ಅದೊಂದು ದೊಡ್ಡ ಕಥೆ, ಆತ್ಮಕಥನ ಸರಣಿ- 15 -ಎಸ್‌ ಎಸ್‌ ಎಲ್‌ ಸಿ ಮುಗಿಯಿತು

ಶಂಕರನಾರಾಯಣದ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಆ ಕಾಲಕ್ಕೆ, ಬುದ್ಧಿವಂತ, ಅನುಭವಿ ಮತ್ತು ಬದ್ಧತೆಯುಳ್ಳ ಅನೇಕ ಶಿಕ್ಷಕರಿದ್ದರು. ಪ್ರಾಂಶುಪಾಲ ಪಿ ಎಸ್‌ ಕಾರಂತರು ಸಿಟ್ಟಿನ ಮನುಷ್ಯ, ಶಿಸ್ತಿನ ಮನುಷ್ಯ, ದಕ್ಷ ಆಡಳಿತಗಾರ. ಪಿಯು ವಿದ್ಯಾರ್ಥಿಗಳಿಗೆ ಅವರು ಜೀವಶಾಸ್ತ್ರ ಪಾಠ ಮಾಡುತ್ತಿದ್ದರು (ಮುಂದೆ ಪದೋನ್ನತಿ ಪಡೆದು ವೃತ್ತಿ ಶಿಕ್ಷಣದ ಜಿಲ್ಲಾ ಡಿಡಿಪಿಐ ಆಗಿಯೂ ಕಾರ್ಯ ನಿರ್ವಹಿಸಿದರು).

ಹಂದೆ ಮಾಸ್ತರರು ಮಾತನಾಡುತ್ತಿದ್ದುದು ಕಡಿಮೆ. ಆದರೆ ಗಣಿತವಿರಲೀ, ಇಂಗ್ಲಿಷ್‌ ಇರಲೀ, ವಿದ್ಯಾರ್ಥಿಗಳ ಮನಸಿನಾಳಕ್ಕೆ ಇಳಿಯುವ ಹಾಗೆ ಪಾಠ ಮಾಡುತ್ತಿದ್ದರು. ನಾವು ಅನೇಕರು ಎಸ್‌ ಎಸ್‌ ಎಲ್‌ ಸಿ ಯಲ್ಲಿ ಇಂಗ್ಲಿಷ್‌ ನಲ್ಲಿ ತೇರ್ಗಡೆಯಾಗಿದ್ದರೆ ಮತ್ತು ಕೆಲವರು ಉತ್ತಮ ಅಂಕ ಗಳಿಸಿದ್ದರೆ ಅದಕ್ಕೆ ಹಂದೆ ಮಾಸ್ತರರ ಪಾಠದ ರೀತಿ ಕಾರಣ.

ಮಧ್ಯಸ್ಥರು ಸರಳ ಮನುಷ್ಯ. ಆರಂಭದ ದಿನಗಳಲ್ಲಿ ವೇಸ್ಟಿ ಉಟ್ಟೇ ಶಾಲೆಗೆ ಬರುತ್ತಿದ್ದರು. ಹೈಸ್ಕೂಲ್‌ ವಿಭಾಗದಲ್ಲಿ ಅವರು ಗಣಿತ ಬೋಧಿಸುತ್ತಿದ್ದರು. ನಮಗೆ ಗಣಿತದ ಕೂಡಿಸು, ಕಳೆ ಗೊತ್ತಿತ್ತು. ಆದರೆ, ಈ ಪ್ಲಸ್‌ ಮತ್ತು ಮೈನಸ್‌ ಚಿಹ್ನೆಗಳು ಮತ್ತು ಅವುಗಳ ಮೂಲಕದ ಗಣಿತದ ಕ್ರಿಯೆಗಳು ಸದಾ ಒಂದು ದೊಡ್ಡ ತಲೆ ನೋವು. ಪ್ಲಸ್‌ ನಿಂದ ಪ್ಲಸ್‌ ಗೆ ಗುಣಿಸುವುದು, ಮೈನಸ್‌ ನಿಂದ ಮೈನಸ್‌ ಗೆ ಗುಣಿಸುವುದು ಎಂದರೆ ಏನರ್ಥ? ʼಪ್ಲಸ್‌ ಅಂದರೆ ನಿಮ್ಮ ಕಿಸೆಗೆ ಬರುವ ಹಣ, ಆದಾಯ, ಮೈನಸ್‌ ಅಂದರೆ ನಿಮ್ಮ ಕಿಸೆಯಿಂದ ಹೋಗುವ ಹಣʼ ಎಂದು ಮಧ್ಯಸ್ಥರು ಆರಂಭದಲ್ಲಿಯೇ ಕಬ್ಬಿಣದ ಕಡಲೆಯನ್ನು ಮಿದುವಾದ ಹುರಿಗಡಲೆಯಾಗಿಸಿ ನಮಗೆ ಅರ್ಥ ಮಾಡಿಸಿದರು. ಗಣಿತವನ್ನು ಬೋಧಿಸುವ ಅವರ ಇಂತಹ ವಿನೂತನ ವಿಧಾನದಿಂದಾಗಿಯೇ ನಾವು ಗಣಿತವನ್ನು ಪ್ರೀತಿಸುವಂತಾಯಿತು. ಪಿಯು ವಿಭಾಗದಲ್ಲಿಯೂ ಅವರು ಭೌತಶಾಸ್ತ್ರವನ್ನು ಇದೇ ರೀತಿಯಲ್ಲಿ ಹೇಳಿಕೊಡುತ್ತಿದ್ದರು.

ಸುಬ್ರಹ್ಮಣ್ಯ ಜೋಯಿಸ್‌ ಮಾಸ್ತರರು ವ್ಯಕ್ತಿಯಾಗಿ ಒಳ್ಳೆಯವರು. ಆದರೆ ಬೋಧಿಸುವ ವಿಧಾನ ಅಷ್ಟೊಂದು ಚೆನ್ನಾಗಿರಲಿಲ್ಲ. ಪಾಠ ಹೇಳುವಾಗ ಅವರಿಗೇ ಕೆಲವು ಗೊಂದಲಗಳಾಗುತ್ತಿದ್ದವು. ನಾವು ಮುಂದೆ ಎಸ್‌ ಎಸ್‌ ಎಲ್‌ ಸಿ ಗೆ ಪರೀಕ್ಷೆ ಬರೆಯುವ ವಾರಕಾಲ ಕುಂದಾಪುರದ ಹೊಟೇಲೊಂದರಲ್ಲಿ ತಂಗುತ್ತಿದ್ದಾಗ, ಅವರು ರಜಾ ದಿನಗಳಲ್ಲಿಯೂ ಅಲ್ಲಿಗೇ ಬಂದು ನಮ್ಮನ್ನು ಪರೀಕ್ಷೆಗೆ ಸಿದ್ಧಗೊಳಿಸುತ್ತಿದ್ದರು.

ಒಂಭತ್ತನೇ ತರಗತಿಯಲ್ಲಿ ನಮಗೆ ಠಾಕೂರ್‌ ಮಾಸ್ತರರು ಇಂಗ್ಲಿಷ್‌ ಬೋಧಿಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ವಿದ್ಯಾರ್ಥಿಗಳನ್ನೇ ಅವರು ತಮ್ಮ ಮಕ್ಕಳಂತೆ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರು.

ಅಂದಾಜು ಒಂದು ವರ್ಷಗಳ ಕಾಲ ನಮಗೆ ಪಾಠ ಹೇಳಲು ಜನಾರ್ದನ ಎಂಬವರೊಬ್ಬರು ಬಂದರು (ಮರವಂತೆಯ ಪ್ರದೇಶದವರೆಂದು ಕಾಣುತ್ತದೆ. ಮುಂದೆ ಸಾಕ್ಷರತಾ ಆಂದೋಲನದಲ್ಲಿಯೂ ಕೆಲಸ ಮಾಡಿದರು, ಜನಾರ್ದನ ಎಂಬ ಹೆಸರಿನಲ್ಲಿ ಉದಯವಾಣಿ ಪತ್ರಿಕೆಗೆ ಬೋಧನಾ ವಿಚಾರಗಳಲ್ಲಿ ಲೇಖನ ಬರೆಯುತ್ತಿದ್ದರು?). ತುಂಬಾ ಸೃಜನಶೀಲ ವ್ಯಕ್ತಿತ್ವದ ಜನಾರ್ದನರು ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸುತ್ತಿದ್ದ ರೀತಿ, ಮನದಟ್ಟು ಆಗುವಂತೆ ಪಾಠ ಮಾಡುತ್ತಿದ್ದ ವೈಖರಿ, ಕಲಿಕೆಯ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದುದು ಮೆಚ್ಚುವಂಥದ್ದು. ಪಾಠ ಚಟುವಟಿಕೆಯ ಆಚೆ ಅವರು ನಮ್ಮನ್ನು ಅನೇಕ ಸೃಜನಶೀಲ ಚಟುವಟಿಕೆಗಳಿಗೆ ತೆರೆಯುತ್ತಿದ್ದರು. ವಾರ್ಷಿಕೋತ್ಸವ ಸಂದರ್ಭದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಆನೆಗೆ ಬಾಲ ಬರೆಯುವುದು, ಹೀಗೆ ಅನೇಕ ವಿಶಿಷ್ಟ ಚಟುವಟಿಕೆಗಳಲ್ಲಿ ಅವರು ನಮ್ಮನ್ನು ತೊಡಗಿಸುತ್ತಿದ್ದರು. ಕೈ ಬರೆಹದ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ನಾನು ಆಗಲೇ ಕಪ್ಪು ಶಾಯಿಯಲ್ಲಿ ಬರೆಯತ್ತಿದ್ದೆ. ಈ ಕಾರಣವೋ ಅಥವಾ ನನ್ನ ಕೈಬರೆಹ ಮುದ್ದಾಗಿರುತ್ತಿತ್ತೋ, ಪ್ರತಿ ಭಾರಿಯೂ ಕೈ ಬರೆಹ ಸ್ಪರ್ಧೆಯಲ್ಲಿ ಬಹುಮಾನ ನನಗೇ ಬರುತ್ತಿತ್ತು. ಮುಂದೆ ಜನಾರ್ದನರು ಬೇಗನೇ ಉಪ್ಪುಂದಕ್ಕೆ ವರ್ಗವಾದಾಗಲಂತೂ ನಾವು ಕಳಕೊಂಡದ್ದು ಬಹಳ.

ಶ್ಯಾಮ ಭಟ್ಟರು ಸುಳ್ಯದ ಕಡೆಯವರು. ಶಿಕ್ಷಕ ಸಂಘದ ನೇತಾರನಾಗಿ ಸರಕಾರದ ಕೆಂಗಣ್ಣಿಗೆ ಬಿದ್ದು ಆಗಾಗ ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿದ್ದವರು. ಇವರು ಆರ್‌ ಎಸ್‌ ಎಸ್‌ ಹಿನ್ನೆಲೆಯವರು, ತುರ್ತು ಪರಿಸ್ಥಿತಿ ಕಾಲದಲ್ಲಿ ಗುಪ್ತವಾಗಿ ಸರಕಾರ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೇನೆ.

ಕನ್ನಡ ಕಲಿಕೆಯಿಂದ ವಂಚಿತನಾದೆ!

ನಾನು ಎಂಟನೆಯ ತರಗತಿಗೆ ಸೇರುವ ಆ ಕಾಲಕ್ಕೆ ಅಲ್ಲಿ ಸಂಸ್ಕೃತ ಇರಲಿಲ್ಲ. ಆದರೆ, ಮುಂದೆ ಸಂಸ್ಕೃತ ತರಗತಿ ಶುರು ಮಾಡುತ್ತಾರೆ ಎಂದಾಯಿತು. ವಾದಿರಾಜ ಭಟ್ಟರು ಸಂಸ್ಕೃತ ಪಂಡಿತರಾಗಿದ್ದರು. ಶಿಕ್ಷಕರಿರ ಬೇಕಾದರೆ ವಿದ್ಯಾರ್ಥಿಗಳು ಇರಬೇಕಲ್ಲವೇ? ನಮ್ಮಲ್ಲಿ ಕೆಲವರನ್ನು ಆ ವಿಭಾಗಕ್ಕೆ ʼತಳ್ಳಿದರುʼ. ಸಂಸ್ಕೃತ ಅಂದರೆ ಬಾಯಿ ಪಾಠಕ್ಕೆ ಆದ್ಯತೆ. ರಾಮಃ ರಾಮೋ ರಾಮಾಃ, ಅಹಂ ಆವಾಂ ವಯಂ ಎಂದೆಲ್ಲ ಉರು ಹೊಡೆಯುವುದು, ಹಾಗೆಯೇ ಬರೆಯುವುದು. ಬರೆಯುವುದನ್ನು ಹಿಂದಿ ಲಿಪಿಯಲ್ಲಿಯೂ ಬರೆಯ ಬಹುದು, ಕನ್ನಡದಲ್ಲಿಯೂ ಬರೆಯಬಹುದು. ಹೀಗೆಲ್ಲ ಅಪಾರ ರಿಯಾಯಿತಿಗಳು. ಸಂಸ್ಕೃತ ತೆಗೆದುಕೊಂಡರೆ ಸುಲಭದಲ್ಲಿ ಅಂಕ ಗಳಿಸಲು ಸಾಧ್ಯವಾಗುತ್ತಿತ್ತು. ನಾನು ಮುಂದೆ ಎಸ್‌ ಎಸ್‌ ಎಲ್‌ ಸಿ ಯಲ್ಲಿ 70% ಅಂಕ ಗಳಿಸಿದ್ದರೆ ಅದರಲ್ಲಿ 110 ಅಂಕ ಸಂಸ್ಕೃತದ್ದೇ ಆಗಿತ್ತು. ಈ ಅಂಕ ಆಮಿಷ ಮತ್ತು ಇತರ ಅನೇಕ ಕಾರಣಗಳಿಂದ ಸಂಸ್ಕೃತದ ಕಡೆ ವಾಲಿ, ಕನ್ನಡ ಕಲಿಯುವ ಅವಕಾಶ ನಷ್ಟವಾಯಿತು. ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ನನಗೆ ಕನ್ನಡ ಇಷ್ಟದ ವಿಷಯವಾಗಿತ್ತು. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ.. ಹಾಗೆಯೇ ಮುದ್ದಣ ಮನೋರಮೆಯರ ಸಲ್ಲಾಪ ಎಲ್ಲವೂ ನೆನಪಿನಲ್ಲುಳಿಯುವ ಪಾಠಗಳಾಗಿದ್ದವು. ಕನ್ನಡದಲ್ಲಿಯೇ ಮುಂದುವರಿಯುತ್ತಿದ್ದರೆ ಅನೇಕ ಲಾಭಗಳೂ ಇದ್ದವು. 

ಮುಂದೆ ಪಿಯುಸಿಗಾಗುವಾಗ ಅಲ್ಲಿ ಸಂಸ್ಕೃತ ಉಪನ್ಯಾಸಕರು ಇರಲಿಲ್ಲ. ಹಾಗಾಗಿ ದಾರಿ ತಪ್ಪಿದ ಮಕ್ಕಳಾದೆವು. ಹಿಂದಿಯತ್ತ ಹೋಗಬೇಕಾಯಿತು. ಕನ್ನಡದಿಂದ ಸಂಸ್ಕೃತಕ್ಕೆ, ಸಂಸ್ಕೃತದಿಂದ ಹಿಂದಿಗೆ.. ಮೂರು ವರ್ಷ ಕಲಿತ ಸಂಸ್ಕೃತದಿಂದಾಗಲೀ, ಮುಂದೆ ಹೇರಿಕೆಯಾಗಿ ಕಲಿತ ಹಿಂದಿಯಿಂದಾಗಲೀ, ನನಗೆ ಬದುಕಿನಲ್ಲಿ ನಯಾಪೈಸೆ ಪ್ರಯೋಜನಾದುದಿಲ್ಲ. ಯಾರದೋ ನಿರ್ಧಾರಗಳು, ಯಾರದೋ ತಪ್ಪುಗಳು, ಹೀಗೆ ನಾವೆ ಎಲ್ಲೆಲ್ಲೋ ಸಂಚರಿಸಿದ ಕಾರಣ, ಕನ್ನಡ ಕಲಿಯುವ ಅವಕಾಶವೇ ಇಲ್ಲವಾದುದು ಈಗಲೂ ಮನಸಿಗೆ ನೋವುಂಟು ಮಾಡುತ್ತಿರುತ್ತದೆ.

ಆಚಾರ್ಯರ ಅಚಾತುರ್ಯಗಳು

ರಾಮರಾಯ ಆಚಾರ್ಯರು ಪಟೇಲ್‌ ಶ್ರೀನಿವಾಸ ಆಚಾರ್ಯರ ಮಗ. ರಾಮರಾಯ ಆಚಾರ್ಯರ ಹಿರಿಯ ಸಹೋದರ ಜಿ ಎಸ್‌ ಅಚಾರ್ಯರು ಮುಂದೆ ಬೈಂದೂರು ಕ್ಷೇತ್ರದ ಶಾಸಕರಾದರು, ಎಸ್‌ ಸಿ ಡಿ ಸಿ ಸಿ ಅಧ್ಯಕ್ಷರೂ ಆದರು. ಇಂತಹ ಕುಟುಂಬದಿಂದ ಬಂದ ರಾಮರಾಯ ಆಚಾರ್ಯರಿಗೆ ಸಣ್ಣಮಟ್ಟಿನ ಮಾನಸಿಕ ಸಮಸ್ಯೆ ಇತ್ತು. ಅವರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದೆ ನಾವು ಅವರನ್ನು ಹಗುರವಾಗಿ ಕಾಣಲು ಮುಖ್ಯ ಕಾರಣ, ನಾವು ಹೈಸ್ಕೂಲು ಸೇರುತ್ತಿದ್ದಂತೆ ಹಿರಿಯ ವಿದ್ಯಾರ್ಥಿಗಳು ಅವರ ಬಗ್ಗೆ ನಮ್ಮ ತಲೆ ಕೆಡಿಸುತ್ತಿದ್ದ ರೀತಿ, ಅವರ ಬಗ್ಗೆ ಹೇಳುತ್ತಿದ್ದ ವೈವಿಧ್ಯಮಯ ಕತೆಗಳು. ʼಸಿಟ್ಟು ಬಂದು ಆಚಾರ್ಯರು ಒಮ್ಮೆ ವಿದ್ಯಾರ್ಥಿಯೊಬ್ಬನಿಗೆ ಮೆಟ್ಟಿನಿಂದ ಹೊಡೆದರಂತೆ, ಚಪ್ಪಲಿ ಏಟು ತಿಂದರೆ ಈ ಭಾಗದಲ್ಲಿ ಅದೊಂದು ಮಹಾ ಅವಮಾನ, ಅವರು ಗೋಕರ್ಣಕ್ಕೆ ಹೋಗಿ ಪರಿಶುದ್ಧರಾಗಿ ಬರಬೇಕಂತೆ, ಆಚಾರ್ಯರು ಹೊಡೆದುದರಿಂದ ರಾಜಿ ಪಂಚಾತಿಕೆಯಾಗಿ ಕೊನೆಗೆ ಗೋಕರ್ಣದ ಖರ್ಚನ್ನು ಆಚಾರ್ಯರೇ ಕೊಡಬೇಕಾಯಿತಂತೆ, ಕಿಡಿಗೇಡಿ ಹುಡುಗನೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗಿ ಮೈದಾನದಲ್ಲಿ ಜಾರಿ ಬಿದ್ದು ಕಚ್ಚೆ ಪೂರಾ ಕೆಸರಾಯಿತಂತೆ, ಬಾವಿ ಕಟ್ಟೆಯಲ್ಲಿ ಕಚ್ಚೆ ತೊಳೆದು ಕ್ಲಾಸಿಗೆ ವಾಪಸಾದರಂತೆʼ.. ಹೀಗೆ..

ಆಚಾರ್ಯರು ತರಗತಿಗೆ ಭೂಗೋಳ ತಂದು ಮೇಜಿನ ಮೇಲಿಟ್ಟರೆ, ಅದನ್ನು ನಾವು ತಿರುಗಿಸಿ ʼಇದರಲ್ಲಿ ಶಂಕ್ರಾಣ ಎಲ್ಲಿ ಸಾರ್‌ʼ ಎಂದು ಕೇಳಿ ಅವರನ್ನು ಗೋಳು ಹೊಯಿಸಿಕೊಳ್ಳುತ್ತಿದ್ದೆವು. ಒಮ್ಮೆ ನಾನು ತರಗತಿಯಲ್ಲಿ ಏನೋ ಕೀಟಲೆ ಮಾಡಿದೆ. ʼಏಯ್‌ ಎದ್ದು ನಿಲ್ಲು, ನೀನೇ.. ನೀನೇ..ʼ ಎಂದರು. ಸಿಕ್ಕಿ ಬಿದ್ದರೆ ಕಷ್ಟ ಎಂದು ನಾನು ಅಲ್ಲೇ ಬೆಂಚಿನ ಕೆಳಗೆ ತೂರಿ, ಕೆಲವು ಬೆಂಚುಗಳನ್ನು ದಾಟಿ, ಎದ್ದು ಬೇರೊಂದು ಬೆಂಚಿನಲ್ಲಿ ಕುಳಿತೆ. ನನ್ನನ್ನು ಪತ್ತೆ ಹಚ್ಚಿದ ಅವರು, ʼನಿನ್ನ ಹೆಸರೇನು?ʼ ಎಂದು ಕೇಳಿದರು. ಹೆಸರು ಹೇಳಿದರೆ ಪ್ರಿನ್ಸಿಪಾಲ್‌ ಬಳಿಗೆ ಹೋಗುತ್ತದೆ. ಶಿಕ್ಷೆಯ ನೆನಪಾಗಿ ಗಡ ಗಡ ನಡುಗಿದೆ. ಆಗ ಮಕ್ಕಳೆಲ್ಲ, ʼಅವನ ಹೆಸರು ವೆಂಕಟೇಶ ಸಾರ್ʼ ಎಂದರು. ಆಚಾರ್ಯರು, ʼ‌ವೆಂಕಟೇಶಾ.. ನಿನಗೆ ಮಾಡಿಸುತ್ತೇನೆ..ʼ, ಎಂದು ಹೇಳಿ ಚೀಟಿಯಲ್ಲಿ ವೆಂಕಟೇಶ ಎಂದು ಬರೆದುಕೊಂಡರು. ನಾನು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆ. ಆಚಾರ್ಯರ ತರಗತಿಯೆಂದರೆ ತರಗತಿ ತುಂಬಾ ಗಲಾಟೆ. ಗಲಾಟೆಕೋರರನ್ನು ಪತ್ತೆ ಹಚ್ಚಬೇಕೆಂದು ಪ್ರಾಂಶುಪಾಲ ಪಿ ಎಸ್‌ ಕಾರಂತರು ಕದ್ದು ಬಂದು ಬಾಗಿಲ ಮರೆಯಲ್ಲಿ ನಿಲ್ಲುತ್ತಿದ್ದರು. ಸಿಕ್ಕಿ ಬಿದ್ದರೆ ಗೋವಿಂದ..

ಆಚಾರ್ಯರಿಗೆ ಶಿಸ್ತು ಬಹಳ ಇಷ್ಟದ ವಿಷಯ. ʼಒಂದು ಕೆಜಿ ಶಿಸ್ತು ಕೊಡಿ ಎಂದರೆ ಅಂಗಡಿಯಲ್ಲಿ ಅದು ಸಿಗುವುದಿಲ್ಲʼ ಎಂದು ನಮಗೆ ಪದೇ ಪದೇ ಬುದ್ಧಿ ಹೇಳುತ್ತಿದ್ದರು. ಇಂಥ ಆಚಾರ್ಯರು ಮುಂದೆ ಬೆಂಜನಪದವಿಗೆ ಮುಖ್ಯೋಪಾಧ್ಯಾಯರಾಗಿ ವರ್ಗವಾದರು. ವಿದಾಯ ದಿನದಂದು ಅವರು ಮತ್ತೆ ಹೇಳಿದ್ದು ಶಿಸ್ತಿನ ಬಗ್ಗೆ. ಅವರು ನಮ್ಮ ಜತೆ ಇದ್ದಾಗ ಅವರನ್ನು ನಾವು ನಾನಾ ರೀತಿಯಲ್ಲಿ ಕಾಡಿದ್ದೆವು. ಅವರ ವಿದಾಯ ದಿನದಂದು ಅದನ್ನೆಲ್ಲ ನೆನೆದು, ನಾವು ಮಾಡಿದ್ದು ತಪ್ಪು ಎಂಬುದು ಮನವರಿಕೆಯಾಗಿ ಆ ಬಗ್ಗೆ ಪಶ್ಚಾತ್ತಾಪಪಟ್ಟೆವು.

ಇದೇ ದಿನಗಳಲ್ಲಿ ಬಾಗಲಕೋಟೆ ಕಡೆಯಿಂದ ಓರ್ವರು ವಿಜ್ಞಾನದ ಅಧ್ಯಾಪಕರಾಗಿ ಬಂದರು. ಗುಣಿಸು, ಭಾಗಿಸು ಎಂಬುದನ್ನು ಉಣೆ ಬಾಗಿಲೆ ಎಂದೆಲ್ಲ ಹೇಳುತ್ತಿದ್ದ ಅವರ ಭಾಷೆ ನಮಗೆ ವಿಚಿತ್ರವಾಗಿ ಕಾಣುತ್ತಿತ್ತು. ಆದರೆ ಒಳ್ಳೆಯ ಮನುಷ್ಯ, ಸಮರ್ಪಣಾಭಾವದ ಗುರು. ರಜೆಯ ದಿನಗಳಲ್ಲಿಯೂ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮನ್ನೆಲ್ಲ ಸೇರಿಸಿಕೊಂಡು ತಮ್ಮದೇ ಖರ್ಚಿನಿಂದ ನಮಗೆ ಸಾಬೂನು ಮಾಡುವ ವಿಧಾನವನ್ನೆಲ್ಲ ಹೇಳಿಕೊಡುತ್ತಿದ್ದರು.

ಪೂವಣಿ ಮಾಸ್ತರರು ರಸಾಯನ ಶಾಸ್ತ್ರ ಬೋಧಿಸುತ್ತಿದ್ದರು. ಇವರು ಪುತ್ತೂರಿನ ಕಡೆಯವರು. ಆದರೆ ಅವರ ಪಾಠ ಏನೇನೂ ಅರ್ಥ ಆಗುತ್ತಿರಲಿಲ್ಲ. ರಸಾಯನ ಶಾಸ್ತ್ರದ ಬುನಾದಿ ಸರಿಯಾಗಿ ಬೀಳದ ಕಾರಣ ಮುಂದೆ  ಬಿ ಎಸ್‌ ಸಿ ಯವರೆಗೂ ಆ ವಿಷಯ, ವಿಶೇಷವಾಗಿ ಆರ್ಗಾನಿಕ್‌ ಕೆಮಿಸ್ಟ್ರಿ, ನನ್ನ ಪಾಲಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿಯಿತು.

ಇಂಥವರೂ ಶಿಕ್ಷಕರೇ?!

ಮೈಸೂರಿನಿಂದ ಬಂದ ಮಹೇಂದ್ರಕುಮಾರ್‌ ಅವರ ಬಗ್ಗೆ ಹೇಳಲೇಬೇಕು. ಹಿಂದಿ ಶಿಕ್ಷಕನಾಗಿ ಬಂದವರು ಈ ವ್ಯಕ್ತಿ. ಭಾರೀ ಆರ್ಥಿಕ ಶ್ರೀಮಂತಿಕೆಯ ಹಿನ್ನೆಲೆಯವರು. ಇವರಿಂದ ನಾವು ಕಲಿತುದೇಂದರೆ ʼಹೈವಾನ್‌ʼ ಎಂಬ ಬಯ್ಗುಳ ಮಾತ್ರ. ಅವರು ಆಗಲೇ ಶಾಲೆಗೆ ಬರುತ್ತಿದ್ದುದು ಎಜ್ಡಿ ಬೈಕ್‌ ನಲ್ಲಿ. ಪಾಠ ಹೇಳಲು ಏನೇನೂ ಬರುತ್ತಿರಲಿಲ್ಲ. ಆದರೆ ಬಹಳ ದರ್ಪದ ಮನುಷ್ಯ. ಸಿಟ್ಟು ಬಂದಾಗ ಶಾಲೆಯ ಮೇಜು, ಕುರ್ಚಿ ಎಲ್ಲ ಮುರಿದು ಹಾಕುತ್ತಿದ್ದರು. ಇವರ ಅಹಂಕಾರ ಸಹಿಸದ ವಿದ್ಯಾರ್ಥಿಗಳು ಅವರ ಬೈಕು ಹಾಳು ಮಾಡುವುದು, ಹೀಗೆ ತಮ್ಮದೇ ರೀತಿಯಲ್ಲಿ ಅವರ ವಿರುದ್ಧ ಪ್ರತೀಕಾರ ಸಾಧಿಸುತ್ತಿದ್ದರು.

ಶಂಕ್ರಾಣ ಪೇಟೆಯ ಮಧ್ಯದಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು ಮಹೇಂದ್ರ ಕುಮಾರ್. ಶಂಕ್ರಾಣ ಊರಿನ ಒಳ ಹೊರಗುಗಳ ಪರಿಚಯವಾಗ ತೊಡಗಿತು. ಕಡಿಮೆ ಸಂಬಳಕ್ಕೆ ಕೂಲಿಗಳು, ಕುಶಲ ಕರ್ಮಿಗಳು, ಕಳ್ಳ ನಾಟಾ ಸಿಗುವುದು ಎಲ್ಲ ಕಂಡುಕೊಂಡ ಮಹೇಂದ್ರಕುಮಾರ್‌ ಪೀಠೋಪಕರಣ ತಯಾರಿಸುವ ವ್ಯಾಪಾರಕ್ಕೂ ಕೈ ಹಾಕಿದರು. ಇವರ ಬಾಡಿಗೆ ಮನೆಯಲ್ಲಿಯೇ ಮರದ ಆಚಾರಿಗಳು ತಿಂಗಳುಗಟ್ಟಲೆ ಕೆಲಸ ಮಾಡುತ್ತಿದ್ದರು. ಪೀಠೋಪಕರಣ ತಯಾರಾದ ಮೇಲೆ ಅದನ್ನು ಮೈಸೂರಿಗೆ ಸಾಗಿಸುತ್ತಿದ್ದರು.

