Thursday, May 23, 2024

ಬದುಕಿನತ್ತ ಮುಖಮಾಡಿದ ಗಂಗೆ

Most read

(ಈ ವರೆಗೆ…) ತನ್ನನ್ನು ಹಿಂಬಾಲಿಸುತ್ತಾ ಬಂದ ಮೋಹನನನ್ನು ತಪ್ಪಿಸಿ ಅಡಗಿ ಕುಳಿತ  ಗಂಗೆಯನ್ನು ನೋಡಿ  ಯಾರೋ ಒಬ್ಬರು ಆಕೆಯನ್ನು ಉಪಚರಿಸಿ ಅಪ್ಪನ ಮನೆ ಸೇರಿಸುತ್ತಾರೆ. ಮನೆಯವರ ತಾತ್ಸಾರಕ್ಕೆ ಮುನಿದು ಬೇರೆ ಮನೆ ಮಾಡುವ ತೀರ್ಮಾನ ತೆಗೆದುಕೊಂಡು ಅಪ್ಪನಿಗೆ ತಿಳಿಸುತ್ತಾಳೆ. ಗಂಗೆ ಬೇರೆ ಮನೆ ಮಾಡಿದಳೇ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ನಡಿಗೆʼಯ 64 ನೇ ಕಂತು.

ಗಂಡನಿಂದ ಕೊಲೆಯಾಗ ಬೇಕಾಗಿದ್ದ ಗಂಗೆ, ತಪ್ಪಿಸಿಕೊಂಡು ಬಂದು ಊರು ಸೇರಿದ್ದಾಳೆ ಎಂಬ ಸುದ್ದಿ ಸಂಜೆ ಎನ್ನುವುದರೊಳಗೆ ರೆಕ್ಕೆ ಪುಕ್ಕ ಕಟ್ಟಿಕೊಂಡು ನಾರಿಪುರದ ತುಂಬಾ ಹಾರಾಡಿತು.  ಇಲಿ ಹೋಯಿತೆಂದರೆ ಹುಲಿಯೇ ಹೋಯಿತು ಎಂದು ರಣರಂಗ ಮಾಡಿಬಿಡುವ ಈ ಊರ ಜನರಿಗೆ,  ಈ ರೋಚಕವಾದ ಕೊಲೆಯ ಸಮಾಚಾರವನ್ನು ಖುದ್ದು ಗಂಗೆಯ ಬಾಯಿಂದಲೇ ಕೇಳಿ ತಣಿಯಬೇಕೆಂಬ  ಉಮೇದು ಕೆರಳಿ ಗಂಗೆಯನ್ನು  ನೋಡಲು ಮನೆಯ ಮುಂದೆ ಹಿಂಡುಗಟ್ಟಿ ಬಂದರು.

ಚಿಕ್ಕಂದಿನಿಂದಲೂ ತನ್ನ ಗಂಡುಬೀರಿತನ ಪುಂಡಾಟಗಳಿಂದ ಮನೆ ಮಾತಾಗಿದ್ದ ಗಂಗೆ, ತನ್ನ ಅದ್ಭುತವಾದ ನಟನೆ, ಚಿನಕುರುಳಿಯಂತಹ ಮಾತುಗಾರಿಕೆಯಿಂದ ಊರಿನ ಹೆಂಗಸರು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿದ್ದಳು.  ಗಿರಿಧರ ತನ್ನ ಕಾಲೇಜಿನ ದಿನಗಳಲ್ಲಿ ಸೋಪಾನಪೇಟೆಯ ಲೈಬ್ರರಿಯಿಂದ ತಂದು ಓದುತ್ತಿದ್ದ ಪತ್ತೆದಾರಿ ಕಾದಂಬರಿಗಳಿಂದ ಪ್ರಭಾವಿತಳಾಗಿದ್ದ  ಇವಳು, ಅಣ್ಣನ ಗಮನಕ್ಕೆ ಬಾರದಂತೆ ಅವನು ತಂದ ಪುಸ್ತಕವನ್ನು ಎಗರಿಸಿ ಒಂದಕ್ಷರವೂ ಬಿಡದಂತೆ ಓದಿ, ಹೆಂಗಸರ, ಮಕ್ಕಳ ಕೂಟವಾಗಿದ್ದ ಕನಕಾಂಗಮ್ಮನ ಮನೆಯ ವಠಾರದಲ್ಲಿ ನಟನೆಯ ಸಮೇತ ಆ ಕತೆಯನ್ನು ರಸವತ್ತಾಗಿ  ಪ್ರಸ್ತುತ ಪಡಿಸುತ್ತಿದ್ದಳು.

