ವಿಪಕ್ಷ ನಾಯಕರು ಹಗರಣದ ವಿಷಯದಲ್ಲೇ ಅಧಿವೇಶನದಲ್ಲಿ ಕಾಲಹರಣ ಮಾಡಿದ್ದರಿಂದಾಗಿ ಆಳುವ ಪಕ್ಷಕ್ಕೆ ಬಹಿರಂಗದಲ್ಲಿ ಮುಜುಗರವಾದರೂ ಅಂತರಂಗದಲ್ಲಿ ಒಳಿತೇ ಆಯಿತು. ಹಗರಣಗಳ ಹಣಾಹಣಿಯಲ್ಲಿ ಸರಕಾರದ ವೈಫಲ್ಯಗಳು ಮುಚ್ಚಿಹೋದವು. ಜನರ ಪರವಾಗಿ ಆಗಬೇಕಾಗಿದ್ದ ಚರ್ಚೆಗಳು ಆರೋಪ ಪ್ರತ್ಯಾರೋಪಗಳ ಪ್ರವಾಹದಲ್ಲಿ ಕೊಚ್ಚಿಹೋದವು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ನಾಡಿನಾದ್ಯಂತ ವರುಣ ಸೃಷ್ಟಿಸಿದ ಅತಿವೃಷ್ಟಿ ಅನಾಹುತಗಳು ಮರಣ ಮೃದಂಗ ಬಾರಿಸುತ್ತಿದೆ. ನದಿಗಳೆಲ್ಲ ಭೋರ್ಗರೆದು ಊರು ಕೇರಿಗಳನ್ನು ಮುಳುಗಿಸುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲ ಹಾಳಾಗಿ ರೈತಾಪಿ ಸಮುದಾಯ ಕಂಗಾಲಾಗಿದೆ. ರಸ್ತೆ ಸೇತುವೆಗಳು ಮುಳುಗುತ್ತಿವೆ, ಗುಡ್ಡಗಳು ಕುಸಿಯುತ್ತಿವೆ, ಜನರು ಅತೀವ ಆತಂಕದಲ್ಲಿದ್ದಾರೆ.
ಆದರೆ.. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರಕಾರ, ಬರ್ಬಾದಾದ ಬಹುಜನರ ಬದುಕಿಗೆ ರಕ್ಷಣೆ ಹಾಗೂ ಪರಿಹಾರ ಕೊಡಬೇಕೆಂದು ಸರಕಾರವನ್ನು ಒತ್ತಾಯಿಸಬೇಕಾದ ಪ್ರತಿಪಕ್ಷಗಳು ಹಗರಣಗಳ ಕುರಿತ ಕೆಸರೆರಚಾಟದಲ್ಲಿ ಅತ್ಯಂತ ಕ್ರಿಯಾಶೀಲವಾಗಿವೆ. ಜನರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದ್ದ ಅಧಿವೇಶನವೇ ಹಗರಣಗಳ ಕುರಿತ ಆರೋಪ ಪ್ರತ್ಯಾರೋಪಗಳ ಆಡಂಬೊಲವಾಗಿದೆ.
ರಾಜಕೀಯದ ಬೃಹನ್ನಾಟಕ ನೋಡುಗರಲ್ಲಿ ಅಸಹ್ಯ ಹುಟ್ಟಿಸಿದರೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಳುವ ಪಕ್ಷಕ್ಕೆ ಹಗರಣಗಳ ಕುರಿತು ಸಮರ್ಥನೆಗಳನ್ನು ಕೊಡುವುದೇ ಕಾಯಕ, ವಿರೋದ ಪಕ್ಷಕ್ಕೆ ಹೇಗಾದರೂ ಮಾಡಿ ಆಳುವ ಪಕ್ಷ ಹಾಗೂ ಮುಖ್ಯಮಂತ್ರಿಯನ್ನು ಹಗರಣಗಳಲ್ಲಿ ಸಿಲುಕಿಸಿ ಸರಕಾರವನ್ನು ಬದಲಿಸುವ ತವಕ. ಇವರ ಅಧಿಕಾರದಿಚ್ಛೆಯ ಚದುರಂಗದಾಟದಲಿ ಜನರ ಬಾಧೆ ಬವಣೆ ನಿರೀಕ್ಷೆಗಳೆಲ್ಲ ನಿರರ್ಥಕ.
ಹೌದು ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡಗಳ 90 ಕೋಟಿಯಷ್ಟು ಹಣ ದುರುಪಯೋಗ ಆಗಿದೆ. ಲೂಟಿಯಲ್ಲಿ ಫಲಾನುಭವಿಗಳಾದವರನ್ನು ಬಂಧಿಸಲಾಗಿದೆ, ಸಚಿವ ನಾಗೇಂದ್ರರವರೂ ಜೈಲು ಸೇರಿಯಾಗಿದೆ. ಒಂದಿಷ್ಟು ಹಣವನ್ನೂ ವಸೂಲಿ ಮಾಡಲಾಗಿದೆ. ವಿಚಾರಣೆಗಾಗಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿದೆ. ಕರೆಯದಿದ್ದರೂ ಓಡಿ ಬಂದ ಕೇಂದ್ರದ ತನಿಖಾ ಸಂಸ್ಥೆಗಳೂ ತೀವ್ರವಾಗಿ ತನಿಖೆ ಮುಂದುವರೆಸಿವೆ. ಹಗರಣವೊಂದು ಹೊರಗೆ ಬಂದಾಗ ಇದಕ್ಕಿಂತ ಇನ್ನೇನು ಹೆಚ್ಚಿಗೆ ಮಾಡಲು ಸಾಧ್ಯ? ಇದನ್ನೇ ಇಟ್ಟುಕೊಂಡು ಮುಖ್ಯಮಂತ್ರಿಗಳ ರಾಜೀನಾಮೆಯನ್ನೇ ಟಾರ್ಗೆಟ್ ಮಾಡಿಕೊಂಡು, ಜನರ ಸಮಸ್ಯೆಗಳ ಕುರಿತು ಚರ್ಚಿಸಲು ಕರೆಯಲಾದ ಅಧಿವೇಶನದಲ್ಲಿ ಕಿರುಚಾಡಿಕೊಂಡು ಸಾಧಿಸಿದ್ದಾದರೂ ಏನು? ಅತ್ತ ಸದನದಲಿ ಹಗರಣಗಳ ಹೊರತು ಬೇರೆ ಏನೂ ಚರ್ಚೆಯಾಗಲಿಲ್ಲ. ಆಗಲೂ ವಿರೋಧ ಪಕ್ಷಗಳು ಬಿಡಲಿಲ್ಲ. ಹಾಸಿಗೆ ಹಾಸಿಕೊಂಡು ಸದನದಲ್ಲೇ ಮಲಗಿಕೊಂಡು ಭಜನೆ ಮಾಡಿದ್ದು ಬಿಟ್ಟರೆ ವಿರೋಧ ಪಕ್ಷಗಳಿಗೆ ದಕ್ಕಿದ್ದಾದರೂ ಏನು?
ಇನ್ನು ಮೈಸೂರಿನ ಮೂಡಾ ಬದಲಿ ನಿವೇಶನದ ಹಗರಣ. “ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೆಂಡತಿಯ ಹೆಸರಲ್ಲಿ ದಲಿತರ ಜಮೀನು ಕಬಳಿಸಿದ್ದಾರೆ, ಬದಲಿ ನಿವೇಶನವನ್ನು ಪ್ರಭಾವ ಬಳಸಿ ಪಡೆದಿದ್ದಾರೆ. ಅದಕ್ಕಾಗಿ ಸಿಎಂ ರಾಜೀನಾಮೆ ಕೊಡಬೇಕು” ಎಂದು ಸದನದಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರ ಜಂಟಿ ಕೂಗಾಟ. ಇವರು ರಾಜೀನಾಮೆ ಕೊಡೋದಿಲ್ಲಾ, ಅವರು ಕೇಳೋದನ್ನು ಬಿಡೋದಿಲ್ಲ. ಹಗ್ಗಜಗ್ಗಾಟದಲಿ ಜನರ ಸಮಸ್ಯೆಗಳ ಕುರಿತು ಚರ್ಚೆಗೆ ಆಸ್ಪದವೇ ಇಲ್ಲ.
ವಿರೋಧ ಪಕ್ಷಗಳಿಗೂ ಗೊತ್ತಿದೆ ಮೂಡಾದ ಮಹಿಮೆ. ಮೂರೂ ಪಕ್ಷದ ನಾಯಕರುಗಳು ಮೂಡಾ ನಿವೇಶನಗಳ ಫಲಾನುಭವಿಗಳೇ. ಪ್ರಭಾವ ಬಳಸದೇ ಸುಖಾ ಸುಮ್ಮನೆ ದೊಡ್ಡ ದೊಡ್ಡ ನಿವೇಶನಗಳು ಈ ನಾಯಕರ ಪಾಲಾಗಲು ಸಾಧ್ಯವೇ ಇಲ್ಲ. ದೇವೇಗೌಡರ ಕುಟುಂಬ ಪರಿವಾರದವರು ಪ್ರಭಾವ ಬಳಸಿ ‘ಮೂಡಾ’ ದಲ್ಲಿ ಅಕ್ರಮವಾಗಿ ಹಲವಾರು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಎಂದೋ ಬಿಜೆಪಿಗರು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದ್ದರು. ಈಗ ಅದೇ ಬಿಜೆಪಿಗರು ಜೆಡಿಎಸ್ ಜೊತೆ ಸೇರಿಕೊಂಡು ಸಿದ್ದರಾಮಯ್ಯನವರು ಪ್ರಭಾವ ಬಳಸಿ ಪತ್ನಿಗೆ ಬದಲಿ ನಿವೇಶನ ಕೊಡಿಸಿದ್ದಾರೆ ಎಂದು ಸದನದ ಒಳಗೆ ಹಾಗೂ ಹೊರಗೆ ತಕದಿಮಿ ಆಡುತ್ತಿದ್ದಾರೆ.
ಸಿದ್ದರಾಮಯ್ಯನವರೂ ದಾಖಲೆಗಳ ಸಮೇತ “ತಮ್ಮ ತಪ್ಪೇನೂ ಇಲ್ಲ, ಎಲ್ಲಾ ಕಾನೂನು ಬದ್ಧ ” ಎಂದು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಬಿಜೆಪಿ ಸರಕಾರ ಇದ್ದಾಗಲೇ ಬದಲಿ ನಿವೇಶನ ಮಂಜೂರಾಗಿದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ದಾಖಲೆಗಳಿಗಿಂತ ಆರೋಪಗಳೇ ಮಾಧ್ಯಮಗಳಿಗೆ ಸರಕಾಗಿರುವಾಗ, ಗೋದಿ ಮಾಧ್ಯಮಗಳು ಬಿಜೆಪಿ ಪರವಾಗಿರುವಾಗ ಸತ್ಯ ಅಸತ್ಯಗಳು ಪಾರದರ್ಶಕ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಈಗಾಗಲೇ ತಮ್ಮ ಮೇಲೆ ಬಂದ ಆರೋಪಗಳ ಕುರಿತ ತನಿಖೆಗೆ ಎಸ್ ಐ ಟಿ ಯನ್ನು ಸಿಎಂ ಸಿದ್ದರಾಮಯ್ಯನವರು ರಚಿಸಿದ್ದಾರೆ. ತನಿಖೆ ಜಾರಿಯಲ್ಲಿದೆ. ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿರೋಧ ಪಕ್ಷದವರು ತಾರಕ ಸ್ವರದಲ್ಲಿ ಕೂಗುತ್ತಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಗಳ ಮೇಲೆ ಬಿಜೆಪಿಗರಿಗೆ ನಂಬಿಕೆ ಇಲ್ಲ. ಕೇಂದ್ರದ ಸುಪರ್ದಿಯಲ್ಲಿರುವ ಸಿಬಿಐ ಮೇಲೆ ಕಾಂಗ್ರೆಸ್ಸಿಗರಿಗೆ ವಿಶ್ವಾಸವಿಲ್ಲ. ಈ ಅಪನಂಬಿಕೆಗಳ ನಡುವೆ ಜಾರಿಯಲ್ಲಿರುವ ತನಿಖಾ ವರದಿ ಹೊರಗೆ ಬರುವವರೆಗೂ ಕಾಯುವ ತಾಳ್ಮೆ ವಿರೋಧ ಪಕ್ಷಗಳಿಗಿಲ್ಲ. “ಕಬ್ಬಿಣ ಕಾಯ್ದಾಗಲೇ ಬಡಿದು ಬಾಗಿಸಬೇಕು” ಎಂದು ಹೇಳಿದ ಚಲವಾದಿ ನಾರಾಯಣಸ್ವಾಮಿ ಮಾತಿಗೆ ಸದನದಲಿ ಬಿಜೆಪಿಗರು ಹುಟ್ಟುಹಾಕಿದ ಕೋಲಾಹಲಕ್ಕಿಂತಾ ಬೇರೆ ಸಮರ್ಥನೆಗಳೇ ಬೇಕಿಲ್ಲ.
ನೆರೆ ಪರಿಹಾರಕ್ಕಾಗಿ, ಜನಪರ ಅಭಿವೃದ್ಧಿಯ ಚಾಲನೆಗಾಗಿ, ಮೇಕೆದಾಟು, ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಸಾಕಾರಕ್ಕಾಗಿ ವಿರೋಧ ಪಕ್ಷಗಳು ಸದನದಲ್ಲಿ ಒತ್ತಾಯಿಸಿದ್ದರೆ, ಹೋರಾಟ ಪಾದಯಾತ್ರೆಗಳನ್ನು ಮಾಡಿ ಸರಕಾರದ ಮೇಲೆ ಒತ್ತಡ ತಂದಿದ್ದರೆ ಪ್ರತಿಪಕ್ಷಗಳ ಜನಪರ ಕಾಳಜಿಯನ್ನು ಜನತೆ ಮೆಚ್ಚಿಕೊಳ್ಳಬಹುದಾಗಿತ್ತು. ಆದರೆ ಬರೀ ಹಗರಣಗಳನ್ನಷ್ಟೇ ಗುರಿಯಾಗಿಸಿಕೊಂಡು ಹೋರಾಟದ ಹೆಸರಲ್ಲಿ ಹಾರಾಟ ಕಿರುಚಾಟ ಭಜನೆ ಮಾಡುವ ಮೂಲಕ ವಿರೋಧ ಪಕ್ಷಗಳು ಅಧಿಕಾರ ದಾಹದಿಂದ ವಿರೋಧಕ್ಕಾಗಿ ಮಾತ್ರ ವಿರೋಧ ಮಾಡುತ್ತವೆ ಎಂಬುದು ಸಾಬೀತಾಯ್ತು.
ಆಳುವ ಸರಕಾರಕ್ಕೂ ಇದೇ ಬೇಕಾಗಿತ್ತು. ಜನರ ಸಂಕಟ ಸಮಸ್ಯೆಗಳನ್ನಿಟ್ಟುಕೊಂಡು ಸರಕಾರದ ವಿರುದ್ಧ ರಚನಾತ್ಮಕವಾದ ಪ್ರಶ್ನೆಗಳನ್ನು ಕೇಳಿ ಜನರ ಪರ ಕೆಲಸ ಮಾಡುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರೆ ಸರಕಾರ ಆ ನಿಟ್ಟಿನಲ್ಲಿ ಕ್ರಿಯಾಶೀಲವಾಗುವ ಸಾಧ್ಯತೆ ಇತ್ತು. ಜನರ ಹಿತಾಸಕ್ತಿಯನ್ನು ಕಡೆಗಣಿಸಿದ ಸರಕಾರದ ವೈಫಲ್ಯಗಳ ವಿರುದ್ಧ ವಿರೋಧ ಪಕ್ಷಗಳು ಸದನದಲಿ ಸಿಡಿದೆದ್ದಿದ್ದರೆ, ಹೋರಾಟ ಧರಣಿ ಪಾದಯಾತ್ರೆ ಮಾಡಿದ್ದರೆ ಜನರ ಒಲವನ್ನು ಗಳಿಸಬಹುದಾಗಿತ್ತು. ಸರಕಾರದಿಂದ ಹೇಗೆ ಜನಪರ ಕೆಲಸಗಳನ್ನು ಮಾಡಿಸಬೇಕು ಎಂಬುದೇ ಪ್ರತಿಪಕ್ಷಗಳ ಗುರಿಯಾಗಿರಬೇಕು. ವಿಪಕ್ಷ ನಾಯಕರು ಹಗರಣದ ವಿಷಯದಲ್ಲೇ ಅಧಿವೇಶನದಲ್ಲಿ ಕಾಲಹರಣ ಮಾಡಿದ್ದರಿಂದಾಗಿ ಆಳುವ ಪಕ್ಷಕ್ಕೆ ಬಹಿರಂಗದಲ್ಲಿ ಮುಜುಗರವಾದರೂ ಅಂತರಂಗದಲ್ಲಿ ಒಳಿತೇ ಆಯಿತು. ಹಗರಣಗಳ ಹಣಾಹಣಿಯಲ್ಲಿ ಸರಕಾರದ ವೈಫಲ್ಯಗಳು ಮುಚ್ಚಿಹೋದವು. ಜನರ ಪರವಾಗಿ ಆಗಬೇಕಾಗಿದ್ದ ಚರ್ಚೆಗಳು ಆರೋಪ ಪ್ರತ್ಯಾರೋಪಗಳ ಪ್ರವಾಹದಲ್ಲಿ ಕೊಚ್ಚಿಹೋದವು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಸದನದ ಹಲ್ವಾ ಪ್ರಸಂಗದಲ್ಲಿ ನಿಜಾಂಶ ಇದೆ ಅಲ್ವಾ?