ಈ ಅಪರಾಧಕ್ಕೆ ಕ್ರೈಸ್ತ ಸಮುದಾಯ ತಲೆತಗ್ಗಿಸಿ ನಿಲ್ಲಬೇಕು…

Most read

ಉತ್ತಮ ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೆ, ಮಕ್ಕಳಿಗೆ ಸಮಾನತೆ ಪ್ರೀತಿ ಶಾಂತಿ ಸೌಹಾರ್ದ ಸಹಬಾಳ್ವೆ ಕರುಣೆ ಅನುಕಂಪ ಇತ್ಯಾದಿ ಮಾನವೀಯ ಗುಣಗಳನ್ನು, ಉನ್ನತ ಜೀವನ ಮೌಲ್ಯಗಳನ್ನು, ಸಂಸ್ಕಾರಗಳನ್ನು  ಬೋಧಿಸುವ ಸಂಸ್ಥೆಗಳೆಂದೇ ಕ್ರೈಸ್ತ ಶಾಲೆಗಳೆಂದರೆ ನಂಬಿಕೆ, ಭಾವನೆ ಸಮಸ್ತ ಸಮಾಜದ್ದು. ಹೀಗಿರುವಾಗ ಧರ್ಮದಲ್ಲಿ ಹೇಳಿರುವುದು ಒಂದು, ಆಚರಣೆಯಲ್ಲಿ ಮತ್ತೊಂದು ಎನ್ನುವಂತಾಗಬಾರದು ಅಲ್ಲವೇ?- ರೋಶ್ನಿ ಅನಿಲ್ ರೊಜಾರಿಯೊ, ಹವ್ಯಾಸಿ ಬರಹಗಾರ್ತಿ.

ಕ್ರೈಸ್ತ ಸಮುದಾಯದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಒಬ್ಬ ಬಾಲಕನಿಗೆ ಸಹವಿದ್ಯಾರ್ಥಿಗಳಿಂದ ಮಾರಣಾಂತಿಕ ಹಲ್ಲೆಯಾಗಿದೆ. ರ್ಯಾಗಿಂಗ್ (ragging) ಹೆಸರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಹವಿದ್ಯಾರ್ಥಿಯ ಎರಡೂ ಕೈಗಳನ್ನು ಹಿಡಿದು ಇನ್ನೊಬ್ಬಾತ ತೊಡೆಸಂದುಗಳ ನಡುವೆ ಆತನ ಮರ್ಮಾಂಗಕ್ಕೆ ಬಲವಾಗಿ ಒದೆದಿದ್ದಾನೆ. ವೃಷಣಗಳಿಗೆ ಪೆಟ್ಟಾಗಿ ವಿದ್ಯಾರ್ಥಿ ಯಮಯಾತನೆ ಅನುಭವಿಸಿದ್ದಾನೆ, ಆಪರೇಷನ್ ಗೆ ಒಳಗಾಗಿ ಹಾಸಿಗೆ ಬಿಟ್ಟು ಮೇಲೇಳಲಾಗದ ಸ್ಥಿತಿಗೆ ತಲುಪಿದ್ದಾನೆ. 

ಇದು ಪದವಿ ಕಾಲೇಜು, ಇಂಜಿನಿಯರಿಂಗ್ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ನಡೆದ ಘಟನೆಯಲ್ಲ. ವಿದ್ಯಾರ್ಥಿಗಳು ಇನ್ನೂ 8 ನೇ ತರಗತಿಯ ಸಣ್ಣ ಹರೆಯದ ಯುವ ಮಕ್ಕಳು. ಮೈಸೂರಿನ ಜಯಲಕ್ಷ್ಮಿಪುರಂ ನ ಸೈಂಟ್ ಜೋಸೆಫ್ ಶಾಲೆ ಎಂದು ತಿಳಿದು ಬಂದಿದೆ.