ಅವರಿವರ ಮನೆ ಸುದ್ದಿ ಮಾತಾಡುತ್ತಲೋ, ಹಾಡು ಹಸೆ ಬರೆಯುತ್ತಲೋ, ಪುಂಖಾನು ಪುಂಖವಾಗಿ ಕಥೆಗಳನ್ನು ಹೆಣೆಯುತ್ತಲೋ, ತಮ್ಮ ವಿರಾಮದ ಗಳಿಗೆಗಳನ್ನು ಕಳೆಯುತ್ತಿದ್ದ ಅಲ್ಲಿನ ಹೆಂಗಸರಿಗೆ ಗಂಗೆ  ಒಂದು ರೀತಿ ಸಿನಿಮಾವೇ ಆಗಿಹೋಗಿದ್ದಳು. ಎಲ್ಲ ಪಾತ್ರಗಳನ್ನು ಸನ್ನಿವೇಶಗಳನ್ನು ಒಬ್ಬಳೆ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾ ಎದುರಿನವರನ್ನು ದಂಗು ಬಡಿಸುತ್ತಿದ್ದ ಗಂಗೆ, ತಾನು  ಮುಂದಿನ ಕತೆ ಹೊತ್ತು ತರುವವರೆಗೂ ಜನರು  ಚಾತಕ ಪಕ್ಷಿಗಳಂತೆ ಕಾಯುತ್ತಾ  ಕೂರುವಂತೆ ಮಾಡಿಬಿಟ್ಟಿದ್ದಳು.

ಹೀಗೆ, ಗಂಗೆಯ ಕಥೆಗಾಗಿ ಬಿದ್ದು ಸಾಯುತ್ತಿದ್ದ ಊರ ಹೆಂಗಸರು, ಸ್ವತಃ ಅವಳ ಬದುಕೆ ಒಂದು ರೋಚಕ ತಿರುವು ಪಡೆದು ನಿಂತಿರುವುದನ್ನು ಕಂಡು ಆತಂಕಕ್ಕಿಂತಲೂ ರೋಮಾಂಚನಗೊಂಡರು. ಅವಳ ಬಾಯಿಂದಲೇ ತಾನು ಗಂಡನಿಂದ ತಪ್ಪಿಸಿಕೊಂಡು ಬಂದ ಕಥೆಯ ಬಣ್ಣನೆಯನ್ನು ಕೇಳಬೇಕು ಎಂಬ ಅಪರಿಮಿತ ಕುತೂಹಲದಿಂದಲೇ ಗಂಗೆಯ ಮನೆ ಮುಂದೆ ಕನಕಾಂಗಮ್ಮನ ವಠಾರದ ಹೆಂಗಸರು ಮತ್ತು ಊರ ಕೆಲವು ಮುದುಕ ಮೋಟರು, ಸಾಲು ಮುನ್ನಾಗಿ ಅನುಕಂಪ ವ್ಯಕ್ತಪಡಿಸುವವರಂತೆ ಲೊಚಗುಟ್ಟುತ್ತಾ ನಿಂತಿದ್ದರು.

ಅಷ್ಟರಲ್ಲಾಗಲೇ ಗಡಂಗಿನ ಹೆಂಡವನ್ನೆಲ್ಲ ತನ್ನ ಹೊಟ್ಟೆಗೆ ಸುರಿದುಕೊಂಡು ಬಂದು  ಗಂಗೆಯ ವಿರುದ್ಧ ವರಾತ ತೆಗೆದುಕೊಂಡು ಕೂತಿದ್ದ ಚಂದ್ರಹಾಸ, ಹಾಗೆ ಸಹಾನುಭೂತಿಯ ಮುಸುಕು ಹಾಕಿ ಬಂದ ಜನರನ್ನೆಲ್ಲ  ಬಾಯಿಗೆ ಬಂದಂತೆ ಬೈದು  ಹುಚ್ಚು ನಾಯಿ ಅಟ್ಟುವಂತೆ ಅಟ್ಟಿದ್ದ. ಅಪ್ಪನನ್ನು ಹೊರತು ಪಡಿಸಿ  ಮನೆಯವರೆಲ್ಲರೂ ” ಗಂಡ ಹೇಳ್ದಂಗೆ  ನೀನ್ ಕೇಳಬೇಕಿತ್ತು”  ಎಂದು ಕಾಲು ಕೆರೆದು ನಿಂತರೆ ಹೊರತು, ಯಾರು ಅವಳ ಸಮಸ್ಯೆಯನ್ನು ಬಗೆಹರಿಸಿ ಗಂಡನೊಂದಿಗೆ ಸೇರಿಸಿ ಬದುಕನ್ನು ನೇರ್ಪು ಮಾಡುವ ಗೋಜಿಗೆ ಹೋಗಲಿಲ್ಲ.

