ಪ್ರಹಸನ |ಮಾಡಿದೋರ ಪಾಪ ನೋಡಿದವರಿಗೆ

Most read

(ಕೋರ್ಟ್ ಹಾಲ್.. ಪೆನ್ ಡ್ರೈವ್ ಕೇಸ್ ಕುರಿತು ವಿಚಾರಣೆ ನಡೀತಾ ಇದೆ)

ವಕೀಲ : ಸ್ವಾಮಿ ಕಟಕಟೆಯಲ್ಲಿ ನಿಂತಿರುವ ಈ ಆರೋಪಿ ಅತೀ ದೊಡ್ಡ ಅಪರಾಧ , ಘನಘೋರ ಅಪರಾಧ ಮಾಡಿದ್ದಾನೆ.. ಹೀಗಾಗಿ ಈತನಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಲೇಬೇಕೆಂದು ಕೇಳಿಕೊಳ್ಳುವೆ.

ನ್ಯಾಯಾಧೀಶ : ಅಪರಾಧವಾ? ಅದೂ ಘನಘೋರವಾದದ್ದಾ, ಏನು ಹೇಳಿ?

ವಕೀಲ : ಈತ ನೋಡಬಾರದ್ದನ್ನು ನೋಡಿದ್ದಾನೆ ಸ್ವಾಮಿ. ಬೇರೆಯವರು ಖಾಸಗಿಯಾಗಿ ಮಾಡಿಕೊಂಡಿದ್ದ ರತಿ ಕ್ರೀಡಾ ವಿನೋದದ ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ನೋಡಿ ತಪ್ಪು ಮಾಡಿದ್ದಾನೆ.

ನ್ಯಾಯಾಧೀಶ : ಅಂದರೆ  ಈತ ನೋಡಿದವ. ಹಾಗಾದರೆ ವಿಡಿಯೋ ಮಾಡಿದವರು ಯಾರು?

ವಕೀಲ : ಮಾಡಿದವರಿಗೆ ಶಿಕ್ಷೆ ಆಗಬಹುದು ಬಿಡಬಹುದು ಅದು ಬೇರೆ ವಿಷಯ ಸ್ವಾಮಿ.. ಆದರೆ ಈತ ಅದನ್ನೆಲ್ಲಾ ನೋಡಬಾರದಿತ್ತು ನೋಡಿದ್ದಾನೆ.

ನ್ಯಾಯಾಧೀಶ : ಆಯ್ತು ನೋಡಿದ್ದಾಯ್ತು. ನೋಡಬಾರದಂತಾ ವೀಡಿಯೋ ಮಾಡಿದ್ದು ಯಾರು?

ವಕೀಲ : ಅದೇ ಸ್ವಾಮಿ.. ಯಾರು ಆ ರೀತಿ ಕೆಲಸ ಮಾಡಿದ್ದಾರೋ ಅವರೇ ಈ ರೀತಿ  ವಿಡಿಯೋ ಕೂಡಾ ಮಾಡಿದ್ದಾರೆ?

ನ್ಯಾಯಾಧೀಶ : ಮಾಡಿದ ಮೇಲೆ ಅದನ್ನೇ ಮತ್ತೆ ಮತ್ತೆ ನೋಡೋ ಚಪಲ ಅದೆಂತದ್ದು?. ಹೋಗಲಿ ಎಷ್ಟು ವೀಡಿಯೋ ಇವೆ.

ವಕೀಲ : ನೂರಾರು ಹೆಣ್ಮಕ್ಕಳ ಜೊತೆ ಮಾಡಿದ ಮೂರು ಸಾವಿರದಷ್ಟು ವೀಡಿಯೋಗಳು ಇರಬೋದು ಸ್ವಾಮಿ.

ನ್ಯಾಯಾಧೀಶ : ಏನು? ಒಬ್ಬನೇ ಇಷ್ಟೊಂದು ಹೆಂಗಸರ ಜೊತೆಗಾ? ಅದೆಂಗೆ ಸಾಧ್ಯ? ( ಆರೋಪಿಗೆ) ಏನಯ್ಯಾ ನೀನೇನು ಶ್ರೀಕೃಷ್ಣ ಪರಮಾತ್ಮ ಅನ್ಕೊಂಡಿದ್ದೀಯಾ ಗೋಪಿಕೆಯರ ಜೊತೆ ಚಕ್ಕಂದಾ ಆಡೋಕೆ. ಮಾಡೋದು ಅಲ್ದೆ ವಿಡಿಯೋ ಕೂಡಾ ಮಾಡಿ ನೋಡ್ತಿಯಾ, ನಾಚಿಕೆ ಆಗೋದಿಲ್ವಾ?

