ರತನ್ ಟಾಟಾ ನೆನಪು
ಭಾರತೀಯ ಕೈಗಾರಿಕೋದ್ಯಮದ ದಿಗ್ಗಜ, ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (9-10-2024) ನಿಧನರಾಗಿದ್ದಾರೆ. ಇವರು ತಮ್ಮ ಕಂಪನಿಗಳ ಲಾಭಾಂಶವನ್ನು ಚಾರಿಟಿಗಾಗಿ ವಿನಿಯೋಗಿಸುವ ಬದಲು ತಮ್ಮಲ್ಲಿಯೇ ಉಳಿಸಿಕೊಂಡಿದ್ದರೆ ಇವತ್ತು ಅಂಬಾನಿ ಅದಾನಿಗಿಂತ ನಾಲ್ಕು ಪಟ್ಟು ಹೆಚ್ಚು ಶ್ರೀಮಂತರಾಗಿರುತ್ತಿದ್ದರು ಎಂದು ಬರೆಯುತ್ತಾ ಇವರನ್ನು ನೆನಪಿಸಿ ಕೊಂಡಿದ್ದಾರೆ ಪ್ರವೀಣ್ ಎಸ್ ಶೆಟ್ಟಿ, ಚಿಂತಕರು.
ಟಾಟಾ ಸಮೂಹ ಉದ್ಯಮದ ಗೌರವಾಧ್ಯಕ್ಷ ರತನ್ ಟಾಟಾ ಇವರು ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾಗ ಇಡೀ ದೇಶವೇ ದು:ಖಿಸಿತು. ಯಾಕೆಂದರೆ ಗುಜರಾತಿ-ಮಾರ್ವಾಡಿ ಉದ್ಯಮಿಗಳಂತೆ ರತನ್ ಟಾಟಾ ಕೇವಲ ತನ್ನ ಕಂಪನಿಯ ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತಿರಲಿಲ್ಲ, ಅವರು ತಮ್ಮ ಕಂಪನಿಯ ಲಾಭದಲ್ಲಿ ದೊಡ್ಡ ಪಾಲು ಸಮಾಜದ ಸತ್ಕಾರ್ಯಕ್ಕಾಗಿ ವಿನಿಯೋಗಿಸುತ್ತಿದ್ದರು. ರತನ್ ಟಾಟಾ ಇವರು ಟಾಟಾ ಸಮೂಹದ ಚುಕ್ಕಾಣಿ ಹಿಡಿದ ಮೇಲೆ ಅದರ ಒಟ್ಟು ವ್ಯವಹಾರ ಮೂರು ಪಟ್ಟು ಹೆಚ್ಚಿತು ಮತ್ತು ವಿದೇಶದಲ್ಲಿಯೂ ವೇಗವಾಗಿ ಹರಡಿತು. ಜತೆಗೆ ಲಕ್ಷಾಂತರ ಯುವಕರಿಗೆ ಭಾರತದಲ್ಲಿ ಮತ್ತು ವಿದೇಶದಲ್ಲಿ ಟಿಸಿಎಸ್ ಮತ್ತು ಇತರ ಟಾಟಾ ಕಂಪನಿ ಮೂಲಕ ಉದ್ಯೋಗ ಒದಗಿಸಿತು. ರತನ್ ಟಾಟಾ ಇವರು ತಮ್ಮ ಕಂಪನಿಗಳ ಲಾಭಾಂಶವನ್ನು ಚಾರಿಟಿಗಾಗಿ ವಿನಿಯೋಗಿಸುವ ಬದಲು ತಮ್ಮಲ್ಲಿಯೇ ಉಳಿಸಿಕೊಂಡಿದ್ದರೆ ಇವತ್ತು ಅವರು ಅಂಬಾನಿ ಅದಾನಿಗಿಂತ ನಾಲ್ಕು ಪಟ್ಟು ಹೆಚ್ಚು ಶ್ರೀಮಂತರಾಗಿರುತ್ತಿದ್ದರು!
