ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಏನೇನು ಮಾಹಿತಿ ಇರುತ್ತದೋ ನನಗೆ ಗೊತ್ತಿಲ್ಲ. ಮಾಹಿತಿ ಪಡೆಯಲು ಅವರು ಅಂತರಾಷ್ಟ್ರೀಯ ಸಂಸ್ಥೆಯನ್ನೇ ಇಟ್ಟುಕೊಂಡಿರಬೇಕು. ಹಾಗಾಗಿ ಅವರಿಗೆ ಎಲ್ಲ ಗೊತ್ತಿರುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
ಹಾಸನ ಕಾಮಕಾಂಡದ ಆರೋಪಿ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್ ನನ್ನು ಮಲೇಶಿಯಾಗೆ ಕಳುಹಿಸಲಾಗಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿ, ನನಗೆ ಅದರ ಬಗ್ಗೆ ಮಾಹಿತಿಯಿಲ್ಲ, ಕುಮಾರಸ್ವಾಮಿ ಅಂತಾರಾಷ್ಟ್ರೀಯ ಸಂಸ್ಥೆ ಇಟ್ಟುಕೊಂಡಿರುವುದರಿಂದ ಅವರಿಗೆ ಎಲ್ಲ ಮಾಹಿತಿ ಗೊತ್ತಿರುತ್ತದೆ ಎಂದು ಗೇಲಿ ಮಾಡಿದರು.
ಪ್ರಕರಣದ ದಿಕ್ಕು ತಪ್ಪಿಸಲು ಅವರು ಬೇರೆಯವರ ಹೆಸರುಗಳನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳ ಮಾನ ರಕ್ಷಣೆಯ ಕಾಳಜಿ ಅವರಿಗಿಲ್ಲ. ತಮ್ಮ ಕುಟುಂಬದಿಂದ ಆಗಿರುವ ತಪ್ಪು ಸರಿಪಡಿಸಲು ಏನು ಮಾಡಬೇಕು ಎಂಬುದನ್ನು ಅವರು ಹೇಳಬೇಕು. ಅದನ್ನು ಬಿಟ್ಟು ವಿನಾಕಾರಣ ಪ್ರಕರಣವನ್ನು ಬೇರೆ ದಿಕ್ಕಿಗೆ ತೆಗೆದುಕೊಂಡುಹೋಗುವ ಪ್ರಯತ್ನ ಮಾಡಬಾರದು. ಅದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ಸುರೇಶ್ ಹೇಳಿದರು.
ಪ್ರಜ್ವಲ್ ಪ್ರಕರಣದಲ್ಲಿ ಮೋದಿಯನ್ನು ಯಾಕೆ ಎಳೆದುತರುತ್ತೀರಿ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಯಾಕೆಂದರೆ ಬಿಜೆಪಿ ಅವರ ಮೈತ್ರಿ ಪಕ್ಷ. ಅದಕ್ಕೆ ಮೋದಿಯವರನ್ನು ಪ್ರಶ್ನಿಸಲಾಗುತ್ತಿದೆ. ನೇಹಾ ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾಕೆ ಟಾರ್ಗೆಟ್ ಮಾಡುತ್ತಾ ಇದ್ದೀರಿ ಎಂದು ನಾವೂ ಕೇಳಬಹುದಲ್ಲವೇ ಎಂದು ಪ್ರಶ್ನಿಸಿದ ಅವರು ದೇಶದ ಪ್ರಧಾನಮಂತ್ರಿ, ಎನ್ ಡಿಎ ಮುಖ್ಯಸ್ಥರು ಆದ ನರೇಂದ್ರ ಮೋದಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರೇ ಸ್ಪಷ್ಟವಾಗಿ ಉತ್ತರ ಕೊಡಬೇಕು. ಪ್ರಧಾನಿಯವರೇ ಇದಕ್ಕೆ ನೇರಹೊಣೆ. ಯಾಕೆಂದರೆ ಅವರೇ ಪ್ರಜ್ವಲ್ ಪರವಾಗಿ ಪ್ರಚಾರ ಮಾಡಿಕೊಂಡಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೇ ಬಿಜೆಪಿ ಸ್ಥಳೀಯ ಬಿಜೆಪಿ ನಾಯಕರು ಪತ್ರ ಬರೆದು, ಪ್ರಜ್ವಲ್ ಕಾಮಕಾಂಡದ ಬಗ್ಗೆ ಗಮನ ಸೆಳೆದಿದ್ದರು. ಅವರ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಆದರೂ ಎನ್ ಡಿಎ ಅಭ್ಯರ್ಥಿಯಾಗಿ ಪ್ರಜ್ವಲ್ ನಿಲ್ಲಿಸಲಾಗಿದೆ. ಕುಮಾರಸ್ವಾಮಿಯವರೇ ಹೇಳಿದಂತೆ ಪ್ರಜ್ವಲ್ ಗೆ ಟಿಕೆಟ್ ಕೊಡುವುದಕ್ಕೆ ಅವರ ವಿರೋಧವೂ ಇತ್ತು. ಆದರೂ ಟಿಕೆಟ್ ಕೊಟ್ಟಿದ್ದು ಯಾಕೆ? ಹೀಗಾಗಿ ಆಗಿರುವ ಅನಾಹುತಗಳಿಗೆ ಪ್ರಧಾನಮಂತ್ರಿಗಳೇ ಹೊಣೆ ಎಂದರು.
