ಗೀತಾ ಪ್ರೇಮಿಗಳು ಅದರ ಹಬ್ಬ ಮಾಡಿ ಮೆರವಣಿಗೆ ಮಾಡಿ ಕುಣಿದಾಡಿದರೆ ಯಾರದ್ದೂ ಅಡ್ಡಿಯಿಲ್ಲ. ಅದು ಅವರ ಸಂತೋಷ. ಆದರೆ, ಶಿಕ್ಷಣ ಅಥವಾ ಇನ್ಯಾವುದೋ ತಂತ್ರಗಳ ಮೂಲಕ ಸಾರ್ವತ್ರಿಕವಾಗಿ ಅದರಲ್ಲೂ ಎಳೆ ಮಕ್ಕಳ ಮೇಲೆ ಗೀತೆಯನ್ನು ಹೇರುವುದು ಮಾತ್ರ ಯಾವತ್ತೂ ಒಪ್ಪತಕ್ಕದ್ದಲ್ಲ. ಒಂದು ವೇಳೆ ಹೇರಲೇ ಬೇಕಿದ್ದರೆ ಅದು ವೈಜ್ಞಾನಿಕ ಚಿಂತನೆ ಮಾತ್ರ – ಶಂಕರ್ ಸೂರ್ನಳ್ಳಿ.
ಮಾಜಿ ಸಿ ಮತ್ತು ಹಾಲಿ ಕೇಂದ್ರ ಸಚಿವ ಕುಮಾರ ಸ್ವಾಮಿಯವರು ಶಾಲಾ ಪಠ್ಯಗಳ ಮೂಲಕ ಭಗವದ್ಗೀತೆಯ ಭೋಧನೆಯನ್ನು ಆಗ್ರಹಿಸಿ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರಂತೆ. ಆದರೆ ಕೇವಲ ಮೂರೂವರೆ ವರ್ಷಗಳ ಹಿಂದೆ ಇವರೇ “ ಭಗವದ್ಗೀತೆ ಪಾಠ ಮಾಡಿದರೆ ಹೊಟ್ಟೆ ತುಂಬುತ್ತಾ.. ಎಂದು ಆಗಿದ್ದ ಬಿಜೆಪಿ ಸರಕಾರವನ್ನು ದಿಟ್ಟ (ಪರಮ ದೈವ ಭಕ್ತಿಗೆ ಹೆಸರಾದ ಕುಟುಂಬಕ್ಕೆ ಸೇರಿದ ಇವರಿಂದ ಇಂತಾ ಅಚ್ಚರಿಯ ಮಾತು. ವರ್ಷಗಳ ಹಿಂದೆ ಇವರೇ ಈ ಬಗ್ಗೆ ಅಪಸ್ವರ ಎತ್ತಿದ್ದರು) ವಾಗಿ ಪ್ರಶ್ನಿಸಿದ್ದರು. ಒಟ್ಟಾರೆ, ಇವರ ಹೇಳಿಕೆ, ಕುವೆಂಪು ಯುನಿವರ್ಸಿಟಿಯ ಇತ್ತೀಚೆಗಿನ ಭಗವದ್ಗೀತೆಯ ಕುರಿತಾದ ಸೆಮಿನಾರ್, ಉಡುಪಿಯ ಅದ್ದೂರಿ ಲಕ್ಷಕಂಠ ಗೀತಾಪಠಣ ಮುಂತಾದ ವಿಚಾರಗಳಿಂದ ಭಗವದ್ಗೀತೆ ಇತ್ತೀಚೆಗೆ ಸುದ್ದಿ ಮಾಡುತ್ತಿದೆ. ಶ್ರೀಕೃಷ್ಣ ಅರ್ಜುನನಿಗೆ ಭೋಧಿಸಿದ ಎನ್ನಲಾಗುವ ಈ ಗೀತೆ ಇಂದೆಷ್ಟು ಪ್ರಸ್ತುತ ? ಈ ಪ್ರಸ್ತುತ ಅಪ್ರಸ್ತುತತೆಗಳನ್ನು ಬದಿಗಿಟ್ಟು ಇದನ್ನೊಂದು ನಂಬಿಕೆಯ ವಿಚಾರವೆಂದು ಭಾವಿಸಿದರೂ ಸಹ ಭಗವದ್ಗೀತೆ ಎಂದಾಕ್ಷಣ ಒಂದು ವರ್ಗ ಹಿಂದಿನಿಂದಲೂ ಭಾರೀ ತಕರಾರು ತೆಗೆಯುತ್ತಿರುವುದಾದರೂ ಏತಕ್ಕೆ?
