ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಘೋಷಣೆಯಾಯಿತು. ಇಂದಿನಂತೆ ದೂರವಾಣಿ ಸಂಪರ್ಕ ಇಲ್ಲದ ಕಾಲವಲ್ಲವೇ? ಫಲಿತಾಂಶ ಏನಾಯಿತು ಎಂಬುದು ತಕ್ಷಣ ತಿಳಿಯಲಿಲ್ಲ. ವಾರದ ಕೊನೆಗೆ ಹಿರಿಯ ಅಣ್ಣ ಶಂಕ್ರಾಣದಿಂದ ಬಂದ. ʼನೀನು ಮೊದಲ ದರ್ಜೆಯಲ್ಲಿ ಪಾಸಾಗಿದ್ದಿʼ ಎಂದ. ಸಂತೋಷವಾಯಿತು. ಆದರೆ, ಹಂತ ಹಂತವಾಗಿ ಫಲಿತಾಂಶ ಇಳಿಮುಖವಾಗುತ್ತಿದ್ದುದು ಅರಿವಿಗೆ ಬಂತು. ಏಳನೆ ತರಗತಿಯಲ್ಲಿ 600 ರಲ್ಲಿ 435 ಅಂಕ ಸಿಕ್ಕಿದ್ದರೆ, ಎಸ್ ಎಸ್ ಎಲ್ ಸಿ ಯಲ್ಲಿ ಅದು 420 ಕ್ಕೆ ಇಳಿಯಿತು. ಈಗ 360!
ಮುಂದೊಂದು ದಿನ ಶಂಕ್ರಾಣಕ್ಕೆ ಹೋಗಿ ನನ್ನ ಟಿಸಿ, ಅಂಕಪಟ್ಟಿ ಇತ್ಯಾದಿ ತೆಗೆದುಕೊಂಡು ಬಂದೆ. ಈಗಕ್ಕೆ ಹೋಲಿಸಿದರೆ ಹಣಕ್ಕೆ ಒಳ್ಳೆಯ ಮೌಲ್ಯ ಇದ್ದ ಕಾಲವಲ್ಲವೇ? ಕಾರ್ಕಳದಿಂದ ಶಂಕ್ರಾಣಕ್ಕೆ ಹೋಗಿ ಬರಲು ಆದ ಒಟ್ಟು ಖರ್ಚು 9 ರುಪಾಯಿ!
1978 ರ ಮೇ ತಿಂಗಳಿರಬಹುದು, ನನ್ನನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ಅಣ್ಣ ಭುವನೇಂದ್ರ ಕಾಲೇಜಿಗೆ ಕರೆದುಕೊಂಡು ಹೋದ. ಹಿಂದೆ ಆತ ಒಂದು ವರ್ಷ ಇದೇ ಕಾಲೇಜಿನಲ್ಲಿ ಓದಿದ್ದ. ಹಾಗಾಗಿ ಈ ಕಾಲೇಜಿನ ಬಗ್ಗೆ ಆತನಿಗೆ ಹೆಚ್ಚು ತಿಳಿದಿತ್ತು. ಇನ್ನೇನು ಕಾಲೇಜಿನ ಪ್ರವೇಶ ದ್ವಾರ ತಲಪಬೇಕು ಎನ್ನುವಾಗ ಅಲ್ಲೊಬ್ಬ ಗರಿಗರಿಯಾದ ಬಿಳಿಯ ಪ್ಯಾಂಟು, ಶರಟು ಧರಿಸಿದ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದುದು ಕಂಡಿತು. ಅವರನ್ನು ದಾಟಿ ಹೋದ ಮೇಲೆ, “ಅವರು ಯಾರು ಎಂದು ನಿನಗೆ ಗೊತ್ತಾಯಿತಾ?” ಎಂದು ಕೇಳಿದ ಅಣ್ಣ. “ಇಲ್ಲ” ಎಂದು ತಲೆಯಾಡಿಸಿದೆ. “ಎಂ ರಾಮಚಂದ್ರ ಅಂತ, ಉದಯವಾಣಿಯಲ್ಲಿ ಬರೀತಾರಲ್ಲ, ಅವರೇ”, ಎಂದ. ನನ್ನಲ್ಲೇನೂ ಹೆಚ್ಚು ಕುತೂಹಲ ಮೂಡಲಿಲ್ಲ.
