸು ಕಾಣುವ ನಮಗೆ ಇಂತಹ ಕೆಟ್ಟು ನಾರುತ್ತಿರುವ ಜನರ, ಮನುಷ್ಯತ್ವವನ್ನ ಕಳೆದುಕೊಂಡು ಸಂವೇದನಾಶೀಲತೆಯನ್ನು ಮರೆತು ಹುಳಗಳಂತೆ ಬದುಕುತ್ತಿರುವ ಸಮಾಜವನ್ನ ನೋಡಿ ಸಂಕಟವಾಗುತ್ತಿದೆ.

ಇನ್ನೊಬ್ಬರ ದೇಹದ ಭಾಗಗಳ ಕುರಿತು ಹೊಲಸು ನುಡಿಯುವ ಜನರಿಂದ ಚೆಂದದ ಸಮಾಜವನ್ನ ಊಹಿಸುವುದಕ್ಕಾದರೂ ಹೇಗೆ ಸಾಧ್ಯ? ಅವಳು ನಟಿಯಾದರೂ ಅಷ್ಟೇ ಸಾಮಾನ್ಯ ಹೆಣ್ಣಾದರೂ ಅಷ್ಟೇ. ಈ ವಿಕೃತ ಕಾಮಿಗಳಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಹೆಣ್ಣಿನ ದೇಹದ ಮೇಲೆ ಅವಳ ಅಂಗಾಂಗಗಳ ಮೇಲೆ ಅತ್ಯಾಚಾರ ದೈಹಿಕವಾಗಷ್ಟೇ ಅಲ್ಲ ಮಾನಸಿಕವಾಗಿಯೂ ಪ್ರತೀ ಕ್ಷಣವೂ ನಡೆಯುತ್ತಲೇ ಇರುತ್ತದೆ. ಈ ಸಂಗತಿಗೆ ಸಂಬಂಧಿಸಿದಂತೆ ನನ್ನದೊಂದು ಅನುಭವವನ್ನ ಹಂಚಿಕೊಳ್ಳುತ್ತೆನೆ.

ಯಾವತ್ತೂ ತನ್ನೂರನ್ನ ಬಿಟ್ಟು ಹೊರ ಜಗತ್ತಿನ ಪರಿಚಯವೇ ಇಲ್ಲದ ನನಗೆ ಮತ್ತು ನನ್ನ ಗೆಳತಿಗೆ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗೆಗೆ ಬಂದದ್ದು ದೊಡ್ಡ ಸಾಹಸವೇ ಸರಿ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಾಡಿ ಬೇಡಿ ಶಿವಮೊಗ್ಗದ ಕಾಲೇಜನ್ನ ಸೇರಿದ್ದು ಜಗತ್ತು ಗೆದ್ದಷ್ಟೇ ಖುಷಿ ಮತ್ತು ಸಂಭ್ರಮ. ಆದರೆ ಶಿವಮೊಗ್ಗ ನಗರದ ಪರಿಚಯವಾಗುತ್ತಿದ್ದಂತೆ ಅದೆಷ್ಟೋ ಸಂಗತಿಗಳು ನಮ್ಮನ್ನು ದಿಗ್ಭ್ರಮೆಗೊಳಿಸಿದ್ದು ಸುಳ್ಳಲ್ಲ.

