Saturday, May 18, 2024

ಸಾಂಸ್ಕೃತಿಕ ಜವಾಬ್ದಾರಿ ಮರೆತ ಸರ್ಕಾರ- ಈ ಅಲಕ್ಷ್ಯ ಏಕೆ ?

Most read

ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಲು ಬೇಕಾದ ಬೌದ್ಧಿಕ ಪರಿಕರಗಳು, ಜ್ಞಾನಶಾಖೆಗಳು ಹಾಗೂ ಕಲೆ-ಸಾಹಿತ್ಯಕ ಸಂಪತ್ತು-ಸಂಪನ್ಮೂಲ ರಾಜ್ಯದಲ್ಲಿ ಅಗಾಧ ಪ್ರಮಾಣದಲ್ಲಿ ಲಭ್ಯ ಇವೆ. ವಸ್ತುನಿಷ್ಠವಾಗಿ ಇವುಗಳನ್ನು ಬಳಸಿಕೊಳ್ಳುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ವಲಯದ ಪುನರುಜ್ಜೀವನಕ್ಕಾಗಿ ಹೆಜ್ಜೆ ಇಡುವುದು ಕಾಂಗ್ರೆಸ್‌ ಸರ್ಕಾರದ ಸಾಮಾಜಿಕ ಜವಾಬ್ದಾರಿಯೂ ಹೌದು, ಸಾಂಸ್ಕೃತಿಕ ಹೊಣೆಗಾರಿಕೆಯೂ ಹೌದು – ನಾ ದಿವಾಕರ, ಚಿಂತಕರು

ಕರ್ನಾಟಕದ ಜನತೆ 2023ರ ಮೇ 13ರಂದು ಆಯ್ಕೆ ಮಾಡಿರುವುದು ಕೇವಲ ಅಧಿಕಾರ ರಾಜಕಾರಣ ನಡೆಸಬೇಕಾದ ಸರ್ಕಾರವನ್ನಲ್ಲ. ಇದನ್ನೂ ಮೀರಿದ ಆಶಯಗಳನ್ನು ಹೊತ್ತುಕೊಂಡೇ ತಳಸಮುದಾಯಗಳು, ಶೋಷಿತರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಮಾರುಕಟ್ಟೆ ಆರ್ಥಿಕತೆಯ ಶೋಷಣೆಯಿಂದ ನಲುಗಿದ ದುಡಿಯುವ ವರ್ಗಗಳು ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ಒಲವು ತೋರಿವೆ. ರಾಜ್ಯದ ಕೋಟ್ಯಂತರ ಜನರ ಸದಾಶಯಗಳನ್ನು ಪ್ರತಿನಿಧಿಸುವ 2023ರ ಚುನಾವಣಾ ಫಲಿತಾಂಶಗಳು ಅಧಿಕಾರಾರೂಢ ಸರ್ಕಾರದ ಪ್ರತಿಯೊಂದು ನಡೆಯನ್ನೂ ಅತಿ ಸೂಕ್ಷ್ಮತೆಯಿಂದ ನಿರ್ದೇಶಿಸಬೇಕಲ್ಲವೇ ? ಚುನಾಯಿತ ಪ್ರತಿನಿಧಿಗಳ ನಿರೀಕ್ಷೆ-ಆಶಯ-ಆಕಾಂಕ್ಷೆಗಳನ್ನು ಈಡೇರಿಸುವುದು ಪ್ರಜಾಸತ್ತಾತ್ಮಕ ರಾಜಕಾರಣದಲ್ಲಿ ಒಂದು ಜವಾಬ್ದಾರಿಯುತ ಕೆಲಸವೇ ಆದರೂ, ಸಮ ಸಮಾಜದ ಆಶಯ ನುಡಿಗಳನ್ನಾಡುವ ಒಂದು ಸರ್ಕಾರವು ಇದನ್ನೂ ಮೀರಿ ಯೋಚಿಸಬೇಕಾದ್ದು ಅವಶ್ಯ.

