ವಿಶ್ವ ಪುರುಷರ ದಿನ ವಿಶೇಷ | ಪುರುಷತ್ವದ ಒತ್ತಡ

Most read

ಇಂದು ವಿಶ್ವ ಪುರುಷರ ದಿನ. ಪುರುಷ ಪ್ರಧಾನತೆಯ ಧೋರಣೆಗಳು ಪುರುಷರನ್ನು ಹೇಗೆಲ್ಲ ಶೋಷಿಸುತ್ತವೆ ಎಂಬುದನ್ನು ತನ್ನದೇ ಬದುಕಿನ ಉದಾಹರಣೆಗಳೊಂದಿಗೆ ಈ ವಿಶೇಷ ದಿನದಂದು ಚರ್ಚಿಸಿದ್ದಾರೆ ಸೂಕ್ಷ್ಮ ಸಂವೇದನೆಯ ಬರಹಗಾರ ಸಂವರ್ಥ ಸಾಹಿಲ್.‌ ಈ ಲೇಖನದೊಂದಿಗೆ ಎಲ್ಲ ಸಂವೇದನಾಶೀಲ ಪುರುಷರಿಗೆ ಶುಭಾಶಯಗಳು.  

ದಶಂಬರ 2012 ರಲ್ಲಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಅದರ ಬೆನ್ನಿಗೇ ವ್ಯಾಪಕವಾದ ಚರ್ಚೆ ಮತ್ತು ಪ್ರತಿಭಟನೆ ದೇಶದೆಲ್ಲೆಡೆ ನಡೆಯುತ್ತಿತ್ತು. ಸ್ತ್ರೀವಾದ, ಪುರುಷ ಪ್ರಧಾನತೆ, ಪುರುಷತ್ವ ಈ ಪದಗಳು ಬಹಳಷ್ಟು ಚಾಲ್ತಿಗೆ ಬಂದವು. ಆ ಸಮಯದಲ್ಲಿ ಸ್ತ್ರೀಯರ ಮೇಲಿನ ಅತ್ಯಾಚಾರಕ್ಕೆ, ಸ್ತ್ರೀ ಶೋಷಣೆಗೆ ಗಂಡುಬೀರಿತನವನ್ನು ಮೈಗೂಡಿಸಿ ಕೊಂಡ ಸಮಾಜ ಕಾರಣ ಮತ್ತು ಅಂಥಾ ವ್ಯವಸ್ಥೆಗೆ ಬಲ ತುಂಬಿದ ಮತ್ತು ಅದನ್ನು ಪರಿಪಾಲಿಸಿದ ಮಂದಿಯೆಲ್ಲರೂ ಕಾರಣ ಎಂಬುದು ನನ್ನ ಅಭಿಪ್ರಾಯ ವಾಗಿತ್ತು. ಇಂದಿಗೂ ಅದೇ ಆಗಿದೆ.