ಎಲ್ಲೋರಾದಲ್ಲಿರುವ ಯಕ್ಷಿ

ನಾವು ಕಾಲೇಜು ಮುಗಿಸಿದ ತಕ್ಷಣ ಡಿವಿಎಸ್ ಕಾಲೇಜಿನಿಂದ ಶಿವಮೊಗ್ಗಾದ ಬಸ್ ನಿಲ್ದಾಣಕ್ಕೆ ಹಣದ ಸಮಸ್ಯೆಗಳಿಂದಾಗಿ  ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಬಸ್ ಮಿಸ್ ಆಗುತ್ತದೆ ಎಂಬ ಗಾಬರಿಯಲ್ಲಿ ನಾವು ನಡೆದದ್ದಕ್ಕಿಂತ ಓಡಿದ್ದೇ ಹೆಚ್ಚು. ಆ ಓಡುವ ದಾರಿಯಲ್ಲಿ ನಮಗೊಂದು ದಿನ ಒಬ್ಬ ಎರಡೂ ಕಾಲುಗಳು ಇರದ ಭಿಕ್ಷುಕ ಎದುರಾಗುತ್ತಾನೆ. ಬಹಳ ಕನಿಕರದಿಂದ ದುಡ್ಡು ಕೊಡಲು ಹೋದ ನಮಗೆ ಬಹಳ ದೂರದಿಂದ ಓಡಿ ಓಡಿ ಬರುತ್ತಿದ್ದ ನಮ್ಮನ್ನ ಗಮನಿಸುತ್ತಲೇ ಕೂತಿದ್ದ ಅವನು ಕೈ ಚಾಚುತ್ತಾ ನನ್ನ ಗೆಳತಿಯ ಎದೆ ಭಾಗವನ್ನ ನೋಡಿ ಎಷ್ಟು ದೊಡ್ಡ ಮೊಲೆ ಎಷ್ಟು ದೊಡ್ಡ ಮೊಲೆ ಅಂತ ಬಾಯಿ ಬಿಟ್ಟುಕೊಂಡು ಕಣ್ಣುಗಳನ್ನ ದೊಡ್ಡದಾಗಿ ಬಿಡುತ್ತಾ ಕೆಟ್ಟದಾದ ನಗುವನ್ನ ತೋರುತ್ತಾ ಅಸಹ್ಯವಾಗಿ ವರ್ತಿಸಿದ ಅವನ ನಡವಳಿಕೆಗಳು ಮತ್ತು ಮಾತುಗಳು ಮೈಯೆಲ್ಲಾ ಉರಿದು ಹೋಗುವಷ್ಟು ಸಿಟ್ಟು ಆಕ್ರೋಶಕ್ಕೆ ಗುರಿಮಾಡಿಕೊಟ್ಟಿತ್ತು. ಅವನ ಮೇಲೆ ಅಸಹ್ಯ ಭಾವ ಮೂಡಿ ಅವನನ್ನು ಕಡಿದು ಹಾಕುವಷ್ಟು ಕೋಪ ತರಿಸಿತ್ತು. ಈಗಲೂ ಈ ಸಂಗತಿ ಬಹಳಷ್ಟು ಕಾಡುತ್ತದೆ.

ಬಹಳ ಕಟ್ಟುಪಾಡಿನ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ನನ್ನ ಗೆಳತಿಗೆ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಆಕೆಯನ್ನು ಶಿವಮೊಗ್ಗೆಗೆ ಕಳಿಸಿದ್ದೇ ಬಹಳ ದೊಡ್ಡ ವಿಚಾರ. ಅದರಲ್ಲೂ ಈ ವಿಷಯವನ್ನು ಆ ವ್ಯಕ್ತಿ ಅವಳನ್ನುದ್ದೇಶಿಸಿ ಮಾತನಾಡಿದ ಮಾತುಗಳನ್ನ ಮನೆಯಲ್ಲಿ ಹೇಳಿಕೊಂಡ ಮೇಲೆ ಅವಳನ್ನ ಒಂದು ವಾರದ ಮಟ್ಟಿಗೆ ಕಾಲೇಜಿನ ಮೆಟ್ಟಿಲೇ ಹತ್ತಿಸಿರಲಿಲ್ಲ!.

ನಾನಂತೂ ಆ ದಿನದಿಂದ ಅದೆಷ್ಟೋ ತಿಂಗಳುಗಳ ಕಾಲ ಎಲ್ಲಿ ಹೋದರೂ ವೇಲಿನಿಂದ ಸ್ವೆಟರ್,  ಶಾಲುಗಳಿಂದ ನನ್ನ ಎದೆಯನ್ನ ಮುಚ್ಚಿಕೊಳ್ಳುವದನ್ನ ಅಭ್ಯಾಸವಾಗಿ ಮಾಡಿಕೊಂಡಿದ್ದೆ. ಅದೆಷ್ಟರ ಮಟ್ಟಿಗೆ ಅಂದರೆ ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ ಅಷ್ಟೇ ಅಲ್ಲ ಸ್ವೆಟರ್ ಹಾಕಿಯೇ ಮಲಗುವುದೂ ರೂಢಿಯಾಗಿತ್ತು. ನನ್ನ ದೇಹದ ಮೇಲೆ ನನಗೇ ವಿಪರೀತ ಸಿಟ್ಟು ಅಸಹನೆ ಸೃಷ್ಟಿಯಾಗಿತ್ತು. ಈ ಸ್ತನಗಳೇ ಬೇಡ ಅನ್ನುವಷ್ಟರ ಮಟ್ಟಿಗೆ ಹಿಂಸೆ ಸೃಷ್ಟಿಯಾಗಿತ್ತು. ಆ ತಳಮಳ ಹಿಂಸೆ ನೋವನ್ನು ಯಾರ ಬಳಿಯೂ ಹಂಚಿಕೊಳ್ಳಲೂ ಆಗದೆ ತನ್ನೊಳಗೂ ಇಟ್ಟುಕೊಳ್ಳಲಾಗದೆ ಒದ್ದಾಡುವ ಪರಿಯಿದೆಯಲ್ಲ ಅದು ಹೇಳತೀರದು.