ಭಗವದ್ಗೀತೆ ಒಂದು ಪ್ರಸಿದ್ಧ ಗ್ರಂಥ. ಕೆಲವು ಆಸಕ್ತರು ಮತ್ತು ಇಸ್ಕಾನ್ ನಂತಹ ಸಂಘಟನೆಗಳ ಪ್ರಚಾರದ ಕಾರಣ ಈ ಭಗವದ್ಗೀತೆಯ ಪುಸ್ತಕ ಈಗ ಮನೆ ಮನೆಗಳನ್ನೂ ತಲುಪಿದೆ. ಒಟ್ಟಾರೆ ನಮ್ಮ ಮುಕ್ಕಾಲುವಾಸಿ ಮನೆಗಳಲ್ಲಿ ಯಾವುದೋ ಒಂದು ಬಗೆಯಲ್ಲಿ ಇದು ಸೇರಿಯೇ ಇವೆ. ಪವಿತ್ರವೆಂಬ ಕಾರಣಕ್ಕೋ ಇಲ್ಲಾ ಇಸ್ಕಾನ್ ಬುಕ್ಕು ಕಡಿಮೆಗೆ ಸಿಗ್ತು ಎಂಬ ಕಾರಣಕ್ಕೋ ಇದನ್ನ ಮನೆಗೆ ಕೊಂಡೊಯ್ದವರಿದ್ದಾರೆ. ಇಷ್ಟೆಲ್ಲಾ ಗೀತಾ ಪುಸ್ತಕಗಳು ಬಹುತೇಕರ ಮನೆಗಳನ್ನು ಸೇರಿದರೂ ಅದನ್ನು ಓದಿ ಮನನ ಮಾಡಿದವರು ಎಷ್ಟು ಜನ ಎಂದು ಕೇಳಿದರೆ ಉತ್ತರ ಈ ಗೀತೆಯ ಮಹೋನ್ನತೆಗೆ ಪೂರಕವಾಗೇನೂ ಇಲ್ಲ. ಕಾರಣ ಹೆಚ್ಚಿನವರಿಗೆ ಕೇವಲ ಅದೊಂದು ಪವಿತ್ರ ಗ್ರಂಥ ಅಷ್ಟೆ. ಹಾಗಾಗಿ ಮನೆಯಲ್ಲಿದ್ದರೆ ಶುಭ ಎನ್ನೋ ನಂಬಿಕೆ ಬಿಟ್ಟರೆ ಓದಿ ಮನನ ಮಾಡುವಂತವರು ಕಡಿಮೆ. ಮೊನ್ನಿನ ಉಡುಪಿ ಲಕ್ಷಕಂಠ ಗೀತಾಪಠಣದಲ್ಲಿ ಹೇಳಿಕೊಟ್ಟ ಗೀತೆಯ ಶ್ಲೋಕ ಹೇಳಲೂ ತಡವರಿಸುತ್ತಿರುವವರನ್ನು ಟೀವಿಯಲ್ಲಿ ನೋಡೇ ಇರುತ್ತೀರಿ.

