‘ದಿ ರೈಸ್ ಆಫ್‌ ವೀರೇಂದ್ರ ಹೆಗ್ಗಡೆ’: ಗ್ರಾಮೀಣಾಭಿವೃದ್ಧಿಯ ಮರೆಯಲ್ಲಿ ರಾಷ್ಟ್ರಪತಿ ಕನಸು!

Most read

ಅಲೌಕಿಕ ಪರಂಪರೆಯಿಂದ ಬಂದ ಹೆಗ್ಗಡೆಶಿಪ್‌ನಂತೆಯೇ ಸಂವಿಧಾನಬದ್ಧ ಸಂಸದನ ಸ್ಥಾನವೂ ಇವತ್ತಿಗೆ ಮುಖ್ಯ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಹೀಗಿರುವಾಗ, ಧರ್ಮಸ್ಥಳದ ಮೂಲದಲ್ಲಿ ಎದ್ದಿರುವ ಈಗಿನ ಗೊಂದಲಗಳ ನಿವಾರಣೆಗೆ, ಶ್ರೀ ಮಂಜುನಾಥ- ಅಣ್ಣಪ್ಪ ಭಕ್ತರ ಹಿತಾಸಕ್ತಿಯ ರಕ್ಷಣೆಗೆ, ಧಾರ್ಮಿಕತೆಯ ಮರೆಯಲ್ಲಿ ನಡೆಯುವ ದೌರ್ಜನ್ಯಗಳ ತಡೆಗೆ ಸಂವಿಧಾನದ ಅಡಿಯಲ್ಲಿಯೇ ಇರುವ ಪರಿಹಾರಗಳನ್ನು ಅವರು ಖಂಡಿತಾ ನಿರಾಕರಿಸಲಾರರು -ಪ್ರಶಾಂತ್‌ ಹುಲ್ಕೋಡ್.

ಭಾರತದ ಧರ್ಮಕ್ಷೇತ್ರಗಳ ಇತಿಹಾಸವೇ ಒಂದು ಕುತೂಹಲಕಾರಿ ಅಧ್ಯಯನ. ಒಂದೋ ಅವು ಆಯಾ ಕಾಲದ ರಾಜರ ಆಳ್ವಿಕೆಯ ಕಡೆಯಿಂದ ದಾಳಿಗೆ ಒಳಗಾಗಿವೆ, ಇಲ್ಲಾ ದಾನ, ಉಂಬಳಿ ಜಮೀನುಗಳನ್ನು ಪಡೆದುಕೊಂಡು ಬೆಳೆದಿವೆ; ರೂಪಾಂತರಗಳನ್ನೂ ಹೊಂದಿವೆ.

ಆದರೆ, ಶ್ರದ್ಧಾಕೇಂದ್ರಗಳ ಆರ್ಥಿಕತೆಯನ್ನು ಗಮನಿಸಿ ಹತೋಟಿಗೆ ತೆಗೆದುಕೊಳ್ಳಲು ಮೊದಲು ಹೆಜ್ಜೆ ಇಟ್ಟವರು ಮಾತ್ರ ಬ್ರಿಟಿಷರು; ಅದು 1925. ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯಾಯ, ಅನಾಚಾರಗಳು ನಡೆಯುತ್ತಿವೆ ಎಂಬ ದೂರುಗಳು ಬರಲು ಶುರುವಾದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ‘ಹಿಂದೂ ರಿಲಿಜಿಯಸ್ ಎಂಡೋಮೆಂಟ್ ಬೋರ್ಡ್‌’ನ್ನು ಮದ್ರಾಸ್‌ ಪ್ರೆಸಿಡೆನ್ಸಿ ಅಡಿಯಲ್ಲಿ ಸ್ಥಾಪಿಸಲಾಯಿತು. ಇದರಿಂದಾಗಿ ತಮಿಳುನಾಡು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಜ್ಞಾಪಕ ಪತ್ರಗಳನ್ನು ನೀಡಲಾಯಿತು, ಕೆಲವಕ್ಕೆ ವಿಚಾರಣೆಯ ನೋಟಿಸ್ ನೀಡಲಾಯಿತು. ಅಂತಹದೊಂದು ಪ್ರಕ್ರಿಯೆಗೆ ಧರ್ಮಸ್ಥಳವೂ ಸೇರಿತ್ತು ಎಂಬುದು ಗಮನಾರ್ಹ.

