Sunday, July 14, 2024

ಅರಗಿನರಮನೆಯಲ್ಲಿ ಕರಗಿ ಹೋಗುವ ಮುನ್ನ..

Most read

ಹೆಚ್ಚು ಓದುಗರನ್ನು, ಪ್ರಸರಣ ಹೆಚ್ಚು ಮಾಡುವ ಮೂಲಕ ಜಾಹೀರಾತು ದರ ಹೆಚ್ಚಿಸಿಕೊಳ್ಳುವ ಮತ್ತು ಭಾವನಾತ್ಮಕ ಸಂಗತಿಗಳ ಮೂಲಕ ಸೆನ್ಸೇಷನ್ ಹುಟ್ಟುಹಾಕುವ ಹೊಸ ಸಂಸ್ಕೃತಿಗೆ ಮಾಧ್ಯಮ ಮುನ್ನುಡಿ ಬರೆಯಿತು. ವ್ಯವಸ್ಥಿತವಾಗಿ ಇದು ಈಗಾಗಲೇ ಒಂದು ಹೊಸ ಸಂಸ್ಕೃತಿಯನ್ನು ಸೃಷ್ಟಿ ಮಾಡಿ ಆಗಿದೆ. ಮತ್ತು ಇದರ ಹಿಂದಿರುವುದು ವ್ಯಾಪಾರಿ ಜಗತ್ತಿನ ಮಾಯಾಜಾಲ. ಈ ವಿಸ್ಮೃತಿಯಿಂದ ಹೊರ ಬರುವುದು ಹೇಗೆ? ಡಾ. ಉದಯ ಕುಮಾರ ಇರ್ವತ್ತೂರು

ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳಾಗಿ ಸಮರ್ಥವಾಗಿ, ದಕ್ಷವಾಗಿ ಸಾಮಾಜಿಕ ಉತ್ತರದಾಯಿತ್ವದಿಂದ ಕೆಲಸ ಮಾಡುತ್ತಿದ್ದ ಕಾಲವೂ ನಮ್ಮ ದೇಶದಲ್ಲಿ ಇತ್ತು ಎನ್ನುವುದನ್ನು ಇಂದು ವಿಷಾದ ಪೂರ್ವಕವಾಗಿಯೇ ಹೇಳಬೇಕಾಗಿದೆ. ಸರಕಾರಗಳ ನಡವಳಿಕೆಯ ಕುರಿತ ರೀತಿ ನೀತಿಗಳು, ರಾಜಕೀಯ ನೇತಾರರ ನಡೆನುಡಿಗಳು ಬಹುಜನರ ಹಿತಕ್ಕೆ, ಸಂವಿಧಾನದ ಆಶಯಗಳಿಗೆ ಪೂರಕವಾಗಿಲ್ಲದೇ ಹೋದಾಗ, ಉದ್ಯಮಿಗಳು ಲಾಭದ ಹಿಂದೆ ಮಿತಿಮೀರಿದ ವೇಗದಲ್ಲಿ ಓಡಿದಾಗ, ಅದನ್ನು  ನಾಗರಿಕ ಪ್ರಪಂಚದ ಅರಿವಿಗೆ ತಂದು  ತಪ್ಪನ್ನು ತಿದ್ದುವ ಬಹಳ ದೊಡ್ಡ ಕೆಲಸ ಮಾಧ್ಯಮಗಳದ್ದು.

ಸರಳವಾಗಿ ಹೇಳುವುದಿದ್ದರೆ ವ್ಯವಸ್ಥೆಯಲ್ಲಿ ವೈಯಕ್ತಿಕ ನಡವಳಿಕೆ, ತಿಳುವಳಿಕೆ, ಸಾರ್ವಜನಿಕ ಹಿತಕ್ಕೆ ಪೂರಕವಾಗಿಲ್ಲದಿರುವಾಗ ಅವನ್ನು ಟೀಕೆ, ವಿಮರ್ಶೆ ಮಾಡುವ ಮೂಲಕ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವ ಮಹತ್ವದ ಹೊಣೆ ಇರುವುದು ಮಾಧ್ಯಮಕ್ಕೆ. ಆದ್ದರಿಂದಲೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆದಿರುವುದು. ಪ್ರಜಾಪ್ರಭುತ್ವದ ನಿಜವಾದ ವಾರಸುದಾರರಾದ ಜನರ ಹಿತ ಕಾಯುವ ಮಹತ್ವದ ಮತ್ತು ಪವಿತ್ರವಾದ ಕೆಲಸ ಮಾಡುವ ಕಾರಣದಿಂದ ಪತ್ರಿಕೋದ್ಯಮ ಸಂಸ್ಥೆಗಳಿಗೆ ಮತ್ತು ಪತ್ರಿಕಾ ವರದಿಗಾರರಿಗೆ ಎಲ್ಲರೂ ಗೌರವ ಕೊಡುತ್ತಿದ್ದರು. ಆದರೆ ಈಗ ಎಲ್ಲವೂ ಹಿಂದಿನಂತಿಲ್ಲ ಕಾಲ ಬದಲಾಗಿದೆ, ಮತ್ತು ಈ ಬದಲಾವಣೆಯ ಹೆಸರಲ್ಲಿ,  ಪತ್ರಿಕಾ ಧರ್ಮವೂ ಹಿನ್ನೆಲೆಗೆ ಸರಿದು ಮುಖ್ಯ ಉದ್ದೇಶವೇ ಪಲ್ಲಟಗೊಂಡಿದೆ.

ನವ ಮಾಧ್ಯಮಗಳು ಎಂದು ಗುರುತಿಸಲ್ಪಟ್ಟ ಸಾಮಾಜಿಕ, ಜಾಲತಾಣಗಳು, ಆನ್ ಲೈನ್ ಪತ್ರಿಕೆಗಳು, ಮಹತ್ವ ಪಡೆಯುವ ಮೊದಲು ಮುದ್ರಣ ಮಾಧ್ಯಮವೇ ಬಹುಪಾಲು ಪ್ರಜಾಪ್ರಭುತ್ವದ ಕಾವಲು ನಾಯಿಯ ಕೆಲಸ ನಿರ್ವಹಿಸುತ್ತ ಇತ್ತು. ಎಂಬತ್ತರ ದಶಕದ ನಂತರ ಎಲೆಕ್ಟ್ರಾನಿಕ್ ಮಾಧ್ಯಮ, ಮತ್ತು ಸಾಮಾಜಿಕ ಮಾಧ್ಯಮಗಳು ಹಂತ ಹಂತವಾಗಿ ಬೆಳೆದು ಇಂದು ಸಾರ್ವಜನಿಕ ಅಭಿಪ್ರಾಯ ಕ್ರೋಢೀಕರಿಸುವಲ್ಲಿ ಇವುಗಳೇ ಪ್ರಮುಖ ಪಾತ್ರ ವಹಿಸುವಷ್ಟರ ಮಟ್ಟಿಗೆ ಶಕ್ತಿಯುತವಾಗಿ ಬೆಳೆದಿವೆ. ಬಹಳ ದುರ್ದೈವದ ಸಂಗತಿ ಏನೆಂದರೆ ಪ್ರಜಾಪ್ರಭುತ್ವದ ಕಾವಲು ನಾಯಿಗಳಾಗಿದ್ದ ಮಾಧ್ಯಮಗಳು, ಇಂದು  ಪ್ರಜೆಗಳನ್ನು ಮರೆತು ಬಹುಪಾಲು ಪ್ರಭುತ್ವದ ಹಿತಕಾಯುವ, ಸಾಕು ನಾಯಿಗಳಾಗಿ ಬದಲಾಗಿವೆಯೇನೋ ಎಂದು ಜನಸಾಮಾನ್ಯರು ಅನುಮಾನದಿಂದಲೇ ನೋಡುವಂತೆ ಆಗಿದೆ.