ಕಾರ್ಕಳ ಪೇಟೆಯಿಂದ ದೂರವೂ ಅಲ್ಲ, ಸಮೀಪವೂ ಅಲ್ಲ ಎಂಬ ಜಾಗದಲ್ಲಿತ್ತು ಭುವನೇಂದ್ರ ಕಾಲೇಜು. ಸ್ಥಾಪನೆಯಾದುದು 1960 ರಲ್ಲಿ. ಕಗ್ಗಲ್ಲಿನಿಂದ ಮಾಡಿದ ಮೂರಂತಸ್ತಿನ ಭವ್ಯ ಕಟ್ಟಡ, ಸುತ್ತೆಲ್ಲ ಹಸಿರು ಪರಿಸರ, ಪೂರ್ವಕ್ಕೆ ಸಹ್ಯಾದ್ರಿ ಶಿಖರ ಶ್ರೇಣಿ, ದಕ್ಷಿಣಕ್ಕೆ ಸಣ್ಣದೊಂದು ತೊರೆಯಾಚೆ ಧರ್ಮಸ್ಥಳದ ಗೊಮ್ಮಟೇಶ್ವರನನ್ನು ಕೊರೆದ ಮಂಗಳಪಾದೆ, ಪಶ್ಚಿಮಕ್ಕೆ ಐತಿಹಾಸಿಕ ಮಹತ್ವದ ರಾಮಸಮುದ್ರ, ಆನೆಕೆರೆ, ಚತುರ್ಮುಖ ಬಸದಿ ಮತ್ತು ಗುಮ್ಮಟ ಬೆಟ್ಟ, ಶೈಕ್ಷಣಿಕ ಚಟುವಟಿಕೆಗಳಿಗೆ ಹೇಳಿಮಾಡಿದಂತಹ ಪ್ರಶಾಂತ ಪರಿಸರದಲ್ಲಿತ್ತು. ದೂರದಿಂದ ಬರುವ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯ, ಎನ್ ಸಿ ಸಿ, ಎನ್ ಎಸ್ ಎಸ್, ಕ್ರೀಡಾ ಸೌಲಭ್ಯಗಳು, ಸಾವಿರ ಸಾವಿರ ಪುಸ್ತಕಗಳನ್ನು ಹೊಂದಿದ್ದ ಸುಸಜ್ಜಿತ ಗ್ರಂಥಾಲಯ, ಅತ್ಯಾಧುನಿಕ ಉಪಕರಣಗಳ ವಿಜ್ಞಾನ ಪ್ರಯೋಗಾಲಯಗಳು, ಸಾಹಿತ್ಯ ಸಂಘ, ಕಲಾ ಸಂಘ, ಯಕ್ಷಗಾನ ಕಲಿಕಾ ಕೇಂದ್ರ ಎಲ್ಲವೂ ಅಲ್ಲಿದ್ದವು. ಪ್ರಾಯಶಃ ಮಣಿಪಾಲ ಶಿಕ್ಷಣ ಅಕಾಡೆಮಿಯ ಕಾಲೇಜುಗಳ ಪೈಕಿ ಬಹುತೇಕ ಎಲ್ಲ ಅಂಶಗಳಲ್ಲಿ ಅತ್ಯುತ್ತಮ ಎನ್ನಬಹುದಾದ ಕಾಲೇಜು ಇದು.
ಕಾರ್ಕಳ ಆಯಕಟ್ಟಿನ ಜಾಗದಲ್ಲಿದ್ದುದರಿಂದ ಘಟ್ಟದ ಕೆಳಗಿನ ಬಜಗೋಳಿ, ಮೂಡಬಿದಿರೆ, ಮುಂಡ್ಕೂರು, ಬೈಲೂರು, ಮುದ್ರಾಡಿ, ಹೆಬ್ರಿ, ಮಾತ್ರವಲ್ಲ ಘಟ್ಟದ ಮೇಲಿನ ತೀರ್ಥಹಳ್ಳಿ, ಕಳಸ, ಚಿಕ್ಕಮಗಳೂರು ಮೊದಲಾದ ಕಡೆಗಳಿಂದಲೂ ಓದಲು ಇಲ್ಲಿಗೆ ಬರುತ್ತಿದ್ದರು. ಪ್ರಾಂಶುಪಾಲ ಪ್ರೊಫೆಸರ್ ಕೆ ದಾಮೋದರ ಕಿಣಿಯವರು ಎನ್ ಸಿ ಸಿ ಹಿನ್ನೆಲೆಯವರು. ಆದ್ದರಿಂದ ಶಿಸ್ತಿಗೆ ಮೊದಲ ಆದ್ಯತೆ. ಅವರು ಕಾಲೇಜು ಕಾರಿಡಾರ್ ನಲ್ಲಿ ಕಾಣಿಸಿಕೊಂಡರೆಂದರೆ ಮಕ್ಕಳು ಅಡಗಿ ಕೂರುತ್ತಿದ್ದರು. ಉದ್ದನೆಯ ಹಿಪ್ಪಿ ಕೂದಲು ಇತ್ತೆಂದರೆ, ಕಿಣಿಯವರು ಅಲ್ಲೇ ಹಿಡಿದು ನಿಲ್ಲಿಸಿ, ಕತ್ತರಿಸಿಕೊಂಡು ಬರಲು ಆದೇಶಿಸುತ್ತಿದ್ದರು. ಕಿಣಿಯವರು ʼವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿʼ (ಮನಸು ವಜ್ರದಷ್ಟು ಕಠೋರ ಆದರೆ ಹೂವಿಗಿಂತಲೂ ಮೃದು) ಎಂಬ ಮಾತಿಗೆ ಅನ್ವರ್ಥವಾದಂತಹ ವ್ಯಕ್ತಿತ್ವದವರು. ಈ ಬಗೆಗಿನ ನನ್ನದೇ ಅನುಭವವನ್ನು ಮುಂದೆ ಹೇಳುತ್ತೇನೆ.
ನಿನಗೆ ಸೀಟು ಕೊಡಲಾಗದು!
ಕಾಲೇಜಿನಲ್ಲಿ ಪ್ರವೇಶ ಕಾರ್ಯ ನಡೆಯುತ್ತಿತ್ತು. ಮೊದಲ ಪಿಯುಸಿ, ಮೊದಲ ಪದವಿ ಹೀಗೆ ಪ್ರವೇಶ ನಡೆಯುತ್ತಿದ್ದುದು. ಆದರೆ, ನನ್ನದು ಎರಡನೆ ವರ್ಷದ ಪಿಯುಸಿ ಪ್ರವೇಶ. ಪ್ರಾಂಶುಪಾಲರಲ್ಲಿಗೆ ಹೋಗಬಹುದು ಎಂದು ಅನುಮತಿ ಸಿಕ್ಕಿದಾಗ, ನಾನೂ ಅಣ್ಣನೂ ಒಳ ನಡೆದೆವು. ದ್ವಿತೀಯ ಪಿಯುಸಿಗೆ ಪ್ರವೇಶ ನೀಡುವುದಕ್ಕೆ ಅವಕಾಶ ಇಲ್ಲ ಎಂದರು. ನಾನು ಕೆಲ ವಾರ ಹಿಂದೆ ಬಂದು ಇಲ್ಲಿ ಬಂದು ವಿನಂತಿಸಿಕೊಂಡಾಗ ಪ್ರಾಂಶುಪಾಲರು ಒಪ್ಪಿಕೊಂಡಿದ್ದರು ಎಂದ ಅಣ್ಣ. ಆತ ಮಾತನಾಡಿದ್ದು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಕೆ ದಾಮೋದರ ಕಿಣಿಯವರ ಬಳಿ. ಆದರೆ ಇಂದು ಅವರ ಸ್ಥಾನದಲ್ಲಿ ಇನ್ ಚಾರ್ಜ್ ಆಗಿ ಕುಳಿತಿದ್ದುದು ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪಿ ಕೆ ಜಿ ನಾಯರ್ ಅವರು. ಹಾಗಾಗಿ ಈ ಗೊಂದಲ ಆದುದು. ಸರಕಾರಿ ನೌಕರನ ಮಗ ಆದುದರಿಂದ ವರ್ಗಾವಣೆ ಸಹಜ. ಹಾಗಾಗಿ ಸೀಟು ನಿರಾಕರಿಸುವಂತಿಲ್ಲ ಎನ್ನುವುದು ಅವರಿಗೆ ಮನದಟ್ಟಾಯಿತು. “ವರ್ಗಾವಣೆ ಸಂಬಂಧ ಅಧಿಕೃತ ಮಾಹಿತಿಪತ್ರ ತಂದರೆ ಸೀಟು ಕೊಡಬಹುದು” ಎಂದರು ನಾಯರ್. ಮನಸು ನಿರಾಳವಾಯಿತು. ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಪತ್ರ ಸಲ್ಲಿಸಿ ಕಾಲೇಜು ಸೇರಿಕೊಂಡೆ.
ಶಂಕ್ರಾಣದಲ್ಲಿ ಮೊದಲ ಪಿಯು ಓದುತ್ತಿದ್ದಾಗ ಚಡ್ಡಿ ತೊಡುತ್ತಿದ್ದೆ. ಈಗ 17 ವರ್ಷದ ದೊಡ್ಡವನಲ್ಲವೇ? ಹಾಗಾಗಿ ಮುಂಡು ಉಟ್ಟು ಕಾಲೇಜಿಗೆ ಹೋಗಲಾರಂಭಿಸಿದೆ. ಎರಡು ಜೊತೆ ಶರಟು, ಎರಡು ಮುಂಡು, ಒಂದು ಜೊತೆ ಸವೆದ ಚಪ್ಪಲಿ ಅಷ್ಟೇ ಇದ್ದುದು ನನ್ನ ಬಳಿ. ಜೋಡುರಸ್ತೆಯ ನನ್ನ ಮನೆಯಿಂದ ಸೈಕಲ್ ನಲ್ಲಿ ಕಾಲೇಜು ಪಯಣ ಆರಂಭವಾಯಿತು. ಮಳೆಗಾಲದಲ್ಲಿಯಂತೂ ಮುಂಡು ಉಟ್ಟು, ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಸೈಕಲ್ ಹ್ಯಾಂಡಲ್, ಪ್ಲಾಸ್ಟಿಕ್ ಸುತ್ತಿದ ಪುಸ್ತಕಗಳು ಕ್ಯಾರಿಯರ್ ನಲ್ಲಿ, ನನ್ನ ಸ್ಥಿತಿ ನೀವೇ ಊಹಿಸಿ.
ಅಗಿನ ಕಾರ್ಕಳ
45 ವರ್ಷಗಳ ಹಿಂದೆ ಆಗಿನ ಕಾಲೇಜು ಕಡೆಗಿನ ನನ್ನ ದಾರಿ ಹೇಗಿತ್ತು ಎಂದು ಹೇಳಿದರೆ ಈಗಣ ಕಾರ್ಕಳವನ್ನು ಹೋಲಿಸಿಕೊಂಡು ಬದಲಾವಣೆಯ ಪರಿಯನ್ನು ಅಂದಾಜಿಸುವುದು ನಿಮಗೆ ಸಾಧ್ಯವಾದೀತು. ಜೋಡುರಸ್ತೆಯಿಂದ ಫಾರೆಸ್ಟ್ ಗೇಟ್ ದಾಟಿ, ದುರ್ಗಾ ಶಾಲೆಯ ಮುಂಭಾಗ ತಲಪುತ್ತಲೇ ಎಡಕ್ಕೆ ಬೃಹದಾದ ಕಲ್ಲಿನ ಬೆಟ್ಟ. ಬಲಕ್ಕೆ ದುರ್ಗಾ ವಾಣಿಜ್ಯ ಶಾಲೆ (ಟೈಪ್ ರೈಟಿಂಗ್, ಶಾರ್ಟ್ ಹ್ಯಾಂಡ್ ಶಿಕ್ಷಣ). ಅಲ್ಲಿಂದ ಮುಂದೆ ಮುಖ್ಯ ರಸ್ತೆಯ ಎಡಕ್ಕೆ ಹೊಸದಾಗಿ ಆರಂಭವಾದ ಪುಟ್ಟದೊಂದು ನರ್ಸಿಂಗ್ ಹೋಮ್. ಆನಂತರ ಸಿಗುವುದು ಬಂಗ್ಲೆ ಗುಡ್ಡೆ. ಇಲ್ಲಿಗೆ ಟೋಲ್ ಗೇಟ್ ಎಂದೂ ಹೆಸರಿತ್ತಂತೆ. ಬಂಗ್ಲೆ ಗುಡ್ಡೆಯಿಂದ ಎಡಕ್ಕೊಂದು ಮಣ್ಣು ರಸ್ತೆ, ಅಲ್ಲಿ ಒಂದಷ್ಟು ಮನೆಗಳು. ಹಾಗೆಯೇ ಬಲಕ್ಕೊಂದು ಮಣ್ಣು ರಸ್ತೆ. ಈ ಮಣ್ಣುರಸ್ತೆಯಲ್ಲಿ ಕೊಂಚ ದೂರದಲ್ಲಿ ನ್ಯಾಯಬೆಲೆ ಅಂಗಡಿ, ಇನ್ನೂ ಮುಂದೆ ಹೋದರೆ ಕಾರ್ಕಳ ತಾಲೂಕು ಕಚೇರಿಗೆ ಒಳಹಾದಿ (ಇದೇ ರಸ್ತೆಯನ್ನು ಹೈವೇ ಆಗಿಸಿ ಈಗ ಕಾರ್ಕಳ ಬೈಪಾಸ್ ರಸ್ತೆ ಮಾಡಲಾಗಿದೆ. ಮೂಡಬಿದಿರೆಗೆ ಹೋಗಬೇಕಾದವರು ಈಗ ಕಾರ್ಕಳ ಪೇಟೆಯ ಮೂಲಕ ಹೋಗಬೇಕಾಗಿಲ್ಲ).

ಬಂಗ್ಲೆಗುಡ್ಡೆಯಿಂದ ನೇರ ಮುಂದಕ್ಕೆ ಹೋದರೆ ಎಡಕ್ಕೂ ಬಲಕ್ಕೂ ಅಲ್ಲೊಂದು ಇಲ್ಲೊಂದು ಮನೆಗಳು, ತೀರಾ ವಿರಳವಾಗಿ ಅಂಗಡಿಗಳು. ರಸ್ತೆ ಸಾಕಷ್ಟು ಅಗಲವಾಗಿ ಸುಸ್ಥಿತಿಯಲ್ಲಿತ್ತು. ಇನ್ನೂ ಮುಂದೆ ಚಲಿಸಿದರೆ ಬಲಕ್ಕೆ ಸಿಗುವುದು ಸನ್ಮಾನ್ ಟಾಕೀಸ್ ಯಾನೆ ತಟ್ಟಿ ಟಾಕೀಸ್. ಅದರ ನಂತರ ಸೈಕಲ್ ಶಾಪ್. ನನ್ನ ಸೈಕಲ್ ರಿಪೇರಿಗಳೆಲ್ಲ ಇಲ್ಲೇ. ಇನ್ನೂ ಮುಂದೆ ಬಲಗಡೆ ವಿಶಾಲವಾದ ಒಂದು ಮೈದಾನ. ಮುಖ್ಯ ರಸ್ತೆಯಲ್ಲಿ ಇನ್ನೂ ಮುಂದಕ್ಕೆ ಚಲಿಸಿದರೆ ಎಡಕ್ಕೊಂದು ರಸ್ತೆ ಮತ್ತು ಬಲಕ್ಕೊಂದು ರಸ್ತೆ. ಎಡದ ರಸ್ತೆ ಕಲ್ಲೊಟ್ಟೆಯ ಮೂಲಕ ಸುತ್ತು ಬಳಸಿ ಕಾರ್ಕಳ ಪೇಟೆಯನ್ನು ಸೇರುತ್ತದೆ. ಮುಖ್ಯ ರಸ್ತೆಯಲ್ಲಿ ತೊಂದರೆಯಾದಾಗ ಬಸ್‌ಗಳು ಸಂಚರಿಸುತ್ತಿದ್ದುದು ಇದೇ ರಸ್ತೆಯಲ್ಲಿ. ಬಲದ ರಸ್ತೆ ತಾಲೂಕು ಆಫೀಸ್ ಮತ್ತು ಹೊಸದಾಗಿ ನಿರ್ಮಾಣವಾದ ಮಸೀದಿಯ ಮೂಲಕ ಮುಂದೆ ನಕ್ರೆಗೆ ಹೋಗುತ್ತದೆ. ನಕ್ರೆಯಲ್ಲೂ ಎಲ್ಲಿ ನೋಡಿದರೂ ಕಗ್ಗಲ್ಲಿನ ಬೆಟ್ಟಗಳು. ಮುಖ್ಯ ರಸ್ತೆಯಲ್ಲಿ ಇನ್ನೂ ಮುಂದೆ ಸಾಗಿದರೆ ಎಡದಲ್ಲಿ ಬಂಡೀ ಮಠ ಮೈದಾನ. ಈ ಮೈದಾನಕ್ಕೆ ಕಾರ್ಕಳ ಮುಖ್ಯ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಯತ್ನಿಸಿ ವ್ಯಾಪಾರಿಗಳ ಪ್ರತಿಭಟನೆಯಿಂದ ಆಗ ಪ್ರಸ್ತಾವ ನೆನೆಗುದಿಗೆ ಬಿದ್ದಿತ್ತು. ಬಂಡೀ ಮಠದ ಬಲದಿಂದಲೂ ಒಂದು ರಸ್ತೆ ನಕ್ರೆಗೆ ಹೋಗುತ್ತದೆ. ಈ ರಸ್ತೆಗೆ ತಾಗಿಕೊಂಡಂತೆಯೇ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರ ಮನೆ ಇತ್ತು.
ಇನ್ನೂ ಮುಂದಕ್ಕೆ ಹೋದರೆ ಸಾಲ್ಮರ. ಎಡದಲ್ಲೊಂದು ಮನೆ ಕಮ್ ಆಯುರ್ವೇದ ಅಂಗಡಿ. ಉದಯವಾಣಿ ಪತ್ರಕರ್ತ, ಯಕ್ಷಗಾನ ಪ್ರಸಂಗ ಕರ್ತ ರಾಘವ ನಂಬಿಯಾರ್ ಇದ್ದುದು ಇದೇ ಮನೆಯಲ್ಲಿ. ಸಾಲ್ಮರವನ್ನು ದಾಟಿ ಕಾರ್ಕಳ ಪೇಟೆಯನ್ನು ಪ್ರವೇಶಿಸುವುದಕ್ಕೆ ಮುನ್ನ ಬಲಕ್ಕೆ ಒಂದು ಮಸೀದಿ. ಇದನ್ನು ಸವರಿಕೊಂಡೇ ಹೋಗುವ ರಸ್ತೆ ಮುಂದೆ ಅತ್ತೂರಿಗೆ ಹೋಗುತ್ತದೆ. ಅತ್ತೂರು ಇಗರ್ಜಿ (ಮಂಗಳೂರಿನವರು ಇದನ್ನು ದೂಪದಕಟ್ಟೆ ಎನ್ನುತ್ತಾರೆ) ಹಲವು ನೂರು ವರ್ಷಗಳ ಹಿಂದಿನದಾಗಿದ್ದು ಇಲ್ಲಿನ ಸಾಂತ್ ಮಾರಿ ಊರಿಗೆ ಬಹುದೊಡ್ಡ ಹಬ್ಬ. ಅದರಲ್ಲಿ ಎಲ್ಲಾ ಧರ್ಮದವರೂ ಭಾಗವಹಿಸುತ್ತಿದ್ದರು.
ಮತ್ತೆ ಮುಖ್ಯ ರಸ್ತೆಯಲ್ಲಿ ಮುಂದುವರಿದರೆ ರಸ್ತೆ ಇಕ್ಕಟ್ಟಾಗುತ್ತಾ ಹೋಗುತ್ತದೆ. ಜನ, ಮನೆ, ವಾಹನ ನಿಬಿಡತೆ ಹೆಚ್ಚುತ್ತಾ ಹೋಗುತ್ತದೆ. ಹಳೆಯ ಕಾಲದ ಪೇಟೆಯಾದುದರಿಂದ ಸುಧಾರಣೆಗೆ ಅವಕಾಶವೂ ಕಡಿಮೆ. ಇಲ್ಲೇ ಬಲ ಭಾಗದಲ್ಲಿ ಒಂದು ಹಳೆಯ ಕಟ್ಟಡ ಇದೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಕಾರ್ಯಾಚರಿಸುತ್ತಿತ್ತು. ಇದರ ಪಕ್ಕದಲ್ಲಿ ಒಂದು ರಸ್ತೆ ಬಲಕ್ಕೆ ಹೋಗುತ್ತದೆ. ಅದರ ತುದಿಯಲ್ಲಿರುವುದೇ ಗಾಂಧಿ ಮೈದಾನ. ಬಹುತೇಕ ರಾಜಕೀಯ ಸಭೆಗಳು ನಡೆಯುತ್ತಿದ್ದುದು ಇಲ್ಲಿಯೇ. ದೇವರಾಜ ಅರಸ್, ಬೂಟಾ ಸಿಂಗ್ ಮೊದಲಾದವರನ್ನು ನಾನು ಇಲ್ಲಿ ನೋಡಿದ್ದೆ. ಇನ್ನು ಕೆಲವು ರಾಜಕೀಯ ಸಭೆಗಳು ನಡೆಯುತ್ತಿದ್ದುದು ಕಾರ್ಕಳ ಮಾರ್ಕೆಟ್ ಹೊರವಲಯದ ಗುದ್ದಲ ಬಾಕ್ಯಾರ್ ಮೈದಾನದಲ್ಲಿ. ಅಲ್ಲಿ ಸುಶ್ಮಾ ಸ್ವರಾಜ್ ಭಾಷಣ ನಾನು ಕೇಳಿದ್ದೆ.
ಮುಖ್ಯ ರಸ್ತೆಯಿಂದ ಇನ್ನೂ ಮುಂದುವರಿದರೆ ಬಲಕ್ಕೆ ಕಾರ್ಕಳ ವೆಂಕಟ್ರಮಣ ದೇವಸ್ಥಾನ. ಜಿಎಸ್ ಬಿ ಸಮುದಾಯವರ ಬಹಳ ಮುಖ್ಯ ದೇವಸ್ಥಾನವಿದು. ಇಲ್ಲಿ ವಾರ ವಾರವೂ ಯಕ್ಷಗಾನ ತಾಳಮದ್ದಲೆ ನಡೆಯುತ್ತಿತ್ತು. ಇನ್ನೂ ಮುಂದಕ್ಕೆ ಎಡದಲ್ಲಿ ಇದ್ದುದು ಜೈಹಿಂದ್ ಟಾಕೀಸ್. ಇದು ಆಗ ಕಾರ್ಕಳದ ಒಂದೇ ಒಂದು ಸುಸಜ್ಜಿತ ಸಿನಿಮಾ ಟಾಕೀಸ್. ಇನ್ನೂ ಮುಂದಕ್ಕೆ ಮಾರ್ಕೆಟ್ ರೋಡ್ ಜಂಕ್ಷನ್. ಎಡದ ದಾರಿ ಮಾರ್ಕೆಟ್ ಗೆ, ಬಲದ ರಸ್ತೆ ಆನೆಕೆರೆಯ ಮೂಲಕ ಮಂಗಳೂರಿಗೆ. ಮುಖ್ಯ ರಸ್ತೆಯಲ್ಲಿ ಮುಂದೆ ಸಿಗುವುದು ಕಾರ್ಕಳದ ಅತ್ಯಂತ ಅವ್ಯವಸ್ಥಿತ ಬಸ್ ನಿಲ್ದಾಣ. ಇಲ್ಲಿ ಬಸ್ ಹಿಂದಕ್ಕೆ ಚಲಿಸುವಾಗ ಅದರ ಚಕ್ರಕ್ಕೆ ಸಿಕ್ಕಿ ಸತ್ತವರು ಅನೇಕ. ಬಸ್ ನಿಲ್ದಾಣ ದಾಟಿದರೆ ಬಲದಲ್ಲೊಂದು ಬ್ರಿಟಿಷ್ ಕಾಲದ ಕಟ್ಟಡ. ಇದು ಮನೆಗಾರರ ಆಫೀಸು. ಈ ಬಲದ ರಸ್ತೆಯಲ್ಲಿ ಹೋದರೆ ಕಾರ್ಕಳ ಸರಕಾರಿ ಆಸ್ಪತ್ರೆ, ಬೋರ್ಡ್ ಹೈಸ್ಕೂಲ್ ಸಿಗುತ್ತದೆ. ಎಡದ ರಸ್ತೆ ನಾನು ಆಗಲೇ ಹೇಳಿದ ಕಲ್ಲೊಟ್ಟೆಯಿಂದ ಬರುವ ರಸ್ತೆ. ಮುಖ್ಯ ರಸ್ತೆಯಲ್ಲಿ ಮುಂದಕ್ಕೆ ಹೋದರೆ ಎಡಕ್ಕೆ ಸದಾನಂದ ಕಾಮತರ ದ್ವಾರಕಾ ಹೋಟೆಲ್ (ಆಗಿನ ಏಕೈಕ ವಸತಿ ಸಹಿತ ಹೋಟೆಲ್). ಬಲಕ್ಕೆ ವೇಣುಗೋಪಾಲ ದೇವಸ್ಥಾನ.
ಈ ಮುಖ್ಯರಸ್ತೆಯ ಕೊನೆಯಲ್ಲಿ ಸಿಗುವುದೇ ಅನಂತಶಯನ ದೇವಸ್ಥಾನ. ಆಗ ರಾಜಕೀಯ ಪಕ್ಷಗಳ ಜೈಲ್ ಭರೋ ಆಂದೋಲನ ಶುರುವಾಗುತ್ತಿದ್ದುದು ಇಲ್ಲಿಂದ. ಇಲ್ಲಿನ ಬಲದ ರಸ್ತೆ ಚತುರ್ಮುಖ ಬಸದಿ, ಗುಮ್ಮಟ ಬೆಟ್ಟ ತಲಪಿಸಿ ಮತ್ತೆ ಬಲಕ್ಕೆ ತಿರುಗಿ ಆನೆಕೆರೆಯ ಮೂಲಕ ಮಂಗಳೂರು ರಸ್ತೆಯನ್ನು ಸೇರುತ್ತದೆ. ಎಡದ ರಸ್ತೆ ತೆಳ್ಳಾರು ಮೂಲಕ ದುರ್ಗವನ್ನು ತಲಪಿಸುತ್ತದೆ. ತೆಳ್ಳಾರು ರಸ್ತೆಯಲ್ಲಿ ಅಂದಾಜು ಹತ್ತು ಮೀಟರ್ ಸಾಗಿ ಬಲಕ್ಕೆ ತಿರುಗುವ ರಸ್ತೆಯಲ್ಲಿ ಹೋದರೆ ಅದು ಕಾರ್ಕಳದ ನ್ಯಾಯಾಲಯದ ಮೂಲಕ ಭುವನೇಂದ್ರ ಕಾಲೇಜನ್ನು ತಲಪಿಸುತ್ತದೆ. ಮುಂದಿನ ನಾಲ್ಕು ವರ್ಷಗಳ ಕಾಲ ಬಹುತೇಕ ನಿತ್ಯವೂ ನಾನು ಸೈಕಲ್ ನಲ್ಲಿ ಸಾಗುತ್ತಿದ್ದ ದಾರಿ ಇದಾಯಿತು.
ಕಾಲೇಜು ಆರಂಭವಾಯಿತು
ಕಾಲೇಜು ಆರಂಭವಾಯಿತು. ಪಿಯು ಓದಿ ಕೆಲವರು ಮುಂದೆ ಎಂಜಿನೀಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಹಾದಿ ಹಿಡಿಯವವರಿದ್ದರು. ಹಾಗಾಗಿ ಪಿಯು ವಿಜ್ಞಾನ ವಿಭಾಗಕ್ಕೆ ಭಾರೀ ಡಿಮ್ಯಾಂಡು. ಎಷ್ಟು ವಿದ್ಯಾರ್ಥಿಗಳಿದ್ದರೆಂದರೆ ಎ, ಬಿ ಎಂದೆಲ್ಲ ವಿಭಾಗಗಳಿದ್ದವು. ಅಷ್ಟಾಗಿಯೂ ಒಂದು ವಿಭಾಗದಲ್ಲಿ ಸುಮಾರು 80 ವಿದ್ಯಾರ್ಥಿಗಳು! ದ್ವಿತೀಯ ಪಿಯುಸಿಗೆ ನೇರವಾಗಿ ಸೇರಿದವನಲ್ಲವೇ?, ಹಾಗಾಗಿ ಅಲ್ಲಿದ್ದ ಎಲ್ಲರೂ ಅಪರಿಚಿತರು. ನನಗೆ ಕೊನೆಯ ಡೆಸ್ಕ್ ಸಿಕ್ಕಿತು. ಪಕ್ಕದಲ್ಲಿ ಕುಳಿತಿದ್ದ ಸತೀಶ ಕಾಮತ್ ನಿಧಾನಕ್ಕೆ ಗೆಳೆಯನಾಗುತ್ತಾ ಹೋದ. ಆತನ ತಂದೆಗೆ ಅನಂತಶಯನ ದೇವಸ್ಥಾನ ಬಳಿಯಿಂದ ಕಾಲೇಜು ರಸ್ತೆ ಶುರುವಾಗುವಲ್ಲಿ ಒಂದು ದಿನಸಿ ಅಂಗಡಿ ಇತ್ತು. ಕಾಲೇಜು ಇಲ್ಲದಾಗ ಅಲ್ಲಿ ಆತ ಕೆಲಸ ಮಾಡುತ್ತಿದ್ದ.