ನನ್ನ ಈ ಅರಿವು, ಈ ಅಭಿಪ್ರಾಯ ಇನ್ನಷ್ಟು ವಿಸ್ತಾರ ಗೊಳ್ಳಲಿದೆ ಎಂಬುದು ಆ ಹೊತ್ತಿಗೆ ನನಗೆ ಅರಿವಿರಲಿಲ್ಲ. ಆ ಅರಿವು ವಿಸ್ತಾರಗೊಳ್ಳಲು ಮುಖ್ಯ ಕಾರಣ ಆ ಸಮಯ ದಲ್ಲಿ ನಾನು ಪುರುಷತ್ವ, ಪುರುಷ ಪ್ರಧಾನತೆ ಕುರಿತು ಚಿಂತಿಸುತ್ತಿದ್ದುದು ಮತ್ತು ಅದೇ ಸಮಯ ದಲ್ಲಿ ನೋಡಿದ ಒಂದು ಸಿನಿಮಾ. ಸುಮಾರು ಅದೇ ಸಮಯದಲ್ಲಿ ರಶಿಯಾ ದೇಶದ ಆಂಡ್ರೆ ಆಂಡ್ರೆ ಜ್ವ್ಯಾಗಿಂಟ್ಸೆವ್  ಎಂಬ ನಿರ್ದೇಶಕನ ‘ದಿ ರಿಟರ್ನ್’ ಎಂಬ ಸಿನಿಮಾವನ್ನು ತರಗತಿಯಲ್ಲಿ ನೋಡಿದೆವು. ಆ ಸಿನಿಮಾ ಆರಂಭವಾಗುವುದು ಹೀಗೆ: ಇವಾನ್ ಎಂಬ ಬಾಲಕ ತನ್ನ ಅಣ್ಣ ಹಾಗೂ ಮೂವರು ಸ್ನೇಹಿತರೊಂದಿಗೆ ನದಿಯ ದಡದ ಪಕ್ಕದಲ್ಲಿ ಇರುವ ಒಂದು ಗೋಪುರ ಏರಿ ಅಲ್ಲಿಂದ ನೀರಿಗೆ ಜಿಗಿಯುತ್ತಿದ್ದಾರೆ. ಮೊದಲು ಹಾರಿದಾತ, `ನೀವು ಗಂಡೆದೆಯವರಾಗಿದ್ದರೆ, ಹೆಣ್ಣಿನಂತೆ ಪುಕ್ಕಲರು ಅಲ್ಲ ಎಂದಾದರೆ ಜಿಗಿಯಿರಿ’ ಎನ್ನುತ್ತಾನೆ. ಅದನ್ನು ಸವಾಲು ಎಂದು ಪರಿಗಣಿಸಿ ತಾವು ಗಂಡೆದೆಯವರು ಮತ್ತು ಹೆಣ್ಣಿನಂತೆ ಹೇಡಿಗಳಲ್ಲ ಎಂದು ಸಾಬೀತುಪಡಿಸಲು ಇವಾನನ ಅಣ್ಣ ಮತ್ತು ಮತ್ತೊಬ್ಬ ಸ್ನೇಹಿತ ನೀರಿಗೆ ಜಿಗಿಯುತ್ತಾರೆ. ಅದನ್ನು ಕಂಡು ಭಯಬೀಳುವ ಇವಾನ್ ತನ್ನೊಂದಿಗೆ ಗೋಪುರದ ಮೇಲೆ ಉಳಿದಿರುವ ಇನ್ನೊಬ್ಬ ಸ್ನೇಹಿತನನ್ನು, `ಬಾ, ನಾವು ಏಣಿ ಇಳಿದು ಕೆಳಗೆ ಹೋಗೋಣ. ಜಿಗಿಯೋದು ಬೇಡ’ ಎಂದು ಅವನನ್ನು ಒಪ್ಪಿಸಲು ನೋಡುತ್ತಾನೆ. ಅದಕ್ಕಾತ, `ಗಂಡೆದೆಯವನಲ್ಲ ಎಂದು ಅವರು ತಮಾಷೆ ಮಾಡುವುದು ಬೇಕಾ ನಿನಗೆ?’ ಎಂದು ಪ್ರಶ್ನಿಸಿ ನೀರಿಗೆ ಧುಮುಕುತ್ತಾನೆ. ಇವಾನ್ ಏನು ಮಾಡಿದರೂ ಜಿಗಿಯಲು ಧೈರ್ಯ ಬಾರದೆ ಅಲ್ಲೇ ನಿಂತು ಬಿಡುತ್ತಾನೆ. ಧುಮುಕಿದ ನಾಲ್ಕು ಮಂದಿ, `ಬೇಗ ಜಿಗಿ. ನಿನ್ನನ್ನು ಕಾಯಲು ನಮಗಾಗುವುದಿಲ್ಲ’ ಎಂದು ಮುಳುಗುವ ಸೂರ್ಯನನ್ನು ನೆನಪಿಸಿ ಮನೆಗೆ ಹೋಗುತ್ತಾರೆ. ಜಿಗಿಯಲೂ ಆಗದೆ ಏಣಿ ಹಿಡಿದು ಕೆಳಗಿಳಿಯಲೂ ಆಗದೆ ಇವಾನ್ ಅಲ್ಲೇ ಗೋಪುರದ ಮೇಲೆ ಚಳಿಯಲ್ಲಿ ನಡುಗುತ್ತಾ ಕುಳಿತು ಬಿಡುತ್ತಾನೆ. ಅದೆಷ್ಟೋ ಹೊತ್ತಿನ ಬಳಿಕ ಅವನ ಅಮ್ಮ ಬಂದು ಗೋಪುರ ಏರಿ, `ಬಾ ಮಗ ಕೆಳಗಿಳಿ…’ ಎಂದು ಕರೆಯುತ್ತಾಳೆ. ಇವಾನ್ ಕಣ್ಣೀರು ಸುರಿಸುತ್ತ, `ಇಲ್ಲ, ನಾನು ನೀರಿಗೆ ಜಿಗಿಯದಿದ್ದರೆ ಅವರೆಲ್ಲ ನನ್ನನ್ನು ಹೇಡಿ, ಗಂಡೆದೆಯವನಲ್ಲ ಎಂದು ತಮಾಷೆ ಮಾಡುತ್ತಾರೆ’ ಎನ್ನುತ್ತಾನೆ. ಅವನ ತಾಯಿ, `ಅವರ್ಯಾರಿಗೂ ಗೊತ್ತಾಗುವುದಿಲ್ಲ ನೀನು ಏಣಿ ಹಿಡಿದು ಕೆಳಗಿಳಿದ ವಿಚಾರ’ ಎನ್ನಲು ಇವಾನ್, `ನಿನಗೆ ಗೊತ್ತಾಗುತ್ತದಲ್ಲಾ…’ ಎನ್ನುತ್ತಾನೆ.

ದಿ ರಿಟರ್ನ್’ ಸಿನೇಮಾದ ಒಂದು ದೃಶ್ಯ

ಮಾರನೆ ದಿನ ಸ್ನೇಹಿತರು ಆಟ ಆಡುತ್ತಿರುವ ಜಾಗಕ್ಕೆ ಹೋದಾಗ ಅವನನ್ನು ಆಟಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಯಾಕೆ ಎಂದು ಇವಾನ್ ಕೇಳಿದರೆ, `ನೀನು ಒಬ್ಬ ಹೇಡಿ. ನಿನ್ನಲ್ಲಿ ಗಂಡೆದೆ ಇಲ್ಲ’ ಎಂದು ತಮಾಷೆ ಮಾಡಲಾಗುತ್ತದೆ. ಇವಾನ್ ರೊಚ್ಚಿಗೆದ್ದು ಹೊಡೆದಾಟಕ್ಕೆ ಇಳಿಯುತ್ತಾನೆ. ಅಣ್ಣನಿಗೆ ಹೊಡೆದು ಮನೆಯ ಕಡೆಗೆ ಓಡುತ್ತಾ ಹೋಗುತ್ತಾನೆ. ಅವನ ಅಣ್ಣ ಅವನನ್ನು ಅಟ್ಟಿಸಿಕೊಂಡು ಬರುತ್ತಾನೆ. ಮನೆಗೆ ಬಂದರೆ 12ವರ್ಷ ಬಿಟ್ಟು ತಂದೆ ಮನೆಗೆ ಮರಳಿದ್ದಾನೆ. ತಂದೆಯ ನೆನಪೇ ಇಲ್ಲ ಈ ಅಣ್ಣ-ತಮ್ಮನಿಗೆ. ತಂದೆ ಗತಿಸಿದ 12 ವರ್ಷಕ್ಕೆ ಪರಿಹಾರ ಒದಗಿಸಲೋ ಎಂಬಂತೆ ಮಕ್ಕಳಿಬ್ಬರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹೆಜ್ಜೆ ಹೆಜ್ಜೆಗೂ ಪೌರುಷದ ಪ್ರದರ್ಶನ ಮಾಡುವ ತಂದೆಯನ್ನು ಕಂಡರೆ ಅಣ್ಣನಿಗೆ ಒಲವು ಮೂಡುತ್ತದೆ ಮತ್ತು ತಂದೆಯ ಪೌರುಷದ ಬಗ್ಗೆ ಹೆಮ್ಮೆ ಮೂಡುತ್ತದೆ. ಆದರೆ ಇವಾನನಿಗೆ ಭಯ ಹೆಚ್ಚುತ್ತದೆ. ತಂದೆಗೆ ತನ್ನಿಬ್ಬರೂ ಮಕ್ಕಳನ್ನು ಬಲಾಢ್ಯರನ್ನಾಗಿಸುವ ಬಯಕೆ. ಪ್ರವಾಸದ ಸಂದರ್ಭದಲ್ಲಿ ಅದಕ್ಕಾಗಿ ಅವರನ್ನು ಬಹಳವಾಗಿ ಪರೀಕ್ಷೆಗೆ ಒಡ್ಡುತ್ತಾನೆ. ಇದರಿಂದ ಮೊದಲ ಮಗನ ಪ್ರೀತಿ ಗೌರವ ಸಂಪಾದಿಸುತ್ತಾನೆ. ಆದರೆ ಇವಾನ್ ತಂದೆಯಿಂದ ದೂರವಾಗುತ್ತಾ ಹೋಗುತ್ತಾನೆ. ಕೊನೆಗೆ ತಂದೆಮಗನ ಜಟಾಪಟಿಯ ನಡುವೆ ತಂದೆ ಅಸ್ವಾಭಾವಿಕವಾದ ಸಾವು ಹೊಂದುತ್ತಾನೆ.

ಈ ಸಿನಿಮಾ ನೋಡಿ ಮುಗಿಸುವಾಗ ಪುರುಷ ಪ್ರಧಾನ ಸಮಾಜ ಪುರುಷರನ್ನೂ ಶೋಷಿಸುತ್ತದೆ, ಪುರುಷತ್ವದ ಒತ್ತಡ ಪುರುಷರನ್ನೂ ಘಾಸಿಗೊಳಿಸುವುದು ಮಾತ್ರವಲ್ಲ, ಅವರನ್ನು ಅಮಾನವೀಯವಾಗಿಸಿ ನಿಷ್ಕ್ರಿಯ ಗೊಳಿಸುತ್ತದೆ ಎಂಬ ಅರಿವಿನ ಬೀಜ ಒಳಗೆಲ್ಲೋ ಮೊಳಕೆಯೊಡೆದಿತ್ತು. ಹೊಳೆದ ಈ ವಿಚಾರವನ್ನು ಕ್ಯಾಂಪಸ್‌ನಲ್ಲಿ ಇದ್ದ  ಗೆಳತಿ ಒಬ್ಬಳ ಜೊತೆ ಹಂಚಿಕೊಂಡಾಗ ಆಕೆ, `ರಬ್ಬಿಶ್’ ಎಂದು ನನ್ನ ಮಾತನ್ನು ತಿರಸ್ಕರಿಸಿದಳು. ಪುರುಷ ಪ್ರಧಾನತೆ ಪುರುಷರನ್ನೂ ಶೋಷಿಸುತ್ತದೆ ಎಂಬುದನ್ನು ಆಕೆ ಒಪ್ಪಲು ತಯಾರಿರಲಿಲ್ಲ. ಆವಾಗ ಆಕೆಯೊಂದಿಗೆ ನನ್ನದೇ ಬದುಕಿನ ಉದಾಹರಣೆಗಳನ್ನು ನೀಡಿ ಚರ್ಚೆ ಮುಂದುವರಿಸಬೇಕಾಯಿತು.

ಪುರುಷ ಪ್ರಧಾನತೆ ಎಂಬುದು ಪುರುಷ ಯಾಜಮಾನ್ಯವನ್ನು ಮತ್ತು ಹಿರಿಮೆಯನ್ನು ಒಪ್ಪಿಕೊಂಡ ಒಂದು ಮನೋಸ್ಥಿತಿ. ಪುರುಷತ್ವ ಎಂಬುದು ಪುರುಷ ಪ್ರಧಾನತೆಯ ಅಚ್ಚಿನಲ್ಲಿ ಮೂಡಿಬಂದಿದ್ದು, ಅದನ್ನು ಪುರುಷರು ಹೊರಬೇಕಾಗುತ್ತದೆ ಮತ್ತು ಪುರುಷರು ಅದನ್ನು ಹೊರಬೇಕೆಂದು ನಿರೀಕ್ಷಿಸಲಾಗುತ್ತದೆ ಕೂಡಾ. ಸಮಾಜ ನಿರ್ಧರಿಸಿದ ಮತ್ತು ನಿರೀಕ್ಷಿಸಿದ ರೀತಿಯ ಪುರುಷನಾಗಿ ಮೂಡುವ ಒತ್ತಡ ಎಲ್ಲಾ ಗಂಡು ಮಕ್ಕಳ ಮೇಲೆ ಇದ್ದೇ ಇರುತ್ತದೆ.

ಕುಳ್ಳಕ್ಕೆ ಇದ್ದು ಬಲಿಷ್ಠ ದೇಹವನ್ನೂ ಹೊಂದದ ನಾನು ಆಟದಲ್ಲಿ ಸದಾ ಹಿಂದೆ. ಬ್ಯಾಟಿಂಗೂ ಬೌಲಿಂಗೂ ಏನೂ ಬಾರದು ನೆಟ್ಟಗೆ. `ನೀನು ಹುಡುಗಿಯರೊಟ್ಟಿಗೆ ಟೊಂಕದಾಟ ಆಡಲು ಹೋಗು’ ಎಂದು ಅದೆಷ್ಟು ಬಾರಿ ಕೇಳಿದ್ದೇನೋ ನೆನಪಿಲ್ಲ. ಇಂಥಾ ಮಾತುಗಳು, `ಹೆಣ್ಣು ಮಕ್ಕಳು ಬಲಹೀನರು’ ಎಂಬ ಚಿತ್ರವನ್ನು ಕಟ್ಟಿಕೊಟ್ಟು ನಮ್ಮ ಸಾಮೂಹಿಕ ಉಪಪ್ರಜ್ಞೆಯೊಳಗಡೆ ಇರಿಸುತ್ತದೆ ಮತ್ತು ಅದೇ ರೀತಿಯಲ್ಲಿ ಅದೇ ಹೊತ್ತಿಗೆ ಇಂಥಾ ಮಾತುಗಳು, `ಗಂಡುಮಕ್ಕಳು ಬಲಿಷ್ಠರು’ ಎಂಬುದನ್ನು ಸದ್ದಿಲ್ಲದೇ ಸಾರಿ ‘ಬಲಿಷ್ಠತೆ’ಯನ್ನು ಗಂಡುಮಕ್ಕಳಿಗೆ ಕಡ್ಡಾಯ ಗೊಳಿಸುತ್ತದೆ. ಬಲಿಷ್ಠತೆಯನ್ನು ಆಟೋಟದಲ್ಲಿ ಪಾಲ್ಗೊಳ್ಳುವಿಕೆ, ಬಲಾಢ್ಯ ದೇಹ ಹೊಂದುವುದು ಇತ್ಯಾದಿಗಳ ಮೂಲಕ ಸಾಬೀತುಪಡಿಸಿದ ಗಂಡು ಮೆಚ್ಚುಗೆಗೆ ಪಾತ್ರನಾಗುತ್ತಾ ಹೋಗುತ್ತಾನೆ. ಆ ನಿರೀಕ್ಷೆಗಳನ್ನು ಮೆಚ್ಚಿಸಲಿಕ್ಕೆ ಎಲ್ಲಾ ಗಂಡಸರಿಗೆ ಸಾಧ್ಯವಾಗುವುದಿಲ್ಲ. ಹಾಗಾದಾಗ ಅವರೊಳಗೆ ಕೀಳರಿಮೆ ಮೂಡುವುದು ಸಹಜ. ಮತ್ತು ಅಂಥಾ ಗಂಡಸುತನವನ್ನು ಸಾಧಿಸಲು ಇಲ್ಲದ ಸಾಹಸ, ಪ್ರಯತ್ನ ಹೆಚ್ಚಿನ ಗಂಡಸರು ನಡೆಸುವುದು ಸಹ ಸಹಜ. ಇದರಿಂದಾಗಿ ಎಷ್ಟೋ ಗಂಡುಮಕ್ಕಳು ತಮ್ಮ ಆಸಕ್ತಿಯನ್ನು ಬದಿಗೊತ್ತಿ ಜನಪ್ರಿಯವಾದ ಪುರುಷನ ರೂಪ ಪಡೆಯಲು ಪರದಾಡುತ್ತಾರೆ. ಅದನ್ನು ಸಾಧಿಸಲಾಗದೆ ಹೋದಾಗ ಹತಾಶೆಗೆ ಒಳಗಾಗುತ್ತಾರೆ.

ಇಂಥಾ ಹತಾಶೆಯ ಕ್ಷಣಗಳನ್ನು ಸಂಭಾಳಿಸುವುದು ಗಂಡಸರ ಪಾಲಿಗೆ ಸುಲಭದ ಕೆಲಸವಲ್ಲ. ಯಾಕೆಂದರೆ ಪುರುಷ ಪ್ರಧಾನ ವ್ಯವಸ್ಥೆ, ಮತ್ತು ಪುರುಷತ್ವವು ಗಂಡಸರು ಅಳಬಾರದು ಎಂದು ನಿರೀಕ್ಷಿಸುತ್ತದೆ. ಅದೆಷ್ಟೋ ಬಾರಿ ಆಟದಲ್ಲಿ ಸೋತಾಗ ನನ್ನ ಪುರುಷತ್ವ ಮತ್ತೆ ತಮಾಷೆಗೆ ಗುರಿಯಾಗುತ್ತದೆ ಎಂಬುದು ಅರಿವಾಗಿ ಕಣ್ಣಲ್ಲಿ ನೀರು ತುಂಬಿ ಬಂದದ್ದಿತ್ತು. ಹಾಗೆ ಉಕ್ಕಿ ಬಂದ ಕಣ್ಣೀರು ಸ್ನೇಹಿತರ ಕಣ್ಣಿಗೆ ಬಿದ್ದರೆ, `ಎಬ್ಬೇ… ಹುಡುಗಿಯರ ಹಾಗೆ ಅಳುತ್ತಾ ಇದ್ದಾನೆ’ ಎಂದು ಮತ್ತೆ ತಮಾಷೆಗೆ ಒಳಗಾದದ್ದಿದೆ. ಇದು ಸ್ನೇಹಿತರ ನಡುವೆ ಮಾತ್ರವಲ್ಲ, ಶಾಲೆಯಲ್ಲಿ ಟೀಚರ್, ಮನೆಯಲ್ಲಿ ಕುಟುಂಬದವರು ಎಲ್ಲರೂ, `ಅಳುವುದಕ್ಕೆ ನೀನೇನು ಹುಡುಗಿಯಾ?’ ಎಂದು ಪ್ರಶ್ನಿಸಲ್ಪಟ್ಟಿದ್ದೇನೆ. ಈ ಮಾತುಗಳಲ್ಲಿ, `ಹೆಣ್ಣು ಬಲಹೀನಳು ಅದಕ್ಕಾಗಿ ಅಳುತ್ತಾಳೆ’ ಎಂಬ ಅಭಿಪ್ರಾಯ ಇರುವುದರೊಂದಿಗೆ, `ಗಂಡು ಬಲಹೀನನಲ್ಲ, ಹಾಗಾಗಿ ಅಳಬಾರದು’ ಎಂಬ ಅಭಿಪ್ರಾಯವೂ ಇದೆ ಮತ್ತು ನಿರೀಕ್ಷೆಯೂ ಇದೆ. ಇದರಿಂದ ನೋವಾದಾಗ ಸಹಜವಾಗಿ ಅಳುವುದನ್ನು ಬಿಟ್ಟು ಉಕ್ಕಿಬರುವ ಕಣ್ಣೀರನ್ನು ನುಂಗಿಕೊಳ್ಳಬೇಕಾದ ಒತ್ತಡ ಗಂಡಸರ ಮೇಲಿರುತ್ತದೆ. ಕೇವಲ ಅಳುವಲ್ಲ, ಭಾವನೆಗಳ ಬಹಿರಂಗ ಪ್ರದರ್ಶನವನ್ನು ಕೀಳಾಗಿ ನೋಡುತ್ತದೆ ಪುರುಷತ್ವದ ನಿರೀಕ್ಷೆ. ಪ್ರೀತಿ, ಸ್ನೇಹ, ನೋವು ಇವ್ಯಾವನ್ನೂ ಸುಲಭವಾಗಿ ಪ್ರದರ್ಶಿಸುವುದಕ್ಕೆ ಗಂಡಸರಿಗೆ ಅನುವು ಮಾಡಿಕೊಡುವುದಿಲ್ಲ. ಮೊದಲ ಪ್ರೀತಿ ಹೃದಯದಲ್ಲಿ ಕಣ್ಣು ಬಿಟ್ಟ ಸಂದರ್ಭದಲ್ಲಿ ಕೈ ಕಂಪಿಸಿದ್ದು ಸುಳ್ಳಲ್ಲ. ಆಕೆಯ ಬಳಿ ಹೋಗಿ ಮನದ ಮಾತು ಹೇಳಲು ಹಿಂಜರಿಯುತ್ತಿದ್ದ ನನಗೆ ಸ್ನೇಹಿತರು ಹೇಳಿದ ಮಾತು, `ಎದೆಯುಬ್ಬಿಸಿಕೊಂಡು ಹೋಗು, ಗಂಡಸಿನಂತೆ ಮನದ ಮಾತು ಹೇಳು…’ ಭಾವನೆಗಳ ಕೋಮಲತೆಯ ಪದರವನ್ನು ಹರಿದು `ಆಜ್ಞೆ ‘ ಎಂಬಂತೆ ಹೇಳು ಎಂಬುದು ಮಾತಿನ ಒಳಗಿನ ಅರ್ಥವಾಗಿತ್ತು. ಒಳಲೋಕದ ನಾಜೂಕುತನವನ್ನು ಪ್ರದರ್ಶಿಸಬಾರದು ಎಂಬುದು ಅಗೋಚರ ವಾದ ಆದೇಶವಾಗಿತ್ತು

ಕಣ್ಣೀರು ಗಂಡು ಮಕ್ಕಳಿಗೆ ನಿಷಿದ್ಧ. ನೋವಾದಾಗ ಮಾತ್ರ ಅಲ್ಲ, ಯಾವುದೇ ಸಂದರ್ಭದಲ್ಲೂ ಅದು ನಿಷಿದ್ಧ. ಮೊದಲಿನಿಂದಲೂ ಸಿನಿಮಾಪ್ರಿಯನಾದ ನಾನು ಹೆಚ್ಚು ಕಡಿಮೆ ಎಲ್ಲಾ ಸಿನಿಮಾ ನೋಡುವಾಗಲೂ ಕಣ್ಣೀರು ಸುರಿಸುತ್ತಿದ್ದೆ, ಈಗಲೂ ಕೆಲವೊಮ್ಮೆ ಸುರಿಸುತ್ತೇನೆ. ಇದು ಸಹ ಒಂದು ನಿಷಿದ್ಧ ಕ್ರಿಯೆ ಪುರುಷರಿಗೆ. ಹೀಗೆ ಸಿನಿಮಾ ನೋಡುತ್ತಾ ಅಳುವ ಗಂಡಸು ತಮಾಷೆಯ ವಸ್ತುವಾಗುವುದು ಆತ ಕೋಮಲವಾದ, ಮೃದುವಾದ ಭಾವನೆಗಳನ್ನು ಅದುಮಿಟ್ಟು ಕೇವಲ ದೃಢವಾಗಿ ವರ್ತಿಸಬೇಕು ಎಂಬ ನಿರೀಕ್ಷೆಯ ಫಲ. ಅತ್ತರೆ ಆತ ಸಂಪೂರ್ಣ ಗಂಡಸು ಅಲ್ಲ ಎಂಬ ಭಾವನೆ ಗಂಡಸರಲ್ಲಿಯೂ ಹೆಣ್ಣು ಮಕ್ಕಳಲ್ಲಿಯೂ ಇದೆ. ಹೀಗಾಗಿ ಗಂಡಸರು ತಮ್ಮ ಒಳಗಿನ ಮೃದುತ್ವವನ್ನು ಅದುಮಿ ಬದುಕಬೇಕು, ಮಿಡಿತವನ್ನು ಮುಚ್ಚಿಡಬೇಕು. ಮತ್ತೆ ಗಂಡಸರು ಎಂದರೆ ಫೈಟಿಂಗ್‌ ಪ್ರಧಾನ ಆ್ಯಕ್ಷನ್ ಸಿನಿಮಾ ನೋಡಬೇಕು ಎಂಬ ಒಂದು ಅಘೋಷಿತ ನಿಯಮ ನಮ್ಮ ಸ್ನೇಹಿತರ ಗುಂಪಿನಲ್ಲಿ ಇತ್ತು. ಆದರೆ ನನಗ್ಯಾಕೋ ಪ್ರೇಮಪ್ರಧಾನ ಮತ್ತು ಕೌಟುಂಬಿಕ ಸಿನಿಮಾಗಳೇ ಇಷ್ಟವಾಗುತ್ತಿದ್ದವು. ನನ್ನ ಈ ಅಭಿರುಚಿಯೂ ಸಹ ತಮಾಷೆಗೆ ಒಳಗಾಗಿದ್ದು ನಿಜ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಪುರುಷತ್ವ ಗಂಡಸರ ಅಭಿರುಚಿಯನ್ನೂ ನಿರ್ಧರಿಸುತ್ತದೆ.

ಹೀಗೆ ಬಲಿಷ್ಟವಾದ ಗಂಡಸು ರಕ್ಷಕನೂ ಆಗಿರಬೇಕು ಎಂದು ಪುರುಷತ್ವ ನಿರೀಕ್ಷಿಸುತ್ತದೆ. ರಕ್ಷಾಬಂಧನದ ಹಿಂದಿರುವ ಆಲೋಚನೆಯೂ ಇದೇ ಆಗಿದೆ. ಬಾಲ್ಯದ ದಿನಗಳಲ್ಲಿ ಒಮ್ಮೆ ಸ್ನೇಹಿತರೆಲ್ಲ ಕುಳಿತು ಟಿವಿಯಲ್ಲಿ ‘ಕಯಾಮತ್ ಸೆ ಕಯಾಮತ್ ತಕ್’ ಸಿನಿಮಾ ನೋಡುತ್ತಿದ್ದೆವು. ಅದರಲ್ಲಿ ಒಮ್ಮೆ ವಿಲನ್ ಎದುರಾದಾಗ ಹೀರೋ ಫೈಟಿಂಗ್ ಮಾಡುವುದು ಬಿಟ್ಟು ರಸ್ತೆಯ ಬದಿಯಲ್ಲಿ ಇರುವ ಕಲ್ಲನ್ನು ಕೈಗೆತ್ತಿಕೊಂಡು ವಿಲನ್ ಅನ್ನು ಹೆದರಿಸಲು ಪ್ರಯತ್ನಿಸುತ್ತಾನೆ. ಆ ಸೀನ್ ನೋಡುತ್ತಿದ್ದಾಗ ನಾವೆಲ್ಲಾ, ನನ್ನನ್ನೂ ಸೇರಿಸಿ, `ಥೂ’ ಎಂದು ನಗಾಡಿದ್ದೆವು.

ಇಂಥಾ ನಿರೀಕ್ಷೆಯೇ ಗಂಡಸು ಕುಟುಂಬ ಪೋಷಕ ಆಗಬೇಕು ಎಂಬ ನಿರೀಕ್ಷೆಗೆ ಪೂರಕವಾಗಿದೆ. ಗಂಡಸು ಕುಟುಂಬ ಪೋಷಕ ಎಂದು ಹೇಳುವಾಗ ಅಲ್ಲಿ ಹೆಣ್ಣನ್ನು ಕುಟುಂಬದಲ್ಲಿ ಕೇವಲ ‘ಮಾಡಿಹಾಕುವ’ ಕೆಲಸಕ್ಕೆ ಸೀಮಿತ ಗೊಳಿಸುವುದು ಮಾತ್ರವಲ್ಲ, ಕುಟುಂಬ ಪೋಷಕ ಆಗಲೇಬೇಕಾದ ಒತ್ತಡವನ್ನು ಹೇರುತ್ತದೆ.

ರಾಜಕೀಯ ಕಾರಣಗಳಿಗೆ ನನ್ನ 23 ನೆ ವಯಸ್ಸಿಗೆ ನನ್ನ ಮೊದಲ ಉದ್ಯೋಗವನ್ನು ಕಳೆದುಕೊಂಡು ಕೆಲವು ತಿಂಗಳ ಕಾಲ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತು ಕೊಳ್ಳಬೇಕಾಯಿತು. ಮೊದಲೇ ಖಿನ್ನತೆಯ ಸಮಸ್ಯೆ ಎದುರಿಸುತ್ತಿದ್ದ ನಾನು ಮತ್ತಷ್ಟು ಖಿನ್ನತೆಗೆ ಜಾರಿದೆ. ಆಗ ನನ್ನ ಮಾನಸಿಕ ತಜ್ಞರು, `ನೀನು ಗಂಡು ಮಗ, ನೀನು ಜವಾಬ್ದಾರಿ ಹೊತ್ತು ಕೊಳ್ಳಬೇಕು’ ಎಂದೆಲ್ಲ ಸಲಹೆ ನೀಡುತ್ತಾ ಇದ್ದರು; ನನ್ನನ್ನು ಮತ್ತೆ ಉದ್ಯೋಗ ನಿರತನಾಗುವಂತೆ  ಹುರಿದುಂಬಿಸಲು. ಸೋಲುವುದು, ಸುಸ್ತಾಗುವುದು, ಅದೃಢ, ಅನಿಶ್ಚಿತ, ದುರ್ಬಲ ಆಗುವುದು ಗಂಡಸರಿಗೆ ಒಂದು ಆಯ್ಕೆಯೇ ಅಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನ್ನೊಳಗಿನ ಹೆಣ್ತನದೊಂದಿಗೆ ಎಲ್ಲಾ ಸಂಪರ್ಕ ಕಡಿದುಕೊಳ್ಳಬೇಕಾದ ಅನಿವಾರ್ಯತೆಯನ್ನು ಗಂಡಸರ ಮೇಲೆ ಹೇರಲಾಗುತ್ತದೆ. ಹಾಗಾದಾಗ ಗಂಡಸು ಪುರುಷತ್ವ ತಿಂದು ತೇಗಿದ ಗಂಡಸಾಗುವ ಭರದಲ್ಲಿ ತನ್ನ ಒಳಗಿನ ಕೋಮಲ, ಮೃದು ಮತ್ತು ಸಹಜ ಅಂಶಗಳನ್ನು ಕಳೆದುಕೊಳ್ಳುತ್ತಾ ಮನುಷ್ಯತ್ವವನ್ನು ಕಂತು ಕಂತಾಗಿ ಕಳೆದುಕೊಳ್ಳುತ್ತಾನೆ. ಆಟೋಟದಲ್ಲಿ ಆಸಕ್ತಿ ಇಲ್ಲದ, ಪಾಲ್ಗೊಳ್ಳದ, ಗಟ್ಟಿ ದೇಹ ಹೊಂದದ, ಬಲಹೀನ, ಭಾವುಕನಾದ ಗಂಡಸು ಮತ್ತು ಮನೆಯನ್ನು ನಡೆಸಲಾಗದ ಗಂಡಸನ್ನು ಈ ಸಮಾಜ ಕೀಳಾಗಿಯೇ ನೋಡುತ್ತದೆ. ಪುರುಷಪ್ರಧಾನ ಸಮಾಜ ನಿರ್ದೇಶಿಸಿದ ಪುರುಷತ್ವ ಗಂಡಸರಿಗೆ ಐಚ್ಛಿಕವಲ್ಲ, ಕಡ್ಡಾಯ. ಆ ನಿರೀಕ್ಷೆಯ ಮಟ್ಟ ತಲುಪದಿದ್ದರೆ ಅವರ ಆತ್ಮಸ್ಥೆರ್ಯ ಆತ್ಮಗೌರವ ಎಲ್ಲವೂ ಮಣ್ಣಾಗಿ ಹೋಗುತ್ತದೆ. ಹಾಗಾಗಿ ಗಂಡಸು ಬಹಳ ಒತ್ತಡಕ್ಕೆ ಒಳಗಾಗಿ ತನ್ನ ಸಹಜತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ ಆಯ್ಕೆಗಳ ಬರದಲ್ಲಿ.

ಹೀಗೆ ಪುರುಷತ್ವದ ನಿರೀಕ್ಷೆಯ ಮಟ್ಟದ ಗಂಡಸಾಗುವ ಪ್ರಕ್ರಿಯೆಯಲ್ಲಿ ಮತ್ತು ಹಾಗೆ ಆಗಲಾಗದಾಗ ಆಗುವ ಹತಾಶೆಯ ಪರಿಣಾಮವಾಗಿ ಕ್ರೂರನಾಗುತ್ತಾನೆ ಗಂಡಸು. ಆ ಹೊತ್ತಿಗೆ ಅವನ ಕ್ರೌರ್ಯಕ್ಕೆ ಶಿಕಾರಿ ಆಗುವುದು ಹೆಚ್ಚಾಗಿ ಪುರುಷಪ್ರಧಾನ ಸಮಾಜದಲ್ಲಿ ಅವನಿಗಿಂತ ಬಲಹೀನ ಆಗಿರುವ ಹೆಣ್ಣು. ಅದು ದೈಹಿಕ, ಮಾನಸಿಕ, ಲೈಂಗಿಕ ಕ್ರೌರ್ಯದ ಬಣ್ಣದಲ್ಲಿ ಪ್ರಕಟಗೊಳ್ಳುತ್ತದೆ. ಪುರುಷ ಪ್ರಧಾನ ಸಮಾಜ ಗಂಡು-ಹೆಣ್ಣು ಇಬ್ಬರನ್ನು ಅಚ್ಚಿನಿಂದ ತೆಗೆದ ಗೊಂಬೆಗಳನ್ನಾಗಿಸಿ ಅವರ ಸಹಜತೆ, ಪ್ರಾಕೃತಿಕತೆ ಎಲ್ಲವನ್ನೂ ನಾಶ ಮಾಡುತ್ತದೆ. ಹಾಗಾಗಿ ಈ ಪುರುಷಪ್ರಧಾನ ಸಮಾಜವನ್ನು ಒಡೆಯಬೇಕಾಗಿದೆ. ಇದು ಸರ್ವರ ಸ್ವಾತಂತ್ರ್ಯಕ್ಕಾಗಿ.

ಇದಕ್ಕೆ ಇರುವ ಮುಖ್ಯ ಅಸ್ತ್ರವೇ ಸ್ತ್ರೀವಾದ. ಸ್ತ್ರೀವಾದ ಎಂದರೆ ಹೆಣ್ಣನ್ನು ಮಾತ್ರವಲ್ಲ, ಗಂಡಸನ್ನೂ ಬಿಡುಗಡೆಗೊಳಿಸುವ ಅಸ್ತ್ರ. ಶೋಷಣೆಯ ವಿಷವರ್ತುಲದಿಂದ ಗಂಡು ಹೆಣ್ಣು ಹೊರಬರಲು ಸ್ತ್ರೀವಾದದ ಅಗತ್ಯವಿದೆ. ಆ ಮುಖಾಂತರ ಗಂಡಸರು ಪುರುಷ ಪ್ರಧಾನ ಪುರುಷತ್ವ ಸಾಧಿಸುವ ಹೊರತಾಗಿ ಸ್ತ್ರೀವಾದಿ ಪುರುಷತ್ವ ಸಾಧಿಸಿ ಹೆಚ್ಚು ಸ್ವತಂತ್ರರಾಗಬಹುದು. ಸ್ತ್ರೀವಾದಿ ಪುರುಷತ್ವ, ಗಂಡಸಿನ ಒಳಗೆ ಪುರುಷ ಶ್ರೇಷ್ಠತೆಯ ಒತ್ತಡ ಹೇರದೆ ಸಹಜವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತದೆ…

ಹೀಗೆ ವಿವರಿಸುತ್ತಾ ಹೋದಾಗ ನನ್ನ ಗೆಳತಿ ಹೇಳಿದಳು, `ನೀನು ಹೇಳಿದ್ದರಲ್ಲಿ ಹುರುಳಿದೆ. ಆದರೂ ಪುರುಷ ಪ್ರಧಾನತೆಯಲ್ಲಿ ಹೆಣ್ಣಿನ ಮೇಲೆ ಆಗುವಷ್ಟು ಶೋಷಣೆ ಗಂಡಸಿನ ಮೇಲೆ ಆಗುವುದಿಲ್ಲ’. ಅದನ್ನು ಒಪ್ಪಿದ ನಾನು, `ಆದರೆ ಗಂಡಸರ ಮೇಲೂ ಪುರುಷ ಪ್ರಧಾನತೆ ಸವಾರಿ ನಡೆಸಿ ಅವರನ್ನೂ ಶೋಷಿಸುತ್ತದೆ’ ಎಂದೆ. `ಹೌದು’ ಎಂದಳು ಆಕೆ. `ಅದಕ್ಕಾಗಿಯೇ ಪುರುಷ ಪ್ರಧಾನತೆಯನ್ನು ಸೋಲಿಸುವುದು ಅಗತ್ಯ ಮತ್ತು ಮುಖ್ಯ’ ಎಂದು ನಾವಿಬ್ಬರೂ ಚರ್ಚೆ ಸಮಾಪ್ತಿ ಗೊಳಿಸಿದ್ದೆವು.

ಸಂವರ್ತ ಸಾಹಿಲ್, ಮಣಿಪಾಲ

ಸೂಕ್ಷ್ಮ ಸಂವೇದನೆಯ ಬರಹಗಾರರು

ಇದನ್ನೂ ಓದಿ http://ಪಾತ್ರಗಳು ಬದಲಾದಾಗ…https://kannadaplanet.com/womens-day-special-when-the-roles-change/

More articles

Latest article