ಸಮಕಾಲೀನ ಸಾಂಸ್ಕೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ಸ್ಪಂದಿಸುವ ಆಶಯ ಹೊಂದಿದ ಬಹುಮುಖಿ ಪ್ರಜ್ಞೆಯ “ನಿರ್ದಿಗಂತ” ವು ಪ್ರಕಾಶ್ ರೈರವರ ನೇತೃತ್ವದಲ್ಲಿ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಚಲನವನ್ನು ಮೂಡಿಸುತ್ತಿದೆ. ರಂಗಭೂಮಿಯಲ್ಲಿ ಪ್ರಯೋಗಶೀಲತೆಯನ್ನು ಕ್ರಿಯಾಶೀಲವಾಗಿ ದಾಖಲಿಸುತ್ತಿದೆ. ಅದಕ್ಕೆ ‘ಪೊಲಿಟಿಕಲ್ ಪ್ರಿಸನರ್ಸ್’ ಎನ್ನುವ ವಿಭಿನ್ನ ಬಗೆಯ ನಾಟಕ ಸಾಕ್ಷಿಯಾಗಿದೆ.
‘ಅನೇಕ’ ರಂಗತಂಡವು ಕಲಾಗ್ರಾಮದ ರಂಗಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಅನೇಕ ನಾಟಕೋತ್ಸವ’ದಲ್ಲಿ ಮಾರ್ಚ್ 19 ರಂದು ಪ್ರದರ್ಶನಗೊಂಡ ನಿರ್ದಿಗಂತದ ‘ ‘ಪೊಲಿಟಿಕಲ್ ಪ್ರಿಸನರ್ಸ್’ ನಾಟಕವು ಗಮನಾರ್ಹವಾಗಿತ್ತು.
ಪದ್ಮಶ್ರೀ ಪುರಸ್ಕೃತ ಸಾಹಿತಿ ವೈಕಂ ಮುಹಮ್ಮದ್ ಬಶೀರ್ ರವರು ಮಲಯಾಳಿ ಭಾಷೆಯ ಪ್ರಸಿದ್ಧ ಲೇಖಕರಾಗಿದ್ದವರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಬಶೀರ್ ರವರು ಬ್ರಿಟೀಷರಿಂದ 1942 ರಲ್ಲಿ ರಾಜದ್ರೋಹದ ಆರೋಪದಲ್ಲಿ ತಿರುವನಂತಪುರದ ಜೈಲಲ್ಲಿ ರಾಜಕೀಯ ಖೈದಿಯಾಗಿ ಬಂಧಿತರಾಗಿದ್ದಾಗ ತಮ್ಮ ಜೈಲುವಾಸದ ಅನುಭವಗಳನ್ನು ಮಾಥಿಲುಕಲ್ ( ಗೋಡೆಗಳು) ಎನ್ನುವ ಹೆಸರಿನ 64 ಪುಟಗಳ ಕಿರುಕಾದಂಬರಿಯಾಗಿಸಿದ್ದರು. ಇದು ಮಲಯಾಳಂ ಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯ ಪ್ರೇಮ ಕಥೆಯಾಗಿದೆ. ಈ ಕಾದಂಬರಿಯನ್ನು ಅಧರಿಸಿ ಅಡೂರು ಗೋಪಾಲಕೃಷ್ಣನ್ ರವರು ಸಿನೆಮಾ ಮಾಡಿದ್ದು ಮಮ್ಮುಟ್ಟಿಯವರ ಅಭಿನಯದಲ್ಲಿ ಹಿಟ್ ಆಗಿತ್ತು. ಈಗ ವೈಕಂ ರವರ ಈ ಕಿರುಕಾದಂಬರಿಯನ್ನು ಅನುಷ್ ಶೆಟ್ಟಿಯವರು ರಂಗರೂಪ ಮಾಡಿ, ಸಂಗೀತ ಸಂಯೋಜಿಸಿ, ನಿರ್ದೇಶಿಸಿ ಬಶೀರ್ ರವರ ಪಾತ್ರದಲ್ಲೂ ಅಭಿನಯಿಸಿದ್ದಾರೆ.

ಸ್ವತಃ ಕಥೆಗಾರ ಬಶೀರರವರೇ ಈ ನಾಟಕದ ನಾಯಕರಾಗಿದ್ದು ರಾಜಕೀಯ ಕಾರಣಕ್ಕಾಗಿ ಕಾರಾಗೃಹದಲ್ಲಿ ಬಂಧಿಯಾಗಿರುತ್ತಾರೆ. ಜೈಲಿನಲ್ಲಿ ಒಂದು ಗೋಡೆ ಪುರುಷ ಹಾಗೂ ಮಹಿಳಾ ಖೈದಿಗಳ ಭಾಗವನ್ನು ಬೇರ್ಪಡಿಸಿರುತ್ತದೆ. ಗೋಡೆಯ ಆ ಕಡೆ ನಾರಾಯಿಣಿ ಎನ್ನುವ ಯುವತಿ, ಈ ಕಡೆ ಬಶೀರ್ ನಡುವೆ ಮುಖ ನೋಡಲಾಗದೇ ಮಾತುಕತೆ ಆರಂಭವಾಗಿ ಪ್ರೀತಿ ಹುಟ್ಟುತ್ತದೆ. ಇಬ್ಬರೂ ಮಾತಿನ ಮೂಲಕ ತಮ್ಮ ಬದುಕಿನ ನೋವು ನಲಿವು, ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಕೊನೆಗೆ ಬಂಧಿಖಾನೆಯ ಆಸ್ಪತ್ರೆಯಲ್ಲಿ ಪರಸ್ಪರ ಭೇಟಿಯಾಗಲು ಸಮಯ ನಿರ್ಧರಿಸುತ್ತಾರೆ. ಆದರೆ ಅಷ್ಟರೊಳಗೆ ಬಶೀರನಿಗೆ ಜೈಲಿನಿಂದ ಬಿಡುಗಡೆ ಆದೇಶ ಬರುತ್ತದೆ. ಎಂದೂ ನೋಡದ, ಒಮ್ಮೆಯೂ ಸ್ಪರ್ಶಿಸದ ಈ ಜೋಡಿ ವೇದನೆಯೊಂದಿಗೆ ಬೇರ್ಪಡುತ್ತದೆ. ಇದು ನಾಟಕದ ಸಂಕ್ಷಿಪ್ತ ಕಥೆ.
ಅತ್ಯಂತ ಸರಳವೆನಿಸುವ ಈ ಪ್ರೇಮಕಥೆಯನ್ನು ಅನೂಷ್ ಶೆಟ್ಟಿಯವರು ಅದ್ಭುತವಾಗಿ ನಾಟಕವಾಗಿ ಕಟ್ಟಿಕೊಟ್ಟಿದ್ದಾರೆ. ಬಂಧಿಖಾನೆಯ ಏಕಾಂತ, ಏಕಾಂತದೊಳಗೆ ಒಡಮೂಡುವ ಹಾಸ್ಯ, ಮಾನವೀಯತೆ, ನವಿರಾದ ಪ್ರೇಮವನ್ನು ಭಾವಪೂರ್ಣವಾಗಿ ದೃಶ್ಯರೂಪದಲ್ಲಿ ಸೃಷ್ಟಿಸಿದ್ದಾರೆ.
ಈ ಕಥೆಗೆ ವೈಕಂ ರವರು ಇಟ್ಟಿದ್ದ ‘ಗೋಡೆಗಳು’ ಹೆಸರು ಅತ್ಯಂತ ಸೂಕ್ತವಾಗಿತ್ತು. ಇಡೀ ನಾಟಕ ಗೋಡೆಯ ಅಸ್ತಿತ್ವದ ಜೊತೆಗೆ ಸಾಗುತ್ತದೆ. ಪರೋಕ್ಷವಾಗಿ ಗೋಡೆಯೂ ಪಾತ್ರವಾದಂತಿದೆ. ‘ಈ ಗೋಡೆಗಳೇಕಿವೆ?’ ಎಂಬುದು ಬಶೀರ್ ಮತ್ತು ನಾರಾಯಣಿ ಈ ಇಬ್ಬರ ಪ್ರಶ್ನೆಯಾಗಿದೆ. ನಾಟಕದ ಕೊನೆಗೆ ಆತ ಕೇಳುತ್ತಾನೆ ‘ಈ ಗೋಡೆಗಳು ಯಾಕಿವೆ’ ಎಂದು, ಆಕೆ ಮರುಪ್ರಶ್ನಿಸುತ್ತಾಳೆ ‘ಈಗ ಗೋಡೆಗಳು ಎಲ್ಲಿವೆ?’ ಎಂದು. ‘ಮನದೊಳಗೆ ಪ್ರೀತಿ ಇದ್ದರೆ ಗೋಚರ ಗೋಡೆಗಳು ಅಗೋಚರವಾಗುತ್ತವೆ, ಮನುಷ್ಯ ನಿರ್ಮಿತ ಗೋಡೆಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ’ ಎಂಬ ಮಾತು ಈ ನಾಟಕದ ಆತ್ಮವಾದಂತಿದೆ.

ಈ ನಾಟಕದ ಅಂತಃಸತ್ವ ಇರೋದೆ ಪ್ರೀತಿಯಲ್ಲಿ. ಬಶೀರ್ ಹೇಳುತ್ತಾರೆ ‘ಸ್ವಾತಂತ್ರ್ಯಕ್ಕಾಗಿ ಕ್ರಾಂತಿ’ ಎಂದು. ಅದಕ್ಕೆ ‘ಪ್ರೀತಿಯೇ ಕ್ರಾಂತಿ’ ಎಂದು ನಾರಾಯಣಿ ಉತ್ತರಿಸುತ್ತಾಳೆ. ‘ಪ್ರೀತಿಯೂ ಕ್ರಾಂತಿ’ ಎನ್ನುವ ಕಾನ್ಸೆಪ್ಟ್ ನ್ನು ಈ ನಾಟಕ ಸಮರ್ಥಿಸಿಕೊಳ್ಳುತ್ತದೆ. ಹಾಡಿನ ಮೂಲಕ ಪ್ರಸ್ತುತಪಡಿಸುತ್ತದೆ. ಬಂಧನದಲ್ಲಿದ್ದರೂ ಬಾಂಧವ್ಯ, ನಡುವೆ ಅಭೇದ್ಯ ಗೋಡೆ ಇದ್ದರೂ ಒಲವು ಮೂಡುವ ಬಗೆಯೇ ‘ಕ್ರಾಂತಿ’, ‘ಪ್ರೀತಿಯೆಂಬ ಕ್ರಾಂತಿಯಿಂದ ಭೌತಿಕವಾಗಿ ಹಾಗೂ ಮಾನಸಿಕವಾಗಿ ಕಟ್ಟಿಕೊಂಡ ಗೋಡೆಗಳಿಂದ ಬಿಡುಗಡೆ ಸಾಧ್ಯ’ ಎನ್ನುವುದು ಈ ನಾಟಕದ ಆಶಯವಾಗಿದೆ. ಬಂಧಿಖಾನೆಯಿಂದ ಬಿಡುಗಡೆಗಾಗಿ ಹಾತೊರೆಯುವ ಬಶೀರ್ ಕೊನೆಗೆ ಬಿಡುಗಡೆ ಯಾಕಾದರೋ ಆಯ್ತೋ ಎಂದು ಪರಿತಪಿಸಲು ಕಾರಣ ಪ್ರೀತಿ.
ಬಶೀರ್ ಬೆಳೆಸಿದ ಪ್ರೀತಿಯ ಸಂಕೇತವಾದ ಗುಲಾಬಿ ಕಪ್ಪು ಬಿಳುಪಿನ ಜೈಲಿಗೆ ಬಣ್ಣ ತುಂಬಿದೆ. ಪ್ರೀತಿಯನ್ನು ದಾಟಿಸುವ ಮಧ್ಯವರ್ತಿಯಾಗಿದೆ. ನಾರಾಯಣಿ ಕೊಡುವ ಕೆಂಪು ಮಪ್ಲರ್ ಕ್ರಾಂತಿಯ ಸಂಕೇತವಾಗಿದೆ. ಹೀಗೆ ಚಿಕ್ಕಪುಟ್ಟ ರೂಪಕಗಳು ಇಲ್ಲಿ ದೊಡ್ಡ ಪರಿಣಾಮ ಬೀರಿವೆ.

ಮಾಮೂಲು ಸಂಭಾಷಣಾ ಪ್ರಧಾನ ನಾಟಕ ಮಾಡಿದ್ದರೆ ಈ ಕಥೆ ಪೇಲವವಾಗಿರುತ್ತಿತ್ತೇನೋ. ಆದರೆ ಗೀತ ಸಂಗೀತಮಯ ಮ್ಯೂಸಿಕಲ್ ಪ್ಯಾಟರ್ನ್ ಬಳಸಿದ್ದರಿಂದಾಗಿ ಪ್ರದರ್ಶನ ಆಕರ್ಷಣೀಯವಾಗಿದೆ. ಪಾತ್ರಗಳು ಮಾತಾಡುವ ಮಾತುಗಳನ್ನೇ ಹಾಡುಗಳನ್ನಾಗಿಸಿದ್ದು, ಹಾಡುಗಳನ್ನೆಲ್ಲಾ ವೇದಿಕೆಯ ಮೇಲೆ ಆಯಾ ನಟರೇ ಹಾಡಿದ್ದು ಕೇಳಲು ತುಂಬಾ ಹಿತವಾಗಿದೆ, ಹಾಡಿಗೆ ತಕ್ಕಂತೆ ಶೈಲೀಕೃತ ದೇಹ ಭಾಷೆ ಬಳಸಿದ್ದು ನೋಡಲು ಸೊಗಸಾಗಿದೆ. ಹಾಡುಗಳು ಈ ನಾಟಕದ ಭಾವನಾತ್ಮಕ ಪಯಣದಲಿ ಮಿಂಚಿನ ಸಂಚಲನವನ್ನು ಹುಟ್ಟು ಹಾಕಿವೆ. “ಯಾರಿರದ ವೇಳೆಯಲಿ ಗೋಡೆಯ ಬಳಿ ಬಂದು, ನಿನ್ನನು ನನ್ನ ಬಳಿ ಕರೆಯುವುದೇ ಹೊಸ ಅಭ್ಯಾಸ” ಎನ್ನುವಂತಹ ಹಾಡುಗಳು ಕೇವಲ ಹಾಡುಗಳಾಗಿರದೇ ಪ್ರೀತಿಯ ಉತ್ಕಟತನವನ್ನು ಹೇಳುವ ಸಾಲುಗಳಾಗಿವೆ. ಆದರೆ ” ನಾವು ಪೊಲಿಟಿಕಲ್ ಪ್ರಿಸನರ್ಸ್, ಬ್ರಿಟೀಷರಿಗೆ ದೊಡ್ಡ ಇರಿಟೇಶನ್” ಎನ್ನುವಂತಹ ಪ್ರಾಸಕ್ಕಾಗಿ ಬಳಸಲಾದ ಇಂಗ್ಲಿಷ್ ಪದಗಳು ಹಾಡುಗಳಲ್ಲಿ ಸ್ವಲ್ಪ ಅತಿಯಾಗಿವೆ, ಇಂಗ್ಲೀಷ್ ಭಾಷೆ ಗೊತ್ತಿಲ್ಲದವರಿಗೆ ಕಬ್ಬಿಣದ ಕಡಲೆಗಳಾಗಿವೆ.
ಪ್ರತಿಯೊಬ್ಬರ ನಟನೆಯ ಬಗ್ಗೆ ಎರಡು ಮಾತಿಲ್ಲ. ನಾರಾಯಣಿ ಪಾತ್ರದ ಕಾವ್ಯಾರವರ ಸಂಯಮದ ಭಾವಾಭಿನಯ ನೋಡುಗರ ಮನತಟ್ಟುವಂತಿದೆ. ಅನುಷ್ ಶೆಟ್ಟಿ ಯವರು ಮುಹಮ್ಮದ್ ಬಶೀರ್ ರವರನ್ನು ಸ್ವಕಾಯಪ್ರವೇಶ ಮಾಡಿಕೊಂಡು ನಟಿಸಿದ್ದಾರೆ. ನಾಟಕದಾದ್ಯಂತ ಮಾತಿನ ಭಾಷೆಗಿಂತ ದೇಹದ ಭಾಷೆ ಅಂದರೆ ಬಾಡಿ ಲಾಂಗ್ವೇಜನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಏಳೂ ಜನ ಕಲಾವಿದರುಗಳು ನೋಡುಗರಿಗೆ ಒಂದು ಕ್ಷಣವೂ ಅತ್ತಿತ್ತ ನೋಡಲು ಪುರಸೊತ್ತು ಕೊಡದಂತೆ ಅಭಿನಯಿಸಿ ಗಮನ ಸೆಳೆದಿದ್ದಾರೆ.
ಚಿಕ್ಕ ಪುಟ್ಟ ಸಂಭಾಷಣೆಗಳು, ಹಾಡಿನ ಲಯದ ನುಡಿಗಳು, ಭಾವನಾತ್ಮಕ ನಡೆಗಳು ಈ ನಾಟಕವನ್ನು ಬೇರೊಂದು ಮಜಲಿಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತವೆ. ನಿರ್ದೇಶಕ ಅನೂಷ್ ರವರೇ ಸಂಗೀತ ಸಂಯೋಜನೆಯನ್ನು ಮಾಡಿದ್ದು, ಗದ್ಯ ಸಂಭಾಷಣೆಗಳನ್ನು ಕಾವ್ಯಾತ್ಮಕ ಭಾಷೆಯಾಗಿ ಪರಿವರ್ತಿಸಿದ್ದು ಅನನ್ಯ ಕ್ರಿಯಾಶೀಲತೆಯಾಗಿದೆ.

ನಾಟಕದಲ್ಲಿ ಗೋಡೆ ಮಾದರಿಯ ಪರದೆಯನ್ನು ಹೊರತು ಪಡಿಸಿ ಬೇರೆ ಯಾವುದೇ ಸೆಟ್ ಗಳಿಲ್ಲ. ಜನರಲ್ ಮತ್ತು ಸ್ಪಾಟ್ ಲೈಟ್ ಹೊರತು ಪಡಿಸಿ ಅದ್ದೂರಿ ಬಣ್ಣ ಬೆಳಕಿನ ವಿನ್ಯಾಸವಿಲ್ಲ. ಜೈಲಿನ ದಿರಿಸು ಹೊರತು ಪಡಿಸಿ ಕಣ್ಮನ ಸೆಳೆಯುವ ಕಾಸ್ಟ್ಯೂಮ್ಸ್ ಗಳಿಲ್ಲ. ಬಹುತೇಕ ಎಲ್ಲವೂ ಕಪ್ಪು ಬಿಳುಪು. ಆದರೆ ಈ ಇಲ್ಲದರಗಳ ಅನುಪಸ್ಥಿತಿಯನ್ನು ನಟರ ಪಾದರಸದಂತಹ ಅಭಿನಯ, ಹಾಡು ಹಾಗೂ ಸಂಗೀತಗಳು ತುಂಬಿವೆ. ಯುವಕರೇ ಸೇರಿ ಕಟ್ಟಿದ ಈ ‘ಪೊಲಿಟಿಕಲ್ ಪ್ರಿಸನರ್ಸ್’ ನಾಟಕವನ್ನು ನೋಡಿದ ಮೇಲೂ ಬಹುದಿನಗಳ ಕಾಲ ಪ್ರೇಕ್ಷಕರನ್ನು ಕಾಡುತ್ತದೆ. ಬಯಾಗ್ರಫಿ ಮಾದರಿಯ ಕಾದಂಬರಿಯೊಂದು ದೃಶ್ಯಸೃಷ್ಟಿಯಾಗಿ ಪ್ರದರ್ಶನಗೊಂಡ ಬಗೆಯನ್ನು ನೋಡಿಯೇ ಅನುಭವಿಸಬೇಕು. ವಿಭಿನ್ನ ಮಾದರಿಯ ಪ್ರಯೋಗಶೀಲತೆಗೆ ಹ್ಯಾಟ್ಸಾಫ್ ಹೇಳಲೇಬೇಕು. ನಿರ್ದಿಗಂತದ ವೃತ್ತಿಪರ ರಂಗ ಕೈಂಕರ್ಯವನ್ನು ಅಭಿನಂದಿಸಲೇಬೇಕು.
ಝನ್ ಜಿ ತಲೆಮಾರಿನ ಪ್ರತಿಭಾವಂತ ಯುವಕರಿಗೆ ಅವಕಾಶ ಹಾಗೂ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿ ಪ್ರೋತ್ಸಾಹಿಸಿದರೆ ಎಂತಹ ಕ್ರಿಯಾಶೀಲ ನಾಟಕಗಳನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ “ಪೊಲಿಟಿಕಲ್ ಪ್ರಿಸನರ್” ನಾಟಕವೇ ಸಾಕ್ಷಿ. ಸಾಮಾನ್ಯ ವಸ್ತು ವಿಷಯಗಳನ್ನು ಅಸಾಮಾನ್ಯ ರೀತಿಯಲ್ಲಿ ಕಟ್ಟಿಕೊಡುವ, ರಂಗಸಾಧ್ಯತೆಗಳನ್ನು ಸಮಗ್ರವಾಗಿ ಬಳಸಿಕೊಂಡು ಪ್ರಯೋಗಶೀಲ ನಾಟಕ ಸೃಷ್ಟಿಸುವ ಕಲಾಗಾರಿಕೆ ಕನ್ನಡ ರಂಗಭೂಮಿಗೆ ಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ವೇದಿಕೆ ಒದಗಿಸಿರುವ ನಿರ್ದಿಗಂತ ಮತ್ತು ಪ್ರಕಾಶ್ ರೈರವರಿಗೆ ರಂಗಭೂಮಿ ಆಭಾರಿಯಾಗಿದೆ.
ಹಿಂದೂ ಯುವಕ, ಮುಸ್ಲಿಂ ಯುವತಿಯ ನಡುವಿನ ಧರ್ಮಾಂತರ ಪ್ರೀತಿಯನ್ನು ತೋರಿಸುವ ಈ ನಾಟಕ ಇನ್ನೂ ಹಿಂದೂ ಮುಸ್ಲಿಂ ಮತಾಂಧರ ಕಣ್ಣಿಗೆ ಬಿದ್ದಿಲ್ಲವೆಂದೆನಿಸುತ್ತಿದೆ. ಇಷ್ಟರಲ್ಲಾಗಲೇ ಹಿಂದೂ ಧರ್ಮಾಂಧರು “ಈ ನಾಟಕ ಲವ್ ಜಿಹಾದ್” ಗೆ ಪ್ರಚೋದಿಸುತ್ತದೆ, ಮುಸ್ಲಿಂ ಯುವಕರಿಗೆ ಹಿಂದೂ ಹುಡುಗಿಯೇ ಬೇಕಾ” ಎಂದು ಗಲಾಟೆ ಸೃಷ್ಟಿಸುತ್ತಿದ್ದರು. ಯಾಕೆಂದರೆ ಕೋಮುವಾದವನ್ನು ವಿರೋಧಿಸುವ, ಹಿಂದುತ್ವವಾದವನ್ನು ಟೀಕಿಸುವ ಪ್ರಕಾಶ್ ರೈ ರವರ ಮೇಲೆ ಹಿಂದೂ ವಿರೋಧಿ ಎಂದೋ, ಲವ್ ಜಿಹಾದಿಗಳ ಪರವೆಂದೋ ಆರೋಪಿಸಿ ಅವರ ವಿರುದ್ಧ ಸಂಘಿ ಸಂತಾನಗಳು ದ್ವೇಷ ರಾಜಕೀಯ ಮಾಡಬಹುದಾಗಿತ್ತು. ಸದ್ಯ ಹಾಗಾಗಲಿಲ್ಲವೆಂಬುದೇ ಸಮಾಧಾನ. ಮೂಲಭೂತವಾದಿಗಳಿಂದ ಕೋಮು ಸೌಹಾರ್ದತೆಗೆ, ಪ್ರೀತಿಸುವ ಜೀವಗಳಿಗೆ ಆತಂಕ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಜಾತಿ ಧರ್ಮವನ್ನು ಮೀರಿ ಪ್ರೇಮ ಸಂಬಂಧ ಬೆಳೆಯುವಂತಹ,ಪ್ರೀತಿಯ ಹೂವು ಅರಳುವಂತಹ ನಾಟಕಗಳು ಇಂದಿನ ತುರ್ತು ಅಗತ್ಯವಾಗಿದೆ. ಪ್ರೀತಿ ಗೆಲ್ಲಬೇಕಿದೆ, ಮತಾಂಧತೆ ಸೋಲಬೇಕಿದೆ. ಈ ನಾಟಕ ದೇಶಾದ್ಯಂತ ಪ್ರದರ್ಶನಗೊಳ್ಳಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗ ಕರ್ಮಿ
ಇದನ್ನೂ ಓದಿ- http://‘ಜ್ಞಾನಪೀಠ’ದ ಸುತ್ತ ವಿವಾದದ ಹುತ್ತ https://kannadaplanet.com/controversy-surrounds-jnanpith/


