ನ್ಯಾಯಾಲಯವು ಶಾಸಕಾಂಗದ ಕ್ಷೇತ್ರಕ್ಕೆ ಕೈ ಹಾಕಲು ಸಾಧ್ಯವಿಲ್ಲ. ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ಮಾಡುವುದು ಸರ್ಕಾರದ ಕೆಲಸ ಎಂದು ಸುಪ್ರೀಂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಜನರ ಹಿತರಕ್ಷಣೆಗಾಗಿ ನ್ಯಾಯಾಲಯವು ಸರಕಾರಗಳಿಗೆ ಮಾರ್ಗದರ್ಶನ ಮಾಡಬಹುದಾಗಿತ್ತು. ಆದರೆ ಕನಿಷ್ಠ ವಿಚಾರಣೆಯನ್ನೂ ಮಾಡದೇ ಗೃಹಕಾರ್ಮಿಕ ವಿರೋಧಿ ಮಾತುಗಳನ್ನಾಡಿ ಮನವಿಯನ್ನೇ ತಿರಸ್ಕರಿಸಿದ್ದು ಅತ್ಯಂತ ಖೇದನೀಯ ಸಂಗತಿಯಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಸುಪ್ರೀಂ ಕೋರ್ಟ್ ಶ್ರಮಜೀವಿಗಳ ವಿರೋಧಿ ನಿಲುವನ್ನು ವ್ಯಕ್ತಪಡಿಸಿತಾ? ಮನೆಗೆಲಸದವರಿಗೆ ಕನಿಷ್ಟ ವೇತನ ನಿಗದಿಪಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನೇ ವಜಾಗೊಳಿಸಿ ಉಳ್ಳವರ ಪರವಾಗಿ ತೀರ್ಮಾನ ತೆಗೆದುಕೊಂಡಿತಾ?
ಹೌದು, ಅಂತಹುದೊಂದು ಆಘಾತಕಾರಿ ನಿರ್ಧಾರವನ್ನು ಜನವರಿ 29 ರಂದು ಸುಪ್ರೀಂ ನ್ಯಾಯಾಲಯವು ಪ್ರಕಟಿಸಿದೆ. ಮನೆಕೆಲಸದವರ ಬದುಕಿನ ಪರವಾಗಿ ಕನಿಷ್ಠ ಕೂಲಿಗಾಗಿ ಅರ್ಜಿ ಸಲ್ಲಿಸಿದ್ದಕ್ಕೆ ತೀವ್ರ ಕಳವಳವನ್ನೂ ವ್ಯಕ್ತಪಡಿಸಿದೆ.
“ಮನೆಗೆಲಸದವರು ಅಂದರೆ ಗೃಹ ಕಾರ್ಮಿಕರಿಗೆ ( Domestic workers) ಸಮಗ್ರ ಕಾನೂನು ಚೌಕಟ್ಟು ಹಾಗೂ ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಬೇಕು” ಎಂದು ಸುಪ್ರೀಂ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿ ತಿರಸ್ಕರಿಸಿತು.

” ಒಂದು ವೇಳೆ ಕನಿಷ್ಠ ವೇತನವನ್ನು ನಿಗದಿಪಡಿಸಿದರೆ ಕಾನೂನಿನ ಭಯದಿಂದ ಜನರು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನೇ ನಿಲ್ಲಿಸಬಹುದು. ಅಲ್ಲದೇ ಕಾರ್ಮಿಕ ಸಂಘಗಳು ಪ್ರತಿ ಮನೆಯವರ ಮೇಲೂ ಕೇಸು ಹಾಕುವ ಸಾಧ್ಯತೆ ಇದೆ, ಇದರಿಂದ ಅಂತಿಮವಾಗಿ ಮನೆ ಕೆಲಸದವರಿಗೆ ನಷ್ಟವಾಗಲಿದೆ” ಎಂಬುದು ಸುಪ್ರೀಂ ಅಭಿಪ್ರಾಯವಾಗಿದೆ.
ನ್ಯಾಯಾಲಯವು ಶಾಸಕಾಂಗದ ಕ್ಷೇತ್ರಕ್ಕೆ ಕೈ ಹಾಕಲು ಸಾಧ್ಯವಿಲ್ಲ. ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ಮಾಡುವುದು ಸರ್ಕಾರದ ಕೆಲಸ ಎಂದೂ ಸುಪ್ರೀಂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಜನರ ಹಿತರಕ್ಷಣೆಗಾಗಿ ನ್ಯಾಯಾಲಯವು ಸರಕಾರಗಳಿಗೆ ಮಾರ್ಗದರ್ಶನ ಮಾಡಬಹುದಾಗಿತ್ತು. ಆದರೆ ಕನಿಷ್ಠ ವಿಚಾರಣೆಯನ್ನೂ ಮಾಡದೇ ಗೃಹಕಾರ್ಮಿಕ ವಿರೋಧಿ ಮಾತುಗಳನ್ನಾಡಿ ಮನವಿಯನ್ನೇ ತಿರಸ್ಕರಿಸಿದ್ದು ಅತ್ಯಂತ ಖೇದನೀಯ ಸಂಗತಿಯಾಗಿದೆ.
ಇದು ಮನೆಕೆಲಸದವರ ಕೆಲಸ ನಷ್ಟದ ಬಗ್ಗೆ ಇರುವ ಕಾಳಜಿಯೋ? ಅಥವಾ ವೇತನ ನಿಗದಿಯಾದರೆ ಉಳ್ಳವರಿಗೆ ತೊಂದರೆಯಾದೀತೆಂಬ ಕಳವಳವೋ? ಇದರಿಂದ ನಿಜಕ್ಕೂ ನಷ್ಟಕ್ಕೆ ಒಳಗಾಗುವವರು ಯಾರು?
ಉಳ್ಳವರು ತಮ್ಮ ಮನೆ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾಗದೆ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾರೆ. ಅತೀ ಕಡಿಮೆ ವೇತನಕ್ಕೆ ಮನೆಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಯಾವುದೇ ಮನೆಕೆಲಸದವರಿಗೂ ಉದ್ಯೋಗದ ಖಾತರಿ ಇಲ್ಲ. ರಜೆ ಎಂಬುದಿಲ್. ಯಾವುದೇ ಸವಲತ್ತುಗಳಂತೂ ಮೊದಲೇ ಇಲ್ಲ. ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಕೊಟ್ಟಷ್ಟು ತೆಗೆದುಕೊಂಡು ಮಾಲೀಕರಿಗೆ ಇಷ್ಟ ಆಗುವಷ್ಟು ದಿನ ಹೇಳಿದ ಕೆಲಸ ಮಾಡಬೇಕಾಗುತ್ತದೆ. ಮಾಡುವ ಕೆಲಸದಲ್ಲಿ ಒಂಚೂರು ವ್ಯತ್ಯಾಸವಾದರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ.
ಗೃಹ ಮಾಲೀಕರಾದವರೂ ಸಹ ಎಲ್ಲೋ ಒಂದು ಕಡೆ ಸರಕಾರಿಯೋ ಇಲ್ಲಾ ಖಾಸಗಿ ಕಂಪನಿಗೋ ಕೆಲಸಕ್ಕೆ ಹೋಗುತ್ತಾರಲ್ಲವೇ?. ಅವರಿಗೂ ಅಲ್ಲಿರುವ ಮೇಲಾಧಿಕಾರಿಗಳು ಮನೆಕೆಲಸದವರ ಹಾಗೆ ನೋಡಿಕೊಂಡರೆ ಕೆಲಸ ಮಾಡಲು ಸಾಧ್ಯವಿದೆಯಾ? ಯಾಕೆ ಮನೆಕೆಲಸ ಮಾಡುವವರೂ ಮನುಷ್ಯರಲ್ಲವೇ? ಅವರಿಗೂ ಕುಟುಂಬ ಪರಿವಾರ ಮಕ್ಕಳು ಮರಿ ಇರೋದಿಲ್ಲವೇ? ಬದುಕಿನಾದ್ಯಂತ ಅನಿಶ್ಚಿತತೆಯಲ್ಲೇ ಕೆಲಸ ಮಾಡುತ್ತಾ ಆತಂಕದಲ್ಲೇ ಜೀವನ ಕಳೆಯಬೇಕಾ?
‘ಕನಿಷ್ಠ ಸಂಬಳ ನಿಗದಿಯಾದರೆ ಕಾನೂನು ಭಯದಿಂದ ಮನೆಕೆಲಸದವರನ್ನು ಯಾರೂ ನೇಮಕ ಮಾಡಿಕೊಳ್ಳುವುದಿಲ್ಲ” ಎಂಬುದೇ ಊಹಾಪೋಹದ ನಿಲುವಾಗಿದೆ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾಗದವರು ಮನೆಕೆಲಸಕ್ಕೆ ಕೆಲಸಗಾರರನ್ನು ನೇಮಿಸಿಕೊಳ್ಳದೆ ಇರಲಾರರು. ಕಾನೂನು ಭಯದಿಂದ ಮನೆಕೆಲಸಗಾರರನ್ನು ಬೇಡವೆಂದರೆ ತಮ್ಮ ಮನೆ ಕೆಲಸಗಳನ್ನು ತಾವೇ ಮಾಡಿಕೊಳ್ಳಲಿ ಬೇಡ ಎನ್ನುವವರು ಯಾರು? ಕನಿಷ್ಠ ವೇತನವನ್ನು ಪಾವತಿಸಿದರೆ ಕಾನೂನಿಗೆ ಹೆದರುವ ಅಗತ್ಯವಾದರೂ ಏನಿದೆ? ಕನಿಷ್ಠ ಕೂಲಿಯನ್ನೂ ಕೊಡದೆ ದುಡಿಸಿಕೊಂಡಾಗ ತಾನೇ ಕಾನೂನಿನ ಸವಾಲು ಎದುರಾಗುವುದು.
ಕಾರ್ಮಿಕ ಸಂಘಗಳು ಪ್ರತಿ ಮನೆಯವರ ಮೇಲೂ ಕೇಸು ಹಾಕಬಹುದು ಎನ್ನುವುದು ಸುಪ್ರೀಂ ಕೋರ್ಟ್ ಆತಂಕ. ಮನೆಗೆಲಸದವರಿಗೆ ಸರಿಯಾದ ಸಮಯಕ್ಕೆ ನಿಗದಿ ಪಡಿಸಿದ ಸಂಬಳವನ್ನು ಅವರವರ ಅಕೌಂಟಿಗೆ ಪಾವತಿಸುತ್ತಾ ಬಂದರೆ ಯಾವ ಕಾರ್ಮಿಕ ಸಂಘಗಳೂ ಏನೂ ಮಾಡಲು ಸಾಧ್ಯವಿಲ್ಲ. ಈಗ ಬಹುತೇಕ ಎಲ್ಲರಿಗೂ ಬ್ಯಾಂಕ್ ಅಕೌಂಟುಗಳಿವೆ. ಆನ್ ಲೈನ್ ಪೇಮೆಂಟ್ ಬಗ್ಗೆ ಕೂಡಾ ಮಾಹಿತಿ ಇದೆ. ಕಾರ್ಮಿಕ ಸಂಘಟನೆಗಳ ಗುಮ್ಮನನ್ನು ತೋರಿಸಿ ಮನೆಗೆಲಸದವರನ್ನು ಕನಿಷ್ಠ ಕೂಲಿಯಿಂದ ವಂಚಿಸುವುದು ಅಕ್ಷಮ್ಯ.
ಮನೆ ಕೆಲಸಗಾರರು ಹೇಗೋ ಬದುಕಿಕೊಳ್ಳುತ್ತಾರೆ. ಸರಕಾರ ಕೊಡುವ ಗ್ಯಾರಂಟಿ ಯೋಜನೆಗಳಿವೆ. ಕೊನೆಗೆ ಕೂಲಿ ನಾಲಿ ಮಾಡಿಯಾದರೂ ಬದುಕುತ್ತಾರೆ. ಆದರೆ ಮನೆಕೆಲಸದವರು ಇಲ್ಲದೇ ತಮ್ಮ ಮನೆ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮನೆ ಮಾಲೀಕರು ಎಷ್ಟಿದ್ದಾರೆ?

ಮನೆಗೆಲಸದಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಅಂತಹ ಲಕ್ಷಾಂತರ ಜನ ಮಹಿಳಾ ಕೂಲಿ ಕಾರ್ಮಿಕರ ಕೆಲಸದ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ನಿರ್ದಿಷ್ಟ ಕನಿಷ್ಠ ವೇತನದ ಭರವಸೆ ಇಲ್ಲದೇ, ಕೆಲಸದ ಭದ್ರತೆಯೂ ಇಲ್ಲದೇ ಕೋಟ್ಯಾಂತರ ಜನರು ಈ ದೇಶದಲ್ಲಿ ಮನೆಗೆಲಸಗಳನ್ನೇ ನಂಬಿ ಬದುಕುತ್ತಿದ್ದಾರೆ. ಸ್ವಾಭಿಮಾನದಿಂದ ಗೌರವಾನ್ವಿತವಾಗಿ ಬದುಕುವ ಹಕ್ಕನ್ನು ಸಂವಿಧಾನ ಎಲ್ಲಾ ಪ್ರಜೆಗಳಿಗೂ ಕೊಟ್ಟಿದೆ. ಆದರೆ ಮನೆಗೆಲಸದವರಿಗೆ ಯಾಕೆ ನೆಮ್ಮದಿ ಮತ್ತು ಭದ್ರತೆಯಿಂದ ಕೆಲಸ ಮಾಡಲು ಅವಕಾಶ ಇಲ್ಲವಾಗಿದೆ. ಅದನ್ನು ಕೊಡಮಾಡಬೇಕಾದ ನ್ಯಾಯಾಲಯ ಯಾಕೆ ಮನೆಗೆಲಸದವರ ನೋವಿಗೆ ಧ್ವನಿಯಾಗದೇ ಕುರುಡಾಗಿದೆ?.
ಮೊದಲೇ ಮನೆಗೆಲಸದವರು ಅಸಂಘಟಿತರು. ಮನೆಕಟ್ಟುವ ಕೂಲಿ ಕಾರ್ಮಿಕರಿಗಾದರೂ ಸಂಘಟನೆಗಳಿವೆ. ಸರಕಾರ ವಿಮೆ ಮಾಡಿಸಿದೆ. ಇತ್ತೀಚೆಗೆ ಗಿಗ್ ಕೆಲಸಗಾರರಿಗೂ ಸರಕಾರಿ ಸವಲತ್ತು ದೊರಕಿದೆ. ಆದರೆ ಮನೆಗೆಲಸದವರಿಗೆ ಯಾವುದೇ ಸರಕಾರಿ ಸವಲತ್ತುಗಳು ಸಿಕ್ಕದಾಗಿವೆ. ಮನೆ ಮಾಲೀಕರ ದಯೆ ದಾಕ್ಷಿಣ್ಯದ ಮೇಲೆ ಕೆಲಸ ನಿರ್ವಹಿಸಬೇಕಿದೆ. ಎಷ್ಟೇ ನಿಯತ್ತಾಗಿ ಕೆಲಸ ಮಾಡಿದರೂ ಮಾಲೀಕರಾದವರ ಅನುಮಾನದ ನೋಟವನ್ನು ಪ್ರತಿದಿನ ಅನುಭವಿಸಬೇಕಿದೆ. ಇದು ನಿಜಕ್ಕೂ ನಾಗರೀಕ ಸಮಾಜದ ಅಮಾನವೀಯ ನಡೆಯಾಗಿದೆ.
ಆಳುವ ಸರಕಾರಗಳು ಮನೆಗೆಲಸದವರಿಗೆ ಕನಿಷ್ಠ ವೇತನ, ಆರೋಗ್ಯ ಮತ್ತು ಅಪಘಾತ ವಿಮಾ ಸೌಲಭ್ಯಗಳನ್ನು ನಿಗದಿ ಪಡಿಸಬೇಕು. ಕಟ್ಟಡ ಕಾರ್ಮಿಕರು ಹಾಗೂ ಗಿಗ್ ಕೆಲಸಗಾರರಿಗೆ ಕೊಡುವ ಸವಲತ್ತುಗಳನ್ನು ಮನೆಗೆಲಸ ಮಾಡುವವರಿಗೂ ವಿಸ್ತರಿಸಬೇಕು. ಮನೆಗೆಲಸ ಮಾಡುವವರೂ ಆತಂಕರಹಿತವಾಗಿ ಗೌರವದ ಬದುಕನ್ನು ನಡೆಸುವಂತಾಗಬೇಕು. ಶಾಸಕಾಂಗ ಮತ್ತು ನ್ಯಾಯಾಂಗಗಳು ಯಾವಾಗಲೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ಶೋಷಿತ ಜನರ ಪರವಾಗಿ ಇರಬೇಕು. ಆಗಲೇ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಗೃಹ ಕಾರ್ಮಿಕರಿಗಾಗಿ ಕರ್ನಾಟಕ ಗೃಹ ಕಾರ್ಮಿಕರ ( ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ 2025 ನಿಗದಿಪಡಿಸಲಾಗಿದೆಯಾದರೂ ಇನ್ನೂ ಡ್ರಾಫ್ಟ್ ಹಂತದಲ್ಲಿದ್ದು ಕಾಯಿದೆಯಾಗಿ ಜಾರಿಯಾಗಿಲ್ಲ. ಈ ಕರಡು ಪ್ರಕಾರ ಮನೆಗೆಲಸಕ್ಕೆ ದಿನಕ್ಕೆ 700 ರಿಂದ 773 ರೂ. ಅಥವಾ ತಿಂಗಳಿಗೆ 18 ಸಾವಿರದಿಂದ 20 ಸಾವಿರ ರೂಪಾಯಿ ಕನಿಷ್ಠ ವೇತನವನ್ನು ನಿಗದಿಪಡಿಸಲಾಗಿದೆ. ಹೆಚ್ಚುವರಿ ಅವಧಿಯ ಕೆಲಸಕ್ಕೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ವಾರಕ್ಕೆ ಗರಿಷ್ಠ 48 ಗಂಟೆಗಳು ಕೆಲಸದ ಸಮಯವಾಗಿದ್ದು, ವಾರಕ್ಕೊಂದು ದಿನ ರಜೆ ಕೊಡಬೇಕಾಗುತ್ತದೆ. ಜೊತೆಗೆ ವಾರ್ಷಿಕ ಪಾವತಿ ರಜೆ, ಹೆರಿಗೆ ರಜೆಗಳೂ ಸೇರಿವೆ. ಆರೋಗ್ಯ ವಿಮೆ, ಚಿಕಿತ್ಸೆ ಸೌಲಭ್ಯ, ಅಪಘಾತ ಪರಿಹಾರ, ಪಿಂಚಣಿ, ಮಕ್ಕಳ ಶಿಕ್ಷಣ ಸಹಾಯ, ವೈದ್ಯಕೀಯ ವೆಚ್ಚಗಳನ್ನೆಲ್ಲಾ ಮನೆ ಮಾಲೀಕರು ಭರಿಸಬೇಕಾಗುತ್ತದೆ.
ಇದರ ಜೊತೆಗೆ ಕಾರ್ಮಿಕರು, ಮಾಲೀಕರು ಮತ್ತು ಏಜನ್ಸಿಗಳು ಸರಕಾರಿ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಂಡು ಯುನಿಕ್ ಐಡಿ ಪಡೆಯಬೇಕು. ಮಾಲೀಕರು ಮತ್ತು ಕಾರ್ಮಿಕರ ನಡುವೆ ಲಿಖಿತ ಒಪ್ಪಂದವನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಮಾಲೀಕರು 5% ವೆಲ್ಫೇರ್ ನಿಧಿ ಕಟ್ಟಬೇಕು ಹಾಗೂ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿ ಅಸ್ತಿತ್ವಕ್ಕೆ ಬರಬೇಕು ಎನ್ನುವುದೆಲ್ಲಾ ಕರಡು ಮಸೂದೆಯಲ್ಲಿ ನಮೂದಾಗಿದೆ.
ಆದರೆ ಇಷ್ಟೆಲ್ಲಾ ಸವಲತ್ತುಗಳನ್ನು ಕೊಡಲು ಉಳ್ಳವರು ಸಿದ್ದರಾಗಿಲ್ಲ. ಆಳುವವರಾಗಲೀ ಅಧಿಕಾರಿಶಾಹಿಗಳಾಗಲೀ ಈ ಕರಡು ನಿಯಮಗಳ ಅನುಷ್ಠಾನಕ್ಕೆ ಮಾನಸಿಕವಾಗಿ ಸಿದ್ಧರಾಗಿಲ್ಲ. ಸಮಾನತೆಯನ್ನು ಸಾರುವ ಸಂವಿಧಾನದಡಿಯಲ್ಲಿ ಇನ್ನೂ ಶೋಷಣೆ ಎಂಬುದು ನಿಂತಿಲ್ಲ. ಈ ಕರಡು ಮಸೂದೆಯನ್ನು ಹೇಗಾದರೂ ಮಾಡಿ ಜಾರಿಗೆ ತರದಂತೆ ಶೋಷಕ ವರ್ಗದವರು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿರುವ ಮಾನ್ಯ ಸಿದ್ದರಾಮಯ್ಯನವರ ಮೇಲೆ ಒತ್ತಡವನ್ನು ಹೇರಿ ಕರಡು ಮಸೂದೆಯನ್ನು ಮೂಲೆಗೆ ತಳ್ಳಿದ್ದಾರೆ. ನ್ಯಾಯ ಕೇಳಿ ನ್ಯಾಯಾಲಯಕ್ಕೆ ಹೋದರೆ ಮನವಿಯನ್ನೇ ತಿರಸ್ಕರಿಸಲಾಗಿದೆ. ಸುದ್ದಿ ಮಾಧ್ಯಮಗಳು ಇಂತಹುದನ್ನೆಲ್ಲಾ ಸುದ್ದಿ ಮಾಡಲೂ ಪ್ರಯತ್ನಿಸುವುದಿಲ್ಲ. ಇಂತಹ ಶೋಷಕ ವ್ಯವಸ್ಥೆಯಲ್ಲಿ ಶೋಷಿತ ಗೃಹಕಾರ್ಮಿಕರಿಗೆ ನ್ಯಾಯ ಕೊಡಿಸುವವರು ಯಾರು? ಅದು ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯ. ಅವರು ಮನಸು ಮಾಡಬೇಕಷ್ಟೇ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಯುಜಿಸಿ ಅಧಿಸೂಚನೆಗೆ ಮೇಲ್ಜಾತಿಗಳ ಆಕ್ರೋಶ | ಮರೆಯಲ್ಲಿ ಮನುವಾದಿಗಳ ಷಡ್ಯಂತ್ರ