ಶಾಲೆಯ ಆಡಳಿತ ವರ್ಗದವರ ಅಮಾನವೀಯತೆ ಎಷ್ಟರ ಮಟ್ಟಿಗೆ ಎಂದರೆ ದೌರ್ಜನ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೆ ಸಂತ್ರಸ್ತ ಬಾಲಕ ಮತ್ತು ಕುಟುಂಬದವರ ವಿರುದ್ಧ ನಿಂತಿದ್ದಾರೆ. CC TV ಫೂಟೇಜ್ ಲಭ್ಯವಿದ್ದರೂ ತಮ್ಮ ಶಾಲೆಯಲ್ಲಿ ಆದ ಘಟನೆ ಅಲ್ಲ ಎನ್ನುತ್ತಿದ್ದಾರಂತೆ. ತಮ್ಮ ಶಾಲೆಯಲ್ಲಿ ಹಾಗಾಗಿದ್ದರೆ ಅವ ಸತ್ತೇ ಹೋಗುತ್ತಿದ್ದ, ಎಲ್ಲೋ ಹೊರಗಡೆ ಬಿದ್ದಿರಬೇಕು ಅನ್ನುತ್ತಿದ್ದಾರಂತೆ! 

ಶಾಲೆಯ ಮರ್ಯಾದೆಗಿಂತಲೂ ಮಗುವಿನ ಬದುಕು ಮುಖ್ಯವಲ್ಲವೇ? ಅಪರಾಧ ಮಾಡಿದವರ ಧರ್ಮಗಳು ಯಾವುದೇ ಇರಲಿ ಅಪರಾಧ ಅಪರಾಧವೇ. ನೋವಿನ ಯಮಯಾತನೆ ಎಲ್ಲರಿಗೂ ಒಂದೇ ಸಮ ತಾನೇ? ಮೈಸೂರಿನ ಶಾಲೆಯಲ್ಲಿ ನಡೆದ ಈ ದೌರ್ಜನ್ಯವನ್ನು News18 ಈಗಾಗಲೇ ಯೂಟ್ಯೂಬ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಇದಿನ್ನು ಹಿಂದುತ್ವವಾದಿಗಳಿಗೆ ತಲುಪದೇ ಇದ್ದಿತೇ?

ಭಗವಾನ್ ಬುದ್ಧ, ಮಹಮ್ಮದ್ ಪೈಗಂಬರ್, ಬಸವಣ್ಣ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ನಾರಾಯಣ ಗುರು ಅವರಂತೇ ಜಗತ್ತಿಗೆ ಶಾಂತಿ ಪ್ರೀತಿ ಕರುಣೆ ಅನುಕಂಪ ಸಹಾನುಭೂತಿ ಸಮಾನತೆ ಸಾರಿದ ಶ್ರೇಯಸ್ಸು, ಹಿರಿಮೆ ಕ್ರೈಸ್ತ ಧರ್ಮ ಸ್ಥಾಪಕ ಯೇಸು ಕ್ರಿಸ್ತರದ್ದು.

ಯೇಸು ಕ್ರಿಸ್ತನ ಹೆಜ್ಜೆಗಳಲ್ಲಿ ನಡೆದು ಸಮಾಜಸೇವೆ ಮಾಡುತ್ತಾ, ಭಾರತದ ಈ ನೆಲದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೆ ಧರ್ಮಗಳನ್ನು ಮೀರಿ ಮಾನವೀಯ ಸೇವೆ ಸಲ್ಲಿಸಿದ ಹೆಗ್ಗಳಿಕೆ ಕ್ರೈಸ್ತ ಭಗಿನಿ ಸಂತ ಮದರ್ ತೆರೇಸಾ ಅವರದ್ದು. ಅವರಂತೆ ಅದೆಷ್ಟೋ ಲೆಕ್ಕವಿಲ್ಲದಷ್ಟು ಲಕ್ಷಾಂತರ ಕ್ರೈಸ್ತ ಧಾರ್ಮಿಕರದ್ದು. ಧರ್ಮಗಳ ಪರಿಕಲ್ಪನೆಗಳನ್ನು ಬದಿಗೊತ್ತಿ ಸಮಾಜಸೇವೆ ಮಾಡುವ ಸಂತ ವಿನ್ಸೆಂಟ್ ದೇ ಪಾವ್ಲ್ ಸೊಸೈಟಿಯಂಥ ಸಂಘಗಳು ಇರುವ ಹೆಮ್ಮೆ ಕ್ರೈಸ್ತ ಸಮುದಾಯದ್ದು.

ಉತ್ತಮ ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೆ, ಮಕ್ಕಳಿಗೆ ಸಮಾನತೆ ಪ್ರೀತಿ ಶಾಂತಿ ಸೌಹಾರ್ದ ಸಹಬಾಳ್ವೆ ಕರುಣೆ ಅನುಕಂಪ ಇತ್ಯಾದಿ ಮಾನವೀಯ ಗುಣಗಳನ್ನು, ಉನ್ನತ ಜೀವನ ಮೌಲ್ಯಗಳನ್ನು, ಸಂಸ್ಕಾರಗಳನ್ನು  ಬೋಧಿಸುವ ಸಂಸ್ಥೆಗಳೆಂದೇ ಕ್ರೈಸ್ತ ಶಾಲೆಗಳೆಂದರೆ ನಂಬಿಕೆ, ಭಾವನೆ ಸಮಸ್ತ ಸಮಾಜದ್ದು. ಹೀಗಿರುವಾಗ ಧರ್ಮದಲ್ಲಿ ಹೇಳಿರುವುದು ಒಂದು, ಆಚರಣೆಯಲ್ಲಿ ಮತ್ತೊಂದು ಎನ್ನುವಂತಾಗಬಾರದು ಅಲ್ಲವೇ? ಮೊದಲೇ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಮತಾಂಧರ ಕೆಂಗಣ್ಣುಗಳಿಗೆ ಗುರಿಯಾಗುತ್ತಿರುವ ವಿಷಮ ಕಾಲ ಇದು. ಕ್ರೈಸ್ತ ಮತ್ತು ಮುಸ್ಲಿಮ್ ಸಮುದಾಯದವರ ಮೇಲೆ ಬ್ರಿಟಿಷರ ಮೊಘಲರ ಕಾಲದ ದೌರ್ಜನ್ಯಗಳನ್ನು ವಿನಾಕಾರಣ ಕೆದಕಿ ಕೆದಕಿ ಸಮಾಜವನ್ನು ರಣರಂಗ ಮಾಡುತ್ತಿದ್ದಾರೆ ಹಿಂದುತ್ವವಾದಿಗಳು.

ತಮ್ಮದೇ ಧರ್ಮದ ದಲಿತ ಆದಿವಾಸಿ ಬುಡಕಟ್ಟು ಶೂದ್ರ ಸಮುದಾಯ ಇನ್ನಿತರ ಕೆಳಸ್ತರದ ಜನಾಂಗದವರ ಮೇಲೆ ತಮ್ಮ ಧರ್ಮದವರೇ ಮಾಡುತ್ತಿದ್ದ, ಈಗಲೂ 21 ನೇ ಶತಮಾನ ತಲುಪಿ ಜಗತ್ತು ಇಷ್ಟು ಸುಧಾರಣೆ ಹೊಂದಿದರೂ ಯಥಾಪ್ರಕಾರ ಹಿಂದಿನಂತೇ ಮಾಡುತ್ತಿರುವ ಘೋರ ದೌರ್ಜನ್ಯಗಳ ಬಗ್ಗೆ ಜಾಣ ಮರೆವು, ಜಾಣ ಕುರುಡುತನ ಈ ಹಿಂದುತ್ವವಾದಿಗಳದ್ದು.

ಅಂದಿನ ಶೋಷಿತ, ವಂಚಿತ ಸಮುದಾಯಕ್ಕೆ ಆಹಾರ ವಸತಿಯಿಂದ ಹಿಡಿದು ಶಿಕ್ಷಣ ಸಂಸ್ಕಾರ ಕೊಟ್ಟ ಅದಕ್ಕಾಗಿ ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಪರಿವರ್ತನೆಯಾಗಲು ಕಾರಣೀಕರ್ತರಾದ ಮಿಷನರಿಗಳ ಹೆಸರಿನಲ್ಲಿ ಇಂದಿಗೂ ಕ್ರೈಸ್ತ ಧರ್ಮದವರನ್ನು ದಮನಿಸಲಾಗುತ್ತಿದೆ. ಭಾರತಕ್ಕೆ ಮಿಷನರಿಗಳು ಬಂದ ಕಾಲವೂ ಹಾಗಿತ್ತು. ಆದಿವಾಸಿ ಬುಡಕಟ್ಟು ವರ್ಗಗಳಿಗೆ ಸಮಾಜದಲ್ಲಿ ಪ್ರವೇಶವೇ ಇರದ ಕಾಲ ಅದು. ಅರಣ್ಯಗಳಲ್ಲೇ ಅವರ ಬದುಕು. ಅವರನ್ನು ಮೇಲ್ವರ್ಗದವರು ತಮ್ಮ ಸಮಾಜದೊಳಗೆ ಸೇರಿಸುತ್ತಲೂ ಇರಲಿಲ್ಲ.

ಆದರೆ ಊರ ಹೊರ ಭಾಗದಲ್ಲಿ ವಾಸಿಸುವ ದಲಿತರಂತೆ ಊರ ಒಳಗೂ ಬದುಕುವ ಹಲವು ಸಮುದಾಯಗಳು ಮೇಲ್ವರ್ಗದವರ ದೆಸೆಯಿಂದಾಗಿ ಅತ್ಯಂತ ಹೀನ ಸ್ಥಿತಿಯಲ್ಲಿದ್ದವು. ದಲಿತರಿಗಿಂತಲೂ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದದ್ದು ಅಂದು ಈಳವ ಸಮುದಾಯ. ಅಂತೆಯೇ ಇನ್ನು ಹಲವು.

ದಲಿತರು ದೇವಸ್ಥಾನಗಳಿಗೆ ಹೋಗುವುದು ಬಿಡಿ ದೂರದಿಂದ ದೇವರನ್ನು ಕೂಡಾ ನೋಡುವುದು ಮಹಾ ಅಪರಾಧವಾಗಿತ್ತು. ಮೇಲ್ಜಾತಿಯವರ ಮೈ ಸೋಕುವುದು ಬಿಡಿ ಅವರ ನೆರಳು ಕೂಡ ಮೇಲ್ಜಾತಿಯವರ ಮೇಲೆ ಬೀಳುವುದು ಅಪರಾಧವಾಗಿತ್ತು. ನೆರಳು ಕಾಲ ಬುಡಕ್ಕೆ ಬೀಳುವ ಬಿಸಿಲು, ಸುಡುವ ಮಟ ಮಟ ಮಧ್ಯಾಹ್ನ ಹೊರ ಹೋಗಬೇಕಿತ್ತು. ಅಷ್ಟೇ ಅಲ್ಲ ದಲಿತರು ಹೊರ ಹೋಗುವಾಗ ‘ದಲಿತ ಬರುತ್ತಿದ್ದೇನೆ’ ಎನ್ನುತ್ತಾ ಹೋಗಬೇಕಿತ್ತು. ಮೇಲ್ಜಾತಿಯವರು ನಡೆಯುವ ಹಾದಿಯಲ್ಲಿ ಹೋಗುವಾಗ ತಾವು ನಡೆದು ಮೈಲಿಗೆಯಾದ ಧೂಳು ತಮ್ಮ ಹಿಂದೆ ಬರುವ ಮೇಲ್ಜಾತಿಯವರಿಗೆ ತಗಲಿ ಮೈಲಿಗೆಯಾಗಬಾರದೆಂದು ಹೊರ ಹೋಗುವಾಗ ಸೊಂಟದ ಹಿಂದೆ ಪೊರಕೆ ಕಟ್ಟಿಕೊಂಡು ಹೋಗಬೇಕಿತ್ತು. ಮೇಲ್ಜಾತಿಯವರು ಉಪಯೋಗಿಸುವ ಊರ ಬಾವಿಯಿಂದ ಹೊಳೆ ಕೆರೆಗಳಿಂದ ಕುಡಿಯಲು ನೀರು ಸಹಿತ ಉಪಯೋಗಿಸಬಾರದಿತ್ತು. ಸೊಂಟದ ಮೇಲೆ ಹೆಣ್ಣು ಗಂಡುಗಳು ಬಟ್ಟೆ ಧರಿಸುವುದು ಕೂಡಾ ಮಹಾಪರಾಧವಾಗಿತ್ತು. ದಲಿತ ಸಮುದಾಯದ ಹೆಣ್ಣು ನಂಗೇಲಿಯ ಕಾಲದಲ್ಲಿ ಹೆಣ್ಣು ಮಕ್ಕಳು ‘ಸ್ತನ ತೆರಿಗೆ’ ಅಂದರೆ ಸಮಾಜದಲ್ಲಿ ತಮ್ಮ ಎದೆಯನ್ನು ಮುಚ್ಚಿಕೊಳ್ಳಬೇಕಾದರೆ ತೆರಿಗೆ ಪಾವತಿಸಬೇಕಿತ್ತು. ದಲಿತರು ಕೊಳೆತು ಹೋದ ಪ್ರಾಣಿಗಳ ಮಾಂಸವನ್ನು ತಿಂದು ಬದುಕುವಂತ ಪರಿಸ್ಥಿತಿ ಇತ್ತು. ಮೇಲ್ವರ್ಗದವರು ತಮ್ಮ ಕಾರ್ಯಕ್ರಮಗಳಲ್ಲಿ ಉಂಡು ಬಿಟ್ಟ ಆಹಾರವನ್ನು ದಲಿತರು ಕೊಂಡೊಯ್ದು ಅದನ್ನು ತಿನ್ನುವ ಸ್ಥಿತಿ ಇತ್ತು. ಪಂಕ್ತಿಯಲ್ಲಿ ಸಹಭೋಜನ ನಿಷಿದ್ಧವಾಗಿತ್ತು. ದಲಿತರಿಂದ ಏನಾದರೂ ಚ್ಯುತಿಯಾದರೆ  ಕೊಲೆಯೇ ಉತ್ತರವಾಗುತ್ತಿತ್ತು. 

