ತೋಡಾರಿನಿಂದ ವೇಣೂರು ಸೇರುವಾಗ ನಾವು ಮಕ್ಕಳು ಮೂರು ಜನ ಇದ್ದೆವು. ವೇಣೂರಿನಲ್ಲಿ ಐದು ವರ್ಷ ಕಳೆಯುವಾಗ ತಂಗಿಯೊಬ್ಬಳು ನಮ್ಮನ್ನು ಸೇರಿಕೊಂಡಳು (ತಾರಾಮತಿ. ಈಗ ಅವಳು ನಿವೃತ್ತ ಶಿಕ್ಷಕಿ). ನಾವು ನಾಲ್ಕು ಜನ ಆದೆವು.
ವೇಣೂರಿಗೆ ಶಾಶ್ವತ ವಿದಾಯ ಹೇಳುವಾಗ ನನಗೆ ಕೇವಲ ಐದು ವರ್ಷ. ಸಹಜವಾಗಿಯೇ, ಆ ಹರೆಯದಲ್ಲಿ ಎಷ್ಟರಮಟ್ಟಿಗೆ ನೆನಪಿನ ಶಕ್ತಿ ಬಲಗೊಂಡಿರಬಹುದು? ಅಣ್ಣಂದಿರೊಂದಿಗೆ ಅಲ್ಲಿನ ಶಾಲೆಗೆ ಒಮ್ಮೆ ಹೋದುದರ ಬಗೆಗಿನ ಮಸುಕು ಮಸುಕಾದ ನೆನಪು ಬಿಟ್ಟರೆ, ವೇಣೂರಿನ ನೆನಪು ನನ್ನಲ್ಲಿ ಏನೂ ಇಲ್ಲ. ಹಾಂ, ಒಂದು ನೆನಪು ಹಸಿರಾಗಿಯೇ ಇದೆ. ಅದೆಂದರೆ, ವೇಣೂರಿನಿಂದ ಬಿಡಾರ ಬದಲಿಸುವ ರಾತ್ರಿ ನನ್ನನ್ನು ಯಾರೋ ಹೆಗಲ ಮೇಲೆ ಕೂರಿಸಿ ವೇಣೂರು ಹೊಳೆ ದಾಟಿಸಿದ್ದು. ಅಂತೂ ಇಂತೂ ಕಾರ್ಕಳ ಸೇರಿದೆವು.
ಕಾರ್ಕಳಕ್ಕೆ ಆ ಹೆಸರು ಬರಲು ಅನೇಕ ಕಾರಣಗಳನ್ನು ಬಲ್ಲವರು ನೀಡುತ್ತಾರೆ. ಅದರಲ್ಲಿ ಕರಿಕಲ್ಲಿನ ಕಾರಣಕ್ಕೆ ಆ ಹೆಸರು ಬಂತು ಎಂಬ ವಿವರಣೆಯನ್ನು ಬಹುಮಟ್ಟಿಗೆ ಒಪ್ಪಬಹುದೇನೋ. ಕಾರ್ಕಳದ ಸುತ್ತಮುತ್ತ ಎಲ್ಲಿ ನೋಡಿದರೂ ಕರಿಕಲ್ಲಿನ ಬೆಟ್ಟಗಳು (ಗ್ರಾನೈಟ್). ಬಾಹುಬಲಿ ಬೆಟ್ಟ, ಚತುರ್ಮುಖ ಬಸದಿ, ಧರ್ಮಸ್ಥಳದ ಗೊಮ್ಮಟನನ್ನು ಕೆತ್ತಿದ ಮಂಗಲಪಾದೆ, ನಕ್ರೆ, ಜೋಡುರಸ್ತೆಯಿಂದ ಉಡುಪಿ ಮಾರ್ಗದಲ್ಲಿ ಅಯ್ಯಪ್ಪನಗರದಿಂದ ಬೈರ್ಲಬೆಟ್ಟುವಿಗೆ ಹೋಗುವಾಗ ಬಲದ ದಿಕ್ಕಿನಲ್ಲಿ ಹೀಗೆ ಎಲ್ಲೆಲ್ಲೂ ಬೃಹತ್ ಕರಿಕಲ್ಲಿನ ಬೆಟ್ಟಗಳು. ಕೆಲವೆಡೆ ಯಾರೋ ಇಟ್ಟು ಹೋಗಿರಬೇಕು ಎಂಬಂತೆ ಕಾಣುವ ಬೃಹದಾಕಾರದ ಕರಿಕಲ್ಲಿನ ಗುಂಡುಕಲ್ಲುಗಳು.
