Wednesday, May 22, 2024

ನೀವೆ  ಒದ್ದು ಈಚೆಗ್ ಹಾಕ್ತಿರೋ ಇಲ್ಲ ನಾನೆ ಎಳೆದಾಕ್ಲೋ?

Most read

ಕಂಕುಳಲ್ಲಿದ್ದ ಮಗು ಕೈ ಜಾರದಂತೆ ತನ್ನ ಕಪಿಮುಷ್ಠಿಯನ್ನು ಮತ್ತಷ್ಟು ಬಿಗಿಗೊಳಿಸಿ, ನಶೆ ಏರಿ ಸುತ್ತುತ್ತಿದ್ದ  ತಲೆಯನ್ನು ಕೊಡವಿಕೊಳ್ಳುತ್ತಾ, ಸುಕನ್ಯಾಳ ಮನೆ ಎದುರು ಬಂದು ನಿಂತಳು ಗಂಗೆ. ಕದವಿಕ್ಕಿಕೊಂಡಿದ್ದ ಮನೆ ಸ್ತಬ್ಧವಾಗಿತ್ತು. ಮತ್ತಷ್ಟು ಹತ್ತಿರ ಹೋಗಿ ಕದಕ್ಕೆ ಕಣ್ಣು ಕೀಲಿಸಿ ನೋಡಿದಳು ಚಿಲಕ ಹಾಕಿದ್ದ ಬಾಗಿಲು ತಲೆಕೆಳಗಾಗಿ ಕಾಣುತ್ತಿತ್ತು. ಚಿಲಕ ತೆಗೆಯಲು ಪ್ರಯತ್ನಿಸಿದಳು, ಕೈ ಎತ್ತೆತ್ತಲೊ ಹೋಗಿ ಒಂದಷ್ಟು ಹೊತ್ತಿನ ಪ್ರಯತ್ನದ ನಂತರ ಬಾಗಿಲು ತೆರೆದು ಕೊಂಡಿತು. ಒಳ ಬಂದವಳಿಗೆ ಇನ್ನು ನಿಲ್ಲಲು ಸಾಧ್ಯವಿಲ್ಲ ಎನ್ನಿಸಿತು. ಕಣ್ಣು ಕತ್ತಲೆ ಬಂದಂತಾಗಿ ತಟ್ಟಾಡುತ್ತಲೇ ರೂಮಿನ ಮೂಲೆಯಲ್ಲಿದ್ದ ಚಾಪೆ ಬಿಡಿಸಿ  ಮಗುವನ್ನು  ಬಗಲಿಗಾಕಿಕೊಂಡು ಮಲಗಿದಳು. 

ಗಂಗೆ ಕಣ್ಣು ಮುಚ್ಚಿದ್ದೇ ತಡ ಒಮ್ಮೆಲೆ ಇಡೀ ಮನೆಯೆ ಗಿರ್ರ್ ನೆ ತಿರುಗಿದಂತಾಯಿತು. ಗಾಬರಿಯಾಗಿ ಕಣ್ಣು ಬಿಟ್ಟು ಕೂತವಳಿಗೆ ಹೊಟ್ಟೆ ತೊಳಸಿ ನಿಯಂತ್ರಣಕ್ಕೆ ಸಿಕ್ಕದ ವಾಂತಿ ಕ್ಷಣಾರ್ಧದಲ್ಲಿಯೇ ಚಾಪೆಯ ಮೇಲೆಲ್ಲ  ಚಲ್ಲಾಡಿತು. ತಲೆ ಮೇಲೆತ್ತಲು ಪ್ರಯತ್ನಿಸಿ ಸೋತು ಹಾಗೆಯೇ ಮಗುವಿನ ಪಕ್ಕ ಉರುಳಿ ನಿದ್ದೆಗೆ ಜಾರಿದಳು. ಬೆಳಗ್ಗಿನಿಂದ ಜ್ವರದ ತಾಪದಲ್ಲಿ ಬೆಂದು ಹೈರಾಣಾಗಿದ್ದ ಮಗು ಕುಡಿಸಿದ ಔಷಧಿಯ ಪರಿಣಾಮವಾಗಿ ಎಚ್ಚರವಿಲ್ಲದೆ ಮಲಗಿತ್ತು. 

ಮೋಹನನನ್ನು ಹುಡುಕಿ ಜೊತೆಯಲ್ಲಿಯೇ ಕರೆದುಕೊಂಡು ಚಂಡಿ ಚಾಮುಂಡಿಯಂತೆ ಒಳ ಬಂದ ಸುಕನ್ಯಾಳಿಗೆ, ಹೆಂಡ ಮತ್ತು ವಾಂತಿಯ ವಾಸನೆ ಗಪ್ಪನೆ ಮೂಗಿಗೆ ಬಡಿಯಿತು. ಅಸಹ್ಯದಿಂದ ಮುಖ ಕಿವುಚುತ್ತಾ” ನಿಮ್ಮ ಸತಿ ಸಾವಿತ್ರಿ ಯಾವ ಹಂತಕ್ಬಂದು ಮುಟ್ಟಿದಾಳೆ ನೋಡಿ… ಮಾತು ಮಾತಿಗೂ ತಲೆಮೇಲ್ ಹೊತ್ಕೊಂಡು ಮೆರುಸ್ತೀರಿ. ನಂಗೊತ್ತಿಲ್ಲ, ಒಂದು ಗಳಿಗೆಯೂ ಅವಳು ನನ್ನ ಮನೆಲಿರಕೂಡ್ದು. ನೀವೆ  ಒದ್ದು ಈಚೆಗ್ ಹಾಕ್ತಿರೊ ಇಲ್ಲ ನಾನೆ ಎಳೆದಾಕ್ಲೋ ಹೇಳಿ” ಎಂದು ನಿಂತ ಕಾಲಿನ ಮೇಲೆ  ಕುಣಿಯ ತೊಡಗಿದಳು. 

ಮಗುವಿನ ತಲೆಯ ಬುಡದಲ್ಲಿ ಕಂಡ ಔಷಧಿಯ ಬಾಟಲಿ ಮೋಹನನ ಏರಬಹುದಾಗಿದ್ದ ಕೋಪವನ್ನೆಲ್ಲ ಜರ್ರನೆ ಇಳಿಸಿ ತಣ್ಣಗೆ ಮಾಡಿತು. ತನ್ನ ತುಟಿಯ ಮೇಲೆ ಕೈ ಇಟ್ಟು ಸದ್ದು ಮಾಡದಂತೆ ಸುಕನ್ಯಾಳಿಗೆ  ಸನ್ನೆ ಮಾಡಿ ನಿಧಾನವಾಗಿ ಮಗುವಿನತ್ತ ಹೆಜ್ಜೆ ಹಾಕಿದ. ಅದರ ಕುತ್ತಿಗೆ ಹಣೆಗಳ ಮೇಲೆ ಕೈ ಆಡಿಸಿ ಮತ್ತೆ ಜ್ವರ ಕಾವೇರುತ್ತಿರುವುದನ್ನು ಕಂಡು ಒಳಗೊಳಗೆ ಸಂಕಟಗೊಂಡ.  ಸುಕನ್ಯಾಳನ್ನು ಹೊರಗೆ ಕರೆದುಕೊಂಡು ಬಂದು ಸಮಾಧಾನಿಸಿ ಬೆಳಗಿನ ವರೆಗೂ ಸುಮ್ಮನಿರುವಂತೆ ಬೇಡಿಕೊಂಡ. ಹೆಂಡತಿಯ ಸುತ್ತ ಅಂಟಿದ್ದ ವಾಂತಿಯನ್ನೆಲ್ಲ ವರೆಸಿ, ಬೀರುವಿನಲ್ಲಿದ್ದ ತನ್ನ ಸೆಂಟ್ ಬಾಟಲಿ ತೆಗೆದು  ಚಾಪೆಯ ಮೇಲೆಲ್ಲಾ ಸಿಂಪಡಿಸಿದ.

ಇದನ್ನೆಲ್ಲ ಕಂಡು  ಒಳಗೊಳಗೆ ಉರಿಯುತ್ತಿದ್ದ ಸುಕನ್ಯಾ ಸೇಡು ತೀರಿಸಿಕೊಳ್ಳುವವಳಂತೆ, ಆ ರಾತ್ರಿ ಗಂಗೆಯ ಎದುರೆ ರಾಜಾರೋಷವಾಗಿ ಬೆತ್ತಲಾಗಿ ಮೋಹನನನ್ನು ತಬ್ಬಿ ಮಲಗಿದಳು. ಮೋಹನ ಕ್ಷಣ ಹಿಂಜರಿದನಾದರು ಅವಳ ಕಟಿ ತಟಿಯ ಮೋಹಕ್ಕೆ ಉನ್ಮತ್ತನಾಗಿ ಮೈಮರೆತು ಅವಳ ಎದೆಯೊಳಗೆ ಮೆಲ್ಲನೆ ಹುದುಗಿ ಕರಗಿಹೋದ. ಎಂದಿಗಿಂತಲೂ ತುಸು ಹೆಚ್ಚಾಗಿಯೆ ಸುಖದ ನರಳುವಿಕೆಯಲ್ಲಿ ತೊಡಗಿದ್ದ ಸುಕನ್ಯಾಳ ಚಿತ್ತ ಪೂರ್ತಿಯಾಗಿ, ಗಂಗೆಯನ್ನು ಎಬ್ಬಿಸುವ ಹುನ್ನಾರದಲ್ಲೇ ಮಗ್ನವಾದಂತಿತ್ತು.  ಇದ್ಯಾವುದರ ಪರಿವೇ ಇಲ್ಲದ ಗಂಗೆ ಮಾತ್ರ ತನ್ನ ಮಗುವಿನೊಂದಿಗೆ ಮಗುವಾಗಿ ನಿಶ್ಚಿಂತಳಾಗಿ ಮಲಗಿದ್ದಳು.

ಬಡಿದು ಎಬ್ಬಿಸಿದಂತೆ ಮಧ್ಯರಾತ್ರಿ ಧಡಾರನೆ ಎಚ್ಚರಗೊಂಡು ಕುಳಿತ ಗಂಗೆಗೆ ತಾನು ಎಲ್ಲಿದ್ದೇನೆ ಎಂದು ತಿಳಿಯಲು ಕೆಲವು ಕ್ಷಣಗಳೇ ಹಿಡಿದವು. ಸರಿಯಾಗಿ ಕಣ್ಣು ತಿಕ್ಕಿಕೊಂಡು ಸುತ್ತಲೂ ನೋಡಿದಳು, ಎದುರಿನ ಮಂಚದ ಮೇಲೆ ತನ್ನ ಗಂಡನೊಂದಿಗೆ  ತೆಕ್ಕೆ ಹಾಕಿ ಮಲಗಿದ್ದ ಸುಕನ್ಯಾ, ತನ್ನ ಬೆತ್ತಲ ದೇಹದಿಂದಲೆ  ಗಂಗೆಯನ್ನು ಇರಿದು ಕನಲಿಸಿ ಬಿಟ್ಟಳು.  ಎದೆ ಚೂರಾದಂತೆನಿಸಿ, ಒಳಗಿದ್ದ ಹಸಿ ಭಾವಗಳೆಲ್ಲ ಬಸಿದು ಹಿಮ ಗಟ್ಟಿದಂತಾಯಿತು. ಉದ್ವಿಗ್ನಗೊಂಡ ಅವಳ ಜೀವ ಸಿಡಿದು ಬಿಡುವುದೋ ಎನ್ನುವಷ್ಟರಲ್ಲಿ ಚಾಪೆಯ ಮೇಲಿದ್ದ ಮಗುವನ್ನು  ಭುಜಕ್ಕಾನಿಸಿ  ಮಿಂಚಿನಷ್ಟೆ ರಭಸವಾಗಿ ರಸ್ತೆಗಿಳಿದಳು.  

ಜನರಿಲ್ಲದೆ ನಿರ್ಜನವಾಗಿದ್ದ ಆ ಮೂರರ ಜಾವದಲ್ಲಿ ಅತ್ತಿತ್ತ ಓಡಾಡುತ್ತಿದ್ದ ಬೀದಿ ನಾಯಿಗಳು ಒಂದೇ ಸಮನೆ ಊಳಿಡುತ್ತಾ ಗಂಗೆಯನ್ನು ಹಿಂಬಾಲಿಸ ತೊಡಗಿದವು. ಕಲ್ಲಂತಾಗಿದ್ದ ಗಂಗೆ, ಯಾವುದಕ್ಕೂ ಅಂಜಲಿಲ್ಲ. ತನಗೂ ಇಲ್ಲಿಗೂ ಸಂಬಂಧವೇ ಇಲ್ಲ ಎನ್ನುವಂತೆ  ಗೊತ್ತು ಗುರಿ ಇಲ್ಲದೆ ದಾರಿ ಕಂಡತ್ತ ಹೆಜ್ಜೆ ಹಾಕತೊಡಗಿದಳು. ಎಷ್ಟೋ ಹೊತ್ತಿನ ನಡಿಗೆಯ ನಂತರ ದೂರದಲ್ಲಿ ಜಗಮಗಿಸುತ್ತಿದ್ದ, ದೊಡ್ಡ ಬಂಗಲೆಯೊಂದು ಕಣ್ಣಿಗೆ ಬಿದ್ದಿತು. ಅದನ್ನು ಕಂಡದ್ದೆ ಗಂಗೆಯ ಕಾಲುಗಳು ಗಕ್ಕನೆ ನಿಂತವು. ಹಿಂದೊಮ್ಮೆ ಮೋಹನ ಅದೇ ಬಂಗಲೆಯನ್ನು ತೋರಿಸಿ  ” ನೋಡು ಗಂಗೂ ಅದು ನಿಮ್ಮ ಸೋಪಾನ ಪೇಟೆ ಸಾರಿಗೆ ಮಿನಿಸ್ಟ್ರು ಮನೆ”  ಎಂದ ಮಾತು ತಟ್ಟನೆ ನೆನಪಾಗಿ ಹಿಂದೆ ಮುಂದೆ ನೋಡದೆ ಸೀದಾ ಆ ಬಂಗಲೆಯತ್ತ ಹೆಜ್ಜೆ ಹಾಕಿದಳು.

 ದೊಡ್ಡ ಗೇಟಿನ ಮುಂದೆ ಕೂತಿದ್ದ ಸೆಕ್ಯೂರಿಟಿ ಗಾರ್ಡ್, ಅಷ್ಟೊತ್ತಿನಲ್ಲಿ ಮಗುವನ್ನೆತ್ತಿಕೊಂಡು ಬಂದು ನಿಂತ ಹೆಣ್ಣು ಮಗಳನ್ನು ಕಂಡು ಸ್ವಲ್ಪ ಗಾಬರಿಯಾದ. ತಟ್ಟನೆ ನಿದ್ದೆಯಿಂದ ಎಚ್ಚರಗೊಂಡ ಮಗು ಜೋರಾಗಿ ಅಳತೊಡಗಿತು. ಮಗುವನ್ನು ಸಮಾಧಾನಿಸಲೆತ್ನಿಸುತ್ತಿದ್ದ ಗಂಗೆ ಸೆಕ್ಯೂರಿಟಿ ಗಾರ್ಡಿನ ಹತ್ತಿರ “ನಾನು ಗಂಗೆ ಅಂತವ ಈ ಮಿನಿಸ್ಟ್ರು ಊರ್ನೋಳೆಯ. ಈ ಮಗಿನು ನನ್ನೂ ನನ್ ಗಂಡ ಬುಟ್ಟ್ ಎಲ್ಗೋ ಹೋಗ್ ಬುಟ್ಟಾವ್ನೆ. ಏನ್ ಮಾಡ್ಬೇಕು ಎತ್ತಗೋಗ್ಬೇಕು ಒಂದು ಗೊತ್ತಾಯ್ತಿಲ್ಲ. ನಿಮ್ಮ ದಮ್ಮಯ್ಯ ನನ್ನ ಒಳಿಕ್ಬುಡಿ ನಮ್ಮೂರ್  ಮಿನಿಷ್ಟ್ರು ಹತ್ರ ಹೇಳ್ಕೊಂಡ್ರೆ ಏನಾರ ದಾರಿ ತೋರ್ತರ ನೋಡ್ತಿನಿ” ಎಂದು ಕೈ ಮುಗಿದು ನಿಂತಳು. ಆ ನೀರವ ಮೌನದಲ್ಲಿ ಕಿವಿಗಡಚಿಕ್ಕುವಂತೆ ಅಳುತ್ತಿದ್ದ ಮಗುವನ್ನು ಕಂಡ ಸೆಕ್ಯೂರಿಟಿ ” ಸರಿ ಸರಿ ಮೊದ್ಲು ಆ ಮಗಿನ್ ಸುಮ್ನಿರ್ಸು ಕೇಳ್ಕೊಂಡ್ ಬತ್ತಿನಿ ನೋಡನ” ಎಂದು ಹೇಳಿ ಬಂಗಲೆಯತ್ತ ಓಡಿದ.

ವಿಷಯ ತಿಳಿದ ಮಂತ್ರಿಗಳು  ತಮ್ಮ ಪಿ.ಎ ಗೆ ಹೇಳಿ ಆ ದೊಡ್ಡ ಕಾಂಪೌಂಡಿನಲ್ಲಿಯೇ ಇದ್ದ ಕೋಣೆಯೊಂದರಲ್ಲಿ ಆ ರಾತ್ರಿ ಗಂಗೆಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟರು. ಸಾಲದೆಂಬಂತೆ ಆ ಸರಿ ಹೊತ್ತಿನಲ್ಲಿ ಬಿಸಿ ಬಿಸಿ ಕಾಫಿಯೊಂದಿಗೆ ಒಂದಷ್ಟು ಬ್ರೆಡ್, ಬಿಸ್ಕೆಟ್, ಮಗುವಿಗೆ ಕುಡಿಸಲು ಹಾಲು ಎಲ್ಲವನ್ನು ಕಳುಹಿಸಿ ಹಸಿದ ಎರಡು ಜೀವಗಳ ಹೊಟ್ಟೆಯನ್ನು ತಣ್ಣಗಾಗಿಸಿದರು. ಬೆಳಗಾಗುತ್ತಿದ್ದಂತೆ ಗಂಗೆಯನ್ನು ಕರೆಯಿಸಿ ಅವಳ ಸಮಸ್ಯೆಯನ್ನೆಲ್ಲಾ ಗಮನವಿಟ್ಟು ಕೇಳಿ, ಒಂದು ಪತ್ರವನ್ನು ಬರೆದು ಅವಳ ಕೈಗಿಟ್ಟು “ಹೋಗಿ ಸೋಪಾನ ಪೇಟೆಯ ಲೈಬ್ರರಿಗೆ ಇದನ್ನ ಕೊಡಮ್ಮ, ನಿನ್ಗಲ್ಲಿ ಕೆಲ್ಸ ಕೊಡ್ತಾರೆ ಚೆನ್ನಾಗಿ ಮಾಡ್ಕೊಂಡು ಹೋಗು. ಮಗುನ ಚನ್ನಾಗಿ ಓದ್ಸು” ಎಂದು ಹೇಳಿ ಕಳುಹಿಸಿದರು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಈ ಹಿಂದಿನ ಕಂತು ಓದಿದ್ದೀರಾ? http://“ಹೆಂಡ ನೋವುನ್ನೆಲ್ಲ ಮಾಯ್ಸೋ ಮಾಯ್ಕಾರ” https://kannadaplanet.com/henda-novannella-mayso-maykara/

More articles

Latest article