ಅಸಲಿಗೆ ಗೀತೆಯೆಂದರೆ ಭಗವದ್ಗೀತೆ ಮಾತ್ರವೇನೂ ಅಲ್ಲ. ವರಾಹ ಪುರಾಣದಲ್ಲಿ ಬರುವ ಅಗತ್ಸ್ಯಗೀತಾ, ಪುರೂರವಸ್ ನ ಐಲಗೀತ, ಭಾಗವತದ ಭರತಗೀತೆ, ನಾರದಗೀತೆ ಇನ್ನೂ ಹಲವಿವೆ. ಮಹಾಭಾರತದಲ್ಲೂ ಸಹ ಇಂತಹ ಗೀತಾ ಭೋಧನಾ ಪ್ರಸಂಗ ಒಂಟಿಯೇನೂ ಇಲ್ಲ. ವನಪರ್ವದಲ್ಲಿ ಬರುವ ಅಷ್ಟಾವಕ್ರ ಗೀತಾ, ಅಶ್ವಮೇಧ ಪರ್ವದ ಅನುಗೀತೆ, ಶಾಂತಿ ಪರ್ವದ ಅಜಗರ ಗೀತೆ ಮತ್ತು ಪರಾಶರ ಗೀತೆ, ಇಂದ್ರ ಮತ್ತು ಬಕ ಋಷಿಯ ಬಕಗೀತದಂತಹ ಶಾಸ್ತ್ರೀಯ ಭೋಧನೆಗಳ ಹಲವಾರು ಪ್ರಸಂಗಗಳು ಇಲ್ಲಿವೆ. ಆದರಿಲ್ಲಿ ಎಲ್ಲಕ್ಕಿಂತ ಪ್ರಸಿದ್ಧವಾದದ್ದು ಶ್ರೀಕೃಷ್ಣನ ಭಗವದ್ಗೀತೆ ಮಾತ್ರ. ಇಷ್ಟೇ ಅಲ್ಲದೇ ಯುದ್ಧದಲ್ಲಿ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಿಂದ ಭಾವೀ ರಾಜ ಯುಧಿಷ್ಠಿರ ಉಪದೇಶಿಸಿಕೊಳ್ಳುವ ’ರಾಜಧರ್ಮ” ದ ಭೋಧನೆ, ವನವಾಸ ಕಾಲದಲ್ಲಿದ್ದ ಪಾಂಡವರನ್ನು ನೋಡಲು ಕೃಷ್ಣನ ಜೊತೆ ಬಂದ ಸತ್ಯಭಾಮ ಮತ್ತು ದ್ರೌಪದಿಯವರ ನಡುವಿನ ಪತಿವ್ರತಾ ಧರ್ಮದ ಬಗೆಗಿನ ಸಂಭಾಷಣೆ, ಸಂಜಯ ಪಾಂಡವರ ಬಳಿ ರಾಯಭಾರಕ್ಕೆ ಹೋಗಿ ಬಂದ ಬಳಿಕ ಗೊಂದಲದಲ್ಲಿದ್ದ ಧೃತರಾಷ್ಟ್ರ ವಿಧುರನಿಂದ ಹೇಳಿಸಿಕೊಳ್ಳುವ ವಿಧುರ ನೀತಿಯಂತಹ ಸಾಕಷ್ಟು ನೀತಿ ಭೋಧನಾ ಸನ್ನಿವೇಶಗಳು (ಯುಧಿಷ್ಠಿರ ಯಮಧರ್ಮರ ಯಕ್ಷ ಪ್ರಶ್ನೆ ಪ್ರಸಂಗವೂ ಕೂಡ ಪರೋಕ್ಷ ನೀತಿ ಭೋಧನಾ ಪ್ರಸಂಗವೇ) ಮಹಾಭಾರತದಲ್ಲೇ ಇವೆ. ಇವೆಲ್ಲವೂ ಕಥೆಗೆ ಪೂರಕವಾಗಿ ಅಥವಾ ನೈತಿಕ ಭೋಧನೆಯ ದಾಖಲಾತಿಗಾಗಿ ನಂತರ ಸೇರಿಸಲ್ಪಟ್ಟವುಗಳೆಂಬ ವಾದವೂ ಇದೆ.