ನನ್ನನ್ನು ಕೆಣಕಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿಯವರಿಗೆ ದೇವರು ಒಳ್ಳೆಯದು ಮಾಡಲಿ. ನಾವೇನು ಅವರನ್ನು ಕೆಣಕಿಲ್ವಲ್ಲ, ಕೆಣಕಿರೋರು ಯಾರು? ಅವರ ಮಿತ್ರ ಪಕ್ಷದವರೇ ಅವರನ್ನು ಕೆಣಕಿರೋದು. ಅವರ ಮಿತ್ರ ಪಕ್ಷದವರೇ ವಿಡಿಯೋ ಬಿಡುಗಡೆ ಮಾಡಿರೋದು ಎಂದು ಸುರೇಶ್ ಹೇಳಿದರು.
ಡಿಕೆ ಸೋದರರನ್ನು 420ಗಳು ಎಂದು ಕರೆದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮಾಜಿ ಪ್ರಧಾನಮಂತ್ರಿಗಳ ಕುಟುಂಬವನ್ನು 420 ಎಂದು ಕರೆಯಲ್ಲ. ಯಾಕೆಂದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಆದರೆ ಈ ಕುಟುಂಬವನ್ನು ಇಡೀ ಪ್ರಪಂಚವೇ ಈಗ ಕೊಂಡಾಡುತ್ತಿದೆ, ಹಾಡಿ ಹೊಗಳುತ್ತಿದೆ. ರಾಜ್ಯದ ಜನ ಇವರ ಮಹಿಮೆಗಳನ್ನು ಕೊಂಡಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ದೇವೇಗೌಡರ ಕುಟುಂಬದ ಆಸ್ತಿ ಪೆನ್ ಡ್ರೈವ್. ತೆನೆ ಹೊತ್ತ ಮಹಿಳೆ ಪೆನ್ ಡ್ರೈ ಹೊರುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ದೇಶದ ಜನ ಹಾಡಿ ಹೊಗಳುತ್ತಿದ್ದಾರೆ. ಇದು ನನ್ನ ಮಾತಲ್ಲ ಜನ ಹೇಳುತ್ತಿರುವ ಮಾತು. ನೂಲಿನಂತೆ ಸೀರೆ ಎಂದು ದೇಶದ ಜನ ಹೇಳ್ತಾ ಇದ್ದಾರೆ ನಾನು ಹೇಳುತ್ತಿಲ್ಲ. ಆದರೆ ನನಗೆ ಬೇಕಾಗಿರುವುದು ರಾಜ್ಯದ ಹೆಣ್ಣುಮಕ್ಕಳ ಗೌರವ ಕಾಪಾಡುವುದು. ಮಾಜಿ ಪ್ರಧಾನಿಗಳು ಸಣ್ಣ ಸಣ್ಣ ವಿಚಾರಕ್ಕೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುತ್ತಾರೆ, ಪಿಟಿಷನ್ ಬರೆಯುತ್ತಾರೆ. ಈ ವಿಷಯದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.