ಎಲ್ಲರ ನಿರ್ಲಕ್ಷ್ಯ ಮತ್ತು ಚುಚ್ಚು ಮಾತುಗಳಿಂದ ಆ ಮನೆಯಲ್ಲಿ ಅಪರಿಚಿತಳಂತೆ ಒಂದೆರಡು ದಿನ ದೇಕಿದ ಗಂಗೆ, ಇನ್ನು ಇಲ್ಲಿರಲು ಸಾಧ್ಯವಿಲ್ಲ ಎನ್ನಿಸಿ ಒಂದು ಮುಂಜಾನೆ ತನ್ನ ಮೊಗುವನ್ನು ಕಂಕುಳಿಗಾಕಿಕೊಂಡು ಸದ್ದಾಗದಂತೆ ಬಾಗಿಲ ಅಗುಳಿ ತೆಗೆದು ಹೊರನಡೆದಳು. ಮಗಳು ಬಂದಾಗಿನಿಂದ ನಿದ್ದೆ ಎನ್ನುವುದನ್ನೇ ಮರೆತಿದ್ದ ಬೋಪಯ್ಯ, ನೆರಳಿನಂತೆ ಅವಳ ಹಿಂದೆಯೆ ಬಂದು ನಿಂತದ್ದು ತಿಳಿಯದ ಗಂಗೆ “ಥೂ ನನ್ನಂತ ಪಾಪ್ಮುಂಡೆನ ಯಾವ್ ಸುಖ ಉಣ್ಣಕುಟ್ಟುಸ್ದಪ್ಪ ಭಗವಂತ” ಎಂದು ಗದ್ಗತಿತಳಾಗಿ ಗೊಣಗಿಕೊಂಡಳು.

“ಬದ್ಕು ಹಿಂಗೆ ಇರದಿಲ್ಲ ಕನ್ಮಗ ನಿಂಗೂ ಒಂದು ಒಳ್ಳೆದಿನ ಬತ್ತದೆ ಅಲ್ಲಿಗಂಟ ತಾಳ್ಮೆ ಗೆಡ್ಬಾರ್ದು ಆಟೆಯ” ಕಿವಿ ಮೇಲೆ ಬಿದ್ದ ಅಪ್ಪನ ದನಿ ಗಂಗೆಯೊಳಗೆ ನೂರು ಆನೆಯ ಬಲವನ್ನು ತಂದು ಕೊಟ್ಟಿತು. “ಬ್ಯಾಡ ಅನ್ಬೇಡಿ ಆ ಒಳ್ಳೆ ದಿನ ಹುಡಿಕೊಂಡೆ ಹೊಂಟಿದಿನಿ ಎಲ್ಲಾದ್ರು ಕಣುದ್ ಕಣ್ಮರೆ ಬದುಕ್ಕಟ್ಕೊತಿನಿ ಕಳುಸ್ಬುಡ್ರಪ್ಪ ನನ್ನ”  ಮಗಳ ಮಾತು ಬೋಪಯ್ಯನ ಕರುಳನ್ನೇ ಹಿಂಡಿತು.” ಕಂಕ್ಳಲೊಂದು, ಹೊಟ್ಟೆಲೊಂದು ಹೊತ್ಕೊಂಡು ದಿಕ್ಕು ದೆಸೆಯಿಲ್ದಂಗೆ ನಡಿಯದು ಹುಡುಗಾಟುದ್ಮಾತೆನವ್ವ. ನಾನಿರಗಂಟ ನಿನ್ನೊಬ್ಳುನ್ನೇ ಇರಾಕ್ಬುಟ್ಟೇನ ನಡ್ನಡಿ ಹುಚ್ಚುಚ್ಚಂಗಾಡ್ಬೇಡ. ನಿನ್ಗೊಂದಾರಿ ಮಾಡೆ ನಾ ಸಾಯದು ಕನಂತೆ ” ಎಂದು ಮಗಳಿಗೆ ಧೈರ್ಯ ತುಂಬಿದ ಬೋಪಯ್ಯ, ತನ್ನ ಮನೆಯ ಎದುರೇ ಕಣ್ಣಳತೆಯ ದೂರದಲ್ಲಿದ್ದ  ಮಾಂಕಳಮ್ಮನ ಗಲ್ಲಿಯಲ್ಲಿ ಇಪ್ಪತ್ತು ರೂಪಾಯಿಗೆ ಒಂದು ಸಣ್ಣ ಮನೆಯನ್ನು ಬಾಡಿಗೆ ಹಿಡಿದು ನಿರಾಳನಾದ.

