ಸ್ಮರಣೆ | ತೇಜಸ್ವಿ ಮತ್ತು ಹಸಿರು ಆಧ್ಯಾತ್ಮ

Most read

ತೇಜಸ್ವಿ ಎಷ್ಟೋ ಬಾರಿ ಹಕ್ಕಿಗಳನ್ನು ಹುಡುಕಿಕೊಂಡು ತನ್ನ ತೋಟ ಬಿಟ್ಟು ಭಾಗಶ: ಬೇರೆ ಕಾಡುಗಳಿಗೆ ಹೋದವರಲ್ಲ. ತನ್ನ ತೋಟದ ಒಳಗಡೆಯೇ ಇರುವ ಹಕ್ಕಿಗಳನಷ್ಟೇ ಅಧ್ಯಯನ ಮಾಡಿದವರು. ಅದು ಮುಗಿದು ಹೋಗದ ಒಂದು ಅಧ್ಯಯನ. ಅಷ್ಟೊಂದು ಜೀವರಾಶಿಗಳು ಒಂದು ಚಿಕ್ಕ ತುಂಡು ಭೂಮಿಯಲ್ಲಿ ಸಂಚಯ ಗೊಂಡಿವೆ ಎಂದರೆ ಮತ್ತು ಅದನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ತೇಜಸ್ವಿ ಅವರಿಗೆ ಇತ್ತು ಎಂದರೆ ಆ ಮಿತಿ ಮತ್ತು ಸಾಧ್ಯತೆಯನ್ನು ನೀವೇ ಊಹಿಸಿ ಕೊಳ್ಳಬಹುದು. 

ಕೃಷಿಕ ಎಷ್ಟೇ ಮರ ಗಿಡ ಬಳ್ಳಿಗಳ ಮೇಲೆ ಪ್ರೀತಿ ಇಟ್ಟುಕೊಂಡಿರಲಿ ಅವನ ದೃಷ್ಟಿ ಮಾತ್ರ ಬುಡದಿಂದ ಮೇಲೆಯೇ ಇರುತ್ತದೆ. ಕೊಂಬೆ ರೆಂಬೆಗಳು ಕಚ್ಚಿಕೊಂಡ ಕಾಯಿಗಳ ಮೇಲೆ ಹಣದ ಲೆಕ್ಕವಿಟ್ಟೆ ಆತ ಭವಿಷ್ಯದ ಬಗ್ಗೆ ಕನಸು ಕಾಣುತ್ತಾನೆ. ಆದರೆ ತೇಜಸ್ವಿ ಅವರದು ಮಣ್ಣುಮುಖಿ ಚಿಂತನೆ. ಅವರು ಗಿಡಗಳ ಮೇಲೆ ನೋಡುವಷ್ಟೇ ಮರಗಳ ಅಡಿಯಲ್ಲಿ ಬಿದ್ದ ತರಗೆಲೆಯ ಹಾಸಿಗೆಯನ್ನು ಬಗೆದು ಅದರಡಿಯ ಕ್ರಿಮಿ ಕೀಟಗಳನ್ನು ಅಧ್ಯಯನ ಮಾಡಬಲ್ಲರು. ಬೊಗಸೆಯಲ್ಲಿ ಅವುಗಳನ್ನು ಮಣ್ಣು ಸಮೇತ ತುಂಬಿ ಬೆರಳುಗಳಲ್ಲಿ ಅಗೆದು ಬಗೆದು  ಪರೀಕ್ಷಿಸ ಬಲ್ಲರು.

