ಶಿಕ್ಷಕರ ದಿನ | ‘ಮಗಳೇ,’ ಎಂದು ಪ್ರೀತಿ ತೋರಿ ಕಲಿಸುತ್ತಿದ್ದ ಮೇಘನಾ ಮೇಡಂ

Most read

ವಿದ್ಯೆಯನ್ನು ಭಿಕ್ಷೆಯನ್ನು ಬಿಡುವ ಹಾಗೆ ಬೇಡಿ ಗುರುವಿನಿಂದ ತೆಗೆದುಕೊಳ್ಳಬೇಕು. ಏಕೆಂದರೆ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ.  ಈ ಶಿಕ್ಷಕರ ದಿನದಂದು ನನ್ನ ನೆಚ್ಚಿನ ಶಿಕ್ಷಕಿ ಮೇಘನಾ ಮೇಡಂ ರವರಿಗೆ ಶಿಕ್ಷಕರ ದಿನದ ಶುಭಾಶಯಗಳು – ಮಾಷಿತಾ, ವಿದ್ಯಾರ್ಥಿನಿ.

ನನ್ನ ಬಾಲ್ಯದಿಂದ ಪ್ರೌಢಶಾಲೆಯವರೆಗೂ ನಾನು ಕಂಡಂತಹ ನನ್ನ ಬಹಳ ಅಚ್ಚುಮೆಚ್ಚಿನ ಶಿಕ್ಷಕಿ ಎಂದರೆ ಮೇಘನಾ ಮೇಡಂ,  ಶಿಕ್ಷಕರು ನಮಗೆ ದೇವರಂತೆ.  ಒಂದು ಮಗುವಿಗೆ ಪೋಷಕರೆಷ್ಟು ಮುಖ್ಯವಾಗುತ್ತಾರೋ ಅಷ್ಟೇ ಮುಖ್ಯ ಶಿಕ್ಷಕರು ಕೂಡ. “ಗುರು ಬ್ರಹ್ಮ ಗುರು ವಿಷ್ಣು ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಮಾತು ಗುರುಗಳ ಮಹತ್ವ ಏನೆಂದು ತಿಳಿಸುತ್ತದೆ. ತಂದೆ ತಾಯಿ ಮಕ್ಕಳನ್ನು ಭೂಮಿಗೆ ತರುತ್ತಾರೆ.  ಆದರೆ ಅವರಿಗೆ ಜೀವನದ ಮೌಲ್ಯವನ್ನು ಕಲಿಸುವುದು ಶಿಕ್ಷಕರೇ.  ನಮ್ಮ ಬದುಕಿಗೆ ಒಂದು ಸುಂದರ ಆಕಾರವನ್ನು ನೀಡುವವರೇ ಶಿಕ್ಷಕರು. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವರು ಶಿಕ್ಷಕರು.  ಒಂದು ದೇಶಕ್ಕೆ ರೈತ ಮತ್ತು ಸೈನಿಕ ಹೇಗೆ ಬೆನ್ನೆಲುಬಾಗುತ್ತಾನೆ ಹಾಗೆ ಶಿಕ್ಷಕರು ಕೂಡ.

ಒಂದು ತಮಾಷೆಯ ಸಂಗತಿ.. ‘ನಾನು ಹಾಲು ಕುಡಿಯಲ್ಲ ‘ ಎಂದು ನನ್ನ ಅಮ್ಮ ಮೇಘನಾ ಮೇಡಂ ರವರಿಗೆ ದೂರು ಕೊಟ್ಟಿದ್ದರು.  ನಾನು ಮುಂದಿನ ದಿನ ಶಾಲೆಗೆ ಹೋಗುವಾಗ ಅವರು ನನಗೆ ಡಸ್ಟರ್ ನಲ್ಲಿ ಹೊಡೆಯುತ್ತಾರೆಂದು ಭಯವಾಗಿತ್ತು. ಏಕೆಂದರೆ ಅವರು ತರಗತಿಯ ವೇಳೆಯಲ್ಲಿ ಬಹಳ ಕಠಿಣ.  ತರಗತಿಯ ಕಡೆ ಗಮನ ಕೊಟ್ಟಿಲ್ಲ ಅಂದರೆ ಆ ಡಸ್ಟರ್ ನಲ್ಲಿ ಒದೆ ಬೀಳುತ್ತಿತ್ತು . ಹಾಗಾಗಿ ಅವರು ನೆನಪಾದರೆ  ಡಸ್ಟರ್ ಕೂಡ ನೆನಪಾಗುತ್ತದೆ. ಅವರು ನಮಗೆ ಎಷ್ಟು ಬೈದು ಹೊಡೆದರೂ ಸ್ವಲ್ಪ ಸಮಯ ಬಿಟ್ಟು ಹಾಗೆ ಮಾಡುವುದು ತಪ್ಪು ಮಗ ಎಂದು ಕಾಳಜಿಯಿಂದ ಮಾತನಾಡುತ್ತಿದ್ದರು.

