ಭಾಗವತಿಕೆಯ ಹಿಂದಿನ ಬ್ರಾಹ್ಮಣ್ಯದ ಅಪಸ್ವರ

Most read

ಒಂದು ದೇಶ ಎಷ್ಟೇ ದೊಡ್ಡದಾಗಿದ್ದರೂ, ಸುಭಿಕ್ಷವಾಗಿದ್ದರೂ ಅದರ ನಿಜವಾದ ತಾಕತ್ತು ಇರುವುದು ಆ ದೇಶದ ಜನರ ಒಗ್ಗಟ್ಟಿನಲ್ಲಿ. ಸ್ವಾರ್ಥ ಸಾಧನೆಗೋಸ್ಕರ ಇಲ್ಲೇ ನೂರಾರು ವರ್ಷಗಳಿಂದ ಹುಟ್ಟಿ ಬೆಳೆದ ನಮ್ಮವರೊಳಗೇ ದ್ವೇಷವನ್ನು ಬಿತ್ತಿ ಬಡಿದಾಡಿಕೊಳ್ಳಲು ಪ್ರಚೋದಿಸಿ ನಡೆಸುವಂತ ಸಾಧನೆ ದೇಶವನ್ನು ಅವನತಿಗೆ ಕೊಂಡೊಯ್ಯಬಲ್ಲುದೇ ಹೊರತು ಬೇರೇನಲ್ಲ- ಶಂಕರ್‌ ಸೂರ್ನಳ್ಳಿ.

RSSಗೆ ನೂರು ತುಂಬಿದ ಸಂದರ್ಭದಲ್ಲಿ ಸಂಘಟನೆ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಖ್ಯವಾಗಿ ಕಾಂಗ್ರೆಸ್ ಸರಕಾರವಿರುವ ಕರ್ನಾಟಕದಲ್ಲಿ ಪ್ರಿಯಾಂಕ ಖರ್ಗೆಯಂತವರಿಂದ ಈ ಕುರಿತಂತೆ ಸಾಕಷ್ಟು ಟೀಕೆಗಳು ಬಂದಿರುವ ಕಾರಣ ಇತ್ತೀಚೆಗೆ ಸಂಘಪರಿವಾರದ ಹಿರಿಯ ಮೋಹನ್ ಭಾಗವತ್ ರವರು ಈ ಕುರಿತಂತೆ ಬೆಂಗಳೂರಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಸ್ಪಷ್ಟೀಕರಣವನ್ನು ಕೊಡುವಂತಹ ಪ್ರಯತ್ನವನ್ನು ಮಾಡಿದ್ದರು.

ನಮ್ಮದು ಸಾಮರಸ್ಯವನ್ನು ಉದ್ದೇಶಿಸಿ ಕಾರ್ಯನಿರ್ವಹಿಸುವಂತಹ ಸಂಘಟನೆ. ಇಲ್ಲಿ ಜಾತಿ ತಾರತಮ್ಯ ಇಲ್ಲ. ಜಾತಿವಿನಾಶದ ಅವಶ್ಯಕತೆಯೂ ಈಗಿಲ್ಲ. ಇಲ್ಲಿನ ಮುಸ್ಲಿಮ್, ಕ್ರಿಶ್ಚಿಯನ್ನರುಗಳೆಲ್ಲರೂ ಮೂಲತ: ಪೂರ್ವದಲ್ಲಿ ಹಿಂದೂಗಳಾಗಿದ್ದವರೇ. ಹಾಗಾಗಿ ಇಡೀ ಭಾರತವೇ ಹಿಂದೂ ರಾಷ್ಟ್ರ.  ಹಾಗಾಗಿ ಹಿಂದೂ ರಾಷ್ಟ್ರ ಕಟ್ಟುವ ಹೊಣೆ ನಮ್ಮೆಲ್ಲರದು ಎಂದಿದ್ದರು.

ಭಾಗವತರ ಮಾತುಗಳಲ್ಲಿ ಇಲ್ಲಿ ಹೇಳುವಂತಾದ್ದೇನೂ ಇಲ್ಲ. ಮುಂಚಿನಿಂದಲೂ ಇವರು ಇದನ್ನೇ ಹೇಳಿಕೊಂಡು ಬಂದಿದ್ದಾರಷ್ಟೆ. ನಮ್ಮದು ಯಾರನ್ನೋ ನಾಶ ಮಾಡಲು ಅಥವಾ ವಿರೋಧ ಮಾಡಲು ಇದ್ದಂತಹ ಸಂಘಟನೆಯಲ್ಲ. ನಮ್ಮದು ಕೇವಲ ರಾಷ್ಟ್ರ ಕಟ್ಟುವ ದೇಶಭಕ್ತ ಸಂಘಟನೆ ಎಂಬುದು ಅವರ ಮಾತು. ಹೌದು, ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ಗೋವು, ಮತಾಂತರ, ಮಂದಿರಗಳ ಹೆಸರಲ್ಲಿ ಭುಗಿಲೆದ್ದ ರಕ್ತಪಾತ, ದ್ವೇಷ, ಕೊಲೆ, ಅನಾಹುತಗಳೆಲ್ಲ ತಂತಾನೆ ಹುಟ್ಟಿಕೊಂಡವೇ ವಿನಹ ಇವುಗಳ ಹಿಂದೆ ಯಾರ ಪ್ರಚೋದನೆಯಾಗಲೀ ಕೈವಾಡಗಳಾಗಲೀ ಖಂಡಿತ ಇಲ್ಲ. ಯಾರದೋ ಫ್ರಿಡ್ಜ್ ಒಳಗಿಟ್ಟಿರುವ ಮಾಂಸದ ಕಾರಣಕ್ಕೂ ಕೊಲೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರು ಹೇಳು ಎಂದು ಹಲ್ಲೆ.. ಇವೆಲ್ಲಾ ತೀರಾ ಸಹಜ ಬಿಡಿ.

ಪ್ರಪಂಚದ ಯಾವ ದೇಶಗಳಿಗೂ ಸಹ ಶಾಶ್ವತವಾದ ರೂಪವೆನ್ನುವುದು ಯಾವತ್ತೂ ಇಲ್ಲ. ಮೂವತ್ತು ವರ್ಷಗಳ ಹಿಂದಿನ ದೊಡ್ಡ ರಷ್ಯಾ ಗೊರ್ಬಚೇವ್ ಬಳಿಕ ಹೇಗಾಯ್ತು. ಈಗ ಉಕ್ರೇನ್ ಮೊದಲಾದವುಗಳನ್ನ ಅದು ಗೆದ್ದು ಬೀಗಿದರೆ ಇನ್ನು ಮತ್ಯಾವುದೋ ರೂಪ ಅದಕ್ಕೆ. ಹಿಂದೆ ಒಂದೇ ಆಗಿದ್ದ ಕೊರಿಯಾ ಕತ್ತಿ ಮಸೆಯುವ ರೀತಿಯಲ್ಲಿ ಈಗ ಎರಡಾದವು. ನೆರೆಯ ಪಾಕಿಸ್ತಾನ ನಾಳೆ ಯಾವ ರೂಪದಲ್ಲಿರುತ್ತದೋ ಯಾರಿಗ್ಗೊತ್ತು.

ಶತಮಾನದ ಹಿಂದೆ ನೂರಾರು ರಾಜರುಗಳಿಂದ ಅಲ್ಲಲ್ಲಿ ಚೂರು ಚೂರಾಗಿ ಆಳಿಸಿಕೊಂಡಿದ್ದ ಈ ನಮ್ಮ ಉಪಖಂಡದಲ್ಲಿನ ಆಗಿನ ಬಹುದೇಶೀಯ ಪರಿಸ್ಥಿತಿಗೂ ಇಂದಿನ ಈ ಸಂಯುಕ್ತ ರಾಷ್ಟ್ರದ ಪರಿಕಲ್ಪನೆಗೂ  ಅಜಗಜಾಂತರವಿದೆ. ಅಂದು ಈಗಿನ ಈ ನಾಡಿನ ಯಾವುದೋ ಒಂದು ಭೂಭಾಗದಲ್ಲಿ ಪ್ರಭಾವಿ ದೊರೆಯ ಆಳ್ವಿಕೆ ಇದ್ದಾಗ ಆ ರಾಜ್ಯ ಅವನ ಕಾಲಕ್ಕೆ ಅವನ ಶೌರ್ಯ ಹಾಗು ಮಹತ್ವಾಕಾಂಕ್ಷೆಗೆ ತಕ್ಕಂತೆ ವಿಸ್ತಾರಗೊಂಡರೆ ನಂತರ ಅವನದೇ ಸಂತತಿಯಲ್ಲಿ ದುರ್ಬಲ ದೊರೆ ಬಂದಾಗ ಅದು ಸಣ್ಣದಾಗಬಹುದು. ಅಥವಾ ಇನ್ಯಾವುದೋ ಕಾಲಕ್ಕೆ ತನ್ನ ಅಸ್ತಿತ್ವವನ್ನೇ ಪೂರ್ತಿ ಕಳಕೊಂಡು ಮತ್ತೊಬ್ಬ ರಾಜನ ಅಧೀನಕ್ಕೊಳಪಡಬಹುದು. ಈಗಲೂ ಕೂಡ ರಾಜಕೀಯ, ಸಾಂಸ್ಕೃತಿಕ ಅಥವಾ ಮತ್ಯಾವುದೋ ಕಾರಣಕ್ಕೆ ಯಾವುದೇ ದೇಶದ ಭೌತಿಕ ಸ್ವರೂಪದ ಬದಲಾವಣೆ ಹೇಗೂ ಆಗಬಹುದು. ಒಟ್ಟಾರೆ ನಾವು ನೋಡುವ ಇಂದಿನ ಭವ್ಯ ಭಾರತ ತಂತಾನೆ ಆಗಿದ್ದಲ್ಲ. ಇದರ ಹಿಂದೆ ಅನೇಕರ ಶ್ರಮ ಬಲಿದಾನಗಳ ನೆಲೆಗಟ್ಟಿದೆ. ಅವರು ಕೇವಲ ಒಂದೇ ಧರ್ಮಕ್ಕೆ ಸೇರಿದವರೂ ಅಲ್ಲ ಒಂದೇ ಕಾಲಮಾನಕ್ಕೂ ಕೂಡ. ಹಾಗಾಗಿ ಈ ಭಾರತ ಎಲ್ಲರ ಭಾರತವೇ ವಿನಹ ಕೇವಲ ಯಾವುದೋ ಒಂದು ವರ್ಗಕ್ಕಷ್ಟೇ ಸೀಮಿತವಾದದ್ದೆಂದು ಭಾವಿಸೋದೇ ತಪ್ಪು.

ಇಂದಿಗೆ 114 ವರ್ಷಗಳ ಹಿಂದೆ (12/12/1911) ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ದೂರದ ಇಂಗ್ಲೆಂಡಿನಲ್ಲಿ ದೊರೆ ಐದನೇ ಜಾರ್ಜ್ ಮತ್ತು ರಾಣಿ ಮೇರಿಯವರ ಪಟ್ಟಾಭಿಷೇಕಕ್ಕೆ ಸಂಭೃಮಿಸುತ್ತಿರುವ ನಕಲಿ ದೇಶಭಕ್ತರ ಪೂರ್ವಜರು.

ಬ್ರಿಟಿಷರು ಈ ದೇಶವನ್ನು ದೀರ್ಘಕಾಲದವರೆಗೆ ಆಡಳಿತ ನಡೆಸಿದ್ದರು. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇವರ ಮೇಲೆ ಇವರು ಇಲ್ಲೇ ಉಳಿಯುವವರೇ ಹೊರತು ಬಿಟ್ಟು ಹೋಗುವವರಲ್ಲ ಎಂಬ ನಂಬಿಕೆಯೇ ಅಂದಿನವರಿಗಿತ್ತು. ಸಂಪೂರ್ಣ ಅಧಿಕಾರ ಇಲ್ಲಿನವರಿಗೆ ಬಿಟ್ಟುಕೊಡದೇ ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳುವ ಅವರ ಈ ನಿಲುವಿನ ಬಗ್ಗೆ ಅನೇಕರಿಗೆ ಅಸಮಾಧಾನವಿತ್ತೇ ವಿನಹ ಅವರ ಆಡಳಿತದ ಮೇಲಲ್ಲ. (ಇಂಗ್ಲೆಂಡಿನ ಐದನೇ ಜಾರ್ಜ್ ಭಾರತ ಭೇಟಿಯ ಸಂದರ್ಭದಲ್ಲಿ ಆ ದೊರೆಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ ದೇಗುಲಗಳಲ್ಲಿ ವಿಶೇಷ ಪೂಜೆಯ ವ್ಯವಸ್ಥೆ ನಡೆಸುವ ಬಗೆಗಿನ ಮಂಗಳೂರಿನ ದೇಗುಲವೊಂದರ ಹಳೆಯ ಕನ್ನಡ  ನೋಟಿಸೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತ್ತು. ಈಗ ಹಿಂದೂ ರಾಷ್ಟ್ರದ ಬಗ್ಗೆ ಕರಳು ಕಿತ್ತು ಬರುವಂತ ಮಾತನಾಡೋ, ಶೋಷಿತ ಸಮುದಾಯವನ್ನು ಅನ್ಯ ಧರ್ಮೀಯರ ವಿರುದ್ಧ ಎತ್ತಿ ಕಟ್ಟುವ  ಸ್ವಯಂಘೋಷಿತ ದೇಶಪ್ರೇಮಿಗಳ ಮೂಲ ಮನಸ್ಥಿತಿಯ ’ಚೇಲತನ”ದ ಅಸಲೀಯತ್ತನ್ನು ಈ ಪತ್ರ ಸ್ಪಷ್ಟವಾಗಿ ತೋರಿಸುತ್ತದೆ). ಅಷ್ಟಕ್ಕೂ, ಇಂಗ್ಲಿಷರಿಗೆ ಇಲ್ಲಿನ ಆಡಳಿತದ ಚುಕ್ಕಾಣಿಯ ಮೇಲೆ ಹಿಡಿತವಿತ್ತೇ ವಿನಹ ಅಧಿಕಾರಗಳನ್ನೆಲ್ಲ ನಡೆಸುತ್ತಿದ್ದವರು ಈ ಮೊದಲು ಮೊಗಲರ ಕಾಲದಲ್ಲಿ ದಿವಾನರು ಮಂತ್ರಿಗಳಾಗಿ ಮೆರೆದಿದ್ದವರೇ ಆಗಿದ್ದರೆಂಬುದು ಇಲ್ಲಿ ಗಮನಾರ್ಹ.  ಮೊಗಲ್, ನವಾಬ, ಸುಲ್ತಾನರ ಕಾಲದಲ್ಲಿ ಅವರಿಗೆ ಹೊಂದಿಕೊಂಡು ಮೆರೆದವರು ಬ್ರಿಟಿಷ್ ಆಡಳಿತಕ್ಕೂ ಕೂಡ ಅಷ್ಟೇ ನಿಷ್ಟರಾಗಿದ್ದರೆಂಬುವುದಕ್ಕೆ ಇತಿಹಾಸದಲ್ಲೇ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ. 

ವರ್ಣಾಶ್ರಮ, ಲಿಂಗತಾರತಮ್ಯದಂತಹ ಜಿಗುಟು ವ್ಯವಸ್ಥೆಗಳಿಗೆ ಇನ್ನಿಲ್ಲದ ಪೆಟ್ಟು ನೀಡಿದ ಬ್ರಿಟಿಷ್ ಆಡಳಿತದ ಶಿಕ್ಷಣದ ಸಾರ್ವತ್ರೀಕರಣ, ಬಾಲ್ಯವಿವಾಹ, ಸತಿಯಂತಹ ಅನಾಚಾರಗಳಿಗೆ ತಡೆಯೊಡ್ಡುವುದೇ ಮೊದಲಾದ ಸಾಮಾಜಿಕ ಸುಧಾರಣಾವಾದಗಳಿಂದ ನಿಜವಾಗಿ ಕಂಗೆಟ್ಟದ್ದು ಇದೇ ಸಂಪ್ರದಾಯವಾದಿಗಳು. ಇದು ಹೀಗೇ ಮುಂದುವರೆದರೆ ನಮ್ಮ ಅಸ್ತಿತ್ವಕ್ಕೇ ಇದು ಬಿಸಿನೀರು ಎಂಬ ಭಯಕ್ಕೆ ಬಿದ್ದ ಇವರುಗಳು ಮುಂದೆ ತಿರುಗಿನಿಂತರು. ಸ್ವಾತಂತ್ರ್ಯಾ ನಂತರವೂ ಕೂಡ ದೇಶದ ಮೊದಲ ಪ್ರಧಾನಿ ನೆಹರೂರವರ ಜಾತ್ಯತೀತವಾದ ಇವರನ್ನು ಮತ್ತಷ್ಟು ಕಂಗೆಡಿಸಿತು. ಈ ಕಾರಣಕ್ಕೆ ಪಂಡಿತ್ ಸಮುದಾಯದ ನೆಹರೂ ಒಬ್ಬ ಬ್ರಾಹ್ಮಣರಾಗಿದ್ದರೂ ಇಂದಿಗೂ ಮತ್ತು ಮುಂದೆಯೂ ಕೂಡ ಸಂಪ್ರದಾಯವಾದಿಗಳಿಗೆ ಅವರು ಶಾಶ್ವತ ದುಷ್ಟನಾಗಿಯೇ ಕಾಣುತ್ತಾರೆ.

ಅಂದಹಾಗೆ, ಸಂಘಪರಿವಾರದ ಈ ಹಿಂದೂರಾಷ್ಟ್ರದ ಕನವರಿಕೆ ನಿಜಕ್ಕೂ ತಪ್ಪೇನಲ್ಲ. ಯಾಕೆಂದರೆ, ಅದು ಅವರ ಅಸ್ತಿತ್ವದ ಪ್ರಶ್ನೆ. ಹಿಂದೂರಾಷ್ಟ್ರ ಎಂದಾಕ್ಷಣ ಬ್ರಾಹ್ಮಣಿಕೆಯ ಶ್ರೇಷ್ಟತೆ, ಮನುವಾದ, ವರ್ಣಾಶ್ರಮ ಸಿದ್ದಾಂತ ಇವುಗಳೆಲ್ಲದರ ನೈಜ ಫಲಾನುಭವಿಗಳು ಅವರೇ ತಾನೇ.. ಬೆವರು ಸುರಿಸದೇ ಉಣ್ಣುವುದು, ಬಿಟ್ಟಿ ಸೇವೆಗಳು, ಕಳ್ಳ, ಸುಳ್ಳ, ವ್ಯಭಿಚಾರಿಯೇ ಆದರೂ ಜಾತಿಯ ಹೆಸರಲ್ಲಿ ಸಮಾಜದಲ್ಲಿ ಗೌರವಕ್ಕೇನು ಕುಂದಿಲ್ಲ. ಶತಮಾನಗಳ ಹಿಂದಿನ ಆ ’ಸುವರ್ಣಯುಗ”ದ ಕನವರಿಕೆ (ಆ ಸ್ಥಾನದಲ್ಲಿ ನಾನಿದ್ದರೂ ಕೂಡ ಅದನ್ನೇ ಮಾಡುತ್ತಿದ್ದೆ)ಯೇ ಈ ಹಿಂದೂರಾಷ್ಟ್ರ ಕಲ್ಪನೆಗೆ ಮೂಲ. ಅಂದಹಾಗೆ, ಹಿಂದುತ್ವವಾದಿಗಳ ನಿಜವಾದ ಶತ್ರುಗಳು ಮುಸಲ್ಮಾನರಲ್ಲವೇ ಅಲ್ಲ ಅವರೊಂದು ಕೇವಲ ಸಾಧನವಷ್ಟೆ.. ದಲಿತ ಹಾಗು ಶೂದ್ರ ಸಮುದಾಯವೇ ಅವರ ಶತ್ರುಗಳು “ನಾವು ಚಪ್ಪಲಿ ಬಿಡುವ ಜಾಗದಲ್ಲಿ ಕೂರಲೂ ಅಂಜುವವರು ಈಗ ನಮ್ಮನ್ನಾಳುವಂತಾಗಿದೆ” ಎಂದೊಬ್ಬ ಸಂಘೀ ಮಹಾತಾಯಿ ಅಂದಿದ್ದಳು. ಇದರ ಹಿಂದಿನ ಮನ(ನು)ಸ್ಥಿತಿಯನ್ನು ನಾವೆಲ್ಲ ಅರ್ಥೈಸಿಕೊಳ್ಳಬೇಕಿದೆ. ಸಂಘದ ಸ್ಥಾಪಕ ಮಾನ್ಯ ಗುರೂಜಿಯವರು ತಮ್ಮ ’ಬಂಚ್ ಆಫ್ ಥಾಟ್ಸ್” ನಲ್ಲಿ ಹೇಳಿದ್ದೂ (ಶೂದ್ರವರ್ಗದ ಉನ್ನತಿ, ಒಡೆತನ ಒಪ್ಪದಂತ ಮನಸ್ಥಿತಿ) ಇದನ್ನೇ.  

ಒಂದು ದೇಶ ಎಷ್ಟೇ ದೊಡ್ಡದಾಗಿದ್ದರೂ, ಸುಭಿಕ್ಷವಾಗಿದ್ದರೂ ಅದರ ನಿಜವಾದ ತಾಕತ್ತು ಇರುವುದು ಆ ದೇಶದ ಜನರ ಒಗ್ಗಟ್ಟಿನಲ್ಲಿ. ಸ್ವಾರ್ಥ ಸಾಧನೆಗೋಸ್ಕರ ಇಲ್ಲೇ ನೂರಾರು ವರ್ಷಗಳಿಂದ ಹುಟ್ಟಿ ಬೆಳೆದ ನಮ್ಮವರೊಳಗೇ ದ್ವೇಷವನ್ನು ಬಿತ್ತಿ ಬಡಿದಾಡಿಕೊಳ್ಳಲು ಪ್ರಚೋದಿಸಿ ನಡೆಸುವಂತ ಸಾಧನೆ ದೇಶವನ್ನು ಅವನತಿಗೆ ಕೊಂಡೊಯ್ಯಬಲ್ಲುದೇ ಹೊರತು ಬೇರೇನಲ್ಲ.

ಶಂಕರ್ ಸೂರ್ನಳ್ಳಿ

ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿ- ಯಕ್ಷಗಾನದ ಹಳವಂಡ : ಪ್ರೊ ಬಿಳಿಮಲೆಯವರನ್ನು ಕಲಾವಿದರು ಯಾಕೆ ಬೆಂಬಲಿಸಬೇಕು !?

More articles

Latest article