ಕಾಡಿನೊಳಗಡೆ ಮನೆ ಕಟ್ಟಿಕೊಂಡವರ ಸುಖವೇ ಅದು. ಅಲ್ಲಿ ಮನುಷ್ಯ ರಹಿತವಾಗಿ ಅಡ್ಡಡ್ಡವಾಗುವ ಬೇರೆ ಬೇರೆ ನೂರಾರು ಜೀವಿಗಳು ಸಿಗುತ್ತವೆ. ಹಕ್ಕಿಗಳು ಹಾಗೆಯೇ. ಅವುಗಳ ಮನೆಯೂ ಅಲ್ಲೇ ಇರುವುದರಿಂದ ಅವು ಮನುಷ್ಯರ ತಲೆಯ ಮೇಲೆಯೇ ಹಾರುತ್ತವೆ, ಅಲ್ಲೇ ಎಲ್ಲಾದರೂ ಗೂಡು ಕಟ್ಟುತ್ತವೆ. ಮನುಷ್ಯ  ಅವುಗಳನ್ನು ಅವು ಮನುಷ್ಯನನ್ನು ನೋಡುತ್ತಾ ಯಾವುದೇ ಆತಂಕ ಗೊಂದಲಗಳಿಲ್ಲದೆ ಬದುಕುತ್ತವೆ. ಈ ದಾರಿಯಲ್ಲಿ ತೇಜಸ್ವಿ ಬೆಳಗ್ಗಿನಿಂದ ಸಂಜೆವರೆಗೆ ಹಠಯೋಗದ ಭಂಗಿಯಲ್ಲಿ ಮನೆಯೊಳಗಡೆಯೂ ಮರದಡಿಯಲ್ಲಿ, ಕೊಂಬೆಗಳ ಮೇಲೆ ಹಸಿರು ಮರೆಮಾಡಿ ಸಹನೆಯಿಂದ ಕಾದು ಇರುವ ಸನ್ನಿವೇಶವನ್ನೇ ಅತ್ಯುತ್ತಮವಾಗಿ ಬಳಸಿ ಫೋಟೋ ಕ್ಲಿಕ್ಕಿಸಿದವರು. ಕ್ಯಾಮರಾದ ಮಸೂರದ ಒಳಗಡೆ ಒಳಗಣ್ಣಿಟ್ಟು ಚಳಿಗಾಲದಲ್ಲಿ ಮುತ್ತು ಕಟ್ಟಿದ ಮಂಜಿನ ಹನಿ ದಾಖಲಿಸಿದವರು.

ಕಾಡು ಯಾವತ್ತೂ  ತನ್ನಲ್ಲಿ ಏನೂ ಇಲ್ಲ, ಮುಗಿದು ಹೋಯಿತು ನೀನಿನ್ನು ಹೊರಗಡೆ ಹೋಗು ಅನ್ನೋದೇ ಇಲ್ಲ, ಅಷ್ಟೊಂದು ತನ್ನೊಳಗಡೆ ಬಚ್ಚಿಟ್ಟುಕೊಳ್ಳುತ್ತದೆ. ನೋಡುವ ಕಣ್ಣು, ಕೇಳುವ ಕಿವಿ, ಗಮನಿಸುವ ಮನಸ್ಸಿದ್ದಾಗ ಅಲ್ಲಿ ದಿನ ಸಮಯ ಘಳಿಗೆ ಸಂದುಹೋದದ್ದೆ ಗೊತ್ತಾಗುವುದಿಲ್ಲ. ತೇಜಸ್ವಿ ಅವರ ಬದುಕಿನಲ್ಲಿ ನಡೆದದ್ದೂ ಕೂಡ ಇದೆ. ನನ್ನ ಪ್ರಕಾರ ಇದೇ ನಿಜವಾದ ಹಸಿರು ಆಧ್ಯಾತ್ಮ.

ಆಧ್ಯಾತ್ಮ ಎಂದರೆ ಇರುವುದನ್ನು ಮೀರುವುದು ಎಂದು ಅರ್ಥ. ನಮ್ಮಲ್ಲಿ ಇವತ್ತು ಆಧ್ಯಾತ್ಮಕ್ಕೆ ಕಾವಿ ರುದ್ರಾಕ್ಷಿ ಸ್ಥಾವರ ಪೂಜೆ ಪುನಸ್ಕಾರ ಭಜನೆ ದೈವಿಕತೆಗಳನ್ನು ಆರೋಪಿಸಲಾಗುತ್ತದೆ. ಆದರೆ ಪ್ರಾಕೃತಿಕ ಆಧ್ಯಾತ್ಮದಲ್ಲಿ ಅದು ನಿಸರ್ಗದ ಅನುಭೂತಿ- ಅನುಸಂಧಾನ. 