ಅವತ್ತಿಗೆ ಧರ್ಮಸ್ಥಳದಲ್ಲಿ ಹೆಗ್ಗಡೆ ಆಗಿದ್ದವರು ಧರ್ಮಾಧಿಕಾರಿ ಅಲಿಯಾಸ್ ಖಾವಂದರು ಅಲಿಯಾಸ್ ನಡೆದಾಡುವ ಮಂಜುನಾಥ ಎಂದು ಕರೆಸಿಕೊಳ್ಳುವ ವೀರೇಂದ್ರ ಜೈನ್ ಅವರ ಸಂಬಂಧಿ ಮಂಜಯ್ಯ ಹೆಗ್ಗಡೆ. ಅಂದು ಬ್ರಿಟಿಷ್ ಸರಕಾರಕ್ಕೆ ಧರ್ಮಸ್ಥಳದ ಪರವಾಗಿ ಅಹವಾಲು ಸಲ್ಲಿಸಿದ್ದ ಮಂಜಯ್ಯ ಹೆಗ್ಗಡೆ, ‘ಇದು ಹಿಂದೂ ದೇವಸ್ಥಾನ ಅಲ್ಲ, ದತ್ತಿ ಸಂಸ್ಥೆ (ಚಾರಿಟೇಬಲ್ ಇನ್ಸ್‌ಸ್ಟಿಟ್ಯೂಟ್)’ ಎಂದು ತಿಳಿಸಿದ್ದರು. ಈ ಮೂಲಕ ಮದ್ರಾಸ್ ಪ್ರೆಸಿಡೆನ್ಸಿಯ ಹಿಂದೂ ಎಂಡೋಮೆಂಟ್ ಕಾಯ್ದೆಯು ಧರ್ಮಸ್ಥಳಕ್ಕೆ ಅನ್ವಯವಾಗದಂತೆ ಹೊರಗೆ ಉಳಿದಿದ್ದರು. ನಂತರ ಸ್ವಾತಂತ್ರ್ಯ  ಪೂರ್ವದ ಪ್ರಕ್ರಿಯೆಗಳ ಭಾಗವಾಗಿ ದೇವಸ್ಥಾನಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು 1949ರಲ್ಲಿ ನೀಡಿದ ವರದಿಯಲ್ಲಿ, ‘ಧರ್ಮಸ್ಥಳ ಹಿಂದೂ ಭಕ್ತಾದಿಗಳು ನಡೆದುಕೊಳ್ಳುವ ದೇವಸ್ಥಾನ’ ಎಂದೇ ಗುರುತಿಸಿತು ಮತ್ತು ಸರಕಾರದ ಹಿಂದೂ ಎಂಡೋಮೆಂಟ್ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿತು. ಇದರ ಬೆನ್ನಲ್ಲೇ ದೇಶದಲ್ಲಿ ಹಿಂದೂ ಎಂಡೋಮೆಂಟ್ ಕಾಯ್ದೆ 1950 ಜಾರಿಯೂ ಆಯಿತು. ಆದರೆ, ಧರ್ಮಸ್ಥಳದ ಹೆಗ್ಗಡೆಯವರಿಗೆ ತಮ್ಮ ಆಡಳಿತವನ್ನು ಬಿಟ್ಟುಕೊಡುವ ಮನಸ್ಸು ಆಗಲಿಲ್ಲ. ಬದಲಿಗೆ, ಸಮಿತಿ ವರದಿಯ ವಿರುದ್ಧ ದಕ್ಷಿಣ ಕನ್ನಡದ ಜಿಲ್ಲಾ ನ್ಯಾಯಾಲಯದ ಮೊರೆ ಹೋದರು. 1955ರಲ್ಲಿ ಮಂಜಯ್ಯ ಹೆಗ್ಗಡೆ ಸಾವನ್ನಪ್ಪುವ ಹೊತ್ತಿಗೆ ಕೆನರಾ ಜಿಲ್ಲಾ ನ್ಯಾಯಾಲಯದ ಮೂಲಕವೇ ಧರ್ಮಸ್ಥಳಕ್ಕೆ ಹೊಸ ಅಯಾಮವೇ ಸಿಕ್ಕಿತ್ತು.