ವಿದ್ಯಾರ್ಥಿನಿ ಕಾಪಿಟ್ಟುಕೊಂಡ ಮೇಘನಾ ಟೀಚರ್ಫೋಟೋ

ಮೇಘನಾ ಮೇಡಮ್  ಅವರ ಪಾಠದ ಶೈಲಿಯಂತೂ ತುಂಬ ಸೊಬಗು. ಎಷ್ಟೇ ಕಷ್ಟವಿದ್ದರೂ ತುಂಬಾ ಸರಳವಾಗಿ ಹೇಳಿಕೊಡುತ್ತಿದ್ದರು. ನನಗೆ ಅವರು ಎಲ್ಲಾ ವಿಷಯಗಳನ್ನು ಅಂದರೆ ಕನ್ನಡ ಇಂಗ್ಲಿಷ್ ಹಿಂದಿ ವಿಜ್ಞಾನ ಗಣಿತವನ್ನು ಹೇಳಿಕೊಡುತ್ತಿದ್ದರು.  ಆದರೆ ಸಮಾಜ ವಿಜ್ಞಾನವನ್ನು ಹೊರತುಪಡಿಸಿ.  ‘ಸಮಾಜ ವಿಜ್ಞಾನ ಬಹಳ ಕಠಿಣವಾದ ವಿಷಯ’ ಎಂದು ತಮಾಷೆ ಮಾಡುತ್ತಿದ್ದರು. ಅವರು ಕೆಲವೊಮ್ಮೆ ಆಟ ಆಡಿಸಿಕೊಂಡು ಪಾಠವನ್ನು ಮಾಡುತ್ತಿದ್ದರು.  ನಾನು ಹಾಲು ಕುಡಿಯಲಿಲ್ಲ, ತರಕಾರಿ ತಿನ್ನಲಿಲ್ಲ ಎಂದಾಗ ನನಗೆ ಗದರಿಸದೆ ನನಗೆ ಅದರ ಮಹತ್ವವನ್ನು ಹೇಳುತ್ತಿದ್ದರು. ಅವರ ತರಗತಿಗಳಲ್ಲಿ ಯಾರು ಸಹ ಮಾತನಾಡುತ್ತಿರಲಿಲ್ಲ.  ಶಿಸ್ತುಬದ್ಧ ಮತ್ತು ಸಮಯ ಪಾಲಕಿಯಾಗಿದ್ದರು. ಆದ್ದರಿಂದಲೇ ನಮಗೆ ಈಗ ಅಲ್ಪಸ್ವಲ್ಪ ಸಮಯದ ಪ್ರಜ್ಞೆ ಇದೆ.

ಅವರು ಪಾಠ ಮಾಡುತ್ತಿದ್ದ ಶೈಲಿ ಬಹಳ ಚೆನ್ನಾಗಿದ್ದರಿಂದ ನಾನು ನನ್ನ ಬಾಲ್ಯದಲ್ಲಿ ನೀನು ದೊಡ್ಡವಳಾದ ಮೇಲೆ ಏನಾಗುತ್ತೀಯ ಎಂದರೆ ನಾನು ತಡವಿಲ್ಲದೆ ಮೇಘನಾ ಮೇಡಂ ತರ ಶಿಕ್ಷಕಿಯಾಗುತ್ತಾನೆ ಎಂದು ಹೇಳಿಬಿಡುತ್ತಿದ್ದೆ. ಅವರು ನನಗೆ ಅಷ್ಟು ಪ್ರೇರಣೆಯಾಗಿದ್ದರು.  ಅವರು ನನ್ನ ಬಾಲ್ಯದಿಂದ ಇದುವರೆಗಿನ ಮಾರ್ಗದರ್ಶಿ,  ಪ್ರೇರಣೆ ಮತ್ತು ನನ್ನ ಮೆಚ್ಚಿನವರು.  ನನ್ನನ್ನು ಅವರು ಪ್ರೀತಿಯಿಂದ ಮಗಳೇ ಎಂದು ಕರೆಯುತ್ತಿದ್ದರು.  ಅದು ನನಗೆ ತಾಯಿಯ ಕಾಳಜಿಯ ಹಾಗೆ ಕಾಣಿಸುತ್ತಿತ್ತು. ಕಾರಣಾಂತರದಿಂದಾಗಿ ಅವರು ಹಿರಿಯ ಪ್ರಾಥಮಿಕ ತರಗತಿಗಳಿಗೆ ಬರುತ್ತಿರಲಿಲ್ಲ ಆದರೂ ನಾನು ಅವರ ತರಗತಿಗೆ ಹೋಗಿ ಮಾತನಾಡಿಸಿ ನನಗೆ ಏನಾದರೂ ಸಂದೇಹವಿದ್ದರೆ ಅದನ್ನು ತಿಳಿದುಕೊಂಡು ಬರುತ್ತಿದ್ದೆ.