ಸಾಮಾನ್ಯವಾಗಿ ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ಸಾಂಸ್ಕೃತಿಕ ವಲಯದ ಅಗತ್ಯಗಳು ಹಾಗೂ ಆಶಯಗಳು ಬದಿಗೆ ಸರಿದಿರುತ್ತವೆ. ಅಥವಾ ತಮ್ಮ ಚುನಾವಣಾ ರಾಜಕಾರಣದ ಅನುಕೂಲಗಳಿಗೆ ತಕ್ಕಂತೆ ಸಾಂಸ್ಕೃತಿಕ ವಲಯವನ್ನೂ ಬಳಸಿಕೊಳ್ಳುವ ಒಂದು ವಿಕೃತ ಪರಂಪರೆಗೆ ತೆರೆದುಕೊಳ್ಳುತ್ತದೆ. ಹಿಂದಿನ ಬಿಜೆಪಿ ಸರ್ಕಾರ ತನ್ನ ಹಿಂದುತ್ವ ರಾಜಕಾರಣದ ಸಾಮಾನ್ಯ ಕಾರ್ಯಸೂಚಿಯ ಒಂದು ಭಾಗವಾಗಿಯೇ ಸಾಂಸ್ಕೃತಿಕ ವಲಯವನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದನ್ನು ನೋಡಿದ್ದೇವೆ. ಕೇಂದ್ರ ಬಿಜೆಪಿ ಸರ್ಕಾರವೂ ಸಹ ಇದೇ ನೀತಿಯನ್ನು ಅನುಸರಿಸುತ್ತಿದೆ. ಈ ಆಡಳಿತ ನೀತಿಗಳಿಂದ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಉಂಟಾದ ವ್ಯತ್ಯಯಗಳು, ಅಪಾಯಗಳು ಹಾಗೂ ನಾಡಿನ ಸಾಕ್ಷಿಪ್ರಜ್ಞೆಯನ್ನೇ ಕದಡುವಂತಹ ಬೆಳವಣಿಗೆಗಳು ಹಾಲಿ ಸರ್ಕಾರವನ್ನು ಜಾಗೃತಗೊಳಿಸಬೇಕಿತ್ತಲ್ಲವೇ ? 

ಆದರೆ ಅಧಿಕಾರ ವಹಿಸಿಕೊಂಡು ಎಂಟು ತಿಂಗಳು ಕಳೆದರೂ ಕಾಂಗ್ರೆಸ್‌ ಸರ್ಕಾರದ ಅಂಗಳದಲ್ಲಿ ಸಾಂಸ್ಕೃತಿಕ ಧ್ವನಿ ಕೇಳಿಸುತ್ತಲೇ ಇಲ್ಲ ಎನ್ನುವುದು ವಿಷಾದಕರ ಸಂಗತಿ. ಸಚಿವ ಸಂಪುಟ, ನಿಗಮ ಮಂಡಲಿಗಳ ಹುದ್ದೆ ಮತ್ತಿತರ ಅಧಿಕಾರಯುತ ಹುದ್ದೆಗಳನ್ನು ಭರ್ತಿ ಮಾಡುವುದು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಹಾಗೂ ಸರ್ಕಾರದ ಉಳಿವಿನ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದುಕೊಂಡರೂ, ಇದರಿಂದಾಚೆಗೂ ಇರುವ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯನ್ನೂ ಸರ್ಕಾರ ಅರಿತಿರಬೇಕಲ್ಲವೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವ 20ಕ್ಕೂ ಹೆಚ್ಚು ಸಂಸ್ಥೆಗಳು ಕರ್ನಾಟಕದಲ್ಲಿ ಸಕ್ರಿಯವಾಗಿವೆ. ಇದನ್ನು ಹೊರತಾಗಿ ಹಲವು ಭಾಷಾ ಅಕಾಡೆಮಿಗಳು, ಪ್ರಾಧಿಕಾರಗಳು, ಸಾಹಿತ್ಯ, ಜನಪದ, ಸಂಗೀತ, ಲಲಿತಕಲೆ ಇತ್ಯಾದಿ ಪ್ರಕಾರಗಳನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಸಂಸ್ಥೆಗಳಿವೆ. ಹಾಗೆಯೇ ವರ್ತಮಾನದ ವಿಷಮ ಸ್ಥಿತಿಯಲ್ಲಿ ಅತ್ಯಂತ ಪ್ರಮುಖವಾದ ರಂಗಭೂಮಿಯನ್ನು ಪ್ರತಿನಿಧಿಸುವ ರಂಗಾಯಣಗಳು, ರಂಗ ಸಮಾಜ ಇದೆ.

ಈ ಸಾಂಸ್ಥಿಕ ವಲಯದಲ್ಲಿ ನಡೆಯುವ ಚಟುವಟಿಕೆಗಳು ಅಧಿಕಾರ ರಾಜಕಾರಣಕ್ಕೆ ನೇರವಾಗಿ ನೆರವಾಗುವುದಿಲ್ಲವಾದರೂ, ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಮತದ್ವೇಷ, ಜಾತೀಯತೆ ಹಾಗೂ ಪಿತೃಪ್ರಧಾನತೆಯನ್ನು ತಳಮಟ್ಟದ ಸಮಾಜದಲ್ಲಿ ಹೋಗಲಾಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಗಳು ನೆರವಾಗುತ್ತವೆ. ಸಾಹಿತ್ಯ ಹಾಗೂ ಕಲಾ ಪ್ರಕಾರಗಳನ್ನು ವ್ಯವಸ್ಥಿತವಾಗಿ ತಳಮಟ್ಟದ ಸಮಾಜಕ್ಕೆ ತಲುಪಿಸುವುದೇ ಅಲ್ಲದೆ, ಜನಸಾಮಾನ್ಯರ ನಡುವೆ ಸಂವೇದನಾಶೀಲ ಮನಸ್ಥಿತಿಯನ್ನು ಉಂಟುಮಾಡುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿವೆ. ತನ್ನ ರಾಜಕೀಯ ಪ್ರಣಾಳಿಕೆ ಹಾಗೂ ಕಾರ್ಯಸೂಚಿಗೆ ಅನುಗುಣವಾಗಿ ಈ ಎಲ್ಲ ಸಂಸ್ಥೆಗಳಲ್ಲೂ ಮಧ್ಯಸ್ಥಿಕೆ ವಹಿಸುವ ಮೂಲಕ ಹಿಂದಿನ ಸರ್ಕಾರ ಮೈಸೂರು ರಂಗಾಯಣದಂತಹ ಪ್ರಬುದ್ಧ ಸಂಸ್ಥೆಯಲ್ಲೂ ಸಾಕಷ್ಟು ತಾತ್ವಿಕ-ಸೈದ್ಧಾಂತಿಕ ಅಸೂಯೆಯ ಸನ್ನಿವೇಶ ಸೃಷ್ಟಿಸಿದ್ದನ್ನೂ ನೋಡಿದ್ದೇವೆ.

ಪಕ್ಷ, ಸಿದ್ಧಾಂತ ಹಾಗೂ ಸಾಂವಿಧಾನಿಕ ಆಶಯಗಳು ಭಿನ್ನವಾದರೂ, ಹಿಂದಿನ ಸರ್ಕಾರದಂತೆ ಹಾಲಿ ಆಳ್ವಿಕೆಯೂ ಸಹ ಲಾಬಿಕೋರರ ಒತ್ತಡಗಳಿಗೆ ಒಳಗಾಗಿರುವುದು ಸುಡು ವಾಸ್ತವ. ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಬೌದ್ಧಿಕ ವಲಯದ ಸಾಹಿತಿಗಳು, ಕಲಾವಿದರು, ಬರಹಗಾರರು ಸರ್ಕಾರದ ಆಡಳಿತ ವ್ಯಾಪ್ತಿಯಲ್ಲಿ ನಿರ್ವಹಿಸಲ್ಪಡುವ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಬಯಸುವುದು ಆಕ್ಷೇಪಾರ್ಹವೇನಲ್ಲ. ಆದರೆ ಈ ಸಂಸ್ಥೆಗಳ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಿರಪೇಕ್ಷತೆಯಿಂದ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಆ ಕಾರಣಕ್ಕಾಗಿಯೇ ಸರ್ಕಾರಗಳಿಗೆ ಒಂದು ಸಾಂಸ್ಕೃತಿಕ ನೀತಿ ಎನ್ನುವುದೂ ಬಹಳ ಮುಖ್ಯವಾಗುತ್ತದೆ.