ಇದು ನೆಲದ ಮೇಲಿನ ದೃಶ್ಯವಾದರೆ ಮಣ್ಣಿನ ಒಳಗೆ ಇರುವುದೂ ಬಹುವಾಗಿ ಹಾಸು ಪಾದೆಗಳೇ. ಅವು ಮಣ್ಣಿನಡಿ ಅವಿತ ಗ್ರಾನೈಟ್ ಬೆಟ್ಟಗಳು. ಇಂತಹ ಜಾಗದಲ್ಲಿ ಮರಗಳು ಬೆಳೆಯಲಾರವು. ಮನೆ ನಿರ್ಮಿಸಿದಿರೋ ನೀರಿಗಾಗಿ ಬಾವಿ ತೋಡಿದರೆ ನೀರು ಸಿಗದು. ಅಗೆಯುತ್ತ ಹೋದಂತೆ ಕೆಂಪು ಮಣ್ಣು ಕಳೆದು ಪುಡಿಗಲ್ಲಿನ ಪದರ ಸಿಕ್ಕಿತೋ ಆನಂತರ ಸಿಗುವುದು ಕಲ್ಲ ಪಾದೆಯೆಂದೇ ಅರ್ಥ. ಕೆಲವು ಹೀಗೆ ಎರಡು ಬಾವಿ ತೋಡಿ ವಿಫಲವಾಗಿ ಮೂರನೇ ಬಾವಿಯಲ್ಲಿ ಒಂದಿಷ್ಟು ನೀರು ಪಡೆಯುವ ಅದೃಷ್ಟಶಾಲಿಗಳು ಅನೇಕರು.
ಆಗ ಕಗ್ಗಲ್ಲಿನಿಂದ ಮಾಡಿದ ಸೈಜುಗಲ್ಲುಗಳಿಂದ ಮನೆಯ ಪಂಚಾಗ ನಿರ್ಮಾಣ, ಆವರಣ ಗೋಡೆ ಇತ್ಯಾದಿಗಳಿಗೆ ಬಳಸುವುದನ್ನು ಬಿಟ್ಟರೆ, ರಸ್ತೆ ನಿರ್ಮಾಣಕ್ಕೆ ಜಲ್ಲಿಕಲ್ಲುಗಳು ಮಾತ್ರ ಬಳಕೆಯಾಗುತ್ತಿದ್ದವು. ಬಂಡೆ ಒಡೆಯಲು ಕೂಡಾ ಯಂತ್ರಗಳ ಬಳಕೆ ಇನ್ನೂ ಬಂದಿರದ ಕಾಲ. ಮಾನವ ಯತ್ನ ಮತ್ತು ಶ್ರಮದಲ್ಲೇ ಅಗ ಬೇಕು. ಈ ಕೆಲಸ ಮಾಡುತ್ತಿದ್ದುದು ಬಹುವಾಗಿ ತಮಿಳುನಾಡಿನ ಶ್ರಮಜೀವಿಗಳು.
