ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಬಾನುಮುಷ್ತಾಕ್ ಸ್ತ್ರೀ ವಿಶಿಷ್ಟ ಸಂವೇದನೆಯನ್ನು ಅತ್ಯಂತ ಆಳವಾಗಿ ಮತ್ತು ಪರಿಣಾಮಕಾರಿಯಾಗಿ ತಮ್ಮ ಬರಹಗಳಲ್ಲಿ ಪ್ರತಿಪಾದಿಸಿ ಕನ್ನಡ ಸಾಹಿತ್ಯದ ಅನುಭವ ಲೋಕವನ್ನು ಶ್ರೀಮಂತಗೊಳಿಸಿದ ಲೇಖಕಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವಿದೆ. ಬಾನು ಕನ್ನಡದ ಹೆಮ್ಮೆ ಮಾತ್ರ ಅಲ್ಲ, ಅವರು ಹಾಸನದ ಮಗಳಾಗಿಯೂ ನಮ್ಮ ಹೆಮ್ಮೆ – ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್, ಹಾಸನ.

ಬಾನುಮುಷ್ತಾಕ್ ಮೇಡಂ ನನಗೆ ಮೊದಲು ಪರಿಚಯವಾಗಿದ್ದು ಹಾಸನದಲ್ಲಿ ನಾನು ಪತ್ರಕರ್ತೆಯಾಗಿ ಕೆಲಸ ಮಾಡುವಾಗ. ಹೀಗೆ ಒಂದು ದಿನ ಅವರು ಕೋರ್ಟ್ ಮುಗಿಸಿಕೊಂಡು ನಮ್ಮ ಕಛೇರಿಗೆ ಬಂದಿದ್ದರು. ಪತ್ರಿಕೆಯಲ್ಲಿ ಯಾವುದೋ ಲೇಖನ ಪ್ರಕಟವಾಗಿತ್ತು. ಅದರ ಕುರಿತು ತಿಳಿಯುವ ಸಲುವಾಗಿ ಬಂದಿದ್ದರು. ಇಬ್ಬರೂ ಕುಳಿತು ಆ ಲೇಖನದ ಸಾಧಕಬಾಧಕ ಚರ್ಚೆ ನಡೆಸಿದೆವು. ನಮ್ಮ ಆ ಬಿರುಸಿನ ಚರ್ಚೆಯ ನಡುವೆ ನಮಗೆ ಊಟದ ಸಮಯವಾಗಿದ್ದು ಅರಿವಾಗಿರಲಿಲ್ಲ. ಅವರು ಕೈಯಲ್ಲಿದ್ದ ಗಡಿಯಾರ ನೋಡಿಕೊಂಡು, ‘ಅಯ್ಯೋ ಟೈಮ್ ಆಗಿದ್ದೆ ಗೊತ್ತಾಗಲಿಲ್ಲ, ಬಾ ಸುವರ್ಣ ನಮ್ಮ ಮನೆಗೆ’ಎಂದು ಬಹಳ ಒತ್ತಾಯ ಮಾಡಿ, ಮನೆಗೆ ಕರೆದೊಯ್ದು ಅವರೇ ಕೈಯಾರೆ ಬಿಸಿಬಿಸಿ ಬಿರಿಯಾನಿ ಮಾಡಿ  ಬಡಿಸಿ ಅವರೂ ನನ್ನ ಜೊತೆಯಲ್ಲಿಯೇ ಕುಳಿತು ಒಟ್ಟಿಗೆ ಊಟವನ್ನು ಸವಿದ ಆ ಕ್ಷಣ ನಾನು ಎಂದೂ ಮರೆಯಲು ಸಾಧ್ಯವಿಲ್ಲ.  ಅಂದಿನಿಂದ ನನಗೆ ಬಾನು ಆತ್ಮೀಯರಾದರು.