ಮಂಜುನಾಥನ ದೇವಸ್ಥಾನ

ಅಂದು ದಕ್ಷಿಣ ಕನ್ನಡದ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಪ್ರಕಾರ, ‘ಧರ್ಮಸ್ಥಳ ಎಂದರೆ ಕೇವಲ ಮಂಜುನಾಥನ ದೇವಸ್ಥಾನ ಮಾತ್ರ ಅಲ್ಲ. ಅಲ್ಲಿ, ಮಂಜುನಾಥನ ಜತೆಗೆ ಚಂದ್ರನಾಥ ಪ್ರಭ ಎಂಬ ಜೈನ ತೀರ್ಥಂಕರರ ಬಸದಿಯೂ ಇದೆ. ಅಮ್ಮನವರ ದೇವಸ್ಥಾನವಿದೆ. ನೆಲ್ಯಾಡಿವೀಡು ಎಂದು ಕರೆಯುವ ಗ್ರಾಮದ ಭೂ ಒಡೆತನವಿದೆ. ಇದೆಲ್ಲದರ ಜತೆಗೆ ‘ಹೆಗ್ಗಡೆಶಿಪ್’ ಕೂಡ ಇದೆ. ಎಲ್ಲವನ್ನೂ ಒಳಗೊಂಡ ಸಂಯುಕ್ತ ಧರ್ಮಸ್ಥಳ (Composite Dharmasthal)ವನ್ನು ಹಿಂದೂಗಳ ಶ್ರದ್ಧಾಕೇಂದ್ರ ಎಂದು ಗುರುತಿಸಲು ಸಾಧ್ಯವಿಲ್ಲ,’ ಎಂದು ವಾದ ಮಂಡಿಸಲಾಗಿತ್ತು. ಧರ್ಮಸ್ಥಳದ ವಿಚಾರದಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕು ಇಲ್ಲ ಎಂದು ಹೇಳಲಾಗಿತ್ತು. ಹಿಂದೂ ಪ್ರಾತಿನಿಧಿತ್ವವನ್ನು ಹೊಂದಿರುವ ಸರಕಾರದ ಮಂಡಳಿಯ ಆಡಳಿತ ನಡೆಸುವುದು ಸಾಧ್ಯವೇ ಇಲ್ಲ ಎಂದು ಹೆಗ್ಗಡೆಶಿಪ್ ಪರವಾಗಿ ಮಂಜಯ್ಯ ಹೆಗ್ಗಡೆ ಅವರ ವಾದವಾಗಿತ್ತು. ಇದನ್ನು ಸ್ಥಳೀಯ ನ್ಯಾಯಾಲಯ ಎತ್ತಿಹಿಡಿಯಿತು. ಜಿಲ್ಲಾ ನ್ಯಾಯಾಲಯದ ಈ ಅದೇಶವನ್ನು ಪ್ರಶ್ನಿಸಿ ಮೈಸೂರು ಹಿಂದೂ ಎಂಡೋಮೆಂಟ್ ಕಮಿಷನರ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ಅಷ್ಟೊತ್ತಿಗೆ ಮಂಜಯ್ಯ ಹೆಗ್ಗಡೆ ತೀರಿಕೊಂಡ ಕಾರಣ ಧರ್ಮಸ್ಥಳದ ಪರವಾಗಿ ಹೈಕೋರ್ಟ್‌ನಲ್ಲಿ ಪ್ರತಿವಾದಿಗಳಾಗಿದ್ದವರು ರತ್ನವರ್ಮ ಹೆಗ್ಗಡೆ. ಮೈಸೂರು ಹೈಕೋರ್ಟ್‌ ಕೂಡ ಹೆಗ್ಗಡೆಶಿಪ್ ಪರವಾಗಿ ಹಿಂದೂ ಎಂಡೋಮೆಂಟ್ ಕಮಿಷನರ್ ದಾವೆಯನ್ನು ವಜಾಗೊಳಿಸಿತು. ಇದನ್ನು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತಾದರೂ(Commissioner For Hindu Religious & … vs Ratnavarma Heggade (Deceased) By His … on 20 October, 1976), ಅಲ್ಲಿಯೂ ಧರ್ಮಸ್ಥಳದ ಹೆಗ್ಗಡೆಶಿಪ್‌ ಪರವಾಗಿ ಆದೇಶ ಹೊರಬಿತ್ತು. ಅಷ್ಟೊತ್ತಿಗೆ ರತ್ನವರ್ಮ ಹೆಗ್ಗಡೆ ಕೂಡ ತೀರಿ ಹೋಗಿ ಧರ್ಮಾಧಿಕಾರಿ ಪಟ್ಟಕ್ಕೆ 20 ವರ್ಷದ ವೀರೇಂದ್ರ ಜೈನ್ ಬಂದು ಕುಳಿತಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ಮಹತ್ವದ ವಿಚಾರಣೆ ನಡೆಯುತ್ತಿದ್ದ ಇದೇ ಸಮಯದಲ್ಲಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆದ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಸುಮಾರು 64 ಕಿಮೀ ದೂರದ ಕಾರ್ಕಳದಿಂದ ಬಾಹುಬಲಿ ಮೂರ್ತಿಯನ್ನು ತಂದಿದ್ದು ಭಾರಿ ಸಾಮಾಜಿಕ ಪರಿಣಾಮ ಬೀರಿತ್ತು ಎಂಬುದನ್ನು ಅಂದಿನ ವರದಿಗಳು ಸಾರಿ ಹೇಳುತ್ತವೆ. ಅರಣ್ಯ ಇಲಾಖೆಯ 21 ಆನೆಗಳು, 4-5 ಸಾವಿರ ಜನರ ಶ್ರಮ ಹಾಗೂ ಮುಂಬೈ ಕಂಪನಿಯೊಂದು ವಿಶೇಷವಾಗಿ ತಯಾರಿಸಿದ್ದ ಟ್ರಾಲಿಯ ಸಹಾಯದಿಂದ ನೇತ್ರಾವತಿ ನದಿ ದಾಟಿಬಂದ ಬೃಹತ್ ಪ್ರತಿಮೆಯ ವಿಡಿಯೋ ಹಾಗೂ ಫೋಟೋಗಳು ಅದರ ವೈಭವವನ್ನು ನೆನಪಿಸುತ್ತವೆ. ಪ್ರತಿಮೆ ಧರ್ಮಸ್ಥಳ ಪ್ರವೇಶಿಸಿ 3 ವರ್ಷಗಳ ಅಂತರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುತ್ತದೆ.  “ಪ್ರತಿಷ್ಠಾಪನೆಗಳಲ್ಲಿ ಎರಡು ವಿಧಗಳು ಇರುತ್ತವೆ. ಒಂದು ಪೌರೋಹಿತ್ಯದಿಂದ ಪ್ರತಿಷ್ಠಾಪನೆ ಮಾಡುವುದು, ಇನ್ನೊಂದು ಜನರ ಮನಸ್ಸಿನಲ್ಲಿ ಪ್ರತಿಷ್ಠಾಪನೆಗೊಳ್ಳುವುದು. ಹಾಗೆ ನೋಡಿದರೆ, ಈ ಬಾಹುಬಲಿಯ ಪ್ರತಿಮೆ ಧರ್ಮಸ್ಥಳಕ್ಕೆ ಬರುವ ಮುನ್ನವೇ ಜನರ ಮನಸ್ಸಿನಲ್ಲಿ ಸ್ಥಾಪನೆಯಾಗಿದೆ,’’ ಎಂದು ಸ್ವತಃ ವೀರೇಂದ್ರ ಹೆಗ್ಗಡೆ ವಿಶ್ವಾಸ ವ್ಯಕ್ತಪಡಿಸುವ ಆಡಿಯೋ ಒಂದು ಯೂಟ್ಯೂಬ್‌ನಲ್ಲಿ ಲಭ್ಯ ಇದೆ.

