ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ

ಸುಮಾರು ಐದು ವರ್ಷಗಳ ಕಾಲ ಗಂಡಸಿ ಕ್ಷೇತ್ರದ ಶಾಸಕಿಯಾಗಿದ್ದ ದ್ಯಾವಮ್ಮ ಮಂಜಪ್ಪ ಅವರನ್ನು ನಾವೆಲ್ಲಾ ಮರೆತು ಬಿಟ್ಟಿದ್ದೇವೆ! ಆದರೆ ಅವರದ್ದು ಮರೆಯಬಾರದಂತಹ ವ್ಯಕ್ತಿತ್ವ ಮತ್ತು ದಾಖಲರ್ಹವಾದ ಬದುಕು. ಅವರ ಆಡಳಿತ ಅವಧಿಯಲ್ಲಿ ದುದ್ದ, ಗಂಡಸಿ, ಜಾವಗಲ್‍ಗಳಿಗೆ ಒದಗಿಸಿದ ಹಲವು ಕೊಡುಗೆಯಿಂದಾಗಿ ಅವರ ಅಧಿಕಾರಾವಧಿ ಒಂದು ಸ್ಮರಣೀಯ ಘಟ್ಟವಾಗಿ ಇತಿಹಾಸದಲ್ಲಿ ದಾಖಲಾಗಿದೆ. ಅದು ನಿಜವಾಗಿ ದೀನ, ದಲಿತ ವರ್ಗದ ಬದುಕಿಗೆ ಸ್ಪಂದಿಸಿದ ಕಾಲ. ದ್ಯಾವಮ್ಮ ಮಂಜಪ್ಪ ಅವರ ವ್ಯಕ್ತಿಗತವಾದ ಶ್ರದ್ಧೆ, ಛಲ, ದಿಟ್ಟತನ, ಬೆದರಿಕೆಗೆ ಬಗ್ಗದ ಮನೋಸ್ಥೈರ್ಯ, ಸೇಡಿಗಿಂತ ಸ್ನೇಹದಲ್ಲಿ ಹೆಚ್ಚು ವಿಶ್ವಾಸ, ಪರಿಶ್ರಮ ಮುಂತಾದ ನಿಜ ನಾಯಕತ್ವದ ಗುಣಗಳು ಅವರನ್ನು ಶಾಸಕಿಯಾಗುವ ಹಂತಕ್ಕೆ ಏರಿಸಿತು.

 ಭಾರತ ಸಂವಿಧಾನದ ಚೌಕಟ್ಟಿನಲ್ಲಿ ರಚಿತವಾಗಿದ್ದ ಅಂದಿನ ಗಂಡಸಿ ಕ್ಷೇತ್ರವು 1957ರಲ್ಲಿ- ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಜಾವಗಲ್, ಹಾಸನ ತಾಲ್ಲೂಕಿನ ದುದ್ದ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಿಗಳನ್ನು ಒಳಗೊಂಡ ಕ್ಷೇತ್ರವಾಗಿತ್ತು(ಈಗ ಗಂಡಸಿ ಕ್ಷೇತ್ರ ಅಸ್ತಿತ್ವದಲ್ಲಿ ಇಲ್ಲ.). ಆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಕ್ಷೇತ್ರದ, ಅದರಲ್ಲೂ ಜಿಲ್ಲೆಯ ಮೊದಲ ಮಹಿಳಾ ಶಾಸಕಿಯಾಗಿಶ್ರೀ ಮತಿ ದ್ಯಾವಮ್ಮ ಮಂಜಪ್ಪಗೌಡರು ಗೆಲುವು ಸಾಧಿಸಿದ್ದರು. 1957 ರಿಂದ 1962ರ ಅವಧಿಯಲ್ಲಿ ಇವರು ಉತ್ತಮವಾಗಿ ಕ್ಷೇತ್ರದ ಸೇವೆ ಸಲ್ಲಿಸಿದರು. ನಂತರದಲ್ಲಿ ಯಶೋಧರಮ್ಮ ದಾಸಪ್ಪ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿ ಶಾಸಕಿಯಾದವರು. ಹೀಗಾಗಿ ಅಂದಿನಿಂದ ಇಂದಿನವರೆಗೂ ನೇರವಾಗಿ ಹಾಸನ ಜಿಲ್ಲೆಯವರಾಗಿ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿರುವ ದ್ಯಾವಮ್ಮನವರು, ನಂತರದಲ್ಲಿ ಹಾಸನ ಕ್ಷೇತ್ರವನ್ನು ಪ್ರತಿನಿಧಿಸಿದ ಯಶೋಧರಮ್ಮ ದಾಸಪ್ಪ- ಇಬ್ಬರು ಮಾತ್ರ ಹಾಸನದ ಮಹಿಳಾ ಶಾಸಕಿಯರು! ಇದಕ್ಕಾಗಿ ಹೆಮ್ಮೆ ಪಡಬೇಕೋ? ವ್ಯಥೆ ಪಡಬೇಕೋ ತಿಳಿಯದು.

 ದ್ಯಾವಮ್ಮನವರು ಹಾಸನ ಸಮೀಪದ ಬೂವನಹಳ್ಳಿಯ ಬೆಟ್ಟೇಗೌಡರ ಮಗಳಾಗಿ ಜನಿಸಿದರು. ಬೂವನಹಳ್ಳಿಯಲ್ಲಿ ನಾಲ್ಕನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಇವರು, 19 ಮೇ 1931ರಂದು ಸ್ವಾತಂತ್ರ್ಯ ಹೋರಾಟಗಾರರಾದ ದುದ್ದದ ಶ್ರೀ ಬಿ.ಎಂ.ಮಂಜಪ್ಪ ಗೌಡರನ್ನು ವಿವಾಹವಾಗಿರುತ್ತಾರೆ. ಇವರಿಗೆ ಒಬ್ಬಳೇ ಮಗಳು ಜಯಮ್ಮ. ಇನ್ನೂ ಮೂವರು ಗಂಡು ಮಕ್ಕಳು  ಶಿವಶಂಕರ್, ತಿಮ್ಮರಾಯ ಸ್ವಾಮಿಗೌಡ ಮತ್ತು ರಾಮಸ್ವಾಮಿ. ದ್ಯಾವಮ್ಮನವರು ತಮ್ಮ ಪತಿ ಮಂಜಪ್ಪಗೌಡರ ದೇಶಪ್ರೇಮ, ಸ್ವಾತಂತ್ರ್ಯ್ರ ಹೋರಾಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ್ದನ್ನು ಅವರ ಸಾಮಾಜಿಕ ಕಳಕಳಿಯನ್ನು ಹತ್ತಿರದಿಂದ ಕಂಡವರಾಗಿದ್ದು ಅಪಾರ ಪರಿಣಾಮ ಬೀರಿತ್ತು. ತಮ್ಮನ್ನು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ಕ್ಷೇತ್ರದಲ್ಲಿ ಕೆಲಸವನ್ನು ಪ್ರಾರಂಭಿಸಿದ್ದರು.

  ದ್ಯಾವಮ್ಮ ಅವರ ಪತಿ 1942ರ ಆಗಸ್ಟ್ 25ರಂದು ಕಾಂಗ್ರೆಸ್ ಚಳವಳಿಯಲ್ಲಿ ಭಾಗವಹಿಸಿದ್ದಾಗ ಅವರನ್ನು ಬಂಧಿಸಿ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇರಿಸಿದ್ದರು. ಆರು ತಿಂಗಳ ನಂತರ ಅವರನ್ನು ಹಾಸನ ಜೈಲಿಗೆ ಸ್ಥಳಾಂತರಿಸಿದ ನಂತರ ಸಾಗರ, ಶಿವಮೊಗ್ಗ ಜೈಲಿನಲ್ಲಿ ಎಲ್.ಟಿ.ಕಾರ್ಲೆ ಅವರೊಂದಿಗೆ ಜೈಲುವಾಸ ಅನುಭವಿಸಿದರು. 1947ರಲ್ಲಿ ಮತ್ತೊಮ್ಮೆ ಬಂಧನಕ್ಕೆ ಒಳಗಾಗಿ ಹಾಸನ, ಚಿಕ್ಕಮಗಳೂರು ಜೈಲಿನಲ್ಲಿ ಇದ್ದು, ಮೂರು ತಿಂಗಳ ನಂತರ ಬಿಡುಗಡೆ ಹೊಂದಿದರು. ಸ್ವಾತಂತ್ರ್ಯ ಪಡೆಯಲು ಜೈಲುವಾಸ ಅನುಭವಿಸಿದ್ದಕ್ಕಾಗಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಮಂಜಪ್ಪಗೌಡರಿಗೆ ತಾಮ್ರ ಪತ್ರ ನೀಡಿ ಪುರಸ್ಕರಿಸಿರುತ್ತಾರೆ. ಇವರು ಸ್ವಾತಂತ್ರ್ಯಾ ನಂತರ ತಮ್ಮನ್ನು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. 1957ರ ಗಂಡಸಿ ಕ್ಷೇತ್ರದ ಪ್ರಥಮ ಶಾಸಕಿ ಸ್ಥಾನಕ್ಕೆ ತಮ್ಮ ಪತ್ನಿ ದ್ಯಾವಮ್ಮನವರನ್ನು ಆಯ್ಕೆ ಮಾಡಿಸುವಲ್ಲಿ ಇವರ ಶ್ರಮ ತುಂಬಾ ದೊಡ್ಡದು. ಕ್ಷೇತ್ರದ ಕ್ಷೇಮಾಭಿವೃದ್ಧಿಗೆ ಬೇಕಾದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಇವರು ಅವಿರತ ಕೆಲಸ ಮಾಡುತ್ತಾ ಬಂದಿರುತ್ತಾರೆ.

 ಪತಿಯ ದೇಶಪ್ರೇಮ, ಸಮಾಜಸೇವಾ ಮನೋಭಾವವು ದ್ಯಾವಮ್ಮ ಅವರನ್ನು ಅಪಾರವಾಗಿ ಆವರಿಸಿತ್ತು. ಅದಲ್ಲದೇ ಪತಿಯ ಸ್ವಾಭಿಮಾನ, ಸ್ವತಂತ್ರ ಪ್ರವೃತ್ತಿ, ಸುತ್ತಮುತ್ತಲಿನ ಜನರೊಂದಿಗೆ ಜಾತಿಭೇದವಿಲ್ಲದೇ ಪ್ರೀತಿ, ವಿಶ್ವಾಸ, ಗೌರವದಿಂದ ಬೆರೆತು ಬಾಳುವುದು, ಜನಜೀವನದ ಕಷ್ಟ ಸುಖಗಳನ್ನು ತಾನೂ ಉಂಡು, ನೋವು-ನಲಿವುಗಳನ್ನು ಅನುಭವಿಸಿ ಸ್ಪಂದಿಸುವ ರೀತಿ ದ್ಯಾವಮ್ಮನವರಿಗೆ ಮೆಚ್ಚುಗೆ ಮತ್ತು ಸ್ಪೂರ್ತಿಯಾಯ್ತು. ಜನರ ಬಡತನ, ದೈನ್ಯ, ಅಜ್ಞಾನ, ದಾರಿದ್ರ್ಯ, ಹೇಡಿತನಗಳನ್ನು ಹೊಡೆದೋಡಿಸುವ ಮಹದಾಸೆಯಿಂದ ಪತಿಯು ಕಾಂಗ್ರೆಸ್ ಪಕ್ಷ ಸೇರಿಕೊಂಡದ್ದನ್ನು ಇವರು ಬಲ್ಲವರಾಗಿದ್ದರು. 1957ರ ಚುನಾವಣೆಯಲ್ಲಿ ತನಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಿ ಕೊಟ್ಟಾಗ, ಇದು ಸಾಮಾಜಿಕ ಮಹಾಸೇವೆಗೆ ಸಿಕ್ಕ ಭಾಗ್ಯವೆಂದು ದಿಟ್ಟತನದಿಂದ ಸ್ಪರ್ಧಿಸಿದರು. ಕಾಂಗ್ರೆಸ್ ಪಕ್ಷದಿಂದ ಚರಕದ ಚಿಹ್ನೆಯನ್ನು ಪಡೆದಿದ್ದರು ದ್ಯಾವಮ್ಮ. ಅವರ ಪ್ರಬಲ ಎದುರಾಳಿಯಾಗಿದ್ದ ಎಚ್.ಆರ್.ಕೇಶವಮೂರ್ತಿ ಪ್ರಜಾ ಸಮಾಜವಾದಿ ಪಕ್ಷ (ಪಿ.ಎಸ್.ಪಿ) ದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

 25 ಫೆಬ್ರವರಿ 1957ರಂದು ನಡೆದ ಚುನಾವಣೆಯಲ್ಲಿ ಒಟ್ಟು ಕ್ಷೇತ್ರದ ಮತದಾರರು 52,955 ಇದ್ದರು. ಆದರೆ ಚಲಾವಣೆಯಾದ ಮತಗಳು 24,399. ದ್ಯಾವಮ್ಮನವರು 8,388 ಮತವನ್ನು ಪಡೆದಿದ್ದರು. ಎಚ್.ಆರ್.ಕೇಶವಮೂರ್ತಿಯವರು 6746 ಮತ ಪಡೆದರು. 1642 ಮತಗಳ ಅಂತರದಿಂದ ದ್ಯಾವಮ್ಮ ಮಂಜಪ್ಪನವರು ಕಾಂಗ್ರೆಸ್ ಪಕ್ಷದಿಂದ ಗೆದ್ದು, ಜಿಲ್ಲೆಯಿಂದ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇವರು ಚುನಾವಣೆಯಲ್ಲಿ ಗೆದ್ದ ದಿನ ಹೊಲದಲ್ಲಿ ನಾಟಿ ಮಾಡುತ್ತಿದ್ದರಂತೆ! ಹೊಲದ ಕೆಲಸ ಮಾಡುತ್ತಿದ್ದ ದ್ಯಾವಮ್ಮ ಅವರನ್ನು ಯಾರೋ ಬಂದು- ‘ನೀವು ಚುನಾವಣೆಯಲ್ಲಿ ಗೆದ್ದಿದ್ದೀರಾ. ಈಗ ನೀವು ಶಾಸಕಿ’ ಎಂದಾಗ, ಆಶ್ಚರ್ಯದಿಂದ ‘ಹೌದೆ’ ಎನ್ನುತ್ತಾ ಸಂಭ್ರಮಿಸಿ, ಹೊಲದಿಂದ ಆಚೆ ಬಂದು, ಕೈಕಾಲು ತೊಳೆದುಕೊಂಡು ದೇವರ ದೀಪ ಹಚ್ಚಲು ಹೋದರಂತೆ. ಅಷ್ಟು ಸರಳ ಸಜ್ಜನಿಕೆಯ ಜೀವನ ಅವರದಾಗಿತ್ತು.

“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ‌ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.

 ಶಾಸನಸಭೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ಮೈಸೂರು ಭಾಗದಲ್ಲಿಯೇ ಮಹಿಳಾ ರಾಜಕೀಯಕ್ಕೆ ದೊಡ್ಡ ಧೈರ್ಯ ನೀಡಿದಂತಹ ದಿಟ್ಟ ಮಹಿಳಾ ಶಾಸಕಿ ದ್ಯಾವಮ್ಮನವರು ಎನ್ನಬಹುದು. ಇವರು ಗ್ರಾಮೀಣ ಸಮಸ್ಯೆಗಳನ್ನು ನೇರವಾಗಿ ಸರ್ಕಾರಕ್ಕೆ ಮುಟ್ಟುವ ಹಾಗೆ ಶಾಸನ ಸಭೆಗಳಲ್ಲಿ ಮಾತನಾಡುತ್ತಿದ್ದರು. ಮಹಿಳೆಯರು ಹೆಚ್ಚಿನದಾಗಿ ಪಂಚಾಯಿತಿ ಸಭೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆಯಾಗಿದ್ದರು. ಶಾಸಕಿಯಾಗುವ ಮೊದಲು ಅದೇ ರೀತಿಯಲ್ಲಿ ಗ್ರಾಮ ಸಭೆ, ಸಾಮಾಜಿಕ ಚಳವಳಿ, ರೈತ ಸಭೆ, ಜನಪರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿದ್ದರು. ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ನೇರವಾಗಿ ಹೇಳುವಂತಹ ಚಾತುರ್ಯತೆ ಇದ್ದು, ಜನಪರರಾಗಿದ್ದರು. ತಮ್ಮ ಪತಿ ಮಂಜಪ್ಪಗೌಡರ ಮಾರ್ಗದರ್ಶನ ಪಡೆದು, ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ, ಗ್ರಾಮದ ಜನರ ಕುಂದು ಕೊರತೆಗಳನ್ನು ಆಲಿಸಿ, ಅಹವಾಲು ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು ದಾಖಲೆ ಪುಸ್ತಕದಲ್ಲಿ ನೋಂದಾಯಿಸಿಕೊಳ್ಳುತ್ತಿದ್ದರಂತೆ. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಅದನ್ನು ರವಾನಿಸಿ, ಅವರು ತೆಗೆದುಕೊಂಡ ಕ್ರಮದ ಬಗ್ಗೆ ಮತ್ತೆ ಮತ್ತೆ ಪರಿಶೀಲಿಸಿ, ಸಮಸ್ಯೆಗೆ ತಪ್ಪದೇ ಪರಿಹಾರವನ್ನು ದೊರಕಿಸಲು ಶ್ರಮಿಸುತ್ತಿದ್ದರು.

ದ್ಯಾವಮ್ಮನವರ ಪ್ರಥಮ ಆದ್ಯತೆ ಎಂದರೆ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿತ್ತು. ಇದಕ್ಕೆ ಉದಾಹರಣೆಯಾಗಿ- ರಾಜ್ಯದಲ್ಲಿ ಹೆಸರುವಾಸಿಯಾದ ಗಂಡಸಿ ಸಂತೆಯಲ್ಲಿ ನೆಲ ಟ್ಯಾಂಕುಗಳನ್ನು ನಿರ್ಮಿಸಿ ಜನರ ಮತ್ತು ಜಾನುವಾರಗಳ ದಾಹ ಇಂಗಿಸಿದ್ದು ಬಿ.ಡಿ.ಜತ್ತಿ ಕಾಲಘಟ್ಟದಲ್ಲಿ. ಅಂದು ಬೋರಣ್ಣಗೌಡ ಅವರೊಂದಿಗೆ ಜಟಾಪಟಿ ಮಾಡಿ, ಜನ ಸೇರಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು. ಇದು ಶಾಶ್ವತ ಪರಿಹಾರವಾಗಿತ್ತು.

 ಹಾಗೆಯೇ ಜಾವಗಲ್ ಹೋಬಳಿಯ ನೇರ್ಲಿಗೆ, ದುದ್ದ ಹೋಬಳಿಯ ಕೋರಮಂಗಲ, ಹೆರಗು, ಹಲಸಿನಹಳ್ಳಿ, ಬಾಗೂರು ಹೋಬಳಿಯ (ಮೂಲದಲ್ಲಿ ಬಾಗೂರು ಹೋಬಳಿ ಗಂಡಸಿ ಕ್ಷೇತ್ರಕ್ಕೆ ಸೇರಿತ್ತು) ಚಿಕ್ಕರಸನಹಳ್ಳಿ ಗ್ರಾಮಗಳ ಕೆರೆ ಏರಿಗಳ ಅಗಲೀಕರಣ, ಸೇತುವೆ ನಿರ್ಮಾಣಕ್ಕೆ ಇವರು ಆದ್ಯತೆ ನೀಡಿದ್ದರು. ದುದ್ದ ಜಾವಗಲ್ ಹುಲ್ಲೇಕೆರೆ ಗ್ರಾಮಗಳಿಗೆ ಆಸ್ಪತ್ರೆ ಮಂಜೂರಾತಿ, ಗ್ರಾಮಗಳ ದೇವಸ್ಥಾನಗಳ ಜೀರ್ಣೋದ್ದಾರ, ಅನೇಕ ಗ್ರಾಮಗಳಿಗೆ ಶಾಲೆಗಳನ್ನು ಮಂಜೂರು ಮಾಡಿಸಿದ್ದು… ಹೀಗೆ ಹಲವು ಹತ್ತಾರು ಜನಪರ ಕಾರ್ಯಗಳಿಗೆ ದ್ಯಾವಮ್ಮ ಆದ್ಯತೆ ನೀಡುತ್ತಾ ಬಂದಿದ್ದರು. ಸರಳ ಸಜ್ಜನ ರಾಜಕಾರಣಿಯಾಗಿ ರೂಪುಗೊಂಡಿದ್ದ ದ್ಯಾವಮ್ಮನವರು ಶಾಸಕ ಸ್ಥಾನದ ಅವಧಿಯ ನಂತರವೂ ಜಿಲ್ಲಾ ಕಾಂಗ್ರೆಸ್ ಕಮಿಟಿ ಸದಸ್ಯರಾಗಿ, ಹಾಸನ ಜಿಲ್ಲಾ ಅಭಿವೃದ್ಧಿ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶಾಸಕಿ ದ್ಯಾವಮ್ಮನವರ ಮತ್ತು ಪತಿ ಮಂಜಪ್ಪಗೌಡರ ಸ್ಮರಣಾರ್ಥವಾಗಿ ದುದ್ದ ಗ್ರಾಮದ ಬಸ್ಟ್ಯಾಂಡ್ ಸರ್ಕಲ್‍ಗೆ ಇವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಒಂದಾದರೂ ಸ್ಮರಣಾರ್ಹ ಸ್ಮಾರಕವನ್ನು ಇವರ ಹೆಸರಿನಲ್ಲಿ ಮಾಡಿಸಬೇಕಿತ್ತು. ಈಗಲಾದರೂ ಆಗಬೇಕಿದು.

ದ್ಯಾವಮ್ಮ ಅವರು ಚುನಾವಣೆಗೆ ನಿಲ್ಲಲು ಸಾಲ ಮಾಡಿದ್ದರಂತೆ. ಐದು ವರ್ಷ ಕಳೆದರೂ ಕೂಡ ಆ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ! ಅಷ್ಟು ಜನಪರ ಕಾಳಜಿವಹಿಸಿ ಜನಸೇವೆಯಲ್ಲೇ ಮುಳುಗಿ ಹೋಗಿದ್ದರು. ಸ್ವಹಿತವನ್ನು ಎಂದೂ ಮಾಡಿರಲಿಲ್ಲ. ಬಹಳ ಜನರಿಗೆ ಅವರು ಕೆಲಸ ಕೊಡಿಸಿದ್ದಾರೆ. ಹಲವು ಜನರ ಬದುಕಿಗೆ ದಾರಿದೀಪವಾಗಿದ್ದಾರೆ. ಈಗಲೂ ಅನೇಕ ಮನೆಗಳಲ್ಲಿ ಇವರ ಫೋಟೋವನ್ನು ಇಟ್ಟು ಪೂಜಿಸುತ್ತಿದ್ದಾರೆ ಎಂದು ಇವರ ಮೊಮ್ಮಗ ಮಧುಕುಮಾರ್ ಹೇಳುತ್ತಾರೆ.

 ದ್ಯಾವಮ್ಮ ಮಂಜಪ್ಪಗೌಡ ಅವರು ನೋಡು ನೋಡುತ್ತಲೇ ಎತ್ತರಕ್ಕೇರಿ ಬೆಳೆದು ಮಂದಹಾಸ ಬೀರಿ ಜನಸೇವೆಯಿಂದ ಸಫಲತೆಯನ್ನು ಪಡೆದರು. 23 ಜೂನ್ 1982ರಲ್ಲಿ ಹಾಸನದ ತಮ್ಮ ಸ್ವಗೃಹದಲ್ಲಿ ಸ್ವರ್ಗಸ್ಥರಾದರು. ಆದರೆ ಅವರ ಕ್ಷೇತ್ರದ ಜನತೆಗೆ ಸಲ್ಲಿಸಿದ ಸೇವೆ ಇಂದಿಗೂ ಎಂದಿಗೂ ಅವಿಸ್ಮರಣೀಯವಾಗಿದೆ. ಅವರ ಅನುಕಂಪ, ವಾತ್ಸಲ್ಯ, ತ್ಯಾಗಮಯ ಸೇವಾ ಮನೋಭಾವನೆಗಳು, ಅವರಲ್ಲಿದ್ದ ಕಾರ್ಯನಿಷ್ಠೆ, ದೂರದರ್ಶಿತ್ವ, ಆಕರ್ಷಣೀಯ ವಾಕ್ ಶಕ್ತಿ, ಸೂಕ್ಷ್ಮಪ್ರಜ್ಞೆ, ದಕ್ಷತೆ, ಧೈರ್ಯ, ಗಾಂಧಿ ಮಾರ್ಗದಲ್ಲಿ ಅವರಿಗಿದ್ದ ಅಚಲವಾದ ನಂಬಿಕೆ, ಅವರ ಪ್ರಜಾಪ್ರಭುತ್ವದ ಧೋರಣೆಗಳು- ಅವರನ್ನು ಆದರಣೀಯ ಶಾಸಕಿಯನ್ನಾಗಿಸಿತ್ತು. ಹಿಂದಿನ ತಲೆಮಾರುಗಳ ಹಿರಿಯರು ಇದನ್ನೆಲ್ಲ ಮನದುಂಬಿ ಈಗಲೂ ನೆನೆಯುತ್ತಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆಯುವ, ಅವರ ದಾರಿಯಲ್ಲಿ ನಡೆಯುವ ಭಾಗ್ಯವಷ್ಟೇ  ಈಗ ನಮ್ಮದು.

ಉಷಾ ಸಿ.ಎನ್

ಇದನ್ನೂ ಓದಿ-ಇಂಜಿನಿಯರಿಂಗ್, ಸಂಗೀತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶ್ಯಾಮಲಾ ಚಿಕ್ಕಮೇನಹಳ್ಳಿ

More articles

Latest article

Most read