ನಂಗೇಲಿ- ಸಾಂದರ್ಭಿಕ ಚಿತ್ರ

ಅದೇ ಸಮಯದಲ್ಲಿ ಬಂದ ಮಿಷನರಿಗಳಿಂದ ಶಿಕ್ಷಣ, ಆಹಾರ, ಇತರ ಒಳ್ಳೆಯ ಸೌಲಭ್ಯಗಳನ್ನು ಪಡೆದ ದೌರ್ಜನ್ಯಕ್ಕೆ ಒಳಗಾದ ಲಕ್ಷಾಂತರ ಜನರು ಮತಾಂತರವಾದರು. ವರ್ಣಭೇದದ ಹಿಂಸೆಯಿಂದ  ಹೇಗೆ ಭಗವಾನ್ ಬುದ್ಧ ಸ್ಥಾಪಿಸಿದ ಬೌದ್ಧ ಧರ್ಮಕ್ಕೆ ಹಿಂದೂ ಜನರು ಮತಾಂತರವಾದರೋ ಹಾಗೇ. ಹಿಂಸೆ, ನರಕಯಾತನೆಯಲ್ಲಿ ಬದುಕಲು ಯಾರು ತಾನೇ ಆಶಿಸಿಯಾರು?

ಬ್ರಾಹ್ಮಣರ, ಶ್ರೀಮಂತರ ವಿರುದ್ಧ ಜನರು ಸಿಡಿದೆದ್ದರು. ಬದುಕು ಕೊಡದ ಧರ್ಮ ಯಾಕೆ ಬೇಕೆಂದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಕೆಲವು ಮತಾಂತರಗಳನ್ನು ಆಮಿಷಗಳ ಮೂಲಕವೂ ಮಾಡಿದ್ದಿರಬಹುದು. ಮತಾಂತರ ಆದವರಿಗೂ ಅದರ ಅಗತ್ಯವಿತ್ತು.

ಕ್ರಿಶ್ಚಿಯನ್ನರ ಮೇಲಿನ ದ್ವೇಷಕ್ಕೆ ಬ್ರಿಟಿಷರು ಕಾರಣರಲ್ಲ. ಬದಲಾಗಿ, ಮಿಷನರಿಗಳು ಎಲ್ಲರಿಗೂ ಶಿಕ್ಷಣದ ಬಾಗಿಲುಗಳನ್ನು ತೆರೆದು, ಮೇಲ್ವರ್ಗ ಮತ್ತು ಕೆಳವರ್ಗದವರ ನಡುವಿನ ವ್ಯತ್ಯಾಸವನ್ನು ಕೊನೆಗೊಳಿಸುವ ಮೂಲಕ ವರ್ಣ ವ್ಯವಸ್ಥೆಯನ್ನು ಕಿತ್ತುಹಾಕಿದ್ದೇ ಮುಖ್ಯ ಕಾರಣ. ಅಂದು ಅದು ಸಣ್ಣ ಬೆಳವಣಿಗೆಯಾಗಿರಲಿಲ್ಲ. ಒಂದು ಕ್ರಾಂತಿಗೆ ಅದು ಕಾರಣವಾಯಿತು. ಗುಲಾಮಗಿರಿಯನ್ನು ಬೆಳೆಯಗೊಡದ ಆ ದ್ವೇಷ  ಇಂದಿಗೂ ಕ್ರೈಸ್ತ ಧರ್ಮದ ಮೇಲೆ ಇದೆ. ಆದರೆ ಈಗಿನ ಈ ಕಾಲದಲ್ಲೂ ಅಲ್ಲಲ್ಲಿ ಮತಾಂತರ ಮಾಡುವ ನನ್ನದೇ ಧರ್ಮದ ಪಂಥ ಪಂಗಡಗಳಿಗೆ ನಾನು ಬದ್ಧ ವಿರೋಧಿ. ಅಂತಹ ನಮ್ಮವರ ವಿರುದ್ಧ ನಾವುಗಳೇ ಧ್ವನಿ ಎತ್ತಬೇಕೆಂದು ಬಯಸುವವಳು ನಾನು. ಕ್ರೈಸ್ತ ಮತ್ತು ಮುಸಲ್ಮಾನ ಸಮುದಾಯದವರು ಒಂದು ವಿಷಯ ನೆನಪಿಡಬೇಕು. ಇಂದು ಆ ಎರಡೂ ಧರ್ಮದವರು ಭಾರತದಲ್ಲಿ ನೆಲೆ ನಿಲ್ಲಲು, ಸುರಕ್ಷಿತವಾಗಿ ಬದುಕಲು  ಕಾರಣರೂ ಹಿಂದೂ ಸಜ್ಜನರು. ಕೊಲ್ಲುವವರು ಇರುವಾಗ ಕಾಯುವವರೂ ಇರುತ್ತಾರೆ.

ಕ್ರೈಸ್ತ ಧರ್ಮೀಯರ ಶಾಲೆಗಳನ್ನು ನಂಬಿ ಹಲವು ಕೋಟ್ಯಾಂತರ ಹಿಂದೂ ಮಕ್ಕಳು ವಿದ್ಯಾರ್ಜನೆಗೆ ಬರುತ್ತಾರೆ. ಅವರನ್ನು ರಕ್ಷಿಸುವುದು ಶಾಲಾ ಆಡಳಿತವರ್ಗದವರ ಜವಾಬ್ದಾರಿ. ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಬಗ್ಗೆ ಸಣ್ಣ ವಿಷಯ ಸಿಕ್ಕಿದರೂ ಸಾಕು, ಅದನ್ನು ಬೆಟ್ಟದಷ್ಟು ದೊಡ್ಡದು ಮಾಡಿ ಈಗ ಹಿಂದುತ್ವವಾದಿಗಳು ಮೇಲೇರಿ ಬರುತ್ತಾರೆ. ಅಮಾಯಕ ದಲಿತರನ್ನು ಶೂದ್ರ ಸಮುದಾಯದವರನ್ನು ಕ್ರೈಸ್ತ ಸಮುದಾಯದವರ ವಿರುದ್ಧ ಎತ್ತಿ ಕಟ್ಟುತ್ತಾರೆ. ಆದರೆ ಜಗಳ ತಂದು ಹಾಕಿದ ಮೇಲ್ವರ್ಗದವರು ಮತ್ತು ಶ್ರೀಮಂತರು ಕ್ರೈಸ್ತ ಸಮುದಾಯದವರೊಡನೆ ಒಳ್ಳೆಯ ಬಾಂಧವ್ಯವನ್ನೇ ಇಟ್ಟಿರುತ್ತಾರೆ. ಅದೇ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ.

ಹಿಂದುತ್ವವಾದಿಗಳಿಂದ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಗಳು ನಡೆದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಅಂಥವುಗಳಿಗೆ ಅವಕಾಶ ಕೊಡಬಾರದು. ಬೇಜವಾಬ್ದಾರಿ ತೋರುವುದು ಮಹಾ ಅಪರಾಧ. ಅದು ಇಡೀ ಕ್ರೈಸ್ತ ಸಮುದಾಯಕ್ಕೆ ಕಂಟಕ. ಮೈಸೂರಿನಲ್ಲಿ ಆದ ಘಟನೆಯಂತೂ ಮಾನವೀಯತೆ ಇರುವ ಯಾರೇ ಆದರೂ ಖಂಡಿಸಬೇಕಾದುದು. ಕ್ರೈಸ್ತ ಸಮುದಾಯದ ಶಾಲೆಯಿಂದಾದ ಈ ಅಪರಾಧಕ್ಕೆ ಕ್ರೈಸ್ತ ಸಮುದಾಯ ತಲೆತಗ್ಗಿಸಿ ನಿಲ್ಲಬೇಕು. ಆ ಬಾಲಕ ಮತ್ತವನ ಕುಟುಂಬದವರ ಪರ ನಿಲ್ಲಬೇಕು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದ್ದು)

ರೋಶ್ನಿ ಅನಿಲ್ ರೊಜಾರಿಯೊ

ಹವ್ಯಾಸಿ ಬರಹಗಾರ್ತಿ

More articles

Latest article