ಬದಲಾಗುತ್ತಿದ್ದ ದೇಶದ ವಾತಾವರಣದಲ್ಲಿ ಪರಂಪರಾಗತ ಆಚರಣೆಗಳ ಮೇಲೆ ಹಿಡಿತ ಇಟ್ಟುಕೊಳ್ಳುವುದಕ್ಕೆ ಹಾಗೂ ಧರ್ಮಸ್ಥಳ ಜೈನ ಪಂಗಡದ ಶ್ರದ್ಧಾಕೇಂದ್ರ ಕೂಡ ಎಂಬುದನ್ನು ಜಗತ್ತಿಗೆ ಸಾರಲು ಬಾಹುಬಲಿ ಪ್ರತಿಮೆಯ ಅನಾವರಣವೂ ಪ್ರಭಾವ ಬೀರಿರುವುದನ್ನು ಇವತ್ತು ಅಲ್ಲಗೆಳೆಯಲು ಸಾಧ್ಯವಿಲ್ಲ.

ಬಾಹುಬಲಿ ಪ್ರತಿಮೆ ಧರ್ಮಸ್ಥಳಕ್ಕೆ ಸಾಗಾಟ

“10ನೇ ಶತಮಾನದಲ್ಲಿ ಜೈನ ಬಸದಿಗಳನ್ನು ಧ್ವಂಸಗೊಳಿಸಿ ಶಿವನ ದೇವಸ್ಥಾನಗಳನ್ನು ನಿರ್ಮಿಸಲಾಯಿತು ಎನ್ನುವ ಕನ್ನಡದ ಲಾವಣಿ ಹಾಡುಗಳಿವೆ. ಒಂದು ಕತೆಯಲ್ಲಿ ಶಿವನ ಆರಾಧಕನೊಬ್ಬ ತನ್ನ ಶಿರಸ್ಸನ್ನು ತಾನೇ ಛೇದಿಸಿಕೊಂಡು ತಾನೇ ಅದನ್ನು ಅದೇ ಜಾಗದಲ್ಲಿ ಸ್ಥಾಪಿಸಿಕೊಂಡು ತಾನು ಮಾಡಿದ ಹಾಗೆ ಮಾಡಬೇಕು ಎಂದು ಜೈನರಿಗೆ ಸವಾಲು ಹಾಕಿದ ಪ್ರಸಂಗ ಇದೆ. ಇದನ್ನು ಕಂಡ ಜೈನರು ಪಲಾಯನ ಮಾಡಿದರು. ಇಲ್ಲಿ ಜಿನನ ಆರಾಧನೆ ಬದಲು ಶಿವನ ಆರಾಧನೆ ವರ್ಧಿಸಿತು ಎಂದು ಆ ಕತೆ ಹೇಳುತ್ತದೆ,’’ ಎಂಬ ವಿವರ ‘ಜೈನ ಧರ್ಮ 63 ಒಳನೋಟಗಳು’ (ದೇವದತ್ತ ಪಟ್ನಾಯಕ್- ಕನ್ನಡಕ್ಕೆ: ಪದ್ಮರಾಜ ದಂಡಾವತಿ) ಎಂಬ ಕೃತಿಯಲ್ಲಿ ಸಿಗುತ್ತದೆ. ಇಂತಹ ಕಚ್ಚಾಟಗಳನ್ನು ಪಕ್ಕಕ್ಕಿಟ್ಟು ಅಲೌಕಿಕ ಪ್ರಪಂಚದ ಮುಂದುವರಿಕೆಯ ಭಾಗವಾಗಿ ಸೃಷ್ಟಿಸಲಾದ ಧರ್ಮಸ್ಥಳದಲ್ಲಿ ಮಂಜುನಾಥನ ರೀತಿಯಲ್ಲಿಯೇ ಜೈನರ ಅಸ್ತಿತ್ವಕ್ಕೂ ಒಂದು ಆಧುನಿಕ ಸ್ಪರ್ಶದ ಅಗತ್ಯ ಇದ್ದೇ ಇತ್ತು. ಅದಕ್ಕಾಗಿ ರೂಪುಗೊಂಡ ಯೋಜನೆಯೇ ಬಾಹುಬಲಿ ಪ್ರತಿಮೆ ಸ್ಥಾಪನೆ ಇರಬಹುದು. ಆಗಿನ್ನೂ ಬೆಂಗಳೂರಿನ ಕಾಲೇಜೊಂದರಲ್ಲಿ ಬಿಎ ಪದವಿ ಮುಗಿಸಿದ್ದ, ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಯಾಗಿ ಪಟ್ಟಕ್ಕೆ ಬಂದ ಆರಂಭದ ದಿನಗಳು ಇವು.

ಹೀಗಿರುವಾಗಲೇ ದೇಶದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯಾಯಿತು. ಹಿಂದೆ ರಾಜರುಗಳ ಕಾಲದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗಿದ್ದ ಅಪಾರ ಪ್ರಮಾಣದ ಉಂಬಳಿ ಭೂಮಿಯನ್ನು ಅದನ್ನು ಉಳುಮೆ ಮಾಡುತ್ತಿದ್ದವರಿಗೆ ನೀಡುವುದು ಅನಿವಾರ್ಯವಾಯಿತು. ಈ ಮೂಲಕ ದೇಶದಲ್ಲಿ ಸುಮಾರು ಎರಡು ಕೋಟಿ ಕುಟುಂಬಗಳು ಮೊದಲ ಬಾರಿಗೆ ತುಂಡು ಭೂಮಿಗೆ ಮಾಲೀಕರಾದರು ಎನ್ನುತ್ತವೆ ದಾಖಲೆಗಳು.

ಈ ಪ್ರಕ್ರಿಯೆಗೆ ಧರ್ಮಸ್ಥಳದ ಭಾಗವಾಗಿದ್ದ ನೆಲ್ಯಾಡುವೀಡು ಕೂಡ ಹೊರತಾಗಿರಲಿಲ್ಲ. ಹಾಗಂತ ಈ ಭೂ ಪರಿವರ್ತನೆ ಕೆಲಸ ಸರಾಗವಾಗಿಯೇನು ಇಲ್ಲಿ ನಡೆಯಲಿಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಖುದ್ದಾಗಿ ಗೇಣಿದಾರರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು. ಕೆಲವು ಗೇಣಿದಾರರು ಹೆಗ್ಗಡೆ ವಿರುದ್ಧವೇ ಕಾನೂನು ಸಮರ ನಡೆಸಿ ಭೂಮಿ ಹಕ್ಕನ್ನು ಪಡೆದುಕೊಂಡರು. “ಈ ಭಾಗದಲ್ಲಿ ಕಮ್ಯುನಿಸ್ಟ್ ಪಾರ್ಟಿ ನೇತೃತ್ವದಲ್ಲಿ ಗೇಣಿದಾರರಿಗೆ ಭೂಮಿ ಕೊಡಿಸುವ ಕೆಲಸ ನಡೆಯಿತು. ಕಾನೂನು ನೆರವು, ಬೀದಿ ಹೋರಾಟಗಳ ಮೂಲಕ ಜನರ ಪರವಾಗಿದ್ದ ನಮ್ಮ ಮೇಲೆ ಹಲ್ಲೆಗಳಾಗಿದ್ದವು. ರೈತ ನಾಯಕರಾಗಿದ್ದ ಕಾಮ್ರೆಡ್ ದೇವಾನಂದ ಅವರ ಮಗಳು ಪದ್ಮಲತಾ ಕೊಲೆಯ ಹಿಂದೆ ಅವರ ಭೂ ಸಂಬಂಧಿ ಹೋರಾಟವೂ ಕಾರಣವಾಗಿತ್ತು,’’ ಎಂದು ನೆನಪಿಸಿಕೊಳ್ಳುತ್ತಾರೆ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್.

ಹೀಗೆ ಪ್ರತಿ ಹೊಸ ಕಾನೂನು ಬಂದಾಗಲೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಪ್ರತಿರೋಧ ಒಂದಿಲ್ಲೊಂದು ಸ್ವರೂಪದಲ್ಲಿ ಕಾಣಿಸಿದ್ದನ್ನು ಇತಿಹಾಸ ದಾಖಲಿಸಿದೆ. ಜತೆಗೆ, “80ರ ದಶಕದಲ್ಲಿ ನೆಲ್ಯಾಡಿವೀಡಿನ ಒಳಗಿದ್ದ ದೇವಸ್ಥಾನಗಳ ಜೀಣೋದ್ಧಾರ, ಪೂರ್ಣ ಪ್ರಮಾಣದಲ್ಲಿ ಊಟದ ವ್ಯವಸ್ಥೆಗಳ ಜತೆಗೆ ಬಾಹುಬಲಿ ಪ್ರತಿಮೆ ಸ್ಥಾಪನೆ ಧರ್ಮಸ್ಥಳ ಕಡೆಗೆ ಹೊಸ ಪೀಳಿಗೆಯ ಗಮನ ಸೆಳೆದಿತ್ತು. ಅಂಚೆ ಕಚೇರಿಯ ಮೂಲಕವೇ ಸಾಕಷ್ಟು ದೇಣಿಗೆ ಬರುತ್ತಿತ್ತು. ಯಾತ್ರಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಕ್ಷೇತ್ರವನ್ನಾದರೂ ನಿರ್ಮಿಸುತ್ತಾರೆ ಎಂಬುದಕ್ಕೆ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಬದಲಾದ ಧರ್ಮಸ್ಥಳ ಸೂಕ್ತ ಉದಾಹರಣೆ ಎನ್ನುತ್ತಾರೆ,’’ ರಾಮಮೂರ್ತಿ (ಹೆಸರು ಬದಲಿಸಲಾಗಿದೆ). ಕರ್ನಾಟಕ ಹಿಂದೂ ಧಾರ್ಮಿಕ ಕೇಂದ್ರಗಳು ಹಾಗೂ ದತ್ತಿ ಇಲಾಖೆಯ ಉಪ ಆಯುಕ್ತರಾಗಿ ನಿವೃತ್ತರಾದವರು ರಾಮಮೂರ್ತಿ.

“ಬ್ರಿಟಿಷರಿಗೆ ಹಿಂದೂ ಯಾತ್ರಾರ್ಥಿಗಳಿಂದ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣದ ಬಗೆಗೆ ಅರಿವು ಮೂಡಿತ್ತು. ಆ ಕಾರಣಕ್ಕೆ ಅವರು ಹಿಂದೂ ಧಾರ್ಮಿಕ ಮಂಡಳಿ ಸ್ಥಾಪಿಸಿದರು. ಇವತ್ತು ಅದೇ ಪ್ರತ್ಯೇಕ ಇಲಾಖೆಯಾಗಿ ಕೆಲಸ ಮಾಡುತ್ತಿದೆ. ಕೆಲವು ಪಾರಂಪರಿಕ ಮಠಗಳು ಹಾಗೂ ಧರ್ಮಸ್ಥಳದಂತಹ ಖಾಸಗಿ ವ್ಯಕ್ತಿಗಳ ಅಧೀನದಲ್ಲಿರುವ ದೇವಸ್ಥಾನಗಳ ಆಡಳಿತ, ನಿಧಿ ಸಂಗ್ರಹ, ಯೋಜನೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬಿಟ್ಟರೆ, ರಾಜ್ಯಾದ್ಯಂತ 359 ದೇವಸ್ಥಾನಗಳು ಈಗ ಇಲಾಖೆ ನಿರ್ವಹಣೆಯಲ್ಲಿವೆ. ಇವುಗಳಲ್ಲಿ ಸಂಗ್ರಹವಾಗುವ ಹಣ ದೇವಸ್ಥಾನಗಳ ಏಳಿಗೆಗೆ ಮಾತ್ರವೇ ವಿನಿಯೋಗ ಆಗುತ್ತಿದೆ. ಭಕ್ತಾದಿಗಳ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನಿನ ಅಡಿಯಲ್ಲಿ ಸವಲತ್ತುಗಳನ್ನು ನೀಡಲಾಗುತ್ತದೆ. ಅರ್ಚಕರಿಗೂ ಮಾಸಿಕ ವೇತನ ನೀಡಲಾಗುತ್ತದೆ. ಭಕ್ತರು ನೀಡುವ ದೇಣಿಗೆಯಿಂದ ಹಿಡಿದು, ಪ್ರತಿಯೊಂದು ಆರ್‍‌ಟಿಐ ಅಡಿಯಲ್ಲಿ ಬರುತ್ತದೆ,’’ ಎಂದು ಇಲಾಖೆಯ ಕಾರ್ಯವೈಖರಿಯನ್ನು ಅವರು ವಿವರಿಸುತ್ತಾರೆ.