ಕೇವಲ ಅಕಾಡೆಮಿಗಳ, ಪ್ರಾಧಿಕಾರಗಳ ಅಧಿಕಾರಯುತ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಸಾಂಸ್ಕೃತಿಕ ವಲಯದಲ್ಲಿ ಉಂಟಾಗಿರುವ ಬೌದ್ಧಿಕ ಕ್ಷೋಭೆ ಮತ್ತು ತಾತ್ವಿಕ ಅಪಾಯಗಳನ್ನು ಸರಿಪಡಿಸಲಾಗುವುದಿಲ್ಲ. ಈ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು, ಸಮಾಜದ ಅಲಕ್ಷಿತ ಸಮುದಾಯಗಳ ಆಶಯಗಳಿಗೆ ಸ್ಪಂದಿಸುವ ರೀತಿಯಲ್ಲಿ ರೂಪುಗೊಳ್ಳಬೇಕಿದೆ. ಹುದ್ದೆ-ಪ್ರಶಸ್ತಿ-ಗೌರವ ಇತ್ಯಾದಿ ವ್ಯಕ್ತಿನಿಷ್ಟ ಅಂಶಗಳಿಗಿಂತಲೂ ಮುಖ್ಯವಾಗಿ ವಸ್ತುನಿಷ್ಠತೆಯ ನೆಲೆಯಲ್ಲಿ ಸಾಂಸ್ಕೃತಿಕವಾಗಿ ಹಾದಿ ತಪ್ಪುತ್ತಿರುವ ಬೃಹತ್‌ ಯುವ ಸಮುದಾಯವನ್ನು ಸಮನ್ವಯ-ಭ್ರಾತೃತ್ವ-ಸೌಹಾರ್ದತೆಗಳ ಹಾದಿಯಲ್ಲಿ ಕರೆದೊಯ್ಯುವ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಕ್ರಿಯಾಶೀಲವಾಗಬೇಕಿದೆ. ಈ ಹಾದಿಯಲ್ಲಿ ಎದುರಾಗುವ ಲಾಬಿಕೋರತನ, ಸ್ವಜನಪಕ್ಷಪಾತ ಹಾಗೂ ರಾಜಕೀಯ ಹಸ್ತಕ್ಷೇಪಗಳನ್ನು ಮೀರಿ ಒಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವುದು ಜವಾಬ್ದಾರಿಯುತ ಸರ್ಕಾರದ ನೈತಿಕ ಹೊಣೆ ಅಲ್ಲವೇ ?

