ಸ್ಪೇಡೆಕ್ಸ್ ಮಿಷನ್ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆಯಲ್ಲಿ ಇಸ್ರೋ ಯಶಸ್ವಿ

Most read

ಬೆಂಗಳೂರು: ಸ್ಪೇಸ್ ಡಾಕಿಂಗ್ ಪ್ರಯೋಗದ (ಸ್ಪೇಡೆಕ್ಸ್) ಭಾಗವಾಗಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆಯನ್ನು ಇಸ್ರೊ ಗುರುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಗುಡ್‌ ಮಾರ್ನಿಂಗ್‌, ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ಡಾಕ್ ಮಾಡಿದೆ! ಭಾರತದ ಇಸ್ರೊದಿಂದ ನಡೆಸಲಾದ ಸ್ಪೇಡೆಕ್ಸ್ ಮಿಷನ್ ಯಶಸ್ಸು ಸಾಧಿಸಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ ಎಂದು ಇಸ್ರೊ ಎಕ್ಸ್‌ ನಲ್ಲಿ ತಿಳಿಸಿದೆ. ಭಾರತವು ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ರಾಷ್ಟ್ರವಾಗಿದೆ ಎಂದು ಹೇಳಿದೆ.

ಜೋಡಣೆ ಬಳಿಕ ಸಿಗ್ನಲ್ ಮೂಲಕ ಉಪಗ್ರಹಗಳ ನಿಯಂತ್ರಣ ಯಶಸ್ವಿಯಾಗಿದೆ. ಅನ್‌ಡಾಕಿಂಗ್ ಮತ್ತು ವಿದ್ಯುತ್ ಸರಬರಾಜು ಪರೀಕ್ಷೆಗಳನ್ನು ಮುಂಬರುವ ದಿನಗಳಲ್ಲಿ ನಡೆಸಲಾಗುವುದು ಎಂದು ಇಸ್ರೊ ತಿಳಿಸಿದೆ. ಇದೇ ವೇಳೆ, ಈ ಪ್ರಯೋಗದಲ್ಲಿ ಭಾಗಿಯಾದ ಇಡೀ ತಂಡಕ್ಕೆ ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಅಭಿನಂದನೆ ಸಲ್ಲಿಸಿದ್ದಾರೆ.

ಜನವರಿ 12 ರಂದು, ಇಸ್ರೊ ಎರಡು ಬಾಹ್ಯಾಕಾಶ ನೌಕೆಗಳನ್ನು ಮೂರು ಮೀಟರ್‌ ಸಮೀಪಕ್ಕೆ ತಂದು ಡಾಕಿಂಗ್‌ಗೂ ಮುನ್ನ ಪ್ರಾಯೋಗಿಕ ಪ್ರಯತ್ನವನ್ನು ನಡೆಸಿತ್ತು. ನಂತರ, ಎರಡೂ ಉಪಗ್ರಹಗಳನ್ನು ಹಿಂದಕ್ಕೆ ಸರಿಸಿ ಸುರಕ್ಷಿತವಾಗಿ ನೆಲೆಗೊಳಿಸಿತ್ತು. ಡಿಸೆಂಬರ್ 30 ರಂದು ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು (ಸ್ಪೇಡೆಕ್ಸ್) ಇಸ್ರೊ ಯಶಸ್ವಿಯಾಗಿ ಆರಂಭಿಸಿತ್ತು.

More articles

Latest article