ಇದೇ ರೀತಿಯ ಅನುಭವವನ್ನ ಜನಪ್ರಿಯ ಲೇಖಕಿ ಕಮಲಾ ದಾಸ್ ತನ್ನ ‘An Introduction’ ಕವಿತೆಯ ಲ್ಲಿ, ತಾನು 15ನೇ ವರುಷದಲ್ಲಿರುವಾಗಲೇ ಮದುವೆಯಾದ ನಂತರ ತನ್ನ ಕೂದಲನ್ನು ಕತ್ತರಿಸಿಕೊಂಡು ಗಂಡಿನಂತೆ ಶರ್ಟು ಪ್ಯಾಂಟುಗಳನ್ನ ತೊಟ್ಟು ಗಂಡು ಹುಡುಗನಾಗಿ ಬದಲಾಗುವ, ತನ್ನ ಹೆಣ್ತನವನ್ನೇ ಬೇಡವೆಂದು ಬರೆದುಕೊಳ್ಳುವ ಲೇಖಕಿಯ ಅನುಭವ, ಅವಳ ಸಂಕಟಗಳು, ಹಿಂಸೆ, ನೋವಿನ ಬದುಕು ಅವಳದು ಮಾತ್ರವಲ್ಲ ನನ್ನದೂ ಆಗಿತ್ತು. ಅದೆಷ್ಟೋ ಹೆಣ್ಣುಮಕ್ಕಳದ್ದೂ ಕೂಡ.

ಇದೇ ಸಂಗತಿಗೆ ಸಂಬಂಧಿಸಿದಂತೆ.

ಮೊಲೆ ಇಸ್ತ್ರಿ ಮಾಡುವಿಕೆ

ಮೊಲೆ ಇಸ್ತ್ರಿ ಮಾಡುವಿಕೆ ಅಥವಾ ಮೊಲೆ ಚಪ್ಪಟೆಗೊಳಿಸುವಿಕೆ ಎಂದೂ ಕರೆಯುವ ಒಂದು ಸಾಂಸ್ಕೃತಿಕ ಆಚರಣೆಯಿದೆ. ಹರೆಯದ ಹುಡುಗಿಯ ಮೊಲೆಗಳನ್ನು ಗಟ್ಟಿಯಾದ ಅಥವಾ ಬಿಸಿಮಾಡಿದ ವಸ್ತುಗಳನ್ನು ಬಳಸಿ ಅವುಗಳ ಬೆಳವಣಿಗೆಯನ್ನು ನಿಲ್ಲಿಸಲು ಅಥವಾ ಕಣ್ಮರೆಯಾಗುವಂತೆ ಮಾಡಲು ಪ್ರಯತ್ನಿಸುವುದು ಮತ್ತು ಮಸಾಜ್ ಮಾಡುವುದು.ಸಾಂಪ್ರದಾಯಿಕವಾಗಿ ತಾಯಿ, ಅಜ್ಜಿ, ಚಿಕ್ಕಮ್ಮ, ಅಥವಾ ಮಹಿಳಾ ಪಾಲಕರಿಂದ ಈ ಆಚರಣೆಯನ್ನ ನೆರವೇರಿಸಲಾಗುತ್ತದೆ. ಹದಿಹರೆಯದ ಹೆಣ್ಣುಮಕ್ಕಳು ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಿಂದ ರಕ್ಷಿಸಲು ಈ ಆಚರಣೆಯನ್ನ ಪಾಲಿಸಲಾಗುತ್ತಿದೆ!.

ಬ್ರೆಸ್ಟ್ ಐರ್ನಿಂಗ್ ಅಭ್ಯಾಸವು ನೈಜೀರಿಯಾ, ಟೋಗೋ, ಗಿನಿ ಗಣರಾಜ್ಯ, ಕೊಟೆ ದಿವೋರ್, ಕೇನಿಯಾ ಮತ್ತು ಜಿಂಬಾಬ್ವೆಗಳಲ್ಲಿ ಚಾಲನೆಯಲ್ಲಿದ್ದದ್ದು ಎಂದು ದಾಖಲಿಸಲಾಗಿದೆ. ಜೊತೆಗೆ, ಈ ಅಭ್ಯಾಸವು ಬರ್ಕಿನಾ ಫಾಸೋ, ಕೇಂದ್ರ ಆಫ್ರಿಕಾ ಗಣರಾಜ್ಯ (CAR), ಬೆನಿನ್ ಮತ್ತು ಗಿನಿ-ಕೋನಾಕ್ ದೇಶಗಳಲ್ಲಿ ಇತರ ಆಫ್ರಿಕಾದ ದೇಶಗಳಲ್ಲಿ ಕಂಡುಬಂದಿದೆ. ದಕ್ಷಿಣ ಆಫ್ರಿಕೆಯಲ್ಲಿ ಬ್ರೆಸ್ಟ್ “ಸ್ವೀಪಿಂಗ್” ಎಂದು ವರದಿಯಾಗಿರುವುದು ಕಂಡುಬಂದಿದೆ. ಕ್ಯಾಮ್ರೂನಿನ 200 ಎತ್ನಿಕ್ ಗುಂಪುಗಳಲ್ಲಿ ಬ್ರೆಸ್ಟ್ ಐರ್ನಿಂಗ್ ಆಚರಣೆಯಾಗಿ ಬಂದಿದೆ. 2006 ರಲ್ಲಿ ಜರ್ಮನ್ ಅಭಿವೃದ್ಧಿ ಏಜೆನ್ಸಿ GIZ ನಡೆಸಿದ 5,000 ಕ್ಕೂ ಹೆಚ್ಚು ಕ್ಯಾಮ್ರೂನಿಯನ್ ಹುಡುಗಿಯರು ಮತ್ತು ಮಹಿಳೆಯರನ್ನು ಕೇಂದ್ರೀಕರಿಸಿ ಮಾಡಿದ ಸಮೀಕ್ಷೆಯಲ್ಲಿ, ಸುಮಾರು ನಾಲ್ಕು ಮಿಲಿಯನ್ ಹುಡುಗಿಯರು ಬ್ರೆಸ್ಟ್ ಐರ್ನಿಂಗ್‌ಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂತಹ ಎಲ್ಲಾ ಹಿಂಸಾತ್ಮಕವಾದ ಆಚರಣೆಗಳ ಹಿಂದಿರುವ ಕಾರಣ ಹೆಣ್ಣಿನ ರಕ್ಷಣೆ ಮತ್ತು ಅವಳನ್ನ ರಕ್ಷಣೆಯ ಹೆಸರಿನಲ್ಲಿ ಹಿಂಸಿಸುವುದೇ ಆಗಿದೆ. ಹೆಣ್ಣಿನ ದೇಹವೇ ಇಲ್ಲಿ ಚರ್ಚೆಯ ವಿಷಯ, ಅವಳ ದೇಹವೇ ಇಲ್ಲಿ ಕಾಮದ ವಸ್ತು, ಅವಳನ್ನ ಲೈಂಗಿಕವಾಗಿ, ರಾಜಕೀಯವಾಗಿ ಸಾಂಸ್ಕೃತಿಕವಾಗಿ ಕಟ್ಟಿಹಾಕುವ ದಾರಿ.

ಜಗತ್ತು ಎಷ್ಟೇ ಬದಲಾದರೂ, ಎಷ್ಟೇ ಆವಿಷ್ಕಾರಗಳು ಸಂಶೋಧನೆಗಳು ಬದಲಾವಣೆಗಳು ಆದರೂ ಮನುಷ್ಯನ ಸಂಕುಚಿತ ಮನೋಭಾವ ಬದಲಾಗುತ್ತಿಲ್ಲ. ವಿಕೃತ ಮನಸ್ಸುಗಳು ಅವರ ಅಟ್ಟಹಾಸ ಮುಂದುವರಿಸುತ್ತಲೇ ತಮಗಂಟಿದ ಕಾಯಿಲೆಯನ್ನ ಮತ್ತೊಬ್ಬರಿಗೂ ಅಂಟಿಸುತ್ತಲೇ ಹೋಗುತ್ತಿದ್ದಾರೆ. ತಮ್ಮ ಆಂತರ್ಯದ ಸ್ವಸ್ಥ ಕಾಪಾಡದೇ ಸ್ವಸ್ಥ ಸಮಾಜವನ್ನ ನಿರ್ಮಾಣ ಮಾಡುವುದು ಬಹಳ ಕಷ್ಟ.

ಶೃಂಗಶ್ರೀ ಟಿ ಎಸ್‌, ಉಪನ್ಯಾಸಕಿ.

ಇದನ್ನೂ ಓದಿ- ನಾ ನಿನ್ನ ಮುಟ್ಟ ಬಹುದಾ…?

More articles

Latest article