ತೇಜಸ್ವಿ ಬದುಕಿಗೆ ಈ ಸರಳತೆಯನ್ನು  ಕಾಡು ಮತ್ತು ಎಲ್ಲವನ್ನು ಮೀರುವ ಈ ಪ್ರಾಕೃತಿಕ ಆಧ್ಯಾತ್ಮವೇ ಕಲಿಸಿಕೊಟ್ಟದ್ದು. ಸಾಮಾನ್ಯವಾಗಿ ಚಿಕ್ಕಮಗಳೂರು ಮೂಡಿಗೆರೆ, ಕೊಡಗು ಈ ಭಾಗದಲ್ಲಿ ಕಾಫಿ ತೋಟ ಹೊಂದಿದ ಕೃಷಿಕರದು ಒಂದು ರೀತಿ ಹೈ ಫೈ ಎಸ್ಟೇಟ್ ಉದ್ಯಮ ಮಾದರಿಯ ಬದುಕು. ಭಾಗಶಃ ಈ ಕೃಷಿಕರು ಇವರ ಮಕ್ಕಳು ನಗರ ಕೇಂದ್ರಿತರಾಗಿರುತ್ತಾರೆ. ಅಲ್ಲಿಂದಲೇ ತೋಟವನ್ನು ನಿಭಾಯಿಸುತ್ತಾರೆ. ರೈಟರು ಮ್ಯಾನೇಜರ್‌ಗಳು ತೋಟಗಳನ್ನು ನಿಭಾಯಿಸುತ್ತಾರೆ. ಆದರೆ ತೇಜಸ್ವಿ ತೋಟ ಕೊಂಡು ಮೂಡಿಗೆರೆಗೆ ಬಂದ ನಂತರ ಆ ಭೂಭಾಗದಿಂದ ಎಂದಿಗೂ ಕಳಚಿಕೊಂಡವರಲ್ಲ. ತಾನು ಓದಿದ ಮೈಸೂರಿಗೆ ಮತ್ತು ಬೆಂಗಳೂರು  ಕಡೆ ಹೋಗುವುದಕ್ಕೆ ಹಿಂಜರಿಯುತ್ತಿದ್ದವರು.  ತನ್ನ ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಉದ್ಯೋಗಸ್ಥರಾಗಿ ಕುಟುಂಬ ಸಮೇತ ಮನೆ ಮಾಡಿಕೊಂಡಿದ್ದರೂ ಅಲ್ಲಿಗೂ ತೇಜಸ್ವಿಯವರು ಹೋಗುತ್ತಿದ್ದದ್ದು ಕಡಿಮೆ.