ಮಹಿಳೆಯರಲ್ಲಿ ಅಸಮಾನತೆಯನ್ನು ಬಡಿದೋಡಿಸಬೇಕು, ವರ್ಣಭೇದವನ್ನು ತೊಡೆದು ಹಾಕಬೇಕು, ಜಾತಿಧರ್ಮದ ಹೆಸರಿನಲ್ಲಿ ನಡೆಯುವ ದೌರ್ಜನ್ಯ, ಮೇಲುಕೀಳು ಭಿನ್ನಭೇದ ಇವೆಲ್ಲವನ್ನೂ ಕಂಡು ಮನದಲ್ಲಿಯೇ ವೇದನೆ ಅನುಭವಿಸುತ್ತಾ ಇದ್ದ ಬಾನು, ನನ್ನ ಜೊತೆಯಿಂದಾಗಿ ಸ್ವಲ್ಪ ಸಮಾಧಾನಪಟ್ಟುಕೊಳ್ಳುತ್ತಿದ್ದರು ಎನಿಸುತ್ತದೆ. ‘ಮಹಿಳೆ ಎಂದರೆ ಎಲ್ಲರೂ ಒಂದೇ ಎನ್ನುವ ಭಾವನೆ ಜನರಲ್ಲಿ ಮೂಡಿಸಬೇಕು’ ಎನ್ನುವ ಛಲ ಬಾನು ಮೇಡಂನಲ್ಲಿದೆ ಎನ್ನುವುದು ಅವರ ಒಡನಾಟದಿಂದ ಕಂಡುಕೊಂಡೆ. 

1948ರ ಏಪ್ರಿಲ್ 3ರಂದು ಹಾಸನದಲ್ಲಿ ಜನಿಸಿದ ಅವರು ನಾಡಿನಲ್ಲಿ ವಕೀಲರು, ಸಾಮಾಜಿಕ ಹೋರಾಟಗಾರ್ತಿ, ಬರಹಗಾರ್ತಿ, ಪತ್ರಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಬಾನು ತಮ್ಮ 29ನೆಯ ವಯಸ್ಸಿನಲ್ಲಿಯೇ ತನ್ನ ಭಾವನೆಗಳು ಮತ್ತು ಅನುಭವಗಳನ್ನು ಅನ್ವೇಷಿಸಲು ಬರವಣಿಗೆಯನ್ನು ಪ್ರಾರಂಭಿಸಿದರು. ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರರಾಗಿ 9 ವರ್ಷ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದು. ಇದುವರೆಗೆ ಅವರ ಆರು ಸಣ್ಣ ಕಥಾ ಸಂಕಲನಗಳು ಪ್ರಕಟವಾಗಿವೆ. ಹಸೀನಾ ಮತ್ತು ಇತರ ಕಥೆಗಳು ಅವರ ಸಮಗ್ರ ಕೃತಿ. ಈ ಕೃತಿಯನ್ನು ಮೈಸೂರಿನ ಅಭಿರುಚಿ ಪ್ರಕಾಶನದವರು 2013ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿನ 12 ಕಥೆಗಳನ್ನು ದೀಪಾ ಭಾಸ್ತಿ ಅವರು ಕನ್ನಡದಿಂದ ಇಂಗ್ಲೀಷ್‍ಗೆ ಅನುವಾದಿಸಿ, ‘ಹಾರ್ಟ್‍ಲ್ಯಾಂಪ್’ಕೃತಿಯಾಗಿ ಪ್ರಕಟಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕೃತಿ ಇದಾಗಿದ್ದು, ಬಾನುಮುಷ್ತಾಕ್ ಅವರ ಕಥಾ ಪಯಣದ ಒಂದೊಂದು ಹೆಜ್ಜೆಯನ್ನು ಆಯ್ದುಕೊಂಡು ಇದು ರೂಪುಗೊಂಡಿದೆ.