ಸುಮಾರು 20 ವರ್ಷದ ಹಿಂದೆ ಮಂಜೇಶ್ವರ ಬಳಿಯ ಕಡಂಬಾರ ಎಂಬಲ್ಲಿನ ದೇವಸ್ಥಾನದಲ್ಲಿನ ಮದುವೆ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಕಾಣಲು ಸಿಕ್ಕ ಹಿರಿಯ ವ್ಯಕ್ತಿಯೊಬ್ಬರ ಗುರುತು ಹಿಡಿದು ಹೀಗೇ ಮಾತನಾಡಿಸಿದೆ. ಅದು ಹಿರಿಯ ವಿದ್ವಾಂಸ ಡಾ. ಸೀ ಹೊಸಬೆಟ್ಟುರವರು (ಶ್ರೀಯುತ ಗೌರೀಶ ಕಾಯ್ಕಿಣಿ, ಎ ಎನ್ ಮೂರ್ತಿರಾವ್ ರವರ ತರಹ ವೈದಿಕ ಸಂಪ್ರದಾಯಗಳ ಹಿನ್ನೆಲೆಯ ವೈಚಾರಿಕ ಮನೋಭಾವದ ವಿದ್ವಾಂಸರು) ಅವರಲ್ಲಿ ಮಾತನಾಡುತ್ತಾ ನಿಮ್ಮ ಆ ’ಗೀತೆ” ಕುರಿತ ಲೇಖನ ಚೆನ್ನಾಗಿತ್ತು ಸರ್ ಅಂದಾಗ ಯಾಕೋ ಅವರ ಮುಖ ಸಣ್ಣದಾಯಿತು. ಅಸಲಿಗೆ ನಾನು ಆ ಲೇಖನ ಓದಿದ್ದಿರಲಿಲ್ಲ ಆದರೆ ಮರುದಿವಸ ಆ ದಿನಪತ್ರಿಕೆಯಲ್ಲಿ ಅವರ ಈ ಲೇಖನದ ಪ್ರಕಟಣೆಯ ಬಗ್ಗೆ ಪತ್ರಿಕೆ ವಿಷಾದ ವ್ಯಕ್ತಪಡಿಸಿದ್ದು ನೋಡಿ ಕುತೂಹಲಕ್ಕೆಂದು ಓದಿದ್ದೆ. ಆ ಲೇಖನದ ಶೀರ್ಷಿಕೆ ’ಭಗವದ್ಗೀತೆ ಯುದ್ಧ ಪ್ರಚೋದಕವೇ” ಎಂದು. ಇಂತಹ ಗೀತೆಯ ಕುರಿತ ವಿಮರ್ಶಾತ್ಮಕ ಲೇಖನ ಬಂದಿದ್ದಕ್ಕೆ ಕೆಲವರು ಪತ್ರಿಕೆ ಬಳಿ ಅಸಮಾಧಾನ ತೋರ್ಪಡಿಸಿದ್ದರಂತೆ. ಒಟ್ಟಾರೆ ಅವರುಗಳ ಪ್ರಕಾರ ಗೀತೆಯನ್ನು ವಿಮರ್ಶಿಸುವಂತಿಲ್ಲ. ಅದು ಯಾರೇ ಆದರೂ ಕೂಡ!
ಮಹಾಭಾರತದ ಭಗವದ್ಗೀತೆಗೆ ಆರಂಭದಲ್ಲಿ ಭಾಷ್ಯ ಬರೆದವರು ಶಂಕರಾಚಾರ್ಯರು. ಬಳಿಕ ಮಧ್ವರಿಂದ ಹಿಡಿದು ತಿಲಕ್, ಗಾಂಧಿ, ಇಸ್ಕಾನ್ ನ ಪ್ರಭುಪಾದರಾದಿಯಾಗಿ ಅನೇಕರು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಗೀತೆಗೆ ಭಾಷ್ಯ ಬರೆದು ವ್ಯಾಖ್ಯಾನಿಸಿದ್ದಾರೆ. ಅದರಲ್ಲಿನ ಕುಪ್ರಸಿದ್ಧ ಚಾತುರ್ವಣ್ಯಾಂ ಮಯಾ ಸೃಷ್ಟ್ಯಾ.. ಎಂಬ ವಾಕ್ಯವನ್ನು ಅನೇಕರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದರೆ ಗಾಂಧೀಜಿ ಮಾತ್ರ ಅದನ್ನ ಮುಟ್ಟಲೇ ಹೋಗಿಲ್ಲ. ಒಟ್ಟಾರೆ ಸಂಪ್ರದಾಯವಾದಿಗಳ ಪಾಲಿಗೆ ಇದೊಂದು ಪವಿತ್ರ ಗ್ರಂಥವಾದರೆ ತುಳಿತಕ್ಕೊಳಗಾದ ಸ್ವಾಭಿಮಾನದ ಬದುಕು ಬಯಸುವವರ ಪಾಲಿಗೆ ಇದೊಂದು ವರ್ಗ ತಾರತಮ್ಯ, ಅಸಮಾನತೆಯನ್ನು ಪ್ರಶ್ನಾತೀತ ದೈವೀಕ ನುಡಿಯ ಹೆಸರಲ್ಲಿ ಪೋಷಿಸುವಂತಹ ಗ್ರಂಥ. ಹಾಗಾಗಿಯೇ ಇದಕ್ಕೆ ಇವರುಗಳ ವಿರೋಧ. ಸ್ವಯಂ ಭಗವಾನ್ ಶ್ರೀ ಕೃಷ್ಣನ ಬಾಯಿಂದ ಚಾತುರ್ವರ್ಣ ನನ್ನಿಂದಲೇ ಸೃಷ್ಟಿಗೊಂಡದ್ದು ಎನ್ನುವ ಸಾಮಾಜಿಕ ಮೊಹರು ಧಾರಣೆಯಾಗಲೀ ಶೂದ್ರ, ಸ್ತ್ರೀ ವರ್ಗವನ್ನು ಪಾಪಯೋನಿಗಳೆಂದು (ಪೂರ್ವ ಜನ್ಮದ ಪಾಪ ಕರ್ಮಕ್ಕಾಗಿ ಕೀಳು ವರ್ಗದಲ್ಲಿ ಜನಿಸಲ್ಪಟ್ಟವರು) ಲೇಬಲ್ ಮಾಡಿರುವುದ್ದಾಗಲೀ ಆರೋಗ್ಯ ಪೂರ್ಣ ಸಾಮಾಜಿಕ ವ್ಯವಸ್ಥೆಗೆ ಹೇಳಿಸಿದ್ದಲ್ಲ ಎನ್ನುವುದು ಇವರುಗಳ ವಾದ.
ಅಸಲಿಗೆ ಈ ಗೀತೆಯ ಸನ್ನಿವೇಶ ಮಹಾಭಾರತದ್ದೇ ಅಲ್ಲ ಎನ್ನುವ ವಾದವಿದೆ. ಲಕ್ಷಾಂತರ (ಮಹಾಭಾರತದ ಅಕ್ಷೋಹಿಣಿ ಲೆಕ್ಕಾಚಾರದ ಪ್ರಕಾರ) ಜನರ, ಆನೆ, ಕುದುರೆ, ರಥಗಳ ಗೌಜು ಗದ್ದಲದ ಸೈನ್ಯದೆದುರು ಅರ್ಜುನನ ಯಾವುದೋ ಪ್ರಶ್ನೆಗೆ ಕೃಷ್ಣನ ಈ ಸುದೀರ್ಘ ಗೀತೋತ್ತರವೇ ಅಸಂಬದ್ಧ ಎನ್ನುವವರಿದ್ದಾರೆ. ರಾಮಾಯಣ ಮಹಾಭಾರತಗಳಲ್ಲಿ ಕ್ರಮೇಣ ಸೇರಿಕೊಂಡಿರುವ ಅನೇಕಾನೇಕ ಉಪಕತೆಗಳೇ ಮೊದಲಾದ ಪ್ರಕ್ಷೇಪಗಳಂತೆ ಇದೂ ಕೂಡ ನಂತರದಲ್ಲಿ ಸೇರಿಸಲ್ಪಟ್ಟಿದ್ದೇ ಹೊರತು ಮೂಲಭಾರತದಲ್ಲಿ ಇದ್ದಿದ್ದಿಲ್ಲ ಎನ್ನುವವರಿದ್ದಾರೆ.
ವಿಶೇಷವೆಂದರೆ, ಸ್ವಯಂ ಭಗವಂತನಾದ ವಿಶ್ವರೂಪಧಾರಿ ಶ್ರೀ ಕೃಷ್ಣನಿಂದಲೇ ಗೀತೋಪದೇಶ ಪಡೆದಿದ್ದರೂ ಅರ್ಜುನ ಯಾವತ್ತೂ ಕೂಡ ಈ ಗೀತೆಯ ಸಾರದಂತೆ ಆ ಬಳಿಕ ನಡೆದುಕೊಳ್ಳಲೇ ಇಲ್ಲವೆಂಬುದು. ಇನ್ನು ಹಾಲುಗಲ್ಲದ ಅಬ್ರಾಹ್ಮಣ ವಿದ್ಯಾರ್ಥಿಗಳಿಗೆ ಎಲ್ಲಿ ನಾಟೀತು?
ಗೀತೆಯ ಸಾರದ ಪ್ರಕಾರ
ಆಗುವುದೆಲ್ಲ ಒಳ್ಳೆಯದಕ್ಕೆ. ರೋಧಿಸಲು ನೀನೇನು ಕಳೆದುಕೊಂಡಿರುವೆ
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ನಾಶವಾಗಲು ನೀ ಮಾಡಿರುವುದಾದರೂ ಏನು?
ನಿಂದೇನೇ ಇದ್ದರೂ ಅದು ಇಲ್ಲಿಂದಲೇ ಸಿಕ್ಕಿದ್ದು.
ಏನೇ ನೀಡಿದರೂ ಇಲ್ಲಿಗೇ ನೀಡಿರುವೆ
ನಿನ್ನೆ ಯಾರದ್ದೋ ಅಗಿತ್ತು ಅದು ಇಂದು ನಿನ್ನದು.
ಮತ್ತು ನಾಳೆ ಯಾರದ್ದೋ
ಪರಿವರ್ತನೆ ಸಹಜ. ಇಲ್ಲಿ ನಮ್ಮದ್ಯಾವುದೂ ಇಲ್ಲ.

ಆದರೆ, ಮಗ ಅಭಿಮನ್ಯುವಿನ ಮರಣಕ್ಕೆ ಅರ್ಜುನ ಸಿಟ್ಟಿನಿಂದ ರೋಧಿಸುತ್ತಾನೆ, (ಕರ್ಣನೆದುರೇ ಕರ್ಣನ ತಮ್ಮ ಭೀಮಸೇನ ಕರ್ಣನ ಮಕ್ಕಳನ್ನು ಕೊಲ್ಲುತ್ತಾನೆ. ಕರ್ಣ ಅದಕ್ಕೆಲ್ಲೂ ರೋಧಿಸಲಿಲ್ಲ. ಭೀಮನಲ್ಲಿ ನಿನಗೂ ಆತ ಮಗ ಮಾರಾಯ ಆತನನ್ನು ಕೊಲ್ಲಬೇಡ ಅನ್ನಲೂ ಇಲ್ಲ) ನಂತರ ಅರ್ಜುನ ಕೋಪದಿಂದ ಚಕ್ರವ್ಯೂಹ ಮುಚ್ಚಿದ ಜಯದ್ರಥನನ್ನು ಕೊಲ್ಲುವ ಮಾತಾಡುತ್ತಾನೆ. ಸೂರ್ಯಾಸ್ತದೊಳಗೆ ಕೊಲ್ಲದಿದ್ದರೆ ಬೆಂಕಿಗೆ ಹಾರಿ ಸಾಯುವ ಶಪಥವನ್ನೂ ಮಾಡುತ್ತಾನೆ. (ಸಿಟ್ಟು ತೋರಿಸ ಬೇಕೆಂದಿದ್ದರೆ ಅದು ಕೃಷ್ಣನ ಮೇಲೆ. ಎಲ್ಲ ಬಲ್ಲ ಆತ ಗೊತ್ತಿದ್ದೂ ಅರ್ಜುನನನ್ನು ಆ ದಿನ ಬೇರೆಡೆ ಕೊಂಡೊಯ್ದಿದ್ದ)
ಇನ್ನೊಮ್ಮೆ, ಕರ್ಣನಿಂದ ಪೆಟ್ಟು ತಿಂದು ತಾಯಿಯ ಮಾತಿನಂತೆ ಜೀವಭಿಕ್ಷೆ ಸಿಕ್ಕ ಧರ್ಮರಾಯ ಅವಮಾನಿತನಾಗಿ ಗಾಯಗೊಂಡು ಶಿಬಿರದಲ್ಲಿದ್ದಾಗ ಅರ್ಜುನ ನೋಡಲು ಬರುತ್ತಾನೆ. ಬಂದ ಅರ್ಜುನನಿಗೆ ಕರ್ಣನನ್ನು ಯಾಕೆ ಕೊಲ್ಲಲಿಲ್ಲವೆಂದು ಧರ್ಮರಾಯ ಬೈಯ್ಯುತ್ತಾನೆ. ಅವನ ಗಾಂಢೀವವನ್ನೂ ಜರೆಯುತ್ತಾನೆ. ಇದಕ್ಕೆ ಕೋಪಗೊಂಡ ಅರ್ಜುನ ಅಣ್ಣನನ್ನೇ ಕೊಲ್ಲಹೋಗುತ್ತಾನೆ. ಕೃಷ್ಣ ತಡೆಯದಿದ್ದರೆ ಕೌರವರ ಬದಲು ಪಾಂಡವರಿಂದಲೇ ದೊರೆ ಧರ್ಮರಾಯ ಹತನಾಗಿ ಯುದ್ಧ ಅಂದೇ ಮುಗಿಯುತಿತ್ತು. ಇದು ಕೆಲ ದಿನಗಳ ಹಿಂದೆ ಭಗವಂತನಿಂದ ಗೀತೆ ಭೋಧಿಸಿಕೊಂಡವನ ಸ್ಥಿತಿ. ಅಂದರೆ ಈ ಗೀತೋಪದೇಶವೆಲ್ಲ ಅಪ್ರಯೋಜಕವೆಂದು ಮಹಾಭಾರತದಲ್ಲೇ ಸಾಕ್ಷಿಯಿದೆಯೆಂದಾಯ್ತು.
ಗೀತಾಪ್ರೇಮಿಗಳು ಅದರ ಹಬ್ಬ ಮಾಡಿ ಮೆರವಣಿಗೆ ಮಾಡಿ ಕುಣಿದಾಡಿದರೆ ಯಾರದ್ದೂ ಅಡ್ಡಿಯಿಲ್ಲ. ಅದು ಅವರ ಸಂತೋಷ. ಆದರೆ, ಶಿಕ್ಷಣ ಅಥವಾ ಇನ್ಯಾವುದೋ ತಂತ್ರಗಳ ಮೂಲಕ ಸಾರ್ವತ್ರಿಕವಾಗಿ ಅದರಲ್ಲೂ ಎಳೆ ಮಕ್ಕಳ ಮೇಲೆ ಇದನ್ನ ಹೇರಲ್ಪಡುವುದು ಮಾತ್ರ ಯಾವತ್ತೂ ಒಪ್ಪತಕ್ಕದ್ದಲ್ಲ. ಒಂದು ವೇಳೆ ಹೇರಲೇ ಬೇಕಿದ್ದರೆ ಅದು ವೈಜ್ಞಾನಿಕ ಚಿಂತನೆ ಮಾತ್ರ.
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ- ಸೋನಿಯಾ ಗಾಂಧಿ, ವಾಜಪೇಯಿ ಮತ್ತು ದ್ರೌಪದಿಯ ತಾಯಿಗುಣ….


