Brahmin,ಒಂದು ದಿನ ಹಿರಿಯ ಅಣ್ಣನ ಜತೆಯಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದರು. ಅವರು ಬ್ರಾಹ್ಮಣ ಸಮುದಾಯದವರು ಎಂಬುದು ಅಣ್ಣನ ಮೂಲಕ ತಿಳಿಯಿತು. ಬ್ರಾಹ್ಮಣ ವ್ಯಕ್ತಿಯೊಬ್ಬರು ಶೂದ್ರರಾದ ನಮ್ಮ ಮನೆಯ ಒಳಗೇ ಬಂದರೆ ಒಂದು ಕ್ಷಣ ನಮ್ಮ ಮನಸ್ಸಿನ ಸ್ಥಿತಿ ಏನಾಗಬಹುದು? ಅಂತಹ ಬೆರಗು, ಕುತೂಹಲ ಸಹಿತವಾದ ಇರಿಸು ಮುರಿಸು ನಮಗೂ ಆಯಿತು.
ಯಾಕೆಂದರೆ, ನಾವು ಮೊದಲ ಬಾರಿ ಮುಖಾಮುಖಿಯಾದ ಬ್ರಾಹ್ಮಣ ಎಂದರೆ ನಮ್ಮ ಮನೆ ಮಾಲೀಕ ಶಂಭು ಶಾಸ್ತ್ರಿಗಳು. ಅವರು ತಪ್ಪಿಯೂ ನಮ್ಮ ಮನೆಯೊಳಗೆ ಬರುತ್ತಿರಲಿಲ್ಲ. ನಮ್ಮಿಂದ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಮಡಿ ಮಡಿ ಮಡಿ.. ಆಗೆಲ್ಲ ಬ್ರಾಹ್ಮಣರು ಶೂದ್ರರ ಮನೆಗೆ ಬಂದರೂ ಸೇವಿಸುತ್ತಿದ್ದುದು ಎಂದರೆ ಸಿಯಾಳ (ಬೊಂಡ), ಬಾಳೆ ಹಣ್ಣಿನಂತಹ ಫಲ ವಸ್ತುಗಳನ್ನು ಮಾತ್ರ. ಶೂದ್ರರು ತಯಾರಿಸಿದ ತಿಂಡಿ, ಪಾನೀಯಗಳನ್ನು ತಪ್ಪಿಯೂ ಮುಟ್ಟುತ್ತಿರಲಿಲ್ಲ.
ಇಂತಹ ಹೊತ್ತಿನಲ್ಲಿ ಒಬ್ಬ ಬ್ರಾಹ್ಮಣ ವ್ಯಕ್ತಿ, ಶೂದ್ರರಾದ ನಮ್ಮ ಮನೆಯ ಒಳಗೇ ಬಂದುದು ಮಾತ್ರವಲ್ಲ, ಯಾವ ಸಂಕೋಚವೂ ಇಲ್ಲದೆ, ನಮ್ಮವರಲ್ಲೇ ಒಬ್ಬರಂತೆ ನಡೆದುಕೊಳ್ಳುತ್ತಾ ನಮ್ಮೊಂದಿಗೇ ಕುಳಿತು ನಮ್ಮ ಊಟವನ್ನೇ ಹಂಚಿಕೊಳ್ಳುವೆ ಎಂದರೆ ನಮ್ಮಲ್ಲಿ ಯಾವ ಭಾವನೆ ಮೂಡಬಹುದು? ಆದರೆ ಅವರು ಏನೂ ಆಗಿಯೇ ಇಲ್ಲ ಎಂಬಂತೆ ನಮ್ಮೊಂದಿಗೆ ನಡೆದುಕೊಂಡರು. ನಮ್ಮೊಂದಿಗೆ ಕುಳಿತು, ನಮಗಾಗಿ ತಯಾರಿಸಿದ ಆಹಾರವನ್ನೇ ಸೇವಿಸಿದರು. ಕೇವಲ ಕೆಲವೇ ಕ್ಷಣಗಳಲ್ಲಿ ನಮ್ಮ ಮನೆಯ ಸದಸ್ಯನಂತೆಯೇ ಆಗಿ, ನಮ್ಮ ಹೃದಯವನ್ನು ಗೆದ್ದುಬಿಟ್ಟರು. ಅವರನ್ನು ಸಂಪೂರ್ಣ ನಂಬುವಂತಹ ವಾತಾವರಣ ನಿರ್ಮಿಸಿಬಿಟ್ಟರು. ಮನೆಯಿಂದ ಹೊರಡುವಾಗ ʼಸಂಜೆ ಕಲ್ಲು ಕುಟಿಗನ ಮಕ್ಕಿಗೆ ಬನ್ನಿ, ಅಲ್ಲಿ ನಾವು ಯುವಕರು ಒಂದೆಡೆ ಸೇರಿ ಬಗೆ ಬಗೆಯ ಆಟ ಆಡಬಹುದುʼ ಎಂಬ ಆಮಿಷ ಒಡ್ಡಿದರು.