ಮೇಘನಾ ಮೇಡಮ್  ಶಾಲೆಯಿಂದ ಬೀಳ್ಕೊಂಡಾಗ ನನಗೆ ನಿಜವಾಗಿಯೂ ಬಹಳ ದುಃಖವಾಗಿತ್ತು. ಅವರು ಸಹ ನಮ್ಮನ್ನು ತಬ್ಬಿ ಅತ್ತು ಬಿಟ್ಟರು.  ಆಗ, ಅಷ್ಟು ಕಠಿಣವಾಗಿದ್ದವರು ಇಷ್ಟು ಅತ್ತರಲ್ಲಾ ಎಂದು ನನಗೆ ನಂಬಲು ಸಾಧ್ಯವಾಗಿರಲಿಲ್ಲ. 

ಒಂದು ವಿಶೇಷ ಸಂಗತಿ ಏನೆಂದರೆ ನಾನು ಅವರಿಗೆ ಎಲ್ಲಾ ವರ್ಷ ಶಿಕ್ಷಕರ ದಿನದಂದು ಸಂದೇಶವನ್ನು ಕಳಿಸುತ್ತೇನೆ.  ಹಾಗೆ ಅವರು ಸಹ ಮಕ್ಕಳ ದಿನದಂದು ನನಗೆ ಸಂದೇಶವನ್ನು ಕಳುಹಿಸುತ್ತಾರೆ.  ಈ ಒಂದು ವಿಷಯ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿ ಮಾಡುತ್ತಿದೆ.  ಈಗಲೂ ಸಿಕ್ಕಾಗಲಿಲ್ಲ ‘ಮಗಳೇ ಹೇಗಿದ್ದೀಯಾ’ ಎಂದು ಕೇಳುತ್ತಾರೆ.  ಅವರು  ನಮ್ಮೊಂದಿಗೆ ಇದ್ದಾಗ ಅವರ ಬೆಲೆ ಗೊತ್ತಾಗಲಿಲ್ಲ.  ಅವರು ಶಾಲೆಯನ್ನು ಬಿಟ್ಟಾಗಲೇ ತಿಳಿಯಿತು ಅವರು ಏನೆಂದು. 

ನನ್ನ ಬದುಕಿನಲ್ಲಿ ಬಂದು ಹೋದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ನಾನು ಎಂದಿಗೂ ಋಣಿಯಾಗಿರುತ್ತೇನೆ. ಕೆಲವು ಶಿಕ್ಷಕರು ಬಹಳ ನೆನಪಾಗುತ್ತಾರೆ.  ಅವರು ಶಾಶ್ವತವಾಗಿ ನಮ್ಮ ಹೃದಯದಲ್ಲಿ ನೆನಪಾಗಿ ಉಳಿಯುತ್ತಾರೆ.  ವಿದ್ಯೆಯನ್ನು ಭಿಕ್ಷೆಯನ್ನು ಬಿಡುವ ಹಾಗೆ ಬೇಡಿ ಗುರುವಿನಿಂದ ತೆಗೆದುಕೊಳ್ಳಬೇಕು. ಏಕೆಂದರೆ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ.  ಈ ಶಿಕ್ಷಕರ ದಿನದಂದು ನನ್ನ ನೆಚ್ಚಿನ ಶಿಕ್ಷಕಿ ಮೇಘನಾ ಮೇಡಂ ರವರಿಗೆ ಶಿಕ್ಷಕರ ದಿನದ ಶುಭಾಶಯಗಳು.

ಮಾಷಿತಾ

ಪ್ರಥಮ ಬಿ..ಸಿ.ಎ,

ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್, ಶಿವಮೊಗ್ಗ

ಇದನ್ನೂ ಓದಿ- ದಿಕ್ಕು ತಪ್ಪುತ್ತಿರುವ ಭಾರತದ ವಿದೇಶಾಂಗ ನೀತಿಯ ಭವಿಷ್ಯವೇನು?

More articles

Latest article