ರಂಗಭೂಮಿ | ರಕ್ತ ವಿಲಾಪ ನಾಟಕ ಪ್ರದರ್ಶನ

Most read

ಕನ್ನಡದ ಮಹತ್ತ್ವದ ವಿದ್ವಾಂಸರಾದ ಡಾ.ಎಂ.ಎಂ.ಕಲ್ಬುರ್ಗಿ ಅವರ ದುರಂತ ಅಂತ್ಯವನ್ನೇ ಮೂಲವಾಗಿರಿಸಿಕೊಂಡು ಡಾ.ವಿಕ್ರಮ ವಿಸಾಜಿ ಬರೆದಿರುವ ʼರಕ್ತ ವಿಲಾಪʼ ನಾಟಕವನ್ನು ರಾಯಚೂರು ಸಮುದಾಯ ಇತ್ತೀಚೆಗೆ ಅಭಿನಯಿಸಿತು. ಈ ಕುರಿತು ಉಪನ್ಯಾಸಕಿ ಭಾರತಿ ದೇವಿ ಪಿ ಬರೆದ ವಿಮರ್ಶೆ ಇಲ್ಲಿದೆ.

 ದಿನಾಂಕ 06-10-2024 ರಂದು ಬಿಜಾಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಪ್ರವೀಣ ರೆಡ್ಡಿ ಗುಂಜಹಳ್ಳಿ ಅವರ ನಿರ್ದೇಶನದಲ್ಲಿ ರಾಯಚೂರು ಸಮುದಾಯ ಅಭಿನಯಿಸಿದ ʼರಕ್ತ ವಿಲಾಪʼ ನಾಟಕ ಇಡೀ ರಂಗಮಂದಿರದ ನೋಡುಗರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಲಡಾಯಿ ಪ್ರಕಾಶನ ವಿವಿಧ ಸಂಘಟನೆಗಳ ಜೊತೆಗೆ ಆಯೋಜಿಸಿದ್ದ ‘ಜನಕಲಾ ಸಾಂಸ್ಕೃತಿಕ ಮೇಳ’ದ ಭಾಗವಾಗಿ ಈ ಪ್ರದರ್ಶನ ನಡೆಯಿತು‌.  ಡಾ.ವಿಕ್ರಮ ವಿಸಾಜಿಯವರು ಬರೆದ ಈ ನಾಟಕ ಇಂದು ಸತ್ಯಶೋಧನೆ, ಬೌದ್ಧಿಕತೆಯನ್ನು ಹೇಗೆ ಫಾಸಿಸಂನ ಕರಾಳ ಹಸ್ತಗಳು ಬೇಟೆಯಾಡುತ್ತಿವೆ ಎಂಬುದನ್ನು ಮತಾಂಧರ ಗುಂಡಿಗೆ ಬಲಿಯಾದ ಕನ್ನಡದ ಮಹತ್ವದ ವಿದ್ವಾಸರಾದ ಡಾ.ಎಂ.ಎಂ.ಕಲ್ಬುರ್ಗಿ ಅವರ ಬದುಕಿನ ಮೂಲಕ ಅನಾವರಣಗೊಳಿಸುತ್ತದೆ.

 ಇಡೀ ನಾಟಕ ಸಂಶೋಧಕನ ಸತ್ಯದ ಹುಡುಕಾಟವನ್ನು ಫಾಸಿಸಂನ ಮೌಢ್ಯ, ಕುತರ್ಕದ ಜೊತೆಗೆ ಢಿಕ್ಕಿ ಹೊಡೆಸುವುದರ ಮೂಲಕ ನಿಜದ ದಾರಿ ಕಾಣಿಸುತ್ತಾ ಹೋಗುತ್ತದೆ. ಕೋಮುವಾದೀ ಕಾರ್ಯಾಚರಣೆಯಲ್ಲಿ ದಾಳವಾದ ಯುವಕ ತನ್ನ ತಲೆಯಲ್ಲಿ ತುಂಬಲಾದ ಮಾತುಗಳನ್ನು ಕಲ್ಬುರ್ಗಿಯವರ ಮುಂದಿಡುತ್ತಾ ಹೋಗುತ್ತಾನೆ. ಅವನ ಪ್ರತಿ ಮಾತನ್ನೂ ಪ್ರೀತಿಯಿಂದ ಕೇಳಿ ಚಿಕಿತ್ಸಕನ ರೀತಿಯಲ್ಲಿ ಉತ್ತರಿಸುವ ಕಲ್ಬುರ್ಗಿಯವರ ಮಾತುಗಳಿಗೆ ಪ್ರತಿಯಾಗಿ ಉತ್ತರಿಸುವ ಬೌದ್ಧಿಕ ಸಾಮರ್ಥ್ಯವಾಗಲೀ ವೈಚಾರಿಕತೆಯಾಗಲೀ ಇಲ್ಲದ ಯುವಕ ಪ್ರತಿ ಮಾತಿನಿಂದ ವ್ಯಗ್ರನಾಗುತ್ತಾ ಹೋಗುತ್ತಾನೆ. ವೈಚಾರಿಕವಾಗಿ ಎದುರಾಗೋದು ಸಾಧ್ಯವಿಲ್ಲದಾಗ, ಸತ್ಯದ ಝಳ ಎದುರಿಸಲು ಸಾಧ್ಯವಾಗದಿರುವಾಗ ಕೊನೆಗೆ ಪಿಸ್ತೂಲೇ ಸತ್ಯದ ಬಾಯಿ ಮುಚ್ಚಿಸುವ ಸಾಧನವಾಗುತ್ತದೆ.