ಆರೋಪಿ : ಮಹಾಸ್ವಾಮಿ ಮಾಡೋರಿಗೆ ನಾಚಿಕೆ ಇಲ್ಲದ ಮೇಲೆ ಕೇವಲ ನೋಡೋರಿಗೆ ಯಾಕೆ ನಾಚಿಕೆ ಆಗುತ್ತೆ? ನೀವೇ ಹೇಳಿ.

ನ್ಯಾಯಾಧೀಶ : ಅಂದರೆ ನೀನು ಏನೂ ಮಾಡಿಲ್ವಾ? ಸುಳ್ಳು ಹೇಳಿದ್ರೆ ಶಿಕ್ಷೆ ಡಬಲ್ ಆಗುತ್ತೆ ಹುಷಾರ್.

ವಕೀಲ : ಮಾಡಿದ್ದು ಇವನಲ್ಲಾ ಸ್ವಾಮಿ. ಅವರು ದೊಡ್ಡ ಮನುಷ್ಯರು.

ನ್ಯಾಯಾಧೀಶ : ಹೌದಾ.. ಇಷ್ಟೆಲ್ಲಾ ಕೃಷ್ಣಲೀಲೆ ಆಡಿದವನೆಲ್ಲಿ?

ವಕೀಲ : ಅವರು ಫಾರಿನ್ ಗೆ ಹೋಗಿದ್ದಾರೆ ಸ್ವಾಮಿ. ಈಗ ಬರೋಕಾಗೋದಿಲ್ಲ.

ನ್ಯಾಯಾಧೀಶ : ಹೋಗಲಿ ಆ ರಸಿಕನನ್ನು ಹುಟ್ಟಿಸಿದ ಮಹಾತ್ಮನನ್ನಾದರೂ ಹಿಡಿದು ತರಬೇಕಿತ್ತು.

ವಕೀಲ : ಅವರೂ ದೊಡ್ಡ ಮನುಷ್ಯರು ಸ್ವಾಮಿ. ಅವರ ಮೇಲೂ ಮನೆ ಕೆಲಸದವಳ ಮೇಲೆ ರೇಪ್ ಮಾಡಿದ ಆರೋಪ ಇತ್ತು, ಸಂತ್ರಸ್ತೆಯನ್ನ ಅಪಹರಣ ಮಾಡಿದ ಕೇಸಲ್ಲಿ ಜೈಲಲ್ಲಿದ್ದಾರೆ. ಸಂತ್ರಸ್ತ ಮಹಿಳೆ ಅಪ್ಪ ಮಗ ಇಬ್ಬರ ಮೇಲೂ ರೇಪ್ ಕೇಸ್ ದೂರು ಕೊಟ್ಟಿದ್ದಾರೆ ಸ್ವಾಮಿ.

ನ್ಯಾಯಾಧೀಶ : ಏನು ಇಬ್ಬರೂನಾ? ಅದೂ ಮನೆ ಕೆಲಸದವಳ ಮೇಲಾ.. ಛೇ ಎಷ್ಟು ದೊಡ್ಡವರಾದರೇನು ಟೇಸ್ಟೇ ಇಲ್ವಲ್ರೀ. ಇದೆಂತಾ ಫ್ಯಾಮಿಲಿ.

ವಕೀಲ : ಅಯ್ಯೋ ಸ್ವಾಮಿ ಆರೋಪಿಯ ಅಪ್ಪನ ತಮ್ಮ ಚಿಕ್ಕಪ್ಪ ಒಬ್ಬರು ಇದ್ದಾರೆ. ಬಾಳಾ ಪ್ರಭಾವಿ ವ್ಯಕ್ತಿ. ಮಗಳ ವಯಸ್ಸಿನ ಸಿನೆಮಾ ನಾಯಕಿಯನ್ನ ಮಡಿಕ್ಕೊಂಡು ಮಗುವನ್ನೂ ದಯಪಾಲಿಸಿ ಕೈಬಿಟ್ರು. ಯಾವಾಗಲೂ ಜೇಬಲ್ಲಿ ಪೆನ್ ಡ್ರೈವ್ ಇಟ್ಕೊಂಡು ಬಿಡ್ತೀನಿ.. ಹೊರಗ್ ಬಿಡ್ತೀನಿ ಅಂತಾ ಹೇಳ್ತಾನೇ ಇದ್ರು. ಅದೆನೋ ಬೇರೆನೋ ಗೊತ್ತಿಲ್ಲಾ  ಅಂತೂ ಯಾವುದೋ ಒಂದು ಪೆನ್ ಡ್ರೈವ್ ಹೊರಗ್ ಬಂತು.

ನ್ಯಾಯಾಧೀಶ : ಇಡೀ ಫ್ಯಾಮಲೀನೇ ಹಿಂಗೇನಾ? ಹೋಗಲಿ ಎಲ್ಲಾ ಮಾಡಿದೋರು ಅವ್ರು, ದೊಡ್ಡೋರು. ಆದರೆ ಇವನನ್ನ ಯಾಕೆ ಹಿಡ್ಕೊಂಡು ಬಂದಿದ್ದೀರಿ? ಪಾಪ..

ವಕೀಲ : ಇವನೇ ಸ್ವಾಮಿ ಮಹಾ ತಪ್ಪು ಮಾಡಿದ್ದು. ನೋಡಬಾರದ್ದನ್ನ ನೋಡಿದ್ದಾನೆ.

ನ್ಯಾಯಾಧೀಶ : ಅದೇ ಮಾಡಬಾರದ್ದನ್ನ ಮಾಡಿದೋರನ್ನ ಬೇರೆ ದೇಶಕ್ಕೆ ಹೋಗೋಕೆ ಬಿಟ್ಟು ನೋಡಿದವನನ್ನ ಯಾಕ್ರಿ..

ವಕೀಲ : ತಪ್ಪು ಯುವರ್ ಆನರ್. ಈತನದ್ದು ಮಹಾ ತಪ್ಪು. ದೊಡ್ಡವರು ಅಧಿಕಾರಸ್ಥರು ಏನಾದ್ರೂ ಮಾಡ್ಕೋತಾರೆ. ಮಾಡಬಾರದ್ದನ್ನ ಮಾಡ್ತಾರೆ, ವೀಡಿಯೋ ಮಾಡಿ ಮಜಾ ತಗೋತಾರೆ. ಆದರೆ ಅದನ್ನ ನೋಡೋದು ಮಹಾಪರಾಧ ಸ್ವಾಮಿ.

ನ್ಯಾಯಾಧೀಶ : ನೀನ್ಯಾಕಯ್ಯಾ ಅದನ್ನ ನೋಡೋಕೆ ಹೋದೆ?

ಆರೋಪಿ : ನಾನೇನೂ ಮಾಡಿಲ್ಲಾ ಸ್ವಾಮಿ. ಯಾರೋ ಪೆನ್ ಡ್ರೈವ್ ಕಟ್ಟೆ ಮೇಲೆ ಇಟ್ಟು ಹೋಗಿದ್ರು. ಕುತೂಹಲದಿಂದ ಕಂಪ್ಯೂಟರ್ ಗೆ ಹಾಕಿ ನೋಡಿದ್ರೆ ಏನೇನೋ ಇತ್ತು.

ನ್ಯಾಯಾಧೀಶ : ( ಕುತೂಹಲದಿಂದ) ಅದರಲ್ಲಿ ಏನೇನಿತ್ತು..

ಆರೋಪಿ : ಅದನ್ನ ಹೇಳೋಕೆ ಆಗೋದಿಲ್ಲಾ ಮಾಸ್ವಾಮಿ ನೋಡಿಯೇ ಆನಂದಿಸಬೇಕು.

ನ್ಯಾಯಾಧೀಶ : ಅದನ್ನ ಕಟ್ಟೆ ಮೇಲೆ ಇಟ್ಟೋರು ಯಾರು? ಅವರನ್ನ ಹಿಡಿದು ಶಿಕ್ಷೆ ವಿಧಿಸಬೇಕಲ್ವಾ?

ವಕೀಲ : ಎನಂತಾ ಹೇಳಲಿ ಸ್ವಾಮಿ. ಅವರನ್ನ ಕೇಳಿದ್ರೆ “ಇವರು ಊರು ತುಂಬಾ ಪೆನ್ ಡ್ರೈವ್ ಹಂಚಿದ್ದಾರೆ” ಅಂತಾರೆ‌. ಇವರನ್ನ ಕೇಳಿದ್ರೆ “ಅವರು ಹಂಚಿದ್ದಾರೆ” ಅಂತಾರೆ. ಇಬ್ಬರನ್ನೂ ಕೇಳಿದ್ರೆ ಚಿಕ್ಕಪ್ಪನೇ ಹಂಚಿರಬಹುದು ಅಂತಾರೆ. ಅವರಿವರ ಆರೋಪ ಪ್ರತ್ಯಾರೋಪದಲ್ಲಿ ಯಾರು ಹಂಚಿದ್ರು ಅನ್ನೋದೇ ಫುಲ್ ಕನ್ಪ್ಯೂಜನ್. ಅದಕ್ಕೆ..

ನ್ಯಾಯಾಧೀಶ : ಅದಕ್ಕೆ ಮಾಡಿದವನನ್ನ ಬಿಟ್ರಿ, ಮಾಡಿದ್ದನ್ನ ಹಂಚಿದವರನ್ನೂ ಕೈಬಿಟ್ರಿ. ಇವನನ್ನ ಹಿಡಕೊಂಡು ಬಂದಿದ್ದೀರಿ ಹೌದಲ್ವಾ?

ವಕೀಲ : ಹೌದು ಯುವರ್ ಆನರ್. ಈತ ನೋಡಬಾರದಿತ್ತು.. ಅದೂ ನೋಡಬಾರದ್ದನ್ನು ನೋಡಬಾರದಿತ್ತು. ಬೇರೆಯವರು ಮಾಡಿದ್ದನ್ನಂತೂ ಕಣ್ಣೆತ್ತಿ ಕೂಡಾ ನೋಡಲೇಬಾರದಿತ್ತು. ನೋಡಿ ದೊಡ್ಡ ತಪ್ಪು ಮಾಡಿದ್ದಾನೆ.. ಅದಕ್ಕೆ..

ನ್ಯಾಯಾಧೀಶ : ಆಯ್ತು.. ಘನಘೋರ ತಪ್ಪನ್ನು ಮಾಡಿದ ಈ ಅವಿವೇಕಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುತ್ತೇನೆ.

ಆರೋಪಿ : ಮಾಸ್ವಾಮಿ ನಾನೇನೂ ತಪ್ಪು ಮಾಡಿಲ್ಲಾ.. ನನ್ನ ಬಿಟ್ಬಿಡಿ. ಹಣ್ಣು ತಿಂದವನನ್ನ ಬಿಟ್ಟು ಸಿಪ್ಪೆ ನೋಡಿದವನಿಗೆ ಯಾಕೆ ಶಿಕ್ಷೆ ಕೊಡ್ತೀರಿ. ನಾನೇನೂ ಮಾಡಿಲ್ಲಾ..

ವಕೀಲ : ಸುಳ್ಳು ಸ್ವಾಮಿ. ಈತನನ್ನು ಹೀಗೆಯೇ ಬಿಟ್ಟರೆ ಈಗೇನು ನೋಡಬಾರದ್ದನ್ನು ನೋಡಿದ್ದಾನೆ ಅದರಿಂದ ಪ್ರಚೋದನೆಗೊಂಡು ಮುಂದೆ ಮಾಡಬಾರದ್ದನ್ನೂ ಮಾಡುತ್ತಾನೆ. ಕಾನೂನು ಏನು ಹೇಳುತ್ತದೆ “ಪ್ರಿವೆನ್ಶನ್ ಈಸ್‌ ಬೆಟರ್ ದ್ಯಾನ್ ಕ್ಯೂರ್” ಅಂತಾ ಹೇಳ್ತದೆ. ಅಂದರೆ ರೋಗ ಉಲ್ಬಣಿಸುವ ಮೊದಲೇ ಅದು ಬರದಂತೆ ತಡೀಬೇಕು ಅಂತಾ. ಈತ ಮುಂದೆ ಮಾಡಬಾರದ್ದನ್ನು ಮಾಡಬಾರದು ಅಂದ್ರೆ ಶಿಕ್ಷೆ ಎಂಬ ಚಿಕಿತ್ಸೆಯನ್ನು ನೀವು ಕೊಡಲೇಬೇಕು.

ನ್ಯಾಯಾಧೀಶ : ಹೌದು.. ಶಿಕ್ಷೆ ಕೊಡಲೇ ಬೇಕು. ನೋಡಬಾರದ್ದನ್ನು ನೋಡಿದ ಈ ಅಪರಾಧಿಯನ್ನು ಜೈಲಿಗೆ ಕಳುಹಿಸಿ.

ಆರೋಪಿ : ಅಯ್ಯೋ ಅನ್ಯಾಯಾ? ನಾನೇನೂ ಮಾಡಿಲ್ಲಾ. ಮಾಡಿದೋರನ್ನ ಬಿಟ್ಟು ಬರೀ ನೋಡಿದವರಿಗೆ ಶಿಕ್ಷೆ ಕೊಡಬೇಡಿ..

ವಕೀಲ : ಶ್ಶ! ಸುಮ್ಮನಿರು. ಮಾಡಿದೋರ ಪಾಪ ಆಡಿದೋರ ಬಾಯಲ್ಲಿ ಅಂತಾ ಗಾದೆ ಮಾತು ಕೇಳಿಲ್ವಾ. ನೀನು ಆ ಪಾಪ ಮಾಡಿದ್ದೀಯಾ, ಅದಕ್ಕೆ ಪ್ರಾಯಶ್ಚಿತ್ತವನ್ನು ಅನುಭವಿಸು. ನಡೀ ಜೈಲಿಗೆ..

( ಪೊಲೀಸರು ಆರೋಪಿಯನ್ನು ಎಳೆದುಕೊಂಡು ಹೋಗುವರು)

ನ್ಯಾಯಾಧೀಶ : (ಅತ್ತ ಇತ್ತ ನೋಡಿ, ಮೆತ್ತಗೆ)  ಹಾಂ ವಕೀಲರೆ.. ನನಗೂ ಆ ಪೆನ್ ಡ್ರೈವ್ ಬೇಕಲ್ಲಾ. ಒಬ್ಬ ವ್ಯಕ್ತಿ ಅಷ್ಟೊಂದು ಹೆಂಗಸರ ಜೊತೆ ಇಷ್ಟೊಂದೆಲ್ಲಾ ಹೆಂಗೆ ಮಾಡೋಕೆ ಸಾಧ್ಯ ಅಂತಾ ಪರಿಶೀಲಿಸಬೇಕಲ್ಲಾ.

ವಕೀಲ : ಮಾಡಿದೋರ ಪಾಪ ನೋಡಿದೋರಿಗೂ ಅಂಟಿಕೊಳ್ಳಲ್ವಾ ಸ್ವಾಮಿ. ಆಯ್ತು ವ್ಯವಸ್ಥೆ ಮಾಡುವೆ.

ನ್ಯಾಯಾಧೀಶ : ಬೇಗ ತಂದು ಕೊಡಿ.  ಕುತೂಹಲವಿದೆ

ಆರೋಪಿ : (ಕಿಟಕಿಯಿಂದ ಕೂಗ್ತಾನೆ) ಮಾಸ್ವಾಮಿ ಮಾಡಿದೋರ ಪಾಪ, ಮಾಡಿದೋರ ಪಾಪ, ಮಾಡಿದೋರ ಪಾಪ…ನೋಡಿದೋರಿಗೆ..

ನ್ಯಾಯಾಧೀಶ : ಅವನನ್ನ ಇನ್ನೂ ಎಳಕೊಂಡು ಹೋಗಿಲ್ವಾ. (ಸ್ವಗತ) ಮಾಡಿದೋರ ಪಾಪ ಅಂತೆ.. ಅದೆಲ್ಲಾ ನಿನ್ನಂತಾ ದಡ್ಡರಿಗೆ. ದೊಡ್ಡವರಿಗಲ್ಲಾ..  ಮುಂದಿನ ಕೇಸ್ ಕೂಗ್ರಿ..

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article