Sunday, July 14, 2024

“ಇವತ್ತು ನಿನ್ನ ಕತೆ ಮುಗಿತು ಅಂದ್ಕೊ”

Most read

(ಈ ವರೆಗೆ…) ಸುಕನ್ಯಾಳ ಮನೆ ಸೇರಿದ್ದ ಗಂಗೆ ಅಲ್ಲಿಯ ಪರಿಸ್ಥಿತಿಗೆ ಹೇಸಿ, ರೋಸಿ ಅಸಹಾಯಕಳಾಗಿ ಮಗುವಿನೊಂದಿಗೆ ಮಧ್ಯ ರಾತ್ರಿಯೇ ಹೊರ ನಡೆಯುತ್ತಾಳೆ. ತನ್ನ ಊರಿನ ಮಂತ್ರಿಗಳ ಮನೆ ಕಂಡು  ಹೋಗಿ ಸಹಾಯ ಕೇಳುತ್ತಾಳೆ. ಅವರು ಆಕೆಗೊಂದು ಪತ್ರನೀಡಿ ಕೆಲಸಕ್ಕೆ ಸೇರಿಕೊಳ್ಳಲು ಹೇಳುತ್ತಾರೆ. ಗಂಗೆ ಕೆಲಸಕ್ಕೆ ಸೇರಿದಳೇ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆಯ 62 ನೇ ಕಂತು.

ಕಣ್ಣು ಮುಚ್ಚಿ ಬಿಡುವುದರ ಒಳಗೆ ಏನೇನೋ ಘಟಿಸಿ ಬಿಡುವಂತಹ ಈ ಮಾಯಕದ ನಗರ, ಮನುಷ್ಯತ್ವವೇ ಇಲ್ಲದಂತಹ ಗಂಡ, ಕಾಲಿಗೆ ತೊಡರಾದ  ಬದುಕು, ಈ ಎಲ್ಲಾ ಹಳವಂಡಗಳಿಂದ ರೋಸಿಹೋದ ಗಂಗೆ, ಇಲ್ಲಿಂದ ಪಾರಾಗಿ ಬಿಟ್ಟರೆ  ಸಾಕಪ್ಪ ಎನ್ನುವ ನಿಟ್ಟುಸಿರಿನೊಂದಿಗೆ ಬಂದು ಮನೆ ಸೇರಿದಳು. ತನ್ನ ಬದುಕಿನಲ್ಲಿ ಏನು ಘಟಿಸಬಾರದೆಂದು ಬಯಸಿದ್ದಳೋ ಈಗ ಅದೇ ಮಾರ್ಗದತ್ತ ಮುಖ ಮಾಡಿ ನಿಂತಿದ್ದ ತನ್ನನ್ನೊಮ್ಮೆ ನೋಡಿಕೊಂಡಳು.

ಬಟ್ಟೆಯ ಧೂಳು ಕೊಡವಿಕೊಂಡಷ್ಟೇ ಸಾರಾಗವಾಗಿ ತನ್ನನ್ನು ಕೊಡವಿಕೊಂಡ ಅಣ್ಣಂದಿರ ಮುಖ ಒಮ್ಮೆಲೆ ಕಣ್ಣ ಮುಂದೆ ರಾಚಿ  ಜೀವ  ವಿಲಿಗುಟ್ಟಿತು. ರವಿಕೆಯ ಒಳಗೆ ಭದ್ರವಾಗಿಟ್ಟುಕೊಂಡು ಬಂದಿದ್ದ ಮಂತ್ರಿಗಳು ಕೊಟ್ಟ ಪತ್ರ ತೆಗೆದು ತಿರುಗಿಸಿ ಮುರುಗಿಸಿ ನೋಡಿದಳು. ಒಂದು ರೀತಿಯ ಧೈರ್ಯ ತುಂಬಿಕೊಂಡಿತು‌. ಕಂಕುಳಲ್ಲಿದ್ದ ಮಗುವಿನ ಮುಖದ ತುಂಬಾ ಮುತ್ತಿಟ್ಟು ” ನಾನಿರಗಂಟ ನಿನ್ನ ಯಾರ್ ಕೈಕೆಳಗೂ ಆಕಕಿಲ್ಲ ಮಗ್ಳೇ” ಎನ್ನುತ್ತಾ ಆ ಪತ್ರವನ್ನು ದೇವರ ಮುಂದಿಟ್ಟು ನಮಸ್ಕಾರ ಮಾಡಿಕೊಂಡಳು.

 ಹಿಂದಿನ ದಿನದಿಂದಲೂ ಒಂದೇ ಸಮನೆ ರೇಸಿಗೆ ಬಿಟ್ಟ ಕುದುರೆಯಂತೆ ಓಡಿ ಓಡಿ ಸಾಕಾಗಿದ್ದವಳಿಗೆ  ಮೈ ಕೈ ಎಲ್ಲಾ  ಭಾರವಾಗಿ ಆಯಾಸ ಆವರಿಸಿತು. ಊರು ಸೇರಿಕೊಳ್ಳಲು ಮಂತ್ರಿಗಳು ಕೊಟ್ಟುಕಳುಹಿಸಿದ್ದ ಒಂದಿಷ್ಟು ದುಡ್ಡಿನಲ್ಲೇ  ಬೆಳಗ್ಗಿನ ತಿಂಡಿ ಕಟ್ಟಿಸಿಕೊಂಡು ಬಂದಿದ್ದ ಗಂಗೆ, ಮಗುವಿಗೂ ತಿನ್ನಿಸಿ ತಾನೊಂದಿಷ್ಟು ಬಾಯಾಡಿ ಮಲಗಿದ್ದಳು. ಆಗಷ್ಟೇ ಕಣ್ಣುಗಳು ಕೂಡಿಕೊಳ್ಳತೊಡಗಿದ್ದವು, ಇದ್ದಕ್ಕಿದ್ದಂತೆ ಹೊಟ್ಟೆ ಗುಡುಗ ತೊಡಗಿತು. ಬಾಯೆಲ್ಲಾ ಒಮ್ಮೆಗೆ ಕಹಿಯಾದಂತಾಗಿ ನೀರು ತುಂಬಿಕೊಂಡು ಹಿಂದೆಯೇ ವಾಂತಿ ಭೇದಿ ಆರಂಭವಾಗಿಬಿಟ್ಟಿತು. ಹಾಗೂ ಹೀಗೂ ಸಂಜೆಯವರೆಗೂ ಮನೆಮದ್ದಿನಲ್ಲಿಯೇ ಗುದ್ದಾಡಿದ ಗಂಗೆ ಇನ್ನು ಸಾಧ್ಯವಿಲ್ಲವೆನ್ನಿಸಿ ಆಸ್ಪತ್ರೆಯ ಹಾದಿ ಹಿಡಿದಳು.

 ಡಾಕ್ಟರ್ ಶಾಪಿನ ಮುಂದೆ ಕಿಕ್ಕಿರಿದು ನಿಂತಿದ್ದ ಜನ ಸಂದಣಿ, ಗಂಗೆಯ ಒದ್ದಾಟವನ್ನು ನೋಡಲಾರದೆ ತಾವೆ ಅವಳನ್ನು ಒಳಗೆ ಕಳುಹಿಸುವ ಉದಾರತೆ ತೋರಿದರು. ಕೂಲಂಕಶವಾಗಿ ಗಂಗೆಯನ್ನು ಪರೀಕ್ಷಿಸಿದ ವೈದ್ಯರು ಅವಳು ಮತ್ತೆ ಗರ್ಭ ಧರಿಸಿರುವ ವಿಷಯವನ್ನು ತಿಳಿಸಿದರು. ಆಘಾತಗೊಂಡ ಗಂಗೆ  ವಾಂತಿ ಭೇದಿ ನಿಲ್ಲಲು ವೈದ್ಯರು ಕೊಟ್ಟ ಇಂಜೆಕ್ಷನ್ ತೆಗೆದುಕೊಂಡು ಕಣ್ಣೀರಾಕುತ್ತಾ ಮನೆಯತ್ತ ಬಂದಳು. 

ಮನೆಯ ಬೀಗ ಹೊಡೆದು ಬಾಗಿಲು ತೆರೆದುಕೊಂಡಿತ್ತು.  ಕ್ಷಣ ದಿಗಿಲುಗೊಂಡಳಾದರು ” ಇನ್ನೇನು ಪ್ರಾಣ ಒಂದು ಉಳ್ಸಿದ್ದಿ ಅದುನ್ನು ತಕ್ಕಬುಡವ್ವ ತಾಯಿ ಅತ್ತಗಿ” ಎಂದು ತಾನು ನಂಬಿದ್ದ ಚಾಮುಂಡಿಯ ಮೇಲೊಮ್ಮೆ ಕಿಡಿಕಾರಿ, ಆಗಿದ್ದಾಗಲಿ ಎಂದು ನಿರ್ಧರಿಸಿ ಸೀದಾ ಒಳ ನುಗ್ಗಿದಳು. ಹಾಸಿದ್ದ ಕೌದಿಯ ಮೇಲೆ ಎದೆ ತೆರೆದು ಮಲಗಿದ್ದ ಸುಕನ್ಯಾಳಿಗೆ, ಮೋಹನ ಮುಲಾಮು ಹಚ್ಚುತ್ತಾ ಸಮಾಧಾನಗೊಳಿಸಲೆತ್ನಿಸುತ್ತಿದ್ದ. ಇನ್ನೇನು ಋಣ ಹರಿದುಕೊಂಡು ಹೋಗಲು ತಯಾರಿದ್ದ ಗಂಗೆ ಒತ್ತರಿಸಿ ಬಂದ ಕೋಪವನ್ನು ಹಲ್ಲು ಕಚ್ಚಿ ಸಹಿಸಿ ಚಕಾರವೆತ್ತದೆ ಸೀದ ಒಳ ಕೋಣೆಗೆ ನಡೆದಳು. ಅಲ್ಲಿ ಮಂತ್ರಿಗಳು ಕೊಟ್ಟಿದ್ದ  ಪತ್ರ ಚೂರುಚೂರಾಗಿ ನೆಲದ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಆಘಾತಗೊಂಡ ಗಂಗೆ  ಮನುಷ್ಯಳಾಗಿ ಉಳಿಯಲಿಲ್ಲ. ಮಗುವನ್ನು ಒಂದು ಬದಿಗೆ ಕುಕ್ಕಿ ಮೋಹನನ ತೊಡೆಯ ಮೇಲಿದ್ದ ಸುಕನ್ಯಾಳ ಮೇಲೆ ಹುಚ್ಚು ನಾಯಿಯಂತೆ ಹಾರಿ  ಮುಖಾಮೂತಿ ನೋಡದೆ ಬಡಿದು ರಕ್ತ ಒಸರುವಂತೆ ಮಾಡಿದಳು. 

ತಡೆಯಲು ಪ್ರಯತ್ನಿಸಿದ ಮೋಹನನ ಕುತ್ತಿಗೆಯನ್ನು ಅಳ್ಳಾಡದಂತೆ ಬಿಗಿಯಾಗಿ ಹಿಡಿದು ಮುಖದ ತುಂಬಾ ಕ್ಯಾಕರಿಸಿ ಉಗಿದು “ನನ್ ಹೊಟ್ಟೆ ಮೇಲೆ ಹೊಡ್ದು ಬುಟ್ಟಲ್ಲೋ ಸೂಳೆಮಗ್ನೇ” ಎಂದು ಚೀರುತ್ತಾ ಅವನ ಕೂದಲನ್ನು ಬಲವಾಗಿ ಹಿಡಿದು ಎಳೆದಳು. ಅವಳು ಎಳೆದ ಬಿರುಸಿಗೆ ಕೈಮುಷ್ಟಿಯ ತುಂಬಾ ಕೂದಲು ಕಿತ್ತು ಬಂದಿತು. ಎಷ್ಟು ಪ್ರಯತ್ನಿಸಿದರು ಹಿಡಿತಕ್ಕೆ ಸಿಗದ ಹೆಂಡತಿಯ ಮೇಲೆ ಹಲ್ಲು ಮಸೆಯುತ್ತಾ ಸೆಟೆದು ನಿಂತ ಮೋಹನ, ತನ್ನ ಬಲವನ್ನೆಲ್ಲಾ ಹಾಕಿ ಅವಳನ್ನು ಜೋರಾಗಿ ನೂಕಿ “ಬೋಸುಡಿಮುಂಡೆ ಇವತ್ತು ನಿನ್ ಕಥೆ ಮುಗುಸ್ದಿದ್ರೆ ನಮ್ಮಪ್ಪಂಗ್ ಹುಟ್ಟಿದ ಮಗನೇ ಅಲ್ಲ ನಾನು” ಎಂದು ಅಡಿಗೆ ಕೋಣೆಯತ್ತ ನುಗ್ಗಿದ. ಮುಂದಾಗಬಹುದಾಗಿದ್ದ ಅನಾಹುತವನ್ನು ಊಹಿಸಿದ ಗಂಗೆ, ಕ್ಷಣಾರ್ಧದಲ್ಲಿಯೇ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಹೊರಗೋಡಿ ಬಂದಳು. ಮುಂದಿನ ಚಿಲಕವನ್ನು ಭದ್ರವಾಗಿ ಜಡಿದು ತಿರುಗಿ ನೋಡದಂತೆ ಓಡಲಾರಂಭಿಸಿದಳು.

ಅಂದು ಗಿರಾಕಿಯೊಬ್ಬ ತನ್ನ ಮೇಲೆ ನಡೆಸಿದ್ದ ದಾಳಿಯಿಂದಲೇ  ಇನ್ನು ಸುಧಾರಿಸಿಕೊಂಡಿರದಿದ್ದ ಸುಕನ್ಯಾ, ಗಂಗೆಯ ಆಕ್ರಮಣದಿಂದ  ಮತ್ತಷ್ಟು ತತ್ತರಿಸಿ ಹೋಗಿದ್ದಳು. ಅವಳ ಸಂಕಟ ಕಂಡು ಇನ್ನಷ್ಟು ರೋಷಾವೇಶಗೊಂಡ ಮೋಹನ ” ಆ ಮುಂಡೆನ ಕೊಂದು ನಿನ್ಮುಂದೆ ತಂದ್ಹಾಕ್ಲಿಲ್ಲ ಅಂದ್ರೆ ನಾನು ಮೋಹನನೆ ಅಲ್ಲ ಸುಕ್ಕು” ಎಂದು ಒದರಿ ಚಿಲಕ ಹಾಕಿದ್ದ ಬಾಗಿಲ ಮೇಲೆ ತನ್ನ ಬಲ ಪ್ರದರ್ಶನ ಮಾಡಿದ.  ಅವನೆಳೆದ ಬಿರುಸಿಗೆ ಬಾಗಿಲೇ ಕಿತ್ತು ಕೈಗೆ ಬಂದಿತೋ ಎಂಬಷ್ಟರ ಮಟ್ಟಿಗೆ ದಢಾರನೆ ಬಾಗಿಲು ತೆಗೆದುಕೊಂಡಿತು.ಆಗಾಗ ತನ್ನ ಕ್ರಿಮಿನಲ್ ಕಾರ್ಯಗಳಲ್ಲಿ ಮಾತ್ರ ಹೊರಗೆ ತೆಗೆಯುತ್ತಿದ್ದ, ಚೂಪನೆಯ ಹರಿತವಾದ  ಚಾಕುವಿನೊಂದಿಗೆ ಮೋಹನ ಎಲ್ಲಾ ಸಂದು ಗೊಂದುಗಳತ್ತಲೂ ತನ್ನ ಹದ್ದಿನ ಕಣ್ಣು ಹರಿಸುತ್ತಾ ಗಂಗೆಯನ್ನು ಹುಡುಕುತ್ತಾ ಹೊರಟ . 

ಅಂದು ಮಧ್ಯಾಹ್ನ ದುಬಾರಿ ಬೆಲೆ ತೆತ್ತು ಬಂದಿದ್ದ ಗಿರಾಕಿಯ  ಹಾಸಿಗೆ ಏರಿದ್ದ ಸುಕನ್ಯಾ, ಅವನ ವಿಕೃತ ಕಾಮಕೇಳಿಯಲ್ಲಿ ನಲುಗಿ  ಅವನ ರಾಕ್ಷಸ ಹಿಡಿತದಿಂದ ತಪ್ಪಿಸಿಕೊಳ್ಳಲಾರದೆ ಹಾಸಿಗೆಯಲ್ಲಿ ರಕ್ತ ಸಿಕ್ತಳಾಗಿ ಬಿದ್ದಿದ್ದಳು. ಸಾಮಾನ್ಯವಾಗಿ ಅಪರಿಚಿತ ಗಿರಾಕಿಗಳು ಬಂದಾಗೆಲ್ಲ ಸುಕನ್ಯಾಳ ಬೆಂಗಾವಲಾಗಿ ಹೊರಗೆ ನಿಂತು ಕಾಯುತ್ತಿದ್ದ ಮೋಹನ, ಅಂದು ಕೆಲಸದ ಮೇಲೆ ಹೊರಹೋಗಿದ್ದವನು ಮರಳಿ ಬರುವುದು ತುಸು ತಡವಾಗಿತ್ತಷ್ಟೆ. ಕುಡಿದು ಮತ್ತನಾಗಿದ್ದ ಆ ದೈತ್ಯ ವ್ಯಕ್ತಿ, ಸುಕನ್ಯಾ ಮಂಚಕ್ಕೆ ಬಂದದ್ದೇ ಕಾಡು ಮೃಗದಂತೆ ಅವಳ ಅಂಗಾಂಗಗಳನ್ನೆಲ್ಲ ಹಿಂಡಿ ಹಿಪ್ಪೆ ಮಾಡಿದ್ದ. ಇನ್ನೇನು ಜೀವ ಉಳಿದರೆ ಸಾಕು ಎಂಬಂತಾಗಿದ್ದ ಸುಕನ್ಯಾ, ಹರಸಾಹಸ ಮಾಡಿ ತನ್ನ ಬಾಯಿ ಮುಚ್ಚಿ ಹಿಡಿದಿದ್ದ ಅವನ ಕೈಯನ್ನು ಜೋರಾಗಿ ಕಚ್ಚಿ ಗಂಟಲು ಹರಿದು ಬರುವಂತೆ ಚೀರಿಕೊಂಡಿದ್ದಳು. 

ಆಗಷ್ಟೇ ಬೈಕಿನಿಂದಿಳಿಯುತ್ತಿದ್ದ ಮೋಹನನ ಕಿವಿಗೆ ಸುಕನ್ಯಾಳ ಅ ದನಿ ಮಿಂಚಂತೆ ಅಪ್ಪಳಿಸಿತ್ತು. ಓಡಿ ಬಂದವನೆ ಬಾಗಿಲು ಬಡಿಯತೊಡಗಿದ್ದ. ಏನು ಮಾಡಿದರು ಬಾಗಿಲು ತೆರೆದುಕೊಳ್ಳಲೇ ಇಲ್ಲ. ಒಳಗೆ ಅವಳ ಮೇಲಿನ ಹಿಂಸೆ ಹೆಚ್ಚುತ್ತಲೇ ಹೋಗಿತ್ತು. ಕೊನೆಗೆ ಬಾಗಿಲು ಹೊಡೆದು ಒಳ ನುಗ್ಗಿದ್ದ ಮೋಹನ, ಕೈಯಲ್ಲಿ ಹಿಡಿದಿದ್ದ ದೊಡ್ಡ ಮರದ ತುಂಡಿನಿಂದ ಆ ವ್ಯಕ್ತಿಯ ತಲೆಗೆ ಬಲವಾಗಿ ಹೊಡೆದು, ಅವನನ್ನು ಸುಕನ್ಯಾಳ ಮೇಲಿಂದ ಅತ್ತ ಎಳೆದು ಹಾಕಿದ್ದ. ಗಾಯಗೊಂಡು ನರಳುತ್ತಿದ್ದವಳನ್ನು ಸಂತೈಸಿ, ಇದೇ ದಂಧೆಯನ್ನು ಮುಂದುವರೆಸಿದ್ದ ತನ್ನ ತಮ್ಮ ಪರಮೇಶನಿಗೆ ಫೋನಾಯಿಸಿದ್ದ. ಟ್ಯಾಕ್ಸಿಯೊಂದಿಗೆ ಬಂದ ಪರಮೇಶ ಆ ವ್ಯಕ್ತಿಯನ್ನು  ಎತ್ತಲೋ ಹೊತ್ತಾಕಿ ಬಂದು ಕೈ ತೊಳೆದುಕೊಂಡು ನಿರುಮ್ಮಳನಾಗಿದ್ದ. ಇತ್ತ ಮೋಹನ ಮತ್ತು ಸುಕನ್ಯಾ, ತಲೆಮರೆಸಿಕೊಂಡು  ಗಂಗೆಯ ಮನೆಯತ್ತ ಓಡಿಬಂದಿದ್ದರು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಈ ಹಿಂದಿನ ಕಂತು ಓದಿದ್ದೀರಾ? ನೀವೆ  ಒದ್ದು ಈಚೆಗ್ ಹಾಕ್ತಿರೋ ಇಲ್ಲ ನಾನೆ ಎಳೆದಾಕ್ಲೋ?

More articles

Latest article