Sunday, July 14, 2024

“ನಾನು ಅವನ್ಜೊತೆ ಸೇರ್ಕೊಂಡು ಸೂಳೆಗಾರ್ಕೆ ಮಾಡಬೇಕಿತ್ತಾ”

Most read

ಮೋಹನನಿಂದ ತಪ್ಪಿಸಿಕೊಂಡು ತಲೆಮರಿಸಿಕೊಂಡ ಗಂಗೆ, ಬಿಗಿ ಹಿಡಿದ ಉಸಿರು ಬಿಡದಂತೆ ಜೀವ ಕೈಲಿಡಿದು ಒಂದೇ ಸಮನೆ ಓಡಲಾರಂಭಿಸಿದ್ದಳು. ಅದ್ಯಾವ ಮಾಯದಲ್ಲೋ ತನ್ನ ಹೆಜ್ಜೆಯ ಜಾಡು ಹಿಡಿದು ಮಿಂಚಿನ ವೇಗದಲ್ಲಿ  ಸಮೀಪಿಸಿ ಬಿಡುತ್ತಿದ್ದ ಮೋಹನನ ಚಾಕಚಕ್ಯತೆ ಗಂಗೆಯನ್ನು ಮತ್ತಷ್ಟು ದಿಗಿಲು ಗೊಳಿಸಿತ್ತು. ಬಿರುಸಿನ ಓಟದ ಕುಲುಕಾಟಕ್ಕೆ ಅಳಲಾರಂಭಿಸಿದ ಕಂಕುಳ ಕೂಸಿನ ಬಾಯನ್ನು ಭದ್ರವಾಗಿ ಮುಚ್ಚಿ ಹಿಡಿದ ಗಂಗೆ, ಕ್ಷಣ ನಿಂತು ಉಸಿರು ತಿರುಗಿಸಿಕೊಂಡು ಸುತ್ತಲೂ ಕಣ್ಣಾಡಿಸಿದಳು. ಅಮಾವಾಸ್ಯೆಯ ಆಸು ಪಾಸಾಗಿದ್ದರಿಂದ ಕತ್ತಲೆ ಗಾಢವಾಗಿಯೇ ಅಮರಿಕೊಂಡಿತ್ತು. ತನ್ನ ಕಣ್ಣನ್ನು ಮತ್ತಷ್ಟು ಕಿರಿದುಗೊಳಿಸಿ ನೋಡಿದಳು. ತನ್ನ ಬಲಕ್ಕೆ ಇದ್ದ ಇಳಿಜಾರಿನಲ್ಲಿ ಒತ್ತೊತ್ತಾಗಿ ಇಟ್ಟಿದ್ದ ದೊಡ್ಡ ದೊಡ್ಡ ಕೊಳವೆಗಳು ಕಣ್ಣಿಗೆ ಬಿದ್ದವು.  ಓಡಿ ಅದರ ಒಳ ಹೊಕ್ಕವಳೆ ತನ್ನ ರವಿಕೆಯ ಗುಂಡಿ ಬಿಚ್ಚಿ, ಬತ್ತಿದ ಎದೆಯನ್ನು ಅಳುವ ಮೊಗುವಿನ ಬಾಯಿಗಿಟ್ಟು  ಸುಮ್ಮನಿರಿಸಿದಳು. 

ಇನ್ನೇನು ಉಸಿರು ತಿರುಗಿಸಿಕೊಳ್ಳಬೇಕು ಎನ್ನುವುದರೊಳಗೆ ಅದೆಲ್ಲಿ ಕುಳಿತಿತ್ತೋ, ಉರುಬಿದರೆ ಸುರುಟಿ ಬೀಳುವಂತಹ ಬಿಳಿ ನಾಯಿಯೊಂದು  ಗಂಟಲು ಹರಿದು ಹೋಗುವಂತೆ ದೊಡ್ಡ ದನಿಯಲ್ಲಿ ಬೊಗಳುತ್ತಾ ಗಂಗೆಯತ್ತಲೇ ಓಡಿಬಂದಿತು‌. ಇನ್ನೇನು ಕೊಳವೆ ಒಳಗೆ ನುಗ್ಗಿ ಇವಳನ್ನು ಹರಿದೇ ಬಿಟ್ಟಿತು ಎನ್ನುವುದರೊಳಗೆ, ಆ ನಾಯಿಯ ಯಜಮಾನ ಧುತ್ತನೆ ಪ್ರತ್ಯಕ್ಷನಾಗಿ ಅದರ ಕೊರಳಿಗೆ ಕಟ್ಟಿದ್ದ ದಾರವನ್ನು ಬಿರುಸಾಗಿ ತನ್ನತ್ತ ಎಳೆದು ಕೊಂಡ. 

“ಯಾರದು ಒಳಗೆ ಈಚೆಗ್ಬಂದ್ರೆ ಸರಿ, ಇಲ್ಲ ಅಂದ್ರೆ ಗತಿ ನಿಟ್ಗಿರದಿಲ್ಲ ಈ ನಮ್ ಕಾಳುನ್ನೆ ಒಳಗ್ಬುಟ್ಟು ವಿಚಾರುಸ್ಕೊ ಬೇಕಾಯ್ತದೆ ಅಷ್ಟೆಯ” ಎಂದು ಅರಚಿದ ಆ ವ್ಯಕ್ತಿಯ ಕೋಪವನ್ನು ಗ್ರಹಿಸಿದ ಗಂಗೆ,  ತುಸುವೆ ತಲೆ ಹೊರಹಾಕಿ ನೋಡಿದಳು. ತನಗೆ ನೇರವಾಗಿ ಕಣ್ಣು ಕುಕ್ಕುವಂತೆ ಅಷ್ಟು ದೂರದಲ್ಲಿದ್ದ ಬೀದಿ ದೀಪದ ಕೆಳಗೆ, ಅರ್ಧ ಕುಸಿದು ಬಿದ್ದಿದ್ದ  ಕಂಪೌಂಡಿನ ಮೇಲೆ ನಿಂತು, ಹಸಿದ ಹುಲಿಯಂತೆ ಕೆರಳಿ ಏದುಸಿರು ಬಿಡುತ್ತಿದ್ದ  ಮೋಹನನ ಚಿತ್ರ ರಪ್ಪನೆ ಕಣ್ಣಿಗೆ ಬಡಿದು ಮತ್ತಷ್ಟು ದಿಗ್ಭ್ರಮೆ ಗೊಂಡಳು. ಸರ್ರನೆ ತಲೆ ಒಳಗೆಳೆದುಕೊಂಡ ಗಂಗೆ “ನನ್ನ ಗಂಡ ಕುಡ್ದು ಜಗಳ ತಗ್ದು, ಕೊಲೆ ಮಾಡ್ತಿನಿ ಅಂತ ಓಡುಸ್ಕೊಂಡು ಬಂದವ್ನೇ ಕನಣ್ಣೊ, ನಿನ್ನ್ ದಮ್ಮಯ್ಯ ಈ ನಾಯಿನ ಆ ಕಡೆ ಕರ್ಕೊಂಡು ಹೋದ್ರೆ ನಾನು ನನ್ನ ಮಗಿನೂ ಬದಿಕೊತಿವಿ”ಎಂದು ಕೈ ಮುಗಿದಳು. “ಅಯ್ಯೋ ಅಂಗೆನವ್ವ… ಸರ್ಸರಿ ನಾನು ಇಲ್ಲೇ ನಮ್ಮಟ್ಟಿ ಬಾಗ್ಲಲೆ ಕೂತಿರ್ತಿನಿ. ಹೆದ್ರಿಕೋ ಬೇಡ ಅವ್ನು ಹೋದ್ ಮ್ಯೇಕೆ ನಾನೇ ಕರಿತಿನಿ ಬರಿವಂತೆ” ಎಂದು ಹೇಳಿದ ವ್ಯಕ್ತಿ ಇನ್ನೂ ಬೊಗಳುತ್ತಲೇ ಇದ್ದ ನಾಯಿಯನ್ನು ದರದರನೆ ಎಳೆದುಕೊಂಡು ಹೋಗಿ ಅವಳಿಗೆ ಕಾಣುವಂತೆ ಎದುರಾಗಿ ತನ್ನ ಗುಡಿಸಲ ಬಾಗಿಲಲ್ಲಿ ಕೂತ.

ಮೋಹನ ಮರೆಯಾದ ಎಷ್ಟೋ ಹೊತ್ತಿನ ನಂತರ ಆ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಬಂದು ಗಂಗೆಯನ್ನು ತನ್ನ ಗುಡಿಸಲ ಒಳಗೆ ಕರೆದುಕೊಂಡು ಹೋದ. ಗಂಗೆ ತೋಡಿಕೊಂಡ ಸಂಕಟವನ್ನೆಲ್ಲ ತಮ್ಮ ಒಡಲಿಗೆ ತುಂಬಿಕೊಂಡ  ದಂಪತಿಗಳು  ಆ ರಾತ್ರಿ ಅವಳನ್ನು ಅಲ್ಲೇ ಉಳಿಸಿಕೊಂಡು ಉಪಚರಿಸಿ, ಮರುದಿನ ತಮ್ಮ ಮಗನನ್ನು ಜೊತೆ ಮಾಡಿ ನಾರಿಪುರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.

“ಕೆಟ್ಟು ಅಪ್ಪನ್ ಮನೆ ಸೇರ್ಬಾರದು” ಎನ್ನುವ ಕನಸಿನೊಂದಿಗೆ ಇಲ್ಲಿಂದ ಕಾಲು ತೆಗೆದಿದ್ದ ಗಂಗೆ, ಈಗ ಎಲ್ಲಾ ಭಾವಗಳು ಸತ್ತವಳಂತೆ ನಿರ್ಲಿಪ್ತಳಾಗಿ  ಅಪ್ಪನ ಮನೆ ಕದ ತಟ್ಟಿದ್ದಳು. ಮಟ ಮಟ ಮಧ್ಯಾಹ್ನದ ಉರಿ ಬಿಸಿಲ ಜಳಕ್ಕೆ ಹೊರಗೆ ತಲೆಹಾಕದೆ ತಂಪಾಗಿ ಮನೆಯಲ್ಲೇ ಕೂತಿದ್ದ ಅಣ್ಣ ತಮ್ಮಂದಿರೆದುರು,  ಗಂಗೆಯೊಂದಿಗೆ ಬಂದ ಹುಡುಗನೇ ಅಲ್ಲಿ ನಡೆದ ಎಲ್ಲಾ ವಿಷಯಗಳನ್ನು ಚಾಚು ತಪ್ಪದೇ ಹೇಳಿದ. ಪಕ್ಕದಲ್ಲಿಯೇ ಕುಳಿತು ಇದನ್ನೆಲ್ಲ ಕೇಳಿಸಿ ಕೊಳ್ಳುತ್ತಿದ್ದ ತಮ್ಮ ಶಂಕರ ಬಾಯಿ ತೆಗೆದವನೇ “ನಮ್ ಬಾವ ಒಳ್ಳೆವ್ರೆಯ  ನೀನೇ ಹಟ್ಮಾರಿ ಅವರು ಹೇಳ್ದಂಗೆ ಕೇಳ್ಕೊಂಡಿದ್ದಿದ್ರೆ ಇವತ್ತು ನಿನ್ಗೆ ಈ ಪಾಡು ಬತ್ತಿತ” ಎಂದು ಗಂಗೆಯನ್ನೇ ಹೀಯಾಳಿಸಿ ಮಾತಾಡಿದ. 

ನಡುವೆ ಬಾಯಿ ಹಾಕಿದ ಅವ್ವ “ಕಷ್ಟವೋ ಸುಖ್ವೋ ಎಲ್ಲನು ಅನ್ಸರುಸ್ಕೊಂಡು ಹೋಗ್ಬೇಕು ಕನವ್ವ. ಸಣ್ಣುದ್ರಲ್ಲ್ ಆಡ್ದಂಗೆ ಈಗ್ಲೂ ಆಡಕಾದದ ಹೇಳು. ತಗ್ಗಿ ಬಗ್ಗಿ ನಡುದ್ರೆಯ ಸಂಸಾರ” ಎಂದು ರಾಗವಾಡುತ್ತಾ ಮೃದುವಾಗಿ ಗಂಗೆಯ ಬೆನ್ನು ಚಪ್ಪರಿಸಿದಳು. ಅಲ್ಲಿಯವರೆಗೆ ಕಲ್ಲಿನಂತಿದ್ದ ಗಂಗೆ ಒಮ್ಮೆಗೆ ಅವ್ವನ ಕೈಜಾಡಿಸಿ ದೂರ ನೂಕಿ “ನೀನು ಒಬ್ಳು ಅವ್ವನ.. ಕಟ್ಕೊಂಡೋನು ಯಾವ್ ಯಾವ್ಳ್ ಜೊತೆನೊ ಮಲಗಿದ್ರೆ ಅದ್ನ ನೋಡ್ಕೊಂಡು ಬಾಯಿ ಮುಚ್ಕೊಂಡಿರು ಅಂತಿದ್ದಿಯಲ್ಲ. ಹಂಗಿದ್ರೆ ನಾನು ಅವನ್ಜೊತೆ ಸೇರ್ಕೊಂಡು ಸೂಳೆಗಾರ್ಕೆ ಮಾಡಬೇಕಿತ್ತು ಅಂತ ನಿನ್ ಮಾತ್ನರ್ಥ ಅಲ್ವ. ಇಲ್ಲಿಗಂಟ ಒಂದ್ಸರಿನಾದ್ರು ನನ್ನಿಷ್ಟಾನಿಷ್ಟಗಳ್ನೇನರ ಕೇಳಿದ್ಯೇನವ್ವ. ಹೆಜ್ಜ್ ಹೆಜ್ಜೆಗೂ ಬರೀ ತತ್ವಾರನೇ ಮಾಡ್ಕೊಂಡ್ ಬಂದಿದ್ದಿ. ಹುಟ್ಸಿದ್ ತಪ್ಗೆ ವಿಷ ಕೊಟ್ಟುಬುಡು ಅತ್ತಗೆ ಕುಡ್ದು ಕಣ್ಣು ಮುಚ್ಕೊಂಡ್ಬುಡ್ತಿನಿ ಯಾರಿಗ್ ಬೇಕು ಈ ಬಂಡಾಟ” ಹೇಳ ಹೇಳುತ್ತಾ ಗಂಗೆಯ ಗಂಟಲು ಕಟ್ಟಿತು. ಅದುವರೆಗೂ ಅದುಮಿಟ್ಟುಕೊಂಡಿದ್ದ ಕೋಪ, ದುಃಖ, ಅಸಹಾಯಕತೆಗಳೆಲ್ಲಾ ಒಮ್ಮೆಗೆ ಕಿತ್ತು ಹೊರಬಂದಿತು. ತಡೆಯಲಾರದೆ ದಢ ದಢನೆ ಗೋಡೆಗೆ ತಲೆ ಚಚ್ಚಿಕೊಳ್ಳತೊಡಗಿದಳು. 

ಹಿಂದಿನ ಕಂತು ಓದಿದ್ದೀರಾ? http://“ಇವತ್ತು ನಿನ್ನ ಕತೆ ಮುಗಿತು ಅಂದ್ಕೊ” https://kannadaplanet.com/ivattu-ninna-kate-mugitu-andko/

ಯಾರ ಹಿಡಿತಕ್ಕೂ ಸಿಕ್ಕದ ಅವಳ ಕೋಪಕ್ಕೆ ದೂರದಲ್ಲಿ ಕೂತು   ಒಳಗೊಳಗೆ ಅಳುತ್ತಿದ್ದ ಅಪ್ಪನ ಬಿಕ್ಕಳಿಕೆಯ ಸದ್ದು ಮದ್ದಾಗಿ ಒದಗಿ ಬಂದಿತು. ಜೀವದಂತೆ ಪ್ರೀತಿಸುತ್ತಿದ್ದ ಅಪ್ಪನ ಕಣ್ಣೀರನ್ನು ಮೊದಲ ಬಾರಿಗೆ ನೋಡಿದ ಗಂಗೆ ತಡೆಯಲಾರದೆ ಓಡಿಬಂದು  ಅಪ್ಪನನ್ನೇ ಸಮಾಧಾನಿಸ ತೊಡಗಿದಳು “ನನ್ ಹಣೆಬರ ನೀವ್ಯಾಕ್ರಪ್ಪ ಅಳ್ತಿರಿ. ಈಗಿರ ಕಷ್ಟ ಸಾಲ್ದು ಅಂತ ಮತ್ತೆ ಬಸ್ರು ಬೇರೆ ಹೊತ್ಕೊಂಡು ಬಂದಿದಿನಿ. ಇವರ್ಗೆಲ್ಲ ಇಷ್ಟ ಇದ್ರೆ ನನ್ನ ಇಲ್ಲಿಟ್ಕೊಳ್ಳಿ. ಇಲ್ಲ ಅಂದ್ರೆ ಬ್ಯಾರೆ ಒಂದು ಮನೆ ಮಾಡ್ಕೊಡಿ, ಕೂಲಿನೋ ನಾಲಿನೋ ಮಾಡಿ ನನ್ಮಕ್ಳುನ್ನ ಸಾಕೊತಿನಿ ”  ಎಂದು ಹೇಳುತ್ತಿದ್ದ ಗಂಗೆಯ ಧ್ವನಿಯಲ್ಲಿ ಈಗ ದುಃಖವಿರಲಿಲ್ಲ, ಪುಕ್ಕುಲುತನವಿರಲಿಲ್ಲ ಗಟ್ಟಿಯಾದ ನಿರ್ಧಾರವಿತ್ತು. ಬದುಕಿ ತೋರಿಸುತ್ತೇನೆ ಎನ್ನುವ ಛಲವಿತ್ತು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article