ಹಾಗೆ ನೋಡಿದರೆ ರತನ್ ಟಾಟಾರವರ ಅಜ್ಜ ಜಮಶೆಡ್ ಜಿ ಟಾಟಾ ಇವರು ಟಾಟಾ ಸಮೂಹದ ಮೊತ್ತಮೊದಲ ಉದ್ಯಮ ಸ್ಥಾಪಿಸಿದ್ದು 1870 ರಲ್ಲಿ ಮುಂಬೈಯಲ್ಲಿ. ಅದು ಒಂದು ಬಟ್ಟೆ ಮಿಲ್ ಆಗಿತ್ತು. ಭಾರತದ ಹತ್ತಿಯೆಲ್ಲಾ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಗೆ ಹೋಗಿ ಅಲ್ಲಿ ಬಟ್ಟೆಯಾಗಿ ನೆಯ್ದು ಅದನ್ನೇ ಮರಳಿ ಭಾರತಕ್ಕೆ ಕಳುಹಿಸಿ ಅದನ್ನು ಹತ್ತು ಪಟ್ಟು ಬೆಲೆಗೆ ಬ್ರಿಟಿಷರು ಭಾರತೀಯರಿಗೆ ಮಾರುವುದನ್ನು ನೋಡಿದಾಗ ಜಮ್ಶೆಡ್ ಜಿ ಟಾಟಾ ತಾವೇ ಭಾರತದಲ್ಲಿ ಬಟ್ಟೆ ಗಿರಣಿ ಸ್ಥಾಪಿಸಿ ಭಾರತೀಯರನ್ನು ಬ್ರಿಟಿಷರ ಸುಲಿಗೆಯಿಂದ ರಕ್ಷಿಸಲು ಮೊದಲ ಹೆಜ್ಜೆ ಇಟ್ಟರು. ಅವರು 1870 ರಲ್ಲಿ ಮೊತ್ತಮೊದಲು ಒಂದು ಬಟ್ಟೆ ಮಿಲ್ ಮುಂಬೈಯಲ್ಲಿ ಸ್ಥಾಪಿಸಿ ನಂತರ ಎರಡನೇ ಬಟ್ಟೆ ಮಿಲ್ ಹೆಚ್ಚು ಹತ್ತಿ ಬೆಳೆಯುತ್ತಿದ್ದ ನಾಗಪುರದಲ್ಲಿ ಸ್ಥಾಪಿಸಿದರು. ಗಾಂಧೀಜಿಯವರು ವಿದೇಶಿ ಬಟ್ಟೆ ಸುಟ್ಟು ಭಾರತದಲ್ಲಿಯೇ ನೆಯ್ದ ಖಾದಿ ಬಟ್ಟೆಗೆ ಪ್ರೋತ್ಸಾಹ ಕೊಡಲು ಜಮ್ಶೆಡ್ ಜಿ ಟಾಟಾರವರ ಜೀವನ ಗಾಥೆಯೇ ಕಾರಣ.
“ಭಾರತೀಯರು ಸ್ಟೀಲ್ ಉತ್ಪಾದಿಸಿದರೆ ನಾನು ಅದನ್ನು ತಿಂದು ತೋರಿಸುತ್ತೇನೆ” ಎಂದು ಒಬ್ಬ ಬ್ರಿಟಿಷ್ ಇಂಜಿನಿಯರ್ ಹೇಳಿದ್ದನ್ನೇ ಜಮ್ಶೆಡ್ ಜಿ ಟಾಟಾರವರು ಸವಾಲಾಗಿ ತೆಗೆದುಕೊಂಡು ಬಿಹಾರದ ಗುಡ್ಡಗಾಡಿನಲ್ಲಿ ಸ್ಟೀಲ್ ತಯಾರಿಕಾ ಉದ್ಯಮಕ್ಕೆ ಅಡಿಪಾಯ ಹಾಕಿದರು (ಈಗ ಅದು ಜಾರ್ಖಂಡ್ ರಾಜ್ಯದಲ್ಲಿದೆ). ಅಲ್ಲಿ ಸ್ಟೀಲ್ ಫ್ಯಾಕ್ಟರಿಗೆ ಬೇಕಾದ ಕಲ್ಲಿದ್ದಲು ಮತ್ತು ಉಕ್ಕಿನ ಅದಿರು ಯಥೇಚ್ಚವಾಗಿ ದೊರೆಯುತ್ತಿದುದನ್ನು ಕಂಡು ಅಲ್ಲಿ ಜಮ್ಶೆಡ್ ಜಿ ಸ್ಟೀಲ್ ಫ್ಯಾಕ್ಟರಿ ಸ್ಥಾಪಿಸಿದ್ದು. ಆದರೆ ಆ ಉಕ್ಕಿನ ಕಾರ್ಖಾನೆ ಪೂರ್ತಿ ಆಗಿದ್ದು ಅವರು ತೀರಿಕೊಂಡ ನಂತರ. ಹಾಗಾಗಿ ಆ ಹೊಸ ಊರಿಗೆ ಅವರದೇ ಹೆಸರಿನಲ್ಲಿ ಜಮ್ಶೆಡ್ ಪುರ್ ಎಂಬ ಹೆಸರು ಇಡಲಾಯಿತು. ಜಮ್ಶೆಡ್ ಜಿ ಯವರು ಶಿಕ್ಷಣಕ್ಕೆ ಮತ್ತು ವಿಜ್ಞಾನಕ್ಕೆ ಅತಿ ಹೆಚ್ಚು ಮಹತ್ವ ಕೊಡುವ ಉದ್ದೇಶ ಹೊಂದಿದ್ದರಿಂದ ಹಲವು ವಿಜ್ಞಾನ ಕಾಲೇಜು ಮತ್ತು ವೈಜ್ಞಾನಿಕ ಸಂಸ್ಥೆಗಳನ್ನು ಜೆಮ್ಶೆಡ್ ಪುರದಲ್ಲಿ ಟಾಟಾ ಕಂಪನಿಯೇ ಸ್ಥಾಪಿಸಿತು. ಇನ್ನೊಂದು ಸಂದರ್ಭದಲ್ಲಿ ಜಮ್ಶೆಡ್ ಜಿ ಯವರು ಒಮ್ಮೆ ಒಂದು ಬ್ರಿಟಿಷ್ ಹೋಟೆಲಿಗೆ ಹೋಗಿದ್ದಾಗ ಅಲ್ಲಿ ಅವರು ಭಾರತೀಯರು ಎಂಬ ಕಾರಣಕ್ಕೆ ಅವರನ್ನು ಹೊಟೇಲಿನಿಂದ ಹೊರಕ್ಕೆ ಹಾಕಲಾಯಿತಂತೆ. ಆಗ ಅವರು ಹಠಕ್ಕೆ ಬಿದ್ದು ಮುಂಬೈಯಲ್ಲಿ ಮೊತ್ತಮೊದಲ ಸ್ಟಾರ್ ಹೊಟೇಲ್ ಸ್ಥಾಪಿಸಿದರು. ಅದುವೇ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್, ಅದು ಇಂದು ಜಗತ್ತಿನಾದ್ಯಂತ 265 ಫೈವ್ ಸ್ಟಾರ್ ಹೊಟೇಲ್ ಹೊಂದಿದೆ.
ಜಮ್ಶೆಡ್ ಜಿ ಯವರು ಹಾಗೂ ಅವರ ನಂತರ ಟಾಟಾ ಕಂಪನಿ ಸಮೂಹವನ್ನು ಮುನ್ನಡೆಸಿದವರೆಲ್ಲಾ ತಮ್ಮ ಕಂಪನಿಗಳನ್ನು ಬೇರೆ ಬೇರೆ ಕ್ಷೇತ್ರಕ್ಕೆ ವಿಸ್ತರಿಸಿದರೂ ಅವೆಲ್ಲಾ ಭಾರತಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ರತನ್ ಟಾಟಾ ಇವರು ಟಾಟಾ ಸಮೂಹದ ನೇತೃತ್ವ ವಹಿಸಿದ ಮೇಲೆ ತಮ್ಮ ಟಾಟಾ ಕಂಪನಿಗಳನ್ನು ವಿದೇಶದಲ್ಲಿಯೂ ಬೆಳೆಸುವ ಮಹತ್ವಾಕಾಂಕ್ಷೆಯೊಂದಿಗೆ ಅಂತರರಾಷ್ಟ್ರೀಯ ಕಂಪನಿಗಳಾದ ಜಾಗ್ವಾರ್, ಲ್ಯಾಂಡ್ ರೋವರ್ ಕಾರ್ ಕಂಪನಿ, ಕೋರಸ್ ಸ್ಟೀಲ್ ಕಂಪನಿಗಳನ್ನು ಖರೀದಿಸಿ ಟಾಟಾ ಸಮೂಹದಲ್ಲಿ ಸೇರಿಸಿ “ಟಾಟಾ” ಬ್ರ್ಯಾಂಡ್ ಅಂತರರಾಷ್ಟ್ರೀಯ ಬ್ರಾಂಡ್ ಆಗುವಂತೆ ನೋಡಿಕೊಂಡರು. ಅಷ್ಟೇ ಅಲ್ಲ ಟೇಟ್ಲೆ ಟೀ ಕಂಪನಿ, ಸ್ಟಾರ್-ಬಕ್ಸ್ ಕಾಫಿ ಹೌಸ್, ಜರಾ ಮತ್ತು ಜೂಡಿಯೋ ಎಂಬ ಬಟ್ಟೆ ಬ್ರಾಂಡ್, ವೆಸ್ಟ್-ಸೈಡ್, ಉತ್ಸಾ, ಟಾಟಾ ನ್ಯೂ, ಟೈಟಾನ್ ಎಂಬ ಆಭರಣ ಮತ್ತು ವಾಚ್ ಬ್ರಾಂಡ್, ಕ್ರೋಮಾ, ಟ್ರೆಂಟ್ ರಿಟೇಲ್, ಸ್ಟಾರ್ ಬಜಾರ್, ಟಾಟಾ-ಸ್ಕೈ ಇಂತಹಾ ಹಲವಾರು ಆಧುನಿಕ ಬ್ರಾಂಡ್ ಗಳನ್ನು ಲಾಂಚ್ ಮಾಡುವಾಗ ರತನ್ ಟಾಟಾರಿಗೆ ವಯಸ್ಸು 75 ದಾಟಿತ್ತು. ಆದರೂ ಆಧುನಿಕ ಕಾಲದ ಯುವಕರ ಒಲವು ಯಾವ ಕಡೆಗಿದೆ ಎಂಬುದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿದ್ದರು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಆಂತರ್ಯವನ್ನೂ ಅರಿತಿದ್ದರು.
ವಿಚಿತ್ರವೆಂದರೆ ಭಾರತದ ಸ್ವದೇಶಿ ಉದ್ಯಮಗಳ ಪಿತಾಮಹ ಎಂದು ಟಾಟಾ ಕಂಪನಿಗೆ ಹೆಸರಿದ್ದರೂ, ಅವರು ನಮ್ಮ ಜನರಿಂದ ಚುನಾಯಿತ ಸರಕಾರಕ್ಕಿಂತಲೂ ಹೆಚ್ಚು ಜನಸೇವೆ ಮಾಡಿದ್ದರೂ, ಲಕ್ಷಾಂತರ ಬಡವರಿಗೆ ಉದ್ಯೋಗ ಒದಗಿಸಿದ್ದರೂ, ಅವರನ್ನೂ ನಮ್ಮ ಭ್ರಷ್ಟ ರಾಜಕಾರಣಿಗಳು ಸುಲಿಯಲು ಪ್ರಯತ್ನಿಸಿದ್ದ ಉದಾಹರಣೆಗಳಿವೆ. ಅವರು 1996-97 ರಲ್ಲಿ ಸಿಂಗಪುರ ಕಂಪನಿಯೊಂದಿಗೆ ಜಂಟಿಯಾಗಿ ಒಂದು ಹೊಸ ಖಾಸಗಿ ವಿಮಾನಯಾನ ಸಂಸ್ಥೆ ಸ್ಥಾಪಿಸಲು ಸರಕಾರದ ಅನುಮತಿಗಾಗಿ ಅರ್ಜಿ ಹಾಕಿದ್ದರು. ಆದರೆ ಆಗ ಪ್ರಧಾನಿಯಾಗಿದ್ದ ದೇವೇಗೌಡರ ಕ್ಯಾಬಿನೆಟ್ಟಿನಲ್ಲಿ ವಿಮಾನಯಾನ ಮಂತ್ರಿಯಾಗಿದ್ದ ಒಬ್ಬ ಕನ್ನಡಿಗನೇ ರತನ್ ಟಾಟಾರ ಮುಂದೆ ಭಾರಿ ಲಂಚದ ಬೇಡಿಕೆ ಇಟ್ಟು ಅವರ ಹೊಸ ವಿಮಾನಯಾನ ಸಂಸ್ಥೆಗೆ ಅಡ್ಡಗಾಲಿಟ್ಟ ವಿಷಯ ನಂತರ ‘ರಾಡಿಯಾ ಟೇಪ್’ ಹಗರಣದಲ್ಲಿ ಬಹಿರಂಗವಾಗಿತ್ತು. ಕೊನೆಗೆ 22 ವರ್ಷಗಳ ತರುವಾಯ ಅದೇ ರತನ್ ಟಾಟಾರವರೇ ಭಾರತ ದೇಶದ ಮಾನ ಉಳಿಸಲು, ಭಾರೀ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಖರೀದಿಸಿದರು. ಟಾಟಾ ನ್ಯಾನೋ ಸಣ್ಣ ಕಾರ್ ತಯಾರಿಕಾ ವಿಷಯದಲ್ಲಿಯೂ ನಮ್ಮ ಪಶ್ಚಿಮ ಬಂಗಾಳದ ಭ್ರಷ್ಟ ರಾಜಕೀಯ ಪಕ್ಷಗಳು ಭಯಂಕರವಾಗಿ ಆಟವಾಡಿ ಟಾಟಾ-ನ್ಯಾನೋ ಕಂಪನಿಯನ್ನು ಪ.ಬಂಗಾಲದಿಂದ ಗುಜರಾತಿಗೆ ಓಡಿಸಿದರು. ಕೇವಲ ಈ ಗಲಾಟೆಯಿಂದ ಲಾಭ ಪಡೆದು ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷ ಕಟ್ಟಿಕೊಂಡು ಅಧಿಕಾರಕ್ಕೆ ಬಂದರು ಅಷ್ಟೇ. ಈ ಸಿಂಗೂರ್ ಗಲಾಟೆಯ ಹಿಂದೆ ಇದ್ದರು ಎನ್ನಲಾದ ಒಬ್ಬ ದೊಡ್ಡ ಗುಜರಾತಿ ಉದ್ಯಮಿಯ ಹೆಸರನ್ನು ಕೊನೆಯ ವರೆಗೂ ರತನ್ ಟಾಟಾ ಬಹಿರಂಗ ಪಡಿಸಲಿಲ್ಲ.
ಪಾರ್ಸಿ (ಜೋರೋಸ್ತ್ರೀಯನ್) ಜನಾಂಗದವರಾದ ರತನ್ ಟಾಟಾ ಕುಟುಂಬವು ಮೂಲತಃ ಪಾರ್ಸಿಗಳ ಅಗ್ನಿ ದೇವಾಲಯ (ಅಗಿಯಾರಿ)ಯ ಪುರೋಹಿತರ ಕುಟುಂಬದವರು. ಅಗ್ನಿ ದೇವಾಲಯದ ಪೂಜಾರಿಗಳಿಗೆ “ದಸ್ತೂರ್” ಎಂದು ಕರೆಯಲಾಗುತ್ತದೆ. ಪಾರ್ಸಿಗಳು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಈಗಿನ ಇರಾನ್ (ಪರ್ಶಿಯಾ) ದೇಶದಿಂದ ನಿರಾಶ್ರಿತರಾಗಿ ಬಂದವರು. ಇರಾನ್ ಮೇಲೆ ಅರಬರು ದಾಳಿ ಮಾಡಿ ಆ ದೇಶದಲ್ಲಿ ಇಸ್ಲಾಂ ಧರ್ಮ ಹೇರಿದಾಗ ಇರಾನ್ ನಿಂದ ಜೀವ ಉಳಿಸಿಕೊಂಡು ತಮ್ಮ ಮೂಲ ಪವಿತ್ರ ಅಗ್ನಿ ದೇವರನ್ನು ಹಿಡಿದುಕೊಂಡು ಸಮುದ್ರ ಮಾರ್ಗದಿಂದ ಅನೇಕ ದೋಣಿಗಳಲ್ಲಿ ಬಂದು ದಕ್ಷಿಣ ಗುಜರಾತಿನಲ್ಲಿ ನವಸಾರಿ ಎಂಬ ಸಮುದ್ರ ತೀರದ ಪಟ್ಟಣದಲ್ಲಿ ನೆಲೆಸಿದವರೇ ಈ ಪಾರ್ಸಿಗಳು. (ಪರ್ಷಿಯಾದಿಂದ ಬಂದಿದ್ದರಿಂದ ಅವರನ್ನು ಪಾರ್ಸಿ ಎಂದು ಕರೆಯಲಾಯಿತು). ತುಂಬಾ ಶಾಂತಿಯುತ ಆದರೆ ತೀಕ್ಷ್ಣ ಬುದ್ಧಿಮತ್ತೆ ಇರುವ ಜನಾಂಗವಿದು. ಇವರು ಪರ್ಶಿಯಾ ಮೂಲದವರಾದುದರಿಂದ ಇವರು ಈಗಲೂ ತಮ್ಮ ಮೊದಲ ಹೆಸರನ್ನು ಪರ್ಷಿಯನ್ ಭಾಷೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಫಿರೋಜ್, ಫಾರೂಕ್, ಜಹಂಗೀರ್, ಪರ್ವೇಜ್, ರುಸ್ತುಂ, ಸೊಹ್ರಾಬ್ ಇವೆಲ್ಲಾ ಶಿಯಾ-ಮುಸ್ಲಿಂ ಹೆಸರುಗಳಂತೆ ಕಂಡರೂ ಈ ಹೆಸರುಗಳನ್ನು ಅಗ್ನಿಪೂಜಕ ಪಾರ್ಸಿಗಳೂ ಇಟ್ಟುಕೊಳ್ಳುತ್ತಾರೆ. ನಾನು 38 ವರ್ಷ ಸರ್ವಿಸ್ ಮಾಡಿದ್ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ಪಾರ್ಸಿಗಳಿಂದ ಸ್ಥಾಪಿತವಾದದ್ದು. ಹಾಗಾಗಿ ನಾನು ಮುಂಬೈಯಲ್ಲಿ ಇದ್ದಾಗ ನನಗೆ ಅನೇಕ ಪಾರ್ಸಿ ಮಿತ್ರರಿದ್ದರು. ಇಂದಿರಾ ಗಾಂಧಿಯವರ ಗಂಡ ಫಿರೋಜ್ ಗಾಂಧಿಯವರೂ ಪಾರ್ಸಿ ಜನಾಂಗದವರು ಹಾಗೂ ರತನ್ ಟಾಟಾರಂತೆ ಇವರ ಹುಟ್ಟೂರು ಸಹಾ ಗುಜರಾತಿನ ನವಸಾರಿ. ಫಿರೋಜ್ ಮತ್ತು ರತನ್ ಇವರು ಬಾಲ್ಯದ ಗೆಳೆಯರಂತೆ. ರತನ್ ಟಾಟಾ ಇವರು ಮಹಾತ್ಮಾ ಗಾಂಧೀಜಿ ಮತ್ತು ನೆಹರೂ ಇವರುಗಳ ಭಾರಿ ಅಭಿಮಾನಿ ಆಗಿದ್ದರು. ಇದು ಈಗಿನ ಕೆಲವು ರಾಜಕಾರಣಿಗಳಿಗೆ ರುಚಿಸಿರಲಿಲ್ಲ. ಇವರದೇ ಒಡೆತನದ ತನಿಷ್ಕ್ ಆಭರಣದ ಸೌಹಾರ್ದ ಬೆಸೆಯುವ ಜಾಹೀರಾತು ಬಲಪಂಥೀಯರ ಅವಕೃಪೆಗೆ ಒಳಗಾಗಿ ಹಿಂತೆಗೆಯಲ್ಪಟ್ಟದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಈಗ ದೇಶದಲ್ಲಿ ಹರಡಿರುವ (ರಾಜಕಾರಣಿಗಳಿಂದ ಪ್ರಾಯೋಜಿತ) ಕೋಮು ದ್ವೇಷ ನೋಡಿದ ಮೇಲೆ ನಾವು ಅನ್ನಲೇ ಬೇಕು “ರತನ್ ಜಿ ನೀವು ಭಾರತದಲ್ಲಿ ಮತ್ತೊಮ್ಮೆ ಹುಟ್ಟಿ ಬರಬೇಡಿ!”
ಪ್ರವೀಣ್ ಎಸ್ ಶೆಟ್ಟಿ
ಚಿಂತಕರು
ಇದನ್ನೂ ಓದಿ- ಮತಗಟ್ಟೆ ಸಮೀಕ್ಷೆಗಳೆಂಬ ಮಹಾಮೋಸ