ಧರ್ಮಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತೀರಾ ಇತ್ತೀಚಿನವರೆಗೂ ನಗದು ರೂಪದಲ್ಲಿಯೇ ಸಂಬಳ ನೀಡಲಾಗುತ್ತಿತ್ತು. ಇಡೀ ದೇಶದ ಹಿಂದೂ ದೇವಸ್ಥಾನಗಳಲ್ಲಿನ ಕಾರ್ಮಿಕರಿಗೆ ಕಾನೂನು ಜಾರಿಯಾಗಿದ್ದ ಕಾಲದಲ್ಲಿ 2017ರವರೆಗೂ ಧರ್ಮಸ್ಥಳದ ಕಾರ್ಮಿಕರು ಮಾತ್ರ ಹಳೇ ಮಾದರಿಯ ಪಾಳೇಗಾರಿಕೆ ಆಳ್ವಿಕೆಗೆ ಒಳಪಟ್ಟಿದ್ದರು ಎಂಬುದಕ್ಕೆ ನ್ಯಾಯಾಲಯದ ಆದೇಶದಲ್ಲಿಯೇ ಸಾಕ್ಷಿಗಳು ಸಿಗುತ್ತವೆ. Veerendra Heggade vs The Commissioner on 31 July, 2017 ಪ್ರಕರಣದಲ್ಲಿ ನೀಡಿದ ಆದೇಶ ಸ್ವತಃ ಪೆಟಿಷನರ್ ವೀರೇಂದ್ರ ಹೆಗ್ಗಡೆ ಅವರೇ ಧರ್ಮಸ್ಥಳದ ಕಾರ್ಮಿಕರ ವಿರುದ್ಧವಾಗಿದ್ದರು ಎಂಬುದಕ್ಕೆ ದಾಖಲೆಯಾಗಿದೆ. “Therefore, this Court is of the opinion that the petitioner is trying, his level best, to take this Court out for a ride by withholding documents which may weaken his case. Since the petitioner has approached this Court without clean hands, this petition deserves to be dismissed on this ground alone. Therefore, the petition is hereby dismissed” ಎನ್ನುವ ಮೂಲಕ ಇವತ್ತು ಧರ್ಮಸ್ಥಳ ದೇವಸ್ಥಾನದ ಕಾರ್ಮಿಕರಿಗೆ ಕಾನೂನುಬದ್ಧ ಸ್ಥಾನಮಾನ, ಪಿಂಚಣಿ, ಆರೋಗ್ಯ ವಿಮೆ ಸಿಗಲು ಪ್ರಮುಖ ಕಾರಣವಾಗುತ್ತದೆ ಈ ಆದೇಶ. ವರದಿಗಳ ಪ್ರಕಾರ, ಇವತ್ತಿಗೆ ವೀರೇಂದ್ರ ಹೆಗ್ಗಡೆ ಅವರ ಹೆಸರಿನಲ್ಲಿ ನಾನಾ ನ್ಯಾಯಾಲಯಗಳಲ್ಲಿ 300ಕ್ಕೂ ಅಧಿಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.  

ವೀರೇಂದ್ರ ಹೆಗ್ಗಡೆ ಅವರ ಈವರೆಗಿನ ಹೆಜ್ಜೆಗುರುತುಗಳನ್ನು ಗಮನಿಸಿದರೆ, ಹಳೆಯ ಪಾಳೇಗಾರಿಕೆಯನ್ನು ಮುಂದುವರಿಸುವ ಮನಸ್ಥಿತಿ, ಸರಕಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಯ ಹರಿಕಾರ ಎನ್ನಿಸಿಕೊಳ್ಳುವ ಬಯಕೆ, ಅಂತಿಮವಾಗಿ ಹೆಗ್ಗಡೆಶಿಪ್‌ಗೆ ಸಮಸ್ಯೆಯಾಗದ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕಾಗಿ ನಡೆಸಿದ ಕಾರ್ಯಗಳೇ ಢಾಳಾಗಿ ಕಾಣಿಸುತ್ತವೆ. ಜತೆಗೆ, ಭೂ ವ್ಯವಹಾರಗಳ ಆಸಕ್ತಿಯ ಬಗೆಗೂ ದಾಖಲೆಗಳು ಗಮನ ಸೆಳೆಯುತ್ತವೆ. ಸ್ವತಃ ಮಂಜುನಾಥನ ದೇವಸ್ಥಾನದ ಪ್ರದೇಶವೂ ಹೆಗ್ಗಡೆ ಹೆಸರಿಗೆ ವರ್ಗಾವಣೆಯಾದ ಬಗೆಗೆ ವರದಿಗಳಿವೆ. 20ನೇ ಶತಮಾನದ ಅಂತ್ಯದಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದ ಸುತ್ತ ಇರುವ ಆರೋಪಗಳನ್ನೂ ಮೀರಿ ಸಾಮಾಜಿಕ ಮನ್ನಣೆ ತಂದುಕೊಡಲು ಪ್ರಮುಖ ಕಾರಣಗಳು 1982ರ ಹೊತ್ತಿಗೆ ಆರಂಭಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಉದ್ಯೋಗ ತರಬೇತಿ ಯೋಜನೆಗಳು, ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಕಳೆದ ಮೂರ್‍ನಾಲ್ಕು ದಶಕಗಳ ಅಂತರದಲ್ಲಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಎಂಬ ಪಟ್ಟದ ಬಗೆಗೆ ಮುಖ್ಯವಾಹಿನಿಯಲ್ಲಿ ಢಾಳಾಗಿ ಕಾಣಿಸುವ ಪ್ರಿಯ ವರದಿಗಳ ಜತೆಗೆ, ಪದ್ಮಭೂಷಣ, ಪದ್ಮವಿಭೂಷಣ, ರಾಜಶ್ರೀಯಂತಹ ಪ್ರಶಸ್ತಿಗಳೂ ಅವರ ಇಮೇಜ್‌ ಬಿಲ್ಡಿಂಗ್‌ನಲ್ಲಿ ಪ್ರಮುಖ ಪಾತ್ರವಹಿಸಿವೆ ಕೂಡ. ಇವೆಲ್ಲವುಗಳ ನಡುವೆ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ರಾಷ್ಟ್ರಪತಿ ಹುದ್ದೆಗೂ ಅವರ ಹೆಸರನ್ನು ಮುಖ್ಯವಾಹಿನಿಯ ಪತ್ರಿಕೆಗಳು ತೇಲಿಬಿಡುವ ಕೆಲಸ ಮಾಡಿದ್ದವು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಆದರೆ, ಸೌಜನ್ಯ ಕೊಲೆ ಪ್ರಕರಣದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಬರುವ ಒಂದು ವರ್ಷ ಮುಂಚೆಯಷ್ಟೆ ಹೆಗ್ಗಡೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ವಿಶೇಷ ಎಂದರೆ, ರಾಜ್ಯಸಭೆಗೆ ಕಾಲಿಟ್ಟ ವರ್ಷವೇ ಅವರು ‘ಡಿಜಿಟಲ್ ಮೀಡಿಯಾ ಹತೋಟಿ ಕ್ರಮ’ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದರು ಎಂಬ ಮಾಹಿತಿ ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತದೆ. ಅದರೆ, ಆಸ್ತಿ ಮತ್ತಿತರ ವಿವರಗಳನ್ನು ಒಳಗೊಂಡ ಜನಪ್ರತಿನಿಧಿಗಳು ಕಡ್ಡಾಯವಾಗಿ ಸಲ್ಲಿಸುವ ಅಫಿಡವಿಟ್ ಮಾತ್ರ ಇವರ ಹೆಸರಿನಲ್ಲಿ ಲಭ್ಯ ಇಲ್ಲ!

ಇತ್ತೀಚೆಗೆ ಮೈಸೂರಿನಲ್ಲಿ ನಿವೃತ್ತ ಐಎಫ್‌ಎಸ್‌ ಅಧಿಕಾರಿಯೊಬ್ಬರ ಮನೆಗೆ ಭೇಟಿ ನೀಡಿದ್ದೆ. ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ ಅವರ ಅಪಾರ ಕಾಡಿನ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲಿ ಗಮನ ಸೆಳೆದಿದ್ದು 70ರ ದಶಕದವರೆಗೂ ಮೈಸೂರಿನ ರಾಜಮನೆತನ, ಬಿಳಿಗಿರಿ ರಂಗನ ಬೆಟ್ಟಕ್ಕೆ ವರ್ಷಕ್ಕೊಮ್ಮೆ ಶಿಕಾರಿಗೆ ಹೋಗುವ ಪರಿಪಾಠವನ್ನು ನಿಲ್ಲಿಸಿರಲಿಲ್ಲ ಎಂಬುದು. ಅಷ್ಟೆ ಅಲ್ಲ, ಖುದ್ದು ಅರಣ್ಯ ಇಲಾಖೆಯೇ ಅವರ ಬೇಟೆಗೆ ಬಿಡಾರ ರೆಡಿಮಾಡಿಕೊಟ್ಟು, ಅಡುಗೆ ಮಾಡುವವರಿಗೆ, ಗುರಿಕಾರರಿಗೆ ಸೆಕ್ಯುರಿಟಿ ಕೊಡುತ್ತಿತ್ತು ಎಂಬ ಅಂಶ. ಇವತ್ತಿಗೆ ಮೈಸೂರು ಮಹಾರಾಜ ಕುಟುಂಬಕ್ಕೂ ಶಿಕಾರಿಗೆ ಕಾನೂನು ಕಡಿವಾಣ ಹಾಕಿದೆ.

ಶಿಕ್ಷಣ ನೀಡಬೇಕಾಗಿರುವುದು, ಆರೋಗ್ಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕಿರುವುದು, ಗ್ರಾಮೀಣಾಭಿವೃದ್ಧಿ ಮಾಡಬೇಕಿರುವುದು ಜನರಿಂದ ಚುನಾಯಿತ ಸರಕಾರಗಳ ಆದ್ಯ ಕರ್ತವ್ಯ. ಆದರೆ ಈ ಹೊಣೆಗಾರಿಕೆಯನ್ನು ಯಾರೋ ಒಬ್ಬ ಪಾಳೇಗಾರ, ಕಂಪನಿಯ ಒಡೆಯ, ಧರ್ಮಗುರು ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿ ನಿರ್ವಹಿಸುತ್ತಾನೆ ಎಂಬ ಕಾರಣಕ್ಕೆ ಅವನಿಗೆ ಮಾತ್ರ ವಿಶೇಷ ಸವಲತ್ತುಗಳನ್ನು ಕೊಡೋಣ ಎಂದರೆ ಒಪ್ಪಲು ಸಾಧ್ಯವಾ? ಸೇವೆ ಮತ್ತು ಉದ್ಯಮಗಳ ನಡುವಿನ ಅಂತರವೇ ಅಳಿಸಿಹೋಗಿರುವ ಇವತ್ತು ‘ಸಮಾಜ ಸೇವಕ’ರಿಗಾಗಿ ಹೊಸ ಕಾನೂನುಗಳನ್ನು ರೂಪಿಸಲು ಸಾಧ್ಯವಾ? ಇಲ್ಲಾ ಈಗಿರುವ ಕಾನೂನುಗಳನ್ನು ತಿರುಚಲು ಸಾಧ್ಯವಾ? ಬದಲಿಗೆ, ಹೇಗೆ ರಾಜಮನೆತನದ ಶಿಕಾರಿ ಪದ್ಧತಿಗೆ ಕಡಿವಾಣ ಹಾಕಲಾಯಿತೋ ಹಾಗೆ ಧರ್ಮಸ್ಥಳದ ವಿಚಾರದಲ್ಲಿಯೂ ಕೂಡ ಪರಂಪರೆ ಆಧರಿಸಿದ ಆಡಳಿತದ ಬದಲಿಗೆ ಸಂವಿಧಾನಬದ್ದ ಬದಲಾವಣೆಗಳನ್ನು ಸ್ವಾಗತಿಸಬೇಕಿದೆ.

ಇವತ್ತಿಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ವಿಚಾರ ಬಂದಾಗಲೆಲ್ಲಾ ಮುನ್ನೆಲೆಗೆ ಬರುವುದು ಅವರ ಗ್ರಾಮೀಣಾಭಿವೃದ್ಧಿ ಯೋಜನೆಗಳು, ಶಿಕ್ಷಣ ಸಂಸ್ಥೆಗಳು, ಧರ್ಮೋದ್ಧಾರದ ಕೆಲಸಗಳು. 20ನೇ ಶತಮಾನದ ಕೊನೆಯ ಭಾಗದಲ್ಲಿ ಧರ್ಮಾಧಿಕಾರಿ ಎಂಬ ಪಟ್ಟದ ಹೆಗ್ಗಳಿಕೆಯ ಜತೆಗೆ ಅವರಿಗೆ ರಾಷ್ಟ್ರೀಯ ಮನ್ನಣೆ ಪುರಸ್ಕಾರಗಳಿಗೆ ಕಾರಣವಾಗಿದ್ದು ಅವರು ತಳಮಟ್ಟದಲ್ಲಿ ನಡೆಸಿದ ಇಂತಹ ಯೋಜನೆಗಳು. ಇವುಗಳನ್ನು ಆಡಳಿತಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಗುರುತಿಸಿವೆ, ಪುರಸ್ಕರಿಸಿಕೊಂಡು ಬಂದಿವೆ. ಕೊನೆಗೆ, ರಾಜ್ಯಸಭೆಗೆ ಅವಿರೋಧ ನಾಮನಿರ್ದೇಶನವನ್ನೂ ಮಾಡಿವೆ.

ಈ ಮೂಲಕ ಅಲೌಕಿಕ ಪರಂಪರೆಯಿಂದ ಬಂದ ಹೆಗ್ಗಡೆಶಿಪ್‌ನಂತೆಯೇ ಸಂವಿಧಾನಬದ್ಧ ಸಂಸದನ ಸ್ಥಾನವೂ ಇವತ್ತಿಗೆ ಮುಖ್ಯ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಹೀಗಿರುವಾಗ, ಧರ್ಮಸ್ಥಳದ ಮೂಲದಲ್ಲಿ ಎದ್ದಿರುವ ಈಗಿನ ಗೊಂದಲಗಳ ನಿವಾರಣೆಗೆ, ಶ್ರೀ ಮಂಜುನಾಥ- ಅಣ್ಣಪ್ಪ ಭಕ್ತರ ಹಿತಾಸಕ್ತಿಯ ರಕ್ಷಣೆಗೆ, ಧಾರ್ಮಿಕತೆಯ ಮರೆಯಲ್ಲಿ ನಡೆಯುವ ದೌರ್ಜನ್ಯಗಳ ತಡೆಗೆ ಸಂವಿಧಾನದ ಅಡಿಯಲ್ಲಿಯೇ ಇರುವ ಪರಿಹಾರಗಳನ್ನು ಅವರು ಖಂಡಿತಾ ನಿರಾಕರಿಸಲಾರರು.

ಮುಂದಿನ ಭಾಗದಲ್ಲಿ- ಧರ್ಮಸ್ಥಳ: ನಮ್ಮ ಮುಂದಿರುವುದು ಮೂರೇ ಪರಿಹಾರಗಳು!

ಪ್ರಶಾಂತ್‌ ಹುಲ್ಕೋಡ್‌

More articles

Latest article