ವಿಷಾದಕರ ಸಂಗತಿ ಎಂದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ಮೈಸೂರು ರಂಗಾಯಣದಲ್ಲಿ ನಡೆದಂತಹ ಬೆಳವಣಿಗೆಗಳ ಅರಿವಿದ್ದಾಗ್ಯೂ, ರಂಗ ಸಮಾಜವನ್ನು ಪುನಾರಚನೆ ಮಾಡಿ ರಾಜ್ಯದ ರಂಗಾಯಣಗಳಿಗೆ ಸಾಮಾಜಿಕ ಬದ್ಧತೆ ಇರುವ ಸಮರ್ಥ ನಿರ್ದೇಶಕರನ್ನು ಆಯ್ಕೆ ಮಾಡುವುದು ಕಾಂಗ್ರೆಸ್‌ ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿತ್ತು. ಹದಗೆಟ್ಟಿರುವ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ಒದಗಿಸುವುದು ಸರ್ಕಾರದ ಕಾರ್ಯಸೂಚಿಯ ಒಂದು ಭಾಗವಾಗಬೇಕಿತ್ತು. ವಿಶ್ವವಿದ್ಯಾಲಯದ ಸಿಂಡಿಕೇಟ್‌ಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕ ಮಾಡುವಾಗ ರಾಜಕೀಯ ಉದ್ದೇಶಗಳಿಗಿಂತಲೂ ಮುಖ್ಯವಾಗಿ ರಾಜ್ಯದ ಸಾಂಸ್ಕೃತಿಕ ಮುನ್ನಡೆ ಆದ್ಯತೆ ಪಡೆಯಬೇಕಲ್ಲವೇ ? ಚುನಾವಣಾ ರಾಜಕಾರಣದ ಲಾಭನಷ್ಟಗಳ ನೆಲೆಯಲ್ಲಿ ನಿಂತು ಸಾಂಸ್ಕೃತಿಕ ವಲಯವನ್ನೂ ರಾಜಕೀಯ ಕಾರ್ಯಕರ್ತರ ಆಶ್ರಯತಾಣಗಳನ್ನಾಗಿ ಮಾಡಿದರೆ,ಈಗಾಗಲೇ ಕವಲು ಹಾದಿಯಲ್ಲಿರುವ ಸಮಾಜ ಸಂಪೂರ್ಣ ದಿಕ್ಕು ತಪ್ಪಿದಂತಾಗುವುದಿಲ್ಲವೇ ?

ಇದರ ಪರಿಣಾಮ ಅಧಿಕಾರ ರಾಜಕಾರಣದ ವ್ಯಾಪ್ತಿಯಲ್ಲಿ ಅಥವಾ ಚುನಾವಣಾ ಕಣದಲ್ಲಿ ಕಾಣದೆಯೂ ಇರಬಹುದು. ಆದರೆ ಸಮಾಜದ ಒಳಸೂಕ್ಷ್ಮಗಳನ್ನು ಗಂಭೀರವಾಗಿ ಅವಲೋಕನ ಮಾಡಿದರೆ, ಭವಿಷ್ಯದ ಹಾದಿಯಲ್ಲಿ ಇದು ಮತ್ತಷ್ಟು ಅಂಧಕಾರ ಸೃಷ್ಟಿಸುವುದನ್ನು ಗಮನಿಸಲೇಬೇಕಲ್ಲವೇ ? ದ್ವೇಷ ರಾಜಕಾರಣ ಮತ್ತು ಕೋಮುವಾದಿ ವಿಷಬಿತ್ತನೆಯಿಂದ ಜರ್ಝರಿತವಾಗಿರುವ ಒಂದು ಸಮಾಜದಲ್ಲಿ ನುಸುಳಿರಬಹುದಾದ ದ್ವೇಷಾಸೂಯೆಗಳನ್ನು ಸರಿಪಡಿಸಲು ತಳಮಟ್ಟದ ಸಮಾಜವನ್ನು ಕ್ರಿಯಾಶೀಲತೆಯಿಂದ, ಸೃಜನಾತ್ಮಕವಾಗಿ ತಲುಪಿ ಸರಿಪಡಿಸುವ ಜವಾಬ್ದಾರಿ ಸಾಹಿತ್ಯ-ರಂಗಭೂಮಿ ಮುಂತಾದ ಸಾಂಸ್ಕೃತಿಕ ಭೂಮಿಕೆಗಳ ಮೇಲಿದೆ. ಈ ಜವಾಬ್ದಾರಿಯನ್ನು ನಿಭಾಯಿಸುವಂತಹ ಸಂವೇದನಾಶೀಲ-ಸೃಜನಶೀಲ ಮನಸುಗಳು ರಾಜ್ಯದಲ್ಲಿ ಹೇರಳವಾಗಿವೆ. ಈ ಬೌದ್ಧಿಕ ಶಕ್ತಿ ವ್ಯರ್ಥವಾಗದಂತೆ ಎಚ್ಚರವಹಿಸುವುದು ಸರ್ಕಾರದ ನೈತಿಕ ಹೊಣೆ.