 1990ರಲ್ಲಿ ಪ್ರಕಟವಾದ “ಹೆಜ್ಜೆ ಮೂಡಿದ ಹಾದಿ” ಸಂಕಲನದಿಂದ “ಶಾಯಿಸ್ತ ಮಹಲ್‍ನ ಕಲ್ಲುಚಪ್ಪಡಿಗಳು” ಕಥೆಯನ್ನೂ 1999ರಲ್ಲಿ ಪ್ರಕಟವಾದ “ಬೆಂಕಿಮಳೆ” ಕಥಾ ಸಂಕಲನದಿಂದ ಬೆಂಕಿಮಳೆ, ಕರಿನಾಗರಗಳು, ಹೃದಯದ ತೀರ್ಪು, ಕೆಂಪುಲುಂಗಿ ಕಥೆಗಳನ್ನೂ, 2004ರಲ್ಲಿ ಪ್ರಕಟವಾದ “ಎದೆಯ ಹಣತೆ”ಕಥಾ ಸಂಕಲನದಿಂದ ಹೈ ಹೀಲ್ಡ್ ಷೂ, ಒಮ್ಮೆ ಹೆಣ್ಣಾಗು ಪ್ರಭುವೆ ಕಥೆಗಳನ್ನೂ, 2007ರಲ್ಲಿ ಪ್ರಕಟವಾದ “ಸಫೀರ” ಸಂಕಲನದಿಂದ ಮೆಲು ದನಿಗಳು ಕಥೆಯನ್ನೂ, 2012ರಲ್ಲಿ ಪ್ರಕಟವಾದ “ಬಡವರ ಮಗಳು ಹೆಣ್ಣಲ್ಲ” ಕಥಾ ಸಂಕಲನದ ಸ್ವರ್ಗವೆಂದರೆ ಕಥೆಯನ್ನೂ 2023ರಲ್ಲಿ ಪ್ರಕಟವಾದ “ಹೆಣ್ಣು ಹದ್ದಿನ ಸ್ವಯಂವರ” ಕಥಾ ಸಂಕಲನದಲ್ಲಿ ಕಫನ್ ಮತ್ತು ಅರಬ್ಬಿ ಮೇಷ್ಟ್ರು ಹಾಗೂ ಗೋಬಿಮಂಚೂರಿ ಕಥೆಗಳನ್ನೂ ಆಯ್ದುಕೊಳ್ಳಲಾಗಿದೆ. ಅಂದರೆ 1990ರಲ್ಲಿ ಬಾನುಮುಷ್ತಾಕ್ ಅವರು ಬರೆದ ಮೊದಲ ಕಥೆಯಿಂದ ಆರಂಭವಾಗಿ 2023ರ ತನಕ ಒಟ್ಟು 33 ವರ್ಷಗಳ ಕಥೆಗಳ ಗುಚ್ಛವೇ “ಹಾರ್ಟ್‍ಲ್ಯಾಂಪ್!” ಹೀಗಾಗಿ ‘ಬೂಕರ್” ಬಾನು ಅವರ ಮೂರು ದಶಕಗಳ ಕಥಾ ಪಯಣಕ್ಕೆ ಸಂದ ಗೌರವ ಇದಾಗಿದೆ.

ಕುಬ್ರ, ಬಡವರ ಮಗಳು ಹೆಣ್ಣಲ್ಲ ಅವರ ಕಾದಂಬರಿಗಳು. ಇಬ್ಬನಿಯ ಕಾವು ಲೇಖನ ಸಂಕಲನ, ಒದ್ದೆ ಕಣ್ಣಿನ ಬಾಗಿನ ಕವನ ಸಂಕಲನಗಳಾಗಿವೆ. ಇದಲ್ಲದೇ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಂಬಂಧಿತ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕರಿನಾಗರಗಳು ಎಂಬ ಕಥೆಯನ್ನು 2003ರಲ್ಲಿ ಹಸೀನಾ ಎಂಬ ಚಲನಚಿತ್ರವಾಗಿ ಗಿರೀಶ್ ಕಾಸರವಳ್ಳಿಯವರು ರೂಪಾಂತರಿಸಿದರು. ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ಫಾರಸೀ ಕೃತಿ ತಾರೀಖ್-ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ.

 ಎಂಬತ್ತರ ದಶಕದಲ್ಲಿ ಒಬ್ಬ ಮುಸ್ಲಿಂ ಸಮುದಾಯದ ಹೆಣ್ಣುಮಗಳು, ಸಮಾಜದಲ್ಲಿ ತಮ್ಮ ಸಮುದಾಯದಲ್ಲಿನ ಹೆಣ್ಣುಮಕ್ಕಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ದನಿ ಎತ್ತುತ್ತಾ ಹೋರಾಟ ನಡೆಸುವುದು ಸುಲಭದ ಮಾತಾಗಿರಲಿಲ್ಲ. ಅವರು ಅನ್ಯಾಯವನ್ನು ಖಂಡಿಸಿದ್ದರಿಂದಲೇ ಎಷ್ಟೋ ನೋವು ದುಃಖ ಅವಮಾನ ಅನುಭವಿಸಿದ್ದಾರೆ. ಪತ್ರಿಕೆಯೊಂದರ ಸಂದರ್ಶನದಲ್ಲಿ ಸಮುದಾಯದ ಧಾರ್ಮಿಕ ಆಚರಣೆಗಳಲ್ಲಿನ ತಾರತಮ್ಯದ ಬಗ್ಗೆ ಅವರು ಹೇಳಿಕೆ ನೀಡಿದಾಗ- ಸಮುದಾಯದ ಮುಖಂಡರಿಂದಲೇ ಪ್ರಾಣ ಬೆದರಿಕೆ, ಸಮುದಾಯದಿಂದಲೇ ಬಹಿಷ್ಕಾರದಂತಹ ಪರಿಸ್ಥಿತಿಗಳು ಎದುರಾದವು. ಆದರೂ ಅವರು ಯಾವುದಕ್ಕೂ ಎದೆಗುಂದದೆ ತನ್ನ ಹಠವನ್ನು ಬಿಡದೆ ಪ್ರಾಣದ ಹಂಗು ತೊರೆದು, ಎದುರಿನವರಿಗೆ ‘ಎಂದಿಗೂ ನಾನು ಬರವಣಿಗೆ ನಿಲ್ಲಿಸಲಾರೆ’ಎಂದು ಸೆಡ್ಡು ಹೊಡೆದು ನಿಂತ ಪರಿಯಿಂದ ನಿಜವಾಗಿಯೂ ಒಬ್ಬ ಗಟ್ಟಿಗಿತ್ತಿ ಹೆಣ್ಣುಮಗಳಾದರು.

“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ‌ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.

 ಹೀಗೆಂದೇ ಬಾನುಮುಷ್ತಾಕ್ ಅವರ ಕಥೆಗಳು ಕಾಡುವ ಗುಣ ಹೊಂದಿದಂತವು. ಅವರ ಕಥಾನಾಯಕಿಯರು ನೋವು ದೌರ್ಜನ್ಯ ಅವಮಾನ ಎಲ್ಲವನ್ನು ಸಹಿಸಿಕೊಂಡು ತಮ್ಮ ಆತ್ಮಸ್ಥೆರ್ಯದಿಂದ ಹೇಗೆ ಬದುಕು ಕಟ್ಟಿಕೊಳ್ಳುತ್ತಾರೆ ಎನ್ನುವುದಕ್ಕೆ ಇಲ್ಲಿ ಉದಾಹರಣೆಗಳಿವೆ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ನೋವು, ಸಂಕಟ, ತಣ್ಣನೆಯ ಪ್ರತಿರೋಧವನ್ನು ಅವರು ತಮ್ಮ ಕತೆಗಳಲ್ಲಿ ಎಳೆಎಳೆಯಾಗಿ ತೆರೆದಿಡುತ್ತಾರೆ. ಅಲ್ಲಿನ ಎಷ್ಟೋ ಕುಟುಂಬಗಳ ಹೆಣ್ಣುಗಳು ಉಸಿರುಗಟ್ಟಿಸುವ ಸಂಪ್ರದಾಯ, ಕಟ್ಟುಪಾಡುಗಳ ನಡುವೆ ಸಿಲುಕಿ ಒದ್ದಾಡುತ್ತಲೇ ಅದನ್ನು ಸದ್ದಿಲ್ಲದೇ ಮೀರುವ ಬಗೆಗಳನ್ನು ಚಿತ್ರಿಸಿರುವ ಆಳ ನೋಟದಿಂದಲೇ ಅವರ ಚಿಂತನೆಗಳ ಹರಿವನ್ನು ಗುರ್ತಿಸಲು ಸಾಧ್ಯವಿದೆ. ಬಾನು ಮೇಡಂ ಅವರು ತಮ್ಮ ಕಥೆಗಳಲ್ಲಿ ವೈವಾಹಿಕ ನೆಲೆಯಲ್ಲಿ ತಿರಸ್ಕೃತ ಹೆಣ್ಣುಗಳ ಬಗ್ಗೆ ವಿಶಾಲವಾದ ಕ್ಯಾನ್ವಾಸಿನ ಮೂಲಕ ಪ್ರಖರ ಬೆಳಕು ಚೆಲ್ಲುತ್ತಾರೆ. ಅವರ ಕಥನ ಜಗತ್ತು, ಮುಸ್ಲಿಂ ಸಮುದಾಯದ ಜೀವನ ಕ್ರಮವನ್ನು ಸ್ತ್ರೀ ನಿಷ್ಠ ದೃಷ್ಟಿಕೋನವನ್ನಿಟ್ಟುಕೊಂಡು ತಮ್ಮ ಪರಿಸರದ ಜನಾಂಗದ ಬದುಕಿನ ವಿವರಗಳನ್ನು ಸಾಂಸ್ಕೃತಿಕ ಸಂಗತಿಗಳನ್ನು ಚಿತ್ರಿಸುತ್ತದೆ. ಬಾನುಮುಷ್ತಾಕ್ ಅವರ ಬರಹಗಳು ಮತಧರ್ಮ, ಸಮಾಜ ಮತ್ತು ರಾಜಕೀಯವು ಮಹಿಳೆಯರ ಮೇಲೆ ಹೇಗೆ ನಿರ್ಬಂಧಗಳನ್ನು ಹೇರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ.

ಬಾನುಮುಷ್ತಾಕ್ ಸ್ತ್ರೀ ವಿಶಿಷ್ಟ ಸಂವೇದನೆಯನ್ನು ಅತ್ಯಂತ ಆಳವಾಗಿ ಮತ್ತು ಪರಿಣಾಮಕಾರಿಯಾಗಿ ತಮ್ಮ ಬರಹಗಳಲ್ಲಿ ಪ್ರತಿಪಾದಿಸಿ ಕನ್ನಡ ಸಾಹಿತ್ಯದ ಅನುಭವ ಲೋಕವನ್ನು ಶ್ರೀಮಂತಗೊಳಿಸಿದ ಲೇಖಕಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವಿದೆ. ಶೋಷಿತ ಮಹಿಳೆಯರ ಜ್ವಲಂತ ಬದುಕಿನ ಸಮಸ್ಯೆಗಳಿಗೆ ಬಂಡಾಯದ ದನಿ ನೀಡಿ, ಸಾಹಿತ್ಯವನ್ನು ಸಮಾಜಮುಖಿಯಾಗಿಸಿ ಪರಾಮರ್ಶಿಸುವ ಸಶಕ್ತ ಮಾಧ್ಯಮವಾಗಿಸಿಕೊಂಡಿರುವ ಬಾನು ಅವರ ಸಾಹಿತ್ಯ ಭಾಷೆ ಕನ್ನಡವಾಗಿದ್ದರೂ ಸಂವೇದನೆಯ ಜಗತ್ತಿನ ಬಹುಪಾಲು ದೇಶಗಳ ಮುಸ್ಲಿಂ ಮಹಿಳಾ ಜಗತ್ತಿನ ಮೂಕ ಸಂವೇದನೆಯ ಅಭಿವ್ಯಕ್ತಿಯಾಗಿರುವುದು ವಿಶೇಷವಾದ ಸಂಗತಿಯಾಗಿದೆ.

ಬಾನುಮುಷ್ತಾಕ್ ನಮ್ಮ ನಡುವೆ ಇರುವ ಅಪರೂಪದ ವ್ಯಕ್ತಿತ್ವದ ಛಲಗಾತಿ ಮಹಿಳೆ. 1980ರ ದಶಕದಿಂದಲೂ ಅವರು ಕರ್ನಾಟಕದಲ್ಲಿ ಮೂಲಭೂತವಾದ ಮತ್ತು ಸಾಮಾಜಿಕ ಅನ್ಯಾಯಗಳನ್ನು ದುರ್ಬಲಗೊಳಿಸಲು ಕೆಲಸ ಮಾಡುವ ಕಾರ್ಯಕರ್ತೆಯಾಗಿ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2000ದಲ್ಲಿ ಮುಸ್ಲಿಂ ಮಹಿಳೆಯರ ಮಸೀದಿಗಳ ಪ್ರವೇಶ ಹಕ್ಕಿನ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ಬಾನು ಅವರ ಕುಟುಂಬದವರ ವಿರುದ್ಧ ಮೂರು ತಿಂಗಳ ಸಾಮಾಜಿಕ ಬಹಿಷ್ಕಾರ ಘೋಷಿಸಲಾಯಿತು. ಅದನ್ನವರು ಸಮರ್ಥವಾಗಿ ಎದುರಿಸಿದ್ದಾರೆ. 2000ದ ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿಯಲ್ಲಿರುವ ದತ್ತಪೀಠಕ್ಕೆ ಮುಸ್ಲಿಮರು ಭೇಟಿ ನೀಡುವುದನ್ನು ತಡೆಯುವ ಪ್ರಯತ್ನಗಳಾಗಿದ್ದವು. ಅದನ್ನು ಪ್ರತಿಭಟಿಸಿ ಬಾನುಮುಷ್ತಾಕ್ ಕೋಮು ಸೌಹಾರ್ದ ವೇದಿಕೆಯನ್ನು ಸೇರಿ ಸಂಗಾತಿಗಳೊಂದಿಗೆ ಇದಕ್ಕೆ ಪ್ರತಿರೋಧವನ್ನು ಒಡ್ಡಿದರು. ಕರ್ನಾಟಕದ ಕೆಲ ಭಾಗದ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಹಕ್ಕನ್ನು ಕೂಡ ಬಾನು ಬೆಂಬಲಿಸಿದ್ದಾರೆ. ಹೀಗೆ ಅವರು ಸದಾ ನ್ಯಾಯಕ್ಕಾಗಿ ಮತೀಯ ಚೌಕಟ್ಟುಗಳನ್ನು ಒಡೆಯಲು ಒಳಗೂ, ಬೀದಿಯಲ್ಲೂ, ನ್ಯಾಯಾಲಯದಲ್ಲೂ ಅವಿರತ ಹೋರಾಡುತ್ತಲೇ ಬಂದಿದ್ದಾರೆ.

 ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸರ್ಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ‘ಒಮ್ಮೆ ಹೆಣ್ಣಾಗು ಪ್ರಭುವೆ’ ನಾಟಕ ರೂಪಾಂತರಕ್ಕೆ ‘ಇಂಟರ್ ನ್ಯಾಷನಲ್ ವುಮನ್ ಫಾರ್ ರೇಡಿಯೋ ಅಂಡ್ ಟೆಲಿವಿಷನ್ ಬಹುಮಾನ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿಗಳು ದಕ್ಕಿವೆ. 1999ರಲ್ಲಿ ಹಾಗೂ 2024ರಲ್ಲಿ ಪೆನ್ ಇಂಗ್ಲಿಷ್ ಅನುವಾದ ಪ್ರಶಸ್ತಿ ಹಾಗೂ 2025ರಲ್ಲಿ ಅನುವಾದಿತ ಕೃತಿ ಹಾರ್ಟ್‍ಲ್ಯಾಂಪ್ ಸಣ್ಣಕಥಾ ಸಂಕಲನಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಂದಿರುವುದಲ್ಲದೇ, ಕಳೆದ ವರ್ಷ ಮೈಸೂರಿನ ವಿಶ್ವಪ್ರಸಿದ್ಧ ದಸರಾ ಉದ್ಘಾಟನೆಯ ಗೌರವವನ್ನೂ ಪಡೆದ ಮೊದಲ ಮುಸ್ಲಿಂ ಮಹಿಳೆ ಎಂದು ಇತಿಹಾಸದಲ್ಲಿ ದಾಖಲಾದರು. ಇವರ ಸಾಮಾಜಿಕ ಮತ್ತು ಸಾಹಿತ್ಯಿಕ ಸೇವೆಗಾಗಿ ಅನೇಕ ಪ್ರಶಸ್ತಿ, ಬಹುಮಾನ, ಗೌರವಗಳು ದೊರಕಿವೆ. ಬಾನು ಕನ್ನಡದ ಹೆಮ್ಮೆ ಮಾತ್ರ ಅಲ್ಲ, ಅವರು ಹಾಸನದ ಮಗಳಾಗಿಯೂ ನಮ್ಮ ಹೆಮ್ಮೆ.

ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್

ಹಾಸನ

ಇದನ್ನೂ ಓದಿ- ಎಫ್‌ಸ್ಟೀನ್‌ ಫೈಲ್ಸ್‌ ಭಾಗ-1 | ಸತ್ಯಗಳ ಸಂತೆಯಲ್ಲಿ ಬ್ಲ್ಯಾಕ್‌ಮೇಲ್‌ ದಂಧೆಗಿಳಿಯಿತೇ ಅಮೆರಿಕಾ?

More articles

Latest article

Most read