ಯಾವ ಅಧುನಿಕ ಯುಗವಿರಲಿ, ಅಂತರಿಕ್ಷದ ಆವಿಷ್ಕಾರಗಳಾದ ಭೂಮಿಗೆ ಮತ್ತೆ ಹಿಂತಿರುಗುವ ರಾಕೆಟ್, ಧಗಧಗಿಸುವ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಪಾರ್ಕರ್ ನೌಕೆ, ಇಸ್ರೋದ ಆದಿತ್ಯ ಯೋಜನೆಗಳು ಬಂದರೂ ಹೆಣ್ಣಿನ ಶೋಷಣೆ ಎನ್ನುವುದು ನಿಲ್ಲುತ್ತಿಲ್ಲ. ಪುರುಷ ಪ್ರಧಾನ ಮನಸ್ಥಿತಿಗಳು ಅಪ್ಡೇಟ್ ಆಗುವುದಿಲ್ಲ – ರೇಶ್ಮಾ ಗುಳೇದಗುಡ್ಡಾಕರ್, ಕವಯಿತ್ರಿ.
ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಲೆಕ್ಕವಿಲ್ಲದಷ್ಟು ಶುಭಾಶಯಗಳು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತವೆ. ಶಾಲಾ ಕಾಲೇಜು ಮನೆ ಮನೆಗಳಲ್ಲೂ ಒಂದು ರೀತಿಯ ಶುಭಾಶಯಗಳ ವಿನಿಮಯಗಳು ಇದ್ದೇ ಇರುತ್ತವೆ..ಪತ್ರಿಕೆ ಮಾಧ್ಯಮಗಳಲ್ಲೂ ಇದೇ ಕುರಿತಾದ ಚರ್ಚೆ ಸಂದರ್ಶನಗಳು ಬರಹಗಳು ವಾರದ ಮುಂಚೆ ಪ್ರಕಟವಾಗುತ್ತವೆ.
ಆದರೆ ಇವುಗಳೆಲ್ಲದರ ಆಚೆಗೂ ಒಂದು ಜಗತ್ತಿದೆ. ಅದು ನಿತ್ಯವೂ ಹೊಸ ಹೊಸ ಸವಾಲುಗಳನ್ನು ಸಂಘರ್ಷಗಳನ್ನು ಅಣಿ ಮಾಡುತ್ತಲೇ ಹೆಣ್ಣಿನ ಬದುಕನ್ನು ಸಂಕೀರ್ಣ ಮಾಡುತ್ತಾ ಸಾಗುತ್ತದೆ. ಪುರಾಣದ ದ್ರೌಪದಿಯಾಗಲಿ, ಸೀತೆಯಾಗಲಿ, ಕುಂತಿ. ಗಾಂಧಾರಿ ಆಗಲಿ ಹಾಗೂ ಇಂದಿನ ಆಧುನಿಕ ಜಗತ್ತಿನ ಯುವತಿಯರಾಗಲಿ ಮಹಿಳೆಯರಾಗಲಿ ಹಿರಿಯ ವಯಸ್ಸಿನವರಾಗಲಿ ಎಲ್ಲರಿಗೂ ಟೀಕೆ, ಶೋಷಣೆ, ದಬ್ಬಾಳಿಕೆ, ಅವಮಾನ ನಿಲ್ಲುವುದಿಲ್ಲ.
ಯಾವ ಅಧುನಿಕ ಯುಗವಿರಲಿ, ಅಂತರಿಕ್ಷದ ಆವಿಷ್ಕಾರಗಳಾದ ಭೂಮಿಗೆ ಮತ್ತೆ ಹಿಂತಿರುಗುವ ರಾಕೆಟ್, ಧಗಧಗಿಸುವ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಪಾರ್ಕರ್ ನೌಕೆ, ಇಸ್ರೋದ ಆದಿತ್ಯ ಯೋಜನೆಗಳು ಬಂದರೂ ಹೆಣ್ಣಿನ ಶೋಷಣೆ ಎನ್ನುವುದು ನಿಲ್ಲುತ್ತಿಲ್ಲ. ಪುರುಷ ಪ್ರಧಾನ ಮನಸ್ಥಿತಿಗಳು ಅಪ್ಡೇಟ್ ಆಗುವುದಿಲ್ಲ .
ಧರ್ಮ, ಸಂಸ್ಕೃತಿ, ಶೀಲ, ಸಂಬಂಧ ಹೆಸರಿನಲ್ಲಿ ಗಂಡು ಕಟ್ಟಳೆ ಕಟ್ಟುತ್ತಾ ಹೆಣ್ಣನ್ನು ಗೆಲ್ಲುವುದು, ನಿಯಂತ್ರಿಸುವುದನ್ನು ಬಿಡುವುದಿಲ್ಲ. ಹೆಣ್ಣನ್ನು ನಿಯಂತ್ರಿಸುವುದೇ ಇನ್ನೂ ಕೆಲವು ಪುರುಷರ ಜೀವನದ ಬಹುಮುಖ್ಯ ಗುರಿಯಾಗಿದೆ. ಆ ಹೆಣ್ಣು ಮನೆಯವಳಾಗಲಿ, ಕಚೇರಿ, ಸಮಾಜ ಎಲ್ಲಾ ಕೋನಗಳಿಂದ ಕಟ್ಟಿ ಹಾಕುವುದರಲ್ಲಿ ಸಂತೋಷ ಪಡುವ ಗಂಡು ಪಡೆ ಇನ್ಯಾವ ಸ್ವಾತಂತ್ರ್ಯವನ್ನು ಮತ್ಯಾವ ಸುರಕ್ಷತೆಯನ್ನು ಹೆಣ್ಣಿಗೆ ನೀಡಬಹುದು? ಅಥವಾ ಅವಳು ಪಡೆಯಲು ಬಿಡಬಹುದು? .
ಭಾಷೆ ಬರದ ಗ್ರಾಮೀಣ ಹೆಣ್ಣೊಂದು ರಾಷ್ಟ್ರೀಯ ಮಹಿಳಾ ಶಿಬಿರಗಳಿಗೆ ಹೋಗಿ ಎಲ್ಲರಂತೆ ಇರಲು ಸಾಧ್ಯವಾಗುವುದಿಲ್ಲ ….. ಒಂಟಿ ಹೆಣ್ಣು ಒಂದು ಪಿಎಚ್‌ಡಿ ಹಂತದವರೆಗೆ ಸಾಗಿದಾಗ ಗಂಡಸಿನ ಕಾಮುಕ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಬಹುತೇಕ ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನನಗೆ ತಿಳಿದ ಗೆಳತಿಯರ ನೋವಿನ ಮಾತುಗಳು ಇವು” ನಾವು ವಾಸ್ತವ ಒಪ್ಪಿಕೊಳ್ಳದೆ ವಿಧಿ ಇಲ್ಲ. ಆದರೆ ಶಿಕ್ಷಣದ ಕನಸು ಈ ಬದುಕಿನಲ್ಲಿ ನನಸಾಗುವುದಿಲ್ಲ….ಎಷ್ಟೋ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮೊಟಕಾಗಲು ಲೈಂಗಿಕ ದೌರ್ಜನ್ಯ ಸಹ ಒಂದು ಪ್ರಮುಖ ಕಾರಣ .
ಎಲ್ಲ ದೌರ್ಜನ್ಯಗಳಿಗೂ, ಎಲ್ಲಾ ಶೋಧನೆಗಳಿಗೂ ನ್ಯಾಯ ಪಡೆಯಲು ಸಾಧ್ಯವೇ ಇಲ್ಲ. ಅದರಲ್ಲೂ ಗಂಡಿನ ಅಧಿಕಾರ, ಶ್ರೀಮಂತಿಕೆ, ಬುದ್ಧಿವಂತಿಕೆ ಹೆಣ್ಣನ್ನು ಪ್ರತಿಕ್ಷಣವೂ ಹಿಂಸಿಸಿ ಗೆಲ್ಲುವುದರಲ್ಲಿಯೆ ಯಶಸ್ವಿಯಾಗುತ್ತದೆಯೇ ಹೊರತು ಒಂದು ಸುಂದರ ಸಂಬಂಧವಾಗಲಿ ಗೆಳೆತನವಾಗಲಿ ಅಲ್ಲಿ ಮೂಡುವುದಿಲ್ಲ.
ಇನ್ನು ಹೆಣ್ಣಿನ ಬುದ್ಧಿವಂತಿಕೆ, ಸ್ವಾಭಿಮಾನ ಪ್ರತಿಕ್ಷಣ ಸಂಕುಚಿತ ಮನಗಳ ನಡುವೆ ಅಗ್ನಿ ಇಲ್ಲದೆ ದಹಿಸುತ್ತದೆ. ಪೂರ್ಣಚಂದ್ರ ತೇಜಸ್ವಿ ತಮ್ಮ ಜುಗಾರಿ ಕ್ರಾಸ್ ಕೃತಿಯಲ್ಲಿ ಹೇಳುತ್ತಾರೆ- ಹೆಚ್ಚು ಜಮೀನು ಇರುವ ರೈತನಿಗಿಂತ ಒಂದು ಅಥವಾ ಎರಡು ಎಕರೆ ಜಮೀನು ಉಳ್ಳ ರೈತನ ಆತ್ಮಗೌರವ ಬಹುದೊಡ್ಡದು ಎಂದು.
ಹೆಣ್ಣು ಅವಳು ಯಾರೇ ಇರಲಿ ಏನೇ ಆಗಲಿ ಹೇಗೇ ಇರಲಿ, ಅವಳ ಆತ್ಮ ಗೌರವವೇ ಅವಳ ಒಡವೆ. ಆದರೆ ಪುರುಷ ಪ್ರಧಾನ ವ್ಯವಸ್ಥೆ ಪ್ರತಿಕ್ಷಣವೂ ಹೆಣ್ಣಿನ ಆತ್ಮ ಗೌರವವನ್ನೇ ಪ್ರಶ್ನೆ ಮಾಡುತ್ತದೆ .
ಕೆಲವು ತಿಂಗಳ ಹಿಂದೆ ಕೇರಳದ ನಟಿ ಒಬ್ಬರು ಎರಡನೇ ವಿವಾಹವಾದರೂ ತನಗಿಂತ ಹಿರಿಯರಾದವರನ್ನು ಮದುವೆಯಾಗಿದ್ದಾಳೆ. ಮುದುಕನೊಂದಿಗೆ ವಿವಾಹವಾಗಿದ್ದಾಳೆ ಎಂದು ಹಲವಾರು ಟೀಕೆಗಳು ಆಕೆಯ ಮತ್ತು ಪತಿಯ ವಯಸ್ಸನ್ನು ಲೆಕ್ಕಾಚಾರ ಮಾಡುವ ಹಾಗೆ ಬಹಳ ಕನಿಷ್ಠ ಮಟ್ಟದಲ್ಲಿ ಬಂದವು. ಆದರೆ ಅದೇ ಒಬ್ಬ ಮುದುಕ ಒಬ್ಬ ಯುವತಿಯನ್ನು ಮದುವೆಯಾದರೆ ಅವನಿಗೆ ಗಂಡು ವೀರಾಧಿವೀರ ಎಂಬ ಮಾತುಗಳು ಬರುತ್ತವೆ!
ಸಾಮಾಜಿಕ ತಾಣದಲ್ಲಿ ಇಂದು ಚರ್ಚೆಯಾಗುತ್ತಿರುವ ವಿಚಾರ ಬಹುಪಾಲು ಇಂಥವೆ ಆಗಿರುತ್ತವೆ. ಇಲ್ಲೂ ಹೆಣ್ಣಿನ ವೈಯಕ್ತಿಕ ವಿಚಾರ ಧಾರೆಗಳು ಅವಳ ಬಣ್ಣ ಶೀಲ ಗುಣ ನಡತೆ ಎಲ್ಲವನ್ನು ಪ್ರಶ್ನಿಸುತ್ತಲೇ ದಿನ ಕಳೆಯುವವರ ಸಂಖ್ಯೆ ಲೆಕ್ಕವಿಲ್ಲದಷ್ಟು ಇದೆ .
ಹಾಗಾದರೆ ನಾವು ಸಾಧಿಸಿರುವುದಾದರೂ ಏನು? ಆರೋಗ್ಯಕರ ಚರ್ಚೆಗಳು, ಸಮಾಜಕ್ಕೆ ಬೇಕಾದಂತಹ ವಿಚಾರಧಾರೆಗಳು ಎಲ್ಲಿಯೂ ಮುನ್ನೆಲೆಗೆ ಬರುವುದೇ ಇಲ್ಲ. ಎಲ್ಲರಿಗೂ ಯಾವುದಾದರೂ ಒಂದು ಚರ್ಚೆ ಬೇಕೇ ಬೇಕು. ಅದು ಹೆಣ್ಣಿನದೇ ಆಗಿರಬೇಕು ಎನ್ನುವಷ್ಟು ಜನರ ಮನಸ್ಸು ದಿನ ದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೊಳೆತು ನಾರುತ್ತಿದೆ.
ಯಂತ್ರಗಳಿಂದ ವಿಜ್ಞಾನದ ಆವಿಷ್ಕಾರವನ್ನು ಸಾಧಿಸಬಹುದು. ಆದರೆ ಮನ ಮನಗಳಲ್ಲಿ ಪ್ರೀತಿ ಮಮತೆ ಮಧುರ ಬಾಂಧವ್ಯ ಇವುಗಳನ್ನು ಪಡೆಯುವಲ್ಲಿ ಯಾರಿಗೂ ಸಮಯ ಇಲ್ಲ …
ಮೂಕಜ್ಜಿಯ ಕನಸುಗಳಲ್ಲಿ ಕಾರಂತರು ಹೇಳುತ್ತಾರೆ ಮಾನವ ನಿಜಕ್ಕೂ ಅಸಹಾಯಕ ! ಆದರೆ ಪ್ರಾಣಿ ಪಕ್ಷಿ ಜಲಜೀವಗಳಿಗೆ ಈ ಅಸಹಾಯಕತೆ ಇಲ್ಲ. ಗಿಡಮರಗಳಿಗೂ ಸಹ. ಅವು ಯಾವುದಕ್ಕೂ ಯಾರನ್ನೂ ಕಾಯದೆ, ತನ್ನ ಪಾಡಿಗೆ ತಾನು ಸೃಷ್ಟಿ ಕ್ರಿಯೆಯಲ್ಲಿ ತೊಡಗುತ್ತದೆ. ಇಂತಹ ವೈಜ್ಞಾನಿಕ ಚಿಂತನೆಯನ್ನು ಹರಿಯಬಿಟ್ಟ ಈ ಕೃತಿ ಎಂದಿಗೂ ಸಾರ್ವಕಾಲಿಕ ಸತ್ಯವಾಗಿದೆ.
ನಾಗರಿಕ ಸಮಾಜ ಎಂದು ಬಿಂಬಿಸಿಕೊಂಡು ಸಾಗುತ್ತಿರುವ ಜನತೆ ಒಮ್ಮೆಯಾದರೂ ಈ ಗಮನಾರ್ಹ ಚಿಂತನೆ ಮಾಡುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಅದು ನಿಮ್ಮ ತಾಯಿಗಾಗಿ, ನಿಮ್ಮಕ್ಕನಿಗಾಗಿ ನಿಮ್ಮ ಮಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗಾಗಿ…. ಇವರಿಲ್ಲದೆ ನಿಮ್ಮ ಜೀವನ ಪೂರ್ಣವಾಗುವುದೇ ಎಂದು ಯೋಚಿಸಿ ನೋಡುವ ಜರೂರು ಇದೆ.
ರೇಶ್ಮಾ ಗುಳೇದಗುಡ್ಡಾಕರ್
ಲೇಖಕಿ, ಕವಿಯತ್ರಿ
ಇದನ್ನೂ ಓದಿ- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಕಿರುನೋಟ