ಕೋರೆಗಾಂವ್ ಕದನವೆಂಬ ನೊಂದವರು ನಡೆಸಿದ ಶ್ರೇಷ್ಠ ಯುದ್ಧ

Most read

ನೆನಪು

ಡಾ.ಅಂಬೇಡ್ಕರರಿಗೆ ತಿಳಿದಿತ್ತು, ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ, ಬದಲಿಗೆ ಒಂದು ವ್ಯವಸ್ಥೆಯ ವಿರುದ್ಧ ಎಂಬುದು. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ಎಂಬುದು – ರಘೋತ್ತಮ ಹೊ.ಬ.


ಬಾಬಾಸಾಹೇಬ್ ಅಂಬೇಡ್ಕರ್‌ ರವರಿಗೆ ಭಾರತದ ಇತಿಹಾಸದ ಬಗ್ಗೆ ತುಂಬಾ ಆಸಕ್ತಿ ಇತ್ತು, ಹಾಗೆ ಆತಂಕವೂ ಇತ್ತು. ಏಕೆಂದರೆ ವರ್ತಮಾನದಲ್ಲಿ ದೇಶದ ಉದ್ದಗಲಕ್ಕೂ ತಳ ಸಮುದಾಯಗಳಿಗೆ ಇತಿಹಾಸದ ಪಾಠಗಳ ಪುಟಗಳಲ್ಲಿ ಜಾಗ ಇಲ್ಲವಲ್ಲ ಎಂದು. ಈ ನಿಟ್ಟಿನಲ್ಲೇ ಇತಿಹಾಸವನ್ನು ಮರು ಓದಬೇಕು, ಮರು ಕಟ್ಟಬೇಕು ಎಂಬ ನಿಟ್ಟಿನಲ್ಲಿ ಅವರು ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದದ್ದು! ಹಾಗೆ ಹೇಳಿದ್ದಷ್ಟೆ ಅಲ್ಲ, ಅಂಬೇಡ್ಕರ್ ರವರು ಶೋಷಿತ ಸಮುದಾಯಗಳ ಇತಿಹಾಸವನ್ನು ಮರು ಕಟ್ಟಿಕೊಡುವ ಕೆಲಸವನ್ನು ಮಾಡಿದರು, ಮರು ವ್ಯಾಖ್ಯಾನ ಕೂಡ ಮಾಡಿದರು. ಅಂಬೇಡ್ಕರರ ಆ ವ್ಯಾಖ್ಯಾನವೆಂದರೆ ಭಾರತದ ಇತಿಹಾಸ ಅದು ಬೌದ್ಧ ಧರ್ಮಕ್ಕು ಬ್ರಾಹ್ಮಣ ಧರ್ಮಕ್ಕು ನಡೆದ ಮಾರಕ ಕಾಳಗವಲ್ಲದೆ ಬೇರೇನಲ್ಲ ಎಂಬುದು. ದುರಂತವೆಂದರೆ ಬಾಬಾಸಾಹೇಬ್ ಅಂಬೇಡ್ಕರರು ಹೇಳಿದ ಇತಿಹಾಸದ ಈ ವ್ಯಾಖ್ಯಾನದ ಮುಖವನ್ನು ಈಗಲೂ ಮುಚ್ಚಿಡಲಾಗಿದೆ. ಇತಿಹಾಸ ಶೋಧನೆಯ ಈ ನಿಟ್ಟಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರರು ಹೆಕ್ಕಿ ತೆಗೆದ ಒಂದು ಇತಿಹಾಸ ಅದು ಕೋರೇಗಾಂವ್ ಯುದ್ದದ್ದು.

ಕೋರೇಗಾಂವ್‍ ಯುದ್ಧ ಸ್ಮಾರಕ

ಡಾ.ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಭಾಗ 3(ಇಂಗ್ಲೀಷ್ ಆವೃತ್ತಿ) ಪುಟ.4ರ ಪ್ರಕಾರ, ಈ ಯುದ್ಧದ ಮಾಹಿತಿಯನ್ನು ದಾಖಲಿಸುವುದಾದರೆ, ಕೋರೇಗಾಂವ್ ಯುದ್ಧ ಅದು ಮಹಾರಾಷ್ಟ್ರದ ಭೀಮಾ ನದಿಯ ತೀರದಲ್ಲಿ ನಡೆಯಿತು. ಆ ಕಾರಣ ಅದು ‘ಭೀಮಾ ಕೋರೇಗಾಂವ್ ಯುದ್ಧʼ ಎಂದು ಪ್ರಸಿದ್ಧ. ಯುದ್ಧ ಯಾರ ಯಾರ ನಡುವೆ ನಡೆಯಿತು? 1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಆ ಯುದ್ಧದ ವಿವರಣೆ ಹೇಳುವುದಕ್ಕೂ ಮುನ್ನ ಆ ಸಮಯದಲ್ಲಿ ಇದ್ದ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸುವುದು ಸೂಕ್ತವೆನಿಸುತ್ತದೆ. ಹೌದು, 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ. ಆಗಿನ ಪೇಶ್ವೆ ಅಥವಾ ಬ್ರಾಹ್ಮಣ ಮಂತ್ರಿ 2ನೇ ಬಾಜೀರಾಯ.

ಪೇಶ್ವೆಗಳ ಆ ಕಾಲದಲ್ಲಿದ್ದ ಸಾಮಾಜಿಕ ಪರಿಸ್ಥಿತಿ?
ಡಾ.ಅಂಬೇಡ್ಕರರ ಪ್ರಕಾರ, ಮರಾಠರ ರಾಜ್ಯದಲ್ಲಿ ಪೇಶ್ವೆಗಳ ಆಡಳಿತದಲ್ಲಿ, ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪೃಶ್ಯರಿಗೆ ಸಾರ್ವಜನಿಕ ಬೀದಿಗಳಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು. ಅಲ್ಲದೆ ಅಸ್ಪೃಶ್ಯನೊಬ್ಬನನ್ನು ಹಿಂದೂವೊಬ್ಬ ಮುಟ್ಟಿ ಆತ ಮಲಿನಗೊಳ್ಳುವುದನ್ನು ತಪ್ಪಿಸಲು ಅಸ್ಪೃಶ್ಯ ಸಮುದಾಯದವರು ತಮ್ಮ ಕುತ್ತಿಗೆಗೆ ಅಥವಾ ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಕಡ್ಡಾಯವಾಗಿತ್ತು. ಪೇಶ್ವೆಗಳ ರಾಜಧಾನಿಯಾದ ಪೂನಾದಲ್ಲಿ ಹಿಂದೂಗಳು ಅಸ್ಪೃಶ್ಯನೋರ್ವ ನಡೆದ ದಾರಿಯಲ್ಲಿ ನಡೆದು ಮಲಿನಗೊಳ್ಳುವುದನ್ನು ತಡೆಯಲು ಅಸ್ಪೃಶ್ಯರು ತಮ್ಮ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಪೊರಕೆಯೊಂದನ್ನು ಕಟ್ಟಿ ತಾವು ನಡೆದ ರಸ್ತೆಯನ್ನು ಅವರೇ ಗುಡಿಸಬೇಕಾಗಿತ್ತು! ಮುಂದುವರಿದು ಅಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದು, ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪೃಶ್ಯರು ತಮ್ಮ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತುಹಾಕಿಕೊಳ್ಳಬೇಕಾಗುತ್ತಿತ್ತು. ಉಗಿಯಬೇಕೆಂದಾಗ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು!

ಇಂತಹ ವಿಚಿತ್ರ ಸಾಮಾಜಿಕ ಸ್ಥಿತಿಯ ಸಂದರ್ಭದಲ್ಲಿ ಮಾಹಾರಾಷ್ಟ್ರದ ಅಸ್ಪೃಶ್ಯರಾದ ಮಹಾರರಿಗೆ ದೌರ್ಜನ್ಯಕೋರ ಇಂತಹ ಪೇಶ್ವೆಗಳ ವಿರುದ್ಧ ಹೋರಾಡುವ ಅವಕಾಶವೊಂದು ಬಂತು. ಅದೇ ಕೋರೇಗಾಂವ್ ಯುದ್ಧ! ಇದೇನು ಅಸ್ಪೃಶ್ಯರು ಮೇಲ್ಜಾತಿಗಳ ವಿರುದ್ಧ ನೇರಾನೇರ ಕಾದಾಟಕ್ಕಿಳಿದ ಯುದ್ಧವಲ್ಲ. ಆದರೆ ಯಾವ ಜಾತಿ, ವರ್ಣವ್ಯವಸ್ಥೆಯಲ್ಲಿ ಶಸ್ತ್ರಹಿಡಿಯುವುದು ಇಂತಹ ಜಾತಿಗೆ ವರ್ಣಕ್ಕೆ ಎಂದು ಮೀಸಲಾಗಿತ್ತೋ, ಇತರರಿಗೆ ಅದು ಲಭ್ಯವಿರಲಿಲ್ಲವೊ ಅಂತಹ ಶ್ರೇಣೀಕೃತ ಜಾತಿವ್ಯವಸ್ಥೆಯ ಸಮಯದಲ್ಲಿ ಬ್ರಿಟಿಷರ ಪರವಾಗಿ, ಅವರ ಸೇನೆಯಲ್ಲಿ ಸೈನಿಕರಾಗಿ ಅಸ್ಪೃಶ್ಯ ಮಹಾರರು ಈ ಯುದ್ಧ ನಡೆಸಿದರು. ಅಂದಹಾಗೆ ಆ ಹೋರಾಟ ಹೇಗಿತ್ತು? ಒಂದೇ ಸಾಲಿನಲ್ಲಿ ಹೇಳುವುದಾದರೆ,“ಭೀಮಾನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‍ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್‍ನ 24 ಗನ್‍ಮೆನ್‍ಗಳ ಸಹಾಯದಿಂದ 20000 ಅಶ್ವದಳವಿದ್ದ, 8000ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ ಸತತ 12ಗಂಟೆಗಳು ಯಾವುದೇ ವಿಶ್ರಾಂತಿ-ಆಯಾಸವಿಲ್ಲದೆ, ಆಹಾರ-ನೀರಿನ ಪರಿವಿಲ್ಲದೆ ಕಾದಾಡಿ ಜಯಿಸುತ್ತಾರೆ!

ವಿವರಿಸುವುದಾದರೆ, ಬ್ರಿಟಿಷ್ ಸೈನ್ಯದ ಕ್ಯಾಪ್ಟನ್ ಸ್ಟಾಂಟನ್ ಮಹಾರ್ ಪಡೆಯ ನೇತೃತ್ವ ವಹಿಸಿದ್ದ. ಆತನ ಮುಂದಾಳತ್ವದಲ್ಲಿ ಸಿರೂರ್‍ನಿಂದ 1818 ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೇನೆ ಸತತ 27ಕಿ.ಮೀ.ಗಳು ನಡೆದು ಮಾರನೇ ದಿನ ಜನವರಿ 1ನೇ ತಾರೀಖು ಬೆಳಿಗ್ಗೆ ಕೋರೇಗಾಂವ್ ರಣಾಂಗಣವನ್ನು ತಲುಪಿತ್ತು. ಅದೇ ಸಮಯದಲ್ಲಿ ಮೂರೂ ದಿಕ್ಕುಗಳಿಂದಲು ತಲಾ 600ರಷ್ಟಿದ್ದ ಪೇಶ್ವೆಯ ಕಾಲ್ದಳದ 3 ತುಕಡಿಗಳು ಅವರನ್ನು ಸುತ್ತುವರೆದಿತ್ತು. ಪೇಶ್ವೆಯ ಆ ಸೈನ್ಯದ ಬೆಂಬಲಕ್ಕೆ ಬೃಹತ್ ಅಶ್ವದಳ, ರಾಕೆಟ್‍ದಳದ ಬೆಂಬಲ ಕೂಡ ಇತ್ತು. ಇಂತಹ ಸ್ಥಿತಿಯಲ್ಲಿ ಬಹುತೇಕ ಮಹಾರರೇ ಇದ್ದ ಬ್ರಿಟಿಷ್ ಸೇನೆಯು ಪೇಶ್ವೆಗಳ ಕಾಲ್ದಳ ಮತ್ತು ಫಿರಂಗಿದಳಗಳಿಂದ ಸಂಪೂರ್ಣ ವೃತ್ತಾಕಾರ ಮಾದರಿಯಲ್ಲಿ ಸುತ್ತುವರಿಯಲ್ಪಟ್ಟಿತ್ತು. ಯಾವ ರೀತಿ ಎಂದರೆ ಪಕ್ಕದಲ್ಲೇ ಇದ್ದ ಭೀಮಾನದಿಗೆ ಹೋಗುವ ದಾರಿಗಳೆಲ್ಲ ಬಂದ್ ಆಗಿತ್ತು! ಅಂತಿಮವಾಗಿ ಎರಡೂ ದಳಗಳು ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದವು. ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದ್ದೇ ತಡ ಎರಡೂ ಪಡೆಗಳು ಬೀದಿಬೀದಿಗಳಲ್ಲಿ, ಮನೆ-ಗುಡಿಸಲುಗಳ ಮುಂದೆ ಕೈಕೈ ಮಿಲಾಯಿಸುತ್ತಾ ನೇರಾ-ನೇರ ಕಾದಾಟಕ್ಕಿಳಿದವು. ಈ ಸಂದರ್ಭದಲ್ಲಿ ಅಸ್ಪೃಶ್ಯ ಮಹಾರ್ ಸಮುದಾಯದವರ ಸೈನ್ಯಕ್ಕೆ ಬಹಳ ಹಾನಿಯಾಯಿತು. ಆದರೂ ಮಹಾರ್ ಸೈನಿಕರು ಅತ್ಯುತ್ಕೃಷ್ಟ ಧೈರ್ಯ ತೋರುತ್ತ ಮುನ್ನುಗ್ಗಿದರು. ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಸ್ಟಾಂಟನ್ “ಕಡೆಯ ಸೈನಿಕನಿರುವ ತನಕ, ಕಡೆಯ ಬುಲೆಟ್ ಇರುವ ತನಕ ಹೋರಾಡುತ್ತಲೇ ಇರಿ”ಎಂದು ಹುರಿದುಂಬಿಸುತ್ತಿದ್ದ. ಪರಿಣಾಮ ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲಾ ದುರಾದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗಿದರು. ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9 ಗಂಟೆಗೆ ಗುಂಡಿನ ಧಾಳಿಯನ್ನು ನಿಲ್ಲಿಸಿತು. ವಿಧಿಯಿಲ್ಲದೆ ಕೋರೇಗಾಂವ್‍ನಿಂದ ರಾತ್ರೋರಾತ್ರಿ ಕಾಲ್ಕಿತ್ತಿತ್ತು. (1818 ಜನವರಿ 1ರಂದು).

ಕೋರೇಗಾಂವ್ ಯುದ್ಧ ಸ್ಮಾರಕಕ್ಕೆ ಅಂಬೇಡ್ಕರ್‌ ಭೇಟಿ ( ಚಿತ್ರ ಕೃಪೆ: ಲಡಾಯಿ ಪ್ರಕಾಶನ)

ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯ ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತಪೂರ್ವ ಜಯ ದಾಖಲಿಸಿದ್ದರು. ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಂಡಿತು. ಅಸ್ಪೃಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸಿತು. ಪರಿಣಾಮವಾಗಿ ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್‍ನಲಿ, ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲಿ 65 ಅಡಿ ಎತ್ತರದ ಒಂದು ಶಿಲಾಸ್ಮಾರಕವನ್ನು ಅಂದಿನ ಬ್ರಿಟಿಷ್ ಸರ್ಕಾರ 1821 ಮಾರ್ಚ್ 26ರಂದು ನಿರ್ಮಿಸಿತು. ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಯಿತು.

ಈ ನಿಟ್ಟಿನಲ್ಲಿ ಇತಿಹಾಸದ ಈ ಪುಟವನ್ನು ಕೇಳಿದ, ಸ್ಮಾರಕವನ್ನು ನೋಡಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರು ಸಾಧಿಸಿದ ಇಂತಹ ಜಯ ಐತಿಹಾಸಿಕ ದಾಖಲೆ ಎಂಬುದು ತಿಳಿಯಿತು. ಆ ಕಾರಣಕ್ಕಾಗಿ ಕೋರೆಗಾಂವ್‍ನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತೀ ವರ್ಷ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಅಗಲಿದ ಯೋಧರಿಗೆ ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು. ಡಾ.ಅಂಬೇಡ್ಕರರಿಗೆ ತಿಳಿದಿತ್ತು ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ, ಬದಲಿಗೆ ಒಂದು ವ್ಯವಸ್ಥೆಯ ವಿರುದ್ಧ ಎಂಬುದು. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ಎಂಬುದು.

ಒಂದು ಪ್ರಶ್ನೆ, ಅಕಸ್ಮಾತ್ ಕೋರೇಗಾಂವ್ ಯುದ್ಧ ನಡೆಯದಿದ್ದರೆ? ಪೇಶ್ವೆಗಳ ಅಟ್ಟಹಾಸ ಅಕ್ಷರಶಃ ಮುಂದುವರೆದಿರುತ್ತಿತ್ತು. ಈ ನಿಟ್ಟಿನಲ್ಲಿ ಅಂತಹ ಅಟ್ಟಹಾಸದ ವಾತಾವರಣದಲ್ಲಿ ಆ ಯುದ್ಧ ನಡೆದು 73 ವರ್ಷಗಳ ನಂತರ(1891) ಹುಟ್ಟಿದ ಡಾ.ಅಂಬೇಡ್ಕರರು ಶಿಕ್ಷಣ ಪಡೆಯಲಾಗುತ್ತಿತ್ತೇ? ವಿದೇಶ ವ್ಯಾಸಂಗಕ್ಕೆ ತೆರಳಲಾಗುತ್ತಿತ್ತೆ? ಸಂವಿಧಾನಶಿಲ್ಪಿಯಾಗಲು ಸಾಧ್ಯವಿತ್ತೆ? ಆ ಕಾರಣಕ್ಕೆ ಕೋರೇಗಾಂವ್ ಯುದ್ಧಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಅಪರೂಪದ ಮೈಲುಗಲ್ಲಾಗಿ ಉಳಿಯುತ್ತದೆ. ಸ್ಫೂರ್ತಿಯ ಸಂಕೇತವೂ ಅದಾಗುತ್ತದೆ ಎಂದರೆ ಅತಿಶಯೋಕ್ತಿಯೆನಿಸದು.

ರಘೋತ್ತಮ ಹೊ.ಬ.
ಲೇಖಕರು

ಇದನ್ನೂ ಓದಿ-ಭೀಮಾ ಕೋರೆಗಾಂವ್‌ ಕದನ; ವಿಜಯೋತ್ಸವ ಆಚರಣೆ; 10 ಲಕ್ಷ ಜನರ ಭೇಟಿ

More articles

Latest article