ಅವರು ಧರಿಸುತ್ತಿದ್ದ ಉಡುಪು, ಚಪ್ಪಲಿ ಓಡಾಡುತ್ತಿದ್ದ ವಾಹನ ವಗೈರೆಗಳನ್ನು ಗಮನಿಸಿ. ಒಂದು ಹಳೆಯ ಕಾರು ಮತ್ತು ಅದಕ್ಕಿಂತಲೂ ಹಳೆಯ ಸೀಟ್ ಇಲ್ಲದ ಒಂದು ಸ್ಕೂಟರ್ ಬಿಟ್ಟರೆ ಅವರು ಯಾವತ್ತೂ ಓಡಾಟಕ್ಕೆ  ದುಬಾರಿವಾಹನವನ್ನು ಬಳಸಿದವರಲ್ಲ. ತನ್ನ ಕಾಫಿ ತೋಟದ ಮನೆಯಿಂದ ನಾಲ್ಕೈದು ಮೈಲು ದೂರದ ಮೂಡಿಗೆರೆ ಪೇಟೆಗೆ ಅವರು ಓಡಾಡುತ್ತಿದ್ದದ್ದು ಸೀಟ್ ಇಲ್ಲದ ಪ್ರತ್ಯೇಕವಾಗಿ ಗುರುತಿಸಬಹುದಾಗಿದ್ದ ಒಂದು ಹಳೆಯ ಸ್ಕೂಟರನ್ನು. ಪೇಟೆಯ ನಡುವೆ ತೇಜಸ್ವಿ ಸ್ಕೂಟರು ಓಡಾಡುತ್ತಿದ್ದಾಗ ಅದನ್ನು ಸುಲಭವಾಗಿ ಗುರುತಿಸುವಷ್ಟು ಆ ಸ್ಕೂಟರ್ ಹಳೆಯದಾಗಿತ್ತು. ಮೂಡಿಗೆರೆ ಪೇಟೆಯಷ್ಟೇ ಅಲ್ಲ  ಅದು  ತುಂಗಾ ನದಿದಂಡೆ, ಚಾರ್ಮಾಡಿ ಘಾಟಿ, ಜನ್ನಾಪುರ ಹೀಗೆ ಗಾಳವೋ ಬೇಟೆಯೋ ಫೋಟೋಗ್ರಫಿಯೋ ಈ ನೆಪದಲ್ಲಿ ಅಲ್ಲೆಲ್ಲ ಓಡಾಡಿದ್ದಷ್ಟೇ ಅಲ್ಲ, ಪ್ರಗತಿಪರ ಸಂಘಟನೆಯ ಕಾಲದಲ್ಲಿ ಅದೇ ಸ್ಕೂಟರಲ್ಲಿ ತೇಜಸ್ವಿಯವರು ಇಡೀ  ಕರ್ನಾಟಕವನ್ನು ಸುತ್ತಿದ್ದರು. ತನ್ನ ಮಡದಿಯನ್ನು ಕೂರಿಸಿಕೊಂಡು ಮೈಸೂರುವರೆಗೂ ಹೋಗಿದ್ದರು. ಅವರ ಪ್ರಕಾರ ಅವರ ಅಗತ್ಯವನ್ನು ಆ ಸ್ಕೂಟರ್ ಈಡೇರಿಸುತ್ತಿದೆ.

ತೇಜಸ್ವಿ ದುಬಾರಿ ಮೊತ್ತದ ಅಂಗಿ ಪ್ಯಾಂಟು ಶೂ ಧರಿಸಿದ್ದನ್ನು ನಾನು ನೋಡೇ ಇಲ್ಲ. ಅವರಿಗೆ ಅವೆಲ್ಲ ಕೇವಲ ದೇಹ ಮುಚ್ಚುವ, ಕಲ್ಲು ಮುಳ್ಳು ಕೆಸರು ತಾಗದ ಹಾಗೆ ದೇಹ ಕಾಲು ರಕ್ಷಿಸುವ ಪೊರೆಗಳಷ್ಟೇ. ಯಾವತ್ತೂ ಯಾರದ್ದೇ ಮದುವೆ ಮುಂಜಿ ನಿಶ್ಚಿತಾರ್ಥ ಹಾಗೆಯೇ ಸಾಹಿತಿಕ ಸಾಂಸ್ಕೃತಿಕ ಸಮ್ಮೇಳನ, ರೋಟರಿ ಲಯನ್ಸ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ತೇಜಸ್ವಿಯವರು ಅಗತ್ಯ ಕಾರ್ಯಕ್ರಮಗಳಿಗೆ ಊರು ಬಿಟ್ಟು ದೂರ ಹೋಗುವಾಗಲೂ ಇದೇ ಸರಳತೆಯನ್ನು ಕಾಪಾಡಿ ಕೊಂಡವರು.  ಅನಿವಾರ್ಯವಾದರೆ ಹೆಗಲಿಗೊಂದು ಚೀಲ, ಕೆಳಗಡೆಯಿಂದ ಸ್ವಲ್ಪ ಮಡಿಸಿದ ಒಂದು ಪ್ಯಾಂಟು, ಕನಿಷ್ಠ ಬೆಲೆಯ ಚಪ್ಪಲಿ ಇವರ ವಸ್ತ್ರಗಳು. 

ಪುತ್ತೂರಿಗೆ ನನ್ನ ಪುಸ್ತಕ ಬಿಡುಗಡೆಗೆ ಮೈಸೂರಿನಿಂದ ತೇಜಸ್ವಿ ಬರುವಾಗಲೂ ಬರ್ಮುಡ ಹಾಕಿಕೊಂಡೆ ಬಂದಿದ್ದರು. ತಾನು ಮನೆ- ತೋಟದಲ್ಲಿರುವಾಗ ಒಂದು ರೀತಿ ಹೊರಗಡೆ ಇನ್ನೊಂದು ರೀತಿ, ವೇದಿಕೆಯಲ್ಲಿ ಮಗದೊಂದು ರೀತಿ ಎನ್ನುವ ಯಾವುದೇ ಮುಖವಾಡಗಳು ತೇಜಸ್ವಿಯವರಲ್ಲಿ ಇರಲಿಲ್ಲ.