ಕಾಲೇಜಿನಲ್ಲಿ ಭಾರೀ ಶಿಸ್ತು ಎಂದೆನಲ್ಲ, ತರಗತಿ ಶುರುವಾಗುವುದಕ್ಕೆ ಮೊದಲು ಒಂದು ಬೆಲ್ ಹೊಡೆದಾಗ ವಿದ್ಯಾರ್ಥಿಗಳೆಲ್ಲ ತರಗತಿಯೊಳಗಿರಬೇಕು. ಆಗ ಸಂಬಂಧ ಪಟ್ಟ ಉಪನ್ಯಾಸಕರು ತರಗತಿಯ ಹೊರಗಡೆ ಬಾಗಿಲ ಪಕ್ಕದಲ್ಲಿ ಬಂದು ನಿಂತಿರುತ್ತಾರೆ. ಮುಂದಿನ ಬೆಲ್ ಹೊಡೆದಾಗ ಅವರು ತರಗತಿಯನ್ನು ಪ್ರವೇಶಿಸುತ್ತಾರೆ. ಅಲ್ಲಿಂದ ಪಾಠ ಶುರು.
ಇದನ್ನೂ ಓದಿ- http://ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -17 |ಮರಳಿ ಕಾರ್ಕಳಕ್ಕೆ https://kannadaplanet.com/thats-a-big-story-autobiography-series-17/
ನಮಗೆ ರಾಮಚಂದ್ರ ಭಟ್ (ಹಿಂದಿ), ಸೀತಾರಾಮ ಭಟ್ (ಇಂಗ್ಲಿಷ್), ಕೆ ಕೆ ಪೈ (ಭೌತಶಾಸ್ತ್ರ), ಶಾಮ ಭಟ್ (ರಸಾಯನ ಶಾಸ್ತ್ರ), ಪದ್ಮನಾಭ ಗೌಡ (ಗಣಿತ), ಗೋವಿಂದ ಪ್ರಭು (ಸಸ್ಯಶಾಸ್ತ್ರ), ವಾಮನ ಕಾಮತ್ (ಪ್ರಾಣಿಶಾಸ್ತ್ರ) ಮೊದಲಾದವರು ಬೋಧಿಸುತ್ತಿದ್ದರು. ಸೀತಾರಾಮ ಭಟ್ಟರ ಇಂಗ್ಲಿಷ್ ಉಚ್ಚಾರಣೆ ಹೇಗಿತ್ತೆಂದರೆ, ಇಂಗ್ಲೆಂಡ್ ನವರಿಗೂ ಅದು ಅರ್ಥವಾಗಲಿಕ್ಕಿಲ್ಲ. ನಾನು ಇಂಗ್ಲಿಷನ್ನೂ ಕನ್ನಡದಲ್ಲಿ ಹೇಳುವ ಶಾಲೆಯಿಂದ ಬಂದವ. ಹಾಗಾಗಿ ಅವರ ಇಂಗ್ಲಿಷ್ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ಅಲ್ಲದೆ, ಬಹಳ ದರ್ಪದ ಮನುಷ್ಯ. ಇದೇ ಕಾರಣದಿಂದ, ಅವರನ್ನು ಕೆರಳಿಸಲೆಂದೇ ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ವಿಚಿತ್ರ ಸದ್ದುಗಳನ್ನೆಲ್ಲ ಮಾಡುತ್ತಿದ್ದರು. ಇದನ್ನೂ ತಾಳ್ಮೆಯಿಂದ ನಿಭಾಯಿಸುವ ಬದಲು ಭಟ್ಟರು ಇನ್ನಷ್ಟು ಕೆರಳಿ ʼನ..ನ..ನ..ನಾಯಿಗೆ ಹುಟ್ಟಿದವರು.ʼ, ʼಇಫ್ ಯು ಆರ್ ಸನ್ ಆಫ್ ಯುವರ್ ಓನ್ ಫಾದರ್, ಸ್ಟಾಂಡ್ ಅಪ್ ಅಂಡ್ ಶೌಟ್ ಅಗೇನ್ʼ ಎಂದೆಲ್ಲ ಬಯ್ದುಬಿಡುತ್ತಿದ್ದರು. ವಿದ್ಯಾರ್ಥಿಗಳು ಅವರನ್ನು ಹೊಸ ಹೊಸ ರೀತಿಯಲ್ಲಿ ಇನ್ನಷ್ಟು ಕೆರಳಿಸುತ್ತಿದ್ದರು. ಒಂದು ದಿನ ಅವರು ಬರುವ ಮೊದಲು ಕೆಲ ವಿದ್ಯಾರ್ಥಿಗಳು ಬೋರ್ಡ್ ನ ಮೇಲೆ ʼಡೌನ್ ಡೌನ್ ಎಸ್ ಟಿ ಭಟ್ʼ ಎಂದು ಬರೆದರು. ತರಗತಿಗೆ ಬಂದ ಭಟ್ಟರಿಗೆ ಸಿಟ್ಟು ಬಂದರೂ ಅದನ್ನು ತೋರಿಸಿಕೊಳ್ಳದೆ ʼದಿಸ್ ಈಸ್ ಇನ್ ಕರೆಕ್ಟ್, ಇಟ್ ಶುಡ್ ಬಿ ಡೌನ್ ವಿದ್ ಎಸ್ ಟಿ ಭಟ್ʼ ಎಂದು ಸರಿಪಡಿಸಿದರು. ಹೀಗೆ ವಿದ್ಯಾರ್ಥಿಗಳು ಮತ್ತು ಎಸ್ ಟಿ ಭಟ್ಟರ ಕಣ್ಣಾಮುಚ್ಚಾಲೆ ಆಟ ಇಡೀ ವರ್ಷ ಮುಂದುವರಿಯಿತು.
ಗಣಿತ ಬೋಧಿಸುತ್ತಿದ್ದುದು ಪದ್ಮನಾಭ ಗೌಡರು. 28ರ ನವಯುವಕ. ಗರಿ ಗರಿ ಇಸ್ತ್ರಿಯ ಅಚ್ಚುಕಟ್ಟಾದ ಉಡುಗೆ, ಕತ್ತಿಗೆ ಟೈ, ಗಡುಸಾದ ದನಿ. ಕರಿಹಲಗೆಯ ಮೇಲೆ ಅವರು ಬರೆದರೆಂದರೆ ಅದೊಂದು ಕಲಾಕೃತಿಯಂತೆ. ಅಷ್ಟು ಸುಂದರ ಅಕ್ಷರ. ಇಂಗ್ಲಿಷ್ ನ ಟಿ ಅಕ್ಷರದ ಅಡ್ಡಗೆರೆಯನ್ನೇ ಕೆಳಕ್ಕೆ ಬಾಗಿಸಿ ಅವರು ಟಿಐ ಎಂದು ಬರೆಯುತ್ತಿದ್ದರು. ಈಗಲೂ ನಾನು ಟಿಐಯನ್ನು ಬರೆಯುವುದು ಹಾಗೆಯೇ ಮತ್ತು ಅದನ್ನು ನಾನು ಕಲಿತುದು ಅವರಿಂದ. ಗೌಡರಿಗೆ ಪಾಠ ಮಾಡುವ ಕಲೆ ಸಿದ್ದಿಸಿತ್ತು. ಹಾಗಾಗಿ ಅವರ ಪ್ರತಿಯೊಂದು ಪಾಠವೂ ಚೆನ್ನಾಗಿ ಅರ್ಥವಾಗುತ್ತಿತ್ತು. ಇದೇ ಕಾರಣಕ್ಕೆ ಅವರ ಮೇಲಿನ ಗೌರವವೂ ಹೆಚ್ಚಿತು.
ಒಂದು ದಿನ ಇನ್ನೇನು ತರಗತಿ ಆರಂಭವಾಗುವುದಕ್ಕೆ ಮೊದಲು, ವರಾಂಡದಲ್ಲಿ ವಿದ್ಯಾರ್ಥಿಗಳು ಪಾಠ ವಿಷಯಕ್ಕೆ ಅನ್ವಯವಾಗುವಂತೆ ಕೊಠಡಿಗಳನ್ನು ಬದಲಾಯಿಸಲೆಂದು ಗುಂಪು ಗುಂಪಾಗಿ ನಡೆದು ಹೋಗುತ್ತಿದ್ದರು. ನಮ್ಮ ಬೆಂಚು ಕಿಟಕಿಯ ಬದಿಯಲ್ಲಿತ್ತು. ಪಕ್ಕದಲ್ಲಿದ್ದ ಸಹಪಾಠಿ ಗೆಳೆಯ ಸತೀಶ್ ಕಾಮತ್ ಒಮ್ಮೆಲೇ ಕಿಟಕಿಯ ಹೊರಗಡೆ ಬೆಟ್ಟು ಮಾಡಿ “ಅಗೋ ಅಗೋ ಅದು ಗೌಡರ ತಂಗಿ” ಎಂದ. ನಾನು ಅತ್ತ ಕಣ್ಣು ಹಾಯಿಸಿದೆ. ಗಿಡ್ಡನೆಯ ಅಂಗಿ, ನೆಲ ಗುಡಿಸುವಂತಹ ಉದ್ದನೆಯ ಲಂಗ ತೊಟ್ಟು, ಪುಸ್ತಕ ಎದೆಗವಚಿ ಹಿಡಿದು, ನೆಲ ನೋಡುತ್ತ ನಡೆಯುವ ಕುಳ್ಳಗಿನ ಹುಡುಗಿ ಕಣ್ಣಿಗೆ ಬಿದ್ದಳು. ಪದ್ಮನಾಭ ಗೌಡರಿಗೆ ಒಬ್ಬಳು ತಂಗಿ ಇದ್ದಾಳೆ ಮತ್ತು ಆಕೆ ಇಲ್ಲೇ ಓದುತ್ತಿದ್ದಾಳೆ ಎಂಬುದು ತಿಳಿದುದು ಅದೇ ಮೊದಲು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- “ವಿಶ್ವ ರಂಗಭೂಮಿ” ದಿನದ ರಂಗಯಾನ