ಒಂದು ದಿನ ಇಂಗ್ಲಿಷ್‌ ತರಗತಿ ನಡೆಯುತ್ತಿತ್ತು. ಅಂತಿಮ ಪರೀಕ್ಷೆ ಹತ್ತಿರವಾಗುತ್ತಿದ್ದ ದಿನಗಳು. ಅಧ್ಯಾಪಕರು ನೋಟ್ಸ್‌ ಕೊಟ್ಟರು. ನಾನು ನೋಟ್ಸ್‌ ಮುಗಿಸುತ್ತಾ ಇದ್ದೆ. ಅಷ್ಟರಲ್ಲಿ ತರಗತಿಯ ಸಮಯ ಮಗಿದು ಮುಂದಿನ ತರಗತಿಯ ಮಹೇಂದ್ರಕುಮಾರ್‌ ಪ್ರವೇಶವಾಯಿತು. ಮೇಜಿನ ಮೇಲೆ ಹಿಂದಿಯ ಬದಲು ಇಂಗ್ಲಿಷ್‌ ನೋಟ್ಸ್‌ ಕಂಡು ಸಿಟ್ಟುಗೊಂಡ ಅವರು ನನ್ನ ಇಂಗ್ಲಿಷ್‌ ನೋಟ್ಸ್ ಪುಸ್ತಕ ಎಳೆದು ಚಿಂದಿ ಚಿಂದಿ ಮಾಡಿ ಎಸೆದರು. ನನಗೆ ಅಳು ತಡೆಯಲಾಗಲಿಲ್ಲ. ಇಡೀ ವರ್ಷದ ನೋಟ್ಸ್‌ ಅನ್ನು ನಾನು ಮತ್ತೆ ಬರೆಯಬೇಕಾಯಿತು. ಹೀಗೆ ಒಂದು ಒಳ್ಳೆಯ ಶಿಕ್ಷಣ ಪರಿಸರವನ್ನು ತಮ್ಮ ಶ್ರೀಮಂತಿಕೆ ಮತ್ತು ದರ್ಪದ ಬಲದಿಂದ ಹಾಳು ಗೆಡವಿ, ಕೋಲಾಹಲ ಎಬ್ಬಿಸಿದ, ಹಾಗೆಯೇ ಗುರುವಿನ ಸ್ಥಾನಕ್ಕೆ ಕೆಟ್ಟ ಹೆಸರು ತಂದ ಈ ಮನುಷ್ಯನನ್ನು ಈಗಲೂ ಮರೆಯಲಾಗುತ್ತಿಲ್ಲ.

ಪ್ರತೀ ವರ್ಷವೂ ಶಾಲಾ ವಾರ್ಷಿಕೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿತ್ತು. ಆದರೆ ಜೂನಿಯರ್‌ ಕಾಲೇಜಿನಲ್ಲಿ ತುಂಬಾ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದುದರಿಂದ, ನಮಗೆ ನಾಟಕ ಇತ್ಯಾದಿಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿದ್ದುದು ಕಡಿಮೆ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾದ ನೆನಪೇ ಇಲ್ಲ.

ಕುಂದಾಪುರದಲ್ಲಿ ಪರೀಕ್ಷೆ

1977 ನೇ ಇಸವಿ. ಎಂಟು, ಒಂಭತ್ತು ತರಗತಿಗಳನ್ನು ದಾಟಿ ಎಸ್‌ ಎಸ್‌ ಎಲ್‌ ಸಿ ಗೆ ಬಂದಿದ್ದೆವು. ಪಬ್ಲಿಕ್‌ ಪರೀಕ್ಷೆ ಇರುವುದರಿಂದ ಬೋಧನೆಗಳು ಗಂಭೀರವಾಗಿ ನಡೆಯುತ್ತಿದ್ದವು. ಆಗ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳು ನಡೆಯುತ್ತಿದ್ದುದು ಶಂಕ್ರಾಣದಿಂದ 18 ಕಿಲೋಮೀಟರ್‌ ದೂರದ ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ ನಲ್ಲಿ (ಇಲ್ಲಿಯೇ ಅಲ್ಲವೇ, ಕನ್ನಡದ ಮುಂಗೋಳಿ ಮುದ್ದಣ ಶಿಕ್ಷಕನಾಗಿದ್ದುದು?). ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯ ನಡುವೆ ರಜೆ ಇರುತ್ತಿರಲಿಲ್ಲ. ನಿತ್ಯವೂ ಪರೀಕ್ಷೆ. ಹಾಗಾಗಿ ನಾವು ಕುಂದಾಪುರದಲ್ಲಿಯೇ ಎಲ್ಲಾದರೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಲವರು ಹೊಟೇಲು ರೂಮ್‌ ವ್ಯವಸ್ಥೆ ಮಾಡಿಕೊಳ್ಳುವಷ್ಟು ಶ್ರೀಮಂತರಾಗಿದ್ದರು. ನನ್ನ ಸ್ಥಿತಿ ಹಾಗಿರಲಿಲ್ಲ. ನಾನು ಒಂದೆರಡು ದಿನ ಅಣ್ಣನ ಪುಟ್ಟ ಬಾಡಿಗೆ ರೂಮಿನಲ್ಲಿ ಇದ್ದೆ. ಅಲ್ಲಿ ಸರಿಯಾಗಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಹಾಗಾಗಿ ಸಹಪಾಠಿಗಳು ಇದ್ದ ಪಾರಿಜಾತ ಹೊಟೇಲ್‌ ರೂಮ್‌ ಸೇರಿಕೊಂಡೆ. ಜತೆಯಾಗಿ ಓದುತ್ತಿದ್ದುದರಿಂದ ಬಹಳ ಅನುಕೂಲವಾಯಿತು. ಅಲ್ಲದೆ ಕೆಲ ಮೇಷ್ಟ್ರುಗಳು ಅಲ್ಲಿಗೇ ಬಂದು ಮಾರ್ಗದರ್ಶನ ಮಾಡುತ್ತಿದ್ದರು. ಪರೀಕ್ಷೆ ಮಗಿದ ದಿನದ ನಿರಾಳತೆ ವರ್ಣಿಸಲು ಪದಗಳು ಸಾಲವು. ಅದೇ ಖುಷಿಯಲ್ಲಿ ಪರೀಕ್ಷೆ ಮುಗಿದ ಬೆನ್ನಿಗೇ ಕುಂದಾಪುರದ ಪೂರ್ಣಿಮಾ ಟಾಕೀಸಿನಲ್ಲಿ ಒಂದು ಸಿನಿಮಾ ನೋಡಿದೆವು. ಅದು ನಾನು ನೋಡಿದ ಮೊದಲ ಸಿನಿಮಾ- ʼನಾಗರ ಹಾವುʼ.

ತಿಂಗಳ ಬಳಿಕ ಒಂದು ದಿನ ಸುದ್ದಿ ಬಂತು, ʼನಾಳೆ ರಿಸಲ್ಟ್‌ ಅಂತೆ!ʼ. ನನ್ನ ಅಣ್ಣ ಓದುವ ದಿನಗಳಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದುದು ದಿನಪತ್ರಿಕೆಗಳಲ್ಲಿ. ಪತ್ರಿಕೆಯ ಪುಟಗಳ ತುಂಬಾ ಸಣ್ಣ ಸಣ್ಣ ಅಕ್ಷರಗಳಲ್ಲಿ ಪಾಸಾದವರ ರಿಜಿಸ್ಟರ್‌ ನಂಬರ್‌ ಗಳು. ಪ್ರಿಂಟ್‌ ಮಿಸ್ಟೇಕ್‌ ಗಳಿಂದ ಆಗ ಆಗುತ್ತಿದ್ದ ಅಧ್ವಾನವೋ ಅನೇಕ. ನಮ್ಮ ಕಾಲಕ್ಕಾಗುವಾಗ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಪ್ರಕಟಿಸುವ ಪದ್ಧತಿ ಆರಂಭವಾಗಿತ್ತು.

ಸರಿ, ಸಹಪಾಠಿಗಳಾದ ಜಗದೀಶ ಶೇಟ್‌, ಮಂಜುನಾಥ ಅಡಿಗ, ಶ್ರೀ ಪ್ರಸಾದ ಎಲ್ಲ ಸೇರಿಕೊಂಡು ಸಂಜೆ ಹೈಸ್ಕೂಲ್‌ ಗೆ ಹೋದೆವು. ಪ್ರಾಂಶುಪಾಲ ಕಾರಂತರು ಅಲ್ಲಿ ಮಾರನೇ ದಿನದ ಫಲಿತಾಂಶ ಪ್ರಕಟಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಮ್ಮನ್ನು ನೋಡಿದವರೇ, ʼಏನ್ರೋ.. ಏನು ಬಂದಿದ್ದೀರಿ?..ʼ ಎಂದು ಕೇಳಿದರು. ʼನಾಳೆ ರಿಸಲ್ಟ್‌ ಅಲ್ವಾ ಸಾರ್‌..ʼ ಅಂದೆವು. ಕೊಠಡಿಯ ಒಳಗೆ ಹೋಗಿ ನಮ್ಮೆಲ್ಲರ ಹೆಸರು ಪರಿಶೀಲಿಸಿದ ಅವರು, ʼನೀವೆಲ್ಲರೂ ಫಸ್ಟ್‌ ಕ್ಲಾಸ್‌ ಪಾಸ್‌, ಈಗ ಮನೆಗೆ ಹೋಗಿʼ ಎಂದರು. ಅಂಕ ಹೇಳಲಿಲ್ಲ. ಆದರೂ ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಮಾರನೆಯ ದಿನ ನೋಡುವಾಗ, ನಾನು 600 ರಲ್ಲಿ 420 ಅಂಕಗಳೊಂದಿಗೆ ಮೊದಲ ದರ್ಜೆಯಲ್ಲಿ ಪಾಸ್‌ ಆಗಿದ್ದೆ.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಹೋರಾಟಗಾರರು.

More articles

Latest article

Most read