ಸುಮಾರು ವರ್ಷಗಳ ಹಿಂದೆ ನಮ್ಮ ಭಾಗಕ್ಕೆ ಸಾವಯವ ಒಕ್ಕೂಟದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ತೇಜಸ್ವಿಯವರು ಸುಮಾರು 100- 200 ಜನರಿರುವ ವೇದಿಕೆಯಲ್ಲಿ ಕಾರ್ಯಕ್ರಮ ನಿರೂಪಕರು ಸ್ವಾಗತಿಸುತ್ತಿರುವ ಸಂದರ್ಭದಲ್ಲೇ ವೇದಿಕೆಯಿಂದ ಎದುರುಗಡೆ ಕಾಣಿಸುವ ಸುಂದರವಾದ ಪಶ್ಚಿಮ ಘಟ್ಟದ ತುಂಡು ಕಾಡನ್ನು ಗಮನಿಸುತ್ತಲೇ ತನ್ನ ಎರಡು ಕಾಲುಗಳನ್ನು ಸ್ಟೇಜ್ ಮೇಲಿದ್ದ ಟೀಪಾಯಿ ಮೇಲೆ ಇರಿಸಿದರಂತೆ! ಅಂದರೆ ಇದೊಂದು ಕಾರ್ಯಕ್ರಮ, ಮುಂಭಾಗದಲ್ಲಿ ಸಭಿಕರಿದ್ದಾರೆ, ಸಭೆಗೊಂದು ಶಿಷ್ಟಾಚಾರವಿದೆ, ನಾನು ಇಲ್ಲಿ ಹೀಗೆ ಕೂತಿರಬೇಕು, ಹೀಗೆ ಮಾತನಾಡಬೇಕು ಎನ್ನುವ ಯಾವುದೇ ಸಿದ್ಧ ಕ್ರಮಗಳು ತೇಜಸ್ವಿಗಿರಲಿಲ್ಲ. 

 ಅದು ಅವರಿಗೆ ಗೊತ್ತಿಲ್ಲ ಎಂದಲ್ಲ, ತಾನು ಇರುವುದೇ ಹೀಗೆ ಮತ್ತು ಬದುಕಿನಲ್ಲಿ ಈ ರೀತಿಯ ಬಣ್ಣ ಅಸಹಜತೆ- ಮುಖವಾಡಗಳ ಅಗತ್ಯವಿಲ್ಲ ಎಂದು ತೇಜಸ್ವಿಯವರು ನಂಬಿದ್ದರು. ಹೀಗೆ ಸಭೆ ಸಮಾರಂಭ ಕೌಟುಂಬಿಕ ಕಾರ್ಯಕ್ರಮಗಳಿಂದ ದೂರ ಇದ್ದ ತೇಜಸ್ವಿ ಅವರಿಗೆ ಅವರ ದಿನದ ಸಮಯ ಪೂರ್ತಿ ಅವರ ಕೈಯಲ್ಲಿತ್ತು ಎಂಬುದನ್ನು ಈ ಮೊದಲೇ ಒಮ್ಮೆ ಹೇಳಿದ್ದೆ . ಯಾರು ನಿಯಂತ್ರಿಸದೆ ನಮ್ಮ ಸಮಯದಲ್ಲಿ ನಾವು ಬದುಕುವುದು ನಿಜವಾದ ಸ್ವಾವಲಂಬಿತನ.

ಡಾ. ನರೇಂದ್ರ ರೈ ದೇರ್ಲ

ಕೃಷಿಯನ್ನು ಹಸಿರನ್ನು ಬರಹದ ಕೇಂದ್ರವಾಗಿಸಿಕೊಂಡ ಸೂಕ್ಷ್ಮ ಸಂವೇದನೆಯ ಲೇಖಕರು.

More articles

Latest article