(ಈ ವರೆಗೆ…) ತನ್ನ ಮೇಲೆ ಕಣ್ಣು ಹಾಕಿದ ರೈಟರ್ ಕಾರ್ಯಪ್ಪನಿಗೆ ಎಂದೂ ತನ್ನ ಸುದ್ದಿಗೆ ಬರದಂತೆ ಗಂಗೆ ಬುದ್ಧಿ ಕಲಿಸುತ್ತಾಳೆ . ಗಂಗೆಯ ಧೈರ್ಯ, ಸಾಹಸ ನೋಡಿ ಊರಿಗೆ ಊರೇ ಅವಳನ್ನು ಕೊಂಡಾಡುತ್ತದೆ. ಊರ ಪಂಚಾಯತಿ ಅಧ್ಯಕ್ಷರು ವಯಸ್ಕರ ಶಿಕ್ಷಣದ ಅಡಿಯಲ್ಲಿ ಪಾಠ ಮಾಡಲು ನೇಮಿಸಿ ಆಕೆಯಲ್ಲಿ ಓದಿನ ಆಸಕ್ತಿ ಮೂಡಿಸುತ್ತಾರೆ. ಗಂಗೆ ತಾನು ಸಬಲಳಾಗುತ್ತಲೇ ಇಡೀ ಊರಿನ ಹೆಂಗಸರ ಸಬಲೀಕರಣಕ್ಕೆ ಹಲವಾರು ತರಬೇತಿಗಳನ್ನು ಹಮ್ಮಿಕೊಂಡು ಅವರಲ್ಲಿ ಅರಿವು ಮೂಡಿಸುತ್ತಾಳೆ. ಮುಂದೇನಾಯ್ತು ಓದಿ, ವಾಣಿ ಸತೀಶ್ ಅವರ ʼತಂತಿ ಮೇಲಿನ ನಡಿಗೆಯ 74 ನೇ ಕಂತು.
ಗಂಗೆ ಗಂಡನನ್ನು ಬಿಟ್ಟು ಬಂದು ಅದಾಗಲೇ ಏಳೆಂಟು ವರ್ಷಗಳು ಕಳೆದು ಹೋಗಿದ್ದವು. ಅವನಿಂದಾಗಿ ಬದುಕಿನಲ್ಲಿ ಎಷ್ಟೆಲ್ಲಾ ಏಳು ಬೀಳುಗಳನ್ನು ಅನುಭವಿಸಿದ್ದರೂ ಅವಳೊಳಗೆ ಅವನ ಮೇಲಿನ ಮೋಹವೇನು ಇಂಗಿ ಹೋಗಿರಲಿಲ್ಲ. ಪ್ರಕೃತಿ ಸಹಜವಾದ ಬಯಕೆಗಳು ಇನ್ನೂ ಮೋಹನನ ನೆನಪುಗಳನ್ನು ಹಸಿರಾಗಿಯೆ ಇಟ್ಟಿದ್ದವು. ಇಂದಲ್ಲ ನಾಳೆ ಅವನು ಬಂದೆ ಬರುವ ಎನ್ನುವ ಹುಚ್ಚು ಆಸೆಯೊಂದು ಆಗಾಗ ಅವಳಲ್ಲಿ ಮೊಳೆತು ಕಮರುತ್ತಲೇ ಇತ್ತು. ಅವಳ ಒಳ ತುಡಿತ ತಾನು ನಂಬಿದ್ದ ದೈವಕ್ಕೆ ಮುಟ್ಟಿತೋ ಎಂಬಂತೆ ಇದ್ದಕ್ಕಿದ್ದಂತೆ ಒಮ್ಮೆ ಪ್ರತ್ಯಕ್ಷನಾದ ಮೋಹನ. ಮತ್ತಷ್ಟು ಸುಂದರನಾಗಿದ್ದ, ಸಿರಿವಂತನಂತೆ ಕಣ್ಣುಕುಕ್ಕುತ್ತಿದ್ದ.
ಎಂದಿನಂತೆ ಗಂಗೆಯ ಕಾಲಿಡಿದು ಕ್ಷಮೆ ಯಾಚಿಸಿದ. ತಾನು ಮಾಡುತ್ತಿದ್ದ ದಂಧೆಯನ್ನೆಲ್ಲ ಬಿಟ್ಟು ಒಳ್ಳೆಯ ಮನುಷ್ಯನಾಗಿರುವುದಾಗಿಯೂ, ಬೆಂಗಳೂರಿನಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿರುವುದಾಗಿಯೂ ಹೇಳಿ ಅವಳನ್ನು ಮತ್ತೊಮ್ಮೆ ನಂಬಿಸಿದ. ತಾನು ತಂದಿದ್ದ ಬಾರಿ ಸದ್ದಿನ ಯಮಹ ಬೈಕಿನ ಮೇಲೆ ಅವಳನ್ನು ಕೂರಿಸಿಕೊಂಡು ಸೋಪಾನ ಪೇಟೆಯನ್ನೆಲ್ಲ ಸುತ್ತಿಸಿ ಸಿನಿಮಾ ತೋರಿಸಿ, ಸೀರೆ, ಹೂವು, ಹಣ್ಣು ಹಂಪಲುಗಳನ್ನೆಲ್ಲ ಕೊಡಿಸಿಕೊಂಡು ಬಂದ. ಅಪರಿಚಿತನಂತೆ ದೂರದಿಂದಲೆ ಮಕ್ಕಳನ್ನು ಮಾತಾಡಿಸಿ ಬಿಸ್ಕೆಟ್ ಪೊಟ್ಟಣ ಕೈಗಿಟ್ಟು ಅಪ್ಪನ ಜವಾಬ್ದಾರಿ ಪೂರೈಸಿದ.
ಒಳಗೊಳಗೆ ಶಬರಿಯಂತೆ ಕಾಯುತ್ತಿದ್ದ ಗಂಗೆಯ ಸಂತಸಕ್ಕೆ ಪಾರವೇ ಇರಲಿಲ್ಲ. ತನ್ನೆಲ್ಲ ಕಷ್ಟಗಳು ನೀಗಿತು ದೇವರು ಕಣ್ಣು ಬಿಟ್ಟ ಎಂದೇ ನಂಬಿದಳು. ಹೀಗೆ ಒಂದೆರಡು ಮೂರು ಭೇಟಿಯ ಅತಿಥಿಯಾಗಿ ಬಂದ ಮೋಹನನ ಬಣ್ಣ ಬಹುಬೇಗ ಬಯಲಾಯಿತು. “ಯಾವುದೋ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಕೊಂಡಿದ್ದೇನೆ, ನೀನು ಕೈಬಿಟ್ಟರೆ ಜೀವವೇ ಹಾರಿ ಹೋಗುತ್ತದೆ” ಇತ್ಯಾದಿಯಾಗಿ ಗೋಳಾಡಿ, ಅವಳು ಇದುವರೆಗೂ ಅಚ್ಚಿಟ್ಟು ಬಚ್ಚಿಟ್ಟು ಕೂಡಿಹಾಕಿದ್ದ ಅಷ್ಟೋ ಇಷ್ಟೊ ಹಣವನ್ನು ದೋಚಿಕೊಂಡು ಹೋದ ಮೋಹನ ಎಷ್ಟು ತಿಂಗಳಾದರೂ ಇತ್ತ ಬರಲೇ ಇಲ್ಲ.
ಒಂದು ದಿನ ಅವನನ್ನು ಹುಡುಕಿಕೊಂಡು ಭೋಗನೂರಿನತ್ತ ಹೆಜ್ಜೆಹಾಕಿದವಳಿಗೆ ತಿಳಿದಿದ್ದು ಅವನು ತನ್ನ ದಂಧೆಯನ್ನು ಭೋಗನೂರಿನಂತಹ ಸಣ್ಣ ಹಳ್ಳಿಗೂ ವಿಸ್ತರಿಸಿ, ಯಾವ ನೀಚ ಕೃತ್ಯಕ್ಕೂ ಹೇಸದ ಮಹಾನ್ ರೌಡಿಯಾಗಿ ಮೆರೆಯುತ್ತಿದ್ದಾನೆ ಎಂಬ ಸತ್ಯ. ಅಂದೇ ಕೊನೆ ತನ್ನ ಅವನ ಋಣಕ್ಕೆ ಎಳ್ಳು ನೀರು ಬಿಟ್ಟ ಗಂಗೆ ಮತ್ತೆಂದು ಅವಳೊಳಗೆ ಅವನ ನೆನಪನ್ನು ಸುಳಿಯ ಗೊಡಲಿಲ್ಲ. ಮನಸ್ಸಿನ ಆಳದಲ್ಲೆಲ್ಲೊ ತಾನು ಬೆವರು ಸುರಿಸಿ ಕೂಡಿಟ್ಟ ಹಣವನ್ನು ಕಳೆದುಕೊಂಡ ಬಗ್ಗೆ ಸುಟ್ಟು ಹಾಕುವಂತಹ ಪರಿತಾಪವಿದ್ದರು, ಅವನ ಮನೆಯಲ್ಲಿ ತಿಂದ ಅನ್ನದ ಋಣ ತೀರಿಹೋಯಿತೆಂದು ಭಾವಿಸಿ ನಿರುಮ್ಮಳವಾದಳು.
ಬದಲಾಗಿ ತನ್ನೆರಡು ಮಕ್ಕಳೊಳಗೆ ಪ್ರಪಂಚದ ಸರ್ವ ಸಂತಸವನ್ನು ಕಂಡುಕೊಳ್ಳುವ ಪಣತೊಟ್ಟು ನಿಂತಳು. ಅಪ್ಪ ಇಲ್ಲದ ಮಕ್ಕಳು ಎಲ್ಲಿ ದಾರಿ ತಪ್ಪಿಬಿಡುವರೊ ಎಂಬ ಆತಂಕದಲ್ಲಿ ಮಕ್ಕಳೊಂದಿಗೆ ಮತ್ತಷ್ಟು ಕಟುವಾದಳು. ಎಗ್ಗು ಸಿಗ್ಗಿಲ್ಲದೆ ಕುಣಿದಾಡುವ ಅವರ ತುಂಟತನಕ್ಕೆ ಕಡಿವಾಣ ಹಾಕಿ, ತನ್ನ ಬಿರು ಗಣ್ಣಿನ ಸುಡು ಭಾಷೆಯಲ್ಲೆ ಅವರು ಹಾದಿ ತಪ್ಪದಂತೆ ಎಚ್ಚರಿಸ ತೊಡಗಿದಳು. ಗಂಡು ದಿಕ್ಕಿಲ್ಲದ ತನ್ನ ಗೂಡಿಗೆ ಪುಂಡು ಪೋಕರಿ ಜಂತುಗಳ ಕೇಡುಗಣ್ಣು ತಾಗದಂತೆ ಮತ್ತಷ್ಟು ಜೋರುತನವನ್ನು, ನಿಷ್ಠುರತೆಯನ್ನು ಮೈಗೂಡಿಸಿಕೊಂಡಳು. ಇಡೀ ನಾರಿಪುರವೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ತನ್ನ ಕಮರಿದ ಕನಸು ಕನವರಿಕೆಗಳಿಗೆಲ್ಲ ಮರುಜೀವ ಕೊಡುವವಳಂತೆ ಮಕ್ಕಳನ್ನು ಬೆಳೆಸತೊಡಗಿದಳು.
*****
ಪ್ರತೀ ಭಾನುವಾರ ಗೌರಿಪುರದ ಬಿದಿರು ಮೆಳೆಯತ್ತ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ ಪುಟ್ಟ ಹುಡುಗಿ ಗಂಗೆ, ಅಲ್ಲಿನ ಹಾರುವರ ಕೇರಿಯ ಮನೆಯೊಂದರಿಂದ ಕೇಳಿ ಬರುತ್ತಿದ್ದ ಲಯಬದ್ಧವಾದ ಸಂಗೀತ ಮತ್ತು ಗೆಜ್ಜೆಯ ನಾದಕ್ಕೆ ಮನಸೋತು, ಹೊಡೆದುಕೊಂಡು ಹೋದ ಹಸುಗಳನ್ನು ಅಲ್ಲೆ ಒಂದು ಮರದ ಬೊಡ್ಡೆಗೆ ಕಟ್ಟಿ, ಸದ್ದು ಬಂದ ಮನೆಯತ್ತ ಹಾರಿಹೋಗಿ ಬಿಡುತ್ತಿದ್ದುದು ಮಾಮೂಲಾಗಿತ್ತು. ಅಲ್ಲಿ ಅರೆ ಮುಚ್ಚಿದ ಬಾಗಿಲ ಸಂದಿಯಿಂದ ಇಣುಕಿ, ಒಳಗೆ ನಡೆಯುತ್ತಿದ್ದ ನರ್ತನದ ತಾಲೀಮನ್ನು ಕಣ್ಣೆವೆ ಮುಚ್ಚದಂತೆ ನೋಡುತ್ತಾ ಕುಳಿತು ಬಿಡುತ್ತಿದ್ದಳು. ಹೀಗೆ ಒಮ್ಮೆ ತಡೆಯಲಾರದೆ ಆ ಮನೆಯ ಬಾಗಿಲ ಸಂದಿಗೆ ಬಾಯಿ ಹಾಕಿ “ನಂಗೂ ಡ್ಯಾನ್ಸ್ ಅಂದ್ರೆ ಬಾಳ ಇಷ್ಟ ನನ್ನೂ ಸೇರುಸ್ಕೊಳಿ ಸಾ” ಎಂದು ಧೈರ್ಯವಾಗಿ ಕೇಳಿ ಬಿಟ್ಟಿದ್ದಳು. ಪಾಠ ಮಾಡುವುದರಲ್ಲಿ ಮಗ್ನರಾಗಿದ್ದ ಕಟ್ಟುಮಸ್ತಾದ ಆಳು ರುದ್ರಪಟ್ನದ ಸುಬ್ಬರಾಯ ಶಾಸ್ತ್ರಿಗಳು ಕೋಪದಿಂದ ಅದುರತ್ತ ಬಂದು ಗಂಗೆಯ ಎದುರು ನಿಂತರು. ಮೇಲಿನಿಂದ ಕೆಳಗಿನವರೆಗೂ ಅವಳನ್ನು ತಿಂದುಹಾಕುವಂತೆ ನೋಡಿ ” ಶೂದ್ರ ಮುಂಡೇದೆ ನಿಂಗೆ ಮಂಡೆ ಸಮ ಇಲ್ಲನ, ಎಂತದ ಅದು ಪಾಠದ ಮಧ್ಯೆ ನಿಂದು ರಾಗ” ಎಂದು ತಾವು ಹಿಡಿದ ತಟ್ಟುಕೋಲಿಂದ ಅವಳ ಬೆನ್ನಿನ ಮೇಲೊಂದು ಛಟೀರನೆ ಹೊಡೆತ ಕೊಟ್ಟು ” ಇದು ನಿಮ್ಮಂತವರ ತಲೆಗತ್ತುವ ವಿದ್ಯೆ ಅಲ್ಲವೊ ಗಾಮಾಡೆ, ಹಸು ಮೇಯಿಸಿಕೊಂಡು ತೆಪ್ಪಗೆ ಮನೆಯತ್ತ ಹೋಗು ನಡೆ” ಎಂದು ಗದರಿ ಮುಖಕ್ಕೆ ಹೊಡೆದಂತೆ ದಡ್ಡನೆ ಬಾಗಿಲು ಮುಚ್ಚಿಕೊಂಡು ಹೋಗಿದ್ದರು.
ಶಾಸ್ತ್ರಿಗಳ ಮಾತು ಗಂಗೆಗೆ ಪೂರ್ತಿಯಾಗಿ ಅರ್ಥವಾಗದಿದ್ದರು ಅವರು ತನ್ನನ್ನು ನಡೆಸಿಕೊಂಡ ಪರಿ ಅವಳಲ್ಲಿ ಉಗ್ರವಾದ ಕೋಪತರಿಸಿತ್ತು. ಅಷ್ಟು ದೂರಹೋಗಿ ಒಂದು ಸರಿಯಾದ ಕಲ್ಲನ್ನೆತ್ತಿ ಆ ಮನೆಯ ಬಾಗಿಲತ್ತ ರಪ್ಪನೆ ತೂರಿ ಚಂಗನೆ ಮಾಯವಾಗಿದ್ದಳು. ಅಂದೇ ಕೊನೆ ಮತ್ತೆಂದು ಅವಳು ಗೌರಿಪುರದ ಹಾರುವರ ಕೇರಿಯತ್ತ ತಲೆ ಹಾಕಿಯೂ ಮಲಗಲಿಲ್ಲ. ಆದರೆ ಅಲ್ಲಿ ತಾನು ನೋಡಿ ಕೊಂಡು ಬಂದಿದ್ದ ಹಾವ ಭಾವ ಹೆಜ್ಜೆಗಳನ್ನೆಲ್ಲಾ ಹೆಣೆದು, ಅಣ್ಣಂದಿರು ಸದಾ ಗುನುಗಿಕೊಳ್ಳುತ್ತಿದ್ದ ನಮೋ ನಮೋ ನಟರಾಜ ನಮೋ ಎನ್ನುವ ನಾಟಕದ ಹಾಡೊಂದಕ್ಕೆ ಕೂರಿಸಿ ಹುಣ್ಣಿಮೆಯ ಒಂದು ಬೆಳದಿಂಗಳಲ್ಲಿ ನಾರಿಪುರದ ಹೆಂಗಸರು ಮಕ್ಕಳ ಮುಂದೆ ನರ್ತಿಸಿ ಶಾಭಾಷ್ಗಿರಿ ಪಡೆದಿದ್ದಳು.
ಹಿಂದಿನ ಕಂತು ಓದಿದ್ದೀರಾ? http://“ಹೆಣ್ಮಕ್ಳು ಅಂದ್ರೆ ನಿನ್ನಂಗಿರ್ಬೇಕು ಕನ್ ಗಂಗೂ” https://kannadaplanet.com/tanthi-melina-nawige-73/
ನಿಂತಲ್ಲಿ ನಿಲ್ಲದೆ ಕೂತಲ್ಲಿ ಕೂರದೆ ಸದಾ ಕೈಕಾಲು ಕುಣಿಸುತ್ತಲೇ ಇರುತ್ತಿದ್ದ ಕಿರಿಯ ಮಗಳು ಹೇಮಿಯನ್ನು ಕಂಡಾಗಲೆಲ್ಲ ಗಂಗೆಗೆ ಈ ನೆನಪು ಒದ್ದುಕೊಂಡು ಹೊರ ಬರುತ್ತಿತ್ತು. ಒಂದು ದಿನ ಜಿದ್ದಿಗೆ ಬಿದ್ದವಳಂತೆ ಸೋಪಾನಪೇಟೆಯ ಗಲ್ಲಿ ಗಲ್ಲಿಗಳಲ್ಲೆಲ್ಲ ಅಲೆದು ತನ್ನ ಮನಸ್ಸಿಗೆ ಹೊಂದುವಂತಹ ನೃತ್ಯ ಶಾಲೆಯನ್ನು ಹುಡುಕಿ ತೆಗೆದಳು. ಅಂದು ಮಗಳಿಗೆ ಇರುವುದರಲ್ಲೇ ಒಂದು ಚೆಂದನೆಯ ಲಂಗ ರವಿಕೆ ತೊಡಿಸಿ, ಎಲೆ ಅಡಿಕೆ, ಹಣ್ಣಿನೊಂದಿಗೆ ಐದು ರೂಪಾಯಿ ದಕ್ಷಿಣೆ ಇಟ್ಟು ರೋಜಿ಼ ಡಿಸೋಜ ಟೀಚರ್ ಅವರ ಕಾಲಿಗೆ ಬೀಳಿಸಿ ಮಗಳ ನೃತ್ಯದ ಪಾಠಕ್ಕೆ ಮುನ್ನುಡಿ ಬರೆಸಿದ್ದಳು. ಮಗಳ ಹೆಜ್ಜೆಯೊಂದಿಗೆ ತಾನು ಹೆಜ್ಜೆ ಹಾಕುತ್ತಾ ಪುಟ್ಟ ಹುಡುಗಿಯಂತಾದ ಗಂಗೆಯ ಮನೆತುಂಬಾ ಅಂದಿನಿಂದ ತಂತಾನೆ ಉಲ್ಲಾಸ ತುಂಬಿಕೊಳ್ಳತೊಡಗಿತ್ತು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.