ಕಲ್ಲು ಕುಟಿಗನ ಮಕ್ಕಿ ಎಂದರೆ ಊರಿನ ಪ್ರಸಿದ್ಧ ದೈವವಾದ ವೀರ ಕಲ್ಲುಕುಟಿಗನ ಆರಾಧನಾ ಸ್ಥಳ. ಅಲ್ಲಿ ದೈವಸ್ಥಾನಕ್ಕೆ ವಿಶಾಲವಾದ ಅಂಗಳವೂ ಇತ್ತು, ಪಕ್ಕದಲ್ಲಿ ಗದ್ದೆಗಳೂ ಇದ್ದವು. ಬೆಳೆ ಬೆಳೆಯದ ಬೇಸಗೆ ಕಾಲದಲ್ಲಿ ಆ ಗದ್ದೆಗಳು ಆಟದ ಮೈದಾನಗಳಾಗಿ, ಅಲ್ಲದೆ ಊರಿಗೆ ಬರುವ ಯಕ್ಷಗಾನ ಬಯಲಾಟ ಮೇಳಗಳಿಗೆ ಯಕ್ಷಗಾನ ಪ್ರದರ್ಶನದ ಸ್ಥಳವೂ ಆಗಿರುತ್ತಿತ್ತು.

ಸರಿ, ರಾತ್ರಿಯಾಗುವಾಗ ನಾನು ಅಣ್ಣನ ಜತೆಯಲ್ಲಿ ಕಲ್ಲು ಕುಟಿಗನ ಮಕ್ಕಿಗೆ ಹೋದೆ. ದೇವಸ್ಥಾನದ ಟ್ಯೂಬ್ ಲೈಟ್ ಬೆಳಕಿತ್ತು. ರಾತ್ರಿಯ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಮಂದಿ ಯುವಕರು ಒಂದೆಡೆ ಸೇರುವುದೇ ಒಂದು ಥ್ರಿಲ್ ಎನಿಸುವಾಗ, ಇನ್ನು ಅಲ್ಲಿ ದೇಶದ ರಾಜಕೀಯ ಸಹಿತ ನಾನಾ ವಿಷಯಗಳ ಬಗ್ಗೆ ಹರಟುವುದು, ಬಗೆ ಬಗೆಯ ಆಟವಾಡುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಮಗೂ ಹಾಗೆಯೇ ಆಯಿತು.
ಅಲ್ಲಿ ಸೇರಿದ ಬಳಿಕ ಮೊದಲು ಬಾವುಟವೊಂದನ್ನು ನೆಟ್ಟು, ಅದರ ಮುಂದೆ ಎದೆಯ ಮಟ್ಟಕ್ಕೆ ಕೈಗಳನ್ನು ಬಗ್ಗಿಸಿ ಹಿಡಿದು ʼನಮಸ್ತೇ ಸದಾ ವತ್ಸಲೇ..ʼ ಪ್ರಾರ್ಥನೆಯಾಯಿತು. ಆ ನಂತರ ಕೆಲವು ಆಟಗಳನ್ನು ಆಡಿದೆವು. ತುಂಬಾ ಖುಷಿಯಾಯಿತು. ಎಷ್ಟು ಖುಷಿಯಾಯಿತು ಎಂದರೆ ನಿತ್ಯವೂ ಇಲ್ಲಿ ಸೇರಬೇಕೆಂಬ ಬಯಕೆ ಮೂಡಲಾರಂಭಿಸಿತ್ತು. ಇದು ಮುಂದುವರಿಯುತ್ತ ಕೆಲವು ದಿನಗಳ ಬಳಿಕ ʼಸಂಘ ದಕ್ಷ, ಸಂಘ ಆರಾಮ..ʼ ಮೊದಲಾದ ದೈಹಿಕ ಕವಾಯತುಗಳು ಶುರುವಾದವು. ದೊಣ್ಣೆ ಬೀಸುವ ʼಪ್ರಹಾರ ಏಕ್ ಪ್ರಹಾರ ದೋ (ಎಟೆನ್ಶನ್, ಸ್ಟಾಂಡ್ ಅಟ್ ಈಸ್)ʼ ತರಬೇತಿ ನೀಡಲಾಯಿತು. ಆರ್ ಎಸ್ ಎಸ್ ನ ಹಾಡುಗಳ ಪುಸ್ತಕ, ಆರ್ ಎಸ್ ಎಸ್ ನ ಆಟಗಳ ಪುಸ್ತಕ ದೊರೆಯಿತು. ನಿತ್ಯವೂ ರಾತ್ರಿ ಕಲ್ಲುಕುಟಿನ ಮಕ್ಕಿಗೆ ಹೋಗುವುದು ಪ್ರಾರ್ಥನೆ, ಆರ್ ಎಸ್ ಎಸ್ ಪ್ರಾರ್ಥನೆ, ಕವಾಯತು, ಆಟಗಳ ಬಳಿಕ ರಾತ್ರಿ ಹನ್ನೊಂದರ ಹೊತ್ತಿಗೆ ಮನೆಗೆ ಮರಳುವುದು ದಿನಚರಿಯಾಯಿತು.
ಅದು 1971 ರ ಕಾಲ ಎಂದ ಮೇಲೆ ಅದು ಭಾರತ ಪಾಕಿಸ್ತಾನ ಯುದ್ಧದ ಕಾಲ (ಬಾಂಗ್ಲಾ ವಿಮೋಚನಾ ಯುದ್ಧ) ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ? ಈಗಿನ ಟಿವಿಯಂತಹ ಖಾಸಗಿ ಸುದ್ದಿ ಮಾಧ್ಯಮಗಳು ಇಲ್ಲದ ಕಾರಣ ನಿಖರ ಸುದ್ದಿ ನಮ್ಮನ್ನು ತಲಪುತ್ತಿರಲಿಲ್ಲ. ಕರಾವಳಿಯಲ್ಲಿ ಉದಯವಾಣಿ ಪತ್ರಿಕೆ ಶುರುವಾಗಿ (1970 ಜನವರಿ) ಸುಮಾರು ಎರಡು ವರ್ಷ ಆಗಿತ್ತು ಅಷ್ಟೇ. ಸರಕಾರಿ ಮಾಧ್ಯಮಗಳು ಸುದ್ದಿಯನ್ನು ಭಟ್ಟಿ ಇಳಿಸಿ ಸರಕಾರದ ಪರವಾದ ಸುದ್ದಿಯನ್ನಷ್ಟೇ ತಲಪಿಸುತ್ತಿದ್ದವು. ವದಂತಿಗಳೇ ಸುದ್ದಿಗಳಾಗಿರುತ್ತಿದ್ದವು.

ಆರ್ ಎಸ್ ಎಸ್ ಶಾಖೆಗೆ ಹೋದಾಗ ಅಲ್ಲಿ ನನ್ನೊಂದಿಗಿದ್ದ ಹಿರಿಯ ವಯಸಿನವರು ಭಾರತ ಪಾಕ್ ಯುದ್ಧವನ್ನು ಕಣ್ಣಿಗೆ ಕಟ್ಟುವಂತೆ ವರ್ಣರಂಜಿತವಾಗಿ ವರ್ಣಿಸುತ್ತಿದ್ದರು, ಚರ್ಚಿಸುತ್ತಿದ್ದರು. ʼಭಾರತದ ನೌಕಾಪಡೆಯ ಧಾಳಿಗೆ ಕರಾಚಿ ಇವತ್ತು ಹುಡಿ ಹುಡಿಯಾಯಿತಂತೆ, ರಾತ್ರಿ ಪಾಕಿಸ್ತಾನ ಬಾಂಬ್ ಹಾಕಬಹುದಾದುದರಿಂದ ಎಲ್ಲರೂ ಬ್ಲಾಕ್ ಔಟ್ ನಿಯಮ ಪಾಲಿಸಬೇಕು..ʼ ಎಂದೆಲ್ಲ ಹೇಳುತ್ತಿದ್ದರು.
ಮುಂದೆ ಆರ್ ಎಸ್ ಎಸ್ ಶಾಖೆ ಎಂದಿನ ಉತ್ಸಾಹದಲ್ಲಿ ನಡೆಯಲಿಲ್ಲ ಎಂದು ಕಾಣುತ್ತದೆ. ನಾನು ಶಾಲೆಯ ಕಾರಣದಿಂದ ಶಾಖೆಗೆ ಹೋಗುವುದನ್ನು ಬಿಟ್ಟೆ. ಅಣ್ಣನೂ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ್ದೂ ಇದಕ್ಕೆ ಕಾರಣವಿರಬಹುದು. ಆ ಬಳಿಕ ವರ್ಷಕ್ಕೊಮ್ಮೆ ಗುರುಪೂರ್ಣಿಮೆಯಂದು ಯಾರೋ ಒಂದು ಧ್ವಜವನ್ನು ಕಲ್ಲುಕುಟಿಗ ದೈವಸ್ಥಾನದ ಗದ್ದೆಯಲ್ಲಿ ನೆಟ್ಟು ಆರ್ ಎಸ್ ಎಸ್ ನಮಸ್ಕಾರ ನಡೆಸುತ್ತಿದ್ದುದು ಕಣ್ಣಿಗೆ ಬೀಳುತ್ತಿತ್ತು.
ಅಗ ನನಗೆ ಆರ್ ಎಸ್ ಎಸ್ ಬಗ್ಗೆ ಅಂತಹ ಯಾವ ಕೆಟ್ಟ ಭಾವನೆಗಳು ಬರಲಿಲ್ಲ. ಇದಕ್ಕೆ ಕಾರಣ ವಿವೇಚನಾ ಶಕ್ತಿ ಇರದ ಎಳೆಯ ವಯಸ್ಸು. ಆ ಬ್ರಾಹ್ಮಣ ವ್ಯಕ್ತಿ ಶೂದ್ರರ ಮನೆಗೇ ಬಂದು ಊಟ ಮಾಡಿದ ಹಿನ್ನೆಲೆ, ಆರ್ ಎಸ್ ಎಸ್ ಗೀತೆಯಲ್ಲಿನ ಆಕ್ಷೇಪಾರ್ಹ ಸಾಲುಗಳು, ಅಲ್ಲಿನ ದೊಣ್ಣೆ ಬೀಸುವ ಚಟುವಟಿಕೆಗಳ ಹಿನ್ನೆಲೆ, ಅಲ್ಲಿನ ಆಟಗಳ ಒಳಗೆ ನುಸುಳಿಕೊಂಡಿರುವ ಕೋಮುವಾದಿ, ವಿಶೇಷವಾಗಿ ಮುಸ್ಲಿಮ್ ವಿರೋಧಿ ಭಾವನೆಗಳು ಇತ್ಯಾದಿಗಳ ಬಗ್ಗೆ ಅರಿವು ಮೂಡುವಾಗ ನನಗೆ ವಯಸ್ಸು 21 ದಾಟಿತ್ತು.
ಮನೆಗೆ ಮರ್ಫಿ ರೇಡಿಯೋ ಬಂತು
ಆ ದಿನಗಳಲ್ಲಿ ರೇಡಿಯೋ ಇನ್ನೂ ಎಲ್ಲ ಮನೆಗಳಿಗೆ ಪರಿಚಯವಾಗಿರಲಿಲ್ಲ. ಅದನ್ನು ಹೊಂದುವಷ್ಟು ಸ್ಥಿತಿವಂತರು ಎಲ್ಲರೂ ಆಗಿರಲಿಲ್ಲ. ದೇಶದಲ್ಲಿ ರೇಡಿಯೋ ಪ್ರಸಾರ ಕೇಂದ್ರಗಳೂ ದೊಡ್ಡ ಸಂಖ್ಯೆಯಲ್ಲಿ ಇರಲಿಲ್ಲ. ಇದ್ದ ಕೇಂದ್ರಗಳ ತರಂಗಗಳು ದೇಶದ ಎಲ್ಲ ಮೂಲೆಗಳನ್ನು ತಲಪುತ್ತಲೂ ಇರಲಿಲ್ಲ. ರೇಡಿಯೋ ಇದ್ದರೂ ಕರೆಂಟ್ ಇರಲಿಲ್ಲವಲ್ಲ? ಎಲ್ಲವೂ ಬ್ಯಾಟರಿಯ ಮೂಲಕವೇ ಅಗಬೇಕಿತ್ತು. ಅಲ್ಲದೆ, ರೇಡಿಯೋ ಇರಿಸಿಕೊಳ್ಳಬೇಕಾದರೆ ಆಗ ಲೈಸೆನ್ಸ್ ಬೇಕಿತ್ತು. ಅದಕ್ಕೆಂದೇ ಒಂದು ಪಾಸ್ ಪುಸ್ತಕ ಇತ್ತು. ಅದನ್ನು ಊರ ಪೋಸ್ಟ್ ಆಫೀಸ್ ಗೆ ಒಯ್ದು ನಿಗದಿತ ಶುಲ್ಕ ಕಟ್ಟಿದ ಮೇಲೆ ಅವರು ಅದಕೊಂದು ಸೀಲು ಗುದ್ದಿ ಕೊಡುತ್ತಿದ್ದರು.
ಇಂತಹ ಕಾಲದಲ್ಲಿ ಮನೆಯಲ್ಲಿ ರೇಡಿಯೋ ಹೊಂದುವುದು ಎಂದರೆ ಅದೊಂದು ದೊಡ್ಡ ಸಂಗತಿ. ವಾರ್ತೆ, ಇತ್ಯಾದಿ ಕೇಳುವುದಕ್ಕಾಗಿ ಮನೆಗೆ ಒಂದು ರೇಡಿಯೋ ಬೇಕು ಅನಿಸಿತು ಅಪ್ಪನಿಗೆ. ಸರಿ.. ಒಂದು ದಿನ ಮರ್ಫಿ ರೇಡಿಯೋ ಮನೆಗೆ ಬಂತು. ಮರ್ಫಿ ಆಗ ಒಂದು ಸುಪ್ರಸಿದ್ಧ ರೇಡಿಯೋ ಬ್ರಾಂಡ್. ಅದರ ಬಾಕ್ಸ್ ನಲ್ಲಿ ಪುಟ್ಟ ಮಗುವೊಂದು ತುಟಿಗೆ ಬೆರಳಿರಿಸಿಕೊಂಡ ಆಕರ್ಷಕ ಚಿತ್ರ ಇರುತ್ತಿತ್ತು.

ಮೊದಲ ಬಾರಿ ರೇಡಿಯೋ ನೋಡಿ ನಮಗೆಲ್ಲ ರೋಮಾಂಚನ. ಸರಿ, ರೇಡಿಯೋ ಏನೋ ಬಂತು. ಅದು ಮಾತನಾಡುವಂತೆ ಮಾಡುವುದು ಹೇಗೆ? ಅದನ್ನು ಸ್ವಿಚ್ ಆನ್ ಮಾಡುವುದು, ಅದರ ಧ್ವನಿ ಏರಿಸುವುದು ತಗ್ಗಿಸುವುದು, ಸ್ಟೇಶನ್ ಗಳನ್ನು ಬದಲಾಯಿಸುವುದು ಹೇಗೆ? ನಮಗೆ ಯಾರಿಗೂ ಗೊತ್ತಿಲ್ಲ!
ಅಷ್ಟಾಗುವಾಗ ಅಂಗಳದ ಬದಿಯಿಂದ ಶಂಭುಶಾಸ್ತ್ರಿಗಳ ಮಗ ರಾಮಚಂದ್ರ ಶಾಸ್ತ್ರಿಗಳು ತೋಟದ ಕಡೆಗೆ ಹೋಗುವುದು ಕಂಡಿತು. ಆತ ಆಗಲೇ ವಿದ್ಯಾವಂತನಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಪ್ಪ ಆತನನ್ನು ಕರೆದು ರೇಡಿಯೋ ಆಪರೇಟ್ ಮಾಡುವುದನ್ನು ಹೇಳಿಕೊಡಲು ಕೇಳಿಕೊಂಡರು. ಅವರು ಹೇಳಿಕೊಟ್ಟರು. ಅವರಿಗೆ ಫಲಾಹಾರ ಕೊಟ್ಟು ಧನ್ಯವಾದ ಹೇಳಿ ಕಳುಹಿಸಿಕೊಡಲಾಯಿತು.
ಅಂದಿನಿಂದ ರೇಡಿಯೋ ನಮ್ಮ ಮನೆಯ ಒಂದು ಮುಖ್ಯ ಸದಸ್ಯನೇ ಆಯಿತು. ಆದರೆ ಅದರ ಆರೈಕೆಯೂ ಅಷ್ಟೇ ಕಷ್ಟಕರವಾಗಿತ್ತು. ಬ್ಯಾಟರಿ ಸೆಲ್ ಬೇಗನೇ ಮುಗಿಯುವುದರಿಂದಾಗಿ ಅದಕ್ಕೆ ಈಗಿನ ಬೈಕಿನ ಬ್ಯಾಟರಿಯಷ್ಟು ದೊಡ್ಡ ಬ್ಯಾಟರಿಯೊಂದನ್ನು ತರಿಸಲಾಯಿತು. ಅಲ್ಲದೆ ರೇಡಿಯೋಗೆ ಆಂಟೆನಾ ಬೇಕಲ್ಲ. ಐದಾರು ಮೀಟರ್ ಉದ್ದ ಲೋಹ ಸರಿಗೆಗಳ ಒಂದು ಜಾಲರಿಯನ್ನು ಮನೆಯ ಮಾಡಿನ ಪಕ್ಕಾಸಿಗೆ ಕಟ್ಟಿ ಅದನ್ನು ರೇಡಿಯೋಗೆ ಸಂಪರ್ಕಿಸಲಾಯಿತು.
ರೇಡಿಯೋ ಇದ್ದರೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸ್ಟೇಶನ್ ಗಳು ಇರಲಿಲ್ಲ ಎಂದೆನಲ್ಲ. ದೆಹಲಿಯಿಂದ ಪ್ರಸಾರವಾಗುವ ಹತ್ತು ನಿಮಿಷಗಳ ಕನ್ನಡ ವಾರ್ತೆಯನ್ನು ತಪ್ಪದೆ ಕೇಳುತ್ತಿದ್ದೆವು. ಅಲ್ಲದೆ ಬೆಂಗಳೂರು ಕೇಂದ್ರದ ಪ್ರಸಾರ ಕೂಡಾ ಒಂದಿಷ್ಟು ಸಿಗುತ್ತಿದ್ದುದರಿಂದ ಪ್ರದೇಶ ಸಮಾಚಾರ ಆಲಿಸುತ್ತಿದ್ದೆವು. ಈ ನಡುವೆ ನಮಗೆ ಹೆಚ್ಚು ಇಷ್ಟವಾಗುತ್ತಿದ್ದುದು ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ ಮಧ್ಯಾಹ್ನ ಪ್ರಸಾರ ಮಾಡುತ್ತಿದ್ದ ಕಾರ್ಯಕ್ರಮಗಳು. ಅದರಲ್ಲಿ ನಿರೂಪಕಿಯೊಬ್ಬರ ತಮಿಳು ಉಚ್ಛಾರ, ʼನೇರ್ಗಳಕ್ಕ್ ವಣಕ್ಕಂ, ಇಲಂಗೈ ಉಲಿವರತ್ ಕೂಟ್ ತ್ತಾಪನ ಆಶಿಯಾ ಸೇವಾ..ʼ ಎಂಬ ಮಾತುಗಳನ್ನು ಈಗಲೂ ಮರೆಯಾಗುತ್ತಿಲ್ಲ. ಇದೇ ರೇಡಿಯೋ ಕೇಂದ್ರದಿಂದ ಕನ್ನಡ ಸಿನಿಮಾಗಳ ಧ್ವನಿಮುದ್ರಿಕೆ ಪ್ರಸಾರವಾಗುತ್ತಿತ್ತು. ಸಿನಿಮಾ ನೋಡುವ ಅವಕಾಶ ಇರದಿದ್ದರೂ ಆಲಿಸುವ ಅವಕಾಶದ ಮೂಲಕ ಅನೇಕ ಸಿನಿಮಾಗಳನ್ನು ನೋಡಿದ ಅನುಭವವೇ ಸಿಗುತ್ತಿತ್ತು.
ಒಮ್ಮೊಮ್ಮೆ ಆಕಾಶದಲ್ಲಿ ಹಾರುವ ವಿಮಾನಗಳ ಪೈಲಟ್ ಗಳ ರೇಡಿಯೋ ಸಂಭಾಷಣೆ ಕೂಡಾ ನಮ್ಮ ರೇಡಿಯೋದ ಮೂಲಕ ಆಲಿಸಬಹುದಿತ್ತು. ರೇಡಿಯೋ ಬಂದ ದಿನದಿಂದ ಸಮಯ ತಿಳಿಯಲು ವಾಚ್ ನೋಡುವ ಅಗತ್ಯವಿರಲಿಲ್ಲ. ಬೆಳಗಿನ ವಾರ್ತೆ ಅಂದರೆ ಸಮಯ 7.35 ಎಂಬುದು ತಿಳಿಯುತ್ತಿತ್ತು.
ಪೇಟೆಗೆ ಹೋದರೆ ಅಲ್ಲಿನ ಪಂಚಾಯತ್ ಕಚೇರಿಯಲ್ಲಿ ಸಂಜೆಯ ಹೊತ್ತು ದೊಡ್ಡ ಮೈಕ್ ಇರಿಸಿ ಅದಕ್ಕೆ ರೇಡಿಯೋ ಸಂಪರ್ಕಿಸುತ್ತಿದ್ದರು. ಹಾಗಾಗಿ ಪೇಟೆಯ ಯಾವುದೇ ಮೂಲೆಯಲ್ಲಿದ್ದರೂ ಬೆಂಗಳೂರು ಆಕಾಶವಾಣಿ ಕೇಂದ್ರದ ಪ್ರದೇಶ ಸಮಾಚಾರ, ಕೃಷಿರಂಗ ಇತ್ಯಾದಿ ಕಾರ್ಯಕ್ರಮ ಆಲಿಸಬಹುದಿತ್ತು. ಪೇಟೆಯಲ್ಲಿ ಅದಾಗಲೇ ವಿದ್ಯುತ್ ಸೌಲಭ್ಯ ಇದ್ದುದರಿಂದ ಅಲ್ಲೆಲ್ಲ ದೊಡ್ಡ ಪೆಟ್ಟಿಗೆಯ ವಾಲ್ವ್ ರೇಡಿಯೋಗಳು ಬಂದಿದ್ದವು. ಇನ್ನು ಪೇಟೆ ಮಧ್ಯದ ಕೃಷ್ಣ ಭವನದ ರೇಡಿಯೋ ಅಂತೂ ಎಲ್ಲರ ಆಕರ್ಷಣೆಯ ಕೇಂದ್ರ. ಚುನಾವಣಾ ಫಲಿತಾಂಶದ ದಿನ ಎಲ್ಲರೂ ಕೃಷ್ಣ ಭವನಕ್ಕೆ ಮುತ್ತಿಗೆ ಹಾಕಿದಂತೆ ನಿಂತು ಅಲ್ಲಿನ ರೇಡಿಯೋಗೆ ಕಿವಿ ಕೊಡುತ್ತಿದ್ದರು. ಇಂತಹ ಪಕ್ಷದ ಇಂತಹ ಅಭ್ಯರ್ಥಿ ಇಷ್ಟು ಮತಗಳಿಂದ ಮುಂದಿದ್ದಾರೆ ಎಂದು ಅದರಲ್ಲಿ ಹೇಳುವಾಗ ಎಲ್ಲರಲ್ಲೂ ರೋಮಾಂಚನ. ನಾಗಮಣಿ ಎಸ್ ರಾವ್ ಆಗಲೇ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ವಾರ್ತಾ ವಾಚಕಿಯಾಗಿದ್ದರು ಮತ್ತು ಅವರ ದನಿಯಲ್ಲಿಯೇ ಚುನಾವಣಾ ಫಲಿತಾಂಶಗಳನ್ನು ಆಲಿಸುತ್ತಿದ್ದೆವು ಎಂದು ನೆನಪು.
ಈ ದಿನಗಳಲ್ಲಿಯೇ ಅಂದರೆ 1975 ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಯಿತು. ಸುದ್ದಿ ಪತ್ರಿಕೆಗಳ ಮೇಲೆ ಸೆನ್ಸಾರ್ ಇದ್ದುದರಿಂದ ಸುದ್ದಿಗಳೆಲ್ಲವೂ ಸರಕಾರಕ್ಕೆ ಅನುಕೂಲವಾಗುವಂತೆಯೇ ಇತ್ತು. ರೇಡಿಯೋದ ಕತೆಯೂ ಹಾಗೆಯೇ.
ಇಂತಹ ದಿನಗಳಲ್ಲಿಯೇ ಮಂಗಳೂರಿನಲ್ಲಿ ಹೊಸ ಆಕಾಶವಾಣಿ ಕೇಂದ್ರ ನಿರ್ಮಾಣದ ಸಿದ್ಧತೆಯಾಗುತ್ತಿತ್ತು. ಮಂಗಳೂರು ಆಕಾಶವಾಣಿ ಕೇಂದ್ರ ಅಧಿಕೃತ ಪ್ರಸಾರ ಆರಂಭಿಸಿದ್ದು 1976 ರ ಡಿಸೆಂಬರ್ ನಲ್ಲಿ. ಆದರೆ ಅದಕ್ಕೆ ಮೊದಲೇ ಅದು ಪ್ರಾಯೋಗಿಕ ಪ್ರಸಾರ ಆರಂಭಿಸಿತ್ತು. ಗಾದೆಗಳ ಮೂಲಕವೇ ಸಂಭಾಷಣೆ, ಪ್ರಕೃತಿಯ ಪ್ರತಿಯೊಂದು ಚಟುವಟಿಕೆಗಳಲ್ಲೂ ಇರುವ ಲಯ ವಿನ್ಯಾಸದ ಬಗ್ಗೆ ವಿಶೇಷ ಕಾರ್ಯಕ್ರಮ ಹೀಗೆ ಹೊಸ ಕನಸುಗಳನ್ನು ಹುಟ್ಟು ಹಾಕುತ್ತಾ ಮಂಗಳೂರು ಆಕಾಶವಾಣಿ ಕೇಂದ್ರದ ಪ್ರಸಾರ ಆರಂಭಿಸಿತ್ತು. ಅದರ ಪ್ರಸಾರ ಶಾರ್ಟ್ ವೇವ್ ನಲ್ಲಿ ಸಿಗಲಾರಂಭಿಸಿದವು. ಶಾರ್ಟ್ ವೇವ್ ಆದುದರಿಂದ ಪ್ರಸಾರ ಗುಣಮಟ್ಟ ಅಷ್ಟೊಂದು ಚೆನ್ನಾಗಿರಲಿಲ್ಲ.
ಹೀಗೆ ನಾವು ಮಂಗಳೂರು ಆಕಾಶವಾಣಿ ಕೇಂದ್ರದ ನಿತ್ಯ ಕೇಳುಗರಾದೆವು. ವಾರ್ತೆ, ಯುವವಾಣಿ, ಕೃಷಿ ಸಂಬಂಧಿತ ಕಾರ್ಯಕ್ರಮಗಳು ಹೀಗೆ ಈ ಅರ್ಥಪೂರ್ಣ ಕಾರ್ಯಕ್ರಮಗಳ ಕಾರಣ ನಾವು ರೇಡಿಯೋ ಹೊಂದಿದ್ದುದಕ್ಕೂ ಒಂದು ಅರ್ಥ ಬಂತು.
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ, ಆತ್ಮಕಥೆ ಸರಣಿ- 8 |ಅಪ್ಪನ ಗೀತಾ ಪಠಣ


