ಬೆಂಗಳೂರು : ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ದಾಖಲೆಯ ಫಲಿತಾಂಶ ಶೇ.94.1ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಾಯಚೂರು ಜಿಲ್ಲೆಯ ಮಾನ್ವಿಯ ವಿದ್ಯಾರ್ಥಿ ಸೇರಿ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಗುರುವಾರ ಫಲಿತಾಂಶ ಬಿಡುಗಡೆ ಮಾಡಿ, ಈ ಬಾರಿ ದಾಖಲೆಯ ಫಲಿತಾಂಶ ಬಂದಿರುವುದಕ್ಕೆ ವಿದ್ಯಾರ್ಥಿಗಳು, ಪೋಷಕರಿಗೆ ಮತ್ತು ಶಾಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಈ ವರ್ಷದ ರೆಗುಲರ್ ವಿದ್ಯಾರ್ಥಿಗಳಲ್ಲಿ 7 ಲಕ್ಷದ, 70 ಸಾವಿರದ, 209 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 7 ಲಕ್ಷದ, 24 ಸಾವಿರದ, 794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಒಟ್ಟಾರೆ ಶೇ.80.04ರಷ್ಟು ಫಲಿತಾಂಶ ಬಂದಿದ್ದರೆ, ಈ ಬಾರಿ ಅದು ಶೇ.94.1ರಷ್ಟು ಉತ್ತೀರ್ಣ ಬಂದಿದೆ. ಇದು ದಾಖಲೆಯ ಫಲಿತಾಂಶ ಎಂದು ಹೇಳಿದರು.
7 ವಿದ್ಯಾರ್ಥಿಗಳಿಗೆ 625 ಅಂಕ:
ಈ ಬಾರಿ ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಚಿಕ್ಕೋಡಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಸರ್ಕಾರಿ ಶಾಲೆಯಲ್ಲಿ ಓದಿ 625 ಅಂಕಗಳನ್ನು ಪಡೆದಿದ್ದಾರೆ. ಉಳಿದಂತೆ ರಾಯಚೂರು ಜಿಲ್ಲೆಯ ಮಾನ್ವಿಯ ಬಿವಿಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುಖದೇವ, ಉಡುಪಿ ಜಿಲ್ಲೆಯ ಶಂಕರನಾರಾಯಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಂ ಪೂಜಾರಿ, ದಾವಣಗೆರೆ ಜಿಲ್ಲೆಯ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ., ಚಿಕ್ಕಮಗಳೂರು ಜಿಲ್ಲೆಯ ಸೈಂಟ್ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಬೃಂದಾ ಎಂ., ಬೆಂಗಳೂರು ಉತ್ತರ ಜಿಲ್ಲೆಯ ಸದಾಶಿವನಗರದ ಪೂರ್ಣಪ್ರಜ್ಞಾ ಪ್ರೌಢಶಾಲೆಯ ವಿದ್ಯಾರ್ಥಿ ಧನುಷ್ ಸುಧೀರ್, ವಿಜಯಪುರ ಜಿಲ್ಲೆಯ ನಾಗರಬೆತ್ತದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯಾ ಬಸವರಾಜ್ ಪೂರ್ಣಾಂಕ ಪಡೆದಿದ್ದಾರೆ.
ಗ್ರೇಡ್ ಬದಲು ಅಂಕ:
ಈ ಬಾರಿಈ ವರ್ಷದ ವಿಶೇಷವೆಂದರೆ ಸರ್ಕಾರವು ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡಾ 35 ರಿಂದ 33ಕ್ಕೆ ಇಳಿಸಿದೆ. ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಒಟ್ಟಾರೆ 625 ಅಂಕಗಳಿಗೆ 206 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ. ತೃತೀಯ ಭಾಷೆಗೆ ಸಂಬಂಧಿಸಿದಂತೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಪ್ರಸ್ತಾವನೆಗೆ ಹೈಕೋರ್ಟ್ ತಡೆ ನೀಡಿದ್ದು, ಈ ವರ್ಷವೂ ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡಲಾಗಿದೆ. ಆದರೆ, ಯಾರಿಗೂ ಕೃಪಾಂಕ ನೀಡಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
ಬಾಲಕಿಯರು, ಗ್ರಾಮೀಣರು ಮುಂದೆ:
ಎಂದಿನಂತೆ ಈ ಬಾರಿಯೂ ಬಾಲಕಿಯರು ಮತ್ತು ಗ್ರಾಮೀಣ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮುಂದೆ ಇದ್ದಾರೆ. ಆದರೆ, ವಿಶೇಷವಾಗಿ ಬಾಲಕರ ಉತ್ತೀರ್ಣ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಆಗಿದೆ. ಇದು ಅಭಿನಂದನೀಯ ಎಂದು ಸಚಿವರು ಹೇಳಿದರು.
ಪರೀಕ್ಷೆ ಬರೆದ 3,92,922 ಬಾಲಕಿಯರ ಪೈಕಿ 3,77,922 ಬಾಲಕಿಯರು (ಶೇ.96.18) ತೇರ್ಗಡೆಯಾಗಿದ್ದಾರೆ. ಅದೇ ರೀತಿ 3,77,287 ಬಾಲಕರ ಪೈಕಿ 3,46,872 ಬಾಲಕರು (ಶೇ.91.94) ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ವಿಶೇಷ ಎಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಬಾಲಕಿಯರ ಉತ್ತೀರ್ಣ ಶೇ.85.70ರಿಂದ ಶೇ.91.94 ಏರಿಕೆಯಾಗಿದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ.74.25ರಿಂದ ಶೇ.91.94ಕ್ಕೆ ಏರಿಕೆಯಾಗುವ ಮೂಲಕ ಕಳೆದ ವರ್ಷಕ್ಕಿಂತ ಶೇ.17ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು.
ಅದೇ ರೀತಿ ಗ್ರಾಮಾಂತರ ಮತ್ತು ನಗರ ಸರಾಸರಿ ಗಮನಿಸಿದಾಗ, 4,42,280 ಗ್ರಾಮೀಣ ವಿದ್ಯಾರ್ಥಿಗಳ ಪೈಕಿ 4,19,261 (ಶೇ.94.80) ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದಲ್ಲಿ 3,27,929 ವಿದ್ಯಾರ್ಥಿಗಳ ಪೈಕಿ 3,05,533 ವಿದ್ಯಾರ್ಥಿಗಳು (ಶೇ.93.2) ತೇರ್ಗಡೆಯಾಗಿದ್ದಾರೆ. ಕಳೆದ ವರ್ಷಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ.14ರಷ್ಟು ಮತ್ತು ನಗರ ವಿದ್ಯಾರ್ಥಿಗಳು ಶೇ.12ರಷ್ಟು ಹೆಚ್ಚು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.
ದಕ್ಷಿಣ ಕನ್ನಡ ಪ್ರಥಮ, ಕಲಬುರ್ಗಿ ಕೊನೆ:
ಈ ಬಾರಿಯ ಫಲಿತಾಂಶದಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ ಮತ್ತು ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನದಲ್ಲಿವೆ. ಕೊನೆಯ ಸ್ಥಾನ ಕಲಬುರ್ಗಿ ಜಿಲ್ಲೆಗೆ ಬಂದಿದೆ. ಆದರೆ, ಕಲ್ಯಾಣ ಕರ್ನಾಟಕದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಫಲಿತಾಂಶ ಚೇತೋಹಾರಿಯಾಗಿದೆ. ಹೀಗಾಗಿ ಇದುನ್ನು ಪ್ರಥಮ, ಕೊನೆ ಎಂದು ಅಳೆಯುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
ಎಸ್ಎಸ್ಎಲ್ಸಿ ಮೂರನೇ ಪರೀಕ್ಷೆ ಇಲ್ಲ!
ಈ ಬಾರಿ ಉತ್ತಮ ಫಲಿತಾಂಶ ಬಂದಿರುವುದರಿಂದ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿಯೇ ದಾಖಲೆಯ ಫಲಿತಾಂಶ ಬಂದಿದೆ. ಹೀಗಾಗಿ ಮೇ 18 ರಿಂದ ಮೇ 25 ರವರೆಗೆ ಎರಡನೇ ಪರೀಕ್ಷೆ ಮಾತ್ರ ನಡೆಯಲಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆಯುವುದಿಲ್ಲ. ಉತ್ತೀರ್ಣರಾಗಿಯೂ ಹೆಚ್ಚಿನ ಅಂಕಕ್ಕಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕ ಪಡೆಯಲಾಗುವುದು ಎಂದು ಹೇಳಿದರು.
ಜಿಲ್ಲಾವಾರು ಫಲಿತಾಂಶ
ದಕ್ಷಿಣ ಕನ್ನಡ: 98.40
ಉಡುಪಿ: 98.18
ಉತ್ತರ ಕನ್ನಡ: 98.09
ಹಾಸನ: 97.51
ಮಂಡ್ಯ: 97.45
ಶಿರಸಿ: 97.21
ಹಾವೇರಿ: 96.87
ಕೊಡಗು: 96.70
ಶಿವಮೊಗ್ಗ: 96.56
ವಿಜಯನಗರ: 96.39
ಬೆಂಗಳೂರು ಗ್ರಾ.: 95.84
ಧಾರವಾಡ: 95.59
ಕೋಲಾರ: 95.50
ಬಾಗಲಕೋಟೆ: 95.42
ಬೆಂಗಳೂರು ಉತ್ತರ: 95.34
ಗದಗ: 95.24
ಚಿಕ್ಕಮಗಳೂರು: 94.99
ಬೆಳಗಾವಿ: 94.75
ದಾವಣಗೆರೆ: 94.64
ಮೈಸೂರು: 94.50
ರಾಯಚೂರು: 94.41
ವಿಜಯಪುರ: 94.17
ಚಿಕ್ಕೋಡಿ: 94.09
ಬಳ್ಳಾರಿ: 93.36
ಕೊಪ್ಪಳ: 93.10
ರಾಮನಗರ: 92.83
ಚಿತ್ರದುರ್ಗ: 92.25
ಬೀದರ್: 92.18
ತುಮಕೂರು: 92.04
ಚಾಮರಾಜನಗರ: 91.89
ಯಾದಗಿರಿ : 91.89
ಬೆಂಗಳೂರು ದಕ್ಷಿಣ: 91.65
ಚಿಕ್ಕಬಳ್ಳಾಪುರ: 90.88
ಮಧುಗಿರಿ: 90.24
ಕಲಬುರಗಿ: 85.06

