ವಿಶೇಷ |ಜಾರ್ಜ್ ಫೆರ್ನಾಂಡಿಸ್ ಎಂಬ ಬೆರಗು

Most read

ಮಂಗಳೂರಿನ ಬಿಜೈ ಯವರಾದ ಜಾರ್ಜ್‌ ಫೆರ್ನಾಂಡಿಸ್‌ ಎಂಬ ಧೀಮಂತ ನಾಯಕನ ನೆನಪಲ್ಲಿ ಇಂದು (6-7-2024) ಸಂಜೆ ನಗರದ ಸರ್ಕ್ಯೂಟ್‌ ಹೌಸ್‌ ನಿಂದ ಬಿಜೈ ಸರ್ಕಲ್‌ ತನಕದ ರಸ್ತೆ ʼಜಾರ್ಜ್‌ ಫೆರ್ನಾಂಡಿಸ್‌ ರಸ್ತೆʼ ಎಂದು ನಾಮಕರಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜಾರ್ಜ್‌ ಅವರನ್ನು ಕುರಿತು ಶ್ರೀನಿವಾಸ ಕಾರ್ಕಳ ಬರೆದ ನೆನಪಿನ ಲೇಖನ ಇಲ್ಲಿದೆ.

“ನೀವು ಕ್ರಿಶ್ಚಿಯನ್ ಗೆ ಓಟು ಹಾಕುತ್ತೀರಾ?” ಎಂದು ನಿರ್ದಿಷ್ಟ ರಾಜಕಾರಣಿಯೊಬ್ಬರನ್ನು ಗುರಿಯಾಗಿರಿಸಿಕೊಂಡು ಯಾರೋ ಒಮ್ಮೆ ಮತದಾರರನ್ನು ಪ್ರಶ್ನಿಸಿದ್ದರಂತೆ.

ಅದಕ್ಕೆ ಉತ್ತರಿಸಿದ ಆ ರಾಜಕಾರಣಿ – “ಯಾರೋ ನನ್ನನ್ನು ಕ್ರಿಶ್ಚಿಯನ್ ಅಂದರು. ನಾನು ಹುಟ್ಟಿದ್ದು ಮಂಗಳೂರಿನಲ್ಲಿ. ನನ್ನ ತಂದೆ ತಾಯಿ ಕ್ರಿಶ್ಚಿಯನ್, ಬೆಳೆದದ್ದು ಹಿಂದೂಗಳ ಜತೆ, ಮಾತೃಭಾಷೆ ಕೊಂಕಣಿ, ಮಾತಾಡಿದ್ದು ತುಳು, ದಿಲ್ಲಿಯಲ್ಲಿನ ವ್ಯವಹಾರ ಹಿಂದಿಯಲ್ಲಿ, ಓದಿದ್ದು ಮಂಗಳೂರು ಮತ್ತು ಬೆಂಗಳೂರಿನಲ್ಲಿ, ಹೋರಾಟ ನಡೆಸಿದ್ದು ಬಾಂಬೇಯಲ್ಲಿ, ನನ್ನ ಕರ್ಮಭೂಮಿ ಬಿಹಾರದ ಮುಜಾಫರಪುರ, ನನ್ನ ಕಚೇರಿ ಇರುವುದು ದಿಲ್ಲಿಯಲ್ಲಿ, ನನಗೆ ಯಾವ ಊರು? ನನ್ನದು ಯಾವ ಜಾತಿ? ನನ್ನದು ಯಾವ ಭಾಷೆ?” ಎಂದು ನಗು ನಗುತ್ತ ಉತ್ತರಿಸಿದರಂತೆ.

ಹೀಗೆ ಉತ್ತರಿಸಿದ, ನಿಜ ಅರ್ಥದ ರಾಷ್ಟ್ರೀಯ ರಾಜಕಾರಣಿ ಬೇರಾರೂ ಅಲ್ಲ. ಕಾರ್ಮಿಕ ನಾಯಕ, ಉಗ್ರ ಹೋರಾಟಗಾರ, ಛಲದಂಕ ಮಲ್ಲ, ಜಾತ್ಯತೀತ ಶಕ್ತಿಗಳ ನಾಯಕ ಎಂದೇ ಮನೆಮಾತಾಗಿದ್ದ ಜಾರ್ಜ್ ಫೆರ್ನಾಂಡಿಸ್. 

ಚಿಕ್ಕಮಗಳೂರು ಚುನಾವಣೆ

ಅದು 1978 ರ ದಿನಗಳು. ನನ್ನದಿನ್ನೂ ಹದಿಹರೆಯ. ತುರ್ತುಪರಿಸ್ಥಿತಿ ಕೊನೆಗೊಂಡು ಇಂದಿರಾಗಾಂಧಿ ಸ್ವಕ್ಷೇತ್ರ ರಾಯಬರೇಲಿಯಲ್ಲಿ ಸೋತು ಕರ್ನಾಟಕದ ಚಿಕ್ಕಮಗಳೂರಿನತ್ತ ಮುಖಮಾಡಿದ್ದರು. ಕಾರ್ಕಳವೂ ಚಿಕ್ಕಮಗಳೂರು ಸಂಸದೀಯ ಕ್ಷೇತ್ರದಲ್ಲಿ ಸೇರಿದ್ದುದರಿಂದ ಕಾರ್ಕಳದಲ್ಲೂ ರಾಜಕೀಯ ಸಂಚಲನ ಶುರುವಾಗಿತ್ತು. ದೇವರಾಜ ಅರಸು, ಇಂದಿರಾಗಾಂಧಿ ಸಹಿತ ಘಟಾನುಘಟಿಗಳು ಚುನಾವಣಾ ಪ್ರಚಾರಕ್ಕೆ ಇಳಿದಿದ್ದರು. ಇಂದಿರಾ ಗಾಂಧಿ ಕಾರ್ಕಳಕ್ಕೆ ಆಗಮಿಸಿದಾಗ ಕಾರ್ಕಳ ಹೊರವಲಯದ ಪುಲ್ಕೇರಿಯಲ್ಲಿ ಆಕೆಯನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಮೆರವಣಿಗೆಯಲ್ಲಿ ನಾನೂ ನಡೆದದ್ದು ಈಗಲೂ ನೆನಪಿದೆ.

ಇಂಥದ್ದೇ ದಿನಗಳಲ್ಲಿ, ಇಂದಿರಾಗಾಂಧಿಯವರನ್ನು ಸೋಲಿಸಬೇಕೆಂದು ಕರೆಕೊಡಲು ಬಂದ ರಾಜಕಾರಣಿಗಳ ಸಂಖ್ಯೆಯೂ ಕಡಿಮೆಯಿರಲಿಲ್ಲ. ಇವರಲ್ಲಿ ಪ್ರಮುಖರಾದವರು ಜಾರ್ಜ್ ಫೆರ್ನಾಂಡಿಸ್. ಕಾರ್ಕಳ ಜೋಡುರಸ್ತೆಯಲ್ಲಿ ಆಗ ಜಾರ್ಜ್ ಫೆರ್ನಾಂಡಿಸ್ ಅವರ ಭಾಷಣ ಸಂಜೆಯ ಹೊತ್ತಿಗೆ ಏರ್ಪಾಟಾಗಿತ್ತು. ಅದರಲ್ಲಿ ಅವರು ಏನು ಹೇಳಿದರು ಎಂಬುದು ಸರಿಯಾಗಿ ನೆನಪಿಲ್ಲ. ಆದರೆ ಪ್ರಚಾರ ಭಾಷಣದ ಬಳಿಕ ಬಕೆಟ್ ಹಿಡಿದು ಚುನಾವಣಾ ಪ್ರಚಾರದ ಖರ್ಚಿಗೆ ಹಣ ಕೇಳಿದ್ದು ಮತ್ತು ಜನರು ಅದಕ್ಕೆ ಉದಾರವಾಗಿ ನೋಟುಗಳನ್ನು ಹಾಕಿದ್ದು ನೆನಪಿದೆ. ಅಂತಹ ಒಬ್ಬ ಸರಳ ಮತ್ತು ಜನರೊಂದಿಗೆ ಮುಕ್ತವಾಗಿ ಬೆರೆಯಬಲ್ಲ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್.

ಚುನಾವಣೆ ಮುಗಿಯಿತು, ವೀರೇಂದ್ರ ಪಾಟೀಲರು 70 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು, ರಾಯಬರೇಲಿಯಲ್ಲಿ ಸೋತ ಕೇವಲ ಒಂದು ವರ್ಷದೊಳಗಾಗಿ ಇಂದಿರಾ ಅವರು ಚಿಕ್ಕಮಗಳೂರಿನ ಮೂಲಕ ಮತ್ತೆ ಸಂಸತ್ ಪ್ರವೇಶಿಸಿದರು ಎನ್ನುವುದು ಬೇರೆ ವಿಷಯ.

ಕೊಂಕಣ ರೈಲು

ಬಹುಮುಖ್ಯವಾಗಿ ಕರ್ನಾಟಕ ಕರಾವಳಿಯವರಾದ ನಮಗೆ ‘ಕೊಂಕಣ ರೈಲು’ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಜಾರ್ಜ್ ಫೆರ್ನಾಂಡಿಸ್.

ಸರಿಸುಮಾರು 1905 ಕ್ಕಾಗುವಾಗಲೇ ಕೇರಳದ ಮೂಲಕ ಮಂಗಳೂರಿಗೆ ರೈಲು ಸಂಪರ್ಕ ಸ್ಥಾಪಿತವಾಗಿತ್ತಾದರೂ, ಸ್ವಾತಂತ್ರ್ಯ ಸಿಕ್ಕು ಹತ್ತಿರ ಹತ್ತಿರ ನಾಲ್ಕು ದಶಕ ಕಳೆದರೂ ಮಂಗಳೂರಿನಿಂದ ಗೋವಾ ಮುಂಬಯಿ ಕಡೆಗೆ ರೈಲು ಸಂಪರ್ಕ ಇರಲಿಲ್ಲ. ರೈಲಿನಲ್ಲಿ ಹೋಗಬೇಕಾದರೆ ಮಂಗಳೂರಿನಿಂದ ಕಡೂರಿಗೆ ಬಸ್ ನಲ್ಲಿ ಸಂಚರಿಸಿ ಅಲ್ಲಿಂದ ರೈಲು ಹಿಡಿಯಬೇಕು.

ಮಂಗಳೂರಿನಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಉದ್ಯೋಗಕ್ಕಾಗಿ ಮುಂಬಯಿಯನ್ನು ಅವಲಂಬಿಸಿದ್ದರು. ಸೇತುವೆಗಳು, ರಸ್ತೆ ಸಂಪರ್ಕವೂ ಇರದ ಕಾಲದಲ್ಲಿ ಅವರ ಪ್ರಯಾಣ ಕಡಲಿನಲ್ಲಿ ಸ್ಟೀಮರ್ ಗಳ ಮೂಲಕ ನಡೆಯುತ್ತಿತ್ತು.  ಮುಂದೆ ನೇರ ಬಸ್ ಸಂಚಾರ ಶುರುವಾಯಿತಾದರೂ, 1000 ಕಿಲೋಮೀಟರ್ ಗೆ 24-28 ಗಂಟೆಗಳ ಶ್ರಮದಾಯಕ ಪ್ರಯಾಣ; ದುಬಾರಿ ದರ.

1989 ರಲ್ಲಿ ವಿಪಿ ಸಿಂಗ್ ಸಂಪುಟದಲ್ಲಿ ರೈಲ್ವೆ ಮಂತ್ರಿಯಾಗುತ್ತಲೇ ಜಾರ್ಜ್ ಅವರು ತಮ್ಮ ಅಧಿಕಾರಿಗಳ ಬಳಿ ಮೊದಲು ಹೇಳಿದ್ದು ತನ್ನ ಕನಸಿನ ಕೊಂಕಣ ರೈಲಿನ ಬಗ್ಗೆ. 1600 ಕೋಟಿ ವೆಚ್ಚದ ಕೊಂಕಣ ರೈಲ್ವೇ ಯೋಜನೆ ಜಗತ್ತಿನಲ್ಲಿಯೇ ಮಹತ್ವಾಕಾಂಕ್ಷಿ ಯೋಜನೆ ಎನ್ನಲಾಗಿದೆ. ರೈಲ್ವೆ ಮಂಡಳಿಯ ಸದಸ್ಯರಾಗಿದ್ದ ಈ. ಶ್ರೀಧರನ್ ರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜಾರ್ಜ್ ತಕ್ಷಣ ಕಾರ್ಯಪ್ರವೃತ್ತರಾದರು. ಸರ್ಕಾರಗಳು ಉರುಳಿದಾಗ ಕಾಮಗಾರಿ ನಿಲ್ಲುವ ಭಯದ ಅರಿವಿದ್ದ ಜಾರ್ಜ್ ಕೊಂಕಣ ರೈಲ್ವೇಗಾಗಿಯೇ ‘ಕೊಂಕಣ ರೈಲ್ವೆ ನಿಗಮ’ ಸ್ಥಾಪಿಸಿದರು. ಶ್ರೀಧರನ್ ಅದರ ಮುಖ್ಯಸ್ಥರಾದರು. ಅರ್ಥ ಸಚಿವ ಮಧುದಂಡವತೆ, ಯೋಜನಾ ಆಯೋಗದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಎಲ್ಲರ ಸಹಯೋಗದೊಂದಗೆ ನಿಗಮ ಅಸ್ತಿತ್ವಕ್ಕೆ ಬಂತು.

760 ಕಿಮೀ ಉದ್ದ, 2000 ಸೇತುವೆಗಳು, 92 ಸುರಂಗ ಹೀಗೆ ಹಲವು ಪ್ರಥಮಗಳಿಗೆ ಕೊಂಕಣ ರೈಲು ಯೋಜನೆ ಸಾಕ್ಷಿಯಾಯಿತು. 8 ವರ್ಷಗಳ ಯೋಜನೆ ತ್ವರಿತ ಗತಿಯಲ್ಲಿ ಸಾಗಿ 7 ವರ್ಷಕ್ಕೆ ಮುಗಿಯಿತು. 1998, ಜನವರಿ 26 ರಂದು ರೈಲು ಸಂಚಾರ ಆರಂಭವಾಗಿಯೇಬಿಟ್ಟಿತು. ಹೀಗೆ ಮುಂಬಯಿ ಮಂಗಳೂರು ನಡುವಣ 24 ಗಂಟೆಗಳ ತ್ರಾಸದಾಯಕ ಪ್ರಯಾಣ 15 ಗಂಟೆಗೆ ಇಳಿಯಲು (ಅದೂ ಅಗ್ಗದ ದರದಲ್ಲಿ) ಮತ್ತು ಆ ಮೂಲಕ ಈ ಭಾಗದ ಆರ್ಥಿಕ ಚಟುವಟಿಕೆಗಳು ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲು ಕಾರಣ, ಜಾರ್ಜ್ ಫೆರ್ನಾಂಡಿಸ್ ರ ಕನಸಿನ ಕೊಂಕಣ ರೈಲು.

ಜಾತ್ಯತೀತ ವ್ಯಕ್ತಿತ್ವ

ಈ ಲೇಖನದ ಆರಂಭದಲ್ಲಿಯೇ ಹೇಳಿದ ಹಾಗೆ, ಜಾರ್ಜ್  ನಿಜ ಅರ್ಥದ ಭಾರತೀಯ, ಅವರದು ರಾಷ್ಟ್ರೀಯ ವ್ಯಕ್ತಿತ್ವ. 1971 ರಲ್ಲಿ ಅವರು ಪ್ರೀತಿಸಿ ಮದುವೆಯಾದುದು ಆಗಿನ ಕೇಂದ್ರ ಸಚಿವ ಹುಮಾಯೂನ್ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು (1980 ಪ್ರತ್ರ್ಯೇಕವಾದರು). ಪುತ್ರ ಸೀನ್ ಫೆರ್ನಾಂಡಿಸ್. ಜಾರ್ಜ್ ಅವರು ಕೊಂಕಣಿ, ಇಂಗ್ಲಿಷ್, ಹಿಂದಿ, ತುಳು, ಕನ್ನಡ ಮರಾಠಿ, ಉರ್ದು, ಮಲಯಾಳಂ ಭಾಷೆಗಳನ್ನು ಬಲ್ಲವರಾಗಿದ್ದರು. ಇದು ಜನಸಂಪರ್ಕಕ್ಕೆ, ಚುನಾವಣಾ ಪ್ರಚಾರಗಳಿಗೆ ಅವರ ಬಲುದೊಡ್ಡ ಶಕ್ತಿಯಾಗಿತ್ತು. ಜಾರ್ಜ್ ಅವರು 1967-2004 ನಡುವೆ 9 ಬಾರಿ ಲೋಕಸಭಾ ಚುನಾವಣೆ ಗೆದ್ದಿದ್ದರು.

ಲೋಹಿಯಾವಾದಿ, ಪ್ರಖರ ಸಮಾಜವಾದಿ, ಆರ್ ಎಸ್ ಎಸ್ ನ ಕಡುವಿರೋಧಿ ಜಾರ್ಜ್ ಬಿಜೆಪಿ ನೇತೃತ್ವದ ಒಕ್ಕೂಟದೊಂದಿಗೆ ಗುರುತಿಸಿಕೊಂಡದ್ದು ಅವರ ಸಾರ್ವಜನಿಕ ವ್ಯಕ್ತಿತ್ವದ ಒಂದು ಕಪ್ಪು ಚುಕ್ಕೆ. ಆದರೆ, ಅದರಾಚೆಗೆ ನೋಡಿದಾಗ ಕಾರ್ಮಿಕರ ಒಳಿತಿಗಾಗಿ ಅವರು ನಡೆಸಿದ ಹೋರಾಟಗಳು, ದೇಶದ ರಾಜಕಾರಣದಲ್ಲಿ ಅವರು ವಹಿಸಿದ ಮಹತ್ವದ ಪಾತ್ರ, ಮಂತ್ರಿಯಾಗಿ ಜನಹಿತದೃಷ್ಟಿಯಿಂದ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು, ರೈಲ್ವೆಯಂತಹ ಮೂಲಸೌಕರ್ಯ ಅಭಿವೃದ್ಧಿಯ ಕ್ಷೇತ್ರಗಳಿಗೆ ಅವರ ಅಸಾಧಾರಣ ಕೊಡುಗೆಯನ್ನು ಯಾರೂ ಎಂದೂ ಮರೆಯುವಂತಿಲ್ಲ.

ಕೊಂಕಣ ರೈಲು ಅವರ ಸಂಕಲ್ಪ ಶಕ್ತಿ ಮತ್ತು ಬದ್ಧತೆಗೆ ಸಾಕ್ಷಿ. ಮಂಗಳೂರಿನಲ್ಲಿ ಹುಟ್ಟಿ (1930), ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಪಾದ್ರಿಯಾಗಲು ಬೆಂಗಳೂರಿಗೆ ಹೋಗಿ, ಇಷ್ಟವಾಗದೆ ಅದನ್ನು ತೊರೆದು ಮತ್ತೆ ಮಂಗಳೂರಿಗೆ ಮರಳಿ, ಕಾರ್ಮಿಕ ಸಂಘಟನೆಯಲ್ಲಿ ಒಲವು ಮೂಡಿಸಿಕೊಂಡು, ಬಳಿಕ ಮುಂಬಯಿಗೆ ತೆರಳಿ ಅಗ್ರ ಕಾರ್ಮಿಕ ಮುಖಂಡನಾಗಿ, 1967 ರ  ಲೋಕಸಭಾ ಚುನಾವಣೆಯಲ್ಲಿ ಮುಂಬೈಯ ಬಲಾಢ್ಯ ಕಾಂಗ್ರೆಸ್ ನಾಯಕ ಎಸ್ ಕೆ ಪಾಟೀಲರನ್ನು ಸೋಲಿಸಿ ಜೈಂಟ್ ಕಿಲ್ಲರ್ ಎಂಬ ಹೆಸರು ಗಳಿಸಿ, 1974 ರ ರೈಲು ಮುಷ್ಕರದ ನೇತಾರನಾಗಿ, 1975 ರ ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿ, ಬರೋಡಾ ಬಾಂಬ್ ಸ್ಫೋಟದ ಆರೋಪಿಯಾಗಿ, ಮಂಗಳೂರಿನ ಹುಡುಗ ಬಿಹಾರದ ಮುಜಫುರದಲ್ಲಿ ಚುನಾವಣೆ ಗೆದ್ದು, ಕೇಂದ್ರದಲ್ಲಿ ಕೈಗಾರಿಕಾ ಮಂತ್ರಿ, ರೈಲ್ವೆ ಮಂತ್ರಿ, ರಕ್ಷಣಾ ಮಂತ್ರಿಯಾಗಿ, 1998 ರ ಅಣುಬಾಂಬ್ ಪರೀಕ್ಷೆ, 1999 ರ ಕಾರ್ಗಿಲ್ ಯುದ್ಧಗಳಿಗೆ ಸಾಕ್ಷಿಯಾದ ಮಹೋನ್ನತ ರಾಜಕೀಯ ವ್ಯಕ್ತಿತ್ವದ ಜಾರ್ಜ್ ಫೆರ್ನಾಂಡಿಸ್ ನಿಜ ಅರ್ಥದ ಹೋರಾಟಗಾರ, ಆದರ್ಶ ರಾಜಕಾರಣಿ ಮತ್ತು ಜನಸೇವಕ. ನಿಜಕ್ಕೂ ಅವರೊಂದು ಬೆರಗು. ಅವರನ್ನು ನೆನಪಿಸುವುದು, ಗೌರವಿಸುವುದು ಎಂದರೆ ಕೃತಜ್ಞ ಸಮಾಜವಾಗಿ ನಮ್ಮನ್ನೇ ನಾವು ಗೌರವಿಸಿಕೊಂಡಂತೆ.

ಶ್ರೀನಿವಾಸ ಕಾರ್ಕಳ
ಸಾಮಾಜಿಕ ಕಾರ್ಯಕರ್ತರು

ಇದನ್ನೂ ಓದಿ- ನ್ಯಾಯದಾನ ಯಾಕಿಷ್ಟು ವಿಳಂಬ? ಯಾರ ಕೊಡುಗೆ ಎಷ್ಟೆಷ್ಟು ?

More articles

Latest article