ಅಣ್ಣ ತಮ್ಮಂದಿರ ಸಣ್ಣತನಗಳಿಂದ ಮುನಿದುಕೊಂಡು, ಮನೆಯ ಸಂಬಂಧವನ್ನೇ ಕಡಿದು ಕೊಂಡವನಂತೆ ತಲಚೇರಿಯಲ್ಲಿ ಪೋಲಿಸನಾಗಿ ಕೆಲಸ ನಿರ್ವಹಿಸುತ್ತಿದ್ದ ಮೂರನೆಯ ಅಣ್ಣ  ನಂಜಪ್ಪ, ಎಷ್ಟೋ ವರ್ಷಗಳ ನಂತರ ಇದ್ದಕ್ಕಿದ್ದಂತೆ ಒಮ್ಮೆ ಊರಿಗೆ ಬಂದವನೇ, ಗಂಗೆಯ ಕಷ್ಟಗಳನ್ನೆಲ್ಲಾ ಕೇಳಿ ಅವಳ ಮನೆ ಬಾಡಿಗೆ  ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ನಡೆದಿದ್ದ. ಬದುಕಿನ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಗಂಗೆಗೆ  ಒಂದು ಸಣ್ಣ ಗರಿಕೆಯ ಆಸರೆ ಸಿಕ್ಕಂತಾಗಿ ಉಸಿರು ತಿರುಗಿಸಿಕೊಂಡು ಬದುಕಿನತ್ತ ಮುಖ ಮಾಡಿದ್ದಳು.

ಇಂತಹ ಹೊತ್ತಿನಲ್ಲೇ ಯಾವ ಜನ್ಮದ ನಂಟೊ ಎನ್ನುವಂತೆ, ದುಡಿಮೆಯ ಕೈಯಾಗಿ ಮತ್ತೆ ಗಂಗೆಯೊಂದಿಗೆ ಬಂದು ಸೇರಿಕೊಂಡ ಮೋಹನನ  ಸೋದರ ಮಾವ ಹೆಡ್ಡ ಅಪ್ಪಜ್ಜಣ್ಣ ಬೋಪಯ್ಯನೊಂದಿಗೆ ಸೇರಿ ತುಂಬಿದ ಬಸುರಿ ಅಸ್ ಉಸ್ ಎನ್ನದಂತೆ, ಪೈಸೆಗೆ ಪೈಸೆ ಸೇರಿಸಿ ಬೆಣ್ಣೆ ತುಪ್ಪ ಕಾಳು ಕಡಿಯನ್ನು ತಂದು ಎರಡನೆ ಮಗುವಿನ ಬಾಣಂತನವನ್ನು ನಿಸೂರಾಗಿ ಮಾಡಿ ಮುಗಿಸಿದ್ದ.

ಈ ಹಿಂದಿನ ಕಂತು- http://“ನಾನು ಅವನ್ಜೊತೆ ಸೇರ್ಕೊಂಡು ಸೂಳೆಗಾರ್ಕೆ ಮಾಡಬೇಕಿತ್ತಾ” https://kannadaplanet.com/tanthi-melina-nadige-63/

ಗಂಡು ಮಕ್ಕಳಿಗೆ ಹೆದರಿ ಅವರ ಕಣ್ತಪ್ಪಿಸಿ ಆಗೀಗ ಬಂದು ನೋಡಿಕೊಂಡು ಓಡಿ ಹೋಗುತ್ತಿದ್ದ ಅವ್ವನ ಬಗ್ಗೆ ಒಳಗೊಳಗೆ ಕುದಿಯುತ್ತಿದ್ದ  ಗಂಗೆ,  ತನ್ನ ಎರಡು ಹೆಣ್ಣು ಮಕ್ಕಳನ್ನು ನೋಡಿ ಗಂಡಾಂತರದಿಂದ ಪಾರಾದವಳಂತೆ ತನ್ನೆಲ್ಲಾ ಅಸಹನೆಯನ್ನು ನುಂಗಿಕೊಂಡು ನಿಟ್ಟುಸಿರು ಬಿಟ್ಟು ಹಗುರಾಗುತ್ತಿದ್ದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article