ಎಂ.ಎಂ.ಕಲ್ಬುರ್ಗಿಯವರು ವಚನಗಳ ನಿಕಟ ಓದಿನ ಮೂಲಕ ಕಂಡುಕೊಂಡ ಸತ್ಯಗಳು, ಅವರ ವೈಚಾರಿಕ ನಿಲುವು ಯಥಾಸ್ಥಿತಿ ವಾದಿಗಳಿಗೆ ಕಸಿವಿಸಿಯುಂಟು ಮಾಡಿರುವುದು ಇಡೀ ನಾಡಿಗೆ ತಿಳಿದಿರುವ ಸಂಗತಿ. ಆದರೆ ಈ ವಿಚಾರಗಳನ್ನು ವಾಗ್ವಾದದ ಮೂಲಕ ಎದುರಾಗುವ ಛಾತಿ ಕೋಮುವಾದಿ ಮನಸ್ಥಿತಿಗೆ ಇಲ್ಲ. ಅದು ಸಾವಿರಾರು ವರ್ಷಗಳಿಂದ ತಾನು ಬಿತ್ತಿದ ಸುಳ್ಳನ್ನು ಯಾರಾದರೂ ಹುಡುಕಿ ಬಯಲು ಮಾಡಲು ಹೊರಟರೆ ಅಂಥವರನ್ನೇ ಇಲ್ಲವಾಗಿಸಿದ್ದು ಜಗತ್ತಿನ ಇತಿಹಾಸ ತಿಳಿದವರಿಗೆ ಗೊತ್ತು. ಜೊತೆಗೆ ಇಂಥ ಮನಸ್ಥಿತಿ ಬಿತ್ತಿ ಬೆಳೆಯುವ ಮೂಲಕ ಅಬಾಧಿತವಾಗಿ ಅಧಿಕಾರವನ್ನು ಚಲಾಯಿಸುತ್ತಿರುವವರು ಸದಾ ತೆರೆಯ ಮರೆಯಲ್ಲಿದ್ದು ನಾಟಕದಲ್ಲಿ ಕಾಣುವ ಯುವಕನಂಥ ಮಗ್ಧ, ಅಮಾಯಕರನ್ನು ದಾಳಗಳಂತೆ ಬಳಸಿ ಕಾರ್ಯ ಸಾಧಿಸುತ್ತಿರುತ್ತಾರೆ. ಹೊಸ ವಿಚಾರಗಳನ್ನು ಬೌದ್ಧಿಕ ತಯಾರಿಯೊಂದಿಗೆ ಎದುರಾಗುವುದು ಯಾರಿಗೂ ಬೇಕಿಲ್ಲ. ಇದನ್ನು ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ರಂಗದ ಮೇಲೆ ತಂದಿರುವುದು ಸವಾಲೂ ಹೌದು ಆಗಬೇಕಾಗಿರುವ ಕೆಲಸವೂ ಹೌದು.

ನಾಟಕಕಾರರು ಇಡೀ ನಾಟಕದುದ್ದಕ್ಕೂ ಎಂ.ಎಂ.ಕಲ್ಬುರ್ಗಿಯವರ ಬರಹ, ಮಾತುಗಳಲ್ಲಿನ ಸಾಲುಗಳನ್ನು ಸೊಗಸಾಗಿ, ಸಹಜವಾಗಿ ಹೆಣೆದಿದ್ದಾರೆ. ಕಲ್ಬುರ್ಗಿಯವರ ಬರಹಗಳ ಓದು, ಅವರ ನಿಕಟ ಒಡನಾಟ ಹೊಂದಿದ್ದ ಬಿಜಾಪುರದ ನೋಡುಗರು ಪ್ರತಿ ಮಾತಿಗೂ ತಲೆ ತೂಗುತ್ತಿದ್ದುದು ವಿಶಿಷ್ಟವಾಗಿತ್ತು. ಇನ್ನೊಂದು ವಿಶೇಷವೆಂದರೆ ಬಿಜಾಪುರ ಜಿಲ್ಲೆಯ ಸಿಂದಗಿ ಕಲ್ಬುರ್ಗಿಯವರ ಹುಟ್ಟೂರು. ಹೀಗಾಗಿ ಇಲ್ಲಿನ ಪ್ರದರ್ಶನ ವಿಶೇಷವಾಗಿತ್ತು.

ಇಡೀ ಜಗತ್ತಿನಾದ್ಯಂತ ವೈಚಾರಿಕತೆ, ಸತ್ಯದ ಹುಡುಕಾಟದ ಕಡೆಗೆ ಮೊದಲಿಗೆ ಅವಜ್ಞೆ, ನಂತರ ದ್ವೇಷ ಹೊಗೆಯಾಡುತ್ತಿದೆ. ಇಲ್ಲಿ ಸತ್ಯದ ದಾರಿಯಲ್ಲಿ ಸಾಗುವುದು ಬೇಕಿಲ್ಲ. ಈ ದ್ವೇಷ ತನ್ನ ಅಧಿಕಾರ ಮುಂದುವರೆಸಿಕೊಂಡು ಹೋಗುವ ಉದ್ದೇಶದಿಂದ ಸತ್ಯಶೋಧಕರನ್ನೇ ಬೇಟೆಯಾಡಲು, ಇಲ್ಲವಾಗಿಸಲು ಹೊರಟಿದೆ. ಪ್ರತಿದಿನದ ಬದುಕನ್ನು ನಡೆಸಲು ಹೋರಾಟ ನಡೆಸುತ್ತಿರುವ ಮಂದಿ ತಮ್ಮ ಬದುಕು ಛಿದ್ರವಾಗುವುದೆಂಬ ಅರಿವಿಲ್ಲದೇ ಇದರ ಕಾಲಾಳುಗಳಾಗಿರುವುದು ವ್ಯಂಗ್ಯ. ಈ ನಾಟಕ ಮೊದಲಿನಿಂದ ಕೊನೆಯವರೆಗೆ ಹೀಗೆ ದಾಳವಾದ ಯುವಕನನ್ನು ಕಲ್ಬುರ್ಗಿಯವರ ಎದುರು ತಂದು ವಾಗ್ವಾದ ಹೆಣೆದಿದೆ. ಆದರೆ ಕಣ್ಣಿಗೆ ಕಾಣದ ಇದರ ಹಿಂದಿನ ಸೂತ್ರಧಾರಿಗಳು ಇಲ್ಲೂ ಅವ್ಯಕ್ತವಾಗೇ ಇದ್ದಾರೆ. ಯುವಕನ ಹತಾಶೆ, ದಿಕ್ಕೆಟ್ಟ ಸ್ಥಿತಿಯಷ್ಟೇ ಚಿತ್ರಣಗೊಂಡು ಹೀಗೆ ತನ್ನ ಬದುಕೂ ಕಳೆದುಕೊಂಡ ಅವನ ಬಗ್ಗೆ ವಿಷಾದ ಮೂಡುತ್ತದೆ.

 ವೈಚಾರಿಕತೆ ಮತ್ತು ಮೌಢ್ಯ ಇಲ್ಲಿ ಎದುರುಬದುರಾಗುತ್ತದೆ. ಒಂದು ಕ್ಷಣ ಮೈಮರೆತರೂ ಸಂಭಾಷಣೆಯ ಎಳೆ ತಪ್ಪಿಹೋಗುವಂತೆ ನಾಟಕಕಾರರು ಮಾತುಗಳನ್ನು ಹೆಣೆದಿದ್ದಾರೆ. ಸಂಗೀತವೂ ನಾಟಕದ ಓಘಕ್ಕೆ ಪೂರಕವಾಗಿ ಬಂದಿದೆ. ಇಡೀ ನಾಟಕವೇ ಸಂಭಾಷಣೆಯಿಂದ ಕಿಕ್ಕಿರಿದಿದೆ. ಇದು ನಮ್ಮನ್ನು ಆವರಿಸಿಕೊಳ್ಳುವುದಾದರೂ ದೃಶ್ಯಮಾಧ್ಯಮದ ವಿವಿಧ ಸಾಧ್ಯತೆಗಳನ್ನು ಬಳಸಿಕೊಂಡಿದ್ದಲ್ಲಿ ನಾಟಕ ಇನ್ನಷ್ಟು ಹೆಚ್ಚು ಪರಿಣಾಮಕಾರಿ ಆಗಿರುತ್ತಿತ್ತು.

ದೃಶ್ಯವೊಂದರಲ್ಲಿ ಅನೇಕ ವಿದ್ವಾಂಸರು ಪಾನಗೋಷ್ಠಿ ಮಾಡುತ್ತಾ ತಮ್ಮೊಳಗನ್ನೇ ಬಗೆದುಕೊಳ್ಳುವ ದೃಶ್ಯ ಮಾರ್ಮಿಕವಾಗಿದೆ. ಸ್ವ ಹಿತಾಸಕ್ತಿ, ಅಸೂಯೆ, ನಿರ್ಲಕ್ಷ್ಯ, ಜಡತ್ವ ಹೇಗೆ ಬೌದ್ಧಿಕ ವಲಯವನ್ನು ಭ್ರಷ್ಟಗೊಳಿಸುತ್ತದೆ ಎಂಬುದರ ಸುತ್ತ ಮಾತು ಬೆಳೆದು ಕೊನೆಗೆ ʼನಾವೆಲ್ಲರೂ ಒಂದರ್ಥದಲ್ಲಿ ಕೊಲೆಗಾರರೇʼ ಎಂಬ ಮಾತು ಆತ್ಮನಿರೀಕ್ಷೆಗೆ ಹಚ್ಚುತ್ತದೆ. ನಮ್ಮ ನಾಡಿನಲ್ಲಿ ಕಲ್ಬುರ್ಗಿಯವರ ಪರಂಪರೆಯ ಸತ್ಯಶೋಧಕರಿರುವಂತೆಯೇ ಯಥಾಸ್ಥಿತಿವಾದವನ್ನು ವರ್ಣರಂಜಿತವಾಗಿ ಮುಂದಿಡುವವರೂ ಇದ್ದಾರೆ. ಕೆಲವೊಮ್ಮೆ ಸತ್ಯ ಯಾವುದೆಂದು ತಿಳಿದಿದ್ದೂ ತಮಗೆ ತೊಂದರೆಯಾದೀತೆಂದು ಮಾತಾಡದವರಿದ್ದಾರೆ. ಇವೆಲ್ಲವನ್ನೂ ತೋರುವುದರ ಮೂಲಕ ನಾಟಕ ಹಲವು ಮಜಲುಗಳಲ್ಲಿ ಚಿಂತನೆಗೆ ಹಚ್ಚುತ್ತದೆ.

 ಇಂಥದ್ದೊಂದು ನಾಟಕ ಬರೆಯುವುದು ಮತ್ತು ಪ್ರದರ್ಶಿಸುವುದು ಎರಡೂ ಸವಾಲೆನಿಸುವ ಕಾಲದಲ್ಲಿ ನಾವಿದ್ದೇವೆ. ಹೀಗಿದ್ದೂ ಸತ್ಯಕ್ಕೆ ಮುಖಾಮುಖಿಯಾಗುವುದು ಕಲೆಯ ಜವಾಬ್ದಾರಿ ಎಂದು ಭಾವಿಸಿ ಇದನ್ನು ಬರೆದ ಮತ್ತು ರಂಗದ ಮೇಲೆ ತಂದ ಎಲ್ಲರಿಗೂ ನಾಡು ಋಣಿಯಾಗಿರುತ್ತದೆ.

ಭಾರತಿ ದೇವಿ.ಪಿ

ಕನ್ನಡ ಉಪನ್ಯಾಸಕರು

ಇದನ್ನೂ ಓದಿ- ಹಸಿವಿನ ಸೂಚ್ಯಂಕವೂ, ಭಕ್ತಾಸುರನ ಸಮರ್ಥನೆಯೂ

More articles

Latest article