ದುರದೃಷ್ಟವಶಾತ್‌ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಅಥವಾ ಎಚ್ಚರವಾಗಿದ್ದರೂ ತನ್ನದೇ ಆದ ರಾಜಕೀಯ ಲೆಕ್ಕಾಚಾರಗಳಲ್ಲಿ ಲಾಬಿಕೋರರ ಒತ್ತಡಗಳಿಗೆ ಮಣಿದು ಮೌನ ವಹಿಸಿರುವಂತೆ ತೋರುತ್ತದೆ. ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಲು ಬೇಕಾದ ಬೌದ್ಧಿಕ ಪರಿಕರಗಳು, ಜ್ಞಾನಶಾಖೆಗಳು ಹಾಗೂ ಕಲೆ-ಸಾಹಿತ್ಯಕ ಸಂಪತ್ತು-ಸಂಪನ್ಮೂಲ ರಾಜ್ಯದಲ್ಲಿ ಅಗಾಧ ಪ್ರಮಾಣದಲ್ಲಿ ಲಭ್ಯ ಇದೆ. ವಸ್ತುನಿಷ್ಠವಾಗಿ ಇವುಗಳನ್ನು ಬಳಸಿಕೊಳ್ಳುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ವಲಯದ ಪುನರುಜ್ಜೀವನಕ್ಕಾಗಿ ಹೆಜ್ಜೆ ಇಡುವುದು ಕಾಂಗ್ರೆಸ್‌ ಸರ್ಕಾರದ ಸಾಮಾಜಿಕ ಜವಾಬ್ದಾರಿಯೂ ಹೌದು, ಸಾಂಸ್ಕೃತಿಕ ಹೊಣೆಗಾರಿಕೆಯೂ ಹೌದು. ಇಲ್ಲವಾದರೆ ಮತಾಂಧತೆ-ಮತೀಯವಾದದ ಉನ್ಮಾದಕ್ಕೆ ಸಿಲುಕಿರುವ ಯುವ ಸಮಾಜ ಮರಳಿ ಬಾರದಂತೆ ಅವೈಚಾರಿಕ-ಅವೈಜ್ಞಾನಿಕ ಲೋಕದೆಡೆಗೆ ಸಾಗಿಬಿಡುತ್ತದೆ.

ಸಂವಿಧಾನ ಪೀಠಿಕೆಯ ಪಠಣವನ್ನು ವಿದ್ಯುಕ್ತವಾಗಿ ಸಾರ್ವತ್ರೀಕರಣಗೊಳಿಸಿ, ಜಾರಿಗೊಳಿಸಿರುವ ಕಾಂಗ್ರೆಸ್‌ ಸರ್ಕಾರ,  ಇದೇ ಸಂವಿಧಾನದ ಆಶಯದಂತೆ ಸಮನ್ವಯ-ಸೌಹಾರ್ದತೆ-ಭ್ರಾತೃತ್ವದ ನೆಲೆಗಳನ್ನು ವಿಸ್ತರಿಸುವ, ಆಳಕ್ಕಿಳಿಸುವ, ಶಾಶ್ವತಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ತೊಡಗಬಹುದಾದ ಸಾಂಸ್ಕೃತಿಕ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ. ಜಾಗೃತ ಸಮಾಜದ ನಿರ್ಮಾಣದ ದೃಷ್ಟಿಯಿಂದ ಇದು ತುರ್ತು ಅನಿವಾರ್ಯವೂ ಆಗಿದೆ.

ನಾ. ದಿವಾಕರ

ಚಿಂತಕರು

ಇದನ್ನೂ ಓದಿ- ಕೋಲಾರ ನೆಲಕ್ಕೆ ರಾಮಯ್ಯ ವಿದಾಯ; ದಲಿತ ಸಾಂಸ್ಕೃತಿಕ ಲೋಕಕ್ಕೆ ಆದ ಗಾಯ

More articles

Latest article