ಸರಕಾರದ ನೀತಿಗಳನ್ನು ಜನಹಿತದ ದೃಷ್ಟಿಯಿಂದ, ಜನರ ಪಾಲ್ಗೊಳ್ಳುವಿಕೆಯ ದೃಷ್ಟಿಯಿಂದ ನೋಡುವ ತನ್ನ ಪ್ರಮುಖ ಕೆಲಸದಿಂದ ಇವತ್ತು  ಬಹುಪಾಲು ಮಾಧ್ಯಮಗಳು ವಿಮುಖವಾಗಿವೆ. ಇನ್ನು ಕೆಲವು ಕಾಟಾಚಾರಕ್ಕೆ ಮಾತ್ರ ಈ ಕೆಲಸ ಮಾಡುತ್ತಿವೆ ಎನ್ನುವ ಅಪವಾದವೂ ಇದೆ. ಮಾಧ್ಯಮದ ಈ ರೀತಿಯ ಬದಲಾವಣೆಯ ಕಾರಣದಿಂದ ಸಾರ್ವಜನಿಕ ಜೀವನದಲ್ಲಿ, ಯಾವುದು ಸರಿ, ಯಾವುದು ತಪ್ಪು, ಯಾವುದು ಸುದ್ದಿ, ಯಾವುದು ಜಾಹೀರಾತು, ಯಾವುದು ಪ್ರಚಾರ ಎಂದು ಸಾಮಾನ್ಯ ಜನ ಗೊಂದಲಕ್ಕೆ ಒಳಗಾಗಿ ಬಹಳಷ್ಟು ವಿಷಯಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದೇ ಕಷ್ಟವಾಗಿ ಬಿಟ್ಟಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಾಗರಿಕರು ನಿರ್ಧಾರ ಕೈಗೊಳ್ಳುವ ಸಂದರ್ಭಗಳಲ್ಲಿ ಬರುವ ಮಾಹಿತಿಗಳ ಬಗ್ಗೆ ನಮಗೆ ಈಗೀಗ ಅನುಮಾನ ಅಪನಂಬಿಕೆಗಳು ಹೆಚ್ಚುತ್ತಾ ಹೋಗುತ್ತಿವೆ.

ಇದಕ್ಕೆ ಪ್ರಮುಖ ಕಾರಣ ಸರಿ ಸುಮಾರು ಹೆಚ್ಚಿನ ಮಾಹಿತಿಗಳು ಪ್ರಚಾರದ ಭರಾಟೆಯಿಂದ ಅಥವಾ ಯಾವುದೋ ಒಂದು ವಿಚಾರಧಾರೆಯ ಪ್ರಸರಣದ ಉದ್ದೇಶದಿಂದ ಹರಿದಾಡುತ್ತವೆ. ಅದೊಂದು ಜನಹಿತದಿಂದ ಚಲಾವಣೆಯಲ್ಲಿ ಇರುವ ಮಾಹಿತಿಯಾಗಿರುವುದಿಲ್ಲ, ಬದಲಿಗೆ ಯಾರದೋ ಗುರಿ ಸಾಧನೆಯ ಉದ್ದೇಶದಿಂದ ಹರಿದಾಡುವ ಸಿದ್ಧಾಂತ ಪ್ರೇರಿತ ಸಂಗತಿಯಾಗಿರುತ್ತದೆ. ಉದಾಹರಣೆಗೆ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಹರಿದಾಡುವ ಮಾಹಿತಿಯನ್ನು ಸಿದ್ಧಪಡಿಸುವ, ಪ್ರಚಾರ ಪಡಿಸುವ ಒಂದು ವ್ಯವಸ್ಥಿತ ಜಾಲವೇ ಇದೆ.

ಬಹಳ ಸರಳವಾಗಿ ಹೇಳುವುದಿದ್ದರೆ ಮನೆಗೆ ಕನ್ನ ಹಾಕುವ, ಬಸ್‌ಸ್ಟಾಂಡಿನಲ್ಲಿ ಪಿಕ್‌ಪಾಕೆಟ್ ನಡೆಸುವ ಗ್ಯಾಂಗ್‌ಗಳ ಹಾಗೆ ಮಾಧ್ಯಮಗಳಲ್ಲಿಯೂ ಕೆಲಸ ಮಾಡುವ ಹಲವಾರು ಗುಂಪುಗಳಿವೆ. ಮಾಧ್ಯಮಗಳಲ್ಲಿ ಸುದ್ದಿ ಸ್ಥಳಗಳನ್ನು ಆವರಿಸಿ, ಅಲ್ಲಿ ತಮಗೆ ಬೇಕಾದ ಮಾಹಿತಿ ಮಾರುವ ಸಿದ್ಧಾಂತ (ಅ)ನಿಷ್ಟ ಕೂಲಿಕಾರರು ಮಾಧ್ಯಮದ ಸಾಂಪ್ರದಾಯಿಕ ಪಾವಿತ್ರ್ಯಕ್ಕೆ ಧಕ್ಕೆ ತಂದಿವೆ ಎನ್ನುವುದನ್ನು ಬೇಸರದಿಂದಲೇ ಹೇಳಬೇಕಾಗಿದೆ. ಹೀಗಿರುವಾಗ, ಕಲಬೆರಕೆ ಸುದ್ದಿಗಳೇ ಮಾರುಕಟ್ಟೆಯಲ್ಲಿ ತುಂಬಿ ಹೋಗಿ ಸತ್ಯದ ಸರಕುಗಳು ಸಿಗುವ ಕೆಲವೇ ಅಂಗಡಿಗಳೆಲ್ಲಿ ಎಂದು ಹುಡುಕುವುದೇ ತ್ರಾಸದಾಯಕ ಕೆಲಸ. ಅಷ್ಟಕ್ಕೂ ಶ್ರಮಪಟ್ಟು ಪಡೆದ ಸುದ್ದಿಗಳೂ ಸರಿಯಾಗಿವೆಯೇ ಎಂದು ಖಾತರಿ ಪಡಿಸಿಕೊಳ್ಳುವ ವ್ಯವಧಾನ ಮತ್ತು ವಿಧಾನ ಜನಸಾಮಾನ್ಯರಲ್ಲಿ ಎಷ್ಟು ಜನರಿಗೆ ತಿಳಿದಿದೆ? ಈ ಗೊಂದಲವನ್ನು ಯಾರು, ಹೇಗೆ, ಏಕೆ ಮತ್ತು ಯಾವಾಗ ಸರಿಪಡಿಸಬೇಕು ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ಇಂತಹ ಒಂದು ಪರಿಸ್ಥಿತಿ ಯಾಕೆ, ನಿರ್ಮಾಣವಾಯಿತು ಎನ್ನುವುದರ ಕುರಿತು ಒಂದೆರಡು ವಿಚಾರಗಳನ್ನು ಹಂಚಿಕೊಳ್ಳುವುದು ಅಗತ್ಯ ಎಂದುಕೊಂಡಿದ್ದೇನೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೆಡೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವಿದ್ದರೆ ಇನ್ನೊಂದೆಡೆ ಜನಸಾಮಾನ್ಯರಿರುತ್ತಾರೆ. ಮಾಧ್ಯಮ, ಈ ಮೂರು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ಪ್ರಜಾಪ್ರಭುತ್ವದ ನಿಜವಾದ ಪ್ರಭುಗಳಾದ ಜನರಿಗೆ ತಿಳಿಸುತ್ತಾ ಅವರಲ್ಲಿ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸ ಮಾಡುವ ವಾತಾವರಣವಿತ್ತು.

ಉದಾರೀಕರಣದ ನಂತರ ಉದ್ಯಮಗಳು ತಮ್ಮ ಪರವಾಗಿ ಜನಾಭಿಪ್ರಾಯ ರೂಪಿಸಿಕೊಳ್ಳುವ ಅಗತ್ಯವನ್ನು ಹೆಚ್ಚು ಹೆಚ್ಚಾಗಿ ಮನಗಂಡು, ಪತ್ರಿಕೋದ್ಯಮದಲ್ಲಿ ಕೇವಲ ಜಾಹೀರಾತು ನೀಡುವಲ್ಲಿಗೆ ತಮ್ಮ ಪಾತ್ರವನ್ನು ಮಿತಿಗೊಳಿಸದೇ, ಪತ್ರಿಕೋದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಲು ಆರಂಭಿಸಿದವು. ಸಾಮಾಜಿಕ ಉತ್ತರದಾಯಿತ್ವದ ಪ್ರಶ್ನೆ ಗೌಣವಾಗಿ ಹೂಡಿದ ಬಂಡವಾಳಕ್ಕೆ ತಕ್ಕ ಪ್ರತಿಫಲ ಪಡೆಯುವುದೇ ಬಂಡವಾಳ ಹೂಡಿದ ವ್ಯಕ್ತಿ ಮತ್ತು ಶಕ್ತಿಗಳಿಗೆ ಮುಖ್ಯವಾಯಿತು. ಹೊಸ ರೀತಿಯ ತಂತ್ರಜ್ಞಾನದಿಂದಾಗಿ ಪತ್ರಿಕೆಯ ಮುದ್ರಣ, ಪುಟವಿನ್ಯಾಸ, ಸುದ್ದಿಸಂಗ್ರಹ, ಪ್ರಸರಣ ಹೀಗೆ ಎಲ್ಲಾ ವಿಭಾಗಗಳೂ ಹೊಸ ರೀತಿಯಲ್ಲಿ ಮರು ಸಂಘಟಿಸಲ್ಪಟ್ಟವು. ಇದಕ್ಕೆ ಮಾಹಿತಿ ತಂತ್ರಜ್ಞಾನವೂ ಪೂರಕ ವಾತಾವರಣ ನಿರ್ಮಿಸಿತು. ಹೀಗೆ ಮೊದಲಿದ್ದ ಎಲ್ಲಾ ರೀತಿನೀತಿಗಳು ಬದಲಾಗಿ ಹೊಸ ವ್ಯವಸ್ಥೆ ಹುಟ್ಟಿಕೊಂಡಿತು. ಇದೊಂಥರಾ ಹಳೆಯ ಮುಳಿಹುಲ್ಲಿನ ಮನೆ ಅಥವಾ ಹಂಚಿನ ಮನೆಯ ಬದಲಿಗೆ ತಾರಸಿನ ಮನೆ ಕಟ್ಟಿಕೊಂಡ ಹಾಗೆ ಆಯಿತು. “ಮಾಧ್ಯಮ” ಎನ್ನುವುದು ಪರಿವರ್ತನೆಗೊಂಡು “ಪತ್ರಿಕೋದ್ಯಮ” ವಾಯಿತು.

ಪತ್ರಿಕೆಗಳು ಉದ್ಯಮವಾಗಿ  ಬದಲಾವಣೆ ಆದಾಗ ಅಲ್ಲಿ ಹೆಚ್ಚು ಹೆಚ್ಚು ಹೂಡಿಕೆಯು ಅನಿವಾರ್ಯವಾಯಿತು. ಮಾಧ್ಯಮಗಳಲ್ಲಿ ದೊಡ್ಡ ರೀತಿಯಲ್ಲಿ ಹೂಡಿಕೆ ಮಾಡಲು ಬಂಡವಾಳ ಇರುವವರಿಗೆ ಮಾತ್ರ ಸಾಧ್ಯವಾಯಿತು. ಇವತ್ತು ಪ್ರತಿಯೊಂದು ಪತ್ರಿಕೆ, ಟಿ ವಿ ಚಾನೆಲ್, ಯಾರು ನಡೆಸುತ್ತಾರೆ ಹೇಗೆ ನಡೆಸುತ್ತಾರೆ ಎನ್ನುವುದನ್ನು ತಿಳಿದುಕೊಂಡರೆ ಇದೆಲ್ಲವೂ ಬಹಳ ಸ್ಪಷ್ಟವಾಗಿಯೇ ತಿಳಿಯುತ್ತದೆ. ಯಾವುದೇ ಮಾಧ್ಯಮ ಸರಕಾರದ ಮತ್ತು ಉದ್ಯಮಗಳ ಜಾಹೀರಾತಿನ (ಶಕ್ತಿವರ್ಧಕ ಇಲ್ಲದೆ) ಅಮಲು ಇಲ್ಲದೇ ನೆಟ್ಟಗೆ ನಡೆಯುವ ಸ್ಥಿತಿಯಲ್ಲಿ ಇಲ್ಲ. ಹೊಸ ವ್ಯವಸ್ಥೆಯಲ್ಲಿ ಸುದ್ದಿ ಸಂಗ್ರಹ, ಪುಟವಿನ್ಯಾಸ, ಮುದ್ರಣ, ಪ್ರಸರಣ ಎಲ್ಲಾ ಹಂತಗಳಲ್ಲಿ ತಂತ್ರ ಜ್ಞಾನದ ಉಪಯೋಗ ದೊಡ್ಡ ರೀತಿಯಲ್ಲಿ ಆಗುತ್ತದೆ. ಹಾಗೆ ಆದಾಗ ಅಲ್ಲಿ ಮನುಷ್ಯನ ವಿವೇಕ, ವಿಮರ್ಶೆಗೆ ಅವಕಾಶಗಳೇ ಇಲ್ಲ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡುವುದಕ್ಕೆ, ವಿಮರ್ಶೆ ಮಾಡುವುದಕ್ಕೆ, ದಮನಿತರ ಧ್ವನಿಯಾಗುವುದಕ್ಕೆ ಅವಕಾಶಗಳು ಸೀಮಿತ. ಹೆಚ್ಚು ಓದುಗರನ್ನು, ಪ್ರಸರಣ ಹೆಚ್ಚು ಮಾಡುವ ಮೂಲಕ ಜಾಹೀರಾತು ದರ ಹೆಚ್ಚಿಸಿಕೊಳ್ಳುವ ಮತ್ತು ಭಾವನಾತ್ಮಕ ಸಂಗತಿಗಳ ಮೂಲಕ ಸೆನ್ಸೇಷನ್ ಹುಟ್ಟುಹಾಕುವ ಹೊಸ ಸಂಸ್ಕೃತಿಗೆ ಮಾಧ್ಯಮ ಮುನ್ನುಡಿ ಬರೆಯಿತು. ಇದು ಖರ್ಚು, ನಿರ್ವಹಣೆ ಮತ್ತು ಆಡಳಿತದ ದೃಷ್ಟಿಯಿಂದ ಉದ್ಯಮಕ್ಕೆ ಅನುಕೂಲಕರವೇ ಅನ್ಸುತ್ತೆ. ವ್ಯವಸ್ಥಿತವಾಗಿ ಇದು ಈಗಾಗಲೇ ಒಂದು ಹೊಸ ಸಂಸ್ಕೃತಿಯನ್ನು ಸೃಷ್ಟಿ ಮಾಡಿ ಆಗಿದೆ. ಮತ್ತು ಇದರ ಹಿಂದಿರುವುದು ವ್ಯಾಪಾರಿ ಜಗತ್ತಿನ ಮಾಯಾಜಾಲ. ಈ ವಿಸ್ಮೃತಿಯಿಂದ ಹೊರ ಬರುವುದು ಹೇಗೆ? ಮತ್ತು ಈ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವುದು ಹೇಗೆ? ಇದು ನಮ್ಮ ಮುಂದಿನ ಪ್ರಮುಖ ಪ್ರಶ್ನೆಯಾಗಬೇಕಿದೆ.

ಡಾ. ಉದಯಕುಮಾರ್‌ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ-ಭರವಸೆ ಮತ್ತು ಬೆದರಿಕೆಗಳ ನಡುವೆ ಪರ್ಯಾಯ ಮಾಧ್ಯಮ https://kannadaplanet.com/alternate-media-between-promises-and-threats/

More articles

Latest article