ವರವೇ ಶಾಪವಾಗಿ ಬದಲಾಯಿತು
ಇದು ಕೇವಲ 45 ವರ್ಷಗಳ ಹಿಂದಿನ ಕತೆ. ಆಮೇಲೆ ಗ್ರಾನೈಟ್ ಗೆ ಬೇಡಿಕೆ ಹೆಚ್ಚಿತು. ಬಂದರುಗಳ ಮೂಲಕ ವಿದೇಶಕ್ಕೆ ಸಾಗಿಸಿ ಅವನ್ನು ಮರದ ಹಲಗೆಯ ಹಾಗೆ ಕತ್ತರಿಸಿ ತಂದು ಮಾರುವ ಕೆಲಸ ಶುರುವಾಯಿತು. ಕೊನೆಗೆ ಗ್ರಾನೈಟ್ ಕತ್ತರಿಸುವ ಯಂತ್ರಗಳು ಭಾರತಕ್ಕೇ ಬಂದು ಆ ಕೆಲಸ ಇಲ್ಲೇ ಆರಂಭವಾಯಿತು. ಬೇಡಿಕೆ, ಮಾರಾಟ ಹೆಚ್ಚುತ್ತಲೇ ಎಲ್ಲೆಲ್ಲೂ ಗ್ರಾನೈಟ್ ಕ್ವಾರಿಗಳು ಕಾಣಿಸಿಕೊಂಡವು. ನಮಗೀಗ ಹುಚ್ಚು ಹಿಡಿಸಿರುವ ʼಡೆವಲಪ್ ಮೆಂಟ್ʼ ಯಾವ ರೀತಿಯಲ್ಲಿ ಪ್ರಕೃತಿ ಪರಿಸರ ನಾಶ ಮಾಡುತ್ತವೆ ಎಂಬುದನ್ನು ನೋಡಬೇಕಾದರೆ, ಈಗ ನೀವು ಕಾರ್ಕಳಕ್ಕೆ ಹೋಗಬೇಕು. ಅನೇಕ ಕಗ್ಗಲ್ಲ ಬೆಟ್ಟಗಳನ್ನು ನೆಲಸಮ ಗೊಳಿಸಲಾಗಿದೆ. ಗ್ರಾನೈಟ್ ವ್ಯವಹಾರದಿಂದ ಅನೇಕರು ಶ್ರೀಮಂತರಾಗಿದ್ದಾರೆ, ಕ್ವಾರಿಗಳ ಪಕ್ಕದ ಬಡವರು ಬದುಕು ಕಳೆದುಕೊಂಡಿದ್ದಾರೆ. ಕಾರ್ಕಳಕ್ಕೆ ಹೆಸರನ್ನು ಮತ್ತು ಕಳೆಯನ್ನು ನೀಡಿದ್ದ ಕರಿಕಲ್ಲ ಬೆಟ್ಟಗಳು ಮಾನವನ ಅತಿಆಸೆಯ ದಾಳಿಗೆ ಛಿದ್ರ ಛಿದ್ರವಾಗಿ ಗೋಳೋ ಎಂದು ಅಳುತ್ತಿರುವಂತೆ ಕಾಣಿಸುತ್ತದೆ. ಮಿಲಿಯಾಂತರ ವರ್ಷಗಳ ವಿಕಾಸದ ಇತಿಹಾಸ ಹೊಂದಿದ್ದ ಬೆಟ್ಟಗಳು ಆಧುನಿಕ ಯಂತ್ರಗಳ ಶಕ್ತಿಗೆ, ಅಧುನಿಕ ಮಾನವನ ಪ್ರಗತಿಯ ದಾಹಕ್ಕೆ ಹೇಗೆ ಕೆಲವೇ ವರ್ಷಗಳಲ್ಲಿ ನಿರ್ನಾಮವಾಗಬಹುದು, ಇಡೀ ಊರೇ ಹೇಗೆ ವಿರೂಪವಾಗಬಹುದು ಎಂಬುದಕ್ಕೆ ಕಾರ್ಕಳದ ಕರಿಕಲ್ಲ ಬೆಟ್ಟಗಳು ಪ್ರತ್ಯಕ್ಷ ಸಾಕ್ಷಿ.
ಈ ನಾಶ ಇನ್ನೂ ಆರಂಭವಾಗಿರದ 1966ರ ಎಪ್ರಿಲ್ ಸುಮಾರಿಗೆ ನಾವು ಕರಿಕಲ್ಲಿನ ಕಾರ್ಕಳ ಜೋಡುರಸ್ತೆಯನ್ನು ತಲಪಿದೆವು. ಅಲ್ಲಿ ಕಾರ್ಕಳದಿಂದ ಉಡುಪಿ, ಹೆಬ್ರಿಗೆ ರಸ್ತೆ ಕವಲೊಡೆಯುವ ಹತ್ತಿಪ್ಪತ್ತು ಮೀಟರ್ ಹಿಂದೆ ಒಂದು ಅರಣ್ಯ ಚೆಕ್ ಪೋಸ್ಟ್ ಇತ್ತು. ಅದರ ಪಶ್ಚಿಮ ದಿಕ್ಕಿಗೆ ಕಲ್ಲ ಪಾದೆಯ ಬಳಿಯ ಪುಟ್ಟ ಮನೆಯಲ್ಲಿ ನಮ್ಮ ಬಿಡಾರ.
ಅರಣ್ಯ ತಪಾಸಣಾ ಪೋಸ್ಟ್ ಬಳಿ ರಸ್ತೆಗೆ ಅಡ್ಡಲಾಗಿ ಒಂದು ಮರದ ಕಂಬವನ್ನು ಇರಿಸಲಾಗುತ್ತಿತ್ತು. ಆಗ ವಾಹನ ಸಂಚಾರ ತೀರಾ ಕಡಿಮೆಯಲ್ಲವೇ? ವಾಹನ ನೋಡಿಕೊಂಡು ತಡೆಕಂಬವನ್ನು ಒಂದು ಬದಿಯಿಂದ ಎತ್ತಲಾಗುತ್ತಿತ್ತು. ಲಾರಿಗಳಲ್ಲಿ ಮರ ಇದ್ದರೆ ಅದಕ್ಕೆ ತಕ್ಕ ಪರವಾನಗಿ ಇರಬೇಕು. ಇಲ್ಲವಾದರೆ ಕಾನೂನುಕ್ರಮ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಎರಡು ದಶಕವೂ ಆಗಿರಲಿಲ್ಲ. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಬಂದಿರಲಿಲ್ಲ. ಹಾಗಾಗಿ ಅರಣ್ಯ ಗೇಟ್ ಗೂ ಕರೆಂಟ್ ಇಲ್ಲ. ರಾತ್ರಿ ಹೊತ್ತಿಗೆ ಅಲ್ಲಿ ತಡೆಕೋಲು ಇದೆ ಎಂದು ತಿಳಿಯಬೇಕು ಎಂಬ ಕಾರಣಕ್ಕೆ ಗೇಟ್ ನ ಬದಿಯ ಕಂಬದಲ್ಲಿ ಗೂಡುದೀಪದಂತಹ ಒಂದು ರಚನೆಯಲ್ಲಿ ರಾತ್ರಿ ಹೊತ್ತು ದೀಪ ಉರಿಸಲಾಗುತ್ತಿತ್ತು. ಗೇಟ್ ಉಸ್ತುವಾರಿ ಅಪ್ಪನದು. ಲಾರಿಯಲ್ಲಿ ಮರದ ಮೋಪು ಇದ್ದರೆ ಅವರು ಗಾಡಿಯನ್ನು ಬದಿಯಲ್ಲಿ ನಿಲ್ಲಿಸಿ ಪರವಾನಗಿ ತೋರಿಸಿ ಅನುಮತಿ ಸಿಕ್ಕಮೇಲೆ ಮುಂದೆ ಹೋಗಬೇಕು.
ಅಪ್ಪನ ಆಪ್ತಮಿತ್ರ ಶಿವಣ್ಣ ಶೆಟ್ಟರು
ಫಾರೆಸ್ಟ್ ಗೇಟ್ ದಾಟಿದ ತಕ್ಷಣ ಬಲಕ್ಕೆ ಒಂದು ರಸ್ತೆ ಇದೆ. ಅದರಲ್ಲಿ ಹೋದರೆ ಮರ ಸಿಗಿಯುವ ದುರ್ಗಾ ಸಾ ಮಿಲ್ ಸಿಗುತ್ತದೆ. ಅದರ ಮಾಲಕರು ಶಿರ್ವ ಶಿವಣ್ಣ ಶೆಟ್ಟಿ. ಶೆಟ್ಟರು ಆ ಊರಿನ ಪ್ರತಿಷ್ಠಿತರು. ಸದಾ ಆಕಾಶ ನೀಲಿ ಬಣ್ಣದ ಜುಬ್ಬಾ, ಬಿಳಿ ಮುಂಡು ಮತ್ತು ತಲೆಗೊಂದು ಗಾಂಧಿ ಟೋಪಿ ಅವರ ಸರಳ ಉಡುಪು. ನೋಡಿದ ತಕ್ಷಣ ಇವರಾರೋ ಹಿಂದಿನ ಸ್ವಾತಂತ್ರ್ಯ ಹೋರಾಟಗಾರರು ಅನಿಸಬೇಕು. ಟೋಪಿ ರಹಿತರಾದ ಶೆಟ್ಟರನ್ನು ನೋಡಿದ ಸಾರ್ವಜನಿಕರು ಇರಲಿಕ್ಕಿಲ್ಲ. ಆ ರೀತಿ ಟೋಪಿಯೊಂದಿಗೆ ಅವರ ನಂಟು.
ಶೆಟ್ಟರು ಅಲ್ಲಿ ಜನಪ್ರಿಯರಾಗಲು ಇನ್ನೂ ಒಂದು ಕಾರಣವಿದೆ. ಅಲ್ಲಿನ ದುರ್ಗಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮ್ಯಾನೇಜರ್ ಅವರು. ಅವರ ಶಾಲೆಯ ಕಾರಣ ಆಸುಪಾಸಿನ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಅಲ್ಲಿ ಅವರು ಶಾಲೆ ಸ್ಥಾಪಿಸದಿರುತ್ತಿದ್ದರೆ ಆ ಭಾಗದ ಮಕ್ಕಳು ಓದಬೇಕೆಂದರೆ ಅಲ್ಲಿಂದ ಎರಡು ಮೈಲಿ ದೂರದ ಕಾರ್ಕಳ ಪೇಟೆಗೆ ಹೋಗಬೇಕು. ಆ ಮಟ್ಟಿಗೆ ಶಾಲೆ ಸ್ಥಾಪಿಸಿ ಊರಿಗೆ ಒಂದು ಮಹೋನ್ನತ ಉಪಕಾರ ಮಾಡಿದ್ದರು ಶೆಟ್ಟರು.
ಅಪ್ಪ ಅರಣ್ಯ ತಪಾಸಣಾ ಅಧಿಕಾರಿ. ಶೆಟ್ಟರು ಮರದ ಮಿಲ್ಲಿನ ಓನರ್. ಅಂದ ಮೇಲೆ ಸ್ನೇಹ ಏರ್ಪಡಲೇ ಬೇಕಲ್ಲ? ಅವರು ಪರಸ್ಪರ ಆಪ್ತ ಮಿತ್ರರಾದರು (ಕಾರ್ಕಳ ಪೇಟೆಗೆ ಹೋಗಿ ಅವರಿಬ್ಬರು ಜತೆಯಾಗಿ ತಮ್ಮ ಕಪ್ಪು ಬಿಳುಪು ಫೋಟೋ ತೆಗೆಸಿಕೊಂಡಿದ್ದರು. ಅವರಿಬ್ಬರು ಜತೆಯಾಗಿರುವ ಆ ಫೋಟೋ ನಮ್ಮ ಮನೆಯ ಗೋಡೆಯಲ್ಲಿ ರಾರಾಜಿಸುತ್ತಿತ್ತು). ಅಪ್ಪನ ಔದಾರ್ಯದಿಂದ ಕಾನೂನು ಮೀರಿ ಶೆಟ್ಟರ ಮಿಲ್ಲಿಗೆ ಮರ ಹೋಗುತ್ತಿತ್ತು ಎಂದು ಹೇಳುವುದನ್ನು ಕೇಳಿದ್ದೇನೆ. ಅಪ್ಪನ ಈ ʼಉಪಕಾರʼವನ್ನು ಮರೆಯುವಷ್ಟು ಶೆಟ್ಟರು ಕೃತಘ್ನರಾಗಿರಲಿಲ್ಲ. ಎಂದೇ ದಶಕದ ನಂತರ ಅಲ್ಲೇ ಒಂದೆಕರೆ ಜಾಗ ಖರೀದಿಸಿ (ಜಾಗದಲ್ಲಿ ಬಹುಭಾಗ ಇದ್ದುದು ಕಲ್ಲ ಪಾದೆ.) ಮನೆ ಕಟ್ಟಿ ಕೂರಲೂ ಅವರೇ ಕಾರಣರಾದರು. ಜಮೀನೂ ಅವರದೆ, ಮನೆ ನಿರ್ಮಾಣಕ್ಕೆ ಸಹಾಯವೂ ಅವರದೇ. ಆ ಸ್ವಾರಸ್ಯಕರ ಕತೆಯನ್ನು ವಿವರವಾಗಿ ಮುಂದೆ ಹೇಳುವೆ.
ಹಿರಿಯಣ್ಣ ಸುಬ್ರಹ್ಮಣ್ಯ ಅಲ್ಲಿ ಏಳನೇ ತರಗತಿಗೆ ಸೇರಿದ, ಕಿರಿಯ ಅಣ್ಣ ಉಮೇಶ ಮೂರನೇ ತರಗತಿಗೆ ಸೇರಿದ. ಅಲ್ಲಿ ಆಗ ಬಾಲವಾಡಿ ಇನ್ನೂ ಆರಂಭವಾಗಿರಲಿಲ್ಲ ಎಂದು ಕಾಣುತ್ತದೆ. ಇದ್ದಿದ್ದರೆ ನಾನೂ ಹೋಗುತ್ತಿದ್ದೆನೋ ಏನೋ. ಎಂದೋ ಒಮ್ಮೆ ಅಲ್ಲಿನ ಶಾಲೆಗೆ ಹೋಗಿ ಮಧ್ಯಾಹ್ನ ಕಾಗದದ ಮೇಲೆ ಪಾಯಸದಂತಹ ಉಪ್ಪಿಟ್ಟು ಹಾಕಿಸಿಕೊಂಡು, ಕಾಗದ ಎತ್ತುವಾಗ ಕಾಗದ ಮಾತ್ರ ಕೈಯಲ್ಲಿ, ಉಪ್ಪಿಟ್ಟು ಪೂರ್ತಿ ನೆಲದ ಮೇಲೆ ಉಳಿದ ದುಃಖಕರ ಘಟನೆ ನೆನಪಿದೆ. ಇದು ನಿಜವಾಗಿ ನಡೆದುದೋ, ಭ್ರಮೆಯೋ, ಕನಸೋ ಎಂದು ಸರಿಯಾಗಿ ಹೇಳಲಾಗದಷ್ಟು ಈ ನೆನಪು ಮಸುಕು ಮಸುಕಾಗಿದೆ.
ಎಲ್ಲಿ ನೋಡಿದರೂ ಕಲ್ಲುಬಂಡೆಗಳು, ಕಲ್ಲುಗಳ ಬೆಟ್ಟಗಳೇ ಇರುವಲ್ಲಿ ಐದರ ಹರೆಯದ ನನ್ನ ದಿನಚರಿ ಏನಿರಬಹುದು? ಕಾಡು ಮರಗಳಿದ್ದರೆ ಅಲ್ಲೆಲ್ಲ ಹೋಗಿ ಆಟವಾಡಬಹುದಿತ್ತೋ ಏನೋ. ಇದ್ದುದು ಒಂದು ನೆಕ್ಕರೆ ಮಾವಿನ ಮರ. ರಸ್ತೆಯ ಬದಿಯ ಕಟ್ಟಡವೊಂದರ ಸಿಮೆಂಟ್ ಜಗಲಿಯ ಮೂಲೆಯಲ್ಲಿ ಕುಳಿತು ಅಟವಾಡುತ್ತಾ ರಸ್ತೆಯಲ್ಲಿ ಚಲಿಸುವ ಎತ್ತಿನಗಾಡಿಗಳು, ಸೈಕಲ್ ಗಳು, ವಾಹನಗಳನ್ನು ನೋಡುವುದು ನನ್ನ ದಿನಚರಿ.
ಕಾರ್ಕಳ ಪೇಟೆಯ ಜೈಹಿಂದ್ ಸಿನಿಮಾ ಟಾಕೀಸ್ 1966 ರಲ್ಲೇ ಇದ್ದಿರಬೇಕು. ಥಿಯೇಟರ್ ಯಾವುದೆಂದು ನೆನಪಿಲ್ಲ. ಆದರೆ ಅಮ್ಮನೊಂದಿಗೆ ಅಲ್ಲಿ ಹೋಗಿ ಬಾಲನಾಗಮ್ಮ ಎಂಬ ಸಿನಿಮಾವನ್ನೋ ಏನೋ ನೋಡಿದ ನೆನಪು. ಈ ನೆನಪು ಗಟ್ಟಿಯಾಗಿ ಉಳಿಯಲು ಕಾರಣ ಥಿಯೇಟರ್ ನಿಂದ ಹೊರಬಂದಾಗ ಬೀದಿ ಬದಿಯಲ್ಲಿ ಪುಟ್ಟ ಮಕ್ಕಳ ಆಟಿಕೆಗಳ ಅಂಗಡಿ ನೋಡಿದ್ದು, ಸ್ಕೂಟರ್ ನಂತಹ ಒಂದು ಆಟಿಕೆ ಕೊಂಡದ್ದು.
ಅಪ್ಪನ ಯಕ್ಷಮಿತ್ರರು
ಕಾರ್ಕಳ ಜೋಡುರಸ್ತೆಯಲ್ಲಿಯೂ ಅಪ್ಪನದು ಫಾರೆಸ್ಟ್ ಗಾರ್ಡ್ ಮತ್ತು ಯಕ್ಷಗಾನ ಕಲಾವಿದನ ದ್ವಿಪಾತ್ರ. ಅಪ್ಪನ ಯಕ್ಷಗಾನ ಆಸಕ್ತಿ ಮತ್ತು ಪ್ರತಿಭೆಯಿಂದಾಗಿ ಇಲ್ಲೂ ಅವರಿಗೆ ಜಾತಿ ಮೀರಿ ಅನೇಕ ಸ್ನೇಹಿತರು ಮತ್ತು ಅಭಿಮಾನಿಗಳು ಹುಟ್ಟಿಕೊಂಡರು. ಫಾರೆಸ್ಟ್ ಠಾಣೆಯ ಪಕ್ಕದ ಅಂಗಡಿಯಲ್ಲಿ ಭಾಸ್ಕರ ಬಳೆಗಾರ ಅಂತೇನೋ ಒಬ್ಬರಿದ್ದರು. ಅವರೂ ಯಕ್ಷಗಾನ ಪ್ರೇಮಿ. ನಾವೀಗ ಬರೆಹ ತಂತ್ರಾಂಶದಲ್ಲಿ ಕನ್ನಡ ಟೈಪಿಸಲು ಇಂಗ್ಲಿಷ್ ಅಕ್ಷರವನ್ನು ಹೇಗೆ ಬಳಸಿಕೊಳ್ಳುತ್ತೆವೋ ಆ ರೀತಿಯಲ್ಲಿ ಬಳೆಗಾರ ಭಾಸ್ಕರ ಆ ಕಾಲದಲ್ಲಿಯೇ ಪ್ರಸಂಗಗಳನ್ನು ಬರೆದಿಡುತ್ತಿದ್ದರು. ಕನ್ನಡದ ಯಕ್ಷಗಾನ ಪ್ರಸಂಗದ ಕತೆ, ಅಕ್ಷರ ಇಂಗ್ಲಿಷ್.
ಯಕ್ಷಗಾನದ ಕಾರಣಕ್ಕಾಗಿಯೇ ಅಪ್ಪನ ಅಭಿಮಾನಿ ಸ್ನೇಹಿತರಾಗಿ ದಶಕಗಳ ದೀರ್ಘ ಕಾಲ ಆಪ್ತರಾಗಿಯೇ ಉಳಿದುದು ಕುಕ್ಕುಂದೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಮರಿಯಣ್ಣ ಭಟ್ಟರು. ಅಪ್ಪ ಅಲ್ಲೂ ತಾಳಮದ್ದಲೆ ಕೂಟಗಳಲ್ಲಿ ಅರ್ಥ ಹೇಳುತ್ತಿದ್ದರು, ಹವ್ಯಾಸಿ ಕಲಾವಿದನಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಈ ಅನೇಕ ವಿಷಯಗಳನ್ನು ಗ್ರಹಿಸುವಷ್ಟು ದೊಡ್ಡ ವಯಸ್ಸು ನನ್ನದಾಗಿರಲಿಲ್ಲ. ಇವೆಲ್ಲ ಕೇಳಿಯಷ್ಟೇ ಗೊತ್ತು.
ಕೇವಲ ಒಂದು ವರ್ಷದಲ್ಲಿ ನಮ್ಮ ಪಾಲಿಗೆ ಕಾರ್ಕಳ ಜೋಡುರಸ್ತೆಯ ನೀರು ಮುಗಿದಿತ್ತು. 1967 ರಲ್ಲಿ ಮತ್ತೆ ವರ್ಗವಾಗಿ ಶಂಕರನಾರಾಯಣದ ಹಾದಿ ಹಿಡಿದೆವು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇವುಗಳನ್ನು ಓದಿದ್ದೀರಾ?